Tag: ಪೇರಲೆ ಬೆಳೆ

  • ಲಾಕ್‍ಡೌನ್ ಹೊಡೆತಕ್ಕೆ ನೆಲಕಚ್ಚಿದ ಸೀಬೆ ಬೆಳೆ – ರೈತನ ಸಂಕಷ್ಟಕ್ಕೆ ಮರುಗಿದ ರಿಯಲ್ ಸ್ಟಾರ್

    ಲಾಕ್‍ಡೌನ್ ಹೊಡೆತಕ್ಕೆ ನೆಲಕಚ್ಚಿದ ಸೀಬೆ ಬೆಳೆ – ರೈತನ ಸಂಕಷ್ಟಕ್ಕೆ ಮರುಗಿದ ರಿಯಲ್ ಸ್ಟಾರ್

    ದಾವಣಗೆರೆ: ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರವರು ಹತ್ತು ಬಾಕ್ಸ್ ಸೀಬೆ ಹಣ್ಣು ಖರೀದಿಸುವ ಮೂಲಕ ರೈತರೊಬ್ಬರ ಕಷ್ಟಕ್ಕೆ ಆಸರೆಯಾಗಿದ್ದಾರೆ.

    ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟಿ ಗ್ರಾಮದ ರೈತ ಜಯವರ್ಧನ್ ಎಂಬವರು ಮೂರು ಎಕರೆಯಲ್ಲಿ ಸೀಬೆ ಹಣ್ಣನ್ನು ಬೆಳೆದಿದ್ದರು. ಆದರೆ ಲಾಕ್‍ಡೌನ್‍ನಿಂದ ನೂರಾರು ಕ್ವಿಂಟಲ್ ಪೇರಲೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಸಿಗದೆ ನಷ್ಟ ಅನುಭವಿಸುವಂತಾಗಿತ್ತು.

    25 ಕೆಜಿ ಹಣ್ಣಿನ ಒಂದು ಬಾಕ್ಸ್ ಗೆ ಮಾಮೂಲಿ ದಿನಗಳಲ್ಲಿ 700 ರಿಂದ 800 ರವರೆಗೆ ಬೆಲೆ ಸಿಗುತ್ತಿತ್ತು. ಇದೀಗ ಲಾಕ್‍ಡೌನ್‍ನಿಂದ ಕೇವಲ 150 ರೂಪಾಯಿಗೆ ದಲ್ಲಾಳಿಗಳು ಕೇಳುತ್ತಿದ್ದು, ರೈತ ಜಯವರ್ಧನ್ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೆ ಕೊಯ್ದ ಕೂಲಿ ಹಾಗೂ ಮಾರುಕಟ್ಟೆಗೆ ಸಾಗಿಸುವ ವಾಹನದ ಖರ್ಚು ಕೂಡ ಅವರ ಮೇಲೆ ಬೀಳುತ್ತಿತ್ತು.

    ಫೇಸ್ ಬುಕ್‍ನಲ್ಲಿ ರೈತ ಜಯವರ್ಧನ್ ಹಾಗೂ ದೇವರಾಜ್‍ರವರು ತಾವು ಬೆಳೆದ ಸೀಬೆ ಹಣ್ಣಿನ ಬೆಳೆಯ ಬಗ್ಗೆ ವೀಡಿಯೋ ಮಾಡುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಲಕ್ಷಾಂತರ ರೂಪಾಯಿ ಹಣ ವ್ಯಯ ಮಾಡಿ ಸೀಬೆ ಬೆಳೆ ಬೆಳೆದ ರೈತ ಜಯವರ್ಧನ್ ಅವರ ನೆರವಿಗೆ ನಟ ಉಪೇಂದ್ರರವರು ಮುಂದಾಗಿದ್ದಾರೆ.

    ಈ ವೀಡಿಯೋ ನೋಡಿ ಉಪೇಂದ್ರರವರು ರೈತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದು, ಬಳಿಕ ಸ್ಥಳೀಯ ಅಭಿಮಾನಿಗಳನ್ನು ಸಂಪರ್ಕಿಸಿ 25 ಕೆಜಿಯಂತೆ ಹತ್ತು ಬಾಕ್ಸ್ ಸೀಬೆ ಹಣ್ಣನ್ನಯ ಒಂದು ಬಾಕ್ಸ್‍ಗೆ 300 ರೂಪಾಯಿಯಂತೆ ಮೂರು ಸಾವಿರ ಹಣ ನೀಡಿ ಖರೀದಿ ಮಾಡಿದ್ದಾರೆ. ಅಲ್ಲದೆ ಉಚಿತವಾಗಿ ದಾವಣಗೆರೆಯಲ್ಲಿ ಬಡ ಜನರಿಗೆ ಹಂಚಿಕೆ ಮಾಡಿದ್ದಾರೆ. ಇದೇ ರೀತಿ ಜನಪ್ರತಿನಿಧಿಗಳು ಕೆಲಸ ಮಾಡಿದರೆ ರೈತರು ಸಂಕಷ್ಟದಿಂದ ಪಾರಗಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ.