Tag: ಪೋಸ್ಟ್ ಮ್ಯಾನ್

  • ಬಡವರ ಹಣವನ್ನು ತಿಂದು ತೇಗಿದ ಪೋಸ್ಟ್ ಮ್ಯಾನ್

    ಬಡವರ ಹಣವನ್ನು ತಿಂದು ತೇಗಿದ ಪೋಸ್ಟ್ ಮ್ಯಾನ್

    ಹಾಸನ: ಕಷ್ಟ ಪಟ್ಟು ದುಡಿದ ಉಳಿತಾಯದ ಹಣವನ್ನು ಪೋಸ್ಟ್ ಮಾಸ್ಟರ್ ಓರ್ವ ದುರುಪಯೋಗ ಮಾಡಿಕೊಂಡಿರುವ ಆರೋಪ ಹಾಸನದ ಸಾಲಗಾಮೆ ಅಂಚೆ ಕಚೇರಿಯಲ್ಲಿ ಕೇಳಿಬಂದಿದೆ.

    ಹಲವಾರು ವರ್ಷಗಳಿಂದ ಸಾಲಗಾಮೆ ಗ್ರಾಮದಲ್ಲಿ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದ್ದು 8 ಸಾವಿರ ಉಳಿತಾಯ ಖಾತೆಗಳಿವೆ. ಇಲ್ಲಿ ಅಂಚೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಚಂದ್ರು ಗ್ರಾಹಕರ ಹಣದಲ್ಲಿ ಅವ್ಯವಹಾರ ಮಾಡಿರುವ ಆರೋಪ ಕೇಳಿಬಂದಿದೆ.

    ಸದ್ಯ ಚಂದ್ರ ಬೇರೆ ಪೋಸ್ಟ್ ಆಫೀಸ್ ವರ್ಗವಾಗಿದ್ದು ನಂತರ ಈ ಅವ್ಯವಹಾರ ಬೆಳಕಿಗೆ ಬಂದಿದೆ. ತಮ್ಮ ಉಳಿತಾಯ ಖಾತೆಯ ಹಣವನ್ನು ಪಡೆಯಲು ಪೋಸ್ಟ್ ಆಫೀಸ್‍ಗೆ ಬಂದ ಗ್ರಾಹಕರಿಗೆ ಖಾತೆಯಲ್ಲಿ ಹಣವೇ ಇಲ್ಲದ್ದನ್ನು ನೋಡಿ ಶಾಕ್ ಆಗಿದ್ದಾರೆ.

    ಪಾಸ್ ಬುಕ್‍ನಲ್ಲಿ ಹಣ ಜಮಾವಣೆಯಾದ ಬಗ್ಗೆ ದಾಖಲೆ ಇದ್ದರೆ ಕಂಪ್ಯೂಟರ್ ನಲ್ಲಿ ಮಾತ್ರ ಹಣವನ್ನು ಸೇರಿಸಲಾಗಿಲ್ಲ. ಹೊಸದಾಗಿ ಬಂದಿರುವ ಅಂಚೆ ಅಧಿಕಾರಿ ಗ್ರಾಹಕರ ಹಣ ಕುರಿತು ಪರಿಶೀಲನೆ ನಡೆಸಿದಾಗ ಫೇಕ್ ಪಾಸ್ ಬಳಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಹಲವಾರು ವರ್ಷಗಳಿಂದ ಇದೇ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತಿದ್ದ ಚಂದ್ರು ಹಲವು ಗ್ರಾಹಕರಿಗೆ ಇದೇ ರೀತಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೆ ಎಂಟು ಮಂದಿ ಗ್ರಾಹಕರ ಪಾಸ್‍ಬುಕ್‍ನಲ್ಲಿ ಎಂಟ್ರಿ ಮಾಡಲಾಗಿದ್ದು ಕಂಪ್ಯೂಟರ್ ನಲ್ಲಿ ಮಾತ್ರ ನೊಂದಣಿ ಆಗಿಲ್ಲ. ಸದ್ಯ ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ಮುಂದುವರಿಸಿದ್ದಾರೆ.

  • 10 ವರ್ಷದಿಂದ ಪತ್ರಗಳನ್ನೇ ಹಂಚದೇ ತನ್ನಲ್ಲೇ ಉಳಿಸಿಕೊಂಡ ಪೋಸ್ಟ್ ಮ್ಯಾನ್

    10 ವರ್ಷದಿಂದ ಪತ್ರಗಳನ್ನೇ ಹಂಚದೇ ತನ್ನಲ್ಲೇ ಉಳಿಸಿಕೊಂಡ ಪೋಸ್ಟ್ ಮ್ಯಾನ್

    ಭುವನೇಶ್ವರ್: 10 ವರ್ಷಗಳಿಂದ ಪೋಸ್ಟ್ ಆಫೀಸ್ ಗೆ ಬಂದಿದ್ದ ಸುಮಾರು 1 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಮತ್ತು ಪ್ಯಾಕೇಜ್ ಗಳನ್ನು ಸಂಬಂಧಿಸಿದವರಿಗೆ ನೀಡದೆ ಇರುವ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಕರ್ತವ್ಯ ಲೋಪದ ಆರೋಪದಲ್ಲಿ ಅಂಚೆ ಕಚೇರಿ ಉದ್ಯೋಗಿಯನ್ನು ಅಮಾನತು ಮಾಡಲಾಗಿದೆ.

    ಜಗನ್ನಾಥ್ ಪುಹನ್ ಅಮಾನತುಗೊಂಡ ಉದ್ಯೋಗಿ. ಈತ ಭದ್ರಾಕ್ ನ ಒಡಂಗಾ ಶಾಖೆಯ ಅಂಚೆ ಕಚೇರಿಯಲ್ಲಿ, ಸಹಾಯಕ ಶಾಖೆಯ ಪೋಸ್ಟ್ ಮ್ಯಾನ್(ಎಬಿಪಿಎಂ) ಆಗಿ ಕೆಲಸ ಮಾಡುತ್ತಿದ್ದನು. ಈತ ತನ್ನ ನಿರ್ಲಕ್ಷ್ಯದಿಂದ ಕಚೇರಿಗೆ ಸುಮಾರು 2008 ರಿಂದ 2017 ರವರೆಗಿನ ಬಂದಂತಹ ಪತ್ರಗಳನ್ನು ಕೊಡದೆ ತನ್ನ ಬಳಿಯೇ ಉಳಿಸಿಕೊಂಡಿದ್ದಾನೆ.

    ಕಚೇರಿಗೆ ಬಂದಿದ್ದ ಪತ್ರಗಳಲ್ಲಿ ಸರ್ಕಾರದ ಅಧಿಕೃತ ಪ್ರಕಟಣೆಗಳು, ಪರೀಕ್ಷಾ ಪ್ರವೇಶ ಪತ್ರಗಳು, ಕೆಲಸದ ನೇಮಕ ಪತ್ರ ಹಾಗೂ ಬಹುಮುಖ್ಯವಾದ ಮಾಹಿತಿಯ ಪತ್ರಗಳು ಸೇರಿದೆ. ಸುಮಾರು 1,500 ಪತ್ರ ಹಾಗೂ ವಸ್ತುಗಳು ಬಂದಿದೆ. ಈತನ ಕರ್ತವ್ಯ ಲೋಪದಿಂದ ಈ ಭಾಗದ ನೂರಾರು ಜನರು ಮುಖ್ಯವಾದ ಮಾಹಿತಿಗಳನ್ನು ತಿಳಿದುಕೊಳ್ಳಲಾಗದೆ ಸಮಸ್ಯೆ ಎದುರಿಸಿದ್ದಾರೆ.

    ಘಟನೆ ಬೆಳಕಿಗೆ ಬಂದಿದ್ದು ಹೇಗೆ?
    ಅಂಚೆ ಕಚೇರಿಯ ಆವರಣದಲ್ಲಿ ಮಕ್ಕಳ ಆಟವಾಡುತ್ತಿದ್ದಾಗ ಅವರಿಗೆ ಚೀಲದಲ್ಲಿ ತುಂಬಿದ್ದ ಪತ್ರಗಳು ದೊರೆತಿದೆ. ಬಳಿಕ ಆ ಚೀಲದಿಂದ ಹೊರ ಬಂದಿದ್ದ ಕೆಲವು ಪತ್ರಗಳನ್ನು ಗಮನಿಸಿದ್ದಾರೆ. ಅವುಗಳಲ್ಲಿ ಎಟಿಎಂ ಕಾರ್ಡ್ ಗಳು, ಬ್ಯಾಂಕ್ ಪಾಸ್ ಬುಕ್ ಮತ್ತು ಪ್ಯಾನ್ ಕಾರ್ಡ್ ಗಳು ಕಂಡಿದೆ. ಇವುಗಳನ್ನು ಅವರು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಆತನ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ ಎಂದು ಓಡಾಂಗ ಪಂಚಾಯಿತಿಯ ಅಧ್ಯಕ್ಷ ಕಿಶೋರ್ ಪಡಿಯಾರಿ ಎಂಬವರು ಮಾಹಿತಿ ನೀಡಿದ್ದಾರೆ.

    ಅಂದಹಾಗೇ ಜಗನ್ನಾಥ್ ಅಂಚೆ ಇಲಾಖೆಯ ಪೂರ್ಣಾವಧಿ ಸಮಯದ ನೌಕರನಲ್ಲ ಎಂದು ತಿಳಿದು ಬಂದಿದ್ದು, ಗುತ್ತಿಗೆ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆದರೆ ಈತನ ನಿರ್ಲಕ್ಷ್ಯದಿಂದ ಸರಿಯಾದ ವೇಳೆಗೆ ಪತ್ರಗಳನ್ನು ಕೊಡದೆ ಕರ್ತವ್ಯ ಲೋಪ ಮಾಡಿದ್ದಾನೆ. ಮೊದಲು ಪುಹಾನ್ ಗ್ರಾಮೀಣ್ ಡಾಕ್ ಸೇವಕ್ ನೌಕರನಾಗಿ ಜಗನ್ನಾಥ್ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಳಿಕ ಈತನನ್ನು ಹೆಚ್ಚುವರಿ ಇಲಾಖೆಯ ಉದ್ಯೋಗಿಯಾಗಿ ವರ್ಗೀಕರಿಸಲಾಗಿ ಜುಲೈನಲ್ಲಿ ಎಬಿಪಿಎಮ್ ಎಂದು ಗೊತ್ತುಪಡಿಸಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಒಡಿಶಾ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಸಂತೋಷ್ ಕುಮಾರ್ ಕಮಿಲ್ಲಾ, ಕರ್ತವ್ಯ ಲೋಪದ ಆರೋಪದ ಮೇಲೆ ಜಗನ್ನಾಥ್‍ ನನ್ನು ಅಮಾನತು ಮಾಡಲಾಗಿದೆ. 10 ವರ್ಷಗಳಿಂದ ತನ್ನ ಕರ್ತವ್ಯವನ್ನು ಏಕೆ ನಿರ್ಲಕ್ಷಿಸಿದ್ದಾನೆ ಎಂಬುದರ ಕುರಿತು ಮಾಹಿತಿ ಪಡೆಯಲಾವುದು ಎಂದು ತಿಳಿಸಿದ್ದಾರೆ.

    ಜಗನ್ನಾಥ್ ಕಾರ್ಯನಿರ್ವಹಿಸುವ ಪ್ರದೇಶದಲ್ಲಿ ಸಾರ್ವಜನಿಕರು ಯಾವುದೇ ದೂರು ನೀಡಿಲ್ಲ. ಆದ್ದರಿಂದ ಈ ಮಾಹಿತಿ ಲಭಿಸಿಲ್ಲ. ಪ್ರತಿ ಅಂಚೆ ಕಚೇರಿಗೂ ಇಲಾಖೆಯ ಉನ್ನತ ಅಧಿಕಾರಿಗಳು ಪ್ರತಿವರ್ಷ ಒಮ್ಮೆಯಾದರೂ ಶಾಖಾ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆದರೆ ಈ ಕಾರ್ಯವೂ ನಡೆದಿಲ್ಲ. ಆದ್ದರಿಂದ ಈತ ಕರ್ತವ್ಯ ನಿರ್ವಹಿಸದೆ ಕರ್ತವ್ಯ ಲೋಪವೆಸಗಿದ್ದಾನೆ ಎಂದು ಅಂಚೆ ಉದ್ಯೋಗಿಯೊಬ್ಬರು ಹೇಳಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಜಗನ್ನಾಥ್ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ತಪಿಸ್ಥನಿಗೆ ಶಿಕ್ಷೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜನರಿಗೆ ಆಧಾರ್, ಪಾನ್ ಕಾರ್ಡ್ ನೀಡದೇ ಮಣ್ಣಿನಲ್ಲಿ ಹೂತಿಟ್ಟ ಪೋಸ್ಟ್ ಮ್ಯಾನ್

    ಜನರಿಗೆ ಆಧಾರ್, ಪಾನ್ ಕಾರ್ಡ್ ನೀಡದೇ ಮಣ್ಣಿನಲ್ಲಿ ಹೂತಿಟ್ಟ ಪೋಸ್ಟ್ ಮ್ಯಾನ್

    ಚಾಮರಾಜನಗರ: ಪೋಸ್ಟ್ ಮ್ಯಾನ್‍ವೊಬ್ಬರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳನ್ನು ಜನರಿಗೆ ವಿತರಿಸದೇ ಮಣ್ಣಿನಲ್ಲಿ ಹೂತಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಲೊಕ್ಕನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಹೌದು, ಲೊಕ್ಕನಹಳ್ಳಿ ಗ್ರಾಮದ ಪೋಸ್ಟ್ ಮ್ಯಾನ್ ನಾಗರಾಜು ಎಂಬವರು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳನ್ನು ಜನರಿಗೆ ವಿತರಿಸುವ ಬದಲು ಮಣ್ಣಿನಲ್ಲಿ ಹೂತಿಟ್ಟಿದ್ದಾರೆ. ಇಲ್ಲಿಯ ಗ್ರಾಮಗಳಿಗೆ ತುಂಬಾ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಬರುವುದರಿಂದ ತಾನು ಒಬ್ಬನೇ ಇರೋದ್ರಿಂದ ಹಂಚಲಿಕ್ಕೆ ಆಗುವುದಿಲ್ಲ ಎಂದು ತಿಳಿದು ಮಣ್ಣಲ್ಲಿ ಹೂತಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

    2013 ರಿಂದ ಲೊಕ್ಕಳ್ಳಿ, ಕೌಳ್ಳಿಹಳ್ಳಿ ಡ್ಯಾಂ, ಬೋರೇದೊಡ್ಡಿ, ಜಡೇಸ್ವಾಮಿದೊಡ್ಡಿ, ಸೇಬಿನ ಕೂಬೆ ಗ್ರಾಮಗಳ ಜನರಿಗೆ ಬಂದಿದ್ದ ದಾಖಲೆಗಳನ್ನು ಅಂಚೆ ಕಚೇರಿಯ ಮುಂಭಾಗದ ಖಾಲಿ ನಿವೇಶನದಲ್ಲಿ ಹೂತಿಟ್ಟಿದ್ದರು.

    ಇದೀಗ ಖಾಲಿ ನಿವೇಶನದಲ್ಲಿ ಮನೆ ಕಟ್ಟಲು ಪಾಯ ತೆಗೆಯುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಮೊದಲಾದ ದಾಖಲೆಗಳು ಪತ್ತೆಯಾಗಿವೆ. ಹೀಗಾಗಿ ಅಲ್ಲಿಯ ಗ್ರಾಮಸ್ಥರು ನಂಜನಗೂಡಿನ ಅಂಚೆ ವಿಭಾಗದ ಅಧೀಕ್ಷರಿಗೆ ದೂರು ನೀಡಿದ್ದಾರೆ. ಅಧೀಕ್ಷಕರು ಆ ಪೋಸ್ಟ್ ಮ್ಯಾನ್ ಮೇಲೆ ಸೂಕ್ತ ಕ್ರಮ ತಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

  • ಸಹೋದ್ಯೋಗಿಗಳ ಕಿರುಕುಳ ಆರೋಪ: ಪೋಸ್ಟ್ ಮ್ಯಾನ್ ನೇಣಿಗೆ ಶರಣು

    ಸಹೋದ್ಯೋಗಿಗಳ ಕಿರುಕುಳ ಆರೋಪ: ಪೋಸ್ಟ್ ಮ್ಯಾನ್ ನೇಣಿಗೆ ಶರಣು

    ಬೆಂಗಳೂರು: ಅಂಚೆ ಕಚೇರಿಯಲ್ಲಿ ಸಹೋದ್ಯೋಗಿಗಳ ಕಿರುಕುಳ ತಾಳಲಾರದೆ ಮನನೊಂದು ಪೋಸ್ಟ್ ಮ್ಯಾನ್ ನೇಣಿಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯಲ್ಲಿ ನಡೆದಿದೆ.

    ಸುಮಾರು 24 ವರ್ಷದ ಸುರೇಶ್ ಮೃತ ಪೋಸ್ಟ್ ಮ್ಯಾನ್. ಭಾನುವಾರ ಸಂಜೆ ತನ್ನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.

    ಸುರೇಶ್ ಕಳೆದ 3-4 ವರ್ಷದಿಂದ ಪೋಸ್ಟ್ ಮ್ಯಾನ್ ಕೆಲಸ ಮಾಡುತ್ತಿದ್ದರು. ಸದ್ಯ ಡೆತ್ ನೋಟ್ ವಶಪಡಿಸಿಕೊಂಡಿರುವ ಡಾಬಸ್‍ಪೇಟೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಮಾಸಾಶನ, ಉಳಿತಾಯ ಖಾತೆಯ 40 ಲಕ್ಷ ರೂ. ಹಣದೊಂದಿಗೆ ಪೋಸ್ಟ್ ಮ್ಯಾನ್ ಎಸ್ಕೇಪ್!

    ಮಾಸಾಶನ, ಉಳಿತಾಯ ಖಾತೆಯ 40 ಲಕ್ಷ ರೂ. ಹಣದೊಂದಿಗೆ ಪೋಸ್ಟ್ ಮ್ಯಾನ್ ಎಸ್ಕೇಪ್!

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಯೋಧ್ಯ ಗ್ರಾಮದ ಪೋಸ್ಟ್ ಮ್ಯಾನ್ ಓರ್ವ ವಿವಿಧ ಮಾಸಾಶನ ಮತ್ತು ಉಳಿತಾಯ ಖಾತೆಯ ಲಕ್ಷಾಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾನೆ.

    ರಮೇಶ್ ಎಂಬಾತನೇ ಹಣದೊಂದಿಗೆ ಪರಾರಿಯಾದ ಪೋಸ್ಟ್ ಮ್ಯಾನ್. ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಉಪ್ಪಳ ಗ್ರಾಮದ ರಮೇಶ ಕಳೆದ 12 ವರ್ಷದಿಂದ ಗಂಗಾವತಿ ತಾಲೂಕಿನಲ್ಲಿ ಗುತ್ತಿಗೆ ಆಧಾರದ ಮೇಲೆ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದನು.

    ಏನಿದು ಪ್ರಕರಣ?: ಸುಮಾರು 30 ರಿಂದ 40 ಲಕ್ಷ ರೂ. ಹಣದೊಂದಿಗೆ ರಮೇಶ್ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ರಮೇಶ್ ಹೊಸ ಅಯೋಧ್ಯ, ಹಳೇ ಅಯೋಧ್ಯ ಮತ್ತು ಶ್ರೀಕೃಷ್ಣ ದೇವರಾಯ ನಗರ ಎಂಬ ಮೂರು ಗ್ರಾಮದ ನೂರಾರು ಮಾಸಾಶನ ಫಲಾನುಭವಿಗಳಿಗೆ ಸರ್ಕಾರ ನೀಡಿರುವ ಹಣ ಮತ್ತು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯ ಹಣವನ್ನು ಗ್ರಾಮಸ್ಥರಿಗೆ ವಿತರಿಸುತ್ತಿದ್ದನು. ಆದ್ರೆ ಇದೀಗ ಜೂನ್ 20ರಿಂದ ರಮೇಶ್ ನಾಪತ್ತೆಯಾಗಿದ್ದು, ಇದರಿಂದ ಮಾಸಾಶನ ಪಡೆಯುವ ಫಲಾನುಭವಿಗಳು ಮತ್ತು ಉಳಿತಾಯ ಖಾತೆಯ ಗ್ರಾಹಕರು ಪರದಾಡುವಂತಾಗಿದೆ.

    ಆದರೆ ಇದೂವರೆಗೂ ಅಂಚೆ ಇಲಾಖೆ ಅಧಿಕಾರಿಗಳು ಮಾತ್ರ ಪೊಲೀಸರಿಗೆ ದೂರು ನೀಡಲು ಮುಂದಾಗ್ತಿಲ್ಲ. ಗ್ರಾಮಸ್ಥರು ದೂರು ನೀಡಲು ಹೋದಾಗ ಪೊಲೀಸರು ದೂರನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪ ವ್ಯಕ್ತವಾಗುತ್ತಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.