Tag: ಪೊಲಿಸ್

  • ಜಿರಳೆ ಔಷಧಿ ಸಿಂಪಡಿಸಿದ್ದರಿಂದ ಉಸಿರುಗಟ್ಟಿ ಬಾಲಕಿ ದುರ್ಮರಣ

    ಜಿರಳೆ ಔಷಧಿ ಸಿಂಪಡಿಸಿದ್ದರಿಂದ ಉಸಿರುಗಟ್ಟಿ ಬಾಲಕಿ ದುರ್ಮರಣ

    ಬೆಂಗಳೂರು: ಮನೆ ಮಾಲೀಕನ ಎಡವಟ್ಟಿಗೆ 6 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ವಸಂತನಗರದ 5ನೇ ಕ್ರಾಸ್ ಬಳಿ ನಡೆದಿದೆ.

    ಶಿವಶಂಕರ್ ಮನೆಯಲ್ಲಿ ವಿನೋದ್ ಕುಟುಂಬಸ್ಥರು ಬಾಡಿಗೆಗೆ ಇದ್ರು. ಆದರೆ ವಾರದ ಹಿಂದೆ ವಿನೋದ್ ಫ್ಯಾಮಿಲಿ ಊರಿಗೆ ಹೋಗಿದ್ದ ವೇಳೆ ಶಿವಶಂಕರ್ ಜಿರಳೆ ಔಷಧಿ ಸಿಂಪಡಿಸಿದ್ರು. ಇದರ ಅರಿವಿಲ್ಲದೆ ಮನೆಗೆ ಬಂದು ವಿನೋದ್ ಕುಟುಂಬಸ್ಥರು ಮಲಗಿದ್ರು. ಈ ವೇಳೆ ಉಸಿರಾಟದ ಸಮಸ್ಯೆಯಾಗಿ ಆರು ವರ್ಷದ ಬಾಲಕಿ ಅಹನಾ ಸಾನ್ನಪ್ಪಿದ್ರೆ, ಅಸ್ವಸ್ಥಗೊಂಡಿರೋ ಮನೆ ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

    ಈ ಸಂಬಂಧ ಮನೆ ಮಾಲೀಕ ಪ್ರಸಾದ್ ಪ್ರತಿಕ್ರಿಯಿಸಿ, ಮೂರು ದಿನ ಮುಂಚಿತವಾಗಿ ಅವರಿಗೆ ತಿಗಣೆ ಮದ್ದು ಹೊಡೆಯೋದಾಗಿ ಮಾಹಿತಿ ನೀಡಿದ್ದೆವು. ಅದೇ ಕಾರಣಕ್ಕಾಗಿಯೇ ಅವರು ಕೇರಳ ಹೋಗಿದ್ದರು. ನಿನ್ನೆ ನಮಗೆ ಹೇಳದೆ ಮನೆಗೆ ಬಂದುಬಿಟ್ಟಿದ್ದಾರೆ. ಮಗುವಿನ ಸಾವಿಗೆ ಪೋಷಕರ ನಿರ್ಲಕ್ಷವೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.

    ಮನೆಯಲ್ಲಿ ತಿಗಣೆ ಜಾಸ್ತಿ ಆಗಿದೆ ಅಂತ ಅವರೇ ಹೇಳಿದ್ದರು. ಹೀಗಾಗಿ ನಾಲ್ಕು ದಿನ ಬೇಕು ಸಮಯ ಬೇಕು ಅಂತ ಹೇಳಿದ್ದೆವು. ಅದರಂತೆ ಮನೆಗೆ ಪೆಸ್ಟ್ ಕಂಟ್ರೋಲ್ ಅವರನ್ನ ಕರೆಸಿ ಔಷಧಿ ಸಿಂಪಂಡಣೆ ಮಾಡಿದ್ವಿ. ನಂತರ ಮನೆ ಲಾಕ್ ಸಹ ಮಾಡಿದ್ವಿ. ಮನೆಯ ಕೀ ಸಹ ನಮ್ಮ ಬಳಿ ಇತ್ತು. ಡೂಪ್ಲಿಕೇಟ್ ಕೀ ಬಳಸಿ ಮನೆಗೆ ಬಂದಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿರಲ್ಲಿಲ್ಲ. ಇದರಿಂದಾಗಿಯೇ ಮಗು ಸಾವನ್ನಪ್ಪಿದೆ. ಇದು ಪೋಷಕರ ನಿರ್ಲಕ್ಷ ಎಂದು ಆರೋಪಿಸಿದರು.

    ಮಗು ಸೋಫಾ ಮೇಲೆ ಮಲಗಿತ್ತು. ಈ ವೇಳೆ ವಾಂತಿ ಮಾಡತ್ತಂತೆ. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ತಂದೆ-ತಾಯಿ ಇಬ್ಬರು ಇನ್ನೂ ಅನ್ ಕಾನ್ಸಿಯಸ್ ಸ್ಥಿತಿಯಲ್ಲಿದ್ದಾರೆ ಎಂದು ಪ್ರಸಾದ್ ತಿಳಿಸಿದ್ದಾರೆ. ಇದನ್ನೂ ಓದಿ: ಜಮೀನು ವಿವಾದ – ಬೆಳ್ಳಂಬೆಳಗ್ಗೆ ಟವರ್ ಏರಿ ವೃದ್ಧನ ಹೈಡ್ರಾಮಾ

    ಮೂಲತಃ ಕೇರಳದವರಾಗಿರುವ ವಿನೋದ್ ನಾಯರ್ ಕುಟುಂಬ ಸುಮಾರು 8 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿತ್ತು. ಬೆಂಗಳೂರಿನ ವಸಂತನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ವಿನೋದ್ ನಾಯರ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗಳು ಅಹನಾ ವಸಂತನಗರದ ಶಾಲೆಯಲ್ಲಿ ಓದುತ್ತಿದ್ದಳು. ಸದ್ಯ ಘಟನೆ ಸಂಬಂಧ ಮನೆ ಮಾಲೀಕ ಶಿವಶಂಕರ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮದ್ವೆ ಶಾಪಿಂಗ್‍ನಿಂದ ಬರ್ತಿದ್ದ ಕಾರಿಗೆ ಪೊಲೀಸ್ ವ್ಯಾನ್ ಡಿಕ್ಕಿ

    ಮದ್ವೆ ಶಾಪಿಂಗ್‍ನಿಂದ ಬರ್ತಿದ್ದ ಕಾರಿಗೆ ಪೊಲೀಸ್ ವ್ಯಾನ್ ಡಿಕ್ಕಿ

    – ಮೂವರು ಸಾವು, ಇಬ್ಬರಿಗೆ ಗಾಯ

    ಚಂಡೀಗಢ: ಮದುವೆ ಶಾಪಿಂಗ್ ಮುಗಿಸಿ ಮನೆಗೆ ಬರುತ್ತಿದ್ದ ಮೂವರು ಸ್ನೇಹಿತರಿದ್ದ ಕಾರಿಗೆ ಪೊಲೀಸ್ ವಾಹನ ಬಂದು ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹರಿಯಾಣದ ಕರ್ನಲ್ ಜಿಲ್ಲೆಯ ಮರ್ದನ್ಹೇರಿ ಗ್ರಾಮದ ಅಸ್ಸಾಂಧ್-ಕೈಥಲ್ ರಸ್ತೆಯಲ್ಲಿ ನಡೆದಿದೆ.

    ಪೊಲೀಸ್ ವಾಹನ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ನೇಹಿತರು ಸಾವಿಗೀಡಾಗಿದ್ದಾರೆ. ಪೊಲೀಸ್ ವಾಹನದಲ್ಲಿದ್ದ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮೃತ ಸ್ನೇಹಿತರನ್ನು ಪ್ರಯಾಗ್(20), ಕಾರ್ತಿಕ್(26) ಮತ್ತು ಸವಿಂದರ್ ಸಿಂಗ್(32) ಎಂದು ಗುರುತಿಸಲಾಗಿದೆ. ಪೊಲೀಸ್ ವಾಹನದಲ್ಲಿದ್ದ ಗಾಯಾಳುಗಳು ಪ್ರಕಾಶ್ ಮತ್ತು ಸುಮಿತ್ ಕುಮಾರ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ನೇಹಿತ ಸವಿಂದರ್ ಸಿಂಗ್ ಮದುವೆ ಶಾಪಿಂಗ್ ಮುಗಿಸಿ ಮನೆಗೆ ಕಾರಿನಲ್ಲಿ ಬರುತ್ತಿದ್ದರು. ಎದುರಿಗೆ ಬರುತ್ತಿದ್ದ ಪೊಲೀಸ್ ವಾಹನ ಟ್ರ್ಯಾಕ್ಟರ್ ಟ್ರೈಲರ್ ಇದ್ದಕ್ಕಿದ್ದಂತೆ ಎದುರಾಗಿದ್ದರಿಂದ ಅದನ್ನು ತಪ್ಪಿಸಲು ಪೊಲೀಸ್ ವಾಹನ ಚಾಲಕ ಬ್ರೇಕ್ ಹಾಕಿದ್ದಾನೆ. ನಂತರ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮವಾಗಿ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮೊಟ್ಟೆಯಿಂದ ಒಬ್ಬರಿಗೊಬ್ಬರು ಎಸೆದುಕೊಂಡ 6 ಮಂದಿ ಯುವಕರ ಬಂಧನ

    ಮೊಟ್ಟೆಯಿಂದ ಒಬ್ಬರಿಗೊಬ್ಬರು ಎಸೆದುಕೊಂಡ 6 ಮಂದಿ ಯುವಕರ ಬಂಧನ

    – ವೀಡಿಯೋ ವೈರಲ್ ಬಳಿಕ ಎಚ್ಚೆತ್ತ ಪೊಲೀಸರು
    – ಶಾಂತಿ ಉಲ್ಲಂಘನೆಯಡಿ ಪ್ರಕರಣ

    ಮುಂಬೈ: ಗೆಳೆಯನ ಹುಟ್ಟುಹಬ್ಬದಲ್ಲಿ ಯುವಕರು ಸೇರಿ ಮೊಟ್ಟೆ ಎಸೆಯುವ ಪಾರ್ಟಿ ಮಾಡಲಾಗಿತ್ತು. ಇದರ ವೀಡಿಯೋ ವೈರಲ್ ಆದ ನಂತರ ಆರು ಜನ ಸ್ನೇಹಿತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಈ ಘಟನೆ ಜುನ್ನಾರ್ ತಹಸಿಲ್‍ನ ನಾರಾಯಣ್ ಗ್ರಾಮದಲ್ಲಿ ನಡೆದಿದೆ. ಬಂಧಿತರನ್ನು ಸಕ್ಲೀನ್ ನಾಸಿರ್ ಅತಾರ್, ಶಕೀರ್ ಆಮೆನ್ ಜಮದಾರ್, ಅರ್ಮಾನ್ ಖಾಲಿದ್ ಶೇಖ್, ಮೊಯಿನ್ ಎಕ್ಲಾಕ್ ಅಟಾರ್, ಮೊಹ್ಸೆನ್ ಫಿರೋಜ್ ಇನಾಮ್ದಾರ್ ಮತ್ತು ಜಾಹಿದ್ ಪಿರ್ ಮೊಹಮ್ಮದ್ ಪಟೇಲ್ ಎಂದು ಗುರುತಿಸಲಾಗಿದೆ. ಈ ಯುವಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಗೆಳೆಯನ ಹುಟ್ಟುಹಬ್ಬದ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸಲು ಯುವಕರು ಪ್ಲ್ಯಾನ್ ಮಾಡಿಕೊಂಡರು. ಅಂತೆಯೇ ಒಬ್ಬರಿಗೊಬ್ಬರು ಮೊಟ್ಟೆ ಎಸೆದುಕೊಂಡು ಸಂಭ್ರಮಿಸಿದ್ದಾರೆ. ಈ ಸೆಲೆಬ್ರೆಷನ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಣೆಯ ಜುನ್ನಾರ್ ಪೊಲೀಸರ ಗಮನಕ್ಕೆ ಈ ವೀಡಿಯೋ ಬಂದಿದೆ. ನಂತರ ಪೊಲೀಸರು ಈ 6 ಜನ ಯುವಕರ ಮೇಲೆ ಶಾಂತಿ ಉಲ್ಲಂಘನೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ ಸಕ್ಲೀನ್ ನಾಸಿರ್ ಅತಾರ್ ಎಂಬ ಯುವಕನ ಹುಟ್ಟುಹಬ್ಬದ ಸಂಭ್ರಮವನ್ನು ಸ್ನೇಹಿತರೆಲ್ಲ ಸೇರಿ ಈ ರೀತಿಯಾಗಿ ಆಚರಿಸಿದ್ದಾರೆ. ಇದು ಮೊದಲ ಪ್ರಕರಣವಲ್ಲದಿದ್ದರು, ಇಂಹತ ಅನೇಕ ಪ್ರಕರಣಗಳು ನಡೆದಿವೆ ಎಂದು ಹೇಳಿದ್ದಾರೆ.

  • ಕೊರೊನಾ ತೊಲಗುತ್ತೆಂದು ‘ನರ’ ಬಲಿ ನೀಡಿದ ಅರ್ಚಕ

    ಕೊರೊನಾ ತೊಲಗುತ್ತೆಂದು ‘ನರ’ ಬಲಿ ನೀಡಿದ ಅರ್ಚಕ

    – ಕನಸಲ್ಲಿ ದೇವರು ಹೇಳಿದನೆಂದ ಭೂಪ
    – ರುಂಡ ಕತ್ತರಿಸಿ ಪೂಜೆ ಸಲ್ಲಿಕೆ

    ಭುವನೇಶ್ವರ: ಕೊರೊನಾ ತೊಲಗಿಸಲು ಅರ್ಚಕನೋರ್ವ ನರ ಬಲಿ ನೀಡಿರುವ ಆಘಾತಕಾರಿ ಘಟನೆ ನಡೆದಿದೆ.

    ಒಡಿಶಾದ ಕಟಕ್ ಜಿಲ್ಲೆಯ ನರಸಿಂಗ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಧಾಹೂಡಾದ ಬಳಿಯ ಬಂಧಾ ಮಾ ಬುಧ ಬ್ರಾಹ್ಮಿಣಿ ದಿ ದೇವಸ್ಥಾನದ ಹಿರಿಯ ಅರ್ಚಕ ಸನ್ಸಾರಿ ಓಝಾ(72) ಈ ಕೃತ್ಯ ಎಸಗಿದ್ದಾನೆ. ಬುಧವಾರ ರಾತ್ರಿ ಘಟನೆ ನಡೆದಿದ್ದು, ಕೊರೊನಾ ವೈರಸ್ ತೊಲಗಿಸುವಂತೆ ಮನುಷ್ಯನನ್ನು ಬಲಿ ಕೊಟ್ಟಿದ್ದಾನೆ. ಸ್ಥಳೀಯ ವ್ಯಕ್ತಿಯ ರುಂಡವನ್ನೇ ಕತ್ತರಸಿ, ಪೂಜೆ ಸಲ್ಲಿಸಿದ್ದಾನೆ. ಕೃತ್ಯ ಎಸಗುತ್ತಿದ್ದಂತೆ ಬುಧವಾರ ರಾತ್ರಿಯೇ ಅರ್ಚಕ ಪೊಲೀಸರಿಗೆ ಶರಣಾಗಿದ್ದಾನೆ.

    ಮೃತ ವ್ಯಕ್ತಿಯನ್ನು ಸರೋಜ್ ಕುಮಾರ್ ಪ್ರಧಾನ್(52) ಎಂದು ಗುರುತಿಸಲಾಗಿದ್ದು, ಬಲಿ ನೀಡುವ ಕುರಿತು ದೇವಸ್ಥಾನದಲ್ಲಿ ಅರ್ಚಕ ಹಾಗೂ ಸಂತ್ರಸ್ತನ ಮಧ್ಯೆ ವಾಗ್ವಾದ ನಡೆದಿದೆ. ಇದು ಜಗಳಕ್ಕೆ ತಿರುಗಿದ್ದು, ಓಝಾ ಸಂತ್ರಸ್ತನನ್ನು ತೀಕ್ಷ್ಣವಾದ ಆಯುಧದಿಂದ ಹೊಡೆದಿದ್ದಾನೆ. ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ವಿಚಾರಣೆ ವೇಳೆ ಆರೋಪಿ ಪ್ರಕರಣದ ಕುರಿತು ಬಾಯ್ಬಿಟ್ಟಿದ್ದು, ಕನಸಿನಲ್ಲಿ ದೇವರು ಆದೇಶ ನೀಡಿದ ಹಿನ್ನೆಲೆ ಹತ್ಯೆ ಮಾಡಿದೆನೆಂದು ಒಪ್ಪಿಕೊಂಡೆ. ಅಲ್ಲದೆ ಮನುಷ್ಯರನ್ನು ಬಲಿ ನೀಡಿದರೆ ಕೊರೊನಾ ತೊಲಗುತ್ತದೆ ಎಂದು ದೇವರು ಹೇಳಿರುವ ಕುರಿತು ಹೇಳಿಕೆ ನೀಡಿದ್ದಾನೆ.

    ಕೊಲೆಗೆ ಬಳಸಿದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

    ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು, ಅರ್ಚಕ ಮಾವಿನ ತೋಟಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯೊಂದಿಗೆ ಹಿಂದಿನಿಂದಲೂ ವೈಮನಸ್ಸು ಹೊಂದಿದ್ದ ಎಂದು ತಿಳಿಸಿದ್ದಾರೆ.

    ಸೆಂಟ್ರಲ್ ರೇಂಜ್ ಡಿಐಜಿ ಆಶಿಶ್ ಕುಮಾರ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ವಿಪರೀತವಾಗಿ ಕುಡಿದಿದ್ದ. ಮರುದಿನ ಬೆಳಗ್ಗೆ ತನ್ನ ತಪ್ಪಿನ ಅರಿವಾಗಿ ಶರಣಾಗತನಾಗಿದ್ದಾನೆ. ಕೊಲೆಯನ್ನು ತಾನೇ ಮಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದೇವರು ಕನಸಿನಲ್ಲಿ ಬಂದು ಮನುಷ್ಯರನ್ನು ಬಲಿ ನೀಡಿದರೆ ಕೊರೊನಾ ತೊಲಗುತ್ತದೆ ಎಂದಿತು. ಹೀಗಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಅರ್ಚಕ ಮಾನಸಿಕ ಅಸ್ವಸ್ಥ ಎಂದು ತಿಳಿಸಿದ್ದಾರೆ.

  • ರಾಜಿಯಾಗಲು ಬಂದವ ಸ್ನೇಹಿತರಿಂದಲೇ ಕೊಲೆಯಾದ!

    ರಾಜಿಯಾಗಲು ಬಂದವ ಸ್ನೇಹಿತರಿಂದಲೇ ಕೊಲೆಯಾದ!

    ಬೆಂಗಳೂರು: ಮಚ್ಚಿನಿಂದ ಕೊಚ್ಚಿ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರದ ಜೆಸಿ ಲೇಔಟ್ ಬಳಿಯ ಈದ್ಗಾ ಮೈದಾನದಲ್ಲಿ ನಡೆದಿದೆ.

    ಸೋನು ಅಲಿಯಾಸ್ ಅಪ್ರೋಜ್ ಪಾಷ (24) ಹತ್ಯೆಯಾದ ದುರ್ದೈವಿ. ಅಪ್ರೋಜ್ ಪಾಷ ಹಾಗೂ ಆರೋಪಿ ಇಮ್ರಾನ್ ಕೆಲ ದಿನಗಳ ಹಿಂದೆ ಸಣ್ಣ ವಿಚಾರವೊಂದಕ್ಕೆ ಜಗಳ ಮಾಡಿಕೊಂಡಿದ್ದರು. ನಂತರ ರಾಜಿಯಾಗಲು ಸೋನು ಸ್ನೇಹಿತ ಇಮ್ರಾನ್ ಮನೆಗೆ ತೆರಳಿದ್ದರು.

    ರಾಜಿ ವೇಳೆ ಇಬ್ಬರ ಜಗಳ ವಿಕೋಪಕ್ಕೆ ತಿರುಗಿದ್ದು, ಅಪ್ರೋಜ್ ಪಾಷ ಆರೋಪಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಸ್ನೇಹಿತರು ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ.

    ಎರಡು ತಿಂಗಳ ಹಿಂದೆ ಕುಡಿದು ಇಬ್ಬರು ಗಲಾಟೆ ಮಾಡಿಕೊಂಡಿದ್ದರು. ರಾಜಿಯಾಗಲು ಮನೆಗೆ ಕರೆಸಿಕೊಂಡು ಇಮ್ರಾನ್ ಮಚ್ಚು ಮತ್ತು ಲಾಂಗ್‍ಗಳಿಂದ ಹತ್ಯೆ ಮಾಡಿದ್ದಾನೆ. ಈ ವಿಚಾರ ನಮಗೆ ಹತ್ತು ನಿಮಿಷ ತಡವಾಗಿ ತಿಳಿಯಿತು ಎಂದು ಅಪ್ರೋಜ್ ಸಂಬಂಧಿ ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಕೆ.ಆರ್.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮಹಿಳೆ ಮುಂದೆ ಬಂದ ರೈಲ್ವೇ ಚಕ್ಕಿಂಗ್ ಅಧಿಕಾರಿ – ಪ್ಯಾಂಟ್ ಜಿಪ್, ಶರ್ಟ್ ಬಟನ್ ಬಿಚ್ಚಿದ

    ಮಹಿಳೆ ಮುಂದೆ ಬಂದ ರೈಲ್ವೇ ಚಕ್ಕಿಂಗ್ ಅಧಿಕಾರಿ – ಪ್ಯಾಂಟ್ ಜಿಪ್, ಶರ್ಟ್ ಬಟನ್ ಬಿಚ್ಚಿದ

    ಮುಂಬೈ: 40 ವರ್ಷದ ವಯಸ್ಸಿನ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ರೈಲು ಟಿಕೆಟ್ ಪರೀಕ್ಷಕ (ಟಿಟಿಇ)ನ ವಿರುದ್ಧ ಕೇಸ್ ದಾಖಲಾಗಿದೆ.

    ಟಿಕೆಟ್ ಪರೀಕ್ಷಕನನ್ನು ಹರೀಸಿಂಗ್ ಮೀನಾ ಎಂದು ಗುರುತಿಸಲಾಗಿದೆ. ಈತ ಮಹಿಳೆಯ ಮುಂದೆ ಹೋಗಿ ಕುಳಿತುಕೊಂಡು ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಸಂತ್ರಸ್ತೆಯ ತಂದೆ ಸಿಯಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೀಗಾಗಿ ಅವರನ್ನು ನೋಡಲು ಚೆನ್ನೈ ಎಕ್ಸ್ ಪ್ರೆಸ್ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿದ್ದರು ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.

    ರೈಲು ಪುಣೆ ಮತ್ತು ಲೋನಾವಾಲಾ ಮಧ್ಯೆ ಬಂದಾಗ ಆರೋಪಿ ಹರೀಸಿಂಗ್ ಮೀನಾ ಮಹಿಳೆಯ ಬಳಿ ಟಿಕೆಟ್ ಕೇಳಿದ್ದಾನೆ. ಮಹಿಳೆ ಟಿಕೆಟ್ ತೋರಿಸಿದ್ದಾರೆ. ಆದರೆ ಆತ ಟಿಕೆಟ್ ಪರಿಶೀಲನೆ ಮಾಡುವಾಗ ಮಹಿಳೆಯನ್ನು ಅಸಭ್ಯವಾಗಿ ನೋಡಿದ್ದಾನೆ. ಇದನ್ನು ಗಮನಿಸಿದ ಆಕೆ ಆತನನ್ನ ನಿರ್ಲಕ್ಷ್ಯ ಮಾಡಿದ್ದಾರೆ. ನಂತರ ಆತ ಅಲ್ಲಿಂದ ಹೋಗಿದ್ದಾನೆ.

    ಸ್ವಲ್ಪ ಸಮಯದ ನಂತರ ಅವನು ಹರೀಸಿಂಗ್ ಮೀನಾ ಹಿಂದಿರುಗಿ ಬಂದು ನನ್ನ ಮುಂದಿನ ಬರ್ತ್ ನಲ್ಲಿ ಕುಳಿತುಕೊಂಡನು. ನಾನು ತಕ್ಷಣ ಗಾಬರಿಯಾದೆ. ಬಳಿಕ ಆತ ನನ್ನನ್ನೇ ನೋಡುತ್ತಾ ತನ್ನ ಪ್ಯಾಂಟ್ ಜಿಪ್ ತೆಗೆದುಮ ಶರ್ಟಿನ ಎರಡು ಬಟನ್ ತೆಗೆದಿದ್ದಾನೆ. ಆ ಬರ್ತ್ ನಲ್ಲಿ ನಾನೊಬ್ಬಳೆ ಕುಳಿತಿದ್ದೆ. ನಂತರ ನಾನು ತುಂಬಾ ಹೆದರಿಕೊಂಡಿದ್ದೆ. ಆದರೆ ಆತ ಅಲ್ಲಿಂದ ಎದ್ದು ಹೋಗಿರಲಿಲ್ಲ. ಸ್ವಲ್ಪ ಸಮಯದ ನಂತರ ಎದ್ದು ಹೋದನು ಎಂದು ಸಂತ್ರಸ್ತೆ ಹೇಳಿದ್ದಾರೆ.

    ಸಂತ್ರಸ್ತೆಯ ಸಂಬಂಧಿ ಅಲ್ಲಿಗೆ ಬಂದಿದ್ದಾರೆ. ಆಗ ಮಹಿಳೆ ಅಳುತ್ತಿದ್ದರು. ಇದರಿಂದ ಭಯಗೊಂಡು ಸಂಬಂಧಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ರೈಲಿನಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್ಸ್ಟೇಬಲ್ ಧನಂಜಯ್ ಯಾದವ್ ಅವರು ಮಹಿಳೆ ಅಳುವುದನ್ನು ಗಮನಿಸಿದ್ದು, ತಕ್ಷಣ ಹೆಡ್ ಕಾನ್ಸ್ಟೇಬಲ್ ಎಸ್.ಕೆ.ಯಾದವ್ ಅವರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ನಾನು ಮಹಿಳಾ ನೆರವಿಗೆ ಬಂದೆ. ಆಗ ಮುಹಿಳೆ ನಡೆದ ವಿಚಾರವನ್ನು ವಿವರಿಸಿದರು. ಟಿಕೆಟ್ ಪರೀಕ್ಷಕನನ್ನು ಹರೀಸಿಂಗ್ ಮೀನಾ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆತನ ವಿರುದ್ಧ ಐಪಿಸಿ ಸೆಕ್ಸನ್ 509 (ಮಹಿಳೆಯೊಬ್ಬರಿಗೆ ಅವಮಾನ ಮಾಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಎಸ್.ಕೆ.ಯಾದವ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆ ಮೆರವಣಿಗೆಯಲ್ಲಿ ಹೋಗ್ತಿದ್ದವರ ಮೇಲೆ ಹರಿದ ಟ್ರಕ್ – 13 ಮಂದಿ ದುರ್ಮರಣ, 18 ಜನ ಗಂಭೀರ

    ಮದ್ವೆ ಮೆರವಣಿಗೆಯಲ್ಲಿ ಹೋಗ್ತಿದ್ದವರ ಮೇಲೆ ಹರಿದ ಟ್ರಕ್ – 13 ಮಂದಿ ದುರ್ಮರಣ, 18 ಜನ ಗಂಭೀರ

    ಜೈಪುರ: ವೇಗವಾಗಿ ಬರುತ್ತಿದ್ದ ಟ್ರಕ್ ಒಂದು ಮದುವೆ ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಹರಿದ ಪರಿಣಾಮ 13 ಮಂದಿ ಮೃತಪಟ್ಟಿದ್ದು, 18ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಪ್ರತಾಪ್‍ಗಢ ಜಿಲ್ಲೆಯಲ್ಲಿ ನಡೆದಿದೆ.

    ಈ ಅಪಘಾತ ರಾಮದೇವ ದೇವಸ್ಥಾನ ಬಳಿ ರಾಜ್ಯ ಹೆದ್ದಾರಿ 113 ರಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಟ್ರಕ್ ನಿಂಬಹೆರಾದಿಂದ ಬಾನ್ಸ್ವಾರಾಕ್ಕೆ ಹೋಗುತ್ತಿತ್ತು. ಪ್ರತಾಪ್‍ಗಢ ಜಿಲ್ಲೆಯ ಬಳಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಮದುವೆ ಮೆರವಣಿಗೆಯ ಜನರ ಮೇಲೆ ಏಕಾಏಕಿ ವೇಗವಾಗಿ ಬಂದು ಟ್ರಕ್ ಹರಿದಿದೆ. ಇದರಿಂದ ಸ್ಥಳದಲ್ಲೇ ಮಕ್ಕಳು ಸೇರಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಡಿಎಸ್‍ಪಿ ವಿಜಯ್ ಪಾಲ್ ಸಿಂಗ್ ಸಂಧು ತಿಳಿಸಿದ್ದಾರೆ.

    ದೌಲತ್ರಂ (60), ಭರತ್ (30), ಶುಭಾಮ್ (5), ಚೊಟು (5), ದಿಲೀಪ್ (11), ಅರ್ಜುನ್ (15), ಇಶು (19), ರಮೇಶ್ (30) ಮತ್ತು ಕರಣ್ (28) ಮೃತ ದುರ್ದೈವಿಗಳು. ಇನ್ನುಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತಪಟ್ಟವರಲ್ಲಿ ಅಧಿಕ ಮಕ್ಕಳಿದ್ದಾರೆ ಎಂದು ಪೊಲೀಸ್ ಹೇಳಿದ್ದಾರೆ.

    ಅಪಘಾತದ ಬಗ್ಗೆ ತಿಳಿದು ನನಗೆ ತುಂಬಾ ನೋವಾಗಿದೆ. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅಪಘಾತದಲ್ಲಿ ಗಾಯಗೊಂಡವರನ್ನು ಚೋಟಿ ಸದ್ರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ಉದಯ್‍ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಹೇಳಿದ್ದಾರೆ.

    ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿಸಿದ್ದೇವೆ. ರಾತ್ರಿಯಾದ ಕಾರಣ ಟ್ರಕ್ ಚಾಲಕನಿಗೆ ಮದುವೆ ಮೆರವಣಿಗೆ ಕಾಣಿಸಲಿಲ್ಲ ಎಂದು ಡಿಎಸ್‍ಪಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೇ ಕುಟುಂಬದ ನಾಲ್ವರ ಮೃತ ದೇಹಗಳು ಮನೆಯ ಹಿಂಬದಿಯ ಗುಂಡಿಯಲ್ಲಿ ಪತ್ತೆ!

    ಒಂದೇ ಕುಟುಂಬದ ನಾಲ್ವರ ಮೃತ ದೇಹಗಳು ಮನೆಯ ಹಿಂಬದಿಯ ಗುಂಡಿಯಲ್ಲಿ ಪತ್ತೆ!

    ತಿರುವನಂತಪುರಂ: ನಾಪತ್ತೆಯಾಗಿದ್ದ ಕೇರಳ ಕುಟುಂಬದ ನಾಲ್ಕು ಸದಸ್ಯರ ಮೃತದೇಹಗಳು ಅವರ ಮನೆಯ ಹಿಂಬದಿಯ ಗುಂಡಿಯಲ್ಲಿ ಪತ್ತೆಯಾಗಿದೆ.

    ಘಟನೆ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದ್ದು, ಮೃತ ಪಟ್ಟವರನ್ನು ಕೃಷ್ಣನ್ (52), ಪತ್ನಿ ಸುಶೀಲಾ (50) ಹಾಗೂ ಅವರ ಮಗಳು ಹರ್ಷ (21), ಮಗ ಅರ್ಜುನ್(19) ಎಂದು ಗುರುತಿಸಲಾಗಿದ್ದು, ಕಳೆದ ನಾಲ್ಕು ದಿನಗಳಿಂದಲೂ ನಾಪತ್ತೆಯಾಗಿದ್ದ ಇವರ ಶವ ಮನೆಯ ಹಿಂಭಾಗದಲ್ಲಿ ಗುಂಡಿಯಲ್ಲಿ ಹೂಳಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮೃತಪಟ್ಟವರು ಮುಂಡನ್ಮುಡಿಯಲ್ಲಿರುವ ರಬ್ಬರ್ ಎಸ್ಟೇಟ್‍ನಲ್ಲಿ ವಾಸವಾಗಿದ್ದರು. ಕೃಷ್ಣನ್ ರಬ್ಬರ್ ತೋಟವನ್ನು ಹೊಂದಿದ್ದು, ಅವರು ವಾಮಾಚಾರ ಅಭ್ಯಾಸ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

    ಈ ಘಟನೆ ಕುರಿತು ಪೊಲೀಸರು ಸ್ಥಳೀಯರನ್ನು ವಿಚಾರಣೆ ಮಾಡಿದಾಗ ನಾಲ್ಕು ದಿನಗಳಿಂದ ಅವರು ಕಾಣೆಯಾಗಿದ್ದರು ಎಂದು ಹೇಳಿದ್ದಾರೆ. ಹಾಗಾಗಿ ಪೊಲೀಸರು ಮನೆಯ ಸುತ್ತಮುತ್ತಲೂ ಪರಿಶೀಲಿಸಿದಾಗ ಒಂದರ ಮೇಲೊಂದರಂತೆ ಬಿದ್ದಿರುವ ಕೊಳೆತ ಮೃತದೇಹಗಳು ಪತ್ತೆಯಾಗಿವೆ. ಈ ಕೃತ್ಯ ಭಾನುವಾರ ನಡೆದಿದ್ದು, ಮನೆಯಲ್ಲಿ ಸುತ್ತಿಗೆ ಮತ್ತು ಚಾಕು ಸಿಕ್ಕಿದೆ.

    ಬುಧವಾರ ಮನೆಗೆ ಕುಟುಂಬದ ಸಂಬಂಧಿಕರು ಬಂದಿದ್ದು, ಆ ಸಂದರ್ಭದಲ್ಲಿ ಮೆಟ್ಟಿಲುಗಳ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈಗ ಮರಣೋತ್ತರ ಪರೀಕ್ಷೆಗೆಂದು ಮೃತ ದೇಹಗಳನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಮೃತ ದೇಹಗಳ ಮೇಲೆ ಆಗಿರುವ ಗಾಯಗಳನ್ನು ನೋಡಿದರೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

  • ಶಿರೂರು ಮಠದ ಆವರಣದಲ್ಲಿರೋ ಬಾವಿಯಲ್ಲಿ ಮದ್ಯದ ಬಾಟಲಿ ಪತ್ತೆ!

    ಶಿರೂರು ಮಠದ ಆವರಣದಲ್ಲಿರೋ ಬಾವಿಯಲ್ಲಿ ಮದ್ಯದ ಬಾಟಲಿ ಪತ್ತೆ!

    ಉಡುಪಿ: ಇಲ್ಲಿನ ಶಿರೂರು ಮಠದ ಆವರಣದಲ್ಲಿರುವ ಬಾವಿಯಲ್ಲಿ ಮದ್ಯದ ಬಾಟಲ್ ಪತ್ತೆಯಾಗಿದ್ದು, ಇದೀಗ ತನಿಖೆ ಚುರುಕುಗೊಂಡಿದೆ.

    ಶಿರೂರು ಶ್ರೀಗಳ ಅನುಮನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದೆ. ಈ ವೇಳೆ ಜಗದೀಶ್ ಪೂಜಾರಿ ಎಂಬವರು ಶಿರೂರು ಮಠ ಮತ್ತು ಕೃಷ್ಣಮಠದ ಪಕ್ಕದಲ್ಲಿರುವ ಬಾವಿಯಲ್ಲಿ ಮದ್ಯದ ಬಾಟಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಶಿರೂರು ಮಠದ ಬಾವಿಯಲ್ಲಿ ಪೊಲೀಸರು ಹುಡುಕಾಟ ನಡೆಸಿದ ವೇಳೆ ಮದ್ಯದ ಬಾಟಲ್ ಇರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಉಡುಪಿ ಶಿರೂರು ಮಠದ ಸಿಸಿಟಿವಿ ಡಿವಿಆರ್ ನಾಪತ್ತೆ!

    ಕೂಡಲೇ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ, ಬಾವಿಯಲ್ಲಿದ್ದ ಕೆಲವು ವಸ್ತುಗಳನ್ನು ಕೊಕ್ಕೆಯೊಂದರ ಮೂಲಕ ಮೇಲೆತ್ತಿ ಕೊಂಡೊಯ್ದಿದ್ದಾರೆ. ಸಂಗ್ರಹಿಸಿದ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಭದ್ರತೆಗೊಳಿಸಿ ರವಾನೆ ಮಾಡಲಾಗಿದೆ.

    ಇನ್ನು ಸೋಮವಾರವಷ್ಟೇ ಮಠದ ಮುಂಭಾಗದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿದೆ ಎನ್ನಲಾಗುತ್ತಿತ್ತು. ಆದ್ರೆ ಇದೀಗ ಸಿ.ಸಿ ಕ್ಯಾಮರಾದ ಡಿ.ವಿ.ಆರ್ ಪತ್ತೆಯಾಗಿದೆ ಅಂತ ಹೇಳಲಾಗುತ್ತಿದ್ದು, ಆದ್ರೆ ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಇದನ್ನೂ ಓದಿ: ಶಿರೂರು ಮೂಲ ಮಠದಲ್ಲಿ ಸಿಕ್ಕಿದ್ದು ಪಾಯ್ಸನ್ ಅಲ್ಲ, ಜ್ಯೂಸ್ ಬಾಟಲ್!

  • ನಿನ್ನೆ ಭಾವಿ ಪತಿಯೊಂದಿಗೆ ತೆರಳಿದ್ದ ಯುವತಿ ಇಂದು ಶವವಾಗಿ ಪತ್ತೆ

    ನಿನ್ನೆ ಭಾವಿ ಪತಿಯೊಂದಿಗೆ ತೆರಳಿದ್ದ ಯುವತಿ ಇಂದು ಶವವಾಗಿ ಪತ್ತೆ

    ಹಾಸನ: ಇಂದು ಮುಂಜಾನೆ ಹಾಸನ ಬೇಲೂರು ಮಾರ್ಗ ಮಧ್ಯೆ ಇರುವ ಕಲ್ಕೆರೆ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಯುವತಿಯ ಶವವೊಂದು ಪತ್ತೆಯಾಗಿದ್ದು, ಇದು ಕೊಲೆ ಎಂದು ಅನುಮಾನ ಮೂಡಿದೆ.

    ಇಂದು ಬೆಳಿಗ್ಗೆ ರಸ್ತೆ ಪಕ್ಕದಲ್ಲಿ ಪತ್ತೆಯಾಗಿದ್ದ ಯುವತಿ ಶವ ಬೇಲೂರು ತಾಲುಕಿನ ಹಗರೆ ಗ್ರಾಮದ ಶಶಿಕಲಾ(22) ಳದ್ದು ಎಂದು ಗುರುತಿಸಲಾಗಿದೆ. ಕಲ್ಕೆರೆ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಶಶಿಕಲಾ ಮೃತದೇಹ ಪತ್ತೆಯಾಗಿದ್ದು, ಯುವತಿಯ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಯುವತಿ ಹಗರೆ ಗ್ರಾಮದ ಲಕ್ಕಯ್ಯ ಎಂಬವರ ಪುತ್ರಿ ಎಂದು ತಿಳಿದು ಬಂದಿದೆ. ಲಕ್ಕಯ್ಯಗೆ ಇಬ್ಬರು ಪತ್ನಿಯರಿದ್ದು, ಮೃತ ಯುವತಿ ಮೊದಲ ಪತ್ನಿ ಮಗಳು. ಹಾಸನ ನಗರದಲ್ಲಿರುವ ಮಂಜುನಾಥ ಆರ್ಥೋ ಹಾಸ್ಪಿಟಲ್ ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಳು.

    ಒಂದು ವರ್ಷದ ಹಿಂದಷ್ಟೇ ಬೇಲೂರು ತಾಲೂಕಿನ ಪುರ ಗ್ರಾಮದ ಮಹೇಶ್ ನೊಂದಿಗೆ ಶಶಿಕಲಾಗೆ ನಿಶ್ಚಿತಾರ್ಥ ಮಾಡಲಾಗಿತ್ತು. ಮಹೇಶ್ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಗುರುವಾರ ಶಶಿಕಲಾ ತನ್ನ ಭಾವಿ ಪತಿಯೊಂದಿಗೆ ತೆರಳಿದ್ದಳು. ಆದರೆ ಇಂದು ಶವವಾಗಿ ಪತ್ತೆಯಾಗಿದ್ದಾಳೆ.

    ಶಶಿಕಲಾಳನ್ನು ಕತ್ತು ಹಿಸುಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಶವವನ್ನು ಮರಣೋತ್ತರ ಪರಿಕ್ಷೆಗೆ ರವಾನಿಸಲಾಗಿದ್ದು, ಈ ಬಗ್ಗೆ ಬೇಲೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.