Tag: ಪೌರತ್ವ ತಿದ್ದುಪಡೆ ಕಾಯ್ದೆ

  • ಭಾನುವಾರದಿಂದ ಸಿಲಿಕಾನ್ ಸಿಟಿಯಲ್ಲಿ ನಿಷೇಧಾಜ್ಞೆ ಇರೋದಿಲ್ಲ

    ಭಾನುವಾರದಿಂದ ಸಿಲಿಕಾನ್ ಸಿಟಿಯಲ್ಲಿ ನಿಷೇಧಾಜ್ಞೆ ಇರೋದಿಲ್ಲ

    ಬೆಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯಬಹುದು ಎಂದು ನಗರದಲ್ಲಿ ಹೇರಲಾಗಿದ್ದ 144 ಸೆಕ್ಷನ್ ಇಂದು ರಾತ್ರಿ 12 ಗಂಟೆಗೆ ಮುಕ್ತಾಯವಾಗಲಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಇದ್ದ ನಿಷೇಧಾಜ್ಞೆ ಇಂದಿಗೆ ಕೊನೆಯಾಗಲಿದ್ದು, ನಾಳೆಯಿಂದ ಮುಂದುವರಿಸುವುದಿಲ್ಲ. ಡಿಸೆಂಬರ್ 19ರ ಬೆಳಗಿನ ಜಾವದಿಂದ ನಿಷೇಧಾಜ್ಞೆ ಹೇರಲಾಗಿತ್ತು. ಈ ಮೂರು ದಿನಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಿಳಿಸಿದ್ದಾರೆ.

    ನಗರದಲ್ಲಿ ಕೆಲವೊಂದಷ್ಟು ಪ್ರತಿಭಟನೆಗಳನ್ನು ಹೊರತು ಪಡಿಸಿದರೆ ಯಾವುದೇ ಸಾರ್ವಜನಿಕ ಆಸ್ತಿ ಪಾಸ್ತಿ, ಕಾನೂನು ಸುವ್ಯವಸ್ಥೆಗೆ ಭಂಗವಾಗಿಲ್ಲ. ಇದೇ ತಿಂಗಳ 23ರಂದು ಪುಲಿಕೇಶಿನಗರದ ಖುದೂಸ್ ಮಸೀದಿಯಲ್ಲಿ ಮುಸಲ್ಮಾನ ಬಂಧುಗಳು ಸಭೆ ಸೇರಿ ಪೌರತ್ವ ತಿದ್ದುಪಡೆ ಕಾಯ್ದೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಅವತ್ತು ಒಂದಷ್ಟು ಭದ್ರತೆ ಹಾಗೂ ಸಭೆಗೆ ಬರುವವರಿಗೆ ಅನುಕೂಲವಾಗುವಂತೆ ಟ್ರಾಫಿಕ್ ವ್ಯವಸ್ಥೆಯನ್ನು ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆಗಳಿಗೆ ಅವಕಾಶ ಕೊಡಬೇಕೋ, ಬೇಡಮೋ ಎನ್ನುವುದನ್ನು ಆಯಾ ಪ್ರದೇಶದ ಡಿಸಿಪಿಗಳು ನಿರ್ಧರಿಸುತ್ತಾರೆ. ಒಂದು ವೇಳೆ ಪರಿಸ್ಥಿತಿ ಕೈ ಮೀರುವ ಸಂದರ್ಭ ಬಂದರೆ, ಮತ್ತೆ 144 ಸೆಕ್ಷನ್ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.

    ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಕೇಳಿಕೆ ನೀಡಿದ್ದಾರೆ. ಅಂಥವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

  • ಬೆಂಗ್ಳೂರು ಸೇರಿದಂತೆ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ

    ಬೆಂಗ್ಳೂರು ಸೇರಿದಂತೆ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ

    ಬೆಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ಜಾರಿಯನನ್ನು ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗುರುವಾರದಿಂದ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

    ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಬೆಳಗಾವಿ ಸೇರಿದಂತೆ ರಾಜ್ಯದ ಆಯಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು, ಪ್ರತಿಭಟನೆಗೆ ನಾವು ಅವಕಾಶ ನೀಡಿಲ್ಲ. ಗುರುವಾರ ಬೆಳಗ್ಗೆ 6 ಗಂಟೆಯಿಂದ ಮೂರು ದಿನಗಳ ಕಾಲ (ಡಿಸೆಂಬರ್ 21ವರೆಗೆ) ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಶಾಲಾ ಕಾಲೇಜುಗಳ ತರಗತಿಗಳು ಎಂದಿನಂತೆ ನಡೆಯುತ್ತವೆ. ಜೊತೆಗೆ ಹೂ ಮಾರ್ಕೆಟ್, ಹಣ್ಣು ತರಕಾರಿ ಮಾರುಕಟ್ಟೆಗಳಿಗೂ ಯಾವುದೇ ನಿರ್ಬಂಧವಿಲ್ಲ. ಬಿಎಂಟಿಸಿ, ಕೆಎಸ್‍ಆರ್ ಟಿಸಿಗೆ ನಿರ್ಬಂಧವಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ನಗರದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಎಲ್ಲಾ ಡಿಸಿಪಿಗಳಿಗೆ ಹೆಚ್ಚಿನ ಕ್ಯಾಮೆರಾಗಳನ್ನ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಸಾರ್ವಜನರಿಗೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಬೆಂಗಳೂರು ನಗರದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಸಿಆರ್ ಪಿಸಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸಿಎಎ ಪರ ಅಥವಾ ವಿರೋಧ ಎರಡಕ್ಕೂ ಅವಕಾಶವಿಲ್ಲ ಎಂದು ತಿಳಿಸಿದರು.

    300ಕ್ಕೂ ಹೆಚ್ಚು ಸಂಘಟನೆಗಳು ಪರ ವಿರೋಧ ಪ್ರತಿಭಟನೆಗೆ ಪರವಾನಗಿ ಕೇಳಿದ್ದಾರೆ. ಯಾರಿಗೂ ಯಾವುದೇ ರೀತಿಯ ಪರವಾನಗಿ ಕೊಟ್ಟಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಯಾರಿಗೂ ಪರ್ಮಿಷನ್ ಕೊಟ್ಟಿಲ್ಲ ಎಂದರು.

    ಮೈಸೂರು:
    ಮೈಸೂರಿನಲ್ಲಿ ಮೂರು ದಿನಗಳ ಕಾಲ 144 ಸೆಕ್ಷನ್ ಜಾರಿಯಾಗಿದೆ. ಡಿಸೆಂಬರ್ 19ರ ಬೆಳಗ್ಗೆ 6ರಿಂದ ಡಿಸೆಂಬರ್ 21ರ ಮಧ್ಯಾರಾತ್ರಿ 12ರವರೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಯಾವುದೇ ಪ್ರತಿಭಟನೆ, ಧರಣಿ, ಮೆರವಣಿಗೆ, ರ‍್ಯಾಲಿ ಮಾಡದಂತೆ ಆದೇಶ ಮಾಡಲಾಗಿದೆ. ಕೆಲ ಸಂಘಟನೆಗಳು ಬಂದ್ ಮಾಡುವ ಮುನ್ಸೂಚನೆಯಲ್ಲಿ ಶಾಂತಿ, ಕೋಮು ಸೌರ್ಹಾದತೆಗೆ ಭಂಗ ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಂಡು 3 ದಿನದ ನಿಷೇಧಾಜ್ಞೆಯ ಸುತ್ತೋಲೆ ಮೈಸೂರು ನಗರ ಪೋಲೀಸ್ ಆಯುಕ್ತರಾದ ಕೆ.ಟಿ.ಬಾಲಕೃಷ್ಣ ಹೊರಡಿಸಿದ್ದಾರೆ.

    ಆನೇಕಲ್:
    ಆನೇಕಲ್ ತಾಲೂಕಿನಾದ್ಯಂತ ಇಂದು ಮಧ್ಯರಾತ್ರಿ 12ರಿಂದ ಗುರುವಾರ ಮಧ್ಯರಾತ್ರಿ 12ವರೆಗೂ 144 ಸೆಕ್ಷನ್ ಜಾರಿಗೊಳಿಸಿ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಡಿ ಚನ್ನಣ್ಣನವರ್ ಆದೇಶ ಹೊರಡಿಸಿದ್ದಾರೆ. ಆನೇಕಲ್ ಪಟ್ಟಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ನಿಷೇಧಾಜ್ಞೆ ಹಿನ್ನೆಲೇ ಯಾವುದೇ ಪ್ರತಿಭಟನೆ ಹಿಂಸಾ ಕೃತ್ಯದಲ್ಲಿ ತೊಡಗದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

    ಬಾಗಲಕೋಟೆ:
    ಬಾಗಲಕೋಟೆಯಲ್ಲಿ ಬುಧವಾರ ರಾತ್ರಿಯಿಂದಲೇ ಅನ್ವಯವಾಗುವಂತೆ ಡಿಸೆಂಬರ್ 22ರ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ವಿವಿಧ ಸಂಘಟನೆ, ರಾಜಕೀಯ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿಗೆ ಭಂಗ ಉಂಟಾಗದಂತೆ ಮುಂಜಾಗ್ರತೆಗಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಉಡುಪಿ:
    ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಭಾರತ್ ಬಂದ್, ಪ್ರತಿಭಟನೆ ಸಾಧ್ಯತೆ ಇದೆ. ಹೀಗಾಗಿ ಉಡುಪಿಯಲ್ಲೂ ಗುರುವಾರದಿಂದ ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 21ರ ರಾತ್ರಿ 11 ಗಂಟೆವರೆಗೂ ಸೆಕ್ಷನ್ 144 ಜಾರಿಗೊಳಿಸಿ ಉಡುಪಿ ಜಿಲ್ಲಾಧಿಜಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

    ಚಿತ್ರದುರ್ಗ/ವಿಜಯಪುರ/ಕಾರವರ:
    ಚಿತ್ರದುರ್ಗದಲ್ಲಿ ಗುರುವಾರ ಬೆಳಗ್ಗೆ 6ರಿಂದ 21ರ ಸಂಜೆ 6ರವರೆಗೆ 144 ಸೆಕ್ಷನ್ ಜಾರಿಗೊಳಿಸಿ ಎಸ್‍ಪಿ ಡಾ.ಅರುಣ್ ಆದೇಶ ಹೊರಡಿಸಿದ್ದಾರೆ. ಬಿಜಾಪುರದಲ್ಲಿ ಮೂರು ದಿನ ಹಾಗೂ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಒಂದು ದಿನ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

    ಕಲಬುರಗಿ:
    ಕಲಬುರಗಿ ಬಂದ್ ಕರೆ ಹಿನ್ನೆಲೆಯಲ್ಲಿ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜೊತೆಗೆ ಪ್ರತಿಭಟನೆ ಮುಂಜಾಗ್ರತಾ ಕ್ರಮವಾಗಿ ಗುರುವಾರ ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 21ರವರೆಗೆ ನಗರ ಹಾಗೂ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಆದೇಶ ಹೊರಡಿಸಿದ್ದಾರೆ.

    ಹಾವೇರಿ/ಧಾರವಾಡ:
    ಹಾವೇರಿ ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಂದ ಡಿಸೆಂಬರ್ 21ರ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಕೃಷ್ಣ ಬಾಜಪೇಯಿ ಆದೇಶ ಹೊರಡಿಸಿದ್ದಾರೆ. ಇತ್ತ ಧಾರವಾಡದಲ್ಲೂ 144 ಸೆಕ್ಷನ್ ಜಾರಿಯಾದ ಹಿನ್ನೆಲೆಯಲ್ಲಿ ಅಂಜುಮನ್ ಸಂಸ್ಥೆಯು ಪ್ರತಿಭಟನೆಯನ್ನು ಮುಂದೂಡಿದೆ.

    ಮಂಡ್ಯ:
    ಮಂಡ್ಯ ಜಿಲ್ಲೆಯಾದ್ಯಂತ ಗುರುವಾರದಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಡಿಸೆಂಬರ್ 19ರ ಬೆಳಗ್ಗೆ 6ರಿಂದ ಡಿಸೆಂಬರ್ 21ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದ್ದು, ಪ್ರತಿಭಟನೆ, ಮೆರವಣಿಗೆ, ಜಾಥಾ, ಬಹಿರಂಗ ಸಭೆಗಳಿಗೆ ನಿಷೇಧ ಹೇರಲಾಗಿದೆ.