Tag: ಪೌರತ್ವ

  • ಪಾಕಿನಿಂದ ವಲಸೆ ಬಂದ 21 ಜನರಿಗೆ ರಾಜಸ್ಥಾನ ಸರ್ಕಾರದಿಂದ ಭಾರತದ ಪೌರತ್ವ

    ಪಾಕಿನಿಂದ ವಲಸೆ ಬಂದ 21 ಜನರಿಗೆ ರಾಜಸ್ಥಾನ ಸರ್ಕಾರದಿಂದ ಭಾರತದ ಪೌರತ್ವ

    ಜೈಪುರ: ಪಾಕಿಸ್ತಾನದಿಂದ ವಲಸೆ ಬಂದು ಸುಮಾರು 19 ವರ್ಷದಿಂದ ಭಾರತದಲ್ಲಿ ವಾಸಿಸುತ್ತಿದ್ದ 21 ಮಂದಿಗೆ ರಾಜಸ್ಥಾನ ಸರ್ಕಾರ ಬುಧವಾರ ಭಾರತೀಯ ಪೌರತ್ವ ನೀಡಿದೆ.

    ಈ ಜನರು ಪಾಕಿಸ್ತಾನದಿಂದ ಸ್ಥಳಾಂತರಗೊಂಡ ನಂತರ ಇಲ್ಲಿ ಹಲವಾರು ವರ್ಷದಿಂದ ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಭಾರತೀಯ ಪೌರತ್ವವಿಲ್ಲದ ಕಾರಣ, ಸರ್ಕಾರಿ ಉದ್ಯೋಗಗಳನ್ನು ಪಡೆಯುವಲ್ಲಿ ಮತ್ತು ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಜೈಪುರದ ಜಿಲ್ಲಾಧಿಕಾರಿ ಜಗ್ರೂಪ್ ಸಿಂಗ್ ಯಾದವ್ ಹೇಳಿದ್ದಾರೆ.

    ಕಳೆದ ಎರಡು ತಿಂಗಳಲ್ಲಿ 35 ಪಾಕ್ ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಇನ್ನೂ 28 ಪೌರತ್ವದ ಅರ್ಜಿಗಳು ಪರಿಶೀಲನೆ ನಡೆಯುತ್ತಿದೆ. 68 ಪೌರತ್ವದ ಅರ್ಜಿಗಳು ತನಿಖಾ ಹಂತದಲ್ಲಿ ಇದೆ. ಅವರಿಗೂ ಪೌರತ್ವ ನೀಡಲಾಗುವುದು. ಪಾಕ್ ವಲಸಿಗರ ಎಲ್ಲಾ ಪೌರತ್ವದ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಆನ್‍ಲೈನ್ ಪ್ರಕ್ರಿಯೆ ಮೂಲಕ ಅವರಿಗೆ ಪೌರತ್ವದ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

    ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ್ ರಾಯ್ ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ, ಜುಲೈ ತಿಂಗಳಿನಲ್ಲಿ ಒಟ್ಟು 1,310 ವಲಸಿಗರಿಗೆ ರಾಜಸ್ಥಾನ ಸರ್ಕಾರ ಪೌರತ್ವವನ್ನು ನೀಡಿದೆ. ಜೋಧಪುರ್, ಜೈಸಲ್ಮೇರ್ ಮತ್ತು ಜೈಪುರ ಜಿಲ್ಲಾಧಿಕಾರಿಗಳಿಗೆ ಪೌರತ್ವ ಪತ್ರವನ್ನು ನೀಡುವ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.

    ಅಲ್ಲದೇ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಹಿಂದೂಗಳು, ಸಿಖ್ಖ, ಬೌದ್ಧರು, ಜೈನರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸೇರಿದಂತೆ ಆರು ಅಲ್ಪಸಂಖ್ಯಾತ ಸಮುದಾಯದ ವಲಸಿಗರಿಗೆ ಸೂಕ್ತ ತನಿಖೆ ನಂತರ ಭಾರತೀಯ ಪೌರತ್ವ ನೀಡಲು ರಾಜಸ್ಥಾನದ ಜೋಧ್ ಪುರ, ಜೈಸಲ್ಮೇರ್ ಮತ್ತು ಜೈಪುರದ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ.

  • ರಾಹುಲ್ ಗಾಂಧಿ ‘ಪೌರತ್ವ ವಿವಾದ’ – ವಿವರಣೆ ಕೇಳಿ ಗೃಹ ಇಲಾಖೆಯಿಂದ ನೋಟಿಸ್

    ರಾಹುಲ್ ಗಾಂಧಿ ‘ಪೌರತ್ವ ವಿವಾದ’ – ವಿವರಣೆ ಕೇಳಿ ಗೃಹ ಇಲಾಖೆಯಿಂದ ನೋಟಿಸ್

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ‘ಪೌರತ್ವ ವಿವಾದ’ಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ರಾಹುಲ್ ಅವರಿಗೆ ನೋಟಿಸ್ ನೀಡಿದ್ದು, 15 ದಿನಗಳ ಒಳಗೆ ಉತ್ತರಿಸಬೇಕೆಂದು ಸೂಚಿಸಿದೆ.

    ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯಣ್ ಸ್ವಾಮಿ ಅವರು ನೀಡಿದ ದೂರಿನ ಅನ್ವಯ ಈ ನೋಟಿಸ್ ಜಾರಿ ಮಾಡಲಾಗಿದ್ದು, ಹಲವು ವರ್ಷಗಳ ಹಿಂದೆಯೇ ರಾಹುಲ್ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದರು. ಅಲ್ಲದೇ ಸ್ವತಃ ರಾಹುಲ್ ಗಾಂಧಿ ಅವರೇ ಈ ವಿಚಾರವನ್ನು ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದರು.

    ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಯುಕೆ ಕಂಪನಿಯ ಪ್ರಮಾಣ ಪತ್ರದಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ. ಭಾರತೀಯರಲ್ಲದವರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ಸುಬ್ರಮಣಿಯನ್ ಸ್ವಾಮಿ ಮನವಿ ಮಾಡಿದ್ದಾರೆ.

    ಸುಬ್ರಮಣಿಯನ್ ಸ್ವಾಮಿ ದೂರು ಸ್ವೀಕರಿಸಿರುವ ಗೃಹ ಇಲಾಖೆ, ನೋಟಿಸ್ ನೀಡಿ ‘ಇಂಗ್ಲೆಂಡ್ ನಲ್ಲಿ ನೀವು ಬ್ಯಾಕೋಪ್ಸ್ ಲಿಮಿಟೆಡ್ ಹೆಸರಿನ ಕಂಪನಿಯನ್ನು 2003ರಂದು ನೋಂದಾಯಿಸಿದ್ದೀರಿ. 51 ಸೌತ್ ಗೇಟ್ ಸ್ಟ್ರೀಟ್, ವಿನ್ ಚೆಸ್ಟರ್, ಹಂಪ್ ಶಿರ್ ಎಸ್‍ಒ239 ಇಎಚ್ ವಿಳಾಸದಲ್ಲಿ ಈ ಕಂಪನಿ ಇದೆ. ಮತ್ತು ಈ ಕಂಪನಿ ನಿರ್ದೇಶಕರಲ್ಲಿ ನೀವು ಒಬ್ಬರು ಹಾಗೂ ಕಾರ್ಯದರ್ಶಿಯಾಗಿದ್ದೀರಿ” ಎಂದು ತಿಳಿಸಿದೆ. ಅಲ್ಲದೇ ದೂರಿನಲ್ಲಿ ಹೇಳಿರುವಂತೆ ಕಂಪನಿ ವಾರ್ಷಿಕ ಆದಾಯವನ್ನು 2005 ಅಕ್ಟೋಬರ್ 10 ರಂದು ಮತ್ತು 2006ರ ಅಕ್ಟೋಬರ್ 31ರಂದು ಸಲ್ಲಿಸಲಾಗಿದೆ. ಅಲ್ಲಿ ನಿಮ್ಮ ಜನ್ಮ ದಿನಾಂಕ 1970 ಜೂನ್ 19 ಎಂದು ಹಾಗೂ ನೀವು ಬ್ರಿಟಿಷ್ ನಾಗರಿಕರು ಎಂದು ಘೋಷಿಸಿದ್ದಿರಿ. 2009ರ ಫೆಬ್ರವರಿ 17 ರಂದು ಕಂಪನಿ ವಿಸರ್ಜಿಸುವ ಅರ್ಜಿಯಲ್ಲೂ ಬ್ರಿಟಿಷ್ ನಾಗರಿಕ ಎಂದು ಹೇಳಿದ್ದೀರಿ’. ಈ ಬಗ್ಗೆ ವಾಸ್ತವ ಸ್ಥಿತಿಯನ್ನು 15 ದಿನದೊಳಗೆ ತಿಳಿಸುವಂತೆ ವಿವರಣೆ ಕೇಳಿದೆ.

    ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಸುದ್ದಿಗೋಷ್ಠಿ ನಡೆಸಿ ರಾಹುಲ್ ಬ್ರಿಟಿಷ್ ಪ್ರಜೆಯೇ? ಬ್ರಿಟಿಷ್ ಕಂಪನಿಯೊಂದರ ದಾಖಲೆಗಳಲ್ಲಿ ರಾಹುಲ್ ಬ್ರಿಟಿಷ್ ಪ್ರಜೆ ಎಂದು ಉಲ್ಲೇಖ ಆಗಿರುವುದು ಅಚ್ಚರಿ ತಂದಿದೆ. ಹೀಗಾಗಿ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

    ಕೇಂದ್ರ ಸರ್ಕಾರದ ಈ ನೋಟಿಸ್ ಲೋಕಸಭಾ ಚುನಾವಣೆ ಪ್ರಕ್ರಿಯೆ ನಡೆಯುವ ವೇಳೆಯೇ ಜಾರಿಯಾಗಿದ್ದು, ರಾಹುಲ್ ಉತ್ತರ ಪ್ರದೇದ ಅಮೇಥಿ ಹಾಗೂ ಕೇರಳದ ವಯನಾಡು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತಿದ್ದಾರೆ.

    ಪೌರತ್ವದ ವಿಚಾರಕ್ಕೆ ಸಂಬಂಧಿದಂತೆ ರಾಹುಲ್ ಗಾಂಧಿ ತಮ್ಮ ಅಫಿಡವಿಟ್ ಸಲ್ಲಿಸುವ ವೇಳೆ ಮಾಹಿತಿಯನ್ನ ಮುಚ್ಚಿಟ್ಟಿದ್ದು, ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಅಮೇಠಿಯ ಪಕ್ಷೇತರ ಅಭ್ಯರ್ಥಿಯೊಬ್ಬರು ದೂರು ನೀಡಿದ್ದರು. ರಾಹುಲ್ ಬ್ರಿಟಿಷ್ ಪೌರತ್ವ ಹೊಂದಿರುವುದಿಂದ ಅವರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗಿತ್ತು. ಅಮೇಥಿ ಪಕ್ಷೇತರ ಅಭ್ಯರ್ಥಿಯೂ ಕೂಡ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರಿಗೆ ಚುನಾವಣಾ ಅಧಿಕಾರಿ ಪೌರತ್ವ ಪರಿಶೀಲನೆ ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹೇಳಿ ನಾಮಪತ್ರವನ್ನು ಪುರಸ್ಕರಿಸಿದ್ದರು.

  • 11,400 ಕೋಟಿ ರೂ. ವಂಚಿಸಿದ್ದ ನೀರವ್ ಮೋದಿ ಕುಟುಂಬ ಕೆರಿಬಿಯನ್ ದ್ವೀಪಕ್ಕೆ ಓಡಿದ್ದು ಯಾಕೆ?

    11,400 ಕೋಟಿ ರೂ. ವಂಚಿಸಿದ್ದ ನೀರವ್ ಮೋದಿ ಕುಟುಂಬ ಕೆರಿಬಿಯನ್ ದ್ವೀಪಕ್ಕೆ ಓಡಿದ್ದು ಯಾಕೆ?

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಬಂಧನದ ಭೀತಿಯಿಂದ ಪಾರಾಗಲು ಕೆರಿಬಿಯನ್ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    11,400 ಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ವಜ್ರಾಭರಣಗಳ ಉದ್ಯಮಿಯಾಗಿರುವ ನೀರವ್ ಕುಟುಂಬ ಪ್ರಕರಣ ಬೆಳಕಿಗೆ ಬರುವ ಮುನ್ನವೇ ದೇಶ ತೊರೆದು ಅಮೆರಿಕಕ್ಕೆ ಹಾರಿತ್ತು. ಈಗ ಭಾರತದ ವಿದೇಶಾಂಗ ಸಚಿವಾಲಯ ಅವರನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿರುವಾಗ ನೀರವ್ ಮೋದಿ ಕುಟುಂಬ ಸೇಂಟ್ ಕೀಟ್ಸ್ ಮತ್ತು ನೇವಿಸ್ ದ್ವೀಪದಲ್ಲಿ ಆಶ್ರಯ ಪಡೆಯಲು ಮುಂದಾಗಿದೆ.

    ವಿದೇಶಾಂಗ ಸಚಿವಾಲಯ ಶನಿವಾರ ನೀರವ್ ಹಾಗೂ ಅವರ ಕುಟುಂಬ ಸದಸ್ಯರ ಪಾಸ್‍ಪೋರ್ಟ್ ರದ್ದು ಮಾಡಿತ್ತು. ಅಷ್ಟೇ ಅಲ್ಲದೇ ಅಮೆರಿಕದೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧ ಈಗ ಮತ್ತಷ್ಟು ಉತ್ತಮಗೊಂಡಿರುವ ಕಾರಣ ಅಮೆರಿಕ ಸರ್ಕಾರ ಯಾವ ಸಮಯದಲ್ಲಿ ಆದರೂ ನಮ್ಮನ್ನು ಭಾರತದ ವಶಕ್ಕೆ ನೀಡಬಹುದು ಎನ್ನುವ ಭೀತಿಯಿಂದ ನೀರವ್ ಕೆರೆಬಿಯನ್ ದ್ವೀಪ ರಾಷ್ಟ್ರಗಳ ಪೌರತ್ವ ಪಡೆಯಲು ಪ್ರಯತ್ನಿಸಿದ್ದಾರೆ.

    ನೀರವ್ ಕುಟುಂಬ ಈಗಾಗಲೇ ಅಮೆರಿಕದ ನ್ಯೂಯಾರ್ಕ್‍ನಿಂದ ಸೇಂಟ್ಸ್ ಕಿಟ್ಸ್ ಮತ್ತು ನೇವಿಸ್ ಐಲ್ಯಾಂಡ್‍ಗೆ ವಾಸಸ್ಥಳ ಬದಲಿಸಿ ಅಲ್ಲಿ ಐಷಾರಾಮಿ ಬಂಗಲೆಯನ್ನೂ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಪೌರತ್ವ ಪಡೆಯುವುದು ಹೇಗೆ?
    ಕೆರಿಬಿಯನ್ ದ್ವೀಪ ರಾಷ್ಟಗಳ ಪೌರತ್ವ ಪಡೆಯುವುದು ಅತ್ಯಂತ ಸರಳ ಪ್ರಕ್ರಿಯೆಯಾಗಿದೆ. ಈ ರಾಷ್ಟ್ರಗಳ ಪೌರತ್ವ ಪಡೆಯಲು ಅಲ್ಲಿನ ಶುಗರ್ ಇಂಡಸ್ಟ್ರಿ ಡೈವರ್ಸಿಫಿಕೇಷನ್ ಫೌಂಡೇಶನ್‍ಗೆ 1.6 ಕೋಟಿ ರೂ. ದೇಣಿಗೆ ಅಥವಾ ಪೂರ್ವ ನಿಗದಿತ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ 2.8 ಕೋಟಿ ರೂ. ಹಣ ಹೂಡಿಕೆ ಮಾಡಿದರೆ ಆ ದೇಶದ ಪೌರತ್ವ ಪಡೆಯಬಹುದು.

    ದ್ವೀಪ ರಾಷ್ಟ್ರದ ಪೌರತ್ವವೇ ಏಕೆ?
    ಭಾರತೀಯ ನಾಗರಿಕರಿಗೆ ಈ ರಾಷ್ಟ್ರದಲ್ಲಿ ಉಳಿದುಕೊಳ್ಳಲು 30 ದಿನಗಳ ವರೆಗೆ ಯಾವುದೇ ಪ್ರವಾಸಿ ವೀಸಾದ ಅಗತ್ಯವಿಲ್ಲ. ಈ ಎಲ್ಲಾ ನಿಯಮಗಳನ್ನು ಚೆನ್ನಾಗಿ ತಿಳಿದಿರುವ ನೀರವ್ ಪ್ರಸ್ತುತ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ ಈ ದ್ವೀಪ ರಾಷ್ಟ್ರ ಕೇವಲ 50 ಸಾವಿರ ಜನಸಂಖ್ಯೆ ಮಾತ್ರ ಹೊಂದಿದ್ದು, ಈ ರಾಷ್ಟ್ರಗಳ ಜೊತೆಗೆ ಭಾರತ ಯಾವುದೇ ಒಪ್ಪಂದ ಇದುವರೆಗೂ ಮಾಡಿಕೊಂಡಿಲ್ಲ. ಈ ಕಾರಣಗಳಿಂದ ಇದು ಸುರಕ್ಷಿತ ಸ್ಥಳವಾಗಿರುವ ಹಿನ್ನೆಲೆಯಲ್ಲಿ ನೀರವ್ ಕುಟುಂಬ ಇಲ್ಲಿಗೆ ವಾಸಸ್ಥಳ ಬದಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ನಿಯಮಗಳು ಏನು ಹೇಳುತ್ತೆ?
    ಕಾಮನ್‍ವೆಲ್ತ್ ಮತ್ತು ಸ್ನೇಹ ರಾಷ್ಟ್ರದ ಭಾಗವಾಗಿ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ಭಾರತದ ಜತೆ ಹಸ್ತಾಂತರ ಒಪ್ಪಂದ ಮಾಡಿಕೊಂಡಿಲ್ಲ. ಒಂದು ವೇಳೆ ಈ ದೇಶದ ಪೌರತ್ವ ಪಡೆದರೆ ನೀರವ್ ಅಲ್ಲಿಂದಲೇ ಸಿಂಗಾಪುರ ಮತ್ತು ಹಾಂಕಾಂಗ್‍ನಲ್ಲಿ ವಜ್ರಾಭರಣಗಳ ವಹಿವಾಟನ್ನು ಮತ್ತೆ ಆರಂಭಿಸಬಹುದಾಗಿದೆ. ಅಲ್ಲದೇ ಈ ದ್ವೀಪ ರಾಷ್ಟ್ರಗಳ ಹಕ್ಕನ್ನು ಪಡೆದಿರುವವರನ್ನ ಭಾರತಕ್ಕೆ ಹಸ್ತಾಂತರ ಮಾಡುವ ಹಕ್ಕನ್ನು ಸಿಂಗಾಪುರ ಹಾಗೂ ಹಾಂಕಾಂಗ್ ಹೊಂದಿಲ್ಲ. ಹೀಗಾಗಿ ಈ ದ್ವೀಪ ಸದ್ಯಕ್ಕೆ ಸುರಕ್ಷಿತ ತಾಣವೆನಿಸಿದೆ. ಇದನ್ನೂ ಓದಿ: ನೀರವ್ ಮೋದಿಗೆ ಸೇರಿದ 10,000ಕ್ಕೂ ಹೆಚ್ಚು ವಾಚ್‍ಗಳನ್ನ ಜಪ್ತಿ ಮಾಡಿದ ಇಡಿ

    ಜತಿನ್ ಮೆಹ್ತಾ ವರ್ಶನ್ 2:
    ಎಂಟು ವರ್ಷಗಳ ಹಿಂದೆ ಉದ್ಯಮಿ ಜತಿನ್ ಮೆಹ್ತಾ ಮಾಲೀಕತ್ವದ ವಿನ್‍ಸಮ್ ಡೈಮಂಡ್ಸ್ ಅಂಡ್ ಜ್ಯುವೆಲ್ಲರಿ ಕಂಪನಿ ಎಸ್‍ಬಿಐ ಹಾಗೂ ಬ್ಯಾಂಕ್ ಆಫ್ ಬರೋಡಾಗೆ ವಂಚನೆ ಮಾಡಿತ್ತು. ಸುಮಾರು 4,686 ಕೋಟಿ ರೂ. ವಂಚಿಸಿದ್ದ ಜತಿನ್ ಮೆಹ್ತಾ 2013 ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದರು. ಅವರು ಸಹ ಸೇಂಟ್ ಕಿಟ್ಸ್ ಮತ್ತು ನೇವಿಸ್ ರಾಷ್ಟ್ರದ ಪೌರತ್ವ ಪಡೆದು ರಕ್ಷಣೆ ಪಡೆದಿದ್ದರು. ಸರ್ಕಾರ ಈ ಪ್ರಕರಣದಲ್ಲಿ ಆರೋಪಿಗಳ ಹಸ್ತಾಂತರಕ್ಕೆ ಸತತ ಪ್ರಯತ್ನ ನಡೆಸುತ್ತಿದ್ದರೂ ಇದುವರೆಗೆ ಅವರನ್ನು ಭಾರತದ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ.

    ಸೂರತ್‍ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಉದ್ಯಮಿ ಜತಿನ್ ಮೆಹ್ತಾ ಗೆ ಸಂಬಂಧಿಸಿದ ಆಸ್ತಿಯನ್ನು ವಶಕ್ಕೆ ಪಡೆದ ನಂತರ ಕೇವಲ 120 ಕೋಟಿ ರೂ. ಹಣವನ್ನಷ್ಟೇ ಪಡೆಯಲು ಸಾಧ್ಯವಾಯಿತು. ಪ್ರಸ್ತುತ ನೀರವ್ ಮೋದಿ ಸಹ ಇದೇ ಹಾದಿಯನ್ನು ತುಳಿದಿದ್ದು, ಒಂದು ವೇಳೆ ಕೆರಿಬಿಯನ್ ದ್ವೀಪ ರಾಷ್ಟ್ರಗಳ ಪೌರತ್ವ ಪಡೆದರೆ ಮತ್ತೆ ಭಾರತಕ್ಕೆ ಕರೆತರುವುದು ಕಷ್ಟ ಸಾಧ್ಯವಾಗಲಿದೆ. ಇದನ್ನೂ ಓದಿ: ನೀರವ್ ಮೋದಿಗೆ ಬೈ ಬೈ ಹೇಳಿದ ಪ್ರಿಯಾಂಕಾ ಚೋಪ್ರಾ