Tag: ಪೊಲೀಸ್ ಕಮಿಷನರ್

  • ಕಡಲನಗರಿಯ ಮಂದಿಗೆ ಖಾಕಿ ಮೇಲಿನ ಭರವಸೆಗೆ ಮತ್ತಷ್ಟು ಪುಷ್ಟಿ ನೀಡಿದ ಪೊಲೀಸರು!

    ಕಡಲನಗರಿಯ ಮಂದಿಗೆ ಖಾಕಿ ಮೇಲಿನ ಭರವಸೆಗೆ ಮತ್ತಷ್ಟು ಪುಷ್ಟಿ ನೀಡಿದ ಪೊಲೀಸರು!

    – 1.49 ಕೋಟಿ ಮೌಲ್ಯದ ವಸ್ತುಗಳು ಮಾಲೀಕರಿಗೆ ವಾಪಸ್

    ಮಂಗಳೂರು: ತಾವು ಕಷ್ಟಪಟ್ಟು ಗಳಿಸಿದ ವಸ್ತು ಕಳವಾದ ದುಃಖದಲ್ಲಿದ್ದರು. ಇನ್ನು ಆ ವಸ್ತುಗಳು ಸಿಗೋದೇ ಇಲ್ಲ ಅಂತ ಕೊರಗುತ್ತಿದ್ದರು. ಆದರೆ ಮಂಗಳೂರಿನ ಪೊಲೀಸರು ಇದೀಗ ಅವರ ದುಃಖವನ್ನೆಲ್ಲ ಮರೆಮಾಚಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ಮಾಡಿ ಎಲ್ಲರ ಮೊಗದಲ್ಲೂ ನಗು ಮೂಡುವಂತೆ ಮಾಡಿದ್ದಾರೆ.

    ಹೌದು. ಮಂಗಳೂರಿನ ಪೊಲೀಸರು ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ಕಳವು, ದರೋಡೆ ಪ್ರಕರಣವನ್ನು ಬೇಧಿಸಿ, ವಸ್ತುಗಳನ್ನು ಮರಳಿ ವಾರೀಸುದಾರರಿಗೆ ನೀಡಿದ್ದಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ನಡೆದ ಪ್ರಕರಣಗಳಲ್ಲಿ ನಗ ನಗದು ವಾಹನ ಕಳೆದುಕೊಂಡವರಿಗೆ ಮರಳಿ ಅವರವರ ವಸ್ತುಗಳನ್ನು ಪೊಲೀಸರು ನೀಡಿದ್ದಾರೆ.

    ಮಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಆಭರಣ, ವಾಹನ, ನಗದು ಕಳೆದುಕೊಂಡವರ ಮುಖದಲ್ಲಿ ಧನ್ಯತಾ ಭಾವ ಎದ್ದು ಕಾಣುತಿತ್ತು. ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ನೇತೃತ್ವದಲ್ಲಿ ವಾರೀಸುದಾರರಿಗೆ ಮರಳಿ ಅವರ ವಸ್ತುಗಳನ್ನು ನೀಡಲಾಯಿತು.

    ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮಾಡಿ ವರ್ಷದಲ್ಲಿ ಕಳವಾದ ವಸ್ತುಗಳನ್ನು ವಾರೀಸುದಾರರಿಗೆ ಮರಳಿಸಿದ್ದಾರೆ. ಈ ವರ್ಷ ಒಟ್ಟು 9.05 ಕೋಟಿ ಮೌಲ್ಯದ ವಸ್ತುಗಳು ಕಳುವಾಗಿದ್ದು, ಇದರಲ್ಲಿ 5.37 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿದೆ. ಇದರಲ್ಲಿ 1.49 ಕೋಟಿ ಮೌಲ್ಯದ ವಸ್ತುಗಳನ್ನು ಮಾಲೀಕರಿಗೆ ನೀಡಲಾಗಿದೆ. ಒಟ್ಟು 2,277 ಕೆಜಿ ಚಿನ್ನ, 25 ದ್ವಿ-ಚಕ್ರ ವಾಹನಗಳು, 19 ಮೊಬೈಲ್, 48.13ಲಕ್ಷ ನಗದು ನ್ನು ವಾರೀಸುದಾರರಿಗೆ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ.

    ತಮ್ಮ ವಸ್ತುಗಳು ಕೊನೆಗೂ ನಮಗೆ ಸಿಕ್ಕಿದ ಖುಷಿಯಲ್ಲಿ ವಾರೀಸುದಾರರಿದ್ದರು. ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ವಸ್ತುಗಳನ್ನು ಕಳೆದುಕೊಂಡವರು ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು. ಒಟ್ಟಿನಲ್ಲಿ ಮಂಗಳೂರಿನ ಸೂಪರ್ ಕಾಪ್ ಗಳು ಶೌರ್ಯ ಮೆರೆದು ಮತ್ತೆ ಜನಸ್ನೇಹಿಯಾಗಿದ್ದಾರೆ. ಕಡಲನಗರಿಯ ಮಂದಿಗೆ ಖಾಕಿ ಮೇಲಿನ ಭರವಸೆಗೆ ಮತ್ತಷ್ಟು ಪುಷ್ಟಿ ಬಂದಿದೆ.

  • ಡ್ರಗ್ಸ್ ಪ್ರಕರಣದ ಚೈನ್ ಲಿಂಕ್ ದೊಡ್ಡದಿದೆ: ಮಂಗ್ಳೂರು ಪೊಲೀಸ್ ಕಮಿಷನರ್

    ಡ್ರಗ್ಸ್ ಪ್ರಕರಣದ ಚೈನ್ ಲಿಂಕ್ ದೊಡ್ಡದಿದೆ: ಮಂಗ್ಳೂರು ಪೊಲೀಸ್ ಕಮಿಷನರ್

    – ಇನ್ಸ್ ಪೆಕ್ಟರ್ ವರ್ಗಾವಣೆ ಹಿಂದಿರೋದು ಬೇರೆ ಕಾರಣ

    ಮಂಗಳೂರು: ಡ್ರಗ್ಸ್ ಪ್ರಕರಣ ಚೈನ್ ಲಿಂಕ್ ದೊಡ್ಡದಿದೆ. ಇನ್ಸ್ ಪೆಕ್ಟರ್ ವರ್ಗಾವಣೆ ಹಿಂದೆ ಇರೋದು ಬೇರೆ ಕಾರಣ ಎಂದು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವರ್ಗಾವಣೆ ಹಿಂದೆ ಬೇರೆನೇ ಕಾರಣ ಇದೆ. ಈಗ ಪ್ರಚಾರವಾಗುತ್ತಿರುವ ವಿಷಯ ಸತ್ಯಕ್ಕೆ ದೂರ. ಬಹಳ ವಿಚಾರ ನಮಗೇನೇ ಗೊತ್ತಾಗಲ್ಲ. ಮಾಧ್ಯಮಗಳಲ್ಲಿ ಬಂದ ವಿಚಾರವನ್ನು ನಾವೇ ತನಿಖೆ ಮಾಡಬೇಕಾಗುತ್ತದೆ. ಯಾವ ಅಧಿಕಾರಿಗಳ ಮೇಲೂ ಒತ್ತಡ ಹೇರಲಾಗಿಲ್ಲ ಎಂದಿದ್ದಾರೆ.

    ಪ್ರಕರಣದಲ್ಲಿ ಚೈನ್ ಲಿಂಕ್ ದೊಡ್ಡದಿದೆ. ಈ ಚೈನ್ ಲಿಂಕ್ ಎಲ್ಲಿ ಕೊನೆಯಾಗುತ್ತೋ ಅಲ್ಲಿ ತನಕ ವಿಚಾರಣೆ ಮಾಡುತ್ತೇವೆ. ಡ್ರಗ್ಸ್ ಪ್ರಕರಣದಲ್ಲಿ ಒಟ್ಟು 6 ಮಂದಿ ಆರೋಪಿಗಳ ಬಂಧನವಾಗಿದೆ. ಪ್ರಕರಣದ ಬಗ್ಗೆ ಪ್ರತಿನಿತ್ಯ ತನಿಖೆ ಮಾಡಲಾಗುತ್ತಿದೆ. ಮಾಹಿತಿ ಬೇಕಾದಲ್ಲಿ ನೋಟಿಸ್ ಮಾಡುತ್ತೇವೆ. ನೋಟಿಸ್ ಕೊಟ್ಟು ಪ್ರಕರಣದ ವಿಚಾರಣೆಯನ್ನು ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ – ಡಿಕೆಶಿ ಪ್ರಶ್ನೆ

    ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರು ಮೊದಲು ಡಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದರು. ಈ ವೇಳೆ ಕಿಶೋರ್ ಶೆಟ್ಟಿಯನ್ನು ಬಿಡುಗಡೆ ಮಾಡುವಂತೆ ಶಾಸಕರು ಒತ್ತಡ ಹಾಕಿದ್ದರು. ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈ ಬಿಡುವಂತೆ ಒತ್ತಾಯ ಹೇರಿದ್ದರು. ಆದರೆ ಶಾಸಕನ ಒತ್ತಾಯಕ್ಕೆ ಶಿವಪ್ರಕಾಶ್ ಮಣಿದಿರಲಿಲ್ಲ. ಹೀಗಾಗಿ ಇದೀಗ ಶಿವಪ್ರಕಾಶ್ ನೇತೃತ್ವದಲ್ಲೇ ನಡೆಯುತ್ತಿದ್ದ ಕಂಪ್ಲೀಟ್ ಡ್ರಗ್ಸ್ ಪ್ರಕರಣ ತನಿಖಾ ಉತ್ತುಂಗದಲ್ಲಿದ್ದಾಗ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಅನುಶ್ರೀ ವಿಚಾರಣೆ ನಡೆಸಿದ್ದ ಇನ್ಸ್‌ಪೆಕ್ಟರ್ ವರ್ಗಾವಣೆ – ಸ್ಥಳೀಯ ಶಾಸಕರ ಪ್ರಭಾವದ ಶಂಕೆ

    ಅನುಶ್ರೀ ಬಚಾವ್ ಮಾಡಲು ದೆಹಲಿಯಿಂದಲೂ ಪ್ರಭಾವ ಬೀರಲಾಗುತ್ತಿದೆ. ದೆಹಲಿಯಲ್ಲಿರುವ ಪ್ರಭಾವಿ ನಾಯಕರು ಕೂಡ ಪ್ರಕರಣದಿಂದ ಅನುಶ್ರೀಯನ್ನು ಕೈಬಿಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಅನುಶ್ರೀ ದೂರವಾಣಿ ಕರೆಗಳ ಸಾಕ್ಷ್ಯ ಕೆದಕಿರುವ ಸಿಸಿಬಿಗೆ ಅಚ್ಚರಿಯಾಗಿದೆ. 6 ಸಿಮ್ ಬಳಸ್ತಿದ್ದ ಅನುಶ್ರೀ, ಸಿಸಿಬಿ ನೋಟಿಸ್ ಬೆನ್ನಲ್ಲೇ ನಾಲ್ವರು ಪ್ರಭಾವಿಗಳಿಗೆ ಫೋನ್ ಮಾಡಿದ್ದಾರೆ. ಮಾಜಿ ಸಿಎಂ, ಮಾಜಿ ಸಿಎಂ ಮಗ ಹಾಗೂ ಕರಾವಳಿ ಭಾಗದ ಪ್ರಭಾವಿ ರಾಜಕಾರಣಿಗೂ ಕರೆ ಮಾಡಿದ್ದರು. 3 ಪಕ್ಷಗಳ ಮೂವರು ನಾಯಕರಿಗೆ ಕಾಲ್ ಮಾಡಿದ್ದರು ಎಂದು ದೂರವಾಣಿ ಕರೆ ದಾಖಲೆ ಪರಿಶೀಲನೆ ವೇಳೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

  • ನಾವು ಯಾವ ಅಮಾಯಕರನ್ನೂ ಅರೆಸ್ಟ್ ಮಾಡಿಲ್ಲ – ಕಾಂಗ್ರೆಸ್ ನಾಯಕರಿಗೆ ಕಮಿಷನರ್ ಕಮಲ್‍ಪಂತ್ ತಿರುಗೇಟು

    ನಾವು ಯಾವ ಅಮಾಯಕರನ್ನೂ ಅರೆಸ್ಟ್ ಮಾಡಿಲ್ಲ – ಕಾಂಗ್ರೆಸ್ ನಾಯಕರಿಗೆ ಕಮಿಷನರ್ ಕಮಲ್‍ಪಂತ್ ತಿರುಗೇಟು

    ಬೆಂಗಳೂರು: ನಾವು ಯಾವ ಅಮಾಯಕರನ್ನೂ ಅರೆಸ್ಟ್ ಮಾಡಿಲ್ಲ ಎಂದು ಪೊಲೀಸ್ ಆಯುಕ್ತ ಕಮಲ್‍ ಪಂತ್ ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಪುಂಡರು ಅಮಾಯಕರು, ಮುಗ್ಧರಂತೆ – ಕೈ ನಾಯಕರಿಗೆ ‘ಪಬ್ಲಿಕ್’ ಪ್ರಶ್ನೆ

    ಡಿಜೆ ಹಳ್ಳಿ ಪೊಲೀಸ್ ಠಾಣೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಲ್‍ ಪಂತ್, ಇವತ್ತು ಕರ್ಫ್ಯೂ ತೆರವು ಆದಮೇಲೆ ಯಾವ ಪರಿಸ್ಥಿತಿ ಇದೆ ಅನ್ನೋದನ್ನು ನೋಡೋಕೆ ಬಂದಿದ್ದೆ. ತನಿಖೆ ಯಾವ ರೀತಿ ನಡೆಯುತ್ತಿದೆ. ಮುಂದೆ ಏನು ಮಾಡಬೇಕು ಅನ್ನೋದನ್ನು ಚರ್ಚೆ ಮಾಡಿದ್ದೀವಿ. ನಮಗೆ ಯಾವುದೇ ರೀತಿಯ ಒತ್ತಡ ಇಲ್ಲ ತನಿಖೆ ಸಮಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

    ಶಾಂತಿ ಸಭೆಗಳು ಮಾಡುತ್ತಿದ್ದೀವಿ. ತನಿಖೆ ಸಮಯ ಆಗಿರುವ ಕಾರಣ ಕೆಲ ಮಾಹಿತಿಗಳನ್ನು ಹಂಚಿಕೊಳ್ಳೋಕೆ ಆಗಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಸುತ್ತೀವಿ. ನಾವು ಯಾವ ಅಮಾಯಕರನ್ನು ಅರೆಸ್ಟ್ ಮಾಡಿಲ್ಲ. ಯಾರೇ ಬಂದರೂ ಸೂಕ್ತ ಮಾಹಿತಿ ಕೊಡುತ್ತೀವಿ. ನಾವು ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ಮಾಡುತ್ತೀವಿ ಎಂದು ಕಮಲ್‍ ಪಂತ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

    ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಕಮಲ್‍ ಪಂತ್ ಭೇಟಿ ನೀಡಿದ್ದು, ಗಲಭೆ ಸಂಬಂಧ ಇಲ್ಲಿವರೆಗಿನ ಮಾಹಿತಿ ಕುರಿತು ಅಧಿಕಾರಿಗಳ ಚರ್ಚೆ ನಡೆಸಿದ್ದಾರೆ. ಗಲಭೆಯಲ್ಲಿ ವಿಚಾರಣೆ ವೇಳೆ ಯಾರೆಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಹೇಳಿಕೆಗಳು, ಕೆಲ ಮಹತ್ವದ ದಾಖಲೆಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಇಬ್ಬರು ಕಾರ್ಪೊರೇಟರ್‌ಗಳು, ಸ್ಥಳೀಯ ಜೆಡಿಎಸ್ ಮುಖಂಡ ವಾಜೀದ್‍ನನ್ನ ವಿಚಾರಣೆ ನಡೆಸಿದ್ದಾರೆ. ಸದ್ಯಕ್ಕೆ ಪೊಲೀಸರು ಘಟನೆಯಲ್ಲಿ ಭಾಗಿಯಾದ ಕೆಲ ರೌಡಿಶೀಟರ್‌ಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಎಲ್ಲ ತನಿಖೆಯ ಸಂಬಂಧ ಪೊಲೀಸ್ ಠಾಣೆಯಲ್ಲಿ ಕಮಲ್‍ ಪಂತ್ ಮಾಹಿತಿ ಕಲೆಹಾಕಲಿದ್ದಾರೆ.

  • ವಿದೇಶದಿಂದ ಫೇಕ್ ಮೆಸೇಜ್ ಕಳಿಸುವವರ ವಿರುದ್ಧ ಕಠಿಣ ಕ್ರಮ: ಕಮಿಷನರ್ ಡಾ.ಪಿ.ಎಸ್.ಹರ್ಷ

    ವಿದೇಶದಿಂದ ಫೇಕ್ ಮೆಸೇಜ್ ಕಳಿಸುವವರ ವಿರುದ್ಧ ಕಠಿಣ ಕ್ರಮ: ಕಮಿಷನರ್ ಡಾ.ಪಿ.ಎಸ್.ಹರ್ಷ

    – 38 ಆರೋಪಿಗಳು ಅರೆಸ್ಟ್
    – ಅನುಮತಿ ಪಡೆದವರಿಗೆ ಮಾತ್ರ ಪ್ರತಿಭಟನೆಗೆ ಅವಕಾಶ

    ಮಂಗಳೂರು: ಪೌರತ್ವ ಮಸೂದೆ ಜಾರಿ ವಿರುದ್ಧ ವಿದೇಶದಿಂದ ಸುಳ್ಳು ಸಂದೇಶ ಕಳುಹಿಸುವವರು ಹಾಗೂ ಮಸೂದೆಯನ್ನು ಖಂಡಿಸಿ ಅನುಮತಿ ಪಡೆಯದೇ ಪ್ರತಿಭಟನೆ ನಡೆಸುವವರ ಮೇಲೆ ಪೊಲೀಸರು ನಿಗಾ ವಹಿಸಲಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದೆ. ಆದ್ರೆ ಅಭಿಪ್ರಾಯ ಮಂಡಿಸುವವರು ಕಾನೂನಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸಬಹುದು. ಈಗಾಗಲೇ ಪ್ರತಿಭಟನೆ ನಡೆಸಲು ಅನುಮತಿ ಕೋರಿ 6 ಅರ್ಜಿ ಬಂದಿತ್ತು, ಅರ್ಜಿ ಪರಿಶೀಲಿಸಿ ಅವರಿಗೆ ಅನುಮತಿ ನೀಡಿದ್ದೇವೆ. ಆದರೆ ಕೆಲವು ಸಂಘಟನೆಯವರು ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಮಂಗಳೂರು ನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು

    ರಸ್ತೆ ತಡೆ ನಡೆಸಿದ 38 ಜನರನ್ನು ಬಂಧಿಸಿದ್ದೇವೆ. ಬೇರೆ ರಾಜ್ಯದವರು ಮಂಗಳೂರಿಗೆ ಬಂದು ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ಕೇಳಿದ ಬಗ್ಗೆಯೂ ಮಾಹಿತಿ ನೀಡಿದ ಕಮಿಷನರ್ ಅವರು ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಇದೇ ತಿಂಗಳ 20 ರಿಂದ 23ನೇ ತಾರೀಖಿನವರೆಗೆ ವಿವಿಧ ಸಂಘಟನೆಯ ಹೆಸರಿನಲ್ಲಿ ಮಂಗಳೂರಿನ ನೆಹರು ಮೈದಾನದಲ್ಲಿ ಬೃಹತ್ ಪ್ರತಿಭಟನೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಸಂದೇಶ ಹರಿಯ ಬಿಡಲಾಗುತ್ತಿದೆ. ಅಂತವರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಹಾಗೂ ಪ್ರತಿಭಟನೆ ನಡೆಸುವುದಕ್ಕೆ ಯಾರು ಅನುಮತಿ ಕೋರಿಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.

    ವಿದೇಶದಿಂದ ಈ ಮಸೂದೆಯ ವಿರುದ್ಧ ಫೇಕ್ ಸಂದೇಶಗಳನ್ನು ಕಳುಹಿಸುತ್ತಿರುವವರು ಯಾರು ಎಂಬುದನ್ನು ಈಗಾಗಲೇ ಪತ್ತೆಹಚ್ಚಲಾಗಿದ್ದು, ಅವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳುತ್ತೇವೆ. ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನಾ ಎಚ್ಚರಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ 20 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತದೆ ಎನ್ನುವ ಸುದ್ದಿ ಹಬ್ಬಿರೋದ್ರಿಂದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮಂಗಳೂರು ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

    ಇಂದು ರಾತ್ರಿ 9 ಗಂಟೆಯಿಂದ ಡಿಸೆಂಬರ್ 20 ರ ಮಧ್ಯರಾತ್ರಿ ತನಕ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಿದ್ದು ಹೆಚ್ಚಿನ ಪೊಲೀಸ್ ನಿಯೋಜನೆಯನ್ನೂ ಮಾಡಿದ್ದಾರೆ. ಅಂದು ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆಗಾಗಿ ಅನುಮತಿ ಪಡೆದಿಲ್ಲ. ಒಂದು ವೇಳೆ ಅನುಮತಿ ಪಡೆಯದೆ ಪ್ರತಿಭಟಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಸಿದ್ದಾರೆ.

  • ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು – ಶೀಘ್ರವೇ ಮೂವರ ವಿಚಾರಣೆ

    ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು – ಶೀಘ್ರವೇ ಮೂವರ ವಿಚಾರಣೆ

    ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಹನಿಟ್ರ್ಯಾಪ್ ಕೇಸ್‍ನಲ್ಲಿ ಸ್ಯಾಂಡಲ್‍ವುಡ್ ನಟಿಯರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯೊಂದು ಬಯಲಾಗಿದೆ.

    ಸ್ಯಾಂಡಲ್‍ವುಡ್ ನಟಿಯರ ಪಾತ್ರದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಒಬ್ಬರು ಒಂದು ಕಾಲದ ಸ್ಟಾರ್ ನಟಿ, ಇನ್ನಿಬ್ಬರು ಎರಡು ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡವರಾಗಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಇವರು ಹೆಸರುವಾಸಿಯಾಗಿದ್ದಾರೆ. ಶೀಘ್ರವೇ ಈ ಮೂವರು ನಟಿಯರನ್ನು ವಿಚಾರಣೆ ಮಾಡಲಾಗುವುದು ಎಂಬ ಸ್ಫೋಟಕ ರಹಸ್ಯವನ್ನು ಪೊಲೀಸ್ ಕಮಿಷನರ್ ಬಯಲು ಮಾಡಿದ್ದಾರೆ.

    ಹನಿಟ್ರ್ಯಾಪ್‍ನಲ್ಲಿ ಸಿಲುಕಿರುವ ಓರ್ವಳು ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದಳು. ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದ ಈಕೆಗೆ ಇತ್ತೀಚೆಗೆ ಅವಕಾಶಗಳ ಕೊರತೆ ಕಂಡುಬಂತು. ಸ್ಟಾರ್ ಹೀರೋಗಳ ಜೊತೆಗೂ ಈಕೆ ನಟಿಸಿದ್ದಾಳೆ. ಅಲ್ಲದೆ ನಿರ್ಮಾಪಕರ ಜೊತೆಗೂ ಈಕೆ ನಂಟು ಹೊಂದಿದ್ದಾಳೆ. ಈಕೆ ಕನ್ನಡದ ನಟಿಯಲ್ಲ ಬದಲಾಗಿ ಪರರಾಜ್ಯ ನಟಿಯಾಗಿದ್ದಾಳೆ.

    ಎರಡನೇಯ ನಟಿ ಕೂಡ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. ಹೀರೋಯಿನ್ ಜೊತೆಗೆ ಸಹನಟಿಯಾಗಿ ಅಭಿನಯ ಮಾಡಿದ್ದಾಳೆ. ಈ ನಟಿ ಕರ್ನಾಟಕ ಮೂಲದವಳು ಎಂದು ಹೇಳಲಾಗುತ್ತಿದ್ದು, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಬಹುಬೇಡಿಕೆ ನಟಿ ಅಲ್ಲದಿದ್ದರೂ ಈಕೆಗೆ ಬೇಡಿಕೆ ಬಹಳ ಇತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಮೂರನೇಯವಳು ಒಂದು ರೀತಿ ಬಹುಭಾಷಾ ನಟಿಯಾಗಿದ್ದಾಳೆ. ಹಸಿಬಿಸಿ ದೃಶ್ಯಾವಳಿಗಳಿಗೆ ಈ ನಟಿ ಹೆಸರುವಾಸಿವಾಗಿದ್ದು, ಕನ್ನಡ ಮಾತ್ರವಲ್ಲದೆ ಪರಭಾಷಾ ಚಿತ್ರಗಳಲ್ಲೂ ನಟನೆ ಮಾಡಿದ್ದಾಳೆ. ಈಕೆಗೆ ಉದ್ಯಮಿಗಳು, ಅಧಿಕಾರಿಗಳ ಜೊತೆಗೂ ನಂಟಿದೆ. ಈ ಹಿಂದೆಯೂ ಈಕೆಯ `ವ್ಯವಹಾರ’ ಭಾರೀ ಸುದ್ದಿಯಾಗಿತ್ತು ಎಂಬುದಾಗಿ ತಿಳಿದುಬಂದಿದೆ.

  • ಕರೆ ಮಾಡಿದ ಏಳು ಸೆಕೆಂಡಿನಲ್ಲಿ ಉತ್ತರ, ಒಂಬತ್ತು ನಿಮಿಷದಲ್ಲಿ ಸ್ಥಳದಲ್ಲಿ- ಭಾಸ್ಕರ್ ರಾವ್ ಭರವಸೆ

    ಕರೆ ಮಾಡಿದ ಏಳು ಸೆಕೆಂಡಿನಲ್ಲಿ ಉತ್ತರ, ಒಂಬತ್ತು ನಿಮಿಷದಲ್ಲಿ ಸ್ಥಳದಲ್ಲಿ- ಭಾಸ್ಕರ್ ರಾವ್ ಭರವಸೆ

    – ಸುರಕ್ಷ ಆ್ಯಪ್ ಬಳಸಲು ಸೂಚನೆ

    ಬೆಂಗಳೂರು: ಪಶು ವೈದ್ಯೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಂತರ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದು, ಯಾರೇ ಕರೆ ಮಾಡಿದರೂ ಕೇವಲ ಏಳು ಸೆಕೆಂಡ್‍ನಲ್ಲಿ ಪೊಲೀಸರು ಉತ್ತರಿಸುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭರವಸೆ ನೀಡಿದ್ದಾರೆ.

    ಹೈದ್ರಾಬಾದ್ ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಸಹಾಯವಾಣಿ 100ಕ್ಕೆ ಕರೆ ಮಾಡಿ. ಕರೆ ಮಾಡಿದ ಏಳು ಸೆಕೆಂಡ್ ನಲ್ಲಿ ಸ್ವೀಕರಿಸಿ, ನಿಮ್ಮ ಸಮಸ್ಯೆ ಆಲಿಸುತ್ತಾರೆ. ಬೆಂಗಳೂರಿಗರು ಮಾತ್ರವಲ್ಲ ಹೊರಗಿನಿಂದ ಬಂದವರು ಸಹ ಕರೆ ಮಾಡಿ ದೂರು ನೀಡಿದರೆ ತಕ್ಷಣ ಸ್ಪಂದಿಸಲಾಗುವುದು. ಈ ಕುರಿತು ನಾನು ಶೇ.100ರಷ್ಟು ಭರವಸೆ ನೀಡುತ್ತೇನೆ. ಕರೆ ಮಾತ್ರವಲ್ಲ ಸಂದೇಶವನ್ನು ಸಹ ಕಳುಹಿಸಬಹುದು ಎಂದರು.

    ಕರೆ ಮಾಡಿದ ಕೆಲವೇ ಸೆಕೆಂಡ್‍ನಲ್ಲಿ ಉತ್ತರಿಸುತ್ತಾರೆ. ಮಾತ್ರವಲ್ಲದೆ ಕೆಲವೇ ನಿಮಿಷಗಳಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸುತ್ತಾರೆ. ಬೆಂಗಳೂರಿಗರು ಭಯ ಪಡುವ ಅಗತ್ಯವಿಲ್ಲ. ಸಾರ್ವಜನಿಕ ಪ್ರತಿಯೊಂದು ಕರೆಗೆ ನಾವು ಸ್ಪಂದಿಸುತ್ತೇವೆ. ಸಾರ್ವಜಕರು ಈ ಕ್ಷಣದಿಂದಲೆ ಕರೆ ಮಾಡಬಹುದು. ಕರೆ ಮಾಡಿದ ಒಂಬತ್ತು ನಿಮಿಷದಲ್ಲಿ ನಾವು ಸ್ಥಳಕ್ಕೆ ಬರುತ್ತೇವೆ ಎಂದು ತಿಳಿಸಿದರು.

    ಮಹಿಳೆಯರು ‘ಸುರಕ್ಷ’ ಆಪ್ ಬಳಸಬೇಕು, ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರು ಸಹ ಈ ಆ್ಯಪ್ ಬಳಸಬೇಕು. ನಿಮಗೆ ಸಮಸ್ಯೆ ಆದಾಗ ಆಪ್ ನಿಮಗೆ ಸಹಾಯ ಮಾಡುತ್ತದೆ. ಕೇವಲ ಒಂದು ಬಟನ್ ಒತ್ತುವುದರಿಂದ ಪೊಲೀಸರು ನೀವಿದ್ದ ಸ್ಥಳಕ್ಕೆ ಬರುತ್ತಾರೆ. ಅಲ್ಲದೆ ನಿಮ್ಮ ಮೊಬೈಲ್ ಕ್ಯಾಮೆರಾ ಆನ್ ಅಗುತ್ತೆ, ನಿಮಗೆ ಏನಾಗಿದೆ ಎಂಬುದು ಕಂಟ್ರೋಲ್ ರೂಮ್ ನಲ್ಲಿರುವವರಿಗೆ ತಿಳಿಯುತ್ತದೆ. ಎಲ್ಲರೂ ಇದನ್ನು ಬಳಸಬೇಕು ಎಂದರು.

    26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್‍ನಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ.

    ರಿಮ್ಯಾಂಡ್ ಹೋಂನಲ್ಲಿ ಆರೋಪಿಗಳಿಂದ ಪೊಲೀಸರು ಸತ್ಯ ಕಕ್ಕಿಸುತ್ತಿದ್ದು, ತೆಲಂಗಾಣ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಂದ ಮೇಲೂ ಪಾಪಿಗಳು ಶವವನ್ನೂ ಬಿಡದೆ ಅತ್ಯಾಚಾರಗೈದಿದ್ದರು ಎನ್ನುವ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ದಿನ ಕಳೆದಂತೆ ಆರೋಪಿಗಳು ಪೊಲೀಸರ ಬಳಿ ಪಶುವೈದ್ಯೆಗೆ ಯಾವ ರೀತಿಯಲ್ಲೆಲ್ಲ ಹಿಂಸೆಕೊಟ್ಟು ಕೊಲೆ ಮಾಡಲಾಯ್ತು ಎನ್ನುವ ಸತ್ಯವನ್ನು ಬಾಯಿಬಿಡುತ್ತಿದ್ದಾರೆ. ಪ್ರಕರಣವನ್ನು ಪಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಬೇಕೆಂದು ಹೋರಾಟ ನಡೆಸಲಾಗುತ್ತಿದ್ದು, ವಿವಿಧ ರಾಜಕೀಯ ನಾಯಕರು ಸಹ ಈ ಕುರಿತು ಒತ್ತಾಯಿಸುತ್ತಿದ್ದಾರೆ.

  • ಮಕ್ಕಳ ಜೊತೆ ಮಕ್ಳಾಗೋಕೆ ಕರೆಸಿದ್ದೀರಿ ಅನಿಸತ್ತೆ- ಯಶ್

    ಮಕ್ಕಳ ಜೊತೆ ಮಕ್ಳಾಗೋಕೆ ಕರೆಸಿದ್ದೀರಿ ಅನಿಸತ್ತೆ- ಯಶ್

    ಬೆಂಗಳೂರು: ನಗರದ ಇನ್ ಫ್ಯಾಂಟ್ರಿ ರಸ್ತೆಯ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಮಕ್ಕಳ ಜಾತ್ರೆ ಕಾರ್ಯಕ್ರಮದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಚಿತ್ರದ ಡೈಲಾಗ್ ಹೇಳಿ ಮಕ್ಕಳನ್ನು ರಂಜಿಸಿದ್ದಾರೆ.

    ಇಂದು ಮಕ್ಕಳ ದಿನಾಚರಣೆ ಹಿನ್ನಲೆಯಲ್ಲಿ ನಗರ ಪೊಲೀಸ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯಶ್, ಮೊದಲು ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿದರು.

    ನಮ್ಮನ್ನ ಮಕ್ಕಳ ದಿನಾಚರಣೆಗೆ ಕರೆಸಿದ್ದು ನನ್ನನ್ನು ಮಕ್ಕಳ ಜೊತೆ ಮಕ್ಕಳಾಗೋಕೆ ಅನಿಸ್ತಿದೆ. ಪೊಲೀಸರ ಕೆಲಸ ತುಂಬಾ ರಿಸ್ಕಿ ಕೆಲಸವಾಗಿದೆ. ನಮ್ಮ ರಕ್ಷಣೆಗೆ ಪೊಲೀಸರು ಸದಾ ದುಡಿಯುತ್ತಿರುತ್ತಾರೆ. ಪರಿಹಾರ ಸಂಸ್ಥೆ ತುಂಬಾ ಒಳ್ಳೆ ಕೆಲಸ ಮಾಡುತ್ತಿದೆ ಎಂದರು.


    ಕಮಿಷನರ್ ಕಚೇರಿಯಲ್ಲಿ ಮಕ್ಕಳ ದಿನಾಚರಣೆ ಆಚರಿಸುತ್ತಿರುವುದು ತುಂಬಾ ಖುಷಿಯ ವಿಚಾರ. ಮಕ್ಕಳು ಪೊಲೀಸರು ಬಂದರೆ ಹೆದರಿಕೊಳ್ಳಬಾರದು, ಧೈರ್ಯ ಬರುತ್ತೆ ಅಂದುಕೊಳ್ಳಬೇಕು ಎಂದು ತಿಳಿಸಿದರು.

    ಇದೇ ವೇಳೆ ಕೆಜಿಎಫ್ ಚಿತ್ರದ ಡೈಲಾಗ್ ಹೊಡೆದರು. ‘ಹತ್ತು ಜನರನ್ನ ಹೊಡೆದು ಡಾನ್ ಆದವನಲ್ಲ ನಾನು. ನಾನು ಹೊಡೆದಿರೋ ಹತ್ತು ಜನನೂ ಡಾನೇ..’ ಎಂದಾಗ ನೆರೆದಿದ್ದವರು ಶಿಳ್ಳೆ ಹೊಡೆದರು. ಈ ಮೂಲಕ ಕಾರ್ಯಕ್ರಮದಲ್ಲಿ ಕೆಜಿಎಫ್ ಚಿತ್ರದ ಡೈಲಾಗ್ ಹೇಳಿ ಮಕ್ಕಳನ್ನ ರಂಜಿಸಿದರು.

    ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಮಕ್ಕಳೆಲ್ಲರಿಗೂ ಶುಭಾಶಯಗಳು. ಯಶ್ ಅವರಿಗೂ ಶುಭಾಶಯಗಳು. ಹೆಣ್ಮಕ್ಕಳಿಗೆ ಧೈರ್ಯ ಇರಬೇಕು. ನಿಮ್ಮನ್ನು ಇಲ್ಲಿಗೆ ಕರೆಸಲು ಉದ್ದೇಶ ಇದೆ. ನಿಮಗೆ ಪೊಲೀಸರು ಅಂದರೆ ನಿಮ್ಮ ಸ್ನೇಹಿತರಿದ್ದ ಹಾಗೆ. ಇದು ದೊಡ್ಡ ಕಚೇರಿ ಅದಕ್ಕೆ ನಿಮಗೆ ಧೈರ್ಯ ಬರಲಿ ಅಂತ ಕರೆಸಿದ್ದು. ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ನಾವು ಇನ್ನು ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

    ಕಾರ್ಯಕ್ರಮದಲ್ಲಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೆಚ್ಚುವರಿ ಆಯುಕ್ತ ಉಮೇಶ್ ಉಪಸ್ಥಿತರಿದ್ದರು.

  • ಪೊಲೀಸ್ ಕಮಿಷನರ್‌ಗೆ ರೌಡಿ ಯಶಸ್ವಿನಿಯಿಂದ ಸನ್ಮಾನ

    ಪೊಲೀಸ್ ಕಮಿಷನರ್‌ಗೆ ರೌಡಿ ಯಶಸ್ವಿನಿಯಿಂದ ಸನ್ಮಾನ

    ಬೆಂಗಳೂರು: ಮೀಟರ್ ಬಡ್ಡಿ ದುಡ್ಡಿಗೆ ಅಮಾಯಕರ ಪ್ರಾಣ ತೆಗೆದಿದ್ದು, ಅಲ್ಲದೆ ಹಣ ಕೊಡಲಿಲ್ಲ ಅಂದರೆ ಚಪ್ಪಲಿ ಕಾಲಿನಲ್ಲೇ ಒದೀತಿದ್ದಾಕೆ ಇದೀಗ ಸಾಮಾಜಿಕ ಕಾರ್ಯಕರ್ತೆ ವೇಷ ಹಾಕಿ ಕಮಿಷನರ್ ಅವರಿಗೇ ಸನ್ಮಾನ ಮಾಡಿರುವುದು ಬೆಳಕಿಗೆ ಬಂದಿದೆ.

    ಹೌದು, ರೌಡಿ ಯಶಸ್ವಿನಿ ಬೆಂಗಳೂರು ಪೊಲೀಸ್ ಕಮಿಷನರ್‌ ಭಾಸ್ಕರ್ ರಾವ್‍ಗೆ ಸನ್ಮಾನ ಮಾಡಿದ್ದಾರೆ. ಶ್ರೀರಾಮಸೇನೆಯ ಮುತಾಲಿಕ್ ಜೊತೆ ನಿಂತು ಭಾಸ್ಕರ್ ರಾವ್ ಅವರಿಗೆ ಶಾಲು ಹೊದಿಸಿ, ಗಂಧದ ಹಾರ ಹಾಕಿದ್ದಾರೆ. ಯಶಸ್ವಿನಿ ಮತ್ತು ಈಕೆಯ ಪತಿ ದಡಿಯಾ ಮಹೇಶ್ ಅವರ ಸನ್ಮಾನವನ್ನು ನಗುಮೊಗದಿಂದಲೇ ಭಾಸ್ಕರ್ ರಾವ್ ಸ್ವೀಕರಿಸಿದ್ದಾರೆ.

    ಅಂದಹಾಗೆ, ನಿನ್ ಹೆಂಡತಿಯದ್ದು ಜಾಸ್ತಿ ಆಯ್ತು, ಬುದ್ಧಿ ಕಲಿಸೋಕೆ ಆಗಲ್ವ ಅವಳಿಗೆ ಎಂದು ಸಿಸಿಬಿ ಡಿಸಿಪಿಯಾಗಿದ್ದ ಗಿರೀಶ್ ಈ ಹಿಂದೆ ಅವಾಜ್ ಹಾಕಿದ್ದರು. ಈ ವೇಳೆ, ನನ್ ಮಾತು ಕೇಳಲ್ಲ ಸರ್ ಅವಳು, ನೀವೇ ಬುದ್ಧಿ ಕಲಿಸಿ ಅಂತ ರೌಡಿ ದಡಿಯಾ ಮಹೇಶ್ ಹೇಳಿದ್ದನು. ಅಂದು ಗಢ ಗಢ ನಡುಗಿದ್ದ ರೌಡಿಶೀಟರ್‍ಗಳು ಇಂದು ಪೊಲೀಸರಿಗೆ ಫುಲ್ ಕ್ಲೋಸ್ ಆಗಿದ್ದಾರೆ.

    ಅಲೋಕ್ ಕುಮಾರ್, ಗಿರೀಶ್ ರಂತಹ ಅಧಿಕಾರಿಗಳು ಎತ್ತಂಗಡಿಯಾಗಿದ್ದೇ ತಡ, ಕಮಿಷನರ್‌ ಗೆ ಸನ್ಮಾನ ಮಾಡೋವಷ್ಟು ಬೆಳೆದು ಬಿಟ್ಟಿದ್ದಾರೆ. ಸದ್ಯ ಶ್ರೀ ರಾಮಸೇನೆಯಲ್ಲಿ ಗುರುತಿಸಿಕೊಂಡಿರುವ ಯಶಸ್ವಿನಿ, ಈಗ ಕಮಿಷನರ್ ಗೆ ಸನ್ಮಾನ ಮಾಡಿದ ಫೊಟೊಗಳು ವೈರಲ್ ಆಗುತ್ತಿವೆ. ರೌಡಿಗಳಿಂದ ಸನ್ಮಾನ ಮಾಡಿಸಿಕೊಂಡ ಕಮಿಷನರ್‌ ಭಾಸ್ಕರ್ ರಾವ್ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

  • ತಾತ್ಕಾಲಿಕ ನಗರ ಪೊಲೀಸ್ ಆಯುಕ್ತರಾದ 5 ಮಕ್ಕಳು

    ತಾತ್ಕಾಲಿಕ ನಗರ ಪೊಲೀಸ್ ಆಯುಕ್ತರಾದ 5 ಮಕ್ಕಳು

    – ಮಕ್ಕಳ ಆಸೆ ಈಡೇರಿಸಿದ ಭಾಸ್ಕರ್ ರಾವ್
    – ಮಕ್ಕಳಿಂದ ಪೊಲೀಸರಿಗೆ ಧನ್ಯವಾದ

    ಬೆಂಗಳೂರು: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಐದು ಮಕ್ಕಳ ಕೊನೆಯ ಆಸೆಯನ್ನು ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈಡೇರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ರುತನ್ ಕುಮಾರ್, ಮಹಮದ್ ಶಕೀಬ್, ಅರ್ಷಾಥ್ ಪಾಷಾ, ಶ್ರಾವಣಿ ಬಂಟ್ಟಾಳ, ಸಯ್ಯದ್ ಇಮಾದ್ ಸೇರಿ 5 ಮಂದಿ ಮಕ್ಕಳ ನಗರ ಪೋಲೀಸ್ ಆಯುಕ್ತರನ್ನಾಗಿ ಮಾಡುವ ಮೂಲಕ ಅವರ ಕೊನೆಯ ಆಸೆ ಈಡೇರಿಸಿದರು. 5 ಮಕ್ಕಳಿಗೆ ಗಾರ್ಡ್ ಆಫ್ ಹಾನರ್ ಕೊಟ್ಟು ಕಮೀಷನರ್ ಸೀಟ್ ಅಲಂಕರಿಸಲು ಅನುವು ಮಾಡಿಕೊಟ್ಟರು. ಡಾಗ್ ಸ್ಕ್ವಾಡ್ ಕರೆದು ಅವರನ್ನ ಪರಿಚಯ ಮಾಡಿಸುವ ಕೆಲಸ ಕೂಡ ಮಾಡಿ ಪುಟಾಣಿಗಳ ಆಸೆ ಈಡೇರಿಸಲಾಯಿತು.

    ಪೊಲೀಸ್ ಆಯಕ್ತರಾಗಿ ಕೆಲ ನಿಮಿಷ ಅಧಿಕಾರ ಚಲಾಯಿಸಿದ ಪುಟಾಣಿ ರುತನ್ ಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಟ ದರ್ಶನ್ ಐರಾವತ ಸಿನಿಮಾ ನೋಡಿ ನಾನು ಕೂಡ ಪೊಲೀಸ್ ಆಫೀಸರ್ ಆಗಬೇಕು ಎನ್ನುವ ಆಸೆ ಹುಟ್ಟಿಕೊಂಡಿತ್ತು. ಭಗವಂತ ನನ್ನ ಆಸೆಯನ್ನು ಗಿಡವಾಗಿ ಇರುವಾಗಲೇ ಚಿವುಟಿ ಹಾಕಿದ್ದಾನೆ. ತಾತ್ಕಾಲಿಕ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ನಡೆಸಲು ಅನುವು ಮಾಡಿಕೊಟ್ಟ ಬೆಂಗಳೂರು ಪೊಲೀಸರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಹೇಳಿದ್ದಾನೆ.

  • ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆ

    ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆ

    ಬೆಂಗಳೂರು: ನಗರದ ಪೊಲೀಸ್ ಆಯುಕ್ತರಾಗಿ ನೇಮಕವಾದ ಕೆಲವೇ ದಿನಗಳಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ನೂತನ ಸರ್ಕಾರ ಆದೇಶ ನೀಡಿದ್ದು, ಈ ಸ್ಥಾನಕ್ಕೆ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಲಾಗಿದೆ.

    ಎಡಿಜಿಪಿ ಆಗಿದ್ದ ಅಲೋಕ್ ಕುಮಾರ್ ಅವರನ್ನು 45 ದಿನಗಳ ಹಿಂದೆಯಷ್ಟೇ ಮೈತ್ರಿ ಸರ್ಕಾರ ನಗರದ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಸದ್ಯ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‍ಆರ್ ಪಿ) ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಕೆಎಸ್‍ಆರ್ ಪಿ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ಅವರನ್ನು ಪೊಲೀಸ್ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.

    ಸಮ್ಮಿಶ್ರ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡುವ ವೇಳೆ ನಿಯಮಗಳನ್ನು ಮೀರಿ ಆದೇಶ ಮಾಡಿರುವುದೇ ಅವರ ವರ್ಗಾವಣೆ ಕಾರಣ ಎನ್ನಲಾಗಿದೆ. ಅಲೋಕ್ ಕುಮಾರ್ ಅವರನ್ನು ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿದ್ದ ಸಂದರ್ಭದಲ್ಲೂ ಕೆಲವರು ನೇಮಕ ಕುರಿತು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸದ್ಯ ನೂತನ ಸರ್ಕಾರ ವರ್ಗಾವಣೆ ಮಾಡಿ ಈ ವಿವಾದಕ್ಕೆ ತೆರೆ ಎಳೆದಿದೆ.

    ಸದ್ಯ ನೂತನವಾಗಿ ಆಯ್ಕೆ ಆಗಿರುವ ಭಾಸ್ಕರ್ ರಾವ್ ಅವರು ಬೆಂಗಳೂರಿನವರೇ ಆಗಿದ್ದು, ಆ ಮೂಲಕ ಬೆಂಗಳೂರು ನಗರದವರೆ ಕಮಿಷನರ್ ಆಗಿದ್ದಾರೆ. ಅಲೋಕ್ ಕುಮಾರ್ ಸೇರಿದಂತೆ 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

    ಯಾರು ಎಲ್ಲಿಗೆ ವರ್ಗಾವಣೆ?
    ಹೇಮಂತ್ ನಿಂಬಾಳ್ಕರ್- ಐಜಿಪಿ, ಆಡಳಿತ, ಬೆಂಗಳೂರು
    ರವಿಕಾಂತೇಗೌಡ – ಜಂಟಿ ಆಯುಕ್ತ, ಪಶ್ಚಿಮ, ಬೆಂಗಳೂರು ನಗರ
    ದೇವರಾಜ್ – ಎಸ್‍ಪಿ, ಸಿಐಡಿ
    ಆರ್ ಚೇತನ್ – ಎಸ್‍ಪಿ, ಕೋಸ್ಟಲ್ ಸೆಕ್ಯುರಿಟಿ
    ಎಂ ಅಶ್ವಿನಿ – ಡಿಸಿಪಿ, ಗುಪ್ತಚರ, ಬೆಂಗಳೂರು
    ಉಮೇಶ್ ಕುಮಾರ್ – ಡಿಸಿಪಿ, ಅಗ್ನಿಶಾಮಕದಳ