– ವೃದ್ಧರ ಪಿಂಚಣಿ ಹಣವನ್ನೂ ನುಂಗಿದ ಆಸಾಮಿ
ಚಿಕ್ಕಬಳ್ಳಾಪುರ: ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಆನ್‌ಲೈನ್ ಬೆಟ್ಟಿಂಗ್‌ಗೆ ದಾಸನಾಗಿ ಬಡವರ ಹಣಕ್ಕೆ ಕನ್ನ ಹಾಕಿ ಪರಾರಿಯಾಗಿದ್ದಾನೆ.
ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಪೈಲಗುರ್ಕಿ ಗ್ರಾಮದ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೋಸ್ಟ್ ಮಾಸ್ಟರ್ ನಿಂಗೇಶ್ ಎಂಬಾತ ಬಡವರ ಹಣವನ್ನೇ ಆನ್‌ಲೈನ್ ಬೆಟ್ಟಿಂಗ್‌ಗೆ ಹಾಕಿ ಕೈ ಸುಟ್ಟುಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಚಿಕ್ಕಪೈಲಗುರ್ಕಿ ಅಂಚೆ ಕಚೇರಿಗೆ 13 ಹಳ್ಳಿಗಳು ಸೇರಿದ್ದು, ನೂರಾರು ಮಂದಿ ಹಳ್ಳಿ ಜನ ದುಡಿದ ಹಣವನ್ನ ಅಂಚೆ ಕಚೇರಿಯ ಖಾತೆಗಳಲ್ಲಿ ಜಮೆ ಮಾಡಿಕೊಂಡಿದ್ರು. ಅದರಲ್ಲೂ ಹಳ್ಳಿಗಾಡಿನಲ್ಲಿ ವಯೋವೃದ್ಧರಿಗೆ ಬರುವ ಪಿಂಚಣಿ ಸಹ ಇದೇ ಅಂಚೆ ಕಚೇರಿಯ ಮೂಲಕವೇ ಬರ್ತಿತ್ತು. ಪೆನ್ಷನ್, ಕೂಲಿ, ಆರ್‌ಡಿ, ಎಫ್‌ಡಿ ಹೀಗೆ ಬಡವರ ಖಾತಗೆಳಲ್ಲಿರಬೇಕಾದ ಹಣವನ್ನೆಲ್ಲಾ ಪೋಸ್ಟ್ ಮಾಸ್ಟರ್ ನಿಂಗೇಶ್ ಆನ್‌ಲೈನ್ ಗೇಮ್‌ಗಾಗಿ ಬಳಸಿಕೊಂಡಿದ್ದಾನೆ. ಹಳ್ಳಿಯ ಜನ ಕೇಳಿದಾಗ ಇನ್ನೂ ಬಂದಿಲ್ಲ ಅಂತ ಸುಳ್ಳು ಹೇಳಿಕೊಂಡು ಓಡಾಡಿಕೊಂಡಿದ್ದಾನೆ. ಜೋರಾಗಿ ಮಾತಾಡುವವರಿಗೆ ಆಗಾಗ್ಗೆ ಒಂದಷ್ಟು ಹಣ ಕೊಟ್ಟು ಸಮಾಧಾನ ಮಾಡಿಕೊಂಡು ಬಂದಿದ್ದಾನೆ. ಆದರೆ, ಈಗ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಹಣವನ್ನ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಹಾಸನ | ಮನೆಯಲ್ಲಿ ನಿಗೂಢ ಸ್ಫೋಟ – ಝೀರೋ ಟ್ರಾಫಿಕ್‍ನಲ್ಲಿ ಗಾಯಾಳುಗಳನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ
ಮೂಲತಃ ಚಿತ್ರದುರ್ಗ ಜಿಲ್ಲೆಯ ನಿಂಗೇಶ್ ಕಳೆದ 2 ವರ್ಷಗಳ ಹಿಂದಷ್ಟೇ ಚಿಕ್ಕಪೈಲಗುರ್ಕಿ ಗ್ರಾಮದ ಅಂಚೆಕಚೇರಿಗೆ ಕೆಲಸಕ್ಕೆ ಸೇರಿಕೊಂಡಿದ್ದ. ಆರಂಭದಲ್ಲಿ ಚೆನ್ನಾಗಿ ಕೆಲಸ ಮಾಡಿಕೊಂಡು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದ. ಕಳೆದ ಒಂದು ವರ್ಷದಿಂದ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ದಾಸನಾಗಿ ದುಡ್ಡನ್ನೆಲ್ಲಾ ಅದಕ್ಕೆ ಹಾಕಿ ಹಾಳು ಮಾಡಿಕೊಂಡಿದ್ದ. ಸಾಲದು ಅಂತ ಬಡವರ ಹಣವನ್ನ ಹಾಕಿ ಸಾಕಷ್ಟು ಸಾಲಸೋಲ ಮಾಡಿಕೊಂಡಿದ್ದ. ವೃದ್ಧರಿಗೆ ಬರುತ್ತಿದ್ದ ಪಿಂಚಣಿ ಹಣವನ್ನೂ ಸಹ ಬಿಡದೆ ಪೋಸ್ಟ್ ಮಾಸ್ಟರ್ ಲಿಂಗೇಶ್ ದುರಪಯೋಗ ಮಾಡಿಕೊಂಡಿದ್ದಾನೆ. ನರಸಿಂಹರೆಡ್ಡಿ ಎಂಬವರ ಮಕ್ಕಳ ಹೆಸರಲ್ಲಿ ಇಟ್ಟಿದ್ದ ಎಫ್‌ಡಿ ಹಣವನ್ನೂ ಡ್ರಾ ಮಾಡಿ ನುಂಗಿ ನೀರು ಕುಡಿದಿದ್ದಾನೆ. ಇದರಿಂದ ರೊಚ್ಚಿಗೆದ್ದ ನರಸಿಂಹರೆಡ್ಡಿ ಪೋಸ್ಟ್ ಮಾಸ್ಟರ್ ನಿಂಗೇಶ್ ಬೈಕ್ ಕಿತ್ತುಕೊಂಡು ಮನೆಯಲ್ಲಿಟ್ಟುಕೊಂಡಿದ್ದಾರೆ.
ವಿಷಯ ಬೆಳಕಿಗೆ ಬಂದ ತಕ್ಷಣ, ಅಂಚೆ ನಿರೀಕ್ಷಕರು ಹಾಗೂ ಉಪವಿಭಾಗಾಧಿಕಾರಿ ಶಶಿಕುಮಾರ್ ಚಿಕ್ಕಪೈಲಗುರ್ಕಿ ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದು ತಿಂಗಳಿನಿಂದ ಅಂಚೆ ಕಚೇರಿಗೆ ಬಂದಿದ್ದ ಪತ್ರಗಳನ್ನು ಸಹ ಹಂಚದೆ ಕಚೇರಿಯಲ್ಲೇ ಬಿಟ್ಟು, ಕೊನೆಗೆ ನಿಂಗೇಶ್ ಪರಾರಿಯಾಗಿದ್ದಾನೆ. ಹೀಗಾಗಿ ಮೇಲಾಧಿಕಾರಿಗಳು ಆತನನ್ನ ಅಮಾನತು ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕರ ಬಣ್ಣ ಬಯಲಾಗುತ್ತಿದೆ, ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ: ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಸಿಎಂ ಮನವಿ





