Tag: ಪೋಲ್ಯಾಂಡ್

  • ಟ್ಯಾಂಕರ್ ಪಲ್ಟಿಯಾಗಿ ರಸ್ತೆಯಿಡೀ ಹರಿಯಿತು ಚಾಕಲೇಟ್!

    ಟ್ಯಾಂಕರ್ ಪಲ್ಟಿಯಾಗಿ ರಸ್ತೆಯಿಡೀ ಹರಿಯಿತು ಚಾಕಲೇಟ್!

    ಪೋಲ್ಯಾಂಡ್: ಚಾಕಲೇಟ್ ದ್ರಾವಣ ತುಂಬಿದ್ದ ಟ್ಯಾಂಕರೊಂದು ರಸ್ತೆ ಮಧ್ಯೆ ಪಲ್ಟಿಯಾದ ಪರಿಣಾಮ ದ್ರವ ರೂಪದ ಚಾಕಲೇಟ್ ರಸ್ತೆಯಿಡೀ ಚೆಲ್ಲಿದ ಘಟನೆ ಪೋಲ್ಯಾಂಡ್ ನಲ್ಲಿ ನಡೆದಿದೆ.

    ಈ ಘಟನೆ ಬುಧವಾರ ನಡೆದಿದ್ದು, ಘಟನೆಯಿಂದ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ಬಂದಿತ್ತು. ಈ ಟ್ಯಾಂಕರ್ ದಕ್ಷಿಣ ಪೋಲ್ಯಾಂಡ್ ಗೆ ಸೇರಿದ್ದಾಗಿದೆ ಎಂಬುದಾಗಿ ವರದಿಯಾಗಿದೆ.

    ಗ್ರ್ಯಾಬೋಸ್ಜೆವೊ ಟ್ರಾಫಿಕ್ ತಡೆಗೋಡೆಗೆ ಡಿಕ್ಕಿಯಾದ ಪರಿಣಾಮ ಸುಮಾರು 12 ಟನ್ ಚಾಕಲೇಟ್ ದ್ರಾವಣವಿದ್ದ ಟ್ಯಾಂಕರ್ ಪಲ್ಟಿಯಾಗಿದೆ ಎಂದು ಅಲ್ಲಿನ ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

    ಘಟನೆಯಲ್ಲಿ 60 ವರ್ಷದ ಚಾಲಕನ ಕೈಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದರು. ಸೂರ್ಯನ ಬಿಸಿಲಿಗೆ ರಸ್ತೆಯಲ್ಲಿ ಚೆಲ್ಲಿದ್ದ ಚಾಕಲೇಟ್ ದ್ರಾವಣ ಒಣಗಿ ಅಂಟು ಅಂಟಾಗಿತ್ತು. ಹೀಗಾಗಿ ಆ ದ್ರಾವಣವನ್ನು ತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟರು. ಚಾಕಲೇಟ್ ಗಿಂತ ಎಣ್ಣೆಯನ್ನು ತೆರವುಗೊಳಿಸುವುದೇ ಸುಲಭ ಅಂತ ಸ್ಲುಪ್ಕಾ ನಗರದ ಪೊಲೀಸ್ ಮಾರ್ಲೆನಾ ಕುಕಾವಾಕ ತಿಳಿಸಿದ್ದಾರೆ.