Tag: ಪೌರತ್ವ ವಿಧೇಯಕ ತಿದ್ದುಪಡಿ

  • ಪೌರತ್ವ ವಿಧೇಯಕ ತಿದ್ದುಪಡಿ- ಖುಷಿಯಾದ ರಾಯಚೂರಿನ ಬಾಂಗ್ಲಾ ವಲಸಿಗರು

    ಪೌರತ್ವ ವಿಧೇಯಕ ತಿದ್ದುಪಡಿ- ಖುಷಿಯಾದ ರಾಯಚೂರಿನ ಬಾಂಗ್ಲಾ ವಲಸಿಗರು

    ರಾಯಚೂರು: ಇಡೀ ದೇಶದಲ್ಲಿ ಪೌರತ್ವ ವಿಧೇಯಕ ತಿದ್ದುಪಡಿ ಬಗ್ಗೆ ಚರ್ಚೆ ನಡೆಯುತ್ತಿದೆ. ಪರ-ವಿರೋಧಗಳೇನೆ ಇದ್ರೂ ಮಸೂದೆಯ ಲಾಭ ಪಡೆಯುತ್ತಿರುವ ರಾಯಚೂರಿನ ಸಿಂಧನೂರು ತಾಲೂಕಿನಲ್ಲಿರುವ ಬಾಂಗ್ಲಾ ವಲಸಿಗರು ಪ್ರತಿನಿತ್ಯ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸುಮಾರು ವರ್ಷಗಳಿಂದ ಪೌರತ್ವಯಿಲ್ಲದೆ ಸೌಲಭ್ಯ ವಂಚಿರಾಗಿದ್ದ ಸಾವಿರಾರು ಜನ ಈಗ ಖುಷಿಯಾಗಿದ್ದಾರೆ.

    ಇಲ್ಲಿನ ಐದು ನಿರಾಶ್ರಿತ ಕ್ಯಾಂಪ್ ಗಳಲ್ಲಿರುವ 15 ಸಾವಿರಕ್ಕೂ ಹೆಚ್ಚು ಜನ ಬಾಂಗ್ಲಾದೇಶದಿಂದ ವಲಸೆ ಬಂದವರು. ಕೇಂದ್ರ ಸರ್ಕಾರದ ಪೌರತ್ವ ವಿಧೇಯಕ ತಿದ್ದುಪಡಿ ಅಂಗೀಕಾರವಾಗಿರುವುದರಿಂದ ಇವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಭಾರತ ಬಾಂಗ್ಲಾ ದೇಶ ವಿಭಜನೆ ಬಳಿಕ 1971 ರಲ್ಲಿ ಭಾರತಕ್ಕೆ ಬಂದ ವಲಸಿಗರಿಗೆ ಅಂದಿನ ಸರ್ಕಾರ ಭಾರತ ಪೌರತ್ವವನ್ನ ನೀಡಿ ಸಿಂಧನೂರು ತಾಲೂಕಿನಲ್ಲಿ ಸೌಲಭ್ಯಗಳನ್ನು ಒದಗಿಸಿತ್ತು. ಆದರೆ ಪುನರ್ವಸತಿ ಯೋಜನೆ ಮುಗಿದ ಮೇಲೆ ಬಂದ ಸಾವಿರಾರು ಜನ ವಲಸಿಗರಿಗೆ ಇದುವರೆಗೆ ದೇಶದ ಪೌರತ್ವ ಕೊಟ್ಟಿಲ್ಲ. ಹೀಗಾಗಿ ಇಲ್ಲಿನ ಸುಮಾರು 5 ಸಾವಿರ ಜನ ದೇಶದ ಸೌಲಭ್ಯಗಳಿಗಾಗಿ ಹೋರಾಟ ನಡೆಸಿದ್ದರು. ಆದ್ರೆ ಈಗ ವಲಸಿಗರಿಗೆ ಭಾರತ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ಸಂತೋಷಗೊಂಡಿದ್ದಾರೆ.

    ಭಾರತ ವಿಭಜನೆಯಾದಾಗ ಬಾಂಗ್ಲಾದಲ್ಲಿದ್ದ ಹಿಂದೂಗಳನ್ನು ಬಾಂಗ್ಲಾದೇಶದಿಂದ ಹೊರ ಹಾಕಲಾಯಿತು. ಈ ವೇಳೆ ಅಂದಿನ ಪ್ರಧಾನ ಮಂತ್ರಿಗಳು ಸಿಂಧನೂರು ತಾಲೂಕಿನಲ್ಲಿ ವಲಸಿಗರಿಗೆ 3 ಎಕರೆ ಭೂಮಿ ಹಾಗು ನಿವೇಶನ, ಅವರು ಸೆಟ್ಲ್ ಆಗುವವರಿಗೂ ಊಟ ನೀಡಿತ್ತು. ನಂತರದಲ್ಲಿ ಬಂದವರು ಅನ್ ಸೆಟ್ಲರ್ ಗಳಾಗಿ ಉಳಿದಿದ್ದರು. ಸುಮಾರು 40 ವರ್ಷಗಳಿಂದ ಪೌರತ್ವವೇ ಇಲ್ಲದೆ ವಾಸಿಸುತ್ತಿದ್ದ ಈ ಜನ ಎನ್‍ಆರ್ ಸಿ ಕಾಯ್ದೆ ಜಾರಿಯಾದ್ರೆ ನಮ್ಮನ್ನು ದೇಶದಿಂದ ಹೊರ ಹಾಕುತ್ತಾರೆ ಅನ್ನೋ ಭೀತಿಯಲ್ಲಿ ಬದುಕುತ್ತಿದ್ದರು. ಈಗ ಕೇಂದ್ರ ಸರ್ಕಾರದ ನಿರ್ಧಾರದಿಂದ ನೆಲೆ ಕಂಡಂತಾಗಿದೆ ಅಂತ ಬಾಂಗ್ಲಾ ವಲಸಿಗ ಕಲ್ಯಾಣಕುಮಾರ್ ಖುಷಿ ವ್ಯಕ್ತಪಡಿಸಿದ್ದಾರೆ.

    ಭಾರತದಲ್ಲಿದ್ದರೂ ಭಾರತೀಯರಾಗದೆ ಕಳ್ಳರಂತೆ ಬದುಕುತ್ತಿದ್ದವರು ಈಗ ಭಾರತೀಯ ಪ್ರಜೆಗಳಾಗುತ್ತಿದ್ದಾರೆ. ಏನೇ ಗೊಂದಲಗಳು, ಸಮಸ್ಯೆಗಳಿದ್ದರು ಸರಿಪಡಿಸಿ ಭಾರತೀಯ ಪೌರತ್ವ ಪ್ರಮಾಣ ಪತ್ರ ಶೀಘ್ರದಲ್ಲಿ ನೀಡಬೇಕು ಅಂತ ಬಾಂಗ್ಲಾ ವಲಸಿಗರು ಮನವಿ ಮಾಡಿಕೊಳ್ಳುತ್ತಿದ್ದಾರೆ.