Tag: ಪೊಲೀಸ್ ಸಿಬ್ಬಂದಿ

  • ಸಿಎಂ ಮುಂದೆ 25 ಬೇಡಿಕೆಗಳನ್ನ ಇಟ್ಟ ಪೊಲೀಸ್ ಸಿಬ್ಬಂದಿ

    ಸಿಎಂ ಮುಂದೆ 25 ಬೇಡಿಕೆಗಳನ್ನ ಇಟ್ಟ ಪೊಲೀಸ್ ಸಿಬ್ಬಂದಿ

    ಬೆಂಗಳೂರು: ವೇತನ ತಾರತಮ್ಯ ನಿವಾರಣೆ, ಪೊಲೀಸ್ ಕುಟುಂಬಗಳಿಗೆ ದೊರಕುವ ಸೌಲಭ್ಯ, ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಕೆಳಹಂತದ ಪೊಲೀಸ್ ಸಿಬ್ಬಂದಿ ನಾಲ್ಕೈದು ವರ್ಷಗಳಿಂದ ಹೋರಾಟ ಮಾಡುತ್ತಾ ಮನವಿ ಪತ್ರವನ್ನ ಸಲ್ಲಿಸುತ್ತಾ ಬಂದಿದ್ದಾರೆ. ಈ ಬಾರಿ ಮಾರ್ಚ್ ತಿಂಗಳಲ್ಲಿ ಮಂಡನೆ ಆಗುವ 2020 -21ನೇ ಸಾಲಿನ ಬಜೆಟ್‍ನ್ನಲ್ಲಾದರೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪೊಲೀಸ್ ಸಿಬ್ಬಂದಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

    ರಾಜ್ಯದ ವಿವಿಧ ಜಿಲ್ಲೆಗಳ 95 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ. ಬೇರೆ ರಾಜ್ಯದ ಮಾದರಿಯಂತೆ ನಮಗೂ ಸೌಲಭ್ಯ ಕಲ್ಪಿಸಿ ಈ ಮನವಿ ಪತ್ರವನ್ನು ಖುದ್ದಾಗಿ ಓದಿ ನಿರ್ಧಾರ ತೆಗೆದುಕೊಂಡು ಬಜೆಟ್‍ನಲ್ಲಿ ಮಂಡಿಸಿ ಎಂದು ವಿನಮ್ರತೆಯಿಂದ ಬೇಡಿಕೊಂಡಿದ್ದಾರೆ.

    ಬೇಡಿಕೆಗಳೇನು?
    1. ರಾಘವೇಂದ್ರ ಔರಾದ್ಕರ್ ಅವರು ನೀಡಿರುವ ವರದಿಯನ್ನು ಪ್ರಸ್ತುತ ಬಜೆಟ್‍ನಲ್ಲಿ ಮಂಡಿಸಿ, ಇದಕ್ಕಾಗಿ 5,000 ಕೋಟಿ ರೂ. ಮೀಸಲು ಇಡಬೇಕು.

    2. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪಾಲಿಗೆ ಮರಣ ಶಾಸನವಾಗಿರುವ ಹಳೆಯ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ, ಆ ಯೋಜನೆಯನ್ನು ಮೊದಲಿನಂತೆ ಸಂಪೂರ್ಣ ಯೋಜನೆಯಾಗಿ ಜಾರಿಮಾಡುವಂತೆ ಆಗ್ರಹ.

    3. ನೂತನ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿದ ಕೂಡಲೇ ಏಪ್ರಿಲ್ 1, 2020ರಿಂದ ಜಾರಿಗೆ ಬರುವಂತೆ ಎಲ್ಲಾ ಸರ್ಕಾರಿ ನೌಕರರಿಗೆ ಜಿಪಿಎಫ್ ಸೌಲಭ್ಯ ಜಾರಿಗೆ ಗೊಳಿಸಲು ಮನವಿ.

    4. ರಾಘವೇಂದ್ರ ಔರದ್ಕರ್ ವರದಿಯಂತೆ ಎಲ್ಲಾ ಪೊಲೀಸ್ ಸಿಬ್ಬಂದಿ ಮೂಲ ವೇತನದಲ್ಲಿ ಶೇ. 30ರಿಂದ 35ರಷ್ಟು ಹೆಚ್ಚಳ ಮಾಡಬೇಕು.

    5. ಪೊಲೀಸ್ ಇಲಾಖೆಯಲ್ಲಿನ ಎಲ್ಲಾ ಅಧಿಕಾರಿಗಳ ವೇತನ ತೆಲಂಗಾಣ ರಾಜ್ಯದ ಮಾದರಿಯಲ್ಲಿ ಹೆಚ್ಚಾಳ ಮಾಡುವಂತೆ ಆಗ್ರಹ.

    6. ತೆಲಂಗಾಣ ರಾಜ್ಯದ ಮಾದರಿಯಂತೆ ಹೊಸದಾಗಿ ಸೇರಿದ ಪೊಲೀಸ್ ಕಾನ್ಸ್‌ಟೇಬಲ್ ವೇತನವನ್ನ 45 ಸಾವಿರ ರೂಪಾಯಿ ಮಾಡುವಂತೆ ಬೇಡಿಕೆ.

    7. ರಾಘವೇಂದ್ರ ಔರದ್ಕರ್ ಐಪಿಎಸ್, ಎಡಿಜಿಪಿ ಅವರ ವೇತನ ತಾರತಮ್ಯ ನಿವಾರಣ ಸಮಿತಿ ಮುಂದಿರುವ ಉಳಿದ ಹಣವನ್ನು ನೀಡುವುದರ ಬಗ್ಗೆ ಮನವಿ.

    8. ಪೊಲೀಸ್ ಕಾನ್ಸ್‌ಟೇಬಲ್ ಗಳಿಗೆ ನೀಡುವ ಸಾರಿಗೆ ಭತ್ಯೆಯನ್ನು 600 ರಿಂದ 2,000 ರೂಪಾಯಿಗೆ ಹೆಚ್ಚಳ ಮಾಡುವಂತೆ ವಿನಂತಿ.

    9. ಸ್ಪೆಷಲ್ ಕಿಟ್ ಭತ್ಯೆಯನ್ನು 40 ರೂಪಾಯಿಂದ 500 ರೂಪಾಯಿಗೆ ಹೆಚ್ಚಳ ಮಾಡುವಂತೆ ಆಗ್ರಹ.

    10. ಪೋಲೀಸ್ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್ ನೋಡುವ ಪಡಿತರ ವಿತರಣಾ ಭತ್ಯೆಯನ್ನು 400 ರಿಂದ 4,000 ಸಾವಿರ ರೂಪಾಯಿ ಮಾಡುವಂತೆ ಮನವಿ.

    11. ವಾಯುವ್ಯ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಇರುವ ತಂತ್ರಾಂಶ ಆಧಾರಿತ ರಜೆಯ ನಿಯಮವನ್ನು ಪೊಲೀಸ್ ಇಲಾಖೆಯಲ್ಲಿ ಜಾರಿಗೆ ತರುವಂತೆ ಒತ್ತಾಯ.

    12. ಅರ್ಥಿಕ ಇಲಾಖೆ ಮಂಜೂರು ಮಾಡುತ್ತಿರುವ ವಾರದ ರಜೆಯ ಭತ್ಯೆ 200 ರೂಪಾಯಿಯನ್ನು ರದ್ದು ಮಾಡಿ ಖಾಯಂ ರಜೆ ನೀಡವಂತೆ ಆಗ್ರಹ.

    13. 2ನೇ ಶನಿವಾರ ಮತ್ತು 4 ನೇ ಶನಿವಾರದ ರಜೆಯ ಬದಲಾಗಿ ವಾರ್ಷಿಕವಾಗಿ ಒಂದು ತಿಂಗಳು ಹೆಚ್ಚುವರಿ ವೇತನವನ್ನು ನೀಡುವಂತೆ ಮನವಿ.

    14. ಪೊಲೀಸ್ ಪೇದೆಯಿಂದ ಹಿಡಿದು ಪಿಎಸ್‍ಐವರೆಗೂ ಸರ್ಕಾರಿ ರಜೆ ದಿನಗಳ ಸಂಬಳವನ್ನು ನೀಡುವ ಬದಲು ಆ ದುಡ್ಡನ್ನು ವಿವಿಧ ಭತ್ಯೆಗಳನ್ನ ನೀಡಲು ಬಳಸಲಾಗ್ತಿದೆ. ಹೀಗಾಗಿ ಸರ್ಕಾರಿ ರಜೆ ದಿನಗಳ ಸಂಬಳ ನೀಡಿ ಮತ್ತು ಭತ್ಯೆಯೂ ನೀಡಬೇಕಾಗಿ ವಿನಂತಿ.

    15. ಪೊಲೀಸ್ ಪೇದೆಯಿಂದ ಹಿಡಿದು ಪೊಲೀಸ್ ಇನ್ಸ್‌ಪೆಕ್ಟರ್‌ಗೆ ನೀಡುವ ಭ್ಯತ್ಯೆಯನ್ನು ಪರಿಷ್ಕರಿಸಿ ಹೆಚ್ಚಳ ಮಾಡುವಂತೆ ಮನವಿ.

    16. ಕೇಂದ್ರದಲ್ಲಿ ಪೊಲೀಸ್ ಪೇದೆಯ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಒಂದು ಮಗುವಿಗೆ 25 ಸಾವಿರ ರೂಪಾಯಿ ನೀಡುವಂತೆ ರಾಜ್ಯದಲ್ಲೂ ಪೊಲೀಸ್ ಪೇದೆಯ ಮಕ್ಕಳಿಗೆ ಶಿಕ್ಷಣಕ್ಕೆ ಸಹಕರಿಸುವಂತೆ ಒತ್ತಾಯ.

    17. ಪೊಲೀಸ್ ಪೇದೆ ಮತ್ತು ಹೆಡ್ ಕಾನ್ಸ್‌ಟೇಬಲ್ ಗಳ ನಿಶ್ಚಿತ ಪ್ರಯಾಣ ಭತ್ಯೆಯನ್ನು ಹೆಚ್ಚಳ ಮಾಡುವಂತೆ ಮನವಿ.

    18. ಪ್ರತಿ ವರ್ಷ ಕನಿಷ್ಠ ಒಂದು ಸಲವಾದರೂ ಪೊಲೀಸ್ ಸಿಬ್ಬಂದಿ ಜೊತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸಭೆ ಮಾಡುವಂತೆ ಬೇಡಿಕೆ.

    19. ಹಾಸನ ಜಿಲ್ಲಾ ಪೊಲಿಸ್ ಮಾದರಿಯಂತೆ ಪಿ.ಸಿ, ಹೆಚ್.ಸಿಗಳ ವಾರದ ರಜೆಯ ಭತ್ಯೆಯನ್ನು ಸಂಬಳದಲ್ಲಿ ಸೇರಿಸಿಕೊಡುವಂತೆ ಒತ್ತಾಯ.

    20. ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬದ ಜೊತೆ ಒಂದು ತಿಂಗಳ ಕಾಲ ಉಚಿತವಾಗಿ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಸಂಚರಿಸಲು ಮನವಿ

    21. ಪೊಲೀಸ್ ಪೇದೆ, ಎಎಸ್‍ಐ, ಹೆಚ್.ಸಿ ಕರ್ತವ್ಯದ ಮೇಲೆ ಸಂಚರಿಸಲು ಖಾಯಂ ಉಚಿತ ಬಸ್ ಸೇವೆಗೆ ಆಗ್ರಹ.

    22. ಪೊಲೀಸ್ ಸಿಬ್ಬಂದಿಗೆ ಒಂದು ತಿಂಗಳ ಕುಟುಂಬದ ಜೊತೆ ಸಂಚಾರ ಮಾಡಲು ಉಚಿತ ರೈಲ್ವೆ ಪಾಸ್ ನೀಡುವಂತೆ ಮನವಿ.

    23. ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್ ಗೆ ಕರ್ತವ್ಯದ ಮೇಲೆ ಸಂಚರಿಸಲು ಭಾರತದಾದ್ಯಂತ ಉಚಿತ ರೈಲ್ವೆ ಖಾಯಂ ಬಸ್ ಪಾಸ್ ನೀಡುವಂತೆ ಆಗ್ರಹ.

    24. ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ 8 ಗಂಟೆಗಳ ಕಾಲ ಕರ್ತವ್ಯದ ಸಮಯ ನಿಗದಿಪಡಿಸುವಂತೆ ಮನವಿ.

    25. ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು 8 ಗಂಟೆ ಮೀರಿ ಕೆಲಸ ಮಾಡಿದ್ದಲ್ಲಿ ಪ್ರತಿ ಗಂಟೆಗೆ 500 ರೂಪಾಯಿ ನೀಡುವಂತೆ ಒತ್ತಾಯ.

  • ಒತ್ತಡದ ಮಧ್ಯೆ ಡ್ರಮ್ಸ್ ಸರ್ಕಲ್ ಇವೆಂಟ್ ಎಂಜಾಯ್ ಮಾಡಿದ ಪೊಲೀಸ್ ಸಿಬ್ಬಂದಿ

    ಒತ್ತಡದ ಮಧ್ಯೆ ಡ್ರಮ್ಸ್ ಸರ್ಕಲ್ ಇವೆಂಟ್ ಎಂಜಾಯ್ ಮಾಡಿದ ಪೊಲೀಸ್ ಸಿಬ್ಬಂದಿ

    ಬೆಂಗಳೂರು: ವರ್ಷದ 365 ದಿನಗಳಲ್ಲಿ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ರಿಲೀಫ್ ನೀಡಲು ಯಶವಂತಪುರದ ಒರಾಯನ್ ಮಾಲ್‍ನಲ್ಲಿ ಡ್ರಮ್ ಸರ್ಕಲ್ ವ್ಯವಸ್ಥೆ ಮಾಡಲಾಗಿತ್ತು. ಒತ್ತಡದಲ್ಲೆ ಕೆಲಸ ಕಾರ್ಯಗಳನ್ನು ಮಾಡಿ ದಣಿದಿರುವ ಪೊಲೀಸರು ಡ್ರಮ್ ಸರ್ಕಲ್ ಇವೆಂಟ್ ಅದ್ಧೂರಿಯಾಗಿ ಎಂಜಾಯ್ ಮಾಡಿದರು.

    ಉತ್ತರ ವಿಭಾಗದ ಸುಮಾರು 600ಕ್ಕೂ ಹೆಚ್ಚು ಪೊಲೀಸರು ಇವೆಂಟ್‍ನಲ್ಲಿ ಭಾಗವಿಸಿ ಡ್ರಮ್ಸ್ ಬಾರಿಸಿ ಫುಲ್ ಎಂಜಾಯ್ ಮಾಡಿದರು. ಸುಮಾರು ಒಂದು ಗಂಟೆ ನಡೆದ ಕಾರ್ಯಕ್ರಮದಲ್ಲಿ ದರ್ಶನ್ ಅಭಿನಯದ ‘ಲಂಕೇಶ್ ಪತ್ರಿಕೆ’ ಚಿತ್ರದ ನಾಯಕಿ ವಸೂಂದರ ರಾಜ್ ಡ್ರಮ್ಸ್ ವಾದ್ಯವನ್ನು ಹೇಳಿಕೊಟ್ಟರು.

    ಪ್ರತಿಯೊಬ್ಬ ಪೊಲೀಸರ ಕೈಯಲ್ಲಿ ಡ್ರಮ್ಸ್ ಕೊಟ್ಟು ನಾದದ ತಕ್ಕಂತೆ ಬಡಿಯೋದನ್ನು ಹೇಳಿಕೊಟ್ಟರು. ವಿನೂತವಾಗಿ ಮಾಡಿದ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ ಉತ್ತರ ವಿಭಾಗದ ಪೊಲೀಸರು ಎಂಜಾಯ್ ಮಾಡಿದರು.

    ಅಲ್ಲದೆ ಈ ಬಗ್ಗೆ ಮಾತನಾಡಿದ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು, ಕಳೆದ 30 ವರ್ಷದಿಂದ ಕೆಲಸ ಮಾಡಿದರು ಇಂತಹ ಅನುಭವ ಆಗಿರಲಿಲ್ಲ. ಇಂದು ಇಡೀ ದಿನ ಎಂಜಾಯ್ ಮಾಡಿದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಒರಯನ್ ಮಾಲ್‍ನಲ್ಲಿ ಬೆಳಗ್ಗೆ ಸಿನಿಮಾ ನೋಡುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹಾಗಾಗಿ 20 -25 ವರ್ಷದಿಂದ ಇಲಾಖೆಯಲ್ಲಿ ಕೆಲಸ ಮಾಡಿದ್ದರ ಫಲ ಇದೊಂದು ಹೊಸ ಅನುಭವಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

  • ಸೈಬರ್ ಕ್ರೈಂ ಹೇಗೆ ನಡೆಯುತ್ತೆ – ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ

    ಸೈಬರ್ ಕ್ರೈಂ ಹೇಗೆ ನಡೆಯುತ್ತೆ – ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ

    ಕಾರವಾರ: ಪ್ರತಿಯೊಬ್ಬರಿಗೂ ಮದುವೆ ಎನ್ನುವುದು ಜೀವನದ ಪ್ರಮುಖ ಕ್ಷಣ. ಈ ಸಂದರ್ಭವನ್ನು ಸದಾ ನೆನಪಿಟ್ಟುಕೊಳ್ಳಲು ಬಹಳಷ್ಟು ಮಂದಿ ಏನೇನೋ ಮಾಡುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮದುವೆಯ ಪತ್ರಿಕೆಯನ್ನು ಅಂದ ಚಂದದಿಂದ ಮುದ್ರಿಸಿ ತಮ್ಮ ಪ್ರತಿಷ್ಠೆ ಮೆರೆಯುತ್ತಾರೆ. ಆದರೇ ಇಲ್ಲೊಬ್ಬ ಪೊಲೀಸ್ ಸಿಬ್ಬಂದಿ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಮದುವೆಯ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಮದುವೆ, ವಧು-ವರರ ಹೆಸರು ಸೇರಿದಂತೆ ವಿವಾಹ ನಡೆಯುವ ಸ್ಥಳದ ಬಗ್ಗೆ ಮಾಹಿತಿ ನೀಡುವುದು ಸಾಮಾನ್ಯ. ಆದರೆ ಪೊಲೀಸ್ ಕಾನ್ಸ್ಟೇಬಲ್ ನಾರಾಯಣ ಎಂ.ಎಸ್ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮೂಲತಃ ಹಾವೇರಿ ಜಿಲ್ಲೆಯ ತಿಳುವಳ್ಳಿಯವರಾದ ಇವರು ಕಾರವಾರದ ಜಿಲ್ಲಾ ಸೈಬರ್ ಅಪರಾಧ ಠಾಣೆಯ ಪೊಲೀಸ್ ಅಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಡಿ. 12ರಂದು ತಿಳುವಳ್ಳಿಯಲ್ಲಿ ಪ್ರತಿಭಾ ಅವರ ಜೊತೆ ನಾರಾಯಣ ಅವರ ವಿವಾಹ ನಡೆಯಲಿದ್ದು ವಿವಾಹ ಆಮಂತ್ರಣ ಪತ್ರಿಕೆ ಮಾತ್ರ ಬಹು ವಿಶಿಷ್ಠವಾಗಿದೆ. ಮದುವೆಯ ಮಾಹಿತಿಯ ಜೊತೆಗೆ ಸೈಬರ್ ಕ್ರೈಂ ವಿವರಗಳನ್ನು ಒಳಗೊಂಡಿರುವ ಆಮಂತ್ರಣ ಪತ್ರಿಕೆ ಸೈಬರ್ ವಂಚನೆಗಳು ಯಾವ ರೀತಿ ಆಗುತ್ತವೆ ಮತ್ತು ಅವುಗಳಿಂದ ಹೇಗೆ ರಕ್ಷಣೆ ಪಡೆಯಬೇಕು ಎಂಬುದನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.

    ಮೊದಲು ಸೈಬರ್ ವಂಚನೆಯ ವಿಧಾನಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಮೊಬೈಲ್ ಗೆ ಬ್ಯಾಂಕಿನ ಹೆಸರಿನಲ್ಲಿ ಅಪರಿಚಿತ ಕರೆಗಳು ಬಂದಾಗ ಪಿನ್ ನಂಬರ್ ಇತ್ಯಾದಿ ನೀಡಿದರೆ ಹೇಗೆ ಹಣ ದೋಚುತ್ತಾರೆ. ವೈವಾಹಿಕ ಜಾಲತಾಣದಲ್ಲಿ ಮದುವೆ ಆಗುವುದಾಗಿ ನಂಬಿಸಿ ವಂಚಿಸುವ ಅಪರಾಧ, ಉದ್ಯೋಗ ಕೊಡಿಸುವುದಾಗಿ ಸುಳ್ಳು ಭರವಸೆ, ಆನ್ಲೈನ್ ಖರೀದಿಯಲ್ಲಿ ವಂಚನೆ ಇತ್ಯಾದಿ ವಿವರಗಳನ್ನು ನೀಡಲಾಗಿದೆ. ಅಲ್ಲದೆ ಈ ವಂಚನೆಗಳಿಂದ ಹೇಗೆ ಎಚ್ಚೆತ್ತುಕೊಳ್ಳಬೇಕು ಎನ್ನುವ ಬಗ್ಗೆಯೂ ವಿವರಿಸಲಾಗಿದೆ.

    ಸಾಮಾನ್ಯ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸಿದಷ್ಟು ಸುಲಭವಾಗಿ ಸೈಬರ್ ಕ್ರೈಂ ವಿಭಾಗದಲ್ಲಿ ಆಗುವುದಿಲ್ಲ. ಮೋಸ ಮಾಡುವ ವ್ಯಕ್ತಿ ಪ್ರಪಂಚದ ಯಾವುದೇ ಮೂಲೆಯಲ್ಲಿಯಾದರೂ ಕುಳಿತು ಕೇವಲ ಒಂದು ಆಂಡ್ರಾಯ್ಡ್ ಫೋನ್ ಮೂಲಕ ಎಲ್ಲಿಯೋ ಇರುವ ಮುಗ್ಧನನ್ನು ಸುಲಭವಾಗಿ ವಂಚಿಸುತ್ತಾರೆ. ಅಲ್ಲದೇ ಆರೋಪಿಯ ನಿಖರವಾದ ಹೆಸರು, ವಿಳಾಸ ವಂಚನೆಗೊಳಗಾದವನಿಗೂ ಗೊತ್ತಿರುವುದಿಲ್ಲ. ಇಷ್ಟೊಂದು ಸಂಕೀರ್ಣವಾದ ಪ್ರಕರಣದಲ್ಲಿ ಅಂತಿಮವಾಗಿ ಆರೋಪಿಯನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯ. ಹಿಡಿದರೂ ತಪ್ಪಿಸಿಕೊಳ್ಳುವ ಸಾಕಷ್ಟು ದಾರಿಗಳಿವೆ.

    ಜನರು ಈ ಬಗ್ಗೆ ಜಾಗೃತವಾಗಬೇಕಾಗಿದ್ದು ಸರಿಯಾದ ದಾರಿ ಎನ್ನುವುದು ನನಗೆ ಮನವರಿಕೆಯಾಗಿದೆ. ಈ ಮೊದಲು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ಜಾಗೃತಿ ಕುರಿತು ಉಪನ್ಯಾಸ ನೀಡುತ್ತಾ ಬಂದಿದ್ದೇನೆ. ವಿವಾಹ ಆಮಂತ್ರಣ ಪತ್ರಿಕೆಯು ಸಾವಿರಾರು ಜನರನ್ನು ತಲುಪಲು ಸಾಧ್ಯವಾಗದಿದ್ದರಿಂದ ಈ ವೇದಿಕೆಯನ್ನು ಬಳಸಿಕೊಂಡಿದ್ದೇನೆ ಎಂದು ನಾರಾಯಣ್ ಹೇಳುತ್ತಾರೆ.

    ನಾರಾಯಣ್ ಅವರ ಈ ವಿಶಿಷ್ಠವಾದ ಮದುವೆ ಪತ್ರಿಕೆ ನೆಂಟರಿಷ್ಟರಲ್ಲದೆ ಸಾರ್ವಜನಿಕರಲ್ಲೂ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಮದುವೆ ಪತ್ರಿಕೆ ಕೇವಲ ಆಮಂತ್ರಣ ಪತ್ರಿಕೆಯಾಗದೇ ಜನರಿಗೆ ಕ್ರೈಂ ಬಗ್ಗೆ ಮಾಹಿತಿ ನೀಡುವ ಜಾಗೃತಿಗೊಳಿಸುವ ವೇದಿಕೆಯಾಗಿದ್ದು ನಿಜವಾಗಿಯೂ ಶ್ಲಾಘನೀಯವಾಗಿದೆ.

  • ಪ್ರವಾಹದಲ್ಲಿ ವಾಸುದೇವನಂತೆ ಮಗುವನ್ನು ತಲೆಮೇಲೆ ಹೊತ್ತ ಪೊಲೀಸ್

    ಪ್ರವಾಹದಲ್ಲಿ ವಾಸುದೇವನಂತೆ ಮಗುವನ್ನು ತಲೆಮೇಲೆ ಹೊತ್ತ ಪೊಲೀಸ್

    ಗಾಂಧಿನಗರ: ಗುಜರಾತಿನ ವಡೋದರಾದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಮಗುವೊಂದನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇರಿಸಿ, ನೀರಿನಲ್ಲಿ ತಲೆಮೇಲೆ ಹೊತ್ತು ರಕ್ಷಣೆ ಮಾಡಿದ್ದಾರೆ.

    ಪ್ರವಾಹದಿಂದ ವಡೋದರಾ ಜಲಾವೃತಗೊಂಡಿದ್ದು, ಎಲ್ಲಾ ಪ್ರದೇಶದಲ್ಲೂ ಸುಮಾರು 4-5 ಅಡಿಯಷ್ಟು ನೀರು ತುಂಬಿದೆ. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ನಗರದ ಪೊಲೀಸ್ ಸಿಬ್ಬಂದಿ, ಎನ್‍ಡಿಆರ್‍ಎಫ್ ಸಿಬ್ಬಂದಿ ತೊಡಗಿದ್ದಾರೆ. ಈ ಮಧ್ಯೆ ತಲೆಮೇಲೆ ವಾಸುದೇವ ಕೃಷ್ಣನನ್ನು ಹೊತ್ತುಕೊಂಡು ಹೋದಂತೆ ರಾವ್‍ಪುರ ಪೊಲೀಸ್ ಠಾಣೆಯ ಎಸ್‍ಪಿ ಜಿ.ಕೆ ಚಾವ್ಡಾ ಅವರು ಪ್ರವಾಹದಲ್ಲಿ ಸಿಲುಕಿದ್ದ ಒಂದು ತಿಂಗಳ ಹೆಣ್ಣು ಮಗುವನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಮಲಗಿಸಿ, ತಲೆಮೇಲೆ ಹೊತ್ತು ರಕ್ಷಿಸಿದ್ದಾರೆ.

    ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಜೊತೆಗೂಡಿ ದೇವಪುರದ ವಿಶ್ವಾಮಿತ್ರ ರೈಲ್ವೇ ನಿಲ್ದಾಣದ ಆಸುಪಾಸಿನಲ್ಲಿದ್ದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುತ್ತಿದ್ದರು. ಈ ವೇಳೆ ಓರ್ವ ದಂಪತಿ ತಮ್ಮ 1 ತಿಂಗಳ ಮಗುವನ್ನು ಹಿಡಿದು ನೀರನ್ನು ದಾಟಲು ಹಿಂಜರಿಯುತ್ತಿದ್ದರು. ಆಗ ಚಾವ್ಡಾ ಅವರು ದಂಪತಿಗೆ ಧೈರ್ಯ ತುಂಬಿ ಮಗುವನ್ನು ತಲೆಮೇಲೆ ಹೊತ್ತುಕೊಂಡು ಬಂದು ರಕ್ಷಿಸಿದ್ದಾರೆ. ಈ ರಕ್ಷಣೆ ಕಾರ್ಯಾಚರಣೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪೊಲೀಸ್ ಸಿಬ್ಬಂದಿ ಕಾರ್ಯ ಎಲ್ಲರ ಮನ ಗೆದ್ದಿದೆ.

    ಈ ಬಗ್ಗೆ ಗುಜರಾತಿನ ಐಪಿಎಸ್ ಅಧಿಕಾರಿಯೊಬ್ಬರು ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿ, ಫೋಟೋ ಹಾಗೂ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಡೋದರಾ ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದಿರುವ ಕಾರ್ಯ ನೋಡಿ ಹೆಮ್ಮೆಯಾಗುತ್ತಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಗುರುವಾರದವರೆಗೆ ವಡೋದರಾದಲ್ಲಿ 499 ಮಿ.ಮಿ ಮಳೆಯಾಗಿದೆ. ಇದರಿಂದ ಅಜ್ವಾ ಡ್ಯಾಮ್ ಭರ್ತಿಯಾಗಿದಕ್ಕೆ ನೀರನ್ನು ಹೊರಬಿಡಲಾಗಿತ್ತು. ಪರಿಣಾಮ ನಗರಕ್ಕೆ ನೀರು ನುಗ್ಗಿ ಪ್ರವಾಹ ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ ಸುಮಾರು 6 ಅಡಿಯವರೆಗೂ ನೀರು ನಿಂತಿದೆ. ವಿಶ್ವಾಮಿತ್ರ ನದಿಯಲ್ಲಿದ್ದ ಮಸಳೆಗಳು ಕೂಡ ನಗರವನ್ನು ಪ್ರವೇಶಿಸಿದ್ದು, ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಸೆರೆಹಿಡಿಯುವ ಕಾರ್ಯವನ್ನು ನಡೆಸುತ್ತಿದ್ದಾರೆ. ಜೊತೆಗೆ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯದಲ್ಲಿ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಹಾಗೂ ಸ್ಥಳೀಯ ಪೊಲೀಸರು ತೊಡಗಿದ್ದಾರೆ.

  • ಹೆಚ್‍ಎಸ್‍ಆರ್ ಪೊಲೀಸರಿಗೆ ಸ್ಪೆಷಲ್ ಗಿಫ್ಟ್ ನೀಡಿದ ಇನ್ಸ್ ಪೆಕ್ಟರ್!

    ಹೆಚ್‍ಎಸ್‍ಆರ್ ಪೊಲೀಸರಿಗೆ ಸ್ಪೆಷಲ್ ಗಿಫ್ಟ್ ನೀಡಿದ ಇನ್ಸ್ ಪೆಕ್ಟರ್!

    ಬೆಂಗಳೂರು: ಹೆಚ್‍ಎಸ್‍ಆರ್ ಪೊಲೀಸ್ ಸಿಬ್ಬಂದಿಗೆ ಠಾಣೆಯ ಇನ್ಸ್ ಪೆಕ್ಟರ್ ಎಸ್.ಆರ್ ರಾಘವೇಂದ್ರ ವಿಶೇಷ ಉಡುಗೊರೆ ನೀಡಿದ್ದಾರೆ.

    ಸಿಬ್ಬಂದಿಯ ಹುಟ್ಟುಹಬ್ಬದ ದಿನ ಹಾಗೂ ವಿವಾಹ ವಾರ್ಷಿಕೋತ್ಸವ ದಿನ ಕಡ್ಡಾಯ ವಾರದ ರಜೆಯನ್ನು ಘೋಷಣೆ ಮಾಡಿದ್ದಾರೆ. ಒತ್ತಡದ ಬದುಕಿನಲ್ಲಿ ನಿಮ್ಮ ಕುಟುಂಬದವರು ನಿಮ್ಮ ಪ್ರೀತಿ ನಿರೀಕ್ಷೆ ಮಾಡುತ್ತಿರುತ್ತಾರೆ. ಇದಕ್ಕಾಗಿ ಹುಟ್ಟುಹಬ್ಬದ ದಿನ ಹಾಗೂ ವಿವಾಹದ ದಿನ ನಿಮ್ಮ ಕುಟುಂಬದ ಜೊತೆಯೇ ಕಳೆಯಿರಿ ಎಂದು ಇನ್ಸ್ ಪೆಕ್ಟರ್ ಸಿಬ್ಬಂದಿಗೆ ಪತ್ರದ ಮೂಲಕ ಗಿಫ್ಟ್ ನೀಡಿದ್ದಾರೆ.

    ಇನ್ಸ್ ಪೆಕ್ಟರ್ ಪತ್ರ:
    ಪ್ರೀತಿಯ ಹೆಚ್‍ಎಸ್‍ಆರ್ ಠಾಣಾ ಸಿಬ್ಬಂದಿ ಸಹೋದರ/ಸಹೋದರಿಯರೇ.. “ಯಾವಾಗಲೂ ಬಿಡುವಿಲ್ಲದೆ ಕೆಲಸದಲ್ಲಿ ತಮ್ಮನ್ನು ನಾನು ಮರೆತಿರುತ್ತೇವೆ. ನಮಗೂ ಒಂದು ಕುಟುಂಬವಿದೆ, ಅವರಿಗೂ ನಾವು ಸಮಯ ನೀಡಬೇಕು ಎಂಬುದನ್ನು ಮರೆತು ಹಗಲಿರುಳು ಕೆಲಸ ಮಾಡುತ್ತಿರುತ್ತೇವೆ. ಆದರೆ ಅಂತಿಮವಾಗಿ ನಮ್ಮನ್ನು  ನಮ್ಮ ಕುಟುಂಬದವರು ಮತ್ತು ಪ್ರೀತಿ ಪಾತ್ರದಾರ ಸ್ನೇಹಿತರು ಮಾತ್ರ ನಿರೀಕ್ಷಿಸುತ್ತಿರುತ್ತಾರೆ. ಅದಕ್ಕಾಗಿ ನಿಮ್ಮ ಹುಟ್ಟುಹಬ್ಬದ ದಿನವನ್ನು ಹಾಗೂ ನಿಮ್ಮ ವಿವಾಹದ ದಿನವನ್ನು ಹೆಚ್ಚ ಅರ್ಥಪೂರ್ಣವಾಗಿ ಆಚರಿಸಲು ಆ ದಿನಗಳಂದು ಕಡ್ಡಾಯವಾಗಿ ವಾರದ ರಜೆಯನ್ನು ಬಳಸಿಕೊಳ್ಳಲು ಸೂಚಿಸಿರುತ್ತೇನೆ. ಇದರಿಂದ ನೀವುಗಳು ವೃತ್ತಿ ಜೀವನದಲ್ಲಿ ಒತ್ತಡವಿಲ್ಲದೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲಿ ಎಂಬುದು ನನ್ನ ಆಶಯ” ಎಂದು ಬರೆದಿದ್ದಾರೆ.

    ಇನ್ಸ್ ಪೆಕ್ಟರ್ ಎಸ್.ಆರ್ ರಾಘವೇಂದ್ರ ಅವರು ನೀಡಿದ ಈ ಕೊಡುಗೆಯಿಂದ ಪೊಲೀಸ್ ಸಿಬ್ಬಂದಿ ಫುಲ್ ಖುಷಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 100ಕ್ಕೂ ಹೆಚ್ಚು ಪ್ರಕರಣಗಳ ಪತ್ತೆ – ಪೊಲೀಸ್ ಸಿಬ್ಬಂದಿಗೆ ಡಿಸಿಪಿ ಚನ್ನಣ್ಣನವರಿಂದ ಪ್ರವಾಸ, 1ಲಕ್ಷ ನಗದು, ಬೈಕ್ ನೀಡಿ ಗೌರವ

    100ಕ್ಕೂ ಹೆಚ್ಚು ಪ್ರಕರಣಗಳ ಪತ್ತೆ – ಪೊಲೀಸ್ ಸಿಬ್ಬಂದಿಗೆ ಡಿಸಿಪಿ ಚನ್ನಣ್ಣನವರಿಂದ ಪ್ರವಾಸ, 1ಲಕ್ಷ ನಗದು, ಬೈಕ್ ನೀಡಿ ಗೌರವ

    ಬೆಂಗಳೂರು: ಸುಮಾರು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದ ಪೊಲೀಸ್ ಸಿಬ್ಬಂದಿಗೆ ಡಿಸಿಪಿ ರವಿ ಡಿ ಚನ್ನಣ್ಣನವರ್ ಅವರು ವಿಶೇಷ ಬಹುಮಾನ ನೀಡಿ ಗೌರವಿಸಿದ್ದಾರೆ.

    ಪೊಲೀಸ್ ಸಿಬ್ಬಂದಿ ಶ್ರೀ.ಚಂದ್ರಕುಮಾರ್ ಅವರಿಗೆ ಈ ಬಹುಮಾನ ನೀಡಿ ಗೌರವಿಸಲಾಗಿದೆ. ಪೊಲೀಸ್ ಸಿಬ್ಬಂದಿಗಳ ಕರ್ತವ್ಯವನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು. ಆದ್ದರಿಂದ ಅಂತಹ ಸಿಬ್ಬಂದಿಗಳಿಗೆ ಬಹುಮಾನ ನೀಡಿ ಗೌರವಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಚಂದ್ರಕುಮಾರ್ ಅವರು ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಸರಗಳ್ಳನನ್ನು ಹಿಡಿದು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಶ್ರೀ.ಚಂದ್ರಕುಮಾರ್ ಅವರ ಈ ಅತ್ಯುತ್ತಮ ಕರ್ತವ್ಯವನ್ನು ಗುರುತಿಸಿ ಒಂದು ಲಕ್ಷ ನಗದು ಬಹುಮಾನ, ಒಂದು ಪಲ್ಸರ್ ಬೈಕ್ ಮತ್ತು ರಜೆಯೊಂದಿಗೆ ಕುಟುಂಬ ಸಮೇತ ಪ್ರವಾಸ ಆಯೋಜಿಸುವುದರ ಮೂಲಕ ಗೌರವಿಸಲಾಗಿದೆ.

    ಚಂದ್ರಕುಮಾರ್ ಅವರಿಗೆ ಡಿಸಿಪಿ ರವಿ ಡಿ ಚನ್ನಣ್ಣನವರ್ ಬಹುಮಾನ ನೀಡಿ ಗೌರವಿಸಿದ್ದಾರೆ. ಈ ವಿಚಾರವನ್ನು ಸ್ವತಃ ಚನ್ನಣ್ಣನವರೇ ತಮ್ಮ ಟ್ಟಿಟ್ಟರ್ ನಲ್ಲಿ ಸನ್ಮಾನ ಮಾಡಿದ ಫೋಟೋ ಹಾಗೂ ಬೈಕಿನ ಫೋಟೋವನ್ನು ಪೋಸ್ಟ್ ಮಾಡಿ ಅಭಿನಂದಿಸಿದ್ದಾರೆ. ಈ ಮೂಲಕ ಚಂದ್ರಕುಮಾರ್ ಅವರು ಇತರರಿಗೆ ಮಾದರಿಯಾಗಿದ್ದಾರೆ.

  • ಡ್ಯೂಟಿಗೆ ಹೋಗುತ್ತೇನೆಂದು ಹೇಳಿ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆಗೆ ಶರಣು!

    ಡ್ಯೂಟಿಗೆ ಹೋಗುತ್ತೇನೆಂದು ಹೇಳಿ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆಗೆ ಶರಣು!

    ಹಾವೇರಿ: ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಂಬಳಿ ಗ್ರಾಮದಲ್ಲಿ ನಡೆದಿದೆ.

    ಜಗದೀಶ್ ಬೆಂಡಿಗೇರಿ(41) ಮೃತ ಪೊಲೀಸ್ ಸಿಬ್ಬಂದಿ. ಜಗದೀಶ್ 1999ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಸದ್ಯ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

    ಇದೀಗ ಜಗದೀಶ್ ಅವರು ತನ್ನ ಜಮೀನಿನಲ್ಲಿ ಬೇವಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ಕುಟುಂಬದ ಸದಸ್ಯರಲ್ಲಿ ಡ್ಯೂಟಿಗೆ ಹೋಗುತ್ತೇನೆ ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ ಜಗದೀಶ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

    ಸದ್ಯ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.