Tag: ಪೊಲೀಸ್ ವೆರಿಫಿಕೇಷನ್

  • ಗುಡ್‍ನ್ಯೂಸ್.. ಶೀಘ್ರದಲ್ಲೇ ಆನ್‍ಲೈನ್‍ನಲ್ಲಿ ಪಾಸ್‍ಪೋರ್ಟ್ ಪೊಲೀಸ್ ವೆರಿಫಿಕೇಷನ್!

    ಗುಡ್‍ನ್ಯೂಸ್.. ಶೀಘ್ರದಲ್ಲೇ ಆನ್‍ಲೈನ್‍ನಲ್ಲಿ ಪಾಸ್‍ಪೋರ್ಟ್ ಪೊಲೀಸ್ ವೆರಿಫಿಕೇಷನ್!

     

    ನವದೆಹಲಿ: ಸರಿಯಾದ ಸಮಯಕ್ಕೆ ಪೊಲೀಸ್ ವೆರಿಫಿಕೇಷನ್ ಆಗದೆ ಪಾಸ್‍ಪೋರ್ಟ್ ವಿತರಣೆ ವಿಳಂಬವಾಗುವ ದಿನಗಳು ಶೀಘ್ರದಲ್ಲೇ ಕೊನೆಯಾಗುವ ನಿರೀಕ್ಷೆ ಇದೆ. ಇನ್ಮುಂದೆ ಪಾಸ್‍ಪೋರ್ಟ್‍ಗಳಿಗೆ ಆನ್‍ಲೈನ್ ವೆರಿಫಿಕೇಷನ್ ವ್ಯವಸ್ಥೆ ತರಲು ಸರ್ಕಾರ ಚಿಂತಿಸಿದೆ.

    ಅಪರಾಧಿಗಳ ಹಾಗೂ ಅಪರಾಧಗಳ ಬಗ್ಗೆ ಹೊಸದಾಗಿ ನ್ಯಾಷನಲ್ ಡೇಟಾಬೇಸ್ ಸೃಷ್ಟಿಸಲಾಗಿದ್ದು ಇದರ ಲಿಂಕ್ ಬಳಸಿ ಪಾಸ್‍ಪೋರ್ಟ್ ಅರ್ಜಿದಾರರ ಪೂರ್ವಾಪರಗಳ ಬಗ್ಗೆ ಆನ್‍ಲೈನ್ ವೆರಿಫಿಕೇಷನ್ ಮಾಡಲು ಸರ್ಕಾರ ಯೋಚಿಸಿದೆ.

    ಕೆಂದ್ರ ಗೃಹ ಸಚಿವಾಲಯದ ಕ್ರೈಮ್ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವಕ್ರ್ಸ್ ಅಂಡ್ ಸಿಸ್ಟಮ್ಸ್(ಸಿಸಿಟಿಎನ್‍ಎಸ್)ನ ಭಾಗವಾಗಿ ಸೋಮವಾರದಂದು ನ್ಯಾಷನಲ್ ಡೇಟಾಬೇಸ್ ಹೊರಬಂದಿದೆ.

    ಸಿಸಿಟಿಎನ್‍ಎಸ್ ಯೋಜನೆಗೆ 2009ರಲ್ಲೇ ಒಪ್ಪಿಗೆ ಸಿಕ್ಕಿತ್ತು. ಇದೀಗ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಈ ಡಿಜಿಟಲ್ ಪೊಲೀಸ್ ಪೋರ್ಟಲ್‍ಗೆ ಚಾಲನೆ ನೀಡಿದ್ದಾರೆ. ಈ ಪೋರ್ಟಲ್ ದೇಶದ 15,398 ಪೊಲೀಸ್ ಠಾಣೆಗಳನ್ನ ಇ-ಸಂಯೋಜನೆಗೊಳಿಸುವುದರ ಜೊತೆಗೆ ಜನರು ಅಪರಾಧಗಳ ಬಗ್ಗೆ ದೂರು ಸಲ್ಲಿಸಬಹುದಾಗಿದೆ. ಹಾಗೇ ಆನ್‍ಲೈನ್ ಮೂಲಕವೇ ವ್ಯಕ್ತಿಯ ಪೂರ್ವಚರಿತ್ರೆ ಪರಿಶೀಲಿಸಬಹುದಾಗಿದೆ.

    ರಾಷ್ಟ್ರೀಯ ಡಿಜಿಟಲ್ ಪೊಲೀಸ್ ಪೋರ್ಟಲನ್ನು ವಿವಿಧ ರಾಜ್ಯಗಳ ಸಿಟಿಜನ್ ಪೋರ್ಟಲ್ ಜೊತೆ ಸಂಯೋಜನೆಗೊಳಿಸಲಾಗಿದೆ. ಈ ಮೂಲಕ ಕೇಂದ್ರ ತನಿಖಾ ಹಾಗೂ ಸಂಶೋಧನಾ ಸಂಸ್ಥೆಗಳು ತಮ್ಮ ಸುರಕ್ಷಿತ ಲಾಗಿನ್ ಬಳಸಿ ಅಪರಾಧ ಮತ್ತು ಅಪರಾಧಿಗಳ ಮೇಲಿನ ನ್ಯಾಷನಲ್ ಡೇಟಾಬೇಸ್ ಹಾಗೂ ಅಪರಾಧ ಅಂಕಿ ಅಂಶ ಮತ್ತು ವಿಶ್ಲೇಷಣೆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

    ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ ಈ ಬಗ್ಗೆ ಮಾತನಾಡಿ, ಇತರೆ ಪ್ರಜಾ ಕೇಂದ್ರಿತ ಸೇವೆಗಳ ಜೊತೆ ಸಿಸಿಟಿಎನ್‍ಎಸ್ ಸಂಯೋಜನೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದನ್ನ ಪಾಸ್‍ಪೋರ್ಟ್ ಸೇವಾ ಸಾಫ್ಟ್‍ವೇರ್ ಜೊತೆಗೂ ಸಂಯೋಜನೆ ಮಾಡಲಾಗುತ್ತದೆ. ಈ ಮೂಲಕ ಒಂದು ವರ್ಷದೊಳಗೆ ಪಾಸ್‍ಪೋರ್ಟ್‍ಗಳಿಗೆ ಆನ್‍ಲೈನ್ ಪೊಲೀಸ್ ವೆರಿಫಿಕೇಷನ್ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

    ಪಾಸ್‍ಪೋರ್ಟ್ ಕಚೇರಿಯಿಂದ ಪೊಲೀಸ್ ವೆರಿಫಿಕೇಷನ್ ಮನವಿಯನ್ನ ಆನ್‍ಲೈನ್ ಮೂಲಕ ರವಾನಿಸಲು ಈ ಲಿಂಕ್ ನೆರವಾಗುತ್ತದೆ. ಅದರ ನಂತರ ಅಪರಾಧ ಮತ್ತು ಅಪರಾಧಿಗಳ ಮೇಲಿನ ಡೇಟಾಬೇಸ್ ಬಳಸಿ ಆನ್‍ಲೈನ್ ವೆರಿಫಿಕೇಷನ್ ಮಾಡಲಾಗುತ್ತದೆ. ಆದರೂ ದೈಹಿಕವಾಗಿ ಅರ್ಜಿದಾರರ ನೆರೆಹೊರೆಗೆ ಭೇಟಿ ನೀಡುವ ಅಗತ್ಯವಿರುತ್ತದೆ. ಅಲ್ಲಿನ ಮಾಹಿತಿ ಹಾಗೂ ಹೇಳಿಕೆಯನ್ನು ಮೊಬೈಲ್ ಅಥವಾ ಟ್ಯಾಬ್ಲೆಟ್‍ಗಳ ಮೂಲಕ ಪಾಸ್‍ಪೋರ್ಟ್ ಕಚೇರಿಗೆ ರವಾನಿಸಲಾಗುತ್ತದೆ.

    ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈಗಾಗಲೇ ಪೊಲೀಸರು ಪಾಸ್‍ಪೋರ್ಟ್ ರುಜುವಾತುಗಳಿಗೆ ಸಿಸಿಟಿಎನ್‍ಎಸ್ ಬಳಸುತ್ತಿದ್ದಾರೆ. ಅವರಿಗೆ ಹ್ಯಾಂಡ್ ಹೆಲ್ಡ್ ಸಾಧನಗಳನ್ನ ನೀಡಲಾಗುತ್ತದೆ. ಅವರು ಅರ್ಜಿದಾರರ ವಿಳಾಸಕ್ಕೆ ಹೋಗಿ ಅವನ/ಅವಳ ಮಾಹಿತಿಯನ್ನು ನೆಟ್ವರ್ಕ್‍ಗೆ ಅಪ್‍ಲೋಡ್ ಮಾಡಬೇಕು. ಇದರಿಂದ ಪೊಲೀಸರ ಕೆಲಸ ಕಡಿಮೆಯಾಗಿ ಸಮಯ ಕೂಡ ಉಳಿತಾಯವಾಗುತ್ತದೆ ಎಂದು ಮೆಹ್ರಿಶಿ ಹೇಳಿದ್ದಾರೆ.