Tag: ಪೊಲೀಸ್ ಆಯುಕ್ತೆ

  • ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 17ರ ಹುಡುಗಿ ಆದ್ಳು ಪೊಲೀಸ್ ಕಮೀಷನರ್

    ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 17ರ ಹುಡುಗಿ ಆದ್ಳು ಪೊಲೀಸ್ ಕಮೀಷನರ್

    ಹೈದರಾಬಾದ್: ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 17 ವರ್ಷದ ಹುಡುಗಿಗೆ ಒಂದು ದಿನದ ಪೊಲೀಸ್ ಆಯುಕ್ತೆ ಆಗಲು ಅವಕಾಶ ಕೊಟ್ಟು ತೆಲಂಗಾಣ ಪೊಲೀಸ್ ಇಲಾಖೆ ಆಕೆಯ ಆಸೆಯನ್ನು ಈಡೇರಿಸಿದೆ.

    ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ರಮ್ಯಾ(17) ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದಾಳೆ. ಆಲ್ವಾಲ್ ನಿವಾಸಿ ಆಗಿರುವ ರಮ್ಯಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಆಕೆ ಪೊಲೀಸ್ ಅಧಿಕಾರಿಯಾಗಬೇಕು ಎಂದು ಆಸೆಯಿಟ್ಟುಕೊಂಡಿದ್ದಳು. ಹೀಗಾಗಿ ರಮ್ಯಾಳ ಕೊನೆಯ ಆಸೆ ಈಡೇರಿಸಲು ಮುಂದಾದ ತೆಲಂಗಾಣ ಪೊಲೀಸ್ ಇಲಾಖೆ ಆಕೆಗೆ ಒಂದು ದಿನ ಪೊಲೀಸ್ ಆಯುಕ್ತೆ ಆಗಲು ಅವಕಾಶ ಕೊಟ್ಟಿದೆ. ಈ ಹಿನ್ನೆಲೆ ಅಕ್ಟೋಬರ್ 29ರಂದು ರಮ್ಯಾ ಖಾಕಿ ತೊಟ್ಟು ತೆಲಂಗಾಣದ ರಚ್ಚಕೊಂಡ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಂದು ದಿನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ತನ್ನ ಬಯಕೆ ತೀರಿಸಿಕೊಂಡಿದ್ದಾಳೆ.

    ‘ಮೇಕ್ ಎ ವಿಷ್’ ಫೌಂಡೇಷನ್ ರಮ್ಯಾಳ ಆಸೆ ಬಗ್ಗೆ ರಚ್ಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಗ್ವತ್ ಐಪಿಎಸ್ ಅವರಿಗೆ ತಿಳಿಸಿತ್ತು. ಹಾಗೆಯೇ ರಮ್ಯಾಳಿಗೆ ಒಂದು ದಿನದ ಪೊಲೀಸ್ ಆಯುಕ್ತೆ ಆಗಲು ಅವಕಾಶ ಕಲ್ಪಿಸಿಕೊಟ್ಟು, ಕೊನೆ ದಿನಗಳನ್ನು ಎಣಿಸುತ್ತಿರುವ ಜೀವಕ್ಕೆ ಖುಷಿ ಕೊಡಲು ಸಹಾಯ ಮಾಡಿ ಎಂದು ಮನವಿ ಮಾಡಿತ್ತು.

    ಈ ಮನವಿಯನ್ನು ಒಪ್ಪಿದ ಪೊಲೀಸ್ ಇಲಾಖೆ ರಮ್ಯಾಗೆ ಪೊಲೀಸ್ ಆಯುಕ್ತೆ ಆಗಲು ಅವಕಾಶ ಕೊಟ್ಟಿದೆ. ಈ ಬಗ್ಗೆ ರಮ್ಯಾ ಮಾತನಾಡಿ, ನನಗೆ ತುಂಬಾ ಖುಷಿಯಾಗುತ್ತಿದೆ. ಪೊಲೀಸ್ ಅಧಿಕಾರಿಯಾಗಬೇಕು ಎಂದು ನನಗೆ ಆಸೆ ಇತ್ತು. ಮಹಿಳೆಯರಿಗೆ ಸುರಕ್ಷತೆ ಹಾಗೂ ರಚ್ಚಕೊಂಡ ಪ್ರದೇಶದಲ್ಲಿ ಕ್ರೈಂ ನಿಯಂತ್ರಣ ಮಾಡಿ, ಕಾನೂನು ಕಾಪಾಡಬೇಕು ಎಂದು ಬಯಕೆ ಇತ್ತು. ಈ ಆಸೆಯನ್ನು ಮೇಕ್ ಎ ವಿಷ್ ಫೌಂಡೇಷನ್ ಹಾಗೂ ಪೊಲೀಸ್ ಇಲಾಖೆ ಪೂರೈಸಿದೆ. ಎಲ್ಲರಿಗೂ ಅಭಿನಂದನೆಗಳು ಎಂದು ಸಂತೋಷವನ್ನು ಹಂಚಿಕೊಂಡಳು.

    ಕೇವಲ ರಮ್ಯಾಳ ಆಸೆಯನ್ನು ಪೂರೈಸುವುದು ಮಾತ್ರವಲ್ಲದೆ, ಪೊಲೀಸ್ ಆಯುಕ್ತ ಮಹೇಶ್ ಭಗ್ವತ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಸುದೀರ್ ಬಾಬು ಅವರು ಆಕೆಯ ಚಿಕಿತ್ಸೆಗೆ ಹಣ ಸಹಾಯ ಕೂಡ ಮಾಡಿದ್ದಾರೆ. ಹಾಗೆಯೇ ಕ್ಯಾನ್ಸರ್‌ನಿಂದ ಬಳಲುತ್ತಿರುವ ರಮ್ಯಾ ಆದಷ್ಟು ಬೇಗ ಗುಣಮುಖಳಾಗಲಿ ಎಂದು ಹಾರೈಸಿದ್ದಾರೆ.