ಧಾರವಾಡ: ನಗರದ ಕೆಎಂಎಫ್ ಅಧಿಕಾರಿಯೊಬ್ಬರು ಕೊರೊನಾ ಸಂಕಷ್ಟದಲ್ಲೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಕೆಲಸವನ್ನು ಮೆಚ್ಚಿ, ಅವರ ಪಾದ ಪೂಜೆಯನ್ನ ಮಾಡಿ ಗೌರವ ಸಲ್ಲಿಸಿದ್ದಾರೆ.
ಧಾರವಾಡ ನಗರದ ಟೋಲ್‍ನಾಕಾದಲ್ಲಿ ಪ್ರತಿ ದಿನ 30ಕ್ಕೂ ಹೆಚ್ಚು ಪೌರಕಾರ್ಮಿಕರು ಈ ಕೊರೊನಾ ಸಮಯದಲ್ಲಿ ಕೂಡಾ ಬೆಳಗಿನ ಜಾವವೇ ಬಂದು ಕಸ ತೆಗೆದುಕೊಂಡು ಹೋಗುವುದು, ರಸ್ತೆ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿರುತ್ತಾರೆ. ಇದನ್ನ ಧಾರವಾಡ ಕೆಎಂಎಫ್‍ನ ಟೆಕ್ನಿಕಲ್ ಆಫಿಸರ್ ನಾಗಪ್ಪ ಅರಳೋದ ಅವರು ಕಳೆದ ಒಂದು ತಿಂಗಳಿಂದ ಗಮನಿಸುತ್ತಾ ಬಂದಿದ್ದರು. ಹೀಗಾಗಿ ಇಂದು ಈ ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಗೆ ನಾಗಪ್ಪ ಅವರು ಪೌರಕಾರ್ಮಿಕರ ಪಾದ ಪೂಜೆಯನ್ನ ಮಾಡಿ ಗೌರವ ಸಲ್ಲಿಸಿದ್ದಾರೆ.
ವಿಜಯಪೂರದ ಇಂಚಗೇರಿ ಮಠದ ಭಕ್ತರು ಆಗಿರುವ ನಾಗಪ್ಪ, ಪ್ರತಿ ದಿನ ಮೂರು ಹೊತ್ತು ಧ್ಯಾನ ಮಾಡುತ್ತಿದ್ದಾರೆ. ಇಂಚಗೇರಿ ಮಠದ ಶ್ರೀಗಳು ಹೇಳಿದಂತೆ ಇಂದು ನಾಗಪ್ಪ ಅವರು ಈ ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿದ್ದಷ್ಟೇ ಅಲ್ಲದೇ ಅವರಿಗೆ ತುಪ್ಪ ಹಾಗೂ ಪೇಡಾ ನೀಡಿ, ಜೊತೆಗೆ ದಿನಸಿ ಕಿಟ್ ಕೂಡಾ ಕೊಟ್ಟು ಗೌರವಿಸಿದ್ದಾರೆ. ಇದು ನಿಜವಾದ ಸನ್ಮಾನ ಎಂದು ಈ ಸಮಯದಲ್ಲಿ ಹೇಳಬಹುದು. ಯಾಕಂದರೆ ಜಗತ್ತೇ ಕೊರೊನಾದಿಂದ ಸಮಸ್ಯೆ ಎದುರಿಸುತ್ತಿರುವ ದಿನಗಳಲ್ಲಿ ಪೌರಕಾರ್ಮಿಕರು ಸಾರ್ವಜನಿಕರಿಗಾಗಿ ದುಡಿಯುತ್ತಿದ್ದಾರೆ. ಈ ರೀತಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಂದಿಗೆ ನಾಗಪ್ಪ ಅವರು ಪಾದಪೂಜೆ ಮಾಡಿ ಗೌರವಿಸಿದ್ದು ವಿಶೇಷ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕಸ ಗುಡಿಸಿ ನಗರವನ್ನು ಸ್ವಚ್ಛವಾಗಿ ಇಡುವ ಪೌರಕಾರ್ಮಿಕರ ಬಳಿ ಕೆಲ ಅಧಿಕಾರಿಗಳು ಹಣ ಕೀಳುತ್ತಿದ್ದಾರೆ ಎಂದು ಇಂದು ಬೆಳಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈಗ ಪಬ್ಲಿಕ್ ಟಿವಿ ವರದಿಗೆ ಫಲ ಸಿಕ್ಕಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವುದಾಗಿ ಮೇಯರ್ ಗೌತಮ್ ಕುಮಾರ್ ಮತ್ತು ಕಮಿಷನರ್ ಅನಿಲ್ ಕುಮಾರ್ ಹೇಳಿದ್ದಾರೆ.
ಪೌರಕಾರ್ಮಿಕರಿಂದ ತಿಂಗಳಿಗೆ 80 ಲಕ್ಷ ಹಫ್ತಾ ವಸೂಲಿಯಾಗುವುದನ್ನು ಕಂಡು ಬಿಬಿಎಂಪಿ ಮೇಯರ್, ಕಮಿಷನರ್ ಹಾಗೂ ವಿರೋಧ ಪಕ್ಷ ಬೆಚ್ಚಿಬಿದ್ದಿದೆ. ಹಣ ವಸೂಲಿ ಮಾಡುತ್ತಿದ್ದ ಅಧಿಕಾರಿಗಳ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಪಬ್ಲಿಕ್ ಟಿವಿ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ. ಈ ಸಂಬಂಧ ನಗರದ 198 ವಾರ್ಡ್ ಗಳಲ್ಲೂ ತನಿಖೆ ಮಾಡಲು ಸೂಚಿಸಿದ್ದು, ಸಂಪಂಗಿರಾಮನಗರ ವಾರ್ಡ್ ನ ಕಿರಿಯ ಆರೋಗ್ಯಾಧಿಕಾರಿ ಶ್ರೀನಿವಾಸ್ ಅನ್ನು ಕೆಲಸದಿಂದ ವಜಾಗೊಳಿಸಿ ಕಮಿಷನರ್ ಅನಿಲ್ ಕುಮಾರ್ ಆದೇಶಿಸಿದ್ದಾರೆ.
ಈ ವಿಚಾರವಾಗಿ ಭ್ರಷ್ಟರ ವಿರುದ್ಧ ಎಫ್‍ಐಆರ್ ದಾಖಲಿಸಲು ಸೂಚಿಸಲಾಗಿದ್ದು, ಇತ್ತ ಪಬ್ಲಿಕ್ ಟಿವಿ ಮುಂದೆ ಸತ್ಯ ಬಾಯಿಬಿಟ್ಟಿದಕ್ಕೆ ಇಂದು ಪೌರಕಾರ್ಮಿಕರ ಬಯೋಮೆಟ್ರಿಕ್ ಹಾಜರಾತಿಯನ್ನು ಕದಿರೇನಹಳ್ಳಿ ವಾರ್ಡ್‍ನಲ್ಲಿ ತಡೆಹಿಡಿದಿದ್ದರು. ಇದನ್ನೂ ತನಿಖೆಗೆ ಒಳಪಡಿಸಿದ್ದು, ಪೌರಕಾರ್ಮಿಕರ ದುಡ್ಡು ವಸೂಲಿ ಹೀನಾಯ, ಅವಮಾನೀಯ ಕೃತ್ಯ ಎಂದು ಮೇಯರ್ ಮತ್ತು ಕಮಿಷನರ್ ಬೇಸರ ಹೊರಹಾಕಿದರು.
ಈ ಮೂಲಕ ಪೌರಕಾರ್ಮಿಕರ ಸುಲಿಗೆ ಮಾಡುತ್ತಿದ್ದ ಕೆಲ ಅಧಿಕಾರಿಗಳಿಗೆ ವಜಾದ ಶಿಕ್ಷೆಯಾಗಿದೆ. ಇದು ಪಬ್ಲಿಕ್ ಟಿವಿ ವರದಿಯ ಬಿಗ್ ಇಂಪ್ಯಾಕ್ಟ್ ಅಗಿದ್ದು, ಈ ಹಣ ವಸೂಲಿ ದಂಧೆಯ ಬಗ್ಗೆ ಬಿಬಿಎಂಪಿ ಮಾಸಿಕ ಸಭೆಯಲ್ಲೂ ಪ್ರಸ್ತಾಪ ಮಾಡಲಾಗಿದೆ.
ರಾಯಚೂರು: ಕಳೆದ ಐದು ತಿಂಗಳಿನಿಂದ ವೇತನವಿಲ್ಲದೆ ರೊಚ್ಚಿಗೆದ್ದ ರಾಯಚೂರು ನಗರದ ಪೌರಕಾರ್ಮಿಕರು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
600ಕ್ಕೂ ಅಧಿಕ ಪೌರ ಕಾರ್ಮಿಕರಿಗೆ ಕಳೆದ 5 ತಿಂಗಳಿಂದ ವೇತನ ನೀಡಿಲ್ಲ. ವೇತನವಿಲ್ಲದೆ ಪರದಾಡುತ್ತಿರುವ ಕಾರ್ಮಿಕರು ಅನೇಕ ಬಾರಿ ಮನವಿಯನ್ನ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವೇತನ ನೀಡುವಂತೆ ಕೇಳಿದ್ರೆ ಇಂದು, ನಾಳೆ ಎಂದು ಅಧಿಕಾರಿಗಳು ಕಥೆ ಹೇಳ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ವೇತನ ನೀಡದ್ದಕ್ಕೆ ರೊಚ್ಚಿಗೆದ್ದ ಪೌರ ಕಾರ್ಮಿಕರು ಏಕಾಏಕೀ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಪ್ರತಿಭಟನೆ ಕೈಗೊಂಡಾಗ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದ ಅಧಿಕಾರಿಗಳು ಮತ್ತೆ ಹಳೆಯದನ್ನೇ ಮುಂದುವರಿಸಿದ್ದಾರೆ. ಹೀಗಾಗಿ ಪೌರಕಾರ್ಮಿಕರು ಬೇಸತ್ತು ಹೋಗಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಕಸದ ವಿಚಾರದಲ್ಲಿ ಮತ್ತಷ್ಟು ಸ್ಮಾರ್ಟ್ ಆಗುತ್ತಿದ್ದು, ನಗರದ ಮನೆ ಮನೆಗಳಲ್ಲಿ ಕಸ ಸಂಗ್ರಹಣೆಯ ಇಂಚಿಂಚು ಮಾಹಿತಿ ಕಲೆ ಹಾಕಲು ಹೊಸ ಪ್ಲ್ಯಾನ್ ಸಿದ್ಧಗೊಂಡಿದೆ.
ಹೌದು. ನಿಮ್ಮ ಮನೆ ಕಸ ವಿಂಗಡಿಸ್ತಾ ಇದ್ದೀರಾ? ಹಸಿ ಕಸ ಎಷ್ಟು? ಒಣ ಕಸ ಎಷ್ಟು ಎಂಬ ಮಾಹಿತಿ ಯಾರಿಗೂ ಇರಲ್ಲ. ಕೆಲವರಂತೂ ಕಸವನ್ನ ಎಲ್ಲೆಂದರಲ್ಲಿ ಬಿಸಾಡ್ತಾರೆ. ಇಂತಹ ಜನರನ್ನು ಕಂಡು ಹಿಡಿಯಲು ಬಿಬಿಎಂಪಿ ಕ್ಯೂಆರ್ ಕೋಡ್ ಕಸ ಎಂಬ ಹೊಸ ಆ್ಯಪ್ ಟೆಕ್ನಾಲಜಿ ಪರಿಚಯಿಸುತ್ತಿದೆ.
ನಗರದ ಹತ್ತು ವಾರ್ಡಗಳ ಪ್ರತಿ ಮನೆಗೂ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ. ಇದರಿಂದ ಮನೆ ಮನೆಗೆ ಕಸ ಸಂಗ್ರಹಿಸಲು ಬರುವ ಪೌರಕಾರ್ಮಿಕರು ಹಾಗೂ ಸಹಾಯಕರು ಯಾವ ಮನೆಯಲ್ಲಿ ಕಸ ಹಾಕಿದ್ರು? ಹಸಿ, ಒಣ ಕಸ ವಿಂಗಡಿಸಿದ್ರಾ? ಹೀಗೆ ಹಲವು ಮಾಹಿತಿಗಳನ್ನ ಕಲೆ ಹಾಕಲು ಸುಲಭವಾಗಲಿದೆ. ಅಷ್ಟೇ ಅಲ್ಲದೆ ಹೊಸ ಬಿಬಿಎಂಪಿ ಸಿದ್ಧಪಡಿಸೊ ಆ್ಯಪ್‍ನಲ್ಲಿ ಎಲ್ಲಾ ಮಾಹಿತಿಯನ್ನ ಅಪ್ಲೋಡ್ ಮಾಡಬೇಕಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಮಾಹಿತಿ ನೀಡಿದರು.
ಸ್ಮಾರ್ಟ್ ಸಿಟಿ ಅಡಿಯಲ್ಲಿ ಕ್ಯೂಆರ್ ಕೋಡ್ ಬರಲಿದು, ಪ್ರತಿ ಕೋಡ್ ಅಳವಡಿಕೆಗೂ 4 ರೂಪಾಯಿಂದ 16 ರೂಪಾಯಿ ಆಗೊ ಸಾಧ್ಯತೆಯೂ ಇದೆ. ಈ ಮೂಲಕ ಬಿಬಿಎಂ ಕಸ ವಿಲೇವಾರಿ ವಿಚಾರದಲ್ಲಿ ಸ್ಮಾರ್ಟ್ ಆಗುತ್ತಿದ್ದು, ಸಾರ್ವಜನಿಕರು ಬಿಬಿಎಂಪಿ ಹೊಸ ಪ್ರಯತ್ನಕ್ಕೆ ಸಹಕರಿಸಬೇಕಿದೆ.
ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪೌರಕಾರ್ಮಿಕರಿಗಾಗಿ ಸಂಕ್ರಾಂತಿ ಸಂಭ್ರಮ ಏರ್ಪಡಿಸಲಾಗಿತ್ತು. ನಗರದ ಸ್ವಚ್ಛತಾ ರಾಯಭಾರಿಗಳಾದ ಪೌರ ಕಾರ್ಮಿಕರಿಗೆ ಎಳ್ಳು-ಬೆಲ್ಲದ ಜೊತೆಗೆ, ಸೀರೆ, ಬ್ಲೌಸ್, ಪ್ಯಾಂಟ್ ಶರ್ಟ್ ಮತ್ತು ಉಡುಗೊರೆಗಳನ್ನು ವಿತರಿಸಲಾಯಿತು.
ಪ್ರತಿನಿತ್ಯ ಮನೆಗಳಿಂದ ಕಸ ಕೊಂಡೊಯ್ಯುವ, ಬೀದಿಗಳನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ರೂವಾರಿಗಳಾದ ಪೌರಕಾರ್ಮಿಕರನ್ನು ಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸೂಚಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾರ್ಯಕ್ರಮದ ವಿಶೇಷವಾಗಿತ್ತು.
ಜೆಪಿ ನಗರದ ದುರ್ಗಾ ಪರಮೇಶ್ವರಿ ದೇವಸ್ಥಾನ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 500 ಕಾರ್ಮಿಕರಿಗೆ ಪೊಂಗಲ್ ತಯಾರಿಸಿ ಹಂಚಲಾಯಿತು. ಪೌರ ಕಾರ್ಮಿಕರು ಸಿಹಿ, ಎಳ್ಳು-ಬೆಲ್ಲ, ಕಬ್ಬು ಸ್ವೀಕರಿಸಿದರು. ಇಷ್ಟು ವರ್ಷಗಳಿಂದ ನಮ್ಮನ್ನು ಯಾರೂ ಕರೆದು ಗೌರವಿಸಿರಲಿಲ್ಲ. ನಮಗೆ ಹಬ್ಬದ ಸಿಹಿಯ ಜೊತೆಗೆ ಉಡುಗೊರೆಗಳನ್ನು ಸಹ ನೀಡಿರುವುದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಸಚಿವ, ಶಾಸಕ ರಾಮಲಿಂಗಾ ರೆಡ್ಡಿ ಮಾತನಾಡಿ, ಸಂಕ್ರಾಂತಿ ಸಂತಸದ ಹಬ್ಬ. ಹೊಸ ವರ್ಷದ ಹೊಸ್ತಿಲಲ್ಲಿ ಬರುವ ಸಂಕ್ರಾಂತಿ ಸಂದರ್ಭದಲ್ಲಿ ಬೆಂಗಳೂರು ನಗರವನ್ನು ಸುಂದರ, ಸ್ವಚ್ಛವಾಗಿಟ್ಟುಕೊಳ್ಳಲು ನಿಮ್ಮ ಪಾತ್ರ ಅನನ್ಯ. ಸದಾ ಕಾಲ ಸ್ವಚ್ಛತೆ ಕೈಗೊಳ್ಳುವ ನಿಮಗೂ ಖುಷಿ ಸಿಗಬೇಕು ಎಂಬ ಕಾರಣದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶುಚಿತ್ವದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿಮ್ಮ ಸಹಕಾರ ಅಗತ್ಯ. ನಿಮ್ಮ ಸುರಕ್ಷತೆ, ಆರೋಗ್ಯ ರಕ್ಷಣೆಗಾಗಿ ಸರ್ಕಾರ ಮತ್ತು ಪಾಲಿಕೆ ಬದ್ಧವಾಗಿದೆ. ಹಳ್ಳಿಯ ನೆನಪು ತರುವ ಸಡಗರದ ಹಬ್ಬ ನಿಮ್ಮೆಲ್ಲರ ಬಾಳಿನಲ್ಲಿ ಬೆಳಕು ತರಲಿ ಎಂದು ಹಾರೈಸಿದರು.
ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಸದಾ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ನಿಮ್ಮ ಜೊತೆ ಸಂಕ್ರಾಂತಿ ಆಚರಿಸುವುದು ಅರ್ಥಪೂರ್ಣವಾಗಿದೆ. ಎಲ್ಲರಿಗಿಂತ ನಿಮಗೆ ಸಂಕ್ರಾಂತಿ ಹಬ್ಬದ ಉಡುಗೊರೆ ನೀಡಿದರೆ ಅದು ಸಾರ್ಥಕತೆ ಪಡೆಯುತ್ತದೆ. ಜಯನಗರ ಅತ್ಯಂತ ಶುಚಿ ಸ್ಥಳವಾಗಬೇಕು. ಸ್ವಚ್ಛ ಭಾರತದಲ್ಲಿ ಉತ್ತಮ ಹೆಸರು ಪಡೆಯಬೇಕು. ಕಸದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಬೇಕು. ಅದಕ್ಕಾಗಿ ಯಾವುದೇ ರೀತಿಯ ಸಹಕಾರ ಬೇಕಾದರೂ ನೀಡುತ್ತೇವೆ. ಕಸ ವಿಂಗಡಣೆ ಇನ್ನಷ್ಟು ಸುಧಾರಿಸಬೇಕು. ಇದರ ಸಂಪೂರ್ಣ ಉಸ್ತುವಾರಿಯನ್ನು ತಾವೇ ವಹಿಸಿರುವುದಾಗಿ ಹೇಳಿದರು.
ಏಳು ವಾರ್ಡ್ ಗಳ ಸುಮಾರು 5000 ಜನ ಪೌರ ಕಾರ್ಮಿಕರು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಪಾಲಿಕೆ ಸದಸ್ಯರಾದ ನಾಗರಾಜ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಭಾಗಿಯಾಗಿದ್ದ ಕಾರ್ಯಕ್ರಮವನ್ನು ಬಾಂಧವ ತಂಡದ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು.
ಬೆಂಗಳೂರು: ಪೌರಕಾರ್ಮಿಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಬಿಎಂಪಿ ಪೌರಕಾರ್ಮಿಕರ ಸಂಘದ ವತಿಯಿಂದ ಧರಣಿ ನಡೆಯಿತು.
ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ 18 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಎಂದು ಧರಣಿ ನಡೆಸಿದರು. ಸದ್ಯ ಪಾಲಿಕೆಯಲ್ಲಿ 4 ಸಾವಿರ ಪೌರಕಾರ್ಮಿಕರ ನೇಮಕಾತಿಗೆ ನೋಟಿಫಿಕೇಶನ್ ಹೊರಡಿಸಲಾಗಿದೆ. ಇದರಿಂದ ಶೇ.50 ರಷ್ಟು ಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಕೆಲಸವೇ ಸಿಗದಂತೆ ಆಗಲಿದೆ. ಹೀಗಾಗಿ ನೇಮಕಾತಿ ಷರತ್ತುಗಳನ್ನ ಬದಲಾಯಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರಮುಖ ಬೇಡಿಕೆಗಳ ಪಟ್ಟಿ ಹೀಗಿದೆ;
1. ಗುತ್ತಿಗೆ ಆಧಾರದ ಎಲ್ಲ ಪೌರಕಾರ್ಮಿಕರ ಖಾಯಂಗೊಳಿಸಬೇಕು 2. ಕನ್ನಡ ಓದಲು ಬರೆಯಲು ಬರಬೇಕು ಎಂಬ ನಿಯಮ ತೆಗೆಯಬೇಕು 3. 45 ವರ್ಷಗಳ ವಯೋಮೀತಿಗೆ ನೇಮಕಾತಿ ಹೊರಡಿಸಿರೊದನ್ನು 55 ವರ್ಷಕ್ಕೆ ಏರಿಕೆ ಮಾಡಬೇಕು 4. ಆನ್ ಲೈನ್ ಅರ್ಜಿ ಸಲ್ಲಿಕೆಗೆ ಹೆಲ್ಪ್ ಲೈನ್ ಸಹಾಯ ಕೊಡಬೇಕು 5. ಪೌರಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ಶಿಕ್ಷಣ ಕೊಡಿಸಲು ಸಹಾಯ ಮಾಡಬೇಕು
ಈ ಎಲ್ಲ ಬೇಡಿಕೆಗಳ ಆಧರಿಸಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಖುದ್ದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ವಿಶೇಷ ಆಯುಕ್ತ ಸಂದೀಪ್ ಭೇಟಿ ನೀಡಿ ಬೇಡಿಕೆಗಳ ಪರಿಶೀಲಿಸುವಯದಾಗಿ ಭರವಸೆ ನೀಡಿದರು.
ಮೈಸೂರು: ಪೌರಕಾರ್ಮಿಕರಿಗೆ ಹಾಸನದಲ್ಲಿ ಮಾಜಿ ಸಚಿವ ಎ.ಮಂಜು ಪಾದ ಪೂಜೆ ಮಾಡಿದ ವಿಚಾರದ ಬಗ್ಗೆ ಮೈಸೂರಿನಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಪಾದ ಪೂಜೆ ಮಾಡಿದ ತಕ್ಷಣ ಅವರ ಪಾಪ ಎಲ್ಲಾ ತೊಳೆದು ಹೋಗುತ್ತಾ?. ಎ. ಮಂಜು ಅವರ ಜನ್ಮದಲ್ಲಿ ಪೌರಕಾರ್ಮಿಕರ ಸಮಸ್ಯೆ ಕೇಳಿದ್ದಾರೋ ಇಲ್ವೋ ಗೊತ್ತಿಲ್ಲ. ಇಂತಹ ಗಿಮಿಕ್‍ಗಳು ಹಾಸನದಲ್ಲಿ ಎಲ್ಲಿ ನಡೆಯುತ್ತೆ ಹೇಳಿ ಎಂದು ಸಿಎಂ ಪ್ರಶ್ನಿಸಿದ್ದಾರೆ.
ಮೋದಿ ಯಾರಿಗೋ ಪೌರಕಾರ್ಮಿಕರ ಡ್ರೆಸ್ ಹಾಕಿ ಪಾದ ಪೂಜೆ ಮಾಡಿದ್ದರು. ಮಂಜು ಇನ್ಯಾರಿಗೆ ಪೌರಕಾರ್ಮಿಕರ ಡ್ರೆಸ್ ಹಾಕಿ ಪಾದ ಪೂಜೆ ಮಾಡಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಎ. ಮಂಜು ಅವರು ಇಂದು ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ, ಪೌರಕಾರ್ಮಿಕ ದಂಪತಿಯ ಪಾದ ತೊಳೆದು ಪೂಜೆ ಮಾಡಿ ಮೋದಿ ಅವರನ್ನು ಫಾಲೋ ಮಾಡಿದ್ದರು.
ಹಾಸನದ ನಿರ್ಮಾಲ ನಗರದಲ್ಲಿ ಚಂದ್ರು ಹಾಗೂ ಅಶ್ವಿನಿ ದಂಪತಿಯ ಕಾಲು ತೊಳೆದು ಎ.ಮಂಜು ಪೂಜೆ ಮಾಡಿದ್ದಾರೆ. ಪಾದ ತೊಳೆದ ನಂತರ, ನಾವು ಪೌರಕಾರ್ಮಿಕರ ಪಾದ ತೊಳೆದಿದ್ದ ಮೋದಿಯನ್ನು ಟಿವಿಯಲ್ಲಿ ಮಾತ್ರ ನೊಡಿದ್ದೇವು. ಅದರೇ ಇಂದು ಎ.ಮಂಜು ನಮ್ಮ ಮನೆಗೆ ಬಂದು ನಮ್ಮ ಪಾದ ತೊಳೆದಿದ್ದಾರೆ. ಮೊದಲು ಸ್ವಲ್ಪ ಮುಜುಗರವಾದರೂ ನಂತರ ಸಂತೋಷವಾಯಿತು ಎಂದ ಚಂದ್ರು ದಂಪತಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಇಂದಿರಾ ಕ್ಯಾಂಟೀನ್ ನಲ್ಲಿ ಪೌರಕಾರ್ಮಿಕರಿಗೆ ವಿಷಾಹಾರ ನೀಡುತ್ತಿರುವ ಕುರಿತು ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ.
ಊಟದ ವಿಚಾರವಾಗಿ ಆಕ್ರೋಶ ಹೊರಹಾಕಿದ ಡಿಸಿಎಂ, ನಾನು ಮಾಧ್ಯಮದಲ್ಲಿ ವರದಿ ಬಂದಿದ್ದನ್ನು ನೋಡಿದ್ದೇನೆ. ಈ ಕುರಿತು 3 ಬಾರಿ ನಾನೇ ಊಟ ಮಾಡಿದಾಗ ಎಚ್ಚರಿಕೆ ಕೊಟ್ಟಿದ್ದೇನೆ. ಈ ಸಂಬಂಧ ತನಿಖೆ ಮಾಡಲು ಕಮೀಷನರ್ ಗೆ ಸೂಚನೆ ಕೊಟ್ಟಿದ್ಚದೇನೆ ಅಂದ್ರು.
ಎಲ್ಲ ಕ್ಯಾಂಟೀನ್ ಗಳ ಮೇಲೆ ತನಿಖೆ ಮಾಡಲು ಸೂಚನೆ ನೀಡಲಾಗಿದೆ. ವರದಿ ಬಂದ ಮೇಲೆ ಟೆಂಡರ್‍ದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಬಡವರಿಗೆ ಕೊಡುವ ಊಟ ವಿಚಾರದಲ್ಲಿ ಅನ್ಯಾಯ ಆಗೊದು ಬೇಡ. 198 ವಾರ್ಡ್ ಗಳ ಆಹಾರ ಪರೀಕ್ಷೆ ಮಾಡಿಸಲಾಗುತ್ತದೆ. ಈ ವಿಷಾಹಾರದ ವಿಚಾರ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಲಾಗುತ್ತದೆ. ತಪ್ಪು ಕಂಡು ಬಂದ್ರೆ ಕಠಿಣ ಕ್ರಮಕ್ಕೆ ಸೂಚಿಸಲಾಗುತ್ತದೆ ಎಂದು ಹೇಳಿದ್ರು.
ಬೆಂಗಳೂರು: ಇಂದಿರಾ ಕ್ಯಾಂಟೀನ್ ಊಟ ಮಾಡಿದ್ರೆ ಸ್ಮಶಾನಕ್ಕೆ ಹೋಗೊದು ಪಕ್ಕಾ ಅಂತೆ. ಬಡವರ ಹಸಿವು ನೀಗುತ್ತಿರುವ ಊಟ ಸ್ಲೋ ಪಾಯ್ಸನ್ ಆಗುತ್ತಿದೆ. ಹಾಗಿದ್ರೆ ವಿಷ ಯಾವುದು..? ತಿಂದರೆ ಏನ್ ಕಾಯಿಲೆ ಬರುತ್ತೆ..? ಈ ವಿಷ ತಿನ್ನುತ್ತಿರುವವರು ಯಾರು..? ಇದು ವಿಷ ಎಂದು ಸಾಬೀತಾಗಿದು ಹೇಗೆ? ನಿಮ್ಮೆಲ್ಲ ಈ ಕುತೂಹಲ ಮೂಡಿಸಿರೊ ಪ್ರಶ್ನೆಗಳಿಗೆ ಈ ಇನ್ವೆಷ್ಟಿಗೇಶನ್ ಸ್ಟೋರಿ ಇಲ್ಲಿದೆ.
ಪ್ರತಿನಿಧಿ: ಊಟ ಹೇಗಿದೆ? ಪೌರಕಾರ್ಮಿಕ: ನಾಯಿಗೆ ಹಾಕಿದಂತೆ ಹಾಕ್ತಾರೆ ಪ್ರತಿನಿಧಿ: ಊಟ ತಿಂದರೆ ಏನ್ ಆಗುತ್ತೆ? ಪೌರಕಾರ್ಮಿಕ: ಬೇದಿ ವಾಂತಿ ಆಗಿ ಒಬ್ಬರು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಈಗ ಯಾರು ಊಟ ಮುಟ್ಟೊದೆ ಇಲ್ಲ. ಬೇರೆಯವರಿಗೆ ಗೊತ್ತಿಲ್ಲ ತಿನ್ನುತ್ತಾರೆ. ಆದ್ರೆ ನಾವು ಮುಟ್ಟಲ್ಲ. ಇದನ್ನ ತಿಂದು 10 ದಿನ ಮಲಗಿದ್ರೆ ಯಾರ್ ಬರುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಹೌದು. ಇದು ದಿನಾ ಬೆಳಗೆದ್ದು ರಾಜ್ಯ ರಾಜಧಾನಿಯನ್ನು ಸ್ವಚ್ಛಗೊಳಿಸೋ ಪೌರಕಾರ್ಮಿಕರ ಗೋಳಾಗಿದೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ಈ ಬಡ ಜೀವಗಳಿಗೆ ವಿಷ ಕೊಡಲು ಮುಂದಾಗಿದೆ. ಇಂದಿರಾ ಕ್ಯಾಂಟೀನ್ ಪೌರಕಾರ್ಮಿಕರಿಗೆ ನೀಡುತ್ತಿರೋ ಊಟ ಮನುಷ್ಯರು ಯಾಕೆ ಪ್ರಾಣಿಗಳು ತಿನ್ನಲೂ ಯೋಗ್ಯವಾಗಿಲ್ಲ. ರಾಜ್ಯ ಆಹಾರ ಇಲಾಖೆಯ ಪ್ರಯೋಗಾಲಯ ಹಾಗೂ ಎಂ.ಎಸ್ ರಾಮಯ್ಯ ಲ್ಯಾಬೋರೆಟರಿ ಪರೀಕ್ಷೆಯಲ್ಲಿ ಈ ಆಹಾರ ತಿನ್ನಲು ಯೋಗ್ಯವಿಲ್ಲ ಎಂದು ವರದಿ ನೀಡಿದೆ.
ಟಾಯ್ಲೆಟ್ ಬಳಿಯೇ ಊಟ..!
ಪೌರಕಾರ್ಮಿಕರಿಗೆ ನೀಡುತ್ತಿರುವ ಆಹಾರದ ಅಸಲಿಯತ್ತು ತಿಳಿಯಲು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಗೆ ಇಳಿಯಿತು. ಹೀಗೆ ಹೊರಟ ತಂಡಕ್ಕೆ ಸಿಎಂ ಮನೆ ಬಳಿಯೇ ಶಾಕ್ ಕಾದಿತ್ತು. ಆಗ ಸಿಎಂ ಮನೆಯ ಕೂಗಳತೆ ದೂರಲ್ಲಿ ಟಾಯ್ಲೆಟ್ ಪಕ್ಕದಲ್ಲೇ ಪೌರಕಾರ್ಮಿಕರಿಗೆ ಊಟ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಡಿಸಿಎಂ ಮನೆ ಬಳಿ ಬ್ಯಾಕ್ಟೀರಿಯಾಯುಕ್ತ ಪಲಾವ್..!
ಸಿಎಂ ಏರಿಯಾದಲ್ಲಿ ಪೌರಕಾರ್ಮಿಕರ ದುರವಸ್ಥೆ ಕಂಡ ತಂಡ ಅಲ್ಲಿಂದ ನೇರವಾಗಿ ಡಿಸಿಎಂ ಏರಿಯಾಗೆ ತೆರಳಿತು. ಅಲ್ಲಿನ ಪರಿಸ್ಥಿತಿ ಇನ್ನೂ ಕೆಟ್ಟದಾಗಿತ್ತು. ಪೌರಕಾರ್ಮಿಕರಿಗೆ ರಸ್ತೆ ಪಕ್ಕದಲ್ಲೇ ನಾಯಿಗೆ ಹಾಕಿದಂತೆ ಊಟ ಎಸೆದು ಹೋದ್ರು. ಈ ಪಲಾವ್ ಪರೀಕ್ಷೆಗೆ ಒಳಪಡಿಸಿದ್ರೆ, ಇ-ಕಾಯಲ್ ಎಂಬ ಅಂಶ ಹೆಚ್ಚಿದ್ದು, ಸೆಪಿಟಿಸ್ ಎಂಬ ಬ್ಯಾಕ್ಟೀರಿಯಾ ಇರೋದು ಬೆಳಕಿಗೆ ಬಂತು. ಈ ಬ್ಯಾಕ್ಟೀರಿಯಾ ಚಿಕನ್‍ಗುನ್ಯ, ಲೋ ಬಿಪಿ, ಜ್ವರಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ವರದಿ ಬಂದಿದೆ.
ಅಲ್ಲಿಂದ ಬಳಿಕ ಮೇಯರ್ ಗಂಗಾಂಬಿಕೆ ಇರುವ ಜಯನಗರ ವಾರ್ಡ್ ನಲ್ಲಂತೂ ಪೇಯಿಂಟ್ ಡಬ್ಬದಲ್ಲಿ ಊಟ ನೀಡಲಾಗ್ತಿದೆ. ಅದರಲ್ಲೂ ಸತ್ತ ಇರುವೆಗಳು ಸಿಕ್ಕೋದು ಕಾಮನ್. ಇಲ್ಲಿನ ಸಾಂಬಾರ್ ತಿನ್ನಲು ಯೋಗ್ಯವಿಲ್ಲ ಎಂದು ವರದಿಯಲ್ಲಿ ಗೊತ್ತಾಯ್ತು. ಇನ್ನು ಉಪಮೇಯರ್ ಭದ್ರೇಗೌಡ ವಾರ್ಡ್ ಕತೆ ಕೂಡಾ ಇದೇ ಆಗಿದೆ.
ಸಚಿವ ಕೃಷ್ಣಬೈರೇಗೌಡರ ಬ್ಯಾಟರಾಯನಪುರದ ಬಿಸಿ ಬೇಳೆಬಾತ್ ಕಥೆಯಂತೂ ಹೀನಾಯ. ಇದರಲ್ಲಿ ವಾಂತಿ, ಬೇದಿ, ಡಿಹೈಡ್ರೇಶನ್‍ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಪತ್ತೆಯಾದವು. ಪಿಎಚ್ ಎಂಬ ಅಂಶ 6ಕ್ಕಿಂತ ಕಡಿಮೆ ಇದ್ದು, ಇದ್ರಿಂದ ದೇಹದಲ್ಲಿ ಸೆಪಿಟಸ್ ಎಂಬ ಬ್ಯಾಕ್ಟೀರಿಯಾ ಉತ್ಪತ್ತಿಯಾಗಲಿದೆ ಎಂದು ಆಹಾರ ತಜ್ಞರು ಮಾಹಿತಿ ನೀಡಿದ್ದಾರೆ.
ಸ್ವಚ್ಛತೆಯೇ ಇಲ್ಲದ ಅಡುಗೆ ಮನೆ..!
ಇಷ್ಟೆಲ್ಲಾ ನೋಡಿದ್ಮೇಲೆ ಇದನ್ನೆಲ್ಲಾ ತಯಾರು ಮಾಡುವ ಆ ಅಡುಗೆ ಮಾಡೋ ಜಾಗ ಹೇಗಿರಬಹುದೆಂದು ಪರೀಕ್ಷಿಸಲು ಪಬ್ಲಿಕ್ ಟಿವಿ ತಂಡ ಮುಂದಾಯ್ತು. ಅಡುಗೆ ಸೋಡಾ, ಅಜಿನೋ ಮೋಟೊ, ರಾಸಾಯನಿಕ ಪದಾರ್ಥಗಳ ಮಧ್ಯೆ ಕೊಳೆತ ತರಕಾರಿ, ನುಚ್ಚು ಅಕ್ಕಿ, ನುಚ್ಚು ತೊಗರಿಬೇಳೆ ಎಲ್ಲೆಂದ್ರಲ್ಲಿ ಬಿದ್ದಿರುವುದು ಕಂಡುಬಂದಿದೆ. ಮೊಸರನ್ನವಂತೂ ಪೌರಕಾರ್ಮಿಕರು ತಿನ್ನುವ ಮೊದಲೇ ನೊಣಗಳು ಟೇಸ್ಟ್ ನೋಡುತ್ತಿದ್ದವು.
ಪೌರಕಾರ್ಮಿಕರ ಒಂದು ಊಟಕ್ಕೆ ಸರ್ಕಾರ 20 ರೂಪಾಯಿಯಂತೆ ತಿಂಗಳಿಗೆ 1 ಕೋಟಿ ಖರ್ಚು ಮಾಡ್ತಿದೆ. ಆದ್ರೆ ಈ ಊಟ ಪೌರ ಕಾರ್ಮಿಕರ ಜೀವಕ್ಕೆ ಕಂಟಕವಾಗಿದೆ. ಆದ್ರೆ ಖರ್ಚು ಮಾತ್ರ ಸರಿಯಾಗಿ ತೋರಿಸೋ ಅಧಿಕಾರಿಗಳು, ಈ ಹಾಳು ಊಟ ಕೊಟ್ಟು ಉಳಿದ ದುಡ್ಡನ್ನ ಏನ್ಮಾಡ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಮನೆಯಲ್ಲಿ ಹೊತ್ತು ಹೊತ್ತಿಗೆ ಬಿಸಿ ಬಿಸಿ ಬೇಕಾದಂತೆ ಮಾಡಿಕೋಂಡು ತಿನ್ನೋ ಜನಪ್ರತಿನಿಧಿಗಳು ಇನ್ನಾದ್ರೂ ಪೌರಕಾರ್ಮಿಕರನ್ನು ಈ ನರಕದಿಂದ ಪಾರು ಮಾಡಬೇಕಿದೆ.
ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಪ್ರಯಾಗ್‍ನ ತ್ರಿವೇಣಿ ಸಂಗಮದಲ್ಲಿ ಪೌರಕಾರ್ಮಿಕರ ಪಾದ ಪೂಜೆ ಮಾಡಿದ್ದಾರೆ.
ಈ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿ ಪೌರಕಾರ್ಮಿಕರ ಪಾದಪೂಜೆ ಮಾಡಿದ ಪ್ರಧಾನಿ ಎಂಬ ಖ್ಯಾತಿಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.
ಹಣೆಗೆ ವಿಭೂತಿ ಹಚ್ಚಿಕೊಂಡಿದ್ದ ಪ್ರಧಾನಿ ಮೋದಿ ಅವರು, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 5 ಜನ ಪೌರಕಾರ್ಮಿಕರ ಪಾದಕ್ಕೆ ನೀರು ಹಾಕಿ ತೊಳೆದು, ಕರವಸ್ತ್ರದಿಂದ ಸ್ವಚ್ಛಗೊಳಿಸಿದರು. ಪಾದಪೂಜೆಯ ಬಳಿಕ ಅವರಿಗೆ ಶಾಲು ಹೊದಿಸಿ ಕೈಮುಗಿದು ಧನ್ಯವಾದ ತಿಳಿಸಿದರು.
ಪಾದಪೂಜೆ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಅವರು ತ್ರಿವೇಣಿ ಸಂಗಮಕ್ಕೆ ತೆರಳಿ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರು. ಬಳಿಕ ಸ್ವಚ್ಛ ಕುಂಭ್ – ಸ್ವಚ್ಛ ಆಭಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪ್ರಧಾನಿ ಮೋದಿ ಅವರು ಸ್ವಚ್ಛತ್ ಭಾರತ್ ಅಭಿಯಾನವನ್ನು ಆರಂಭಿಸಿದ್ದರು. ಈ ನಿಟ್ಟಿನಲ್ಲಿ ದೇಶದಲ್ಲಿ ಪಕ್ಷಾತೀತವಾಗಿ ಎಲ್ಲರೂ ಸ್ವಚ್ಛತೆಯ ಕಡೆ ಗಮನ ಹರಿಸಬೇಕೆಂದು ಮನವಿ ಮಾಡಿದ್ದರು. ಹೀಗಾಗಿ ನಗರ ಪ್ರದೇಶ, ಗ್ರಾಮಗಳನ್ನು ಸ್ವಚ್ಛವಾಗಿಡಲು ಶ್ರಮಿಸುವ ಪೌರಕಾರ್ಮಿಕರನ್ನು ಸ್ವಚ್ಛತಾ ಯೋಧರೆಂದು ಪ್ರಧಾನಿ ನರೇಂದ್ರ ಮೋದಿ ಕರೆದು ಗೌರವಿಸಿದ್ದರು.
Prime Minister Narendra Modi addressing the ‘Swachh Kumbh, Swachh Aabhaar’ programme in Prayagraj. pic.twitter.com/Lr7VbqotG6