Tag: ಪ್ರಕಟಣೆ

  • ನಾಳೆ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ

    ನಾಳೆ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ

    ಬೆಂಗಳೂರು: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ(Metro Rail) ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತವಾಗಲಿದೆ. ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ಇರುವುದಿಲ್ಲ. ಬೆಂಗಳೂರು ಮೆಟ್ರೋ ರೈಲು ನಿಗಮ ಇಂದು ಈ ಕುರಿತು ಪ್ರಕಟಣೆ ಹೊರಡಿಸಿದೆ.

    ಅಕ್ಟೋಬರ್ 9ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 10ರ ಬೆಳಗ್ಗೆ 6 ಗಂಟೆ ತನಕ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ರದ್ದುಗೊಳ್ಳಲಿದೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಡಿಎಪಿ,ಪೊಟ್ಯಾಷ್‍ಗಾಗಿ ರಾಜ್ಯದಿಂದ ಕೇಂದ್ರಕ್ಕೆ ಬೊಮ್ಮಾಯಿ ಮನವಿ

    ಅಕ್ಟೋಬರ್ 9ರಂದು ನೇರಳೆ ಮಾರ್ಗದ ಟ್ರಿನಿಟಿ ಮತ್ತು ಹಲಸೂರು ಮೆಟ್ರೋ ನಿಲ್ದಾಣಗಳ ನಡುವೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ನಡೆಸುವುದಿಲ್ಲ.  ಇದನ್ನೂ ಓದಿ: ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ – ಪತಿ ಮೇಲೆ ಅನುಮಾನ

    ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಅಕ್ಟೋಬರ್ 10ರ ಭಾನುವಾರ ಬೆಳಗ್ಗೆ 6 ಗಂಟೆ ಬಳಿಕ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಎಂ.ಜಿ.ರಸ್ತೆ-ಕೆಂಗೇರಿ ತನಕ ಎಂದಿನಂತೆ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಹಸಿರು ಮಾರ್ಗದಲ್ಲಿನ ರೈಲು ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು(BMRCL) Bangalore Metro Rail Corporation Limited ಹೇಳಿದೆ. ಇದನ್ನೂ ಓದಿ: ಫ್ಯಾಬ್ರಿಕ್ ಗೋಡೌನ್‍ನಲ್ಲಿ ಬೆಂಕಿ – ಸ್ಥಳಕ್ಕೆ ಆಗಮಿಸಿದ 18 ಅಗ್ನಿ ಶಾಮಕ ವಾಹನ

  • ಇಂದು ಫುಲ್ ಶರ್ಟ್, ಶೂ, ಚಿನ್ನದ ಸರ ಧರಿಸ್ಲೇ ಬೇಡಿ- ನೀಟ್ ಪರೀಕ್ಷೆಗೆ ಕಟ್ಟುನಿಟ್ಟಿನ ರೂಲ್ಸ್

    ಇಂದು ಫುಲ್ ಶರ್ಟ್, ಶೂ, ಚಿನ್ನದ ಸರ ಧರಿಸ್ಲೇ ಬೇಡಿ- ನೀಟ್ ಪರೀಕ್ಷೆಗೆ ಕಟ್ಟುನಿಟ್ಟಿನ ರೂಲ್ಸ್

    ಬೆಂಗಳೂರು: ಇಂದು ಮಧ್ಯಾಹ್ನ ದೇಶಾದ್ಯಂತ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ನಡೆಯಲಿದೆ.

    ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ತುಂಬು ತೋಳಿನ ಅಂಗಿ, ಶೂ ಧರಿಸುವಂತಿಲ್ಲ. ಯುವತಿಯರು ರಿಂಗ್, ಮೂಗುತಿ, ಚೈನ್ ಸೇರಿ ಯಾವುದೇ ಆಭರಣ ತೊಡುವಂತಿಲ್ಲ. ಇಂತಹ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದು, ಅಭ್ಯರ್ಥಿಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ನೀಟ್ ಪರೀಕ್ಷಾ ಪ್ರಕಟಣೆಯಲ್ಲಿ ತಿಳಿಸಿದೆ.

    ಮಧ್ಯಾಹ್ನ 2 ಗಂಟೆಗೆ ದೇಶಾದ್ಯಂತ ಏಕಕಾಲದಲ್ಲಿ ನೀಟ್ ಪರೀಕ್ಷೆ ನಡೆಯಲಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಅಗತ್ಯವಿರುವ ರಾಷ್ಟ್ರೀಯ ಅರ್ಹತೆ ಪರೀಕ್ಷೆಗೆ 15.19 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ.

    ಹಿಂದಿನ ವರ್ಷ ಈ ರೂಲ್ಸ್ ಗೊತ್ತಿಲ್ಲದೆ ಹೋದವರು ತಾಳಿ ತೆಗೆದು ಕಣ್ಣೀರು ಇಟ್ಟಿದ್ದ ಘಟನೆಗಳು ನಡೆದಿತ್ತು. ಜೊತೆಗೆ ಚಿನ್ನಾಭರಣಗಳನ್ನು ಕಳೆದುಕೊಂಡ ಘಟನೆಗಳು ನಡೆದಿತ್ತು. ಇದಕ್ಕಾಗಿ ಮುಂಚಿತವಾಗಿ ನೀಟ್ ಕಟ್ಟುನಿಟ್ಟಿನ ರೂಲ್ಸ್ ಬಗ್ಗೆ ಪ್ರಕಟಣೆ ಹೊರಡಿಸಿದೆ.

    ಪರೀಕ್ಷಾ ಸಮಯ:
    ಇಂದು ಮಧ್ಯಾಹ್ನ 1.15ಕ್ಕೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಇರಬೇಕು. ಆ ನಂತರ ಬಂದವರ ಪ್ರವೇಶ ರದ್ದಾಗಲಿದೆ. 1.30ರಿಂದ 1.45ರವರೆಗೆ ಪರೀಕ್ಷಾ ಬುಕ್ ಲೆಟ್ ನೀಡಲಾಗುತ್ತದೆ. ಹಾಗೆಯೇ 1.50ರ ಸುಮಾರಿಗೆ ಬುಕ್ ಲೆಟ್ ನಲ್ಲಿ ಅಗತ್ಯವಾಗಿ ಬರೆಯಬೇಕಾದ್ದನ್ನು ಬರೆಯಲು ಸೂಚನೆ ನೀಡಲಾಗುತ್ತದೆ. ಆ ಬಳಿಕ 2 ಗಂಟೆಯಿಂದ 5ರ ವರೆಗೆ ಪರೀಕ್ಷೆ ನಡೆಯಲಿದೆ.

    ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ:
    ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು, ಧಾರವಾಡ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ.

  • ಫಾನಿ ಚಂಡಮಾರುತ- ಜನತೆಗೆ ಕೋಲಾರ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ

    ಫಾನಿ ಚಂಡಮಾರುತ- ಜನತೆಗೆ ಕೋಲಾರ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ

    ಕೋಲಾರ: ಇನ್ನೆರಡು ದಿನಗಳ ಕಾಲ ರಾಜ್ಯದಲ್ಲಿ ಫಾನಿ ಚಂಡಮಾರುತ ತನ್ನ ರುದ್ರಾವತಾರ ತೋರಿಸುವ ಮಾಹಿತಿ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

    ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಫಾನಿ ಚಂಡಮಾರುತದ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲೆಯ ಜನರಿಗೆ ಸೂಚನೆ ನೀಡಿದ್ದಾರೆ. ಭಾರತದ ಹವಾಮಾನ ಇಲಾಖೆ ರವಾನಿಸಿರುವ ಸಂದೇಶದಂತೆ ಫಾನಿ ಚಂಡಮಾರುತ 100 ಕೀ.ಮೀ ವೇಗ ಪಡೆಯಲಿರುವ ಸಾಧ್ಯತೆಯಿದ್ದು, ಹವಾಮಾನ ವೈಪರೀತ್ಯ ಉಂಟಾಗಲಿದೆ. ಆದ್ದರಿಂದ ಜಿಲ್ಲೆಯ ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ತಿಳಿಸಿದೆ.

    ಇಂದು ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಾಗಿ, ಬಿಸಿ ಗಾಳಿ ಬೀಸಲಿದ್ದು, ಸೋಮವಾರ ಹಾಗೂ ಮಂಗಳವಾರ ಅಂದ್ರೆ ಏಪ್ರಿಲ್ 29 ಹಾಗೂ 30 ಎರಡು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚು ಓಡಾಟ ಮಾಡಬೇಡಿ, ಆದಷ್ಟು ಸುರಕ್ಷಿತವಾಗಿ ಮನೆಗಳಲ್ಲಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲದೆ ಮಿಂಚು ಸಿಡಿಲು ಸಂಭವಿಸಿದ ವೇಳೆ ಎಚ್ಚರದಿಂದಿರುವಂತೆ ಪ್ರಕಟಣೆ ಹೊರಡಿಸುವ ಮೂಲಕ ಕೋಲಾರ ಜಿಲ್ಲಾಡಳಿತ ಜಿಲ್ಲೆಯ ಜನರ ಹಿತ ಕಾಯಲು ಮುಂದಾಗಿದೆ.

  • 58ನೇ ವಸಂತಕ್ಕೆ ಕಾಲಿಟ್ಟ ಸಿಎಂ ಎಚ್‍ಡಿಕೆ- ನಿವಾಸಕ್ಕೆ ಯಾರೂ ಬರದಂತೆ ಮನವಿ

    58ನೇ ವಸಂತಕ್ಕೆ ಕಾಲಿಟ್ಟ ಸಿಎಂ ಎಚ್‍ಡಿಕೆ- ನಿವಾಸಕ್ಕೆ ಯಾರೂ ಬರದಂತೆ ಮನವಿ

    ಬೆಂಗಳೂರು: ಮುಖ್ಯಮಂತ್ರಿ ಆಗ ಬಳಿಕ ಮೊದಲ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳದೇ ಇರಲು ನಿರ್ಧಾರ ಮಾಡಿದ್ದಾರೆ.

    ಇಂದು ಹುಟ್ಟುಹಬ್ಬದ ಕಾರಣ ಸಾರ್ವಜನಿಕರು, ಅಭಿಮಾನಿಗಳು, ಕಾರ್ಯಕರ್ತರಿಗೆ ಸಿಎಂ ಸಿಗುವುದಿಲ್ಲ. ಇಡೀ ದಿನ ಸಿಎಂ ಕುಮಾರಸ್ವಾಮಿ ತಮ್ಮ ಕುಟುಂಬ ಜೊತೆ ಇರಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಜೆಪಿ ನಗರದ ನಿವಾಸಕ್ಕೆ ಯಾರು ಬಾರದಂತೆ ಮನವಿ ಮಾಡಿದ್ದಾರೆ.

    ಹಿತೈಷಿಗಳು, ಅಭಿಮಾನಿಗಳು ಬೆಳಗಾವಿ ಅಧಿವೇಶನದ ನಂತರ ಸಿಎಂರನ್ನ ಭೇಟಿ ಮಾಡಿ ಶುಭಾಶಯ ತಿಳಿಸಬಹುದಾಗಿದೆ. ಇದೇ ವೇಳೆ ಕಾರ್ಯಕರ್ತರು, ಅಭಿಮಾನಿಗಳು ಫ್ಲೆಕ್ಸ್, ಬ್ಯಾನರ್ ಅಳವಡಿಸದಿರುವಂತೆ ಸಿಎಂ ಮನವಿ ಮಾಡಿದ್ದಾರೆ. ಈ ಸಂಬಂಧ ಸಂದೇಶ ರವಾನೆ ಮಾಡಿರುವ ಸಿಎಂ ನಿಮ್ಮ ಶುಭ ಹಾರೈಕೆಗಳೇ ನನಗೆ ಶ್ರೀರಕ್ಷೆ, ಫ್ಲೆಕ್ಸ್ ಬ್ಯಾನರ್ ಅಳವಡಿಸಿ ಊರಿನ ಅಂದ ಹಾಳು ಮಾಡಬೇಡಿ. ಪರಿಸರ ಕಾಳಜಿ ಮೆರೆದಲ್ಲಿ ಅದೇ ಅತ್ಯುತ್ತಮ ಅಂತ ಸಂದೇಶ ರವಾನೆ ಮಾಡಿದ್ದಾರೆ.

    ತಮ್ಮ ಮಗನ ಚಿತ್ರ ಸೀತಾರಾಮ ಕಲ್ಯಾಣದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಸೋಮಾವಾರ ಮಧ್ಯಪ್ರದೇಶ ಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಅಂತ ಸಿಎಂ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಂಬಿಡೆಂಟ್ ಹಣ ವಂಚನೆ ಪ್ರಕರಣಕ್ಕೆ ರೆಡ್ಡಿಗೂ ಏನು ಸಂಬಂಧ? ಡಿಲೀಂಗ್ ಹೇಗಾಯ್ತು? 57 ಕೆಜಿ ಚಿನ್ನ ತಲುಪಿದ್ದು ಹೇಗೆ?

    ಅಂಬಿಡೆಂಟ್ ಹಣ ವಂಚನೆ ಪ್ರಕರಣಕ್ಕೆ ರೆಡ್ಡಿಗೂ ಏನು ಸಂಬಂಧ? ಡಿಲೀಂಗ್ ಹೇಗಾಯ್ತು? 57 ಕೆಜಿ ಚಿನ್ನ ತಲುಪಿದ್ದು ಹೇಗೆ?

    ಬೆಂಗಳೂರು: ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೆಟ್ ಲಿಮಿಟೆಡ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ 57 ಕೆಜಿ ಚಿನ್ನ ರವಾನೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಅಂಬಿಡೆಂಟ್ ಕಂಪನಿ ವಂಚನೆ ಎಸಗಿದ್ದು ಹೇಗೆ? ಈ ಪ್ರಕರಣದಲ್ಲಿ ರೆಡ್ಡಿಗೆ ಏನು ಸಂಬಂಧ ಇತ್ಯಾದಿ ಪ್ರಶ್ನೆಗಳಿಗೆ ಬೆಂಗಳೂರು ಪೊಲೀಸರು ಮಾಧ್ಯಮ ಹೇಳಿಕೆಯನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಹೊಡೆದು ಜನಾರ್ದನ ರೆಡ್ಡಿ ಹೆಸರು ಹಾಕಿಸಿದ್ದಾರೆ- ಡೀಲ್ ಪ್ರಕರಣಕ್ಕೆ ಸ್ಫೋಟಕ ತಿರುವು

    ಏನಿದು ಅಂಬಿಡೆಂಟ್ ಕಂಪನಿ?
    ಡಿ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕನಗರದ ಮುಖ್ಯರಸ್ತೆಯಲ್ಲಿ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೆಟ್ ಲಿಮಿಟೆಡ್ ಕಂಪನಿಯನ್ನು ಸೈಯದ್ ಅಹಮದ್ ಎಂಬವನು ನಡೆಸುತ್ತಿದ್ದ. ನಿಮ್ಮ ಹೂಡಿಕೆಗೆ 4 ತಿಂಗಳ ಅವಧಿಗೆ ಶೇ.40ರಿಂದ ಶೇ.50ರಷ್ಟು ಬಡ್ಡಿ ನೀಡುತ್ತೇವೆ ಎಂದು ಹೇಳಿ ಸೈಯದ್ ಸಾರ್ವಜನಿಕರನ್ನು ನಂಬಿಸಿದ್ದ. ಸೈಯದ್ ಮಾತಿಗೆ ಮರಳಾಗಿ ಸುಮಾರು 15 ಸಾವಿರಕ್ಕೂ ಜನರು ಈ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದರು. ಅಂದಾಜು ಸುಮಾರು 600 ಕೋಟಿ ರೂ. ಹಣವನ್ನು ಸಂಗ್ರಹಿಸಿದ್ದ ಸೈಯದ್ ಮರಳಿ ಗ್ರಾಹಕರಿಗೆ ನೀಡಲು ಹಿಂದೇಟು ಹಾಕುತ್ತಿದ್ದ.

    ದೂರು ದಾಖಲು:
    ಸೈಯದ್ ಸಾವಿರಾರು ಜನರಿಗೆ ವಂಚಿಸಿದ್ದು, ವಂಚನೆಗೆ ಒಳಗಾದವರ ಪೈಕಿ ಪೈಕಿ ಸರ್ಫರಾಜ್ ಆಲಂ ತಬರೇಜ್ ಎಂಬವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಅಂಬಿಡೆಂಟ್ ಕಂಪನಿ ವಿರುದ್ಧ 2018ರ ಮೇ ತಿಂಗಳಿನಲ್ಲಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಹಣವನ್ನು ಮರಳಿಸುವಂತೆ ಸೂಚಿಸಿದ್ದರು. ಹಲವು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ವಂಚನೆ ಸಂಪೂರ್ಣ ತನಿಖೆಗಾಗಿ ಎಲ್ಲ ಪ್ರಕರಣಗಳನ್ನು ನಗರ ಪೊಲೀಸ್ ಆಯುಕ್ತರು ಸಿಸಿಬಿ ವರ್ಗಾಯಿಸಿದ್ದರು. ತನಿಖೆ ಚುರುಕುಗೊಳಿಸಿದ ಸಿಸಿಬಿ ಪೊಲೀಸರು ಸೈಯದ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಇದನ್ನು ಓದಿ: ನನಗೆ ಯಾವುದೇ ಮಾಹಿತಿ ಇಲ್ಲ: ರೆಡ್ಡಿ ಡೀಲ್ ಪ್ರಶ್ನೆಗೆ ಶ್ರೀರಾಮುಲು ಉತ್ತರ

    ಇಡಿಯಿಂದ ದಾಳಿ
    ಸಾರ್ವಜನಿಕರಿಂದ ಸಂಗ್ರಹಿಸಿದ ಕೋಟ್ಯಂತರ ರೂ. ಹಣವನ್ನು ಸೈಯದ್, ಹಲವಾರು ಜನರ ಬಳಿ ಹೂಡಿಕೆ ಮಾಡಿದ್ದಾನೆ ಎನ್ನುವ ಸ್ಫೋಟಕ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಅಕ್ರಮ ಹಣಕಾಸಿನ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾನೆ ಎನ್ನುವ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಸೈಯದ್ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿತ್ತು. ಬಳಿಕ ಆತನ ಬ್ಯಾಂಕ್, ಹಣಕಾಸಿನ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಯಿತು. ಈತನ ಬ್ಯಾಂಕಿಂಗ್ ವ್ಯವಹಾರಗಳ ಮಾಹಿತಿಯನ್ನು ಕಲೆ ಹಾಕಿದಾಗ ಬೆಚ್ಚಿ ಬೀಳಿಸುವ ಅಂಶ ಪತ್ತೆಯಾಯಿತು.

    ರೆಡ್ಡಿ ಎಂಟ್ರಿ ಹೇಗಾಯ್ತು?
    ಇಡಿಯಲ್ಲಿ ಕೇಸ್ ದಾಖಲಾದ ಬಳಿಕ ಮುಂದೆ ಕಷ್ಟವಿದೆ ಎನ್ನುವುದನ್ನು ಅರಿತ ಸೈಯದ್ ಜನಾರ್ದನ ರೆಡ್ಡಿಯ ಸಹಾಯ ಕೋರಿದ್ದ. ಹೀಗಾಗಿ ಜನಾರ್ದನ ರೆಡ್ಡಿ, ರೆಡ್ಡಿ ಆಪ್ತ ಅಲಿಖಾನ್ ಮತ್ತು ಸೈಯದ್ ಒಂದು ಕಡೆ ಸಭೆ ನಡೆಸಿದ್ದರು. ಸಭೆಯಲ್ಲಿ ಈ ಪ್ರಕರಣದಲ್ಲಿ ಪಾರಾಗಲು ರೆಡ್ಡಿ 20 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಒಪ್ಪಂದದ ಪ್ರಕಾರ 20 ಕೋಟಿ ರೂ.ವನ್ನು ಚಿನ್ನದ ರೂಪದಲ್ಲಿ ನೀಡುವಂತೆ ಜನಾರ್ದನ ರೆಡ್ಡಿ ಷರತ್ತು ವಿಧಿಸಿದ್ದರು.  ಇದನ್ನು ಓದಿ: ಜನಾರ್ದನ ರೆಡ್ಡಿ ರಾತ್ರೋರಾತ್ರಿ ಮೊಳಕಾಲ್ಮೂರಿನಿಂದ ಪರಾರಿಯಾಗಿದ್ದು ಹೇಗೆ? ಈಗ ಎಲ್ಲಿದ್ದಾರೆ?

    ಚಿನ್ನ ರೆಡ್ಡಿಗೆ ತಲುಪಿದ್ದು ಹೇಗೆ?
    ಚಿನ್ನ ತಲುಪಿಸುವುದು ಹೇಗೆ ಎಂದು ಆಲೋಚಿಸುತ್ತಿದ್ದಾಗ ಸೈಯದ್, ಅಲಿಖಾನ್‍ಗೆ ಪರಿಚಯವಿರುವ ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜುವೆಲರ್ಸ್ ನ ರಮೇಶ್ ಬಳಿ ಚಿನ್ನ ಖರೀದಿಸುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ. ಸೈಯದ್ ಬೇಡಿಕೆ ಪ್ರಮಾಣದ ಚಿನ್ನವನ್ನು ನೀಡಲು ರಮೇಶ್ ಒಪ್ಪಿದ್ದ. ಆದರೆ ಆತನಲ್ಲಿ ಇಷ್ಟೊಂದು ಪ್ರಮಾಣದ ಚಿನ್ನ ದಾಸ್ತಾನು ಇರಲಿಲ್ಲ. ಹೀಗಾಗಿ ಸೈಯದ್ ಬೇಡಿಕೆಯನ್ನು ಈಡೇರಿಸಲು ರಮೇಶ್ ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾರ್ಪೋರೇಷನ್ ರಮೇಶ್ ಕೊಠಾರಿ ಬಳಿ 18 ಕೋಟಿ ರೂ. ಮೊತ್ತದ 57 ಕೆ.ಜಿ ಚಿನ್ನವನ್ನು ಖರೀದಿ ಮಾಡಿದ್ದ. ಈ ಚಿನ್ನ ಬಳ್ಳಾರಿಯ ರಮೇಶ್ ಗೆ ತಲುಪಿ, ನಂತರ ಸೈಯದ್ ಕೊನೆಗೆ ಜನಾರ್ದನ ರೆಡ್ಡಿಗೆ ತಲುಪಿದೆ.

    ಸಿಸಿಬಿ ತಂಡಕ್ಕೆ ಸಿಕ್ಕ ಮಾಹಿತಿ ಆಧಾರದ ಮೇಲೆ ಬಳ್ಳಾರಿಯ ರಾಜಮಹಲ್ ಪ್ಯಾನ್ಸಿ ಜುವೆಲರ್ಸ್ ನ ರಮೇಶ್ ಕೊಠಾರಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ ಹಲವು ಮಹತ್ವ ಪೂರ್ಣ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ತಂಡದಲ್ಲಿ ಯಾರಿದ್ದಾರೆ?
    ಈ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಹಾಗೂ ಅಲಿಖಾನ್ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಇದಕ್ಕಾಗಿ ಸಿಸಿಬಿ ಘಟಕದ ಎಸಿಪಿ ಪಿ.ಟಿ.ಸುಬ್ರಮಣ್ಯ, ಮರಿಯಪ್ಪ, ಮೋಹನ್ ಕುಮಾರ್ ಮಂಜುನಾಥ್ ಚೌಧರಿ ಅವರ ನೇತೃತ್ವದ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ನಿರ್ದೇಶನದ ಮೇರೆಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮತ್ತು ಸಿಸಿಬಿ ಉಪ ಪೊಲೀಸ್ ಆಯುಕ್ತ ಗಿರೀಶ್.ಎಸ್ ಮಾರ್ಗದರ್ಶನದಲ್ಲಿ ತಂಡವು ಕೆಲಸ ಮಾಡುತ್ತಿದೆ.

    ಯಾವುದಿದು ಅಂಬಿಡೆಂಟ್ ಕಂಪನಿ?
    ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ದುಬೈ ಮೂಲದ ಉದ್ಯಮಿಗಳು ಸ್ಥಾಪಿಸಿದ್ದಾರೆ. ಈ ಕಂಪನಿಯ ಕಚೇರಿ ಬೆಂಗಳೂರಿನ ಕನಕನಗರದ ಮುಖ್ಯರಸ್ತೆಯಲ್ಲಿದೆ. ಈ ಕಂಪನಿಯನ್ನು ನಡೆಸುತ್ತಿದ್ದ, ಸೈಯದ್ ಅಹಮದ್, ನಿಮ್ಮ ಹಣವನ್ನ ಒಂದು ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ಜನರಿಂದ ಹಣ ಪಡೆಯುತ್ತಿದ್ದ. ಗ್ರಾಹಕರಿಂದ ಕನಿಷ್ಠ ಹೂಡಿಕೆ ಎಂದು ಹೇಳಿ ಒಂದು ಲಕ್ಷ ರೂ. ಪಡೆದು, ಪ್ರತಿ ಮೂರು ತಿಂಗಳಿಗೊಮ್ಮೆ 40 ಸಾವಿರ ರೂ.ದಂತೆ ವರ್ಷಕ್ಕೆ 1.60 ಸಾವಿರ ವಾಪಸ್ಸು ಕೊಡುವುದಾಗಿ ಗ್ರಾಹಕರನ್ನು ನಂಬಿಸಿದ್ದ. ಹೀಗಾಗಿ ಇಲ್ಲಿ ಸಾವಿರಾರು ಜನರು ಹೂಡಿಕೆ ಮಾಡಿದ್ದರು. ಇದೇ ದೋಖಾ ಕಂಪೆನಿಯಲ್ಲಿ ಬೇನಾಮಿ ಹೆಸರಲ್ಲಿ ರೆಡ್ಡಿ ಆಪ್ತ ಅಲಿಖಾನ್ ಹಣ  ಹೂಡಿಕೆ ಮಾಡಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv