Tag: ಪೊಲೀಸ್ ಕಮೀಷನರ್

  • ದಾಳಿ ನೆಪದಲ್ಲಿ ಪೊಲೀಸರಿಂದಲೇ 6 ಕೋಟಿ ಲೂಟಿ –  10 ಮಂದಿ ಪೊಲೀಸರ ಅಮಾನತು

    ದಾಳಿ ನೆಪದಲ್ಲಿ ಪೊಲೀಸರಿಂದಲೇ 6 ಕೋಟಿ ಲೂಟಿ – 10 ಮಂದಿ ಪೊಲೀಸರ ಅಮಾನತು

    ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಸ್ಥಳೀಯ ನಿವಾಸಿಯೊಬ್ಬರ ಮನೆಯಲ್ಲಿ 6 ಕೋಟಿ ರೂಪಾಯಿ ದರೋಡೆ ಮಾಡಿದ ಆರೋಪದಡಿ ಮೂವರು ಅಧಿಕಾರಿಗಳು ಸೇರಿದಂತೆ 10 ಮಂದಿ ಪೊಲೀಸರನ್ನು ಬುಧವಾರ ಅಮಾನತುಗೊಳಿಸಲಾಗಿದೆ.

    ಆರೋಪಿಗಳನ್ನು ಮುಂಬ್ರಾ ಪೊಲೀಸ್ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಗೀತಾರಾಮ್ ಶೆವಾಲೆ ಮತ್ತು ಅವರ ಕಿರಿಯ ಅಧಿಕಾರಿಗಳು, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಪಿಎಸ್‍ಐ) ರವಿ ಮದ್ನೆ ಮತ್ತು ಪಿಎಸ್‍ಐ ಹರ್ಷಲ್ ಕಾಳೆ ಎಂದು ಗುರುತಿಸಲಾಗಿದೆ.

    ಥಾಣೆ ನಿವಾಸಿಯೊಬ್ಬರ ಮನೆಯಲ್ಲಿ ಪೊಲೀಸ್ ಅಧಿಕಾರಿಗಳೇ ದರೋಡೆ ನಡೆಸಿದ್ದಾರೆ ಎಂದು ಮಹಾರಾಷ್ಟ್ರದ ಗೃಹ ಸಚಿವರಿಗೆ ಪತ್ರದ ಮೂಲಕ ದೂರು ಸಲ್ಲಿಸಿರುವುದು ಥಾಣೆ ಪೊಲೀಸ್ ಕಮಿಷನರ್ ಜೈ ಜೀತ್ ಸಿಂಗ್ ಅವರ ಗಮನಕ್ಕೆ ಬಂದಿದೆ. ಮುಂಬೈ ಪೊಲೀಸ್ ಇನ್ಸ್‍ಪೆಕ್ಟರ್ ಇಬ್ಬರು ಸಬ್ ಇನ್‍ಸ್ಪೆಕ್ಟರ್‌ಗಳು, ಸಿಬ್ಬಂದಿ ಮತ್ತು ಸಮವಸ್ತ್ರ ಧರಿಸದ ಇತರೆ ವ್ಯಕ್ತಿಗಳು ಏಪ್ರಿಲ್ 12ರ ಮಂಗಳವಾರ ಮುಂಜಾನೆ ಫೈಝಲ್ ಮೆಮನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿಗಳು ತಲಾ 1 ಕೋಟಿ ರೂಪಾಯಿಗಳ ಮೂವತ್ತು ಬಾಕ್ಸ್ ಎಲ್ಲವನ್ನು ಕ್ಯಾಬಿನ್‍ನಲ್ಲಿ ಮುಂಬ್ರಾ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಿಂದಲೇ ಟ್ರೋಲ್‍ಗೆ ಕರೆ – ನನ್ನನ್ನು ನಾನೇ ಟ್ರೋಲ್ ಮಾಡ್ಕೋತಿನಿ ಎಂದ ರಮ್ಯಾ

    police (1)

    ಈ ವಿಚಾರವಾಗಿ ಇನ್‍ಸ್ಪೆಕ್ಟರ್ ಗೀತಾರಾಮ್ ಶೆವಾಲೆ ಅವರು ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿದಾಗ, ಫೈಝಲ್ ಮೆಮನ್ ಅವರು ಎಲ್ಲ ಹಣವನ್ನು ಕಷ್ಟಪಟ್ಟು ದುಡಿದಿದ್ದೇನೆ ಎಂದು ಹೇಳಿದ್ದಾರೆ. ಆದರೆ ಅವರ ಮಾತನ್ನು ಯಾರು ಕೂಡ ನಂಬದೇ, ಹಲ್ಲೆ ನಡೆಸಿದ್ದಾರೆ. ನಂತರ ಇರುವ ಹಣದಲ್ಲಿ ಅರ್ಧದಷ್ಟು ಮೊತ್ತವನ್ನು ನೀಡುವಂತೆ ಗೀತಾರಾಮ್ ಶೆವಾಲೆ ಬೇಡಿಕೆ ಇಟ್ಟಿದ್ದು, ಕೊನೆಗೆ 2 ಕೋಟಿ ಒಪ್ಪಿಕೊಂಡಿದ್ದಾರೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ 4 ಕೋಟಿ ಹಣವನ್ನು ಹಂಚಿದ್ದಾರೆ. ಉಳಿದ 24 ಕೋಟಿಯನ್ನು ಮೆಮನ್ ಅವರಿಗೆ ಹಿಂತಿರುಗಿಸಿದ್ದಾರೆ. ಇನ್ನೂ ಗೀತಾರಾಮ್ ಶೆವಾಲೆ ಅವರು ಹಣ ಪಡೆಯುತ್ತಿರುವ ದೃಶ್ಯ ಇನ್‍ಸ್ಪೆಕ್ಟರ್ ಕ್ಯಾಬಿನ್‍ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕ್ಯಾಮೆರಾ ಪರಿಶೀಲಿಸಿ, ಆರೋಪಿ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಇದೀಗ ಈ ಸಂಬಂಧ ಪೊಲೀಸ್ ಆಯುಕ್ತ ಜೈ ಜೀತ್ ಸಿಂಗ್ ಅವರು ಆರೋಪಿ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದು, ಹತ್ತು ಮಂದಿಯನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಬಂಧನಕ್ಕೆ ತೆರಳಿದ್ದ ವೇಳೆ ಹೈಡ್ರಾಮಾ- ಹೊಸ ಮೊಬೈಲ್ ಬಿಸಾಕಿದ ದಿವ್ಯಾ ಹಾಗರಗಿ

  • ಅಮಾಯಕರನ್ನು ಬಿಟ್ಟು ಕಳಿಸಿ ಅನ್ನೋದು ಒತ್ತಡ ಹೇಗೆ ಆಗುತ್ತೆ – ಸಿಟ್ಟಾದ ಹ್ಯಾರಿಸ್

    ಅಮಾಯಕರನ್ನು ಬಿಟ್ಟು ಕಳಿಸಿ ಅನ್ನೋದು ಒತ್ತಡ ಹೇಗೆ ಆಗುತ್ತೆ – ಸಿಟ್ಟಾದ ಹ್ಯಾರಿಸ್

    ಬೆಂಗಳೂರು: ಅಮಾಯಕರು ಅರೆಸ್ಟ್ ಆಗಿದ್ದರೆ ಪೊಲೀಸರು ಬಿಟ್ಟು ಕಳಿಸಲ್ವೇ ನೀವ್ಯಾಕೆ ಒತ್ತಡ ಹಾಕುತ್ತೀರಾ ಅಂದಿದ್ದಕ್ಕೆ ಶಾಂತಿನಗರದ ಶಾಸಕ ಹ್ಯಾರಿಸ್ ಪಬ್ಲಿಕ್ ಟಿವಿ ಮೇಲೆ ಸಿಟ್ಟಾಗಿದ್ದಾರೆ.

    ಪೊಲೀಸರು ಬಂಧಿಸಿದವರಲ್ಲಿ ಕೆಲವರು ಅಮಾಯಕರು ಇರಬಹುದು. ಅಂತವರನ್ನ ಬಿಡಿ ಎಂದು ಮಾಜಿ ಸಚಿವ ರೋಷನ್ ಬೇಗ್ ಪೊಲೀಸ್ ಕಮೀಷನರ್ ಬಳಿ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹ್ಯಾರಿಸ್, ಗೋರಿಪಾಳ್ಯ, ಟಿಪ್ಪು ನಗರದಿಂದ ಬಂದಿರೋದನ್ನು ರೋಷನ್ ಬೇಗ್ ನೋಡಿದ್ದರೆ ಅವರು ಮೊನ್ನೆಯೇ ಹೇಳಬಹುದಿತ್ತು. ಇದರಿಂದ ತನಿಖೆ ನಡೆಸೋದಕ್ಕೆ ಸುಲಭವಾಗಿರೋದು ಎಂದು ವ್ಯಂಗ್ಯವಾಡಿದರು.

    ನಡೆದಿರುವುದನ್ನು ನಾವು ಯಾರು ಒಪ್ಪಿಕೊಳ್ಳುತ್ತಿಲ್ಲ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಮಾನವೀಯತೆ ದೃಷ್ಟಿಯಿಂದ ಕಮಿಷನರ್ ಜೊತೆ ಮಾತನಾಡಲು ಬಂದಿದ್ದೇನೆ. ಇದರಲ್ಲಿ ರಾಜಕಾರಣ ಮಾಡಲು ಬಂದಿಲ್ಲ ಎಂದರು.

    ಈ ವೇಳೆ ಅಮಾಯಕರು ಅರೆಸ್ಟ್ ಆಗಿದ್ದರೆ ಪೊಲೀಸರು ಬಿಟ್ಟು ಕಳಿಸುತ್ತಾರೆ. ನೀವ್ಯಾಕೆ ಒತ್ತಡ ಹಾಕುತ್ತೀರಿ ಎಂದು ಕೇಳಿದ್ದಕ್ಕೆ ಅಮಾಯಕರನ್ನು ಬಿಟ್ಟು ಕಳಿಸಿ ಅನ್ನೋದು ಒತ್ತಡ ಹೇಗೆ ಆಗುತ್ತೆ ಎಂದು ಮರು ಪ್ರಶ್ನಿಸಿ ಪಬ್ಲಿಕ್ ಟಿವಿ ಮೇಲೆ ಹ್ಯಾರಿಸ್ ಸಿಟ್ಟಾದರು.

    ಕಾಂಗ್ರೆಸ್ ನಾಯಕರು ಗಲಭೆಕೋರರ ಪರವಾಗಿ ನಿಂತಿದ್ದಾರಾ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಹ್ಯಾರಿಸ್, ನಾವು ಯಾವುದೇ ರೀತಿ ಒತ್ತಡವನ್ನು ಸರ್ಕಾರ ಮತ್ತು ಪೊಲೀಸರ ಮೇಲೆ ಹಾಕುವುದಿಲ್ಲ. ನಾವು ಮಾನವೀಯತೆ ದೃಷ್ಟಿಯಿಂದ ಏನು ಮಾಡಬೇಕೋ ಮಾಡಿ ಎಂದು ಹೇಳುತ್ತಿದ್ದೇವೆ. ಗಲಭೆ ನಡೆದ ಪ್ರದೇಶದಲ್ಲಿ ಕರ್ಫ್ಯೂ ಪರಿಸ್ಥಿತಿ ಎದುರಾಗಿದೆ. ಇದರಿಂದ ಪಾಪ ಅಮಾಯಕರಿಗೆ ಸಮಸ್ಯೆಯಾಗುತ್ತಿದೆ. ಅಲ್ಲಿ ಜನರು ಕುಟುಂಬದವರೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಯಾರೂ
    ಹೊರಗೆ ಬಂದು ಓಡಾಡುವುದಕ್ಕೆ ಆಗುತ್ತಿಲ್ಲ. ಅವರಿಗೆ ಹಾಲು, ನೀರು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

    ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅನೇಕರನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ರೋಷನ್ ಬೇಗ್ ಕೆ.ಜೆ.ಹಳ್ಳಿ ಗಲಾಟೆಯಲ್ಲಿ ಕೆಲವು ಕಾಂಗ್ರೆಸ್ ನಾಯಕರ ಕೈವಾಡವು ಇದೆ. ಗೋರಿ ಪಾಳ್ಯದ ಮೌಲಾನ ಇಲ್ಲಿಗೆ ಯಾಕೆ ಬರಬೇಕಿತ್ತು. ಕಲಾಸಿ ಪಾಳ್ಯದಿಂದ, ಟಿಪ್ಪು ನಗರದಿಂದ ಇಲ್ಲಿಗೆ ಯಾಕೆ ಬರಬೇಕಿತ್ತು. ಹೊರಗಿನವರು ಯಾರ್ಯಾರೋ ಬಂದಿದ್ದರು ಅಂತ ಸ್ಥಳೀಯರೇ ಹೇಳುತ್ತಾರೆ. ಪೊಲೀಸರು ಬಂಧಿಸಿದವರಲ್ಲಿ ಕೆಲವರು ಅಮಾಯಕರು ಇರಬಹುದು. ಅಂತವರನ್ನ ಬಿಡಿ, ಆದರೆ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದರು.

  • ಗರಿಷ್ಟ 20 ಮಂದಿಗೆ ಮಾತ್ರ ಅವಕಾಶ- ಬೆಂಗ್ಳೂರಿನಲ್ಲಿ ಜುಲೈ 26 ರವರೆಗೆ 144 ಸೆಕ್ಷನ್ ಜಾರಿ

    ಗರಿಷ್ಟ 20 ಮಂದಿಗೆ ಮಾತ್ರ ಅವಕಾಶ- ಬೆಂಗ್ಳೂರಿನಲ್ಲಿ ಜುಲೈ 26 ರವರೆಗೆ 144 ಸೆಕ್ಷನ್ ಜಾರಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಸ್ಫೋಟವಾಗುತ್ತಿದ್ದಂತೆ ಮತ್ತೆ ಒಂದು ತಿಂಗಳು ಬೆಂಗಳೂರಿನಲ್ಲಿ 144 ಸೆಕ್ಷನ್ ಮುಂದುವರಿಕೆ ಮಾಡಲಾಗಿದೆ. ಜುಲೈ 26 ರವರೆಗೆ 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಆದೇಶ ಹೊರಡಿಸಿದ್ದಾರೆ.

    ಬೆಂಗಳೂರು ನಗರದಲ್ಲಿ ಕೋವಿಡ್ 19 ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಮತ್ತೆ ಕಟ್ಟುನಿಟ್ಟಾಗಿ ಕ್ರಮಗಳನ್ನು ಜಾರಿಗೊಳಿಸಿದ್ದಾರೆ.
    1. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿ ವ್ಯಕ್ತಿಯು ಕಡ್ಡಾಯವಾಗಿ ಮಾಸ್ಕ್ ಧರಿಸುವುದು
    2. ಸಾರ್ವಜನಿಕ ಸ್ಥಳದಲ್ಲಿ ಒಂದು ಮೀಟರ್ ಅಂತರ ಪಾಲನೆ ಮಾಡಬೇಕು
    3. ಯಾವುದೇ ಕಾರ್ಯಕ್ರಮಗಳಲ್ಲಿ ಗರಿಷ್ಠ 20 ಮಂದಿಯಷ್ಟೇ ಭಾಗವಹಿಸಲು ಅವಕಾಶ

    ಸೋಂಕು ಹರಡುವಿಕೆ ತಡೆಯಲು ಮೂರು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಕಮೀಷನರ್ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳು ನಿಷೇಧಾಜ್ಞೆ ಜಾರಿದ್ದಾರೆ. ಕೋವಿಡ್ ನಿಯಮಗಳ ಉಲ್ಲಂಘನೆಯಾದಲ್ಲಿ ಎನ್‍ಡಿಎಂಎ ಅಡಿಯಲ್ಲಿ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

    ಯಾವುದೇ ವ್ಯಕ್ತಿ ಈ ಮೇಲಿನ ನಿಯಂತ್ರಣ ಕ್ರಮಗಳನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51 ರಿಂದ 60ರ ಜೊತೆಗೆ ಐಪಿಸಿ ಸೆಕ್ಷನ್ 188 ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು. ಈ ಪ್ರತಿಬಂಧಕಾಜ್ಞೆಯೂ ಜೂನ್ 26 ರಿಂದ ಜುಲೈ 26ರ ಮಧ್ಯರಾತಿ ವರೆಗೆ ಅಂದರೆ 30 ದಿನಗಳ ಅನ್ವಯವಾಗುತ್ತದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

  • ಕಳ್ಳಕಾಕರು, ರೌಡಿಗಳ ಜೊತೆ ಪೊಲೀಸ್ರು ಒಡನಾಟ ಹೊಂದಿರೋದು ಗೊತ್ತಾದ್ರೆ ಕ್ರಮ: ಭಾಸ್ಕರ್ ರಾವ್

    ಕಳ್ಳಕಾಕರು, ರೌಡಿಗಳ ಜೊತೆ ಪೊಲೀಸ್ರು ಒಡನಾಟ ಹೊಂದಿರೋದು ಗೊತ್ತಾದ್ರೆ ಕ್ರಮ: ಭಾಸ್ಕರ್ ರಾವ್

    ಬೆಂಗಳೂರು: ರವಿ ಪೂಜಾರಿಯನ್ನು ಕರೆತಂದ ನಂತರ ಸಾಕಷ್ಟು ವಿಚಾರಗಳು ಹೊರ ಬರುತ್ತಿದೆ. ಆತ ಈ ಹಿಂದೆ ಮಾಡಿದ ಅಕ್ರಮಗಳು ಒಂದೊಂದಾಗಿ ಬಯಲಿಗೆ ಬರುತ್ತಿದ್ದರೆ, ಅಧಿಕಾರಿಯೊಬ್ಬರು ರವಿ ಪೂಜಾರಿ ಜೊತೆ ಒಡನಾಟ ಹೊಂದಿರುವ ಬಗ್ಗೆ ಆಘಾತಕಾರಿ ವಿಚಾರ ಹೊರಬಂದಿದೆ.

    ಅಧಿಕಾರಿಯೊಬ್ಬರು ಸಿಸಿಬಿಯಲ್ಲಿ ಕಾರ್ಯ ನಿರ್ವಹಿಸುವುದು ಸೂಕ್ತ ಅಲ್ಲ. ತನಿಖೆಯಲ್ಲಿ ಪಾರದರ್ಶಕತೆ ಇರಬೇಕು. ಹೀಗಾಗಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರಿಗೆ ಬೇರೆ ಪೋಸ್ಟ್ ತೋರಿಸಲಾಗಿದೆ. ಸರ್ಕಾರದ ವಿರುದ್ಧ, ದೇಶದ ವಿರುದ್ಧ ಕೆಲಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ಗ್ಯಾರಂಟಿ. ಜನರಿಗೆ ಮೋಸ ಮಾಡಿ ದೇಶಕ್ಕೆ ಮೋಸ ಮಾಡಿರುವ ಒಬ್ಬ ಕ್ರಿಮಿನಲ್ ಜೊತೆ ಸಂಪರ್ಕ ಇರುವ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ಶಿಸ್ತಿನ ಕ್ರಮಕೈಗೊಳ್ಳುವ ಬಗ್ಗೆ ನಾವು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಭಾಸ್ಕರ್ ರಾವ್ ರೌಡಿಗಳ ಜೊತೆ ಸಂಪರ್ಕ ಹೊಂದಿರುವ ಪೊಲೀಸರಿಗೆ ಎಚ್ಚರಿಕೆ ನೀಡಿದರು.

    ರೌಡಿಗಳ ಜೊತೆ ಸಂಪರ್ಕ ಇರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ. ಸ್ಲಂ ದೊರೆಗಳೇ ಇರಲಿ, ಯಾರೇ ಇರಲಿ ಅವರ ಜೊತೆ ಪೊಲೀಸರ ಸಂಪರ್ಕ ಹೊಂದಿದ್ದರೆ ಅವರ ವಿರುದ್ಧ ಕ್ರಮ ಗ್ಯಾರಂಟಿ. ಇಂತಹ ಕ್ರಿಮಿನಲ್‍ಗಳ ಜೊತೆ ಬರ್ತ್ ಡೇ ಪಾರ್ಟಿ ಮಾಡಿಕೊಳ್ಳುವುದು, ಅವರ ಜೊತೆ ವ್ಯವಹಾರಗಳನ್ನು ನಡೆಸುವುದು ಕಂಡು ಬಂದರೆ ಅವರ ಮೇಲೆ ಕ್ರಮ ಕಟ್ಟಿಟ್ಟ ಬುತ್ತಿ. ರಿಯಲ್ ಎಸ್ಟೆಟ್ ಮಾಡಿಸುವುದು, ಡೀಲಿಂಗ್ ಮಾಡಿಸುವುದು ಮಾಡಿದ್ದು ಗೊತ್ತಾದರೆ ಕ್ರಮ ನಿಶ್ಚಿತ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

  • ತನ್ವೀರ್ ಸೇಠ್​​ಗೆ ಸ್ಕೆಚ್ – ಸುಪಾರಿ ಬಗ್ಗೆ ಮೈಸೂರು ಪೊಲೀಸರಿಂದ ತನಿಖೆ ಆರಂಭ

    ತನ್ವೀರ್ ಸೇಠ್​​ಗೆ ಸ್ಕೆಚ್ – ಸುಪಾರಿ ಬಗ್ಗೆ ಮೈಸೂರು ಪೊಲೀಸರಿಂದ ತನಿಖೆ ಆರಂಭ

    ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಸುಪಾರಿ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹೇಳಿದ್ದಾರೆ.

    ಭಾನುವಾರ ರಾತ್ರಿ ಸೇಠ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣವಾಗಿ ಮಾತನಾಡಿರುವ ಕಮೀಷನರ್, ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ. ಸದ್ಯ ತನಿಖೆ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಕೆಲವು ಸಂಘಟನೆ ಕೈವಾಡ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಶಾಸಕ ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭೀರ

    ಈ ಪ್ರಕರಣದಲ್ಲಿ ಯಾವುದನ್ನು ತಳ್ಳಿ ಹಾಕುವಂತಿಲ್ಲ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಬಂಧಿತ ಆರೋಪಿ ಕರಕುಶಲ ವಸ್ತುಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಈ ಕೃತ್ಯಕ್ಕೆ ಆ ವೃತ್ತಿಗೆ ಸಂಬಂಧಿಸಿದ ಕತ್ತಿಯನ್ನೆ ಬಳಸಿರಬಹುದು. ಆತನ ಕುಟುಂಬಸ್ಥರಿಂದಲು ಮಾಹಿತಿ ಪಡೆಯುತ್ತಿದ್ದೇವೆ. ಇನ್ನು ಕೆಲವರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಕಮೀಷನರ್ ಕೆ.ಟಿ.ಬಾಲಕೃಷ್ಣ ಸಂಶಯ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಕೆಲಸ ಸಿಕ್ಕಿಲ್ಲ ಎಂದು ಹಲ್ಲೆ ಮಾಡಿರುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಇನ್ನು ಸಾಬೀತಾಗಿಲ್ಲ. ವಿಚಾರಣೆಯಿಂದ ಎಲ್ಲವೂ ಗೊತ್ತಾಗಲಿದೆ. ಸುಪಾರಿ ಬಗ್ಗೆಯು ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದಾನೆ ಎಂದುಕೊಂಡ್ವಿ, ಆದ್ರೆ ಮಚ್ಚಿನಿಂದ ಹೊಡೆದು ಓಡಿ ಹೋದ: ಪ್ರತ್ಯಕ್ಷದರ್ಶಿ

    ಭಾನುವಾರ ರಾತ್ರಿ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

  • ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಮದ್ಯ ಮಾರಾಟ ಬಂದ್

    ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಮದ್ಯ ಮಾರಾಟ ಬಂದ್

    ಬೆಂಗಳೂರು: ನವೆಂಬರ್ 10 ರಂದು ಬೆಂಗಳೂರಿನಾದ್ಯಂತ ಬೆಳಗ್ಗೆ 6 ಗಂಟೆಯಿAದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

    ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಆದೇಶ ಹೊರಡಿಸಿದ್ದಾರೆ. ನವೆಂಬರ್ 10 ರಂದು ಮುಸ್ಲಿಂ ರ ಹಬ್ಬ ಈದ್ ಮಿಲಾದ್ ಇರುವ ಕಾರಣ ಅಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಆದೇಶದಲ್ಲಿ ಏನಿದೆ?
    ನ.10 ರಂದು ಬೆಂಗಳೂರು ನಗರಾದ್ಯಂತ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಆಚರಿಸುವ ಪ್ರಯುಕ್ತ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ನಂತರ ಮೆರವಣಿಗಯಲ್ಲಿ ಸ್ಥಬ್ಧ ಚಿತ್ರಗಳು ಧ್ವನಿ ವರ್ಧಕಗಳನ್ನು ಉಪಯೋಗಿಸಿಕೊಂಡು, ಆಯುಧಗಳನ್ನು ಹಾಗೂ ಇನ್ನಿತರೆ ವಸ್ತುಗಳನ್ನು ಪ್ರದರ್ಶಿಸಿ ಕುಣಿಯುತ್ತಾ ರಸ್ತೆಗಳಲ್ಲಿ ವಾಹನಗಳಲ್ಲಿ ನಡಿಗೆಯಲ್ಲಿ ವೈಎಂಸಿಎ ಮೈದಾನ ಹಾಗೂ ನಗರದ ಇತರೆ ಮೈದಾನಗಳಲ್ಲಿ ನಡೆಯುವ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ.

    ಈ ಮೆರವಣಿಗೆಯಲ್ಲಿ ಹೆಚ್ಚಿನ ಜನರು ಭಾಗವಹಿಸಲಿದ್ದು, ಮೆರವಣಿಗೆ ನಡೆಯುವ ಸಮಯದಲ್ಲಿ ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕೃತ್ಯಗಳನ್ನೆಸಗಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಭವಿರುತ್ತದೆ. ಈದ್ ಮಿಲಾದ್ ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ ಹಾಗೂ ಕಾನೂನು ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮದ್ಯಪಾನ ಮಾರಾಟವನ್ನು ನಿಷೇಧಿಸುವುದು ಸೂಕ್ತವೆಂದು ಈ ನಿರ್ಧಾರ ಮಾಡಲಾಗಿದೆ ಎಂದು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

    ಭಾರತೀಯದಂಡ ಪ್ರಕ್ರಿಯ ಸಂಹಿತೆ ಕಲಂ 144 ರ ಉಪ ಕಲಂ (1) ಮತ್ತು (3) ರ ಅನ್ವಯ ದಿನಾಂಕ 10.11.2019 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಬಾರ್‌ಗಳು, ವೈನ್ಸ್ಶಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಬೇಕು ಎಂದು ತಿಳಿಸಲಾಗಿದೆ.

  • ಪೊಲೀಸ್ ಕಮೀಷನರ್ ಕಚೇರಿ ಪಕ್ಕದಲ್ಲೇ ಗಂಧದ ಮರ ಕದ್ದ ಕಳ್ಳರು!

    ಪೊಲೀಸ್ ಕಮೀಷನರ್ ಕಚೇರಿ ಪಕ್ಕದಲ್ಲೇ ಗಂಧದ ಮರ ಕದ್ದ ಕಳ್ಳರು!

    ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಚೇರಿ ಕೂಗಳತೆ ದೂರದಲ್ಲೇ ಗಂಧದ ಮರಗಳ ಕಳ್ಳತನ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಇನ್‍ಫ್ಯಾಂಟ್ರಿ ರಸ್ತೆಯಲ್ಲಿರುವ ಕಮೀಷನರ್ ಕಚೇರಿ ಪಕ್ಕದಲ್ಲೇ ಇರುವ ಎಂಬೆಸ್ಸಿ ಅಪಾಟ್ರ್ಮೆಂಟ್‍ನಲ್ಲಿ ಗಂಧದ ಮರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಇದೇ ತಿಂಗಳ 21 ರಂದು ಘಟನೆ ನಡೆದಿದ್ದು, ಈ ವೇಳೆ ಮಚ್ಚು ದೊಣ್ಣೆಗಳಿಂದ ಭದ್ರತಾ ಸಿಬ್ಬಂದಿಯನ್ನು ಬೆದರಿಸಿರುವ ಕಳ್ಳರು ಗಂಧದ ಮರವನ್ನು ಕಳ್ಳತನ ಮಾಡಿದ್ದಾರೆ.

    ಬೆಳಗಿನ ಜಾವ ಸುಮಾರು 3.55 ಸಮಯದಲ್ಲಿ ಮುಖಕ್ಕೆ ಮಂಕಿ ಕ್ಯಾಪ್ ಧರಿಸಿ ಬಂದ ನಾಲ್ಕು ಕಳ್ಳರು ಅಪಾರ್ಟ್‍ಮೆಂಟ್ ಕಾಂಪೌಂಡ್ ಜಿಗಿದು ಒಳಪ್ರವೇಶ ಮಾಡಿದ್ದಾರೆ. ಅಲ್ಲದೇ ಈ ವೇಳೆ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿ ಸ್ಥಳದಲ್ಲಿದ್ದ ಶ್ರೀಗಂಧ ಮರವನ್ನು ಯಂತ್ರದಿಂದ ತುಂಡರಿಸಿ ಕಳವು ಮಾಡಿದ್ದಾರೆ.

    ಘಟನೆ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 10 ಸಾವಿರಕ್ಕಾಗಿ ಸ್ನೇಹಿತರನ್ನೇ ಕೊಲೆ ಮಾಡಿ ಜೈಲು ಸೇರಿದ್ರು

    10 ಸಾವಿರಕ್ಕಾಗಿ ಸ್ನೇಹಿತರನ್ನೇ ಕೊಲೆ ಮಾಡಿ ಜೈಲು ಸೇರಿದ್ರು

    ಹುಬ್ಬಳ್ಳಿ: ಕೇವಲ 10 ಸಾವಿರ ಹಣಕ್ಕಾಗಿ ಇಬ್ಬರು ಸ್ನೇಹಿತರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್ ನಾಗರಾಜ್, ಜೂನ್ 8 ರ ಮಧ್ಯರಾತ್ರಿ ಅಜಂತ ಹೋಟೆಲ್ ಬಳಿ ನಡೆದಿದ್ದ ಜೋಡಿ ಕೊಲೆಯ ಆರೋಪಿಗಳನ್ನ ಬಂಧಿಸಲಾಗಿದೆ. ಹಣದ ವ್ಯವಹಾರಕ್ಕಾಗಿ ಕೊಲೆ ಮಾಡಲಾಗಿದೆ. ಕೊಲೆಯ ಹಿಂದೆ ಹಳೆಯ ವೈಷಮ್ಯ ಇರುವ ಕುರಿತ ಶಂಕೆಯಿದೆ ಎಂದು ತಿಳಿಸಿದ್ದಾರೆ.

    ಏನಿದು ಘಟನೆ: ಕೆಲ ದಿನಗಳ ಹಿಂದೆ ನಗರದ ಅಜಂತ ಹೋಟೆಲ್ ಬಳಿ ಫೈರೋಜ್ ಇರ್ಷಾದ್ ಹಾಗೂ ರಿಯಾಜ್ ರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಕೊಲೆಯಾದ ಮೂರು ದಿನದಲ್ಲೇ ಆರೋಪಿಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

    ಅಖಿಲ್ ಬೇಪಾರಿ(23) ಇರ್ಷಾದ್ ಮಿಶ್ರಿಕೋಟಿ(26), ನವಲೂರು(25)  ಹಾಗೂ ಕೊಲೆಗೆ ಸಹಾಯ ಮಾಡಿದ ವಿರೇಶ್ ಸೊಟ್ನಾಳ(27) ಬಂಧಿತ ಆರೋಪಿಗಳು. ಕೆಲ ದಿನಗಳ ಹಿಂದೆ ಮೃತ ಫೈರೋಜ್ ಆರೋಪಿ ಇರ್ಷಾದ್ ಗೆ ಹತ್ತು ಸಾವಿರ ಹಣ ನೀಡಿದ್ದ. ಇದನ್ನು ವಾಪಸ್ ಕೇಳಿದ ಸಂದರ್ಭದಲ್ಲಿ ಇರ್ಷಾದ್ ಹಾಗೂ ಆತನ ಮೂವರು ಸ್ನೇಹಿತರು ಸೇರಿ ಫೈರೋಜ್ ಹಾಗೂ ರಿಯಾಜ್‍ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಕುರಿತು ವಿಚಾರಣೆ ವೇಳೆ ಕೊಲೆ ಮಾಡಿದ್ದಾಗಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

    ಇದೇ ವೇಳೆ ಆರೋಪಿಗಳ ನಡುವೆ ಪ್ರೇಮ ಪ್ರಕರಣ ಕುರಿತು ವೈಷಮ್ಯ ಉಂಟಾಗಿತ್ತು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿರುವುದಾಗಿ ಮಾಹಿತಿ ನೀಡಿದ್ದು, ಆದರೆ ಇಂದಿನ ಕೊಲೆಗೆ ಹಣಕಾಸಿನ ವೈಷ್ಯಮ್ಯವೇ ಕಾರಣವೆಂದು ತಿಳಿಸಿದ್ದಾರೆ.