Tag: ಪೌರತ್ವ ಮಸೂದೆ

  • ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ ವಿದ್ಯಾರ್ಥಿಗಳಿಗೆ ಮಂಗ್ಳೂರಲ್ಲಿ ಲಾಠಿಚಾರ್ಚ್

    ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ ವಿದ್ಯಾರ್ಥಿಗಳಿಗೆ ಮಂಗ್ಳೂರಲ್ಲಿ ಲಾಠಿಚಾರ್ಚ್

    ಮಂಗಳೂರು: ದೇಶದೆಲ್ಲೆಡೆ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಬಿಸಿ ರಾಜ್ಯದ ಕರಾವಳಿಗೂ ತಟ್ಟಿದೆ. ಮಸೂದೆಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಮಂಗಳೂರಿನಲ್ಲಿ ರಸ್ತೆ ತಡೆ ಯತ್ನ ನಡೆದಿದ್ದು ಪೊಲೀಸರು ವಿದ್ಯಾರ್ಥಿಗಳು ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ.

    ನಗರದ ಬಲ್ಮಠ ಜಂಕ್ಷನ್ ನಲ್ಲಿ ಬಲವಂತವಾಗಿ ರಸ್ತೆ ಬ್ಲಾಕ್ ಮಾಡಲು ಯತ್ನಿಸಿದ ವಿದ್ಯಾರ್ಥಿಗಳು ಹಾಗೂ ಯುವಕರ ಪ್ರತಿಭಟನೆಯನ್ನು ಪೊಲೀಸರು ತಡೆಯಲು ಯತ್ನಿಸಿದರು. ಈ ವೇಳೆ ರಸ್ತೆಯಲ್ಲೇ ಮಲಗಿ ಪೊಲೀಸರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಬಂಧಿಸಲು ಮುಂದಾದಾಗ ಪೊಲೀಸರ ಕಾರ್ಯಾಚರಣೆಗೆ ಅಡ್ಡಿ ಪಡಿಸಿದ್ದಾರೆ.

    ಪ್ರತಿಭಟನಾಕಾರರು ರಸ್ತೆಯನ್ನು ಬಿಟ್ಟು ಮೇಲೆ ಏಳದೆ ಸಂಚಾರಕ್ಕೆ ತೊಂದರೆ ಮಾಡಿದ ಹಿನ್ನಲೆಯ ಕೊನೆಗೆ ಲಾಠಿಚಾರ್ಜ್ ಮಾಡುತ್ತಲೇ ರಸ್ತೆಗಂಟಿ ಕುಳಿತಿದ್ದ ಯುವಕರನ್ನು ಎತ್ತಿ ಪೊಲೀಸ್ ವಾಹನಕ್ಕೆ ತುಂಬಿಸಿದ್ದಾರೆ. ಯುವಕರು ಘೋಷಣೆ ಕೂಗುತ್ತಲೇ ಪೊಲೀಸರ ಜೊತೆ ಜಟಾಪಟಿ ನಡೆಸಿದ್ದಾರೆ. 50ರಷ್ಟು ಯುವಕರನ್ನು ಬಂಧಿಸಿದ್ದು ಸ್ಥಳದಲ್ಲಿದ್ದ ಇತರೇ ಮುಸ್ಲಿಂ ಯುವಕರು ಪೊಲೀಸರನ್ನು ಸುತ್ತುವರಿದಿದ್ದಲ್ಲದೆ ಪೊಲೀಸರ ಕ್ರಮವನ್ನು ಪ್ರಶ್ನೆ ಮಾಡಲಾರಂಭಿಸಿದ್ದಾರೆ.

    ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿದ್ದರಿಂದ ಉದ್ರಿಕ್ತ ಗುಂಪನ್ನು ಚದುರಿಸಿದ್ದಾರೆ. ಪ್ರತಿಭಟನಾಕಾರರು ಹಿಡಿದಿದ್ದ ಭಿತ್ತಿಪತ್ರ, ಪತಾಕೆಗಳನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆ ಮಾಡಲು ಅವಕಾಶ ಇಲ್ಲದಿದ್ದರೂ ಪ್ರತಿಭಟನಾಕಾರರು ಯಾವುದೇ ಅನುಮತಿ ಪಡೆಯದೆ ಪ್ರತಿಭಟಿಸಿ ಸಂಚಾರಕ್ಕೆ ಸಮಸ್ಯೆ ಮಾಡಿದ್ದು ಪೊಲೀಸರ ಆಕ್ರೋಶಕ್ಕೆ ಕಾರಣವಾಗಿತ್ತು.

  • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ

    ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ

    ಮಡಿಕೇರಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕೊಡಗು ಜಿಲ್ಲೆಯ ವಿರಾಜಪೇಟೆ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

    ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಇತ್ತೀಚೆಗೆ ಅಂಗೀಕೃತವಾದ ಪೌರತ್ವ ತಿದ್ದುಪಡಿ ಮಸೂದೆ ನಮ್ಮ ದೇಶದ ನೈತಿಕ. ಸಾಂವಿಧಾನಿಕ ಸ್ಫೂರ್ತಿ ಮತ್ತು ಜಾತ್ಯಾತೀತ ಪರಂಪರೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

    ಪ್ರಗತಿಪರ ಚಿಂತಕರು ಮತ್ತು ವಿಚಾರವಾದಿಗಳಾದ ವಿ.ಪಿ ಶಶಿಧರ್ ಮಾತನಾಡಿ, ಧರ್ಮದ ಆಧಾರದಲ್ಲಿ ಪೌರತ್ವನ್ನು ನೀಡುವುದು ಸಂವಿಧಾನ ಬಾಹಿರ ಅಲ್ಲದೆ ಈ ಮಸೂದೆಯಿಂದ ಮುಸ್ಲಿಮರನ್ನು ಹೊರಗೆ ಇಡಲಾಗಿದೆ. ಮುಸ್ಲಿಮರನ್ನು ಭಾರತದಿಂದ ಹೊರದೂಡುವ ಸಲುವಾಗಿಯೇ ಈ ಮಸೂದೆ ತರಲಾಗಿದೆ. ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಹೊರ ಬರುತ್ತಿರುವ ಅಲ್ಪಸಂಖ್ಯಾತರ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಬಾರದು. ನಾವು ಈ ಮಸೂದೆಯನ್ನು ಬಲವಾಗಿ ವಿರೋಧಿಸುವುದರ ಮೂಲಕ ಕೋಮು ಸೌಹಾರ್ದದ ವಾತಾವರಣ ವಿಶ್ವಾಸ ನ್ಯಾಯ ಮತ್ತು ಕಾನೂನಿನ ಆಡಳಿತವನ್ನು ಪ್ರೋತ್ಸಾಹಿಸಿ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಹಕರಿಸಿ ಎಂದು ಹೇಳಿದರು.

    ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಪ್ರಧಾ ನರೇಂದ್ರ ಮೋದಿಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

  • ಪೌರತ್ವ ತಿದ್ದುಪಡಿ- ಉಡುಪಿಯ ಮಸೀದಿಗಳಲ್ಲಿ ಸರಣಿ ಪ್ರತಿಭಟನೆ

    ಪೌರತ್ವ ತಿದ್ದುಪಡಿ- ಉಡುಪಿಯ ಮಸೀದಿಗಳಲ್ಲಿ ಸರಣಿ ಪ್ರತಿಭಟನೆ

    ಉಡುಪಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಉಡುಪಿಯ ಹಲವು ಮಸೀದಿಗಳಲ್ಲಿ ಪ್ರತಿಭಟನೆ ನಡೆಯಿತು. ಮಧ್ಯಾಹ್ನದ ಸಾಮೂಹಿಕ ನಮಾಜಿನ ಬಳಿಕ ಮುಸ್ಲಿಮರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ಕ್ರಮವನ್ನು ಖಂಡಿಸಿದರು.

    ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಉಡುಪಿ ಜಾಮಿಯಾ ಮಸೀದಿ, ದೊಡ್ಡಣಗುಡ್ಡೆ ಮಸೀದಿ, ನೇಜಾರು ಮತ್ತಿತರೆಡೆಗಳಲ್ಲಿ ನಮಾಜಿನ ಬಳಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಮಸೂದೆ ದೇಶದ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ದೇಶದ ಜಾತ್ಯಾತೀತ ಹಂದರವನ್ನು ನಾಶ ಮಾಡುವ ಮಸೂದೆಯನ್ನು ಯಾವುದೇ ಮುಸ್ಲಿಮರೂ ಬೆಂಬಲಿಸುವುದಿಲ್ಲ ಎಂಬ ಧಿಕ್ಕಾರ ಕೇಳಿಬಂತು. ಇದನ್ನೂ ಓದಿ: ರಾಜ್ಯಸಭೆಯಲ್ಲಿಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ

    ಪ್ರಜೆಗಳನ್ನು ಧರ್ಮ, ನಂಬಿಕೆಗಳ ನೆಲೆಯಲ್ಲಿ ವಿಭಜಿಸುವ ಮಸೂದೆಗೆ ನಮ್ಮ ವಿರೋಧ ಇದೆ. ಇಂದು ಸಾಂಕೇತಿಕ ಪ್ರತಿಭಟನೆಯಷ್ಟೇ ಮಾಡುತ್ತಿದ್ದೇವೆ. ಈ ವಿವಾದಾತ್ಮಕ ಮಸೂದೆ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ಮುಸ್ಲಿಮರು ಸರ್ಕಾರಕ್ಕೆ ನೀಡಿದರು. ಇದನ್ನೂ ಓದಿ: ನಾಗರಿಕತ್ವ ಮಸೂದೆಗೆ ರಾಷ್ಟ್ರಪತಿ ಸಹಿ, ದೇಶಾದ್ಯಂತ ಜಾರಿ

  • 6 ಧರ್ಮದ ವಲಸಿಗರಿಗೆ ಭಾರತೀಯ ಪೌರತ್ವ – ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ

    6 ಧರ್ಮದ ವಲಸಿಗರಿಗೆ ಭಾರತೀಯ ಪೌರತ್ವ – ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ

    ನವದೆಹಲಿ: ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ಥಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

    ಈ ದೇಶಗಳಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್, ಜೈನರು, ಬೌದ್ಧರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯ ಕಿರುಕುಳ ಅನುಭವಿಸುತ್ತಿದೆ. ಹೀಗಾಗಿ ಇವರಿಗೆ ಭಾರತದ ಪೌರತ್ವ ನೀಡುವ ಅವಶ್ಯಕತೆ ಇದೆ ಎನ್ನುವುದು ಕೇಂದ್ರದ ವಾದ. ಆದರೆ ಮುಸ್ಲಿಮರನ್ನು ಹೊರಗಡೆ ಇಟ್ಟಿರುವುದು ಸಂವಿಧಾನ ವಿರೋಧಿ ನಡೆ ಎನ್ನುವುದು ವಿಪಕ್ಷಗಳ ಪ್ರತಿವಾದ.

    ಭಾರತದ ಪೌರತ್ವ ಪಡೆಯಬೇಕಾದರೆ 12 ವರ್ಷಕ್ಕಿಂತ ಹೆಚ್ಚು ಕಾಲ ದೇಶದಲ್ಲಿ ನೆಲೆಸಿರಬೇಕು ಎನ್ನುವ ನಿಯಮವನ್ನು 6 ವರ್ಷಕ್ಕೆ ಈ ಮಸೂದೆ ಇಳಿಸಿದೆ. ಸೂಕ್ತ ದಾಖಲೆಯ ಅಗತ್ಯತೆಯೂ ಇಲ್ಲದಿದ್ದರೂ ಕೂಡ ಪೌರತ್ವ ಸಿಗಲಿದೆ.

    2016ರಲ್ಲಿ ಈ ಮಸೂದೆ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಈ ವೇಳೆ ಕೋಲಾಹಲ ನಡೆದು ಜಂಟಿ ಸಂಸದೀಯ ಸಮಿತಿ ಪರಾಮರ್ಶೆಗೆ ಹೋಗಿತ್ತು. ಈ ಸಮಿತಿ ಈ ವರ್ಷದ ಜನವರಿಯಲ್ಲಿ ವರದಿ ನೀಡಿದ ಬಳಿಕ ಮಸೂದೆ ಮಂಡನೆಯಾಗಿತ್ತು. ಲೋಕಸಭೆಯಲ್ಲಿ ಪಾಸ್ ಆದರೂ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಮಸೂದೆ ಪಾಸ್ ಆಗಿರಲಿಲ್ಲ. ಈ ಸಂದರ್ಭದಲ್ಲಿ 16ನೇ ಲೋಕಸಭೆಯ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಈಗ ತಿದ್ದುಪಡಿ ಮಾಡಿ ಮಂದಿನ ಮಂಗಳವಾರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತಿದೆ.

    ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವಷ್ಟೇ ಮಹತ್ವದ ಮಸೂದೆ ಇದಾಗಿದೆ. ಹೀಗಾಗಿ ಎಲ್ಲ ಸಂಸದರು ಸದನದಲ್ಲಿ ಹಾಜರಿರಬೇಕು ಎಂದು ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಜೆಪಿ ಸಂಸದರಿಗೆ ಸೂಚಿಸಿದ್ದಾರೆ.

    ಈ ಮಸೂದೆಯಲ್ಲಿ ಮುಸ್ಲಿಮರನ್ನು ಹೊರಗಿಟ್ಟಿರುವುದು ಸಂವಿಧಾನ ವಿರೋಧಿ ಕ್ರಮ ಎಂದು ವಿಪಕ್ಷಗಳು ಆರೋಪಿಸಿವೆ. ಈ ಮಧ್ಯೆ, ಅಸ್ಸಾಂನಲ್ಲಿ ವಿರೋಧ, ಪ್ರತಿಭಟನೆ ವ್ಯಕ್ತವಾಗಿದೆ. ಮತ್ತಷ್ಟು ವಲಸಿಗರಿಗೆ ಆಶ್ರ ನೀಡೋಕೆ ಸಾಧ್ಯವೇ ಇಲ್ಲ. ಕೇಂದ್ರ ಸರ್ಕಾರ ಈ ಕ್ಷಣವೇ ಬಿಲ್ ಹಿಂಪಡೆಯಬೇಕು ಎಂದು ಅಮಿತ್‍ಶಾ, ಸಿಎಂ ಸರ್ವಾನಂದ ಸೋನಾವಲ್ ಪ್ರತಿಕೃತಿ ದಹಿಸಲಾಗಿದೆ.