Tag: ಪೊಲೀಸ್ ಆಯುಕ್ತರು

  • ಸೋಮಶೇಖರ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಿ: ಕಾಂಗ್ರೆಸ್‍ನಿಂದ ಆಯುಕ್ತರಿಗೆ ಮನವಿ

    ಸೋಮಶೇಖರ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಿ: ಕಾಂಗ್ರೆಸ್‍ನಿಂದ ಆಯುಕ್ತರಿಗೆ ಮನವಿ

    ಬೆಳಗಾವಿ: ನಿರ್ದಿಷ್ಟ ಪಕ್ಷ ಹಾಗೂ ಸಮುದಾಯವನ್ನು ಗುರುತಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‍ನ ಕಾರ್ಯಕರ್ತರು ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮನಬಂದಂತೆ ಮಾತನಾಡಿದ್ದಾರೆ. ಇತ್ತೀಚಿಗೆ ಸಿಎಎ ಬೆಂಬಲಿಸಿ ನಡೆಸಿದ ಜಾಗೃತಿ ಸಭೆಯಲ್ಲಿ ನಿರ್ದಿಷ್ಟ ಸಮುದಾಯನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ. ದೇಶ ಒಂದೇ ಜಾತಿ, ಭಾಷೆಗೆ ಸಿಮಿತವಾಗಿಲ್ಲ. ಸಾರ್ವಜನಿಕ ಸಭೆಯಲ್ಲಿ ಈ ರೀತಿ ಹೇಳಿರುವುದು ಸರಿಯಲ್ಲ. ಇದು ಸಮಾಜದ ಶಾಂತಿ ಹಾಳು ಮಾಡುವಂತೆ ಹೇಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೇಶದಲ್ಲಿ ಎಲ್ಲ ಧರ್ಮದವರು ಸಹೋದರರಂತೆ ಬಾಳುತ್ತಿದ್ದಾರೆ. ಆದರೆ ಶಾಸಕ ಸೋಮಶೇಖರ್ ರೆಡ್ಡಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿ ಕದಡಲು ಯತ್ನಿಸಿದ್ದಾರೆ. ಅವರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಸಲೀಂ ಖತಿಬ್, ರಸುಲ್ ಮುಲ್ಲಾ, ಎಂ.ಎಂ.ಅತ್ತಾರ, ಎಂ.ಬಿ.ಜಮಾದಾರ, ಪರಶುರಾಮ ವಗ್ಗಣ್ಣನವರ, ಗಜಾನನ ಧರನಾಯಕ ಹಾಗೂ ಇತರರು ಇದ್ದರು.

  • ‘ಪೈಲ್ವಾನ್’ ಸುದೀಪ್ ನಿವಾಸಕ್ಕೆ ಕಮಿಷನರ್ ಭಾಸ್ಕರ್ ರಾವ್ ಭೇಟಿ!

    ‘ಪೈಲ್ವಾನ್’ ಸುದೀಪ್ ನಿವಾಸಕ್ಕೆ ಕಮಿಷನರ್ ಭಾಸ್ಕರ್ ರಾವ್ ಭೇಟಿ!

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಪೈರಸಿಯ ಸುತ್ತಾ ಹಲವಾರು ದಿಕ್ಕಿನ ಚರ್ಚೆ, ಅಭಿಮಾನಿಗಳ ನಡುವಿನ ತಿಕ್ಕಾಟದ ವಿದ್ಯಮಾನಗಳು ಕೆಲ ದಿನಗಳಿಂದ ಜೋರಾಗಿವೆ. ಇದೆಲ್ಲದರ ನಡುವೆಯೇ ಪೈಲ್ವಾನ್ ಯಶಸ್ವಿ ಪ್ರದರ್ಶನ ಕಾಣುತ್ತಾ, ಅದಕ್ಕೆ ತಕ್ಕುದಾದ ಕಲೆಕ್ಷನ್ನಿನೊಂದಿಗೆ ಮುಂದುವರಿಯುತ್ತಿದೆ. ಪೈರಸಿ ಬಗೆಗಿನ ವಾದ ವಿವಾದಗಳು ಚಾಲ್ತಿಯಲ್ಲಿರುವಾಗಲೇ ಇಂದು ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಸುದೀಪ್ ಮನೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿದ್ದಾರೆ.

    ಸುದೀಪ್ ಇಂದು ಭಾಸ್ಕರ್ ರಾವ್ ಅವರೊಂದಿಗಿರೋ ಫೋಟೋವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಅತ್ತ ಅಭಿಮಾನಿಗಳ ನಡುವಿನ ಕಲಹ ತಾರಕಕ್ಕೇರಿರೋ ಘಳಿಗೆಯಲ್ಲಿಯೇ ಈ ದಿನ ಬೆಳ್ಳಂಬೆಳಗ್ಗೆ ಸುದೀಪ್ ಮನೆ ಮುಂದೆ ಪೊಲೀಸರು ಬೀಡು ಬಿಟ್ಟಿದ್ದರಿಂದ ಜನ ಈ ಬಗ್ಗೆ ಕುತೂಹಲಗೊಂಡಿದ್ದರು. ಬಳಿಕ ಭಾಸ್ಕರ್ ರಾವ್, ಸುದೀಪ್ ಮನೆಗೆ ಭೇಟಿ ನೀಡಿದ್ದಾರೆನ್ನಲಾಗಿದೆ. ಆದರೆ ಈ ಭೇಟಿಯ ಹಿಂದಿನ ಉದ್ದೇಶವೇನೆಂಬುದು ಮಾತ್ರ ಜಾಹೀರಾಗಿಲ್ಲ.

    ಭಾಸ್ಕರ್ ರಾವ್ ಅವರು ಸುದೀಪ್ ಮತ್ತು ಅವರ ಕುಟುಂಬದೊಂದಿಗೆ ಒಂದಷ್ಟು ಕಾಲ ಕಳೆದಿದ್ದಾರೆ. ಕಿಚ್ಚ ಹಾಗೂ ಅವರ ತಂದೆಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಕಮಿಷನರ್ ಭೇಟಿಯ ಸುತ್ತಲೂ ಈಗ ಕ್ಯೂರಿಯಾಸಿಟಿ ಮಡುಗಟ್ಟಿಕೊಂಡಿದೆ. ಬೇರೆ ಸಮಯದಲ್ಲಾಗಿದ್ದರೆ ಇದು ಇಷ್ಟೊಂದು ಮಹತ್ವದ ಸಂಗತಿಯಾಗುತ್ತಿರಲಿಲ್ಲವೇನೋ. ಆದರೆ ಇತ್ತೀಚೆಗಷ್ಟೇ ಪೈಲ್ವಾನ್ ಪೈರಸಿ ವಿರುದ್ಧ ಪೈಲ್ವಾನ್ ಚಿತ್ರತಂಡ ಸೈಬರ್ ಕ್ರೈಂಗೆ ದೂರು ಸಲ್ಲಿಸಿದೆ. ಈ ಹೊತ್ತಿನಲ್ಲಿಯೇ ಪೊಲೀಸ್ ಆಯುಕ್ತರ ಭೇಟಿ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.