Tag: ಪ್ಯಾರಾ ಒಲಿಂಪಿಕ್

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ಯಾರಾ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಗಿರೀಶ್!

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ಯಾರಾ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಗಿರೀಶ್!

    ಹಾಸನ: 2012ರಲ್ಲಿ ಲಂಡನ್ ನಲ್ಲಿ ನಡೆದ ಪ್ಯಾರಾ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ಗಿರೀಶ್ ಅವರ ವಿವಾಹ ಇಂದು ಹಾಸನದಲ್ಲಿ ಜರುಗಿತು.

    ಹಾಸನ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ನಡೆದಿದ್ದು, ಬಂಧು-ಮಿತ್ರರು, ಹಿತೈಷಿಗಳ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಗಿರೀಶ್ ತಾಳಿ ಕಟ್ಟಿದರು. ಎಂಎಸ್‍ಸಿ ಪದವಿ ಓದಿದ ಮೈಸೂರು ಮೂಲದ ಸಹನಾರನ್ನು ಕೈ ಹಿಡಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಪೋಷಕರು ಈ ಮದುವೆಯನ್ನು ನಿಶ್ಚಯಿಸಿದ್ದರು. ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಎಂದು ಗಿರೀಶ್ ಹೇಳಿದರು. ಇನ್ನು ವಧು ಸಹನಾ ಕೂಡ ತಮ್ಮ ಮದುವೆ ಕುರಿತು ಸಂತಸ ವ್ಯಕ್ತಪಡಿಸಿದರು.

    ಗಿರೀಶ್ 2012ರಲ್ಲಿ ಲಂಡನ್ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಹೈಜಂಪ್ ನಲ್ಲಿ ಕೂದಲೆಳೆ ಅಂತರದಲ್ಲಿ ಚಿನ್ನದ ಪದಕ ಬದಲಾಗಿ ಬೆಳ್ಳಿ ಪದಕ ಪಡೆದು ದೇಶದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಭಾರತ ಸರ್ಕಾರ ಇವರ ಸಾಧನೆಯನ್ನು ಪರಿಗಣಿಸಿ ಪದ್ಮಭೂಷಣ ಪ್ರಶಸ್ತಿ ಕೂಡ ನೀಡಿ ಗೌರವಿಸಿತ್ತು.

  • ಪ್ಯಾರಾ ಒಲಿಂಪಿಕ್ ಪದಕ ವಿಜೇತ ಗಿರೀಶ್ ಗೆ ನಿಶ್ಚಿತಾರ್ಥ

    ಪ್ಯಾರಾ ಒಲಿಂಪಿಕ್ ಪದಕ ವಿಜೇತ ಗಿರೀಶ್ ಗೆ ನಿಶ್ಚಿತಾರ್ಥ

    ಹಾಸನ: ಪ್ಯಾರಾ ಒಲಿಂಪಿಕ್ ಅಥ್ಲೀಟ್ ಎಚ್ ಎನ್ ಗಿರೀಶ್ ಅವರಿಗೆ ಇಂದು ನಿಶ್ಚಿತಾರ್ಥ ಸಂಭ್ರಮ.

    ಹೌದು. ಹಾಸನದ ತನ್ವಿ ತ್ರಿಶಾ ಕಲ್ಯಾಣ ಮಂಟಪದಲ್ಲಿ ಗಿರೀಶ್ ಇಂದು ಮೈಸೂರಿನ ಸಹನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಗಿರೀಶ್ ಅವರು 2012ರಲ್ಲಿ ಲಂಡನ್ ನಲ್ಲಿ ನಡೆದ ಎತ್ತರ ಜಿಗಿತದಲ್ಲಿ 1.74 ಮೀ ಎತ್ತರಕ್ಕೆ ಜಿಗಿದು ರಜತ ಪದಕ ಗೆದ್ದಿದ್ದರು. ಭಾರತದಲ್ಲೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಪದಕ ಪಡೆದ ಗಿರೀಶ್ ಹೊಸನಗರ ನಾಗರಾಜೇ ಗೌಡ ಅವರಿಗೆ ಅಭಿನಂದನೆಗಳು ಅಂತ ಅಂದು ಗುಜುರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಟ್ವೀಟ್ ಮಾಡಿ ಶುಭಾಶಯ ಹೇಳಿದ್ದರು.

    ಗಿರೀಶ್ ಅವರಿಗೆ 2012ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು. 2014ರಲ್ಲಿ ಅರ್ಜುನ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು.