Tag: ಪೊಲೀಸ್ ಬಂದೋಬಸ್ತ್

  • ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿಯಲ್ಲಿ ಖಾಕಿ ಕಣ್ಗಾವಲು

    ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿಯಲ್ಲಿ ಖಾಕಿ ಕಣ್ಗಾವಲು

    ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ರಾಜಧಾನಿಯೆಲ್ಲೆಡೆ ಪೊಲೀಸರು ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು ಎಂದು ಕಟ್ಟೆಚ್ಚರ ವಹಿಸಿದ್ದಾರೆ.

    ಇಂದು ಸಂಜೆಯಿಂದಲೇ ನಗರದೆಲ್ಲೆಡೆ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಲು ಮುಂದಾಗಿದೆ. ನಗರದಲ್ಲಿ ಹೊಸ ವರ್ಷ ಆಚರಣೆ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗಬಾರದೆಂದು ಖಾಕಿ ಪಡೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಬೆಂಗಳೂರಿನೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ನಗರದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

    ಬಂದೋಬಸ್ತ್ ಗೆ  5 ಜನ ಹೆಚ್ಚುವರಿ ಆಯುಕ್ತರು, 15 ಜನ ಡಿಸಿಪಿಗಳು, 45 ಎಸಿಪಿಗಳು, 220 ಇನ್ಸ್‌ಪೆಕ್ಟರ್‌, 430 ಪಿಎಸ್‍ಐ, 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹಾಗೆಯೇ ಹೋಂಗಾರ್ಡ್ 1500, ಗರುಡಾ ಪೋರ್ಸ್ 1, ಕ್ಯೂಅರ್ಟಿ 2 ಪಡೆ, ವಾಟರ್ ಜೆಟ್ 2, ಕೆಎಸ್‍ಆರ್‍ಪಿ 50 ತುಕಡಿ, ಸಿಎಆರ್ 30 ತುಕಡಿಗಳನ್ನು ಏರ್ಪಡಿಸಲಾಗಿದೆ. ಅಷ್ಟೇ ಅಲ್ಲದೆ ನಗರದ ಜನದಟ್ಟನೆ ಇರುವ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ 1 ಸಾವಿರ ಸಿಸಿಟಿವಿಗಳನ್ನು ಅಳವಡಿಕೆ ಮಾಡಲಾಗಿದೆ. ಹಾಗೆಯೇ 15 ವಾಚ್ ಟವರ್, ನಾಲ್ಕು ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಇದನ್ನೂ ಓದಿ: 2019ರ ಆಗಮನಕ್ಕೆ ಎಂ.ಜಿ, ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್

    ಇದಷ್ಟೇ ಅಲ್ಲದೆ ಕಬ್ಬನ್ ಪಾರ್ಕ್‍ನಲ್ಲಿ ಭದ್ರತೆ ಮತ್ತು ಅನೈತಿಕ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇವುಗಳಿಗೆ ಬ್ರೇಕ್ ಹಾಕಲು ತೋಟಗಾರಿಕಾ ಇಲಾಖೆ 120 ಸಿಸಿಟಿವಿ ಅಳವಡಿಕೆಗೆ ಮುಂದಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ, ಸಂಸದ ಪಿ.ಸಿ ಮೋಹನ್ ಅವರು 1 ಕೋಟಿ ರೂಪಾಯಿ ಅನುದಾನದಲ್ಲಿ ಸಿಸಿಟಿವಿ ಅಳವಡಿಕೆ ಮಾಡಿಸುತ್ತಿದ್ದಾರೆ. ಪ್ರಥಮ ಹಂತದಲ್ಲಿ 60 ಲಕ್ಷ ರೂಪಾಯಿ ಅನುದಾನದಲ್ಲಿ ಕಾಮಗಾರಿ ಶುರು ಮಾಡಲಾಗುತ್ತಿದೆ. ಸಿಸಿಟಿವಿ ಸೇರಿದಂತೆ ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ. ಸದ್ಯದಲ್ಲೇ ಸಿಸಿಟಿವಿ ಅಳವಡಿಕೆ ಕಾರ್ಯ ಶುರು ಮಾಡಲಾಗುತ್ತದೆ ಎಂದು ಮಾಹಿತಿ ದೊರಕಿದೆ.

    ಅದೇನೆ ಆಗಲಿ ಹೊಸ ವರ್ಷದ ಸಂಭ್ರಮದಲ್ಲಿ ಪೊಲೀಸ್ ಇಲಾಖೆಯವರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಒಳ್ಳೆಯ ರೀತಿಯಲ್ಲಿ ಸಾರ್ವಜನಿಕರು ನ್ಯೂ ಇಯರ್ ಆಚರಿಸಲಿ ಎಂದು ಶ್ರಮ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತಿಯಿಂದಲೇ ಪತ್ನಿ ಕೊಲೆ- 4 ದಿನದಿಂದ ಮೃತದೇಹ ಮುಂದಿಟ್ಟುಕೊಂಡು ಸಂಬಂಧಿಕರಿಂದ ಪ್ರತಿಭಟನೆ

    ಪತಿಯಿಂದಲೇ ಪತ್ನಿ ಕೊಲೆ- 4 ದಿನದಿಂದ ಮೃತದೇಹ ಮುಂದಿಟ್ಟುಕೊಂಡು ಸಂಬಂಧಿಕರಿಂದ ಪ್ರತಿಭಟನೆ

    ಹಾಸನ: ನಾಲ್ಕು ದಿನಗಳ ಹಿಂದೆ ಗಂಡನಿಂದಲೇ ಹತ್ಯೆಯಾಗಿರುವ ಮಹಿಳೆಯ ಸಾವಿಗೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿ ಮೃತ ಸಂಬಂಧಿಕರು ಇಂದೂ ಸಹ ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ ಮುಂದುವರಿಸಿದ್ದಾರೆ.

    ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ನಂದಿನಿಯನ್ನು(36) ಆಕೆಯ ಗಂಡ ಮೋಹನ್ ಕುಮಾರ್ ಕೊಲೆ ಮಾಡಿ ನಂತರ ವೇಲ್ ನಲ್ಲಿ ನೇಣು ಹಾಕಿ ಪರಾರಿಯಾಗಿದ್ದ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಮೋಹನ್ ಕುಮಾರ್ ಸ್ವಗ್ರಾಮ ಆಲೂರು ತಾಲೂಕು ಸುಳುಗೋಡು ಗ್ರಾಮಕ್ಕೆ ಕೊಂಡೊಯ್ದಿರುವ ನಂದಿನಿ ಸಂಬಂಧಿಕರು, ಕೊಲೆಗಡುಗರ ಬಂಧನವಾಗಬೇಕು. ತಾಯಿ ಕಳೆದುಕೊಂಡು ತಬ್ಬಲಿಯಾಗಿರುವ ಇಬ್ಬರು ಮಕ್ಕಳಿಗೆ ಜೀವನಾಂಶ ಕೊಡಬೇಕು ಎಂದು ಆಗ್ರಹಿಸಿ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದು, ಇಂದೂ ಸಹ ಪ್ರತಿಭಟನೆ ಮುಂದುವರಿದಿದೆ.

    ಏನಿದು ಪ್ರಕರಣ?
    2006ರಲ್ಲಿ ನಂದಿನಿ ಮತ್ತು ಮೋಹನ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಒಂದೂವರೆ ವರ್ಷದ ಹಿಂದೆ ಮೋಹನ್ ಸ್ವಗ್ರಾಮ ಬಿಟ್ಟು ಹಾಸನದಲ್ಲಿ ಇರುತ್ತೇವೆ ಎಂದು ವಿದ್ಯಾನಗರದಲ್ಲಿ ಬಾಡಿಗೆ ಮನೆ ಮಾಡಿ ಸಂಸಾರ ಆರಂಭಿಸಿದ್ದ. ನಂದಿನಿ ತನ್ನ ಗಂಡ ಮೋಹನ್ ಕುಮಾರ್ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ವಿದ್ಯಾನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಮದುವೆಯಾದ ನಂತರ ಹಣಕ್ಕಾಗಿ ಹಾಗೂ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದೀಯ ಎಂದು ಹೇಳಿ ನಂದಿನಿಗೆ ಮೋಹನ್ ತುಂಬಾ ಕಾಟಕೊಡುತ್ತಿದ್ದ. ಅಷ್ಟೇ ಅಲ್ಲದೇ ಹಲವು ಸಂದರ್ಭ ಆತನ ಪೋಷಕರ ಮಾತು ಕೇಳಿ, ಪತ್ನಿಯನ್ನು ಮನೆಯಿಂದ ಹೊರಗಡೆ ಹಾಕಿದ್ದ.

    ಈ ನಡುವೆ ಸಂಸಾರ ಸರಿಯಾಗಿ ನಡೆಯಲು ಹಿರಿಯರು ಇಬ್ಬರ ನಡುವೆ ಮಾತಕತೆ ನಡೆಸಿ ರಾಜಿ ಸಂಧಾನ ಮಾಡಿಸಿದ್ದರು. ನಂದಿನಿ ಸಂಸಾರ ಸಾಕಲು ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದಳು. ಆದರೂ ಕೂಡ ಹಳೇ ಚಾಳಿ ಬಿಡದ ಪಾಪಿ ಪತಿ, ಇಬ್ಬರು ಹೆಣ್ಣು ಮಕ್ಕಳನ್ನು ಪತ್ನಿಯ ತವರು ಮನೆಗೆ ಬಿಟ್ಟುಬಂದಿದ್ದ. ಮಂಗಳವಾರ ರಾತ್ರಿ ಗಾರ್ಮೆಂಟ್ ಕೆಲಸ ಮುಗಿಸಿ ಬಂದ ಪತ್ನಿಯನ್ನು ಹೊಡೆದು ಕೊಲೆ ಮಾಡಿದ ಬಳಿಕ ವೇಲ್‍ನಿಂದ ನೇಣು ಹಾಕಿ, ನಗದು ಮತ್ತು ಚಿನ್ನಾಭರಣವನ್ನು ದೋಚಿಕೊಂದು ಆರೋಪಿ ಪರಾರಿಯಾಗಿದ್ದಾನೆ.

    ಈ ನಡುವೆ ರೊಚ್ಚಿಗೆದ್ದ ನಂದಿನಿ ಕಡೆಯವರು, ಮೋಹನ್ ಮನೆಯ ಕೆಲವು ವಸ್ತುಗಳನ್ನು ಜಖಂಗೊಳಿಸಿದ್ದಾರೆ. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews