Tag: ಪ್ಯಾಕೇಜ್

  • ಸ್ಪಷ್ಟತೆ ಇಲ್ಲದ 20 ಲಕ್ಷ ಕೋಟಿ ಪ್ಯಾಕೇಜ್, ಇದೊಂದು ಗಿಮಿಕ್: ಪ್ರಿಯಾಂಕ್ ಖರ್ಗೆ

    ಸ್ಪಷ್ಟತೆ ಇಲ್ಲದ 20 ಲಕ್ಷ ಕೋಟಿ ಪ್ಯಾಕೇಜ್, ಇದೊಂದು ಗಿಮಿಕ್: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ, ಇದೊಂದು ಗಿಮಿಕ್ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಬಡ ಮಧ್ಯಮ ವರ್ಗದ ಜನರು ತೀವ್ರ ಸಂಕಟಕ್ಕೀಡಾಗಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ದೇಶದ ಬೆನ್ನೆಲುಬಾದ ರೈತಾಪಿ ವರ್ಗ ಲಾಕ್‍ಡೌನ್ ನಿಂದಾಗಿ ತೀವ್ರ ಹಾನಿ ಅನುಭವಿಸಿದೆ. ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ನಷ್ಟ ಅನುಭವಿಸಿದ್ದಾರೆ. ಇವರಿಗೆ ಪ್ರಧಾನಿ ಮೋದಿ ನಿರಾಸೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಜನ ಪ್ರಧಾನಿಯವರ ಭಾಷಣದಲ್ಲಿ ಅವರ ಬದುಕಿಗೆ ಸ್ಥಿರ ಭರವಸೆಗಳನ್ನು ನೀಡುತ್ತಾರೆಂದು ನಿರೀಕ್ಷಿಸಿದ್ದರು. ಆದರೆ ಪ್ರಧಾನಿಯವರ ಅರ್ಧ ತಾಸಿನ ಭಾಷಣದಲ್ಲಿ ಹೆಚ್ಚಿನ ಅವಧಿಯನ್ನು ಪ್ರಮುಖವಲ್ಲದ ವಿಷಯಕ್ಕೆ ಮೀಸಲಿಟ್ಟು, ಕೇವಲ ಎರಡು ನಿಮಿಷದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದ ಈ ಪ್ಯಾಕೇಜ್ ಘೋಷಿಸಿದರು. ಇದು ದೇಶದ ಬಹುಪಾಲು ಜನರಿಗೆ ನಿರಾಸೆ ಉಂಟು ಮಾಡಿದೆ. ಹೀಗಾಗಿ ಇದೂ ಕೂಡ ಗಿಮಿಕ್ ಎಂದು ದೂರಿದರು.

    20 ಲಕ್ಷ ಕೋಟಿ ರೂ. ಮೊತ್ತದಲ್ಲಿ ಈ ಹಿಂದೆ ಘೋಷಿಸಲಾದ ಕೇಂದ್ರ ಸರಕಾರದ ಪ್ರಾಯೋಜಿತ ನಿಧಿಯೂ ಸೇರಿದೆಯೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಪ್ರಧಾನಿ ಯಾವುದೇ ಸ್ಪಷ್ಟತೆ ನೀಡಲಿಲ್ಲ. ಹಣಕಾಸು ಸಚಿವರು ವಿವರವಾಗಿ ಹೇಳಲಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಸ್ವತಃ ಪ್ರಧಾನಿಗಳೇ ಜನರಿಗೆ ತಿಳಿಸಬಹುದಿತ್ತಲ್ಲ, ಅವರಿಗಿಂತ ದೊಡ್ಡವರು ಯಾರಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

  • ಆರ್ಥಿಕ ಸಂಕಷ್ಟದ ನಡುವೆ ಅತಿದೊಡ್ಡ ಪ್ಯಾಕೇಜ್- ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕರಿಗೆ 5 ಸಾವಿರ ನೆರವು

    ಆರ್ಥಿಕ ಸಂಕಷ್ಟದ ನಡುವೆ ಅತಿದೊಡ್ಡ ಪ್ಯಾಕೇಜ್- ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕರಿಗೆ 5 ಸಾವಿರ ನೆರವು

    – ಹೂ ಬೆಳೆಗಾರರಿಗೆ 25 ಸಾವಿರ ಪರಿಹಾರ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಆಗಿ 47 ದಿನಗಳು ಕಳೆದಿವೆ. ಲಾಕ್‍ಡೌನ್ ಅವಧಿಯಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೆ ತುತ್ತಾದವರು ಆಯಾ ದಿನದ ಕೆಲಸವನ್ನೇ ನಂಬಿ ಜೀವನ ನಡೆಸುತ್ತಾ ಬಂದಿವರೇ ಆಗಿದ್ದಾರೆ. ವೃತ್ತಿನಿರತ ಕ್ಷೌರಿಕರು, ಅಗಸರು, ರೈತರು, ಆಟೋ ಟ್ಯಾಕ್ಸಿ ಚಾಲಕರು, ಹೂ, ಹಣ್ಣು ಬೆಳೆಗಾರರು ಸಾಕಷ್ಟು ಕಷ್ಟ ನಷ್ಟಗಳನ್ನು ಉಂಡಿದ್ದರು. ಉದ್ಯಮ ವಲಯವೂ ಸ್ತಬ್ಧ ಆಗಿ ಉದ್ಯಮಿಗಳು ಕಂಗಾಲಾಗಿದ್ದರು. ಇದೀಗ ಈ ವರ್ಗದವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿಎಂ ಯಡಿಯೂರಪ್ಪ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರೂ ಕೆಲಸ ಇಲ್ಲದೇ ಸಂಕಷ್ಟದಲ್ಲಿರುವ ಶ್ರಮಿಕ ವರ್ಗಕ್ಕೆ ನೆರವಾಗುತ್ತಿದ್ದೇವೆ ಎಂದು ತಿಳಿಸಿದರು. ಸರ್ಕಾರದ ಈ ಪ್ಯಾಕೇಜ್ ಅನ್ನು ಕಾಂಗ್ರೆಸ್ ಸ್ವಾಗತಿಸಿದೆ. ಆದರೆ ಇದು ಸಾಲ್ದು, ಕನಿಷ್ಠ 10 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿ ಶ್ರಮಿಕರಿಗೆ ನೆರವಾಗಬೇಕು. ಇದಕ್ಕಾಗಿ ವಿಶೇಷ ಅಧಿವೇಶನ ಕರೆದು ಅಲ್ಲಿಯೇ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

    ಶ್ರಮಿಕ ವರ್ಗಕ್ಕೆ ನೆರವು:
    ಅಗಸರು, ಕ್ಷೌರಿಕರಿಗೆ ತಲಾ 5 ಸಾವಿರ ರೂ. ನೆರವು ನೀಡಲಾಗುತ್ತದೆ. ಬಟ್ಟೆ ಒಗೆಯುವ, ಇಸ್ತ್ರಿ ಕೆಲಸದಲ್ಲಿ ತೊಡಗಿದ್ದ ಸುಮಾರು 60 ಸಾವಿರ ಅಗಸರು ಹಾಗೂ ಕ್ಷೌರಿಕ ವೃತ್ತಿ ಮಾಡುತ್ತಿರುವ 2.30 ಲಕ್ಷ ಮಂದಿಗೆ ತಲಾ 5 ಸಾವಿರ ರೂ. ಸಿಗಲಿದೆ.

    ಆಟೋ, ಟ್ಯಾಕ್ಸಿ ಚಾಲಕರು:
    ರಾಜ್ಯದಲ್ಲಿರುವ ಸರಿಸುಮಾರು 7.75 ಲಕ್ಷ ಮಂದಿ ಆಟೋ ಹಾಗೂ ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗಿದೇ ಒದ್ದಾಡುತ್ತಿದ್ದಾರೆ. ಅಂತಹ 7.75 ಲಕ್ಷ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ ಸರ್ಕಾರವು 5,000 ರೂ. ನೆರವು ನೀಡಲಿದೆ.

    ನೋಂದಾಯಿತ ಕಟ್ಟಡ ಕಾರ್ಮಿಕರು:
    ರಾಜ್ಯದಲ್ಲಿರುವ 15 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮೊದಲು 2 ಸಾವಿರ ರೂ. ನೆರವು ನೀಡಲಾಗುತ್ತಿತ್ತು. ಇದೀಗ ಇದಕ್ಕೆ 3 ಸಾವಿರ ರೂಪಾಯಿಗಳನ್ನು ಸೇರಿಸಿ ಒಟ್ಟು ಐದು ಸಾವಿರ ರೂ. ನೆರವು ನೀಡಲು ಸರ್ಕಾರ ತೀರ್ಮಾನಿಸಿದೆ. ಇದುವರೆಗೆ 11 ಲಕ್ಷ ಮಂದಿಗೆ 2 ಸಾವಿರ ರೂ. ನೆರವು ನೀಡಲಾಗಿತ್ತು. ಉಳಿದ 4 ಲಕ್ಷ ಕಾರ್ಮಿಕರ ಅಕೌಂಟ್ ಮಾಹಿತಿ ಪಡೆದು, ಎಲ್ಲರಿಗೂ ಐದು ಸಾವಿರ ರೂ. ನೆರವು ನೀಡಲಾಗುತ್ತದೆ.

    ಹೂ ಬೆಳೆಗಾರರು:
    ಲಾಕ್‍ಡೌನ್‍ನಿಂದಾಗಿ ದೇವಾಲಯಗಳು ಮುಚ್ಚಿವೆ. ಹಬ್ಬ ಮದುವೆ, ಸಭೆ-ಸಮಾರಂಭ ಸೇರಿ ಯಾವುದೇ ಚಟುವಟಿಕೆ ನಡೆದಿಲ್ಲ. ಹೀಗಾಗಿ ಹೂವುಗಳಿಗೆ ಬೇಡಿಕೆ ಇಲ್ಲದೇ ಹೂವು ಬೆಳೆಗಾರರು ತಾವು ಬೆಳೆದ ಹೂವುಗಳನ್ನು ನಾಶ ಮಾಡುವ ಸ್ಥಿತಿ ಏರ್ಪಟ್ಟಿದೆ. ರಾಜ್ಯದಲ್ಲಿ 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವು ಮಾರಾಟವಾಗದೆ ರೈತರಿಗೆ ನಷ್ಟವಾಗಿದೆ. ಹೀಗಾಗಿ ಹೂ ಬೆಳೆಗಾರರಿಗೆ ಒಂದು ಹೆಕ್ಟೇರ್‌ಗೆ 25 ಸಾವಿರ ರೂ.ನಂತೆ ಪರಿಹಾರ ಹಣ ನೀಡಲಿದೆ. ರೈತರು ಎಷ್ಟೇ ಹೆಕ್ಟೇರ್ ಗಳಲ್ಲಿ ಹೂ ಬೆಳೆದಿದ್ದರೂ ಸರ್ಕಾರ ಪರಿಹಾರ ನೀಡುವುದು ಒಂದು ಹೆಕ್ಟೇರ್‌ಗೆ ಮಾತ್ರ.

    ನೇಕಾರರ ಹಣ ವಾಪಸ್!
    ಲಾಕ್‍ಡೌನ್‍ನಿಂದಾಗಿ ನೇಕಾರಿಗೆ ನಿಂತು ಹೋಗಿ, ಇದನ್ನೇ ನಂಬಿಕೊಂಡಿದ್ದರವರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇವರ ನೆರವಿಗೂ ಸರ್ಕಾರ ಧಾವಿಸಿದೆ. ಒಟ್ಟು 109 ಕೋಟಿ ರೂಪಾಯಿಗಳನ್ನು ನೇಕಾರರ ಸಾಲ ಮನ್ನಾಗೆ ಸರ್ಕಾರ ಮೀಸಲಿಟ್ಟಿದೆ. ಈ ಮೊದಲು 29 ಕೋಟಿ ರೂ.ಗಳನ್ನು ಮನ್ನಾ ಮಾಡಲಾಗಿತ್ತು. ಶೀಘ್ರವೇ ಉಳಿದ 80 ಕೋಟಿ ರೂ. ಹಣವನ್ನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. 1 ಲಕ್ಷದ ಒಳಗಿನ ಸಾಲವನ್ನು ಕಟ್ಟಿದ ನೇಕಾರರರಿಗೆ, ಕಟ್ಟಿದ ಹಣ ವಾಪಾಸ್ ಕೊಡಲು ಸರ್ಕಾರ ಮುಂದಾಗಿದೆ. ಅಲ್ಲದೇ ನೇಕಾರ್ ಸಮ್ಮಾನ್ ಯೋಜನೆಯಡಿ ರಾಜ್ಯದ 54 ಸಾವಿರ ಕೈ ಮಗ್ಗ ನೇಕಾರರಿಗೆ ವರ್ಷಕ್ಕೆ 2 ಸಾವಿರ ರೂ. ನೆರವು ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.

    ಕಂದಾಯ-ವಿದ್ಯುತ್‍ಬಿಲ್ ಪಾವತಿ:
    ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಮನೆ, ಸೈಟ್ ಸೇರಿ ಇತರೆ ಕಂದಾಯಗಳನ್ನು ಪಾವತಿ ಮಾಡಲು ಸಾರ್ವಜನಿಕರಿಗೆ ಸರ್ಕಾರ ಮೂರು ತಿಂಗಳ ಅವಕಾಶ ನೀಡಿದೆ. ಈ ಎರಡು ತಿಂಗಳ ಗೃಹ, ಅಂಗಡಿಗಳ ವಿದ್ಯುತ್ ಬಿಲ್ ಕಟ್ಟುವುದು ತಡವಾಗಿದ್ದರೆ ಚಿಂತೆ ಬಿಡಿ. ತಡವಾಗಿ ಬಿಲ್ ಪಾವತಿ ಮಾಡುವವರಿಗೆ ಯಾವುದೇ ದಂಡ ವಿಧಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಷ್ಟೇ ಅಲ್ಲದೆ ನಿಗದಿತ ಗಡುವಿನಲ್ಲಿ ಬಿಲ್ ಕಟ್ಟಿದವರಿಗೆ ಶೇಕಡಾ 1ರಷ್ಟು ರಿಯಾಯಿತಿ ಕೂಡ ಸರ್ಕಾರ ನೀಡಲಿದೆ.

    ಕರೆಂಟ್ ಬಿಲ್ ಮನ್ನಾ:
    ಕೊರೊನಾ ಲಾಕ್‍ಡೌನ್ ಕಾರಣದಿಂದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಸ್ತಬ್ಧ ಆಗಿದ್ದವು. ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ನಷ್ಟ ಸಹ ಅನುಭವಿಸಿದ್ದಾರೆ. ಹೀಗಾಗಿ ಇವರ ನೆರವಿಗೂ ಸರ್ಕಾರ ಮುಂದಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳ ಕರೆಂಟ್ ಬಿಲ್‍ನ್ನು ಮನ್ನಾ ಮಾಡಲು ಬಿಎಸ್‍ವೈ ಸರ್ಕಾರ ನಿರ್ಧರಿಸಿದೆ. ಜೊತೆಗೆ ಬೃಹತ್ ಕೈಗಾರಿಕೆಗಳ 2 ತಿಂಗಳ ವಿದ್ಯುತ್ ಬಿಲ್ ಪಾವತಿ ವಿಳಂಬ ಆಗಿದ್ದಲ್ಲಿ ಯಾವುದೇ ದಂಡ ವಿಧಿಸದಿರಲು, ಬಡ್ಡಿ ರಹಿತವಾಗಿ ಮುಂದೂಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

    ತರಕಾರಿ, ಹಣ್ಣು ಬೆಳೆಗಾರರಿಗೆ ಶೀಘ್ರವೇ ಪರಿಹಾರ:
    ಈ ವರ್ಷ ರಾಜ್ಯದಲ್ಲಿ ತರಕಾರಿ ಮತ್ತು ಹಣ್ಣು ಇಳುವರಿ ಉತ್ರಮವಾಗಿದೆ. ಆದರೆ ಲಾಕ್‍ಡೌನ್‍ನಿಂದ ಹಣ್ಣು, ತರಕಾರಿಗಳಿಗೆ ಸರಿಯಾದ ಬೆಲೆ ಸಿಕ್ಕಿಲ್ಲ. ಹೀಗಾಗಿ ಇವರ ನೆರವಿಗೂ ಧಾವಿಸಲು ಸರ್ಕಾರ ಮುಂದಾಗಿದೆ. ನಷ್ಟದ ಅಧ್ಯಯನ ನಡೆಯುತ್ತಿದ್ದು, ಇದು ಮುಗಿದ ತಕ್ಷಣ ನೆರವಿನ ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

  • ಶ್ರೀರಾಮನ ಚರಿತ್ರೆ ತಿಳಿಯಲು ಹಳಿಯಲ್ಲಿ ಓಡಲಿದೆ ಶ್ರೀರಾಮಾಯಣ ಎಕ್ಸ್‌ಪ್ರೆಸ್‌: ಈ ರೈಲಿನ ವಿಶೇಷತೆ ಏನು? ಪ್ಯಾಕೇಜ್ ಎಷ್ಟು?

    ಶ್ರೀರಾಮನ ಚರಿತ್ರೆ ತಿಳಿಯಲು ಹಳಿಯಲ್ಲಿ ಓಡಲಿದೆ ಶ್ರೀರಾಮಾಯಣ ಎಕ್ಸ್‌ಪ್ರೆಸ್‌: ಈ ರೈಲಿನ ವಿಶೇಷತೆ ಏನು? ಪ್ಯಾಕೇಜ್ ಎಷ್ಟು?

    ನವದೆಹಲಿ: ರಾಮನಿಂದಾಗಿ ಪ್ರಸಿದ್ಧಿ ಹೊಂದಿರುವ ಪ್ರಮುಖ ಸ್ಥಳಗಳ ಪ್ರವಾಸಕ್ಕಾಗಿಯೇ ಭಾರತೀಯ ರೈಲ್ವೇ ಇಲಾಖೆಯ ಪ್ರವಾಸೋದ್ಯಮ ನಿಗಮ ವಿಶೇಷ `ಶ್ರೀರಾಮಾಯಣ ಎಕ್ಸ್‌ಪ್ರೆಸ್‌’ ರೈಲು ಓಡಿಸಲು ಮುಂದಾಗಿದೆ.

    ಶ್ರೀರಾಮನ ಬಗ್ಗೆ ತಿಳಿಯುವುದಕ್ಕಾಗಿ ಭಾರತೀಯ ರೈಲ್ವೇ ಇಲಾಖೆ ತನ್ನ ಪ್ರವಾಸೋದ್ಯಮ ಯೋಜನೆಯಡಿ ಈ ಪ್ರವಾಸವನ್ನು ಆರಂಭಿಸಲಿದೆ. ಈ ರೈಲು ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದ್ದು, 800 ಆಸನಗಳನ್ನು ಹೊಂದಿದೆ. ಈ ರೈಲಿನಲ್ಲಿ ಶ್ರೀರಾಮನ ಬದುಕಿನ ಅಧ್ಯಾಯಗಳೊಂದಿಗೆ ತಳುಕು ಹಾಕಿಕೊಂಡಿರುವ ಪ್ರಮುಖ ಸ್ಥಳಗಳ ಭೇಟಿಗೆ ಅವಕಾಶ ಕಲ್ಪಿಸಿದೆ. 16 ದಿನಗಳಲ್ಲಿ ದೇಶದ ಪ್ರಮುಖ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುತ್ತದೆ. ಈ ವರ್ಷದ ನವೆಂಬರ್ ನಲ್ಲಿ ದೆಹಲಿಯ ಸಫರ್ ಜಂಗ್ ರೈಲ್ವೇ ನಿಲ್ದಾಣದಿಂದ ಮೊದಲ ಪ್ರಯಾಣ ಆರಂಭವಾಗಲಿದೆ. ಇದನ್ನು  ಓದಿ: ಸೀತೆಯ ಜನ್ಮ ಸ್ಥಳದಿಂದ ಅಯೋಧ್ಯೆಗೆ ಬಸ್: ನೇಪಾಳದಲ್ಲಿ ಮೋದಿ ಚಾಲನೆ

    ಈ ಪ್ರವಾಸದಲ್ಲಿ ಊಟ, ವಸತಿ, ಯಾತ್ರಾ ಸ್ಥಳಗಳ ಪ್ರಯಾಣ, ಸುತ್ತಲಿನ ಪ್ರವಾಸಿ ತಾಣಗಳ ಭೇಟಿಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಸಿಗರಿಗೆ ಅಗತ್ಯ ನೆರವು ಹಾಗೂ ವ್ಯವಸ್ಥೆ ಗಮನಿಸಲು ಟೂರ್ ಮ್ಯಾನೇಜರ್ ಗಳನ್ನು ಸಹ ಇದಕ್ಕಾಗಿ ನಿಯೋಜಿಸಲಾಗಿದೆ.

    ಎಲ್ಲಿಂದ, ಎಲ್ಲಿಗೆ ಸಾಗುತ್ತದೆ?
    ವಿಶೇಷ ರೈಲು ದೆಹಲಿಯಿಂದ ಹೊರಟು ಮೊದಲಿಗೆ ಅಯೋಧ್ಯೆಯಲ್ಲಿ ತಲುಪುತ್ತದೆ. ಅಲ್ಲಿನ ಹುಮಾನ್ ಗುಡಿ, ರಾಮಕೋಟ್ ಹಾಗೂ ಕನಕ್ ದೇವಾಲಯ ಹಾಗೂ ರಾಮಾಯಣದಲ್ಲಿ ಪ್ರಸ್ತಾಪವಾಗುವ ಇತರ ಪ್ರಮುಖ ಸ್ಥಳಗಳ ಸುತ್ತಾಟದಲ್ಲಿ ನಂತರ ನಂದಿಗ್ರಾಮ, ಸೀತಾಮಡಿ, ಜನಕಪುರ್, ವಾರಾಣಾಸಿ, ಪ್ರಯಾಗ್, ಶೃಂಗವೇರ್ ಪುರ , ಚಿತ್ರಕೂಟ, ನಾಸಿಕ್, ಹಂಪಿ ಹಾಗೂ ರಾಮೇಶ್ವರಕ್ಕೆ ಬಂದು ತಲುಪಲಿದೆ.

    ಶ್ರೀಲಂಕ್ಕೂ ಹೋಗಬಹುದು:
    ಭಾರತ ಅಲ್ಲದೇ ಶ್ರೀಲಂಕಾಕ್ಕೂ ಪ್ರವಾಸದ ಮೂಲಕವೇ ಹೋಗಬಹುದು. ರಾಮೇಶ್ವರದಿಂದ ಪ್ರಯಾಣ ಮುಂದುವರಿಸುವ ಪ್ರಯಾಣಿಕರು ವಿಮಾನದ ಮೂಲಕ ಶ್ರೀಲಂಕಾಕ್ಕೆ ತೆರಳಬಹುದು. ಶ್ರೀಲಂಕಾದಲ್ಲಿ ಬರುವ ಕ್ಯಾಂಡಿ, ಕೊಲಂಬೋ ಹಾಗೂ ನಿಗೊಂಬೊ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ.

    ಶ್ರೀರಾಮಾಯಣ ಎಕ್ಸ್‌ಪ್ರೆಸ್‌ನ ಪ್ಯಾಕೇಜ್ ಎಷ್ಟು?
    ಈ ವಿಶೇಷ ರೈಲಿನಲ್ಲಿ ಪ್ರವಾಸಕ್ಕೆ ಒಬ್ಬ ವ್ಯಕ್ತಿಗೆ ನವದೆಹಲಿಯಿಂದ ರಾಮೇಶ್ವರದವರೆಗೆ 15,120 ರೂ. ನಿಗದಿ ಮಾಡಲಾಗಿದ್ದು, ರಾಮೇಶ್ವರಂದಿಂದ ಶ್ರೀಲಂಕಾಕ್ಕೆ ತೆರಳುವ ಪ್ರವಾಸಿಗರು ಪ್ರತ್ಯೇಕವಾಗಿ 36,970 ಪಾವತಿಮಾಡಬೇಕಾಗುತ್ತದೆ. ಇದರಲ್ಲಿ ವಿಮಾನ ಪ್ರಯಾಣ ಶುಲ್ಕ ಸೇರಿದಂತೆ ಊಟ, ವಸತಿ ಹಾಗೂ ಪ್ರವಾಸಿ ತಾಣಗಳ ಭೇಟಿಯ ಪ್ಯಾಕೇಜನ್ನು ಭಾರತೀಯ ರೈಲ್ವೇ ಇಲಾಖೆಯೇ ಒದಗಿಸಲಿದೆ.

    `ಶ್ರೀರಾಮಾಯಣ ಎಕ್ಸ್‌ಪ್ರೆಸ್‌’ ಒಟ್ಟು 16 ದಿನಗಳಲ್ಲಿ ತನ್ನ ಯಾತ್ರೆಯನ್ನು ಪೊರೈಸಲಿದ್ದು, ಮೊದಲನೇ ಪ್ರಯಾಣವನ್ನು ನವೆಂಬರ್ 14 ರಿಂದ ಪ್ರಾರಂಭಗೊಳಿಸುತ್ತದೆ. ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌ ಪ್ಯಾಕೇಜ್ ಪ್ರಯಾಣವನ್ನು ಭಾರತೀಯ ರೈಲ್ವೆ ಇಲಾಖೆ ತನ್ನ ವೆಬ್‍ಸೈಟ್‍ ನಲ್ಲಿ ಪ್ರಕಟಿಸಿದೆ. ಕೇಂದ್ರ ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ರವರು ನೂತನ ಶ್ರೀ ರಾಮಾಯಣ ಎಕ್ಸ್‍ಪ್ರೆಸ್ ಕುರಿತು ಕಿರು ಮಾಹಿತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

    ಏನಿದು ರಾಮಾಯಣ ಸರ್ಕ್ಯೂಟ್?
    ಧಾರ್ಮಿಕ ಪ್ರವಾಸಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಸಾಧಿಸಲು ವಿಶೇಷ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಇದರಲ್ಲಿ ರಾಮಾಯಣ ಸರ್ಕ್ಯೂಟ್ ಒಂದಾಗಿದ್ದು, ಇದರ ಅಡಿಯಲ್ಲಿ ರಾಮಾಯಣ ಕಥೆಗೆ ಸಂಬಂಧಿಸಿದ 15 ಪ್ರವಾಸಿ ಜಾಗಗಳನ್ನು ಸಂಪರ್ಕಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ.

    ಉತ್ತರಪ್ರದೇಶದ ಅಯೋಧ್ಯೆ, ನಂದಿ ಗ್ರಾಮ್, ಶೃಂಗವೇರ್ ಪುರ ಮತ್ತು ಚಿತ್ರಕೂಟ, ಬಿಹಾರದ ಸೀತಾಮಡಿ, ಬಕ್ಸರ್ ಮತ್ತು ದರ್ಭಂಗಾ, ಮಧ್ಯಪ್ರದೇಶದ ಚಿತ್ರಕೂಟ, ಒಡಿಶಾದ ಮಹೇಂದ್ರ ಗಿರಿ, ಛತ್ತೀಸ್‍ಗಢದ ಜಗದಾಲ್ ಪುರ, ಮಹಾರಾಷ್ಟ್ರದ ನಾಸಿಕ್ ಮತ್ತು ನಾಗ್ಪುರ, ತೆಲಂಗಾಣದ ಭದ್ರಾಚಲಮ್, ಹಾಗೂ ತಮಿಳುನಾಡಿನ ರಾಮೇಶ್ವರಂ, ಕರ್ನಾಟಕದ ಹಂಪಿ ರಾಮಾಯಣ ಸರ್ಕ್ಯೂಟ್ ನಲ್ಲಿದೆ.

    ವಿಶೇಷ ರೈಲಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ: www.irctctourism.com