Tag: ಪೌರಾಡಳಿತ ಇಲಾಖೆ

  • ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವು ಪ್ರಕರಣ: ಸರ್ಕಾರದಿಂದ ತನಿಖಾ ತಂಡ ರಚನೆ

    ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವು ಪ್ರಕರಣ: ಸರ್ಕಾರದಿಂದ ತನಿಖಾ ತಂಡ ರಚನೆ

    ರಾಯಚೂರು: ಇಲ್ಲಿನ ನಗರಸಭೆ ಸರಬರಾಜು ಮಾಡಿದ್ದ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿದ್ದು, ನೂರಾರು ಮಂದಿ ಆಸ್ಪತ್ರೆಗೆ ದಾಖಲಿದ್ದಾರೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಗರಸಭೆಯ ಅವ್ಯವಸ್ಥೆಯ ಬಗ್ಗೆ ತನಿಖೆ ನಡೆಸಲು ಇಬ್ಬರು ಅಧಿಕಾರಿಗಳ ತನಿಖಾ ತಂಡವನ್ನು ನೇಮಿಸಿದೆ.

    ಕಲುಷಿತ ನೀರು ಸೇವನೆಯಿಂದ ವಾಂತಿ, ಭೇದಿ ಕಾಣಿಸಿಕೊಂಡಿದ್ದು, ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪ್ರಕರಣ ತನಿಖೆ ನಡೆಸಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, 3 ದಿನಗಳಲ್ಲಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಲ್. ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ನಗರಸಭೆಯಿಂದ ಕಲುಷಿತ ನೀರು ಸರಬರಾಜು- ಮಹಿಳೆ ಸಾವು, ನೂರಕ್ಕೂ ಹೆಚ್ಚು ಜನ ಅಸ್ವಸ್ಥ

    ತನಿಖಾ ಸಮಿತಿಗೆ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಕಲಬುರಗಿಯ ನಗರ ನೀರು ಸರಬರಾಜು ಮಂಡಳಿಯ ಮುಖ್ಯ ಅಭಿಯಂತರರನ್ನು ನೇಮಕ ಮಾಡಲಾಗಿದೆ. ಸಮಿತಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ 3 ದಿನಗಳಲ್ಲಿ ವರದಿ ನೀಡಲು ಸೂಚಿಸಲಾಗಿದೆ. ಇದನ್ನೂ ಓದಿ: ಕಲುಷಿತ ನೀರಿಗೆ ಮೂರನೇ ಬಲಿ – ರಾಯಚೂರು ಬಂದ್‌ಗೆ ಕರೆ

    ಜೂನ್ 7 ರಂದು ತನಿಖಾ ಸಮಿತಿ ರಾಯಚೂರಿಗೆ ಆಗಮಿಸಲಿದ್ದು ನಗರಸಭೆ ಕಚೇರಿ, ಜಲ ಶುದ್ಧೀಕರಣ ಘಟಕ ಸೇರಿ ವಿವಿಧೆಡೆ ಭೇಟಿ ನೀಡಿ ವರದಿ ತಯಾರಿಸಲಿದೆ. ಈ ಹಿನ್ನೆಲೆ ಜಿಲ್ಲಾ ನಗರಾಭಿವೃದ್ಧಿ ಕೋಶದ, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಹಾಜರಿರುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು ಸೂಚಿಸಿದ್ದಾರೆ.

  • ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ

    ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ

    ಬೆಂಗಳೂರು: ಮೈತ್ರಿ ಸಂಪುಟಕ್ಕೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದ ನೂತನ ಸಚಿವರಾದ ಆರ್.ಶಂಕರ್ ಹಾಗೂ ಎಚ್. ನಾಗೇಶ್ ಅವರಿಗೆ ಖಾತೆ ಹಂಚಿಕೆ ಮಾಡಿರುವ ಸರ್ಕಾರ, ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದೆ.

    ನಿರೀಕ್ಷೆಯಂತೆ ಶಂಕರ್ ಅವರಿಗೆ ಪೌರಾಡಳಿತ ಖಾತೆ ಲಭಿಸಿದ್ದು, ನಾಗೇಶ್ ಅವರಿಗೆ ಸಣ್ಣ ಕೈಗಾರಿಕೆ ಖಾತೆ ನೀಡಲಾಗಿದೆ. ಈ ಹಿಂದೆ ಸಣ್ಣ ಕೈಗಾರಿಕೆ ಖಾತೆ ಗುಬ್ಬಿ ಶ್ರೀನಿವಾಸ್ ಅವರ ಬಳಿ ಇತ್ತು. ಸದ್ಯ ಅವರಿಂದ ಈ ಸಣ್ಣ ಕೈಗಾರಿಕೆಯನ್ನು ಹಿಂಪಡೆದಿರುವ ಮುಖ್ಯಮಂತ್ರಿಗಳು ನಾಗೇಶ್ ಅವರಿಗೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಬಳಿ ಇದ್ದ ಪ್ರಾಥಮಿಕ ಶಿಕ್ಷಣ ಖಾತೆಯನ್ನ ಗುಬ್ಬಿ ಶ್ರೀನಿವಾಸ್ ಅವರಿಗೆ ನೀಡಿದ್ದಾರೆ.

    ಕುಂದಗೋಳ ಶಾಸಕ ಸಿಎಸ್ ಶಿವಳ್ಳಿ ಅವರ ನಿಧನದಿಂದ ಪೌರಾಡಳಿತ ಖಾತೆ ತೆರವಾಗಿತ್ತು. ಜೂನ್ 14 ರಂದು ಹಲವು ಗೊಂದಲಗಳ ನಡುವೆಯೂ ಪಕ್ಷೇತರ ಶಾಸಕರಾಗಿದ್ದ ಶಂಕರ್ ಹಾಗೂ ನಾಗೇಶ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಪಕ್ಷೇತರರಿಗೆ ಸಂಪುಟದಲ್ಲಿ ಸ್ಥಾನ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.