Tag: ಪ್ಯಾಕೇಜ್

  • ಕೋವಿಡ್ 2ನೇ ಅಲೆ ಪ್ಯಾಕೇಜ್ – 20,713 ಕಲಾವಿದರಿಗೆ ತಲಾ ಮೂರು ಸಾವಿರ ರೂ. ನೆರವು

    ಕೋವಿಡ್ 2ನೇ ಅಲೆ ಪ್ಯಾಕೇಜ್ – 20,713 ಕಲಾವಿದರಿಗೆ ತಲಾ ಮೂರು ಸಾವಿರ ರೂ. ನೆರವು

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ‘ಕೋವಿಡ್-19ರ 2ನೇ ಅಲೆಯಿಂದ ಸಂಕಷ್ಟದಲ್ಲಿರುವ ಕಲಾವಿದರುಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಿಕೆಗೆ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಕೋವಿಡ್ 2ನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ 3,000 ರೂ.ಗಳ ಆರ್ಥಿಕ ನೆರವು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ಡಿ.ಬಿ.ಟಿ. ಮೂಲಕ ಒಟ್ಟು 6.23 ಕೋಟಿ ರೂ. ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

    ಕೋವಿಡ್-19ರ 2ನೇ ಅಲೆಯಿಂದ ಸಂಕಷ್ಟಕ್ಕೀಡಾದ ದುರ್ಬಲ ವರ್ಗದವರಿಗೆ ಒಟ್ಟು 2,050 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಿದ್ದು, ಈಗಾಗಲೇ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿಗಳು ಮೊದಲಾದವರಿಗೆ ಡಿ.ಬಿ.ಟಿ. ಮೂಲಕ ಆರ್ಥಿಕ ನೆರವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗಿದೆ. ಉಳಿದ ವರ್ಗಗಳಿಗೂ ಶೀಘ್ರವೇ ನೆರವು ನೀಡಲು ಕ್ರಮ ವಹಿಸಲಾಗುತ್ತಿದೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಮೊದಲು ಶಾಲೆ ಆರಂಭ ಬೇಡ: ಪ್ರತಾಪ್ ಸಿಂಹ

    ಮೊದಲ ಅಲೆಯ ಸಂದರ್ಭದಲ್ಲಿಯೂ ಕಲಾವಿದರಿಗೆ ನೆರವು ನೀಡಲಾಗಿತ್ತು. ಈ ಬಾರಿಯೂ ಸರ್ಕಾರ ಅವರ ನೆರವಿಗೆ ಧಾವಿಸಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿ, ಕಲಾವಿದರ ದಾಖಲೆಗಳನ್ನು ಪರಿಶೀಲಿಸಿ, ಅತ್ಯಂತ ಪಾರದರ್ಶಕವಾಗಿ ನೆರವು ನೀಡಲು ಮಂಜೂರಾತಿ ನೀಡಲಾಗಿದೆ. ಫಲಾನುಭವಿಗಳು ಡಿ.ಬಿ.ಟಿ. ಆಪ್ ಮುಖಾಂತರ ತಮ್ಮ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗೆ ನೆರವು ವರ್ಗಾವಣೆ ಆಗಿರುವುದನ್ನು ಖಾತರಿ ಪಡಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಇದೀಗ ವಿವಿಧ ಜಿಲ್ಲೆಗಳಲ್ಲಿ ನಿರ್ಬಂದಗಳನ್ನು ತೆರವು ಗೊಳಿಸಲಾಗಿದೆ. ಆದರೆ ಕಲಾವಿದರು ಮುನ್ನೆಚ್ಚರಿಕೆಯ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಜೊತೆಗೆ ಲಸಿಕೆಯನ್ನು ಸಹ ಸರ್ಕಾರ ಉಚಿತವಾಗಿ ನೀಡುತ್ತಿದ್ದು, ತಪ್ಪದೆ ಹಾಕಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದರು.

    ಸಮಾರಂಭದಲ್ಲಿ ಮಾತನಾಡಿದ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಮೊದಲ ಅಲೆಯ ಸಂದರ್ಭದಲ್ಲಿಯೂ 17 ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ನೆರವು ನೀಡಲಾಗಿತ್ತು. ಈಗ ಮತ್ತೆ ಕಲಾವಿದರಿಗೆ ತಲಾ 3 ಸಾವಿರ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

    ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ರವಿಶಂಕರ್, ನಿರ್ದೇಶಕ ಎಸ್. ರಂಗಪ್ಪ, ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

  • ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

    ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

    – ಪ್ಯಾಕೇಜ್ ಘೋಷಣೆಗೆ ಆಗ್ರಹ

    ನೆಲಮಂಗಲ: ರಾಜ್ಯ ಸರ್ಕಾರ ಗೂಡ್ಸ್ ವಾಹನ ಚಾಲಕರಿಗೆ ವಾಹನಗಳ ವಿಮಾಕಂತು ಹಾಗೂ ತೆರಿಗೆಗಳನ್ನು ಒಂದು ವರ್ಷ ಮುಂದೂಡುವ ಜೊತೆ ಚಾಲಕರಿಗೆ ಸಹಾಯವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ಸಂಸ್ಥಾಪಕ ಅಧ್ಯಕ್ಷ ಎಂಪಿ ರವೀಶ್ ಎಚ್ಚರಿಕೆ ನೀಡಿದ್ದಾರೆ.

    ನೆಲಮಂಗಲ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಮಾದವಾರದ ಬಳಿ ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ವತಿಯಿಂದ ಗೂಡ್ಸ್ ವಾಹನಗಳ ಚಾಲಕರಿಗೆ ಆಹಾರ ಪ್ಯಾಕೇಟ್ ನೀಡಿ ಮಾತನಾಡಿದ ಎಂಪಿ ರವೀಶ್, ಕೊರೊನಾ ಸಂಕಷ್ಟದಲ್ಲಿ ವೈದ್ಯಕೀಯ ಸಲಕರಣೆಗಳು, ದಿನಸಿ ಸಾಮಗ್ರಿಗಳು ಸೇರಿದಂತೆ ಪ್ರತಿಯೊಂದು ಸಾಮಗ್ರಿಗಳನ್ನು ಸಾಗಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಈಗಾಗಲೇ ಅನೇಕ ಚಾಲಕರು ಕೊರೊನಾ ಸೋಂಕಿನಿಂದ ನಲುಗುತ್ತಿದ್ದಾರೆ. ಸರಿಯಾದ ಬಾಡಿಗೆಗಳು ಸಿಗದೇ ಗೂಡ್ಸ್ ವಾಹನಗಳು ನಷ್ಟ ಅನುಭವಿಸುತ್ತಿದ್ದು ಸರ್ಕಾರ ನಮ್ಮ ವಾಹನಗಳ ಇಎಮ್‍ಐ ಪಾವತಿಯಲ್ಲಿ ವಿನಾಯಿತಿ, ವಿಮಾಕಂತು ಹಾಗೂ ತೆರಿಗೆಯನ್ನು ಒಂದು ವರ್ಷ ಮುಂದೂಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಾಸು ಕೊಟ್ರೆ ಡೆತ್ ಸರ್ಟಿಫಿಕೇಟ್ ಡೀಲ್ ತನಿಖೆಗೆ ಅಶೋಕ್ ಆರ್ಡರ್!

    ಗೂಡ್ಸ್ ವಾಹನ ಮಾಲೀಕರು ಹಾಗೂ ಚಾಲಕರ ಕಷ್ಟಕ್ಕೆ ಸರ್ಕಾರ ಸ್ಪಂದನೆ ನೀಡಬೇಕು, ನಮ್ಮ ಬೇಡಿಕೆಯ ಮನವಿ ಸ್ಪಂದನೆ ಸಿಗದಿದ್ದರೇ ರಾಜ್ಯಾದ್ಯಂತ ಗೂಡ್ಸ್ ವಾಹನಗಳನ್ನು ಸ್ಥಗಿತಗೊಳಿಸಿ ಹೋರಾಟ ಮಾಡಲಾಗುತ್ತದೆ ಎಂದರು. ಮಾದವರದ ಬಳಿ ಬೆಂಗಳೂರು ಹಾಗೂ ನೈಸ್ ರಸ್ತೆಯ ಮೂಲಕ ಹೋಗುವ ಗೂಡ್ಸ್ ವಾಹನಗಳ ಚಾಲಕರಿಗೆ ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘದಿಂದ ಒಂದು ಸಾವಿರದಷ್ಟು ನೀರಿನ ಬಾಟಲ್, ಆಹಾರದ ಪ್ಯಾಕೇಟ್ ಹಾಗೂ ಮಾಸ್ಕ್, ಸ್ಯಾನಿಟೈಸರ್ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಹೆಚ್.ವಿಜಯಕುಮಾರ್, ರಾಜ್ಯಾಧ್ಯಕ್ಷ ಎಂ.ಮುನಿಕೃಷ್ಣ, ಉಪಾಧ್ಯಕ್ಷ ಕುಪ್ಪುಸ್ವಾಮಿ, ರಾಜ್ಯ ಸಹಕಾರ್ಯದರ್ಶಿ ರಮೇಶ್ ಮತ್ತಿತರರಿದ್ದರು.

  • ಖಾಸಗಿ ಅನುದಾನರಹಿತ ಶಿಕ್ಷಕ-ಶಿಕ್ಷಕೇತರರಿಗೆ ಆರ್ಥಿಕ ಪ್ಯಾಕೇಜ್ ನೀಡಿ – ಸುರೇಶ್ ಕುಮಾರ್

    ಖಾಸಗಿ ಅನುದಾನರಹಿತ ಶಿಕ್ಷಕ-ಶಿಕ್ಷಕೇತರರಿಗೆ ಆರ್ಥಿಕ ಪ್ಯಾಕೇಜ್ ನೀಡಿ – ಸುರೇಶ್ ಕುಮಾರ್

    ಬೆಂಗಳೂರು: ನಮ್ಮ ವಿದ್ಯಾರ್ಥಿಗಳ ಹಿತ ಕಾಯುತ್ತಿರುವ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕ-ಶಿಕ್ಷಕೇತರ ಸಮುದಾಯಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್‍ರವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಕೋವಿಡ್ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳಲ್ಲಿ ಶಿಕ್ಷಣ ಕ್ಷೇತ್ರವೂ ಪ್ರಧಾನವಾದ ಕ್ಷೇತ್ರವಾಗಿದೆ. ಸರ್ಕಾರ ವಿಧಿಸಿದ ಲಾಕ್ ಡೌನ್ ರಾಜ್ಯಾದ್ಯಂತ ಇರುವ ಸಾವಿರಾರು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮೇಲೆ ಅವಲಂಬಿಸಿದ್ದ ಹಲವು ವರ್ಗಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ಸಾಲಿನಲ್ಲಿ ಭೌತಿಕ ತರಗತಿಗಳು ನಡೆಯದ ಕಾರಣ, ಪೋಷಕರು ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಲು ನಿರೀಕ್ಷಿತ ರೀತಿಯಲ್ಲಿ ಆಸಕ್ತಿ ತೋರಲಿಲ್ಲ. ಇದೂ ಕೂಡಾ ಬಹು ವಿಧದ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಯಿತು.

    ಭವಿಷ್ಯದ ಪ್ರಜೆಗಳನ್ನು ರೂಪಿಸುವ ಕಾಯಕದಲ್ಲಿ ಸಾವಿರಾರು ವಿದ್ಯಾ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿವೆ. ಈ ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ ಲಕ್ಷಾಂತರ (ಅಂದಾಜು ಎರಡು ಲಕ್ಷ) ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾ ಸಂಸ್ಥೆಗಳ ಆಡಳಿತ ವರ್ಗಗಳು ನೀಡುವ ವೇತನ-ಭತ್ಯೆಗಳನ್ನು ಸಂತೃಪ್ತಿಯಿಂದ ಸ್ವೀಕರಿಸಿ ಮಕ್ಕಳ ಭವಿಷ್ಯವನ್ನ ಕಾಯುತ್ತಿದ್ದಾರೆ.

    ಆದರೆ, ಖಾಸಗಿ ಶಾಲೆಗಳಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಬಜೆಟ್ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೋಧಕ, ಬೋಧಕೇತರ ಸಿಬ್ಬಂದಿ ಮುನ್ನೆಲೆಗೆ ಬಾರದ, ಅತಿಯಾದ ಸಮಸ್ಯೆಗೆ ಸಿಲುಕಿರುವ ಸಮುದಾಯದವರಾಗಿದ್ದಾರೆ. ಪೋಷಕ-ಶಾಲೆಗಳ ನಡುವಿನ ಸಮಸ್ಯೆಗಳ ನೇರ ಪರಿಣಾಮ ಈ ಸಮುದಾಯದ ಮೇಲಾಗಿದೆ. ಅಸಂಖ್ಯ ಶಿಕ್ಷಕರು, ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿದ್ದಾರೆ. ಹಣ್ಣು ತರಕಾರಿ ಮಾಡಿದ್ದಾರೆ. ಇದನ್ನು ನಾವು ಹಲವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಕೇಳಿದ್ದೇವೆ. ಅವರ ನೆರವಿಗೆ ಧಾವಿಸುವುದೂ ಸಹ ಸರ್ಕಾರದ ಜವಾಬ್ದಾರಿಯಾಗಿದೆ.

    ಶಿಕ್ಷಣದಂತಹ ಪವಿತ್ರ ವೃತ್ತಿಯನ್ನು ಕೈಗೆತ್ತಿಕೊಂಡ ಇಂತಹ ಶಿಕ್ಷಕ ಸಮುದಾಯಕ್ಕೆ ನಾಗರಿಕ ಸಮಾಜದ ಪ್ರತಿಕ್ರಿಯೆ ತನ್ನದೇ ಆದ ದೂರಗಾಮಿ, ನಕಾರಾತ್ಮಕವಾದ ಪರಿಣಾಮವನ್ನು ಬೀರಬಲ್ಲುದು. ಮುನ್ನೆಲೆಗೆ ಬಾರದ ಹಾಗೂ ತಮ್ಮ ಆಯ್ಕೆಯ ಬೌದ್ಧಿಕ ಕ್ಷೇತ್ರ ಕಲ್ಪಿಸುವ ಸಾಮಾಜಿಕ ಸಂಕೋಚದ ಕಾರಣ, ಈ ವರ್ಗ ಗದ್ದಲದ ಹೋರಾಟಕ್ಕೂ ಮುಂದಾಗಿಲ್ಲ.

    ಆದರೆ, ಈ ಸಮುದಾಯ ತೀವ್ರ ಆರ್ಥಿಕ-ಭೌತಿಕ ಸಂಕಷ್ಟಗಳನ್ನು ಅನುಭವಿಸುತ್ತಿರುವುದು ಸತ್ಯ. ಹಾಗಾಗಿ ಇಂತಹ ಸಂದರ್ಭದಲ್ಲಿ ತಾವು ಈ ವರ್ಗದ ಬಗ್ಗೆ ವಿಶೇಷ ಕಾಳಜಿಯನ್ನು ತೋರಬೇಕಾದ ತುರ್ತು ಅವಶ್ಯಕತೆ ಇರುತ್ತದೆ. ಈ ವರ್ಗಕ್ಕೆ ನೀಡುವ ಸಹಕಾರವು ನಮ್ಮ ಮಕ್ಕಳ ಭವಿಷ್ಯ ಕಾಯುವಂತಹ ನಿರ್ಣಯವಾಗುತ್ತದೆ. ಆದ ಕಾರಣ, ದಯವಿಟ್ಟು, ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ, ಬಜೆಟ್ ಅನುದಾನರಹಿತ ಶಾಲೆ ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ತಾವು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಈ ಸಮುದಾಯಕ್ಕೆ ವಿಶ್ವಾಸ ತುಂಬಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ.

    
    

  • ವಿಶೇಷ ಆರ್ಥಿಕ ಪ್ಯಾಕೇಜ್ ಸಮರ್ಥಿಸಿಕೊಂಡ ಸಿಎಂ

    ವಿಶೇಷ ಆರ್ಥಿಕ ಪ್ಯಾಕೇಜ್ ಸಮರ್ಥಿಸಿಕೊಂಡ ಸಿಎಂ

    ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಕಂಗೆಟ್ಟಿದ್ದ ಜನರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇದೀಗ ಆರ್ಥಿಕ ಸಂಕಷ್ಟದ ಕಾಲದಲ್ಲಿ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ ಎಂದು ಹೇಳುವ ಮೂಲಕ ಸಿಎಂ ತಮ್ಮ ವಿಶೇಷ ಆರ್ಥಿಕ ಪ್ಯಾಕೇಜ್‍ನ್ನು ಸಮರ್ಥಿಸಿಕೊಂಡಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಸಂದರ್ಭ ನಾನು ಘೋಷಣೆ ಮಾಡಿದ್ದೇನೆ. 1,250ಕೋಟಿ ರೂ. ಪ್ಯಾಕೇಜ್ ರಾಜ್ಯದ ಜನತೆಗೆ ನೀಡಿದ್ದೇನೆ ಎಂದು ತಮ್ಮನ್ನು ತಾವು ಸಮರ್ಥನೆ ಮಾಡಿಕೊಂಡಿದ್ದಾರೆ.

    ಇತ್ತ ವಿರೋಧ ಪಕ್ಷಗಳು ಯಡಿಯೂರಪ್ಪ ಅವರು ಘೋಷಿಸಿರುವ ವಿಶೇಷ ಪ್ಯಾಕೇಜ್ ಏನು ಪ್ರಯೋಜನವಿಲ್ಲ. ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ ಎನ್ನುವ ಮೂಲಕ ಟೀಕೆ ವ್ಯಕ್ತಪಡಿಸಿವೆ. ಈ ಕುರಿತು ಮಾಧ್ಯಮಗಳು ಪ್ರಶ್ನೆ ಎತ್ತುತ್ತಿದ್ದಂತೆ ಪ್ರತಿಕ್ರಿಯೆಗೆ ಯಡಿಯೂರಪ್ಪ ನಿರಾಕರಿಸಿದರು.

  • ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ: ಡಿಕೆಶಿ

    ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ: ಡಿಕೆಶಿ

    – ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪ್ಯಾಕೇಜ್ ಘೋಷಣೆ

    ಬೆಂಗಳೂರು: ಕಳೆದ ಬಾರಿ ಹೀಗೆ ಲಾಕ್‍ಡೌನ್ ಪ್ಯಾಕೇಜ್ ಘೋಷಣೆ ಮಾಡಿದರು. ಸರಿಯಾಗಿ ಹಣ ಕೊಡಲಿಲ್ಲ. ಈಗ ಸರಿಯಾಗಿ ಪ್ಯಾಕೇಜ್ ಹಂಚಿಕೆ ಮಾಡ್ತಾರೆ ಅನ್ನೋ ಗ್ಯಾರಂಟಿ ಇಲ್ಲಾ ಎಂದು ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಸಾವಿರ ಪಂಚಾಯ್ತಿ ಮೂಲಕ ಕೊಡಬೇಕು. ಇದು ಕೊಡಬೇಕು ಅಂತ ಕೊಟ್ಟಿರೋದಲ್ಲ. ನಾವೆಲ್ಲಾ ಒತ್ತಾಯ ಮಾಡಿದೆವು ಅಂತ ಏನೋ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಬಡವರ ಬಗ್ಗೆ ಚಿಂತನೆ ಮಾಡುವಂತ ಸರ್ಕಾರ ಅಂತು ಇದಲ್ಲ ಎಂದು ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.

    ಕೊಡುವ ವಿಧಾನವೇ ಸಂಪೂರ್ಣ ಫೈಲ್ಯೂರ್ ಆಗಿದೆ. ಇಂದಿರಾ ಕ್ಯಾಂಟೀನ್ ಊಟಕ್ಕೆ ಆಧಾರ್ ಕಾರ್ಡ್ ಐಡಿ ಕಾರ್ಡ್ ತನ್ನಿ ಅಂದಿದ್ದರು. ನಾವು ಹೇಳಿದ ಮೇಲೆ ವಾಪಸ್ ಪಡೆದರು. ಕಾರ್ಮಿಕರು ಶ್ರಮಿಕ ವರ್ಗಕ್ಕೆ ಏನು ಇಲ್ಲಾ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದಿದ್ದಾರೆ.

    ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ. ಹತ್ತು ಲಕ್ಷ ಡ್ರೈವರ್ ಇದ್ದಾರೆ ಎಂದು ಹೇಳಿ ಎರಡು ಲಕ್ಷ ಜನರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಪರಿಹಾರ ಹಂಚಿಕೆ ವಿಧಾನ ಸರಿ ಇಲ್ಲ. ಪರಿಹಾರ ಹಂಚುವ ಜವಾಬ್ದಾರಿ ಗ್ರಾಮ ಪಂಚಾಯ್ತಿಗೆ ಕೊಡಿ. ಅವರು ಮಡಿವಾಳ, ಕ್ಷೌರಿಕ ಹೂ ಮಾರುವವನು, ಆರ್ಚಕರು, ಅಡಿಗೆ ಮಾಡುವವನು ಎಲ್ಲರೂ ಅವರಿಗೆ ಗೊತ್ತಾಗುತ್ತೆ. ಹಳ್ಳಿ ಜನ ಮೋಸ ಮಾಡದೇ ಎಲ್ಲರಿಗೂ ಕೊಡ್ತಾರೆ ಎಂದಿದ್ದಾರೆ.

    ನಮಗಂತು ಸರ್ಕಾರದ ನಿರ್ವಾಹಣೆ ಬಗ್ಗೆ ವಿಶ್ವಾಸ ಇಲ್ಲ. ನಮ್ಮ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಸರ್ಕಾರದ ಮೇಲೆ ನಂಬಿಕೆ ಇಲ್ಲಾ ಅಂತಾನೆ ಡಿಸಿಗಳ ಜೊತೆ ಪಿಎಂ ಮೀಟಿಂಗ್ ಮಾಡಿದ್ದಾರೆ. ಇವರು ಪ್ಯಾಕೇಜ್ ಮಾಡಿರುವ ಹಂಚುವ ವಿಧಾನವೇ ಸರಿ ಇಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ.

  • 20.97 ಲಕ್ಷ ಕೋಟಿ ರೂ. ಪ್ಯಾಕೇಜ್ ಲೆಕ್ಕ ಕೊಟ್ಟ ಸೀತಾರಾಮನ್

    20.97 ಲಕ್ಷ ಕೋಟಿ ರೂ. ಪ್ಯಾಕೇಜ್ ಲೆಕ್ಕ ಕೊಟ್ಟ ಸೀತಾರಾಮನ್

    – 1 ವರ್ಷದವರೆಗೆ ಕಂಪನಿಗಳ ದಿವಾಳಿ ಕ್ರಮ ಇಲ್ಲ

    ನವದೆಹಲಿ: ಕೊರೊನಾ ಪರಿಹಾರ ಪ್ಯಾಕೇಜ್‍ನ ಐದನೇ ಮತ್ತು ಕೊನೆಯ ಹಂತದ ಘೋಷಣೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ವಿವರಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‍ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಹಣ ನೀಡಲಾಗಿದೆ ಎಂದು ವಿವರಿಸಿದ್ದಾರೆ.

    ನಿರ್ಮಲಾ ಸೀತಾರಾಮನ್ ಅವರು ಇಂದು ನರೇಗಾ, ಆರೋಗ್ಯ, ಶಿಕ್ಷಣ, ವ್ಯವಹಾರ, ಕಂಪನಿಗಳ ಕಾಯ್ದೆಗಳಿಗೆ ಸಂಬಂಧಿಸಿದ ಕೆಲವು ಮಾಹಿತಿ ಪ್ರಕಟಿಸಿದರು. ನರೇಗಾ ಯೋಜನೆಗೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂ. ನೀಡಲಾಗಿದೆ. ಒಂದು ವರ್ಷದವರೆಗೆ ಕಂಪನಿಗಳ ಮೇಲೆ ಯಾವುದೇ ದಿವಾಳಿತ ಕ್ರಮ ಇರುವುದಿಲ್ಲ. ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಖಾಸಗಿ ಕಂಪನಿಗಳನ್ನು ತೆರೆಯಲಾಗುವುದು. ಕೊರೊನಾ ವೈರಸ್ ಬಳಿಕ ಕೇಂದ್ರ ಸರ್ಕಾರ ಒಟ್ಟು 20,97,530 ಕೋಟಿ ರೂ. ಪ್ಯಾಕೇಜ್ ಘೋಷಿಸಿವೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್ ಉಂಟು ಮಾಡಿದ ಸಂಕಷ್ಟದಿಂದಾಗಿ ರಾಜ್ಯಗಳು ಮತ್ತು ಕೇಂದ್ರದ ಆದಾಯ ಕಡಿಮೆಯಾಗುತ್ತಿದೆ. ಇದರ ಹೊರತಾಗಿಯೂ ರಾಜ್ಯಗಳಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದೇವೆ. ಸಾಲ ಮಿತಿಯನ್ನು ಶೇ.3ರಿಂದ ಶೇ.5ಕ್ಕೆ ಏರಿಸಲಾಗಿದೆ. ಇದರಿಂದ ರಾಜ್ಯಗಳಿಗೆ ಹೆಚ್ಚುವರಿ 4.28 ಲಕ್ಷ ಕೋಟಿ ರೂ. ದೊರೆಯುತ್ತದೆ ಎಂದು ಸೀತಾರಾಮಾನ್ ತಿಳಿಸಿದ್ದಾರೆ.

    ಪ್ರಧಾನಿ ಮೋದಿ ಅವರ ಭಾಷಣಕ್ಕೂ ಮುನ್ನ 1,92,800 ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿತ್ತು. ಆ ಬಳಿಕ ವಿತ್ತ ಸಚಿವೆ ಸೀತಾರಾಮನ್ ಅವರು ಮೊದಲ ಸುದ್ದಿಗೋಷ್ಠಿಯಲ್ಲಿ 5,94,550 ಕೋಟಿ ರೂ, ಎರಡನೇ ಸುದ್ದಿಗೋಷ್ಠಿ 3.10 ಲಕ್ಷ ಕೋಟಿ ರೂ. ಘೋಷಿಸಿದ್ದರು. ಆ ಬಳಿಕ ಮೂರನೇ ಸುದ್ದಿಗೋಷ್ಠಿಯಲ್ಲಿ 1.50 ಲಕ್ಷ ಕೋಟಿ ರೂ., ನಾಲ್ಕನೇ ಸುದ್ದಿಗೋಷ್ಠಿಯಲ್ಲಿ 8,100 ಕೋಟಿ ರೂ, ಹಾಗೂ ಇಂದು ಐದನೇ ಸುದ್ದಿಗೋಷ್ಠಿಯಲ್ಲಿ 40 ಸಾವಿರ ಕೋಟಿ ರೂ. ಘೋಷಿಸಿದರು. ಜೊತೆಗೆ ಆರ್‌ಬಿಐ 8,01,603 ಕೋಟಿ ರೂ. ಪ್ಯಾಕೇಜ್ ನೀಡಿತ್ತು. ಈ ಎಲ್ಲ ಮೊತ್ತವು 20,97,053 ಕೋಟಿ ರೂ. ಆಗಿದೆ ಎಂದು ಹೇಳಿದರು.

  • ನರೇಗಾಗೆ ಹೆಚ್ಚುವರಿ 40,000 ಕೋಟಿ ರೂ. ಪ್ಯಾಕೇಜ್

    ನರೇಗಾಗೆ ಹೆಚ್ಚುವರಿ 40,000 ಕೋಟಿ ರೂ. ಪ್ಯಾಕೇಜ್

    – ಆರೋಗ್ಯ ಕ್ಷೇತ್ರಕ್ಕೆ 15 ಸಾವಿರ ಕೋಟಿ

    ನವದೆಹಲಿ: ಕೊರೊನಾ ಉಂಟು ಮಾಡಿದ ಆರ್ಥಿಕ ಸಂಕಷ್ಟ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂದು 5ನೇ ಹಂತದ ಪ್ಯಾಕೇಜ್ ಘೋಷಿಸಿದೆ. ಈ ಪೈಕಿ ನರೇಗಾಗೆ ಹೆಚ್ಚುವರಿ 40,000 ಕೋಟಿ ರೂ. ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

    ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿತ್ತ ಸಚಿವೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೈಗೊಂಡ ಪ್ರಮುಖ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಷ್ಟೇ ಅಲ್ಲದೆ ಕಿಸಾನ್ ಸಮ್ಮಾನ್ ಯೋಜನೆ, ಜನ್‍ಧನ್ ಖಾತೆಗಳಿಗೆ ಹಣ ಹಾಕಿರುವ ಬಗ್ಗೆ ಮಾಹಿತಿ ನೀಡಿದರು.

    ಮುಖ್ಯಾಂಶಗಳು:
    * ಉದ್ಯೋಗ ಉತ್ತೇಜನ ನೀಡಲು ಸರ್ಕಾರ ಈಗ ನರೇಗಾಗೆ ಹೆಚ್ಚುವರಿ 40,000 ಕೋಟಿ ರೂ.ಗಳನ್ನು ನೀಡಲಿದೆ.
    * ಇದು ಒಟ್ಟು ಸುಮಾರು 300 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸಲು ಇದು ಸಹಾಯಕವಾಗಿದೆ.
    * ಇದು ಹೆಚ್ಚಿನ ಕೆಲಸಕ್ಕಾಗಿ ಮಾನ್ಸೂನ್ ಋತುವಿನಲ್ಲಿ ಹಿಂದಿರುಗಿದ ವಲಸೆ ಕಾರ್ಮಿಕರನ್ನು ಒಳಗೊಂಡಿದೆ.

    * ನೀರಿನ ಸಂರಕ್ಷಣಾ ಕಾಮಗಾರಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಬಾಳಿಕೆ ಬರುವ ಮತ್ತು ಜೀವನೋಪಾಯ ಕಲ್ಪಿಸುವ ಕಾಮಗಾರಿ ಕೈಗೊಳ್ಳಲಾಗುವುದು.
    * ಇದು ಹೆಚ್ಚಿನ ಉತ್ಪಾದನೆಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲಿದೆ.

    ಲಾಕ್‍ಡೌನ್‍ನಿಂದಾಗಿ ಪಡಿತರ ಹಾಗೂ ದ್ವಿದಳ ಧಾನ್ಯಗಳನ್ನು 3 ತಿಂಗಳ ಮುಂಚಿತವಾಗಿ ನೀಡಲಾಯಿತು. ಸವಾಲುಗಳ ಹೊರತಾಗಿಯೂ, ಭಾರತದ ಆಹಾರ ನಿಗಮ, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟವು ದ್ವಿದಳ ಧಾನ್ಯ ಮತ್ತು ಧಾನ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡಿದೆ. ಇದನ್ನು ನಾನು ಪ್ರಶಂಸಿಸುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

    ಭೂಮಿ, ಕಾರ್ಮಿಕರು, ಬಂಡವಾಳ ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಸಹಾಯಕವಾಗಲಿದೆ. ಲಾಕ್‍ಡೌನ್ ಬೆನ್ನಲ್ಲೇ ಅನೇಕ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಈಗಲೂ ದೇಶದ ಜನರ ಹಿತಕ್ಕಾಗಿ ಬೃಹತ್ ಮೊತ್ತದ ಪ್ಯಾಕೇಜ್ ಘೋಷಿಸಿದೆ ಎಂದು ಹೇಳಿದರು.

    ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಜನರಿಗೆ ನೇರವಾಗಿ ಹಣ ವರ್ಗಾವಣೆ ಮಾಡಲು ತಂತ್ರಜ್ಞಾನವನ್ನು ಬಳಸಲಾಯಿತು. ಕಿಸಾನ್ ಸಮ್ಮಾನ್ ಯೋಜನೆ ಅಡಿ 8.19 ಕೋಟಿ ರೈತರಿಗೆ ಒಂದು ಕಂತಿನ 2,000 ರೂ. ವರ್ಗಾವಣೆ ಮಾಡಲಾಗಿದೆ. ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ (ಎನ್‍ಎಸ್‍ಎಪಿ) ಅಡಿ ಫಲಾನುಭವಿಗಳಿಗೆ ಮೊದಲ ಕಂತಿನಲ್ಲಿ 1,405 ಕೋಟಿ ರೂ. ಮತ್ತು ಎರಡನೇ ಕಂತಿನಲ್ಲಿ 1,402 ಕೋಟಿ ರೂ., ಸುಮಾರು 3,000 ಕೋಟಿ ರೂ. ಪಾವತಿಸಲಾಗಿದೆ ಎಂದು ತಿಳಿಸಿದರು.

    ಜನಧನ್ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ 10,025 ಕೋಟಿ ರೂ. ಹಾಗೂ 2.2 ಕೋಟಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ 3,950 ಕೋಟಿ ರೂ. ನೀಡಲಾಗಿದೆ. ಜೊತೆಗೆ 6.81 ಕೋಟಿ ಜನರಿಗೆ ಉಚಿತ ಎಲ್‍ಪಿಜಿ ಸಿಲಿಂಡರ್ ಗಳನ್ನು ನೀಡಲಾಗಿದೆ ಎಂದರು.

    ಕಾರ್ಮಿಕರಿಗೆ ಸ್ಥಳಾಂತರಗೊಳ್ಳಲು ಸಾಧ್ಯವಾದಾಗ ಶ್ರಮಿಕ್ ವಿಶೇಷ ರೈಲುಗಳನ್ನು ಪ್ರಾರಂಭಿಸಲಾಯಿತು. ಕಾರ್ಮಿಕರನ್ನು ನಿಲ್ದಾಣಗಳಿಗೆ ಕರೆತರಲು ರಾಜ್ಯಗಳನ್ನು ಕೋರಲಾಯಿತು. ಈ ಮೂಲಕ ಕೇಂದ್ರ ಸರ್ಕಾರ ಶೇ. 85 ವೆಚ್ಚವನ್ನು ಭರಿಸಿ ವಲಸೆ ಕಾರ್ಮಿಕರನ್ನು ಅವರ ಊರು ಗಳಿಗೆ ಕಳುಹಿಸಿಕೊಡಲಾಯಿತು ಎಂದರು.

    ರೋಗ್ಯ ಕ್ಷೇತ್ರಕ್ಕೆ 15 ಸಾವಿರ ಕೋಟಿ:
    ಕೋವಿಡ್-19 ನಿಯಂತ್ರಕ್ಕಾಗಿ ಕೇಂದ್ರ ಸರ್ಕಾರವು ಹಲವಾರು ಆರೋಗ್ಯ ಸಂಬಂಧಿತ ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯಗಳು, ಅಗತ್ಯ ವಸ್ತುಗಳು ಮತ್ತು ಪರೀಕ್ಷಾ ಪ್ರಯೋಗಾಲಯಗಳು ಮತ್ತು ಕಿಟ್‍ಗಳಿಗೆ, ಆರೋಗ್ಯ ಸೇತು ಆ್ಯಪ್ ಬಿಡುಗಡೆ ಮತ್ತು ಸಾಕಷ್ಟು ಪಿಪಿಇಗಳ ತಯಾರಿಕೆಗೆ ಭಾರೀ ಮೊತ್ತದಲ್ಲಿ ವೆಚ್ಚ ಮಾಡಲಾಗಿದೆ. ಈ ಮೂಲಕ 15 ಸಾವಿರ ಕೋಟಿ ರೂ. ಫೋಷಿಸಲಾಗಿದೆ. ಈ ಪೈಕಿ ರಾಜ್ಯಗಳಿಗೆ 4,113 ಕೋಟಿ ರೂ, ನೀಡಿದರೆ, ಅಗತ್ಯ ವಸ್ತುಗಳಿಗಾಗಿ 3,750 ಕೋಟಿ ರೂ, ವೆಚ್ಚ ಮಾಡಲಾಗಿದೆ. ಕೊರೊನಾ ಟೆಸ್ಟ್ ಲ್ಯಾಪ್ ಹಾಗೂ ಕಿಟ್‍ಗಳಿಗಾಗಿ 550 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

    4,113 ಕೋಟಿ ರೂ.ಗೂ ಹೆಚ್ಚು ಹಣವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಪ್ರತಿಯೊಬ್ಬ ವೈದ್ಯಕೀಯ ಸಿಬ್ಬಂದಿಗೆ 50 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಘೋಷಿಸಲಾಗಿದೆ. ಜೊತೆಗೆ ಅವರ ರಕ್ಷಣೆಗಾಗಿ ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ ಎಂದರು.

  • ಕೇಂದ್ರದಿಂದ ನಾಲ್ಕನೇ ಹಂತದಲ್ಲಿ ಆರ್ಥಿಕ ಪ್ಯಾಕೇಜ್ ಹಂಚಿಕೆ – ಸಂಜೆ 4 ಗಂಟೆಗೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

    ಕೇಂದ್ರದಿಂದ ನಾಲ್ಕನೇ ಹಂತದಲ್ಲಿ ಆರ್ಥಿಕ ಪ್ಯಾಕೇಜ್ ಹಂಚಿಕೆ – ಸಂಜೆ 4 ಗಂಟೆಗೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

    – ಇಂದು ಪ್ರವಾಸೋದ್ಯಮ, ಸೇವಾವಲಯಕ್ಕೆ ನೆರವು ನೀಡುವ ಸಾಧ್ಯತೆ

    ನವದೆಹಲಿ: ಕೊರೊನಾ ವೈರಸ್‍ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಮಂದಿಗೆ ಆರ್ಥಿಕತೆ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕನೇ ಹಂತದಲ್ಲಿ ಪ್ಯಾಕೇಜ್ ಹಂಚಿಕೆ ಮಾಡಲಿದ್ದಾರೆ.

    ಸಂಜೆ 4 ಗಂಟೆಗೆ ಈಗಾಗಲೇ ಸುದ್ದಿಗೋಷ್ಠಿಗೆ ಸಮಯ ನಿಗಧಿ ಮಾಡಿದ್ದು, ಇಂದು ಸುಮಾರು 2 ಲಕ್ಷ ಕೋಟಿ ಮೌಲ್ಯದ ಪ್ಯಾಕೇಜ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇಂದು ದೇಶದ ಪ್ರವಾಸೋದ್ಯಮ, ಸೇವಾವಲಯ ಕೇಂದ್ರಿಕರಿಸಿ ಪ್ಯಾಕೇಜ್ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ. ಹೋಟೆಲ್, ರೆಸ್ಟೋರೆಂಟ್, ಹೋಂ ಸ್ಟೇ, ಲಾಡ್ಜ್, ಅತಿಥಿ ಗೃಹಗಳು ಸೇರಿಸಂತೆ ಆತಿಥ್ಯ ವಲಯ, ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಆಗಲಿದೆ.

    ಸಾರಿಗೆ ವ್ಯವಸ್ಥೆ ವಲಯದಡಿ ವಿಮಾನಯಾನ, ಖಾಸಗಿ ಸಾರಿಗೆ ಸಂಸ್ಥೆಗಳಿಗೆ ನೆರವು, ಚಿಲ್ಲರೆ ಮಾರುಕಟ್ಟೆ, ಶಿಕ್ಷಣ, ಸಿನಿಮಾದಂತಹ ಮನರಂಜನಾ ವಲಯಕ್ಕೂ ರಿಲೀಫ್ ಸಾಧ್ಯತೆ ಇದೆ. ಶುಕ್ರವಾರ ಸುಮಾರು 1.5 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿರುವ ಹಣಕಾಸು ಸಚಿವಲಾಯ, ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಹಿಂದಿನ 1.75 ಲಕ್ಷ ಕೋಟಿ ಹಾಗೂ ಆರ್‌ಬಿಐ ಘೋಷಿಸಿದ್ದ ಆರ್ಥಿಕ ನೆರವುಗಳು ಒಳಗೊಂಡು 16.5 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿತ್ತು.

  • ರೈತರು, ಆಶಾಕಾರ್ಯಕರ್ತೆಯರಿಗೆ 512.5 ಕೋಟಿಯ ವಿಶೇಷ ಪ್ಯಾಕೇಜ್ ಫೋಷಿಸಿದ ಸಿಎಂ

    ರೈತರು, ಆಶಾಕಾರ್ಯಕರ್ತೆಯರಿಗೆ 512.5 ಕೋಟಿಯ ವಿಶೇಷ ಪ್ಯಾಕೇಜ್ ಫೋಷಿಸಿದ ಸಿಎಂ

    – ನನ್ನಿಂದ ಅನ್ನದಾತರಿಗೆ ಅನ್ಯಾಯ ಆಗಲ್ಲ ಎಂದ ಬಿಎಸ್‍ವೈ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಸುದ್ದಿಗೋಷ್ಠಿ ನಡೆಸಿದ್ದು, ರೈತರಿಗೆ ಹಾಗೂ ಆಶಾಕಾರ್ಯಕರ್ತೆಯರಿಗೆ ವಿಶೇಷ ಪ್ಯಾಕೇಜ್ ಫೋಷಿಸಿದ್ದಾರೆ.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವಥನಾರಾಯಣ್, ಲಕ್ಷ್ಮಣ್ ಸವದಿ ಸೇರಿದಂತೆ ಹಲವು ಸಚಿವರ ದಂಡಿನೊಂದಿಗೆ ಸಿಎಂ ಸುದ್ದಿಗೋಷ್ಠಿ ನಡೆಸಿದರು. ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿವೆ. ನಾನು ರೈತಪರ ಬಜೆಟ್ ಮಂಡಿಸಿದವನು. ಹಸಿರು ಶಾಲು ಹಾಕಿ ಪ್ರಮಾಣವಚನ ಸ್ವೀಕರಿಸಿದವನು. ನನ್ನಿಂದ ರೈತರಿಗೆ ಅನ್ಯಾಯ ಆಗಲ್ಲ. ರೈತರ ಉತ್ಪನ್ನಗಳು ದುಪ್ಪಟ್ಟು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗಳನ್ನು ಮಾಡಿದ್ದಾರೆ. ಶಿಕಾರಿಪುರದಲ್ಲಿ 45 ವರ್ಷಗಳ ಹಿಂದೆ ಎಪಿಎಂಸಿ ಮುಂದೆ ರೈತರು ಬೆಳೆದ ಬೆಳೆಗೆ ನಾನು ಹೋರಾಟ ಮಾಡಿದ್ದೆ. ರೈತ ತನ್ನ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಿದ್ದೇವೆ. ಈ ಕಾಯ್ದೆಯಿಂದ ಎಪಿಎಂಸಿ ಸಮಿತಿಗಳಿಗೆ ಯಾವುದೇ ದಕ್ಕೆ ಆಗಲ್ಲ ಎಂದು ಸಿಎಂ ಭರವಸೆ ನೀಡಿದರು. ಇದನ್ನೂ ಓದಿ: ಹಣ್ಣು, ತರಕಾರಿ ಬೆಳೆಗಾರರಿಗೆ 15 ಸಾವಿರ ರೂ.- ಬಿಎಸ್‍ವೈಯಿಂದ ಮತ್ತೆ 162 ಕೋಟಿ ಪ್ಯಾಕೇಜ್ ಪ್ರಕಟ

    ರೈತರಿಗೆ ಪ್ಯಾಕೇಜ್:
    ಖಾಸಗಿ ಮಾರುಕಟ್ಟೆ 2007ರಲ್ಲೇ ಪ್ರಾರಂಭವಾಗಿದೆ. ಈಗಾಗಲೇ ಆನ್‍ಲೈನ್ ಮಾರುಕಟ್ಟೆ ಕೂಡ ಬಂದಿದೆ. ಎಲ್ಲಾ ಪ್ರತಿಪಕ್ಷಗಳ ಜತೆ ಮಾತನಾಡಿ ತಪ್ಪು ಗ್ರಹಿಕೆ ಮಾಡಬಾರದು ಎಂದು ಹೇಳಿದ್ದೇನೆ. ಹೀಗಾಗಿ ಮೂರನೇ ಪ್ಯಾಕೇಜ್ ಘೋಷಣೆ ಮಾಡಲಾಗುತ್ತಿದ್ದು, ಮೆಕ್ಕೆಜೋಳ ಬೆಳೆದ ರೈತನಿಗೆ ಬೆಂಬಲ ಬೆಲೆ ನೀಡಲಾಗುತ್ತದೆ. ರಾಜ್ಯದಲ್ಲಿ 10 ಲಕ್ಷ ಮೆಕ್ಕೆಜೋಳ ಬೆಳೆದ ರೈತರು ಇದ್ದಾರೆ. ಒಬ್ಬ ರೈತನಿಗೆ 5 ಸಾವಿರ ಎನ್ನುವಂತೆ ಒಟ್ಟು 500 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ ಹಾಗೆಯೇ ಅಪಘಾತ, ನೈಸರ್ಗಿಕ ವಿಕೋಪಕ್ಕೆ ತುತ್ತಾದ ಮೃತ ಪಟ್ಟ ಕುರಿ ಮೇಕೆಗಳಿಗೆ 5 ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳಿಗೆ ಸಾಲ – 5 ಸಾವಿರ ಕೋಟಿ ರೂ. ಪ್ಯಾಕೇಜ್ ಪ್ರಕಟ

    ಆಶಾ ಕಾರ್ಯಕರ್ತೆಯರಿಗೆ ಪ್ಯಾಕೇಜ್:
    40,250 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಎನ್ನುವಂತೆ 12.5 ಕೋಟಿಯ ಪ್ಯಾಕೇಜ್ ಘೋಷಿಸಲಾಗಿದೆ. ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂಪಾಯಿ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.

    ಕೊರೊನಾ ಲಾಕ್‍ಡೌನ್ ಬಳಿಕ ರಾಜ್ಯ ಸರ್ಕಾರದ ಈವರಗೆ ಮೂರು ಪ್ಯಾಕೇಜ್‍ಗಳನ್ನು ಘೋಷಿಸಿದೆ. ಒಟ್ಟು 2,274.5 ಕೋಟಿಯ ಪ್ಯಾಕೇಜ್ ಅನ್ನು ಘೋಷಿಸಿದೆ. ಮೊದಲ ಹಂತದ ಪ್ಯಾಕೇಜ್‍ನಲ್ಲಿ 1,610 ಕೋಟಿ ರೂಪಾಯಿ, ಎರಡನೇ ಹಂತದ ಪ್ಯಾಕೇಜ್‍ನಲ್ಲಿ 162 ಕೋಟಿ ರೂಪಾಯಿ, ಮೂರನೇ ಹಂತದಲ್ಲಿ 512.5 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ.

  • ಹಣ್ಣು, ತರಕಾರಿ ಬೆಳೆಗಾರರಿಗೆ 15 ಸಾವಿರ ರೂ.- ಬಿಎಸ್‍ವೈಯಿಂದ ಮತ್ತೆ 162 ಕೋಟಿ ಪ್ಯಾಕೇಜ್ ಪ್ರಕಟ

    ಹಣ್ಣು, ತರಕಾರಿ ಬೆಳೆಗಾರರಿಗೆ 15 ಸಾವಿರ ರೂ.- ಬಿಎಸ್‍ವೈಯಿಂದ ಮತ್ತೆ 162 ಕೋಟಿ ಪ್ಯಾಕೇಜ್ ಪ್ರಕಟ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಪ್ಯಾಕೇಜ್ ಘೋಷಣೆ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ತರಕಾರಿ, ಹಣ್ಣು ಬೆಳೆಗಾರರು ಹಾಗೂ ಕೈಮಗ್ಗ ಕಾರ್ಮಿಕರಿಗಾಗಿ ಒಟ್ಟು 162 ಕೋಟಿ ರೂ. ಪ್ಯಾಕೇಜ್ ಪ್ರಕಟಿಸಿದ್ದಾರೆ.

    ತರಕಾರಿ, ಹಣ್ಣು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂಪಾಯಿನಂತೆ ಒಟ್ಟು 137 ಕೋಟಿ ರೂ. ಪ್ಯಾಕೇಜ್ ಅನ್ನು ರಾಜ್ಯ ಸರ್ಕಾರದಿಂದ ಘೋಷಣೆ ಮಾಡಲಾಗಿದೆ. ಇದು 7 ಬಗೆಯ ಹಣ್ಣುಗಳು, 10 ತರಕಾರಿ ಬೆಳೆಗಳಿಗೆ ಸಿಮೀತವಾಗಿದೆ.

    ಬಾಳೆ, ಪಪ್ಪಾಯ, ಟೇಬಲ್ ದ್ರಾಕ್ಷಿ, ಅಂಜೂರಾ, ಅನಾನಸ್, ಕಲ್ಲಂಗಡಿ/ ಕರ್ಜೂರಾ, ಬೋರೆ/ ಬೆಣ್ಣೆ ಹಣ್ಣು, 10 ತರಕಾರಿ ಬೆಳೆಗಳಾದ ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ಹೂ ಕೋಸು, ಎಲೆ ಕೋಸು, ಸಿಹಿ ಕುಂಬಳಕಾಯಿ, ಬೂದು ಕುಂಬಳಕಾಯಿ, ಕ್ಯಾರೆಟ್, ಈರುಳ್ಳಿ, ದಪ್ಪ ಮೆಣಸಿನಕಾಯಿ, ಸೊಪ್ಪುಗಳು/ಹೀರೇಕಾಯಿ ಹಾಗೂ ತೊಂಡೆ ಕಾಯಿಗೆ ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂ. ನೀಡಲಾಗುತ್ತದೆ.

    ಇತ್ತ 1.62 ಲಕ್ಷ ವಿದ್ಯುತ್ ವಿದ್ಯುತ್ ಚಾಲಿತ ಕೈಮಗ್ಗ, ಹ್ಯಾಂಡ್‍ಲೂಮ್ ಘಟಕಗಳ ಕಾರ್ಮಿಕರ ಸಹಾಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಇಲ್ಲಿ ಕೆಲಸ ಮಾಡು ಪ್ರತಿ ಕಾರ್ಮಿಕರಿಗೆ 2 ಸಾವಿರ ರೂ.ನಂತೆ ಒಟ್ಟು 25 ಕೋಟಿ ರೂ. ನೀಡಲು ನಿರ್ಧರಿಸಿದೆ.

    ಈ ಹಿಂದೆ ಸಿಎಂ ಯಡಿಯೂರಪ್ಪ ಅವರು, ರಾಜ್ಯದಲ್ಲಿ 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವು ಮಾರಾಟವಾಗದೆ ರೈತರಿಗೆ ನಷ್ಟವಾಗಿದೆ. ಹೀಗಾಗಿ ಹೂ ಬೆಳೆಗಾರರಿಗೆ ಒಂದು ಹೆಕ್ಟೇರ್‌ಗೆ 25 ಸಾವಿರ ರೂ.ನಂತೆ ಪರಿಹಾರ ಹಣ ನೀಡಲಿದೆ. ರೈತರು ಎಷ್ಟೇ ಹೆಕ್ಟೇರ್ ಗಳಲ್ಲಿ ಹೂ ಬೆಳೆದಿದ್ದರೂ ಸರ್ಕಾರ ಪರಿಹಾರ ನೀಡುವುದು ಒಂದು ಹೆಕ್ಟೇರ್‍ಗೆ ಮಾತ್ರ ಎಂದು ಹೇಳಿದ್ದರು.

    ಈ ಬೆನ್ನಲ್ಲೇ ತರಕಾರಿ ಹಾಗೂ ಹಣ್ಣಿನ ಬೆಳೆಗೂ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಹೀಗಾಗಿ ಸದ್ಯ ಸಿಎಂ 50,083 ಹೆಕ್ಟೇರ್ ಗಳಲ್ಲಿ ಬೆಳೆದ ತರಕಾರಿ ಹಾಗೂ 41,054 ಹೆಕ್ಟೇರ್ ಗಳಲ್ಲಿ ಬೆಳೆದ ಹಣ್ಣು ಬೆಳೆಗಾಗರಿಗೆ ಪ್ರತಿ ಹೆಕ್ಟೇರ್ ನಂತೆ 15 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

    ರಾಜ್ಯ ಸಕಾರವು ಈ ಹಿಂದೆ 1,610 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿತ್ತು. ಈಗ 162 ಕೋಟಿ ರೂ. ಪ್ಯಾಕೇಜ್ ಪ್ರಕಟಿಸುವ ಮೂಲಕ ಒಟ್ಟು 1,772 ಕೋಟಿ ರೂ.ಗೆ ಹೆಚ್ಚಳವಾಗಿದೆ.