Tag: ಪ್ಯಾರಿಸ್

  • ಪ್ಯಾರಿಸ್‌ಗೆ ಹೋಗ್ತಿದ್ದ ಪುಲಿಟ್ಜರ್ ವಿಜೇತೆಗೆ ದೆಹಲಿ ಏರ್‌ಪೋರ್ಟ್‌ನಲ್ಲಿ ತಡೆ

    ಪ್ಯಾರಿಸ್‌ಗೆ ಹೋಗ್ತಿದ್ದ ಪುಲಿಟ್ಜರ್ ವಿಜೇತೆಗೆ ದೆಹಲಿ ಏರ್‌ಪೋರ್ಟ್‌ನಲ್ಲಿ ತಡೆ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲಿಟ್ಜರ್ ವಿಜೇತೆ, ಫೋಟೋ ಜರ್ನಲಿಸ್ಟ್ ಸನ್ನಾ ಇರ್ಷಾದ್ ಮಟ್ಟೂ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪ್ಯಾರಿಸ್‌ಗೆ ಹೋಗಬೇಕಿತ್ತು. ಆದರೆ ದೆಹಲಿಯಲ್ಲಿ ತಮ್ಮನ್ನು ವಿಮಾನ ಹತ್ತಲು ಅಧಿಕಾರಿಗಳು ಬಿಡಲಿಲ್ಲ ಎಂಬುದಾಗಿ ಆರೋಪ ಹೊರಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಮಟ್ಟೂ, ತಮ್ಮ ಬೋರ್ಡಿಂಗ್ ಪಾಸ್ ಹಾಗೂ ಪಾಸ್‌ಪೋರ್ಟ್‌ನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅದರ ಮೇಲೆ ಪೂರ್ವಾಗ್ರಹವಿಲ್ಲದೇ ರದ್ದುಗೊಳಿಸಲಾಗಿದೆ(ಕ್ಯಾನ್ಸಲ್ಡ್ ವಿದೌಟ್ ಪ್ರೆಜುಡೈಸ್) ಎಂದು ಕೆಂಪು ಶಾಯಿಯಲ್ಲಿ ಮುದ್ರಿಸಲಾಗಿದೆ. ಆದರೆ ತಮಗೆ ಪ್ಯಾರಿಸ್‌ಗೆ ಹೋಗಲು ಏಕೆ ಬಿಡಲಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳು ಯಾವುದೇ ಉತ್ತರ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಳ್ಳ ಮಾರ್ಗದಲ್ಲಿ ಹಣ ಸಂಪಾದಿಸುವವರು ಸುಳ್ಳಿನ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ: ಸಿದ್ದುಗೆ ತಿರುಗೇಟು ನೀಡಿದ ಜೋಶಿ

    ನಾನು ಸೆರೆಂಡಿಪಿಟಿ ಆರ್ಲೆಸ್ ಅನುದಾನದ 2022ರ 10 ಪ್ರಶಸ್ತಿ ವಿಜೇತರಲ್ಲಿ ಒಬ್ಬಳಾಗಿ, ಪುಸ್ತಕ ಬಿಡುಗಡೆ ಹಾಗೂ ಛಾಯಾಗ್ರಹಣ ಪ್ರದರ್ಶನಕ್ಕಾಗಿ ಇಂದು ದೆಹಲಿಯಿಂದ ಪ್ಯಾರಿಸ್‌ಗೆ ಪ್ರಯಾಣಿಸಲು ನಿರ್ಧರಿಸಿದ್ದೆ. ನನ್ನ ಬಳಿ ಫ್ರೆಂಚ್ ವೀಸಾ ಇದ್ದರೂ ನನ್ನನ್ನು ದೆಹಲಿ ವಿಮಾನ ನಿಲ್ದಾಣದ ಇಮಿಗ್ರೇಷನ್ ಡೆಸ್ಕ್‌ನಲ್ಲಿ ನಿಲ್ಲಿಸಲಾಯಿತು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

    ಯಾವುದೇ ಕಾರಣವಿಲ್ಲದೇ ನನ್ನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ ಎಂದು ಮಟ್ಟೂ ಆರೋಪಿಸಿದ್ದರೂ ಅವರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಿಗಾ ಇರಿಸುವಂತೆ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಅವರ ವಿದೇಶ ಪ್ರಯಾಣವನ್ನು ತಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಭಾರೀ ಮಳೆಯಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧ – ರಾಜ್ಯದ ವಿವಿಧೆಡೆ ಭೂಕುಸಿತ, ಭೂಮಿ ಕಂಪಿಸಿದ ಅನುಭವ

    ಜಮ್ಮು ಮತ್ತು ಕಾಶ್ಮೀರದ ಪತ್ರಕರ್ತರ ಸಂಘ ಪುಲಿಟ್ಜರ್ ವಿಜೇತೆಯ ವಿದೇಶ ಪ್ರಯಾಣವನ್ನು ರದ್ದುಗೊಳಿಸಿರುವ ಕ್ರಮವನ್ನು ಖಂಡಿಸಿದೆ. ಪ್ರಯಾಣ ನಿರ್ಬಂಧದ ಹೆಸರಿನಲ್ಲಿ ಹಲವಾರು ಜನರ ಅವಕಾಶಗಳನ್ನು ಕಸಿದುಕೊಂಡಿದೆ ಎಂದು ಕಾಶ್ಮೀರದ ಜರ್ನಲಿಸ್ಟ್ ಫೆಡರೇಶನ್ ಟ್ವೀಟ್ ಮಾಡಿದೆ.

    Live Tv

  • ವಯಸ್ಸಿನ ಅಂತರಕ್ಕೆ ಮತ್ತೆ ಟ್ರೋಲ್ ಆದ ಅರ್ಜುನ್ ಮತ್ತು ಮಲೈಕಾ

    ವಯಸ್ಸಿನ ಅಂತರಕ್ಕೆ ಮತ್ತೆ ಟ್ರೋಲ್ ಆದ ಅರ್ಜುನ್ ಮತ್ತು ಮಲೈಕಾ

    ಬಾಲಿವುಡ್ ನಟ ಅರ್ಜುನ್ ತಮ್ಮ 37ನೇ ವರ್ಷದ ಹುಟ್ಟು ಹಬ್ಬವನ್ನು ಪ್ಯಾರೀಸ್ ನಲ್ಲಿ ಆಚರಿಸಿಕೊಂಡಿದ್ದಾರೆ. ಗೆಳತಿ ನಟಿ ಮಲೈಕಾ ಅರೋರಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಮತ್ತೆ ಟ್ರೋಲ್ ಆಗಿದೆ ಈ ಜೋಡಿ. ಅರ್ಜುನ್ ಮತ್ತು ಮಲೈಕಾ ಸುದ್ದಿಗೆ ಬಂದಾಗೆಲ್ಲ ಅವರ ನಡುವಿನ ವಯಸ್ಸಿನ ಅಂತರದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಇದೀಗ ಮತ್ತೆ ಅದೇ ಸುದ್ದಿಯು ಟ್ರೋಲ್ ಆಗುತ್ತಿದೆ.

    ಅರ್ಜುನ್ ಕಪೂರ್ 37ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಗೆಳತಿ ಮಲೈಕಾಗೆ 48 ವರ್ಷ. ಈ ವಯಸ್ಸಿನ ಅಂತರವನ್ನಿಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಈ ಜೋಡಿ ಕಳೆದ ಹಲವು ವರ್ಷಗಳಿಂದಲೂ ರಿಲೇಷನ್ ಶಿಪ್ ನಲ್ಲಿದ್ದಾರೆ. ಹಾಗಾಗಿ ಇಂತಹ ಟ್ರೋಲ್ ಗಳನ್ನು ಅವರು ಹಲವು ಬಾರಿ ಎದುರಿಸಿದ್ದಾರೆ. ಅದಕ್ಕೆ ಪ್ರತ್ಯುತ್ತರವನ್ನೂ ಈ ಜೋಡಿ ಹಲವಾರು ಬಾರಿ ನೀಡಿದ್ದಾರೆ. ಇದನ್ನೂ ಓದಿ:ದುಬೈಗೆ ಹಾರಿದ ಸಮಂತಾ: ಸ್ನೇಹಿತೆಯರ ಜೊತೆ ನೈಟ್ ಔಟ್

    ಪ್ಯಾರಿಸ್ ನಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಅರ್ಜುನ್ ಗೆ ವಿಭಿನ್ನವಾಗಿಯೇ ಶುಭಾಶಯ ಕೋರಿದ್ದಾರೆ ಮಲೈಕಾ. ಅಲ್ಲದೇ, ಪ್ಯಾರಿಸ್ ಪ್ರವಾಸ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುಂದಿನ ನಿನ್ನೆಲ್ಲ ಕನಸುಗಳು ನನಸಾಗಲಿ ಎಂದು ಶುಭ ಹಾರೈಸಿದ್ದಾರೆ. ಅರ್ಜುನ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಕೂಡ ಶುಭ ಹಾರೈಸಿದ್ದು, ಆದಷ್ಟು ಬೇಗ ಮದುವೆ ಮಾಡಿಕೊಳ್ಳುವಂತೆ ಸಲಹೆ ಕೂಡ ನೀಡಿದ್ದಾರೆ.

    Live Tv

  • 22ನೇ ಗ್ರ್ಯಾನ್ ಸ್ಲಾಂನ ಕಿರೀಟ ಮುಡಿಗೇರಿಸಿಕೊಂಡ ನಡಾಲ್ – ನಾರ್ವೆಯ ಕಾಸ್ಪರ್ ರೂಡ್‍ಗೆ ನಿರಾಸೆ

    22ನೇ ಗ್ರ್ಯಾನ್ ಸ್ಲಾಂನ ಕಿರೀಟ ಮುಡಿಗೇರಿಸಿಕೊಂಡ ನಡಾಲ್ – ನಾರ್ವೆಯ ಕಾಸ್ಪರ್ ರೂಡ್‍ಗೆ ನಿರಾಸೆ

    ಪ್ಯಾರಿಸ್: ಸ್ಪೇನ್‍ನ ರಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರ್ಯಾನ್‍ ಸ್ಲಾಂ ಟೆನಿಸ್ ಟೂರ್ನಿಯ 22 ಗ್ರ್ಯಾನ್ ಸ್ಲಾಂನ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಈ ಮೂಲಕ 22ನೇ ಗ್ರ್ಯಾನ್ ಸ್ಲಾಂ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.

    ರೋಲ್ಯಾಂಡ್ ಗ್ಯಾರೋಸ್‍ನ ಫಿಲಿಪ್ ಚಾಟ್ರಿಯರ್ ಕೋರ್ಟ್‍ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‍ನಲ್ಲಿ ನಾರ್ವೆಯ ಕಾಸ್ಪರ್ ರೂಡ್ ವಿರುದ್ಧ 6-3, 6-3, 6-0 ರ ನೇರ ಸೆಟ್‍ಗಳ ಜಯ ಸಾಧಿಸಿದರು. ಇಲ್ಲಿ ತಮ್ಮ 14ನೇ ಪ್ರಶಸ್ತಿ ಮುಡಿಗೇರಿಸಿಕೊಂಡಲ್ಲದೆ, ‘ಕ್ಲೇ ಕೋರ್ಟ್ ಕಿಂಗ್’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

    ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಗೆದ್ದು ದಾಖಲೆಯ 21ನೇ ಟ್ರೋಫಿ ಜಯಿಸಿದ್ದ ನಡಾಲ್, ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 22ಕ್ಕೆ ಹೆಚ್ಚಿಸಿಕೊಂಡರು. 23 ವರ್ಷದ ರೂಡ್, ತನಗಿಂತ 13 ವರ್ಷ ಹಿರಿಯ ಆಟಗಾರನಿಗೆ ಸರಿಸಾಟಿಯಾಗಿ ನಿಲ್ಲಲು ವಿಫಲರಾದರು. ರೂಡ್ ಬತ್ತಳಿಕೆಯಲ್ಲಿದ್ದ ಅಸ್ತ್ರಗಳು ನಡಾಲ್ ಮುಂದೆ ನಡೆಯಲಿಲ್ಲ. ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಗೆದ್ದ ನಾರ್ವೆಯ ಮೊದಲ ಆಟಗಾರ ಎನಿಸಿಕೊಳ್ಳುವ ಅವರ ಆಸೆ ಕೈಗೂಡಲಿಲ್ಲ.

    ಫ್ರೆಂಚ್ ಓಪನ್‍ನಲ್ಲಿ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಗೌರವ ನಡಾಲ್‍ಗೆ ಒಲಿಯಿತು. ಆಂಡ್ರೆಸ್ ಗಿಮೆನೊ ಹೆಸರಲ್ಲಿದ್ದ 50 ವರ್ಷಗಳಷ್ಟು ಹಳೆಯ ದಾಖಲೆಯನ್ನು ಅವರು ಮುರಿದರು. ಸ್ಪೇನ್‍ನವರೇ ಆದ ಗಿಮೆನೊ 1972 ರಲ್ಲಿ ತಮ್ಮ 34ನೇ ವಯಸ್ಸಿನಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದರು.

    ಕಳೆದ ಮೂರು ವರ್ಷಗಳಿಂದ ಕ್ಲೇ ಕೋರ್ಟ್ ಟೂರ್ನಿಗಳಲ್ಲಿ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ರೂಢ್, ನಡಾಲ್‍ಗೆ ಪೈಪೋಟಿ ನೀಡಬಹುದು ಎಂಬ ನಿರೀಕ್ಷೆ ಹುಸಿಯಾಯಿತು.

    ಮೊದಲ ಸೆಟ್‍ನ ಎರಡನೇ ಗೇಮ್‍ನಲ್ಲೇ ಎದುರಾಳಿಯ ಸರ್ವ್ ಬ್ರೇಕ್ ಮಾಡಿದ ನಡಾಲ್, ತಮ್ಮ ಉದ್ದೇಶ ಏನೆಂಬುದನ್ನು ಸ್ಪಷ್ಟಪಡಿಸಿದರು. ಮುಂದಿನ ಗೇಮ್‍ನಲ್ಲಿ ರೂಡ್, ನಡಾಲ್ ಸರ್ವ್ ಮುರಿದು ತಿರುಗೇಟು ನೀಡಿದರು. ನಾಲ್ಕನೇ ಗೇಮ್‍ನಲ್ಲಿ ಮತ್ತೆ ಎದುರಾಳಿಯ ಸರ್ವ್ ಮುರಿದ ಸ್ಪೇನ್ ಆಟಗಾರ, 3-1ರ ಮುನ್ನಡೆ ಗಳಿಸಿದರು. ಪಂದ್ಯ ಸಾಗಿದಂತೆ ತಮ್ಮ ಹಿಡಿತ ಬಿಗಿಗೊಳಿಸಿ 6-3 ರಲ್ಲಿ ಸೆಟ್ ಗೆದ್ದರು.

    ಎರಡನೇ ಸೆಟ್‍ನ ನಾಲ್ಕನೇ ಗೇಮ್‍ನಲ್ಲಿ ಎದುರಾಳಿಯ ಸರ್ವ್ ಬ್ರೇಕ್ ಮಾಡಿದ ರೂಡ್ 3-1 ರಲ್ಲಿ ಮೇಲುಗೈ ಸಾಧಿಸಿ, ಮರುಹೋರಾಟದ ಸೂಚನೆ ನೀಡಿದರು. ಆದರೆ ಮುಂದಿನ ಗೇಮ್‍ನಲ್ಲಿ ರೂಡ್ ಸರ್ವ್ ಬ್ರೇಕ್ ಮಾಡಿ, ಬಳಿಕ ತಮ್ಮ ಸರ್ವ್ ಉಳಿಸಿಕೊಂಡ ನಡಾಲ್ 3-3 ರಲ್ಲಿ ಸಮಬಲ ಸಾಧಿಸಿದರು. ಆ ಬಳಿಕದ ಆಟ ಏಕಪಕ್ಷೀಯವಾಗಿ ನಡೆಯಿತು. ಸತತ ಒಂಬತ್ತು ಗೇಮ್‍ಗಳನ್ನು ಗೆದ್ದುಕೊಂಡು ಟ್ರೋಫಿಗೆ ಮುತ್ತಿಕ್ಕಿದರು.

  • ಅಡುಗೆ ಎಣ್ಣೆಯಿಂದ ತಯಾರಿಸಿದ ಇಂಧನದಲ್ಲಿ 3 ಗಂಟೆ ಹಾರಾಡಿತು ವಿಮಾನ

    ಅಡುಗೆ ಎಣ್ಣೆಯಿಂದ ತಯಾರಿಸಿದ ಇಂಧನದಲ್ಲಿ 3 ಗಂಟೆ ಹಾರಾಡಿತು ವಿಮಾನ

    ಪ್ಯಾರಿಸ್: ಇತ್ತೀಚೆಗೆ ಅಡುಗೆ ಎಣ್ಣೆಯಿಂದ ತಯಾರಿಸಲಾದ ಇಂಧನದಿಂದ ವಿಮಾನವೊಂದನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಇಂಧನದಿಂದ ವಿಮಾನ 3 ಗಂಟೆಗಳ ಕಾಲ ಪ್ರಾಯೋಗಿಕ ಹಾರಾಟ ನಡೆಸಿದೆ.

    ಎ380 ಏರ್‌ಬಸ್ ವಿಮಾನ ಇತ್ತೀಚೆಗೆ ಫ್ರಾನ್ಸ್ ದೇಶದ ಬ್ಲಾಗ್ನಾಕ್ ವಿಮಾನ ನಿಲ್ದಾಣದಿಂದ ಪ್ರಾಯೋಗಿಕ ಹಾರಾಟವನ್ನು ನಡೆಸಿತು. ವಿಶೇಷವೆಂದರೆ ವಿಮಾನದಲ್ಲಿ ಅಡುಗೆ ಎಣ್ಣೆಯನ್ನು ಹೊರತುಪಡಿಸಿ ಬೇರೇನೂ ಬಳಸಲಾಗಿಲ್ಲ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ವಿದ್ಯುತ್ ಶಾಕ್ – ಯೂನಿಟ್‍ಗೆ 35 ಪೈಸೆ ಹೆಚ್ಚಳ

    ಸಸ್ಟೆನೆಬಲ್ ಏವಿಯೇಷನ್ ಫ್ಯೂಯೆಲ್(ಎಸ್‌ಎಎಫ್) ಎಂದು ಕರೆಯಲಾಗುವ ಇಂಧನವನ್ನು ಈ ವಿಮಾನದಲ್ಲಿ ಬಳಸಲಾಗಿದ್ದು, ಇದು ಅಡುಗೆ ಎಣ್ಣೆ ಹಾಗೂ ತ್ಯಾಜ್ಯದಿಂದ ಮಾಡಲ್ಪಟ್ಟಿದೆ. ಕೇವಲ ಒಂದು ರೋಲ್ಸ್ ರಾಯ್ಸ್ ಟ್ರೆಂಟ್ 900 ಎಂಜಿನ್ ಮೂಲಕ ಈ ವಿಮಾನವನ್ನು ಹಾರಿಸಲಾಗಿದೆ.

    ಏನಿದು ಎಸ್‌ಎಎಫ್:
    ಎಸ್‌ಎಎಫ್ ಒಂದು ರೀತಿಯ ಇಂಧನವಾಗಿದ್ದು ಇದನ್ನು ಮುಖ್ಯವಾಗಿ ಅಡುಗೆ ಎಣ್ಣೆ ಹಾಗೂ ತ್ಯಾಜ್ಯದಿಂದ ಮಾಡಲಾಗಿದೆ. ಪರೀಕ್ಷೆಯಲ್ಲಿ ಬಳಸಲಾದ ಇಂಧನವನ್ನು ಹೈಡ್ರೊ ಪ್ರೊಸೆಸ್ಡ್ ಎಸ್ರ‍್ಸ್ ಹಾಗೂ ಫ್ಯಾಟಿ ಆಸಿಡ್(ಹೆಚ್‌ಇಎಫ್‌ಎ)ಗಳಿಂದ ತಯಾರಿಸಲಾಗಿದೆ. ಇದು ಸುಗಂಧ ಹಾಗೂ ಸಲ್ಫರ್ ಮುಕ್ತವಾಗಿದ್ದು, ಫ್ರಾನ್ಸ್‌ನ ನಾರ್ಮಂಡಿ ಪ್ರದೇಶದ ಟೋಟಲ್ ಎನರ್ಜಿಸ್ ಕಂಪನಿ ಪೂರೈಸಿದೆ. ಇದನ್ನೂ ಓದಿ: ಎಡಿಟ್ ಫೀಚರ್ ತರಲಿದ್ದೇವೆ ಎಂದ ಟ್ವಿಟ್ಟರ್ – ಇದು ಏಪ್ರಿಲ್ ಫೂಲ್ ಅಂದ್ರು ನೆಟ್ಟಿಗರು

    ಎಸ್‌ಎಎಫ್ ಇಂಧನವನ್ನು ಬಳಸಿ ಹಾರುವ ವಿಮಾನಗಳು ಶೇ.53 ರಿಂದ ಶೇ.71ರ ವರೆಗೆ ಹೊರ ಹಾಕುವ ಇಂಗಾಲವನ್ನು ಕಡಿತಗೊಳಿಸಬಹುದು ಎಂದು ಕಂಪನಿ ತಿಳಿಸಿದೆ.

  • 6 ಜನ ಅಂಗರಕ್ಷಕರೊಂದಿಗೆ ಶೌಚಾಲಯಕ್ಕೆ ಹೋದ ರಷ್ಯಾ ಅಧ್ಯಕ್ಷ: ವಿಡಿಯೋ ವೈರಲ್

    6 ಜನ ಅಂಗರಕ್ಷಕರೊಂದಿಗೆ ಶೌಚಾಲಯಕ್ಕೆ ಹೋದ ರಷ್ಯಾ ಅಧ್ಯಕ್ಷ: ವಿಡಿಯೋ ವೈರಲ್

    ಪ್ಯಾರಿಸ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆರು ಜನ ಅಂಗರಕ್ಷಕರೊಂದಿಗೆ ಶೌಚಾಲಯಕ್ಕೆ ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪ್ಯಾರಿಸ್‍ನಲ್ಲಿ ಉಕ್ರೇನ್ ಶೃಂಗಸಭೆ ನಡೆಯುತ್ತಿದ್ದು, ರಷ್ಯಾದ ಅಧ್ಯಕ್ಷ 76 ವರ್ಷದ ಪುಟಿನ್ ಕೂಡ ಭಾಗವಹಿಸಿದ್ದರು. ಪ್ಯಾರಿಸ್‍ನ ಎಲ್‍ಸಿ ಪ್ಯಾಲೇಸ್‍ನಲ್ಲಿ ಪುಟಿನ್ ಅವರು ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ಅವರೊಂದಿಗೆ ಐವರು ಅಂಗರಕ್ಷಕರು ಶೌಚಾಲಯದ ಒಳಗೆ ಹೋಗಿದ್ದರೆ, ಒಬ್ಬ ಹೊರಗೆ ನಿಂತಿದ್ದರು.

    ಶೌಚಾಲಯದಿಂದ ಪುಟಿನ್ ಹೊರಗೆ ಬರುವ ಮುನ್ನ ಮೂರು ಜನ, ಪುಟಿನ್ ಅವರ ಹಿಂದೆ ಇಬ್ಬರು ಹೊರ ಬಂದ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿತ್ತು. ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

    ಉಕ್ರೇನ್ ಶಾಂತಿ ಶೃಂಗಸಭೆಯಲ್ಲಿ ನಾಲ್ಕು ದೇಶಗಳ ಮುಖ್ಯಸ್ಥರು ಭಾಗವಹಿಸಿದ್ದರು. ಅವರಲ್ಲಿ ವ್ಲಾಡಿಮಿರ್ ಪುಟಿನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಜೆಲೆನ್ಸ್ಕಿ ವಿವಿಧ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.

    ವಿವಾದದಲ್ಲಿ ಭಾಗಿಯಾಗಿರುವ ಒತ್ತೆಯಾಳುಗಳನ್ನು ಉಭಯ ದೇಶಗಳು ಬಿಡುಗಡೆ ಮಾಡುವುದಾಗಿ ರಷ್ಯಾ ಮತ್ತು ಉಕ್ರೇನ್ ಒಪ್ಪಿಕೊಂಡಿವೆ. ಇದಲ್ಲದೆ, ಮುಂದಿನ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಉಕ್ರೇನ್‍ನ ಮೂರು ಪ್ರದೇಶಗಳಲ್ಲಿ ಮಿಲಿಟರಿ ಪಡೆಗಳನ್ನು ಕೊನೆಗೊಳಿಸುವುದಾಗಿಯೂ ರಷ್ಯಾ ಭರವಸೆ ನೀಡಿದೆ.

  • ಹಿಂದಿದ್ದ ಭ್ರಷ್ಟಾಚಾರ, ವಂಶ ರಾಜಕಾರಣ, ಸಾರ್ವಜನಿಕರ ಹಣ ಲೂಟಿ ಈಗಿಲ್ಲ: ಮೋದಿ

    ಹಿಂದಿದ್ದ ಭ್ರಷ್ಟಾಚಾರ, ವಂಶ ರಾಜಕಾರಣ, ಸಾರ್ವಜನಿಕರ ಹಣ ಲೂಟಿ ಈಗಿಲ್ಲ: ಮೋದಿ

    – ಫ್ರಾನ್ಸ್ ಮಿನಿ ಭಾರತದಂತೆ ಕಾಣುತ್ತಿದೆ
    – ಮೋದಿಯನ್ನ ಅದ್ಧೂರಿಯಾಗಿ ಸ್ವಾಗತಿಸಿದ ಮುಸ್ಲಿಮರು

    ಪ್ಯಾರಿಸ್: ಭಾರತದಲ್ಲಿ ಹಿಂದಿದ್ದ ಭ್ರಷ್ಟಾಚಾರ, ವಂಶ ರಾಜಕಾರಣ, ಸಾರ್ವಜನಿಕರ ಹಣ ಲೂಟಿ ಹಾಗೂ ಭಯೋತ್ಪಾದನೆ ಈಗ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಫ್ರಾನ್ಸ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರು ಪ್ಯಾರಿಸ್‍ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿ, ನಾನು ಫುಟ್ಬಾಲ್ ಪ್ರಿಯರ ರಾಷ್ಟ್ರಕ್ಕೆ ಬಂದಿದ್ದೇನೆ. ಫುಟ್ಬಾಲ್‍ನಲ್ಲಿ ಪ್ರತಿ ಗೋಲ್‍ನ ಮಹತ್ವ ನಿಮಗೆ ಗೊತ್ತಿದೆ. ಅದರಂತೆ ಅಸಾಧ್ಯವೆಂದು ಪರಿಗಣಿಸಲಾಗಿದ್ದ ಗುರಿಗಳನ್ನು ಈಡೇರಿಸಲು ನಮ್ಮ ಸರ್ಕಾರ ಮುಂದಾಗಿದ್ದೇವೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ 75 ದಿನಗಳಲ್ಲಿ ನಾವು ಅನೇಕ ಧೃಡ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

    ಭಾರತವು ಈಗ ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಜನಾದೇಶವು ಕೇವಲ ಸರ್ಕಾರ ರಚನೆಗಾಗಿ ಅಲ್ಲ. ಅದು ಭವ್ಯ ಭಾರತ ನಿರ್ಮಾಣಕ್ಕೆ ಸಿಕ್ಕ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

    1950 ಹಾಗೂ 1966ರಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತ ನೆನೆದ ಪ್ರಧಾನಿ ಮೋದಿ, ಭಾರತೀಯ ಪರಮಾಣು ಭೌತಶಾಸ್ತ್ರಜ್ಞ ಹೋಮಿ ಜಹಾಂಗೀರ್ ಬಾಬಾ ಅವರು ಸೇರಿದಂತೆ ವಿಮಾನ ಅಪಘಾತದಲ್ಲಿ ಮೃತಪಟ್ಟ ಎಲ್ಲರಿಗೂ ನಾನು ವಂದಿಸುತ್ತೇನೆ ಎಂದರು.

    ಪ್ಯಾರಿಸ್‍ನ ಸಾಂಸ್ಕೃತಿಕ ಕ್ಯಾಲೆಂಡರ್ ನಲ್ಲಿ ಗಣೇಶ ಮಹೋತ್ಸವ ಒಂದು ಪ್ರಮುಖ ಭಾಗವಾಗಿದೆ ಅಂತ ಕೆಲವರು ತಿಳಿಸಿದರು. ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ ನೋಡಿದರೆ ಪ್ಯಾರಿಸ್ ಮಿನಿ ಇಂಡಿಯಾದಂತೆ ಕಾಣುತ್ತದೆ. ಪ್ಯಾರಿಸ್‍ನಲ್ಲಿ ಗಣಪತಿ ಬಪ್ಪಾ ಮೋರಿಯಾ ಘೋಷಣೆ ಕೇಳಿಬರಲಿದೆ ಎಂದು ಹೇಳಿದರು.

    ಫ್ರಾನ್ಸ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‍ನಲ್ಲಿಯು ಯುನೆಸ್ಕೋ ಕೇಂದ್ರ ಕಚೇರಿಗೆ ಇಂದು ಭೇಟಿ ನೀಡಿದರು. ಯುನೆಸ್ಕೋ ಮಹಾ ನಿರ್ದೇಶಕಿ ಅಡ್ರೆ ಅಜೌಲೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಸಂಪ್ರದಾಯದಂತೆ ಅದ್ಧೂರಿಯಾಗಿ ಸ್ವಾಗತಿಸಿದರು. ಇದಕ್ಕೂ ಮುನ್ನ (ಗುರುವಾರ)  ಪ್ಯಾರಿಸ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಅವರು, ಆಗಮಿಸುತ್ತಿದ್ದಂತೆ ಅಲ್ಲಿ ನೆಲೆಸಿರುವ ಗುಜರಾತ್‍ನ ವೊಹ್ರಾ ಮುಸ್ಲಿಮರು ತ್ರಿವರ್ಣ ಧ್ವಜ ಹಿಡಿದು, ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿ ಅದ್ಧೂರಿಯಾಗಿ ಸ್ವಾಗತ ಕೋರಿದರು.

  • ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

    ಹೂಸಿನ ದುರ್ವಾಸನೆಯನ್ನು ಸುವಾಸನೆಯಾಗಿ ಮಾಡೋ ಮಾತ್ರೆ ಮಾರುಕಟ್ಟೆಗೆ ಎಂಟ್ರಿ

    ಪ್ಯಾರಿಸ್: ಯಾರಾದರೂ ಹೂಸು ಬಿಟ್ಟರೆ ಮೂಗು ಮುಚ್ಚದಿರುವವರು ಎಲ್ಲೂ ಸಿಗಲ್ಲ. ಕೆಲವೊಮ್ಮೆ ತಮ್ಮ ಹೂಸು ವಾಸನೆಯನ್ನೇ ತಡೆಯಲು ಆಗದೇ ಮುಜುಗರಕ್ಕೀಡಾಗುವ ಪರಿಸ್ಥಿತಿ ಸಾಮಾನ್ಯವಾಗಿ ಎಲ್ಲಾರು ಎದುರಿಸಿರುತ್ತಾರೆ. ಆದ್ರೆ ಇನ್ಮುಂದೆ ಹಾಗೆ ಆಗಲ್ಲ. ಸದ್ಯ ಈ ಸಮಸ್ಯೆ ನಿವಾರಿಸಲು ಮಾರುಕಟ್ಟೆಯಲ್ಲಿ ವಿಶೇಷ ಮಾತ್ರೆ ಬಂದಿದೆ.

    ಹೌದು. ಇದನ್ನು ಕೇಳಿದರೆ ತಮಾಷೆ ಅನಿಸಬಹುದು, ಇನ್ನೆನೇನು ಮಾತ್ರೆ ಬರತ್ತಪ್ಪಾ? ಅಂತ ವಿಚಿತ್ರ ಕೂಡ ಅನಿಸಬಹುದು. ಆದ್ರೆ ಇದು ಸತ್ಯ. ಈ ಮಾತ್ರೆಗಳನ್ನು ಸೇವಿಸಿದರೆ ಹೂಸು ದುರ್ವಾಸನೆಯನ್ನು ಬೀರದೆ ಸುವಾಸನೆಯನ್ನೂ ಸೂಸುತ್ತದೆ. ಯಾವ ಸುವಾಸನೆ ಇಷ್ಟವೋ ಅದನ್ನು ನೀವು ಖರೀದಿಸಲು ನಿಮಗೆ ಚಾಯ್ಸ್ ಕೂಡ ಇದೆ. ಚಾಕೋಲೆಟ್, ಗುಲಾಬಿ, ಲ್ಯಾವೆಂಡರ್ ಹೀಗೆ ವಿಧವಿಧ ಪರಿಮಳದ, ಸುಗಂಧ ಸೂಸುವ ಹೂಸು ಮಾತ್ರೆಗಳಿಗೆ ಮಾರ್ಕೆಟ್‍ನಲ್ಲಿ ಭಾರಿ ಬೇಡಿಕೆ ಇದೆ.

    ಫ್ರಾನ್ಸ್ ನ ವ್ಯಕ್ತಿಯೊಬ್ಬರು ಅಪಾನುವಾಯು ಬಿಟ್ಟಾಗಲೆಲ್ಲಾ ವಿವಿಧ ಸುವಾಸನೆ ಬೀರುವ ಮಾತ್ರೆಯನ್ನು ಕಂಡು ಹಿಡಿದಿದ್ದಾರೆ. ಪಶ್ಚಿಮ ಫ್ರೆಂಚ್ ಪಟ್ಟಣವಾದ ಗೆಸ್ವ್ರೆಸ್‍ನ ನಿವಾಸಿಯಾದ ಕ್ರಿಶ್ಚಿಯನ್ ಪೋಯಿಂಚೆವಲ್ ಹೂಸಿನ ದುರ್ವಾಸನೆಗೆ ಪರಿಹಾರ ಕಂಡುಹಿಡಿದ್ದಾರೆ. ಅಲ್ಲದೆ ಈ ಮಾತ್ರೆಗೆ ಪೈಲ್ಯೂಟ್‍ಪೆಟ್ ಎಂದು ನಾಮಕರಣ ಮಾಡಿದ್ದಾರೆ.

    ನೀವು ಈತರಹದ ಮಾತ್ರೆಯನ್ನು ಕಂಡುಹಿಡಿಯಲು ಕಾರಣವೇನು ಎಂದು ಪೋಯಿಂಚೆವಲ್ ಅವರಿಗೆ ಕೇಳಿದಾಗ ಈ ಮಾತ್ರೆ ಹಿಂದಿನ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ. ಒಂದು ದಿನ ಸ್ನೇಹಿತರೊಟ್ಟಿಗೆ ಊಟಕ್ಕೆ ಆಹ್ವಾನಿಸಿದಾಗ ಹೂಸು ಬಿಡುವುದರಿಂದ ಪೋಯಿಂಚೆವಲ್ ಮುಜುಗರಕ್ಕೆ ಒಳಗಾಗಿದ್ದರು. ಆಗ ಅವರ ಸ್ನೇಹಿತರು ಟೀಕಿಸಿದ್ದೆ ಈ ಮಾತ್ರ ಹುಟ್ಟಿಕೊಳ್ಳಲು ಕಾರಣವಾಯ್ತು. ಆ ಬಳಿಕ ತಾಮಗಾದ ಮುಜುಗರ ಬೇರೆಯವರು ಅನುಭವಿಸಬಾರದೆಂದು ಈ ಮಾತ್ರೆ ಕಂಡುಹಿಡಿದರು ಎಂದು ವರದಿಯಾಗಿದೆ.

    2007ರಿಂದ ಈ ಮಾತ್ರೆಯನ್ನು ತಯಾರಿಸಲು ಪೋಯಿಂಚೆವಲ್ ಆರಂಭಿಸಿದ್ದು, ಲುಟಿನ್ ಮಲಿನ್ ಎಂಬ ಹೆಸರಿನಲ್ಲಿ ಪ್ರತ್ಯೇಕ ವೆಬ್‍ಸೈಟ್ ಅನ್ನು ಕೂಡ ಪೋಯಿಂಚೆವಲ್ ಹೊಂದಿದ್ದಾರೆ. ಈ ವೆಬ್‍ಸೈಟ್‍ನಲ್ಲಿ ಈ ಮಾತ್ರೆಗಳು ಹೇಗೆ ತಯಾರಾಗುತ್ತೆ? ಯಾವ ಯಾವ ಪದಾರ್ಥಗಳು ಇದಕ್ಕೆ ಬಳಸಲಾಗುತ್ತೆ? ಇತರೆ ಎಲ್ಲಾ ಮಾಹಿತಿಗಳು ಲಭ್ಯವಿದೆ. ಅಲ್ಲದೆ ಗ್ರಾಹಕರು ಮಾತ್ರೆ ಬಗ್ಗೆ ಇರುವ ಸಂದೇಹವನ್ನು ವೆಬ್‍ಸೈಟ್‍ನ ಪ್ರಶ್ನೋತ್ತರ ಅಂಕಣದಲ್ಲಿ ಬರೆದರೆ ಉತ್ತರವನ್ನೂ ಕೂಡ ನೀಡಲಾಗುತ್ತದೆ.

    ಯಾವೆಲ್ಲಾ ಸುವಾಸನೆಗಳಲ್ಲಿ ಲಭ್ಯ?
    1. ಮೇ ಡೇ ಲಿಲ್ಲಿ ಸೆಂಟೆಡ್ ಫಾರ್ಟ್ ಪಿಲ್ಸ್
    2. ಚಾಕಲೇಟ್ ಅರೋಮಾ ಫಾರ್ಟ್ ಪಿಲ್ಸ್
    3. ರೋಸ್ ಸ್ಮೆಲ್ ಫಾರ್ಟ್ ಪಿಲ್ಸ್
    4. ವಯಲೆಟ್ ಸ್ಮೆಲ್ ಫಾರ್ಟ್ ಪಿಲ್ಸ್
    5. ಜಿಂಜರ್ ಸ್ಮೆಲ್ ಫಾರ್ಟ್ ಪಿಲ್ಸ್

    ಈ 5 ವೆರೈಟಿಯಲ್ಲಿ ಫಾರ್ಟ್ ಪಿಲ್ಸ್ ಲಭ್ಯವಿದ್ದು, 60 ಮಾತ್ರೆಗಳಿಗೆ 18.86 ಯುರೋ(1,483 ರೂ.)ಗೆ ಬೆಲೆ ನಿಗದಿ ಪಡಿಸಲಾಗಿದೆ. ಅಷ್ಟೇ ಅಲ್ಲದೆ ಈ ಮಾತ್ರೆಗಳನ್ನು ಆನ್‍ಲೈನ್ ಮೂಲಕ ಆರ್ಡರ್ ಮಾಡಬಹುದು. ಲುಟಿನ್ ಮಲಿನ್ ವೆಬ್‍ಸೈಟ್ ಮಾತ್ರೆಗಳನ್ನು ಆನ್‍ಲೈನ್ ಆರ್ಡರ್ ಮಾಡಬಹುದು. ಬಹುತೇಕ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಉಚಿತ ಶಿಪ್ಪಿಂಗ್ ವ್ಯವಸ್ಥೆಯನ್ನೂ ಕೂಡ ನೀಡಲಾಗುತ್ತಿದೆ.

    ಸದ್ಯ ಈ ಮಾತ್ರೆ ಬಳಸಿದ ಹಲವರು ಹೂಸು ದುರ್ವಾಸನೆಯಿಂದ ಮುಕ್ತಿ ಪಡೆದಿದ್ದಾರೆ. ಇದಕ್ಕೆ ತುಂಬಾ ಬೇಡಿಕೆ ಇದೆ ಎಂದು ವರದಿ ತಿಳಿಸಿದೆ.

  • ಭೇಟಿ ಮಾಡಲು ಬರುತ್ತಿದ್ದ ಹೆತ್ತವರನ್ನು ತಡೆಯಲು ವಿಮಾನದಲ್ಲೇ ಬಾಂಬ್ ಇದೆ ಎಂದ!

    ಭೇಟಿ ಮಾಡಲು ಬರುತ್ತಿದ್ದ ಹೆತ್ತವರನ್ನು ತಡೆಯಲು ವಿಮಾನದಲ್ಲೇ ಬಾಂಬ್ ಇದೆ ಎಂದ!

    ಪ್ಯಾರಿಸ್: ತನ್ನನ್ನು ಭೇಟಿಯಾಗಲು ಬರುತ್ತಿದ್ದ ತಂದೆ ತಾಯಿಯನ್ನು ತಡೆಯಲು ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ಈಸಿ ಜೆಟ್ ಏರ್‌ಲೈನ್ಸ್ ಗೆ ಕರೆ ಮಾಡಿ ಸುಳ್ಳು ಸುದ್ದಿ ಹಬ್ಬಿಸಿದ ಪುತ್ರ ಪೊಲೀಸರ ಅತಿಥಿಯಾಗಿದ್ದಾನೆ.

    ತಂದೆ ತಾಯಿಯನ್ನು ಬಿಟ್ಟು ವಿದ್ಯಾಭ್ಯಾಸಕ್ಕೆ ದೂರದ ಊರಿಗೆ ಹೋಗುವ ಮಕ್ಕಳು ತಮ್ಮ ಹೆತ್ತವರನ್ನು ಯಾವಾಗ ನೋಡುತ್ತೇವೆ ಅಂತ ಕಾಯುತ್ತಿರುತ್ತಾರೆ. ಆದ್ರೆ ಪಶ್ಚಿಮ ಫ್ರಾನ್ಸಿನ ರೆನೆಸ್‍ನಲ್ಲಿ ಓದುತ್ತಿದ್ದ 23 ವರ್ಷದ ವಿದ್ಯಾರ್ಥಿಯೊಬ್ಬ ತಂದೆ ತಾಯಿ ತನ್ನನ್ನು ನೋಡಲು ಬರುವುದು ಇಷ್ಟವಿಲ್ಲದೆ ಅವರು ಬರುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ವಾರದ ಹಿಂದೆ ಸುಳ್ಳು ಸುದ್ದಿ ಹಬ್ಬಿಸಿದ್ದನು. ವಿದ್ಯಾರ್ಥಿಯ ಈ ಹುಚ್ಚಾಟಕ್ಕೆ ದಾರಿ ಮಧ್ಯದಲ್ಲೇ ಈಸಿ ಜೆಟ್ ವಿಮಾನ ಹಿಂತಿರುಗಿತ್ತು.

    ಬಳಿಕ ಈ ಸುದ್ದಿ ಸುಳ್ಳು ಅಂತ ಗೊತ್ತಾದ ಮೇಲೆ ತನಿಖೆ ನಡೆಸಿದಾಗ ವಿದ್ಯಾರ್ಥಿ ಸಿಕ್ಕಿಬಿದ್ದಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸುಳ್ಳು ಕರೆಯಿಂದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಭಯಪಟ್ಟಿದ್ದರು. ಅಲ್ಲದೆ ಈ ಸುದ್ದಿ ಹಿಂದೆ ಭಯೋತ್ಪಾದಕರ ಕೈವಾಡವಿರಬಹುದಾ ಅಂತ ಶಂಕಿಸಿದ್ದರು. ಆದ್ರೆ ತನಿಖೆ ಬಳಿಕ ವಿದ್ಯಾರ್ಥಿಯ ಹುಚ್ಚಾಟ ಬೆಳಕಿಗೆ ಬಂದಿದೆ.

    ಸದ್ಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಯ ಮೇಲಿನ ಆರೋಪ ಸಾಬೀತಾದರೆ ನ್ಯಾಯಾಲಯವು ಸುಮಾರು 5 ವರ್ಷಗಳ ಕಾಲ ಜೈಲು ಶಿಕ್ಷೆ, 85 ಸಾವಿರ ಡಾಲರ್(ಅಂದಾಜು 60 ಲಕ್ಷ ರೂ.) ದಂಡ ವಿಧಿಸುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ಯಾರಿಸ್ ನಲ್ಲಿ ಅಮೂಲ್ಯ ಜಗದೀಶ್ ಸುತ್ತಾಟ!

    ಪ್ಯಾರಿಸ್ ನಲ್ಲಿ ಅಮೂಲ್ಯ ಜಗದೀಶ್ ಸುತ್ತಾಟ!

    ಬೆಂಗಳೂರು: ಸ್ಯಾಂಡಲ್ ವುಡ್ ನ ನಟಿ ಅಮೂಲ್ಯ ತನ್ನ ಪತಿ ಜೊತೆ ಪ್ಯಾರಿಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

    ಅಮೂಲ್ಯ ಅವರು ತನ್ನ ಪತಿ ಜಗದೀಶ್ ಮತ್ತು ಸ್ನೇಹಿತರ ಜೊತೆ ಪ್ಯಾರಿಸ್ ಗೆ ಪ್ರವಾಸಕ್ಕೆ ತೆರಳಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ವೇಳೆ ಮಾವನ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿ ಬ್ಯುಸಿಯಾಗಿದ್ದ ಅಮೂಲ್ಯ ಅವರು ಇದೀಗ ರಿಲ್ಯಾಕ್ಸ್ ಗಾಗಿ ಪ್ಯಾರಿಸ್ ನಲ್ಲಿ ಸುತ್ತಾಡುತ್ತಿದ್ದಾರೆ.

    ಅಮೂಲ್ಯ ಪ್ಯಾರಿಸ್ ನಲ್ಲಿ ಪತಿ ಮತ್ತು ಸ್ನೇಹಿತರ ಜೊತೆ ಭೇಟಿ ನೀಡಿದ ಸ್ಥಳಗಳ ಫೋಟೋಗಳನ್ನು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ಅಮೂಲ್ಯ ಪ್ಯಾರೀಸ್ ನ ಐಫೆಲ್ ಟವರ್ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಐಫೆಲ್ ಟವರ್ ಗೆ ಕಿಸ್ ಕೊಡುವ ರೀತಿಯಲ್ಲಿಯೇ ಫೋಟೋ ತೆಗೆಸಿಕೊಂಡಿದ್ದಾರೆ. ಪತಿ ಜಗದೀಶ್ ಮತ್ತು ಸ್ನೇಹಿತರ ಜೊತೆ ಕಳೆದ ಕೆಲವು ಕ್ಷಣಗಳನ್ನು ಫೋಟೋಗಳಲ್ಲಿ ಸೆರೆ ಹಿಡಿದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

    ಜಗದೀಶ್ ಅವರು ಕೂಡ ಐಫೆಲ್ ಟವರ್ ಬಳಿ ಫೆರಾರಿ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದಾರೆ. ಆ ವಿಡಿಯೋವನ್ನು ಇನ್ಸ್ ಸ್ಟಾಗ್ರಾಂನಲ್ಲಿ ಹಾಕಿ, ಇದು ಒಳ್ಳೆಯ ಅನುಭವ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದ ನಟ-ನಟಿಯರು ವಿದೇಶ ಪ್ರಯಾಣ ಹೋಗುತ್ತಿದ್ದು, ನಟಿ ಹರ್ಷಿಕಾ ಪೂಣಚ್ಚ ಕೂಡ ಆಮ್ ಸ್ಟರ್  ಡ್ಯಾಮಿಗೆ ಹೋಗಿ ಸುತ್ತಾಟ ಮಾಡುತ್ತಿದ್ದಾರೆ.

    https://www.instagram.com/p/Bl6IDj1Bqdy/?utm_source=ig_embed&utm_campaign=embed_loading_state_control

    https://www.instagram.com/p/Bl68-aYAQ0E/?utm_source=ig_embed&utm_campaign=embed_loading_state_control

  • ವಿಶ್ವದ ಮೊದಲ 3ಡಿ ಕಲರ್ ಎಕ್ಸ್ ರೇ ಪ್ರಯೋಗ ಯಶಸ್ವಿ: ಏನಿದರ ವಿಶೇಷತೆ?

    ವಿಶ್ವದ ಮೊದಲ 3ಡಿ ಕಲರ್ ಎಕ್ಸ್ ರೇ ಪ್ರಯೋಗ ಯಶಸ್ವಿ: ಏನಿದರ ವಿಶೇಷತೆ?

    ಪ್ಯಾರಿಸ್: ಇಲ್ಲಿಯವರೆಗೆ ಕಪ್ಪು ಬಿಳುಪಿನಲ್ಲಿ ಹೊರ ಬರುತ್ತಿದ್ದ ಎಕ್ಸ್ ರೇ ಚಿತ್ರಗಳು ಇನ್ನು ಮುಂದೆ ಕಲರ್ ನಲ್ಲಿ ಬರಲಿದೆ. ವಿಶ್ವದ ಮೊದಲ 3ಡಿ ಕಲರ್ ಎಕ್ಸ್ ರೇ ಯಂತ್ರದ ಪ್ರಯೋಗವನ್ನು ನ್ಯೂಜಿಲೆಂಡ್ ವಿಜ್ಞಾನಿಗಳು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.

    ಯುರೋಪ್ ಪರಮಾಣು ಸಂಶೋಧನಾ ಕೇಂದ್ರ(ಸಿಇಆರ್ ಎನ್) ಭೌತಸಾಸ್ತ್ರದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ ಯಂತ್ರದಲ್ಲಿ ಮಾನವನ ದೇಹದ ಕಲರ್ ಎಕ್ಸ್ ರೇ ಮಾಡಿಸಲಾಗಿದ್ದು ಯಶಸ್ವಿಯಾಗಿ ಮೂಡಿ ಬಂದಿದೆ.

    ಹೊಸ ಕಲರ್ ಎಕ್ಸ್ ರೇ ವೈದ್ಯಕೀಯ ಸೇವೆ ಉತ್ತಮ ಪಡಿಸಲು ನೆರವಾಗಲಿದೆ. 3ಡಿ ಕಲರ್ ಎಕ್ಸ್ ರೇ ಲಭ್ಯವಾಗುವುದರಿಂದ ಸ್ಪಷ್ಟ ಹಾಗೂ ಹೆಚ್ಚು ನಿಖರ ಚಿತ್ರಗಳು ಲಭ್ಯವಾಗಲಿದ್ದು, ವೈದ್ಯರು ರೋಗಿಯ ಅನಾರೋಗ್ಯಕ್ಕೆ ನಿಖರ ಕಾರಣ ತಿಳಿಯಲು ಸಹಾಯಕವಾಗಲಿದೆ. ಅಲ್ಲದೇ ಚಿತ್ರದಲ್ಲಿ ಮಾಂಸಖಂಡ, ಮೂಳೆ ಹಾಗೂ ಸಣ್ಣ ಗಾತ್ರದ ಮೂಳೆಯ ನಡುವಿನ ವ್ಯತ್ಯಾಸದ ಬಗ್ಗೆ ಖಚಿತ ಮಾಹಿತಿ ನೀಡುತ್ತದೆ ಎಂದು ಸಿಇಆರ್ ಎನ್ ವಿಜ್ಞಾನಿಗಳು ತಿಳಿಸಿದ್ದಾರೆ.

    ವಿಶ್ವ ಸೃಷ್ಟಿಗೆ ಕಾರಣವಾದ ಈ ಫೋಟಾನ್(ದೇವಕಣ) ಹೆಚ್ಚಿನ ಅಧ್ಯಯನಕ್ಕೆ 2012 ರ ಜುಲೈನಲ್ಲಿ ಸಿಇಆರ್‍ಎನ್ ಸ್ವಿಟ್ಜರ್‍ಲೆಂಡ್ – ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, 100 ಮೀಟರ್ ಆಳದಲ್ಲಿ, 27 ಕಿಮೀ ಉದ್ದದ ಸುರಂಗದಲ್ಲಿ ಕೊಳವೆ ಹಾಕಿ ಮಹಾಸ್ಪೋಟದ ಸಮಯದಲ್ಲಿ ಆದ ಕ್ರಿಯೆಯ ಅಧ್ಯಯನ ಮಾಡಿದ್ದರು. ಈ ಫೋಟಾನ್ ಗಳನ್ನು ಅಧ್ಯಯನಕ್ಕಾಗಿ ಸಿಇಆರ್‍ಎನ್ ಪಿಕ್ಸೆಲ್ ಪತ್ತೆ ಮಾಡಲು ಮೆಡಿಪಿಕ್ಸ್ ಅಭಿವೃದ್ಧಿ ಪಡಿಸಿತ್ತು. ಕ್ಯಾಮೆರಾದಂತೆ ಕೆಲಸ ಮಾಡುವ ಈ ಮೆಡಿಪಿಕ್ಸ್ ಶಟರ್ ತೆರೆದಾಗ ದೇಹದ ಹೈ ರೆಸಲ್ಯೂಶನ್ ಚಿತ್ರವನ್ನು ಸೆರೆಯಾಗುತ್ತದೆ.

    ಈ ತಂತ್ರಜ್ಞಾನದಲ್ಲಿ ಬಳಕೆ ಮಾಡಲಾಗಿರುವ ಸಣ್ಣ ಹಾಗೂ ಹೆಚ್ಚು ರೆಸಲ್ಯೂಶನ್ ಇರುವ ಇಮೇಜಿಂಗ್ ಉಪಕರಣವನ್ನು ಬಳಕೆ ಮಾಡಲಾಗಿದ್ದು, ಈ ಮೂಲಕ ಪಡೆಯುವ ಚಿತ್ರಗಳನ್ನು ಇತರೇ ಯಾವುದೇ ಟೂಲ್ ಬಳಸಿ ಪಡೆಯಲು ಸಾಧ್ಯವಿಲ್ಲ ಎಂದು ಕ್ಯಾಂಟರ್ಬರಿ ವಿಶ್ವ ವಿದ್ಯಾಲಯದ ಫಿಲ್ ಬಟ್ಲರ್ ಹೇಳಿದ್ದಾರೆ.

    ಸದ್ಯ ಒಟಾಗೋ ಹಾಗೂ ಕ್ಯಾಂಟರ್ಬರಿ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸುವ ಈ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನ್ಯೂಜಿಲೆಂಡ್ ಮಾರ್ಸ್ ಬಯೋ ಸಂಸ್ಥೆಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.