Tag: ಪೇದೆ

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‍ಐ, ಪೇದೆ ಅಮಾನತು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‍ಐ, ಪೇದೆ ಅಮಾನತು

    ಕೊಪ್ಪಳ: ರೈತರನ್ನು ಸುಲಿಗೆ ಮಾಡಲು ಮುಂದಾಗಿದ್ದ ಜಿಲ್ಲೆಯ ಓರ್ವ ಪಿಎಸ್‍ಐ ಹಾಗೂ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತು ಮಾಡಿ ಎಸ್‍ಪಿ ಜಿ.ಸಂಗೀತಾ ಅವರು ಆದೇಶ ಹೊರಡಿಸಿದ್ದಾರೆ. ಅಮಾನತು ಆದ ಇಬ್ಬರು ಮಾಡಿದ ಅಕ್ರಮದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಸುದ್ದಿ ಆಧರಿಸಿ ಅಮಾನತು ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

    ಕಾರಟಗಿ ಪೊಲೀಸ್ ಠಾಣೆಯ ಪಿಎಸ್‍ಐ ವಿಜಯಕೃಷ್ಣ ಹಾಗೂ ಅದೇ ಠಾಣೆಯ ಪೇದೆ ಭೀಮಣ್ಣ ಸೇವೆಯಿಂದ ಅಮಾನತು ಆದವರು. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕಂದಾ ಗ್ರಾಮದ ರೈತ ಭಾಷಾಸಾಬ್ ವಲಿಸಾಬ್ ಅವರಿಗೆ ವಿಜಯಕೃಷ್ಣ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ಶ್ರವಣಕುಮಾರ್ ಎಂಬಾತನ ಮಾತು ಕೇಳಿದ್ದ ಪಿಎಸ್‍ಐ ರೈತ ಭಾಷಾಸಾಬ್ ವಲಿಸಾಬ್‍ಗೆ ಬೆದರಿಕೆ ಹಾಕಿ, ಹಣಕ್ಕಾಗಿ ಪೀಡಿಸಿ ಆತನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದರು. ಇದರಿಂದಾಗಿ ಭಾಷಾಸಾಬ್ ಎಸ್‍ಪಿ, ಮುಖ್ಯಮಂತ್ರಿ, ಗೃಹ ಸಚಿವರಿಗೆ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಇದನ್ನು ಆಧರಿಸಿ ಪಬ್ಲಿಕ್ ಟಿವಿ ಜನವರಿ 26ರಂದು ಪಿಎಸ್‍ಐ ವಿಜಯಕೃಷ್ಣ, ಪೇದೆ ಬೀಮಣ್ಣನದ ಹಣ ವಸಲಿ ಬಗ್ಗೆ ಸುದ್ದಿ ಮಾಡಿತ್ತು. ಕೊಪ್ಪಳ ಎಸ್‍ಪಿ ಸಂಗೀತಾ ಅವರು ಗಂಗಾವತಿ ಸಿಪಿಐ ಅವರಿಂದ ವರದಿ ತರಿಸಿಕೊಂಡು ಜನವರಿ 29ರಂದು ಇಬ್ಬರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಏನಿದು ಪ್ರಕರಣ?:
    ಕಾರಟಗಿ ಪೊಲೀಸ್ ಠಾಣೆ ಪೇದೆ ಭೀಮಣ್ಣ ಕಳೆದ ಮೂರು ತಿಂಗಳ ಹಿಂದೆ ಮುಕ್ಕುಂದ ಗ್ರಾಮದಲ್ಲಿ ಮರಳು ಸಾಗಾಟದ ಮಾಮೂಲಿ ವಸೂಲಿಗೆ ಪೊಲೀಸರು ಹೋಗಿದ್ದರು. ಆದರೆ ಭಾಷಾಸಾಬ್ ನಮ್ಮ ಗ್ರಾಮವು ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರಲ್ಲ ಎಂದು ಪೊಲೀಸರ ಬಳಿ ಗಲಾಟೆ ಮಾಡಿದ್ದರು. ಅಲ್ಲದೇ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆಹಿಡಿದಿದ್ದರು. ಹೀಗಾಗಿ ಪೊಲೀಸರು ಭಾಷಾಸಾಬ್‍ರನ್ನ ಟಾರ್ಗೆಟ್ ಮಾಡಿದ್ದರು. ಆದ್ದರಿಂದಲೇ ಭಾಷಾಸಾಬ್ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿ ಪೊಲೀಸರು ಹಗೆ ಸಾಧಿಸಿದ್ದರು.

    ಮಾಮೂಲಿ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ಟಾರ್ಗೆಟ್ ಮಾಡಿದ್ದರಿಂದ ಭಾಷಾಸಾಬ್ ಊರು ಬಿಟ್ಟು ಅಲೆಯುತ್ತಿದ್ದರು. ಅಷ್ಟೇ ಅಲ್ಲದೆ ಪಿಎಸ್‍ಐ ವಿಜಯಕೃಷ್ಣ ಗೂಂಡಾಗಳನ್ನ ಬಿಟ್ಟು ಭಾಷಾಸಾಬ್ ಅವರಿಗೆ ಧಮ್ಕಿ ಹಾಕಿದ್ದರು. ಉಸುಕು ದಂಧೆ ಮಾಡಿ ಪ್ರತಿ ತಿಂಗಳು 35 ಸಾವಿರ ರೂ. ಮಾಮೂಲಿ ನೀಡುವಂತೆ ಪಿಎಸ್‍ಐ ವಿಜಯಕೃಷ್ಣ ಅವರು ಕೇಳಿದ್ದ ಬಗ್ಗೆ ಭಾಷಾಸಾಬ್ ದೂರಿನಲ್ಲಿ ಉಲ್ಲೇಖಿಸಿದ್ದರು.

    ಇದೆಲ್ಲವನ್ನೂ ಮನಗಂಡ ಎಸ್‍ಪಿ ಸಂಗೀತಾ ಅವರು ಕರ್ತವ್ಯಲೋಪ, ಲಂಚಕ್ಕೆ ಬೇಡಿಕೆ, ಅಧಿಕಾರ ದುರುಪಯೋಗ, ಠಾಣಾ ವ್ಯಾಪ್ತಿ ಮೀರಿದ ವ್ಯಕ್ತಿಯ ಮೇಲೆ ದೌರ್ಜನ್ಯ, ಹಲ್ಲೆ ಮಾಡುವ ಮೂಲಕ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಕೀಳರಿಮೆ ಮೂಡುವಂತೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತಿನ ನಡವಳಿ) ನಿಯಮಗಳು 1965ರ ನಿಯಮದ ಪ್ರಕಾರ ಅಮಾನತಿನಲ್ಲಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

  • ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಹೆಗಲ ಮೇಲೆ 4 ಕಿ.ಮೀ ಹೊತ್ತುಕೊಂಡು ಹೋದ ಪೇದೆ

    ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಹೆಗಲ ಮೇಲೆ 4 ಕಿ.ಮೀ ಹೊತ್ತುಕೊಂಡು ಹೋದ ಪೇದೆ

    ಹೈದರಾಬಾದ್: ಆಂಧ್ರ ಪ್ರದೇಶದ ಕಡಪದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಪೇದೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಮಾನವೀಯತೆ ತೋರಿಸಿದ್ದಾರೆ.

    ಮಾಜಿ ಶಾಸಕ ಅಕಪತಿ ಅಮರನಾಥ ರೆಡ್ಡಿ ಜೊತೆ ಹಲವು ಮಂದಿ ತಿರುಪತಿಗೆ ಹೋಗಿದ್ದರು. ಇದರಲ್ಲಿ ಒಬ್ಬ ಮಹಿಳೆ ಕೂಡ ಭಾಗಿಯಾಗಿದ್ದು, ನಡೆದುಕೊಂಡು ಹೋಗುವಾಗ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಯಾತ್ರಿಗಳಿಗೆ ಇಲ್ಲಿ ಯಾವುದೇ ವಾಹನ ಕೂಡ ಇರಲಿಲ್ಲ. ಹಾಗಾಗಿ ಎಲ್ಲರೂ ನಡೆದುಕೊಂಡು ಹೋಗುತ್ತಿದ್ದರು.

    ಮಹಿಳೆಯ ಸ್ಥಿತಿ ನೋಡಿದ ಮಾಜಿ ಶಾಸಕರ ಭದ್ರತಾ ಸಿಬ್ಬಂದಿ ಕುಲ್ಲಯಪ್ಪ ಮಹಿಳೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು 4 ಕಿ.ಮೀ ನಡೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಸದ್ಯ ಮಹಿಳೆ ತಿರುಮಲದ ಅಶ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ.

    ಪೇದೆ ಅವರ ಈ ಕರ್ತವ್ಯಕ್ಕೆ ಎಸ್‍ಪಿ ಕೆಕೆಎನ್ ಅನ್ಬುರಾಜನ್ ಶ್ಲಾಘಿಸಿದ್ದಾರೆ. ಅಲ್ಲದೆ ಕುಲ್ಲಯಪ್ಪ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಎಲ್ಲರಿಗೂ ಸಹಾಯ ಮಾಡಬೇಕು ಎಂದು ತಮ್ಮ ಪೊಲೀಸ್ ಸಿಬ್ಬಂದಿಗೆ ಸಲಹೆ ನೀಡಿದ್ದರು.

    ಪೇದೆ ಮಹಿಳೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಪೇದೆಯನ್ನು ಹೊಗಳುತ್ತಿದ್ದಾರೆ.

  • ರಕ್ತದ ಮಡುವಿನಲ್ಲಿ ಗೃಹಿಣಿ ಶವವಾಗಿ ಪತ್ತೆ

    ರಕ್ತದ ಮಡುವಿನಲ್ಲಿ ಗೃಹಿಣಿ ಶವವಾಗಿ ಪತ್ತೆ

    ಹೈದರಾಬಾದ್: ಗೃಹಿಣಿಯೊಬ್ಬಳು ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಶುಕ್ರವಾರ ಆಂಧ್ರ ಪ್ರದೇಶದ ಅಜಾದ್‍ನಗರದಲ್ಲಿ ನಡೆದಿದೆ.

    ನೌಶಿದಾ ಬೇಗಂ ಶವವಾಗಿ ಪತ್ತೆಯಾದ ಗೃಹಿಣಿ. ನೌಶಿದಾ 2013ರಲ್ಲಿ ಪೇದೆ ಅಬ್ದುಲ್ ರಶೀದ್‍ನನ್ನು ಮದುವೆ ಆಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಅಬ್ದುಲ್ ಈಗ ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ರಶೀದ್ ನನ್ನು 2010ರಲ್ಲಿ ಎಸ್‍ಪಿಎಫ್ ಪೇದೆಯಾಗಿ ನೇಮಕ ಮಾಡಲಾಗಿತ್ತು.

    ಮನೆ ಮಾಲೀಕ ಸಲೀಂ ನೌಶಿದಾ ಬೇಗಂ ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ನೌಶಿದಾ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಳು. ನೌಶಿರಾ ಸಾವಿಗೆ ಆಕೆಯ ಪತಿ ಅಬ್ದುಲ್ ರಶೀದ್‍ಯೇ ಕಾರಣ ಎಂದು ಶಂಕಿಸಲಾಗಿದೆ.

    ಪ್ರಾಥಮಿಕ ತನಿಖೆ ಪ್ರಕಾರ, ರಶೀದ್ ತನ್ನ ಪತ್ನಿ ನೌಶಿದಾಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ರಶೀದ್ ತನ್ನ ಪತ್ನಿ ನೌಶಿದಾ ಶೀಲ ಶಂಕಿಸಿ ಪ್ರತಿನಿತ್ಯ ಜಗಳವಾಡುತ್ತಿದ್ದನು ಎಂದು ತಿಳಿದು ಬಂದಿದೆ.

    ಪೊಲೀಸರು ನೌಶಿರಾ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಕೊಲೆ ಆರೋಪಿಗಳನ್ನು ಶಿಕ್ಷಿಸುವ ಬದಲು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ

    ಕೊಲೆ ಆರೋಪಿಗಳನ್ನು ಶಿಕ್ಷಿಸುವ ಬದಲು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ

    -50ಕ್ಕೂ ಹೆಚ್ಚು ಸಿಬ್ಬಂದಿಗೆ ನೋಟಿಸ್ ನೀಡಿ ಸಸ್ಪೆಂಡ್

    ಹುಬ್ಬಳ್ಳಿ: ಕೊಲೆ ಮಾಡಿದ ಆರೋಪಿಗಳನ್ನು ಶಿಕ್ಷಿಸುವ ಬದಲು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಅಪರಾಧ ಚಟುವಟಿಕೆಗಳನ್ನು ತಡೆಯುವ ಪೊಲೀಸರಿಗೆ ಮಾನಸಿಕ ಸ್ಥೈರ್ಯ ಕೊಡಬೇಕಾದ ಹಿರಿಯ ಪೊಲೀಸ್ ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ಶಿಕ್ಷೆ ಕೊಟ್ಟಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಸಿಬ್ಬಂದಿಗೆ ನೋಟಿಸ್ ನೀಡಿ ಸಸ್ಪೆಂಡ್ ಮಾಡಿರುವುದು ಪೊಲೀಸ್ ಪೇದೆಗಳ ಮಾನಸಿಕ ಸ್ಥೈರ್ಯವನ್ನೆ ಕುಂದಿಸಿದೆ.

    ಸಮಾಜ ಅಂದ ಮೇಲೆ ಕೊಲೆ ಅಪರಾಧ ಚಟುವಟಿಕೆಗಳು ನಡೆಯುತ್ತಾನೆ ಇರುತ್ತವೆ. ಆದರೆ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ಕಳಹಂತದ ಪೇದೆಗಳಿಗೆ ಧೈರ್ಯ ಹೇಳಿ ಆತ್ಮಸ್ಥೈರ್ಯ ತುಂಬಬೇಕು. ಆಗ ಮಾತ್ರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು. ಹುಬ್ಬಳ್ಳಿ ಧಾರವಾಡ ಮಹನಾಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಕೊಲೆ ಅಪರಾಧ ಚಟುವಟಿಕೆಗಳಿಗೆ ಇದೀಗ ಪೊಲೀಸ್ ಪೇದೆಗಳನ್ನು ಹೊಣೆಯಾಗಿಸುವ ಯತ್ನ ನಡೆಯುತ್ತಿದೆ.

    ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಾಲ್ಕು ಕೊಲೆ, ಒಂದು ಶೂಟೌಟ್, ಸರಗಳ್ಳತನ ಸೇರಿದಂತೆ ಹಲವು ಗದ್ದಲ ಗಲಾಟೆ ಪ್ರಕರಣಗಳು ನಡೆದಿವೆ. ಈ ಅಪರಾಧ ಪ್ರಕರಣಗಳಿಗೆ ಇದೀಗ ಪೊಲೀಸ್ ಪೇದೆಗಳನ್ನೆ ಹೊಣೆಯಾಗಿಸಿ ಬರೋಬ್ಬರಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ವಿಧಿಸಲಾಗಿದೆ. ಹುಬ್ಬಳ್ಳಿ ವ್ಯಾಪ್ತಿಯಲ್ಲಿ 17 ಪೇದೆಗಳು, ಧಾರವಾಡ ಠಾಣೆಗಳ ವ್ಯಾಪ್ತಿಯಲ್ಲಿ 14 ಜನ ಪೇದೆಗಳನ್ನು ಅಮಾನತು ಮಾಡಿ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿರುವುದು ಪೊಲೀಸ್ ಪೇದೆಗಳ ಮಾನಸಿಕ ಸ್ಥೈರ್ಯವನ್ನೆ ಕುಂದಿಸಿದೆ. ಪಿಎಸ್‍ಐ, ಇನ್ಸ್‌ಪೆಕ್ಟರ್‌ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಇಲ್ಲದ ಶಿಕ್ಷೆ ನಮಗ್ಯಾಕೆ ಎಂದು ಪೇದೆಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಇದು ಸಿಬ್ಬಂದಿ ಮಾನಸಿಕ ಆತ್ಮಸ್ಥೈರ್ಯ ಕುಂದಿಸಿದಂತಾಗುತ್ತದೆ ಎಂದು ಹೇಳುತ್ತಿದ್ದಾರೆ.

  • ವಿಧವೆಯನ್ನು ಮದ್ವೆಯಾಗಿ ಒಂದೇ ವರ್ಷಕ್ಕೆ ಕೈಕೊಟ್ಟ ಟ್ರಾಫಿಕ್ ಪೊಲೀಸ್

    ವಿಧವೆಯನ್ನು ಮದ್ವೆಯಾಗಿ ಒಂದೇ ವರ್ಷಕ್ಕೆ ಕೈಕೊಟ್ಟ ಟ್ರಾಫಿಕ್ ಪೊಲೀಸ್

    ಬೆಂಗಳೂರು: ವಿಧವೆಗೆ ಜೀವನ ಕೊಡುತ್ತೇನೆ ಎಂದು ಮದುವೆಯಾದ ಒಂದೇ ವರ್ಷಕ್ಕೆ ಟ್ರಾಫಿಕ್ ಪೊಲೀಸ್ ಪೇದೆ ಕೈಕೊಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಪ್ರದೀಪ್ ಮೋಸ ಮಾಡಿದ ಟ್ರಾಫಿಕ್ ಪೇದೆ. ಮಹಿಳೆ ಮದುವೆಯಾದ ಮೂರೇ ವರ್ಷಕ್ಕೆ ತನ್ನ ಪತಿಯನ್ನು ಕಳೆದುಕೊಂಡಿದ್ದಳು. ಅಲ್ಲದೆ ಮಹಿಳೆಗೆ ಒಂದು ಗಂಡು ಮಗು ಕೂಡ ಇದೆ. ಈ ನಡುವೆ ಮಹಿಳೆ ಪೊಲೀಸ್ ಪೇದೆ ಪ್ರದೀಪ್‍ನನ್ನು ಪರಿಚಯ ಮಾಡಿಕೊಂಡಿದ್ದಾಳೆ.

    ಮಹಿಳೆ 2008ರಿಂದ ತನ್ನ ಪತಿಯೊಂದಿಗೆ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಳು. ಮದುವೆಯಾಗಿ ಮೂರೇ ವರ್ಷಕ್ಕೆ ಪತಿ ಮೃತಪಟ್ಟಿದ್ದರು. ಬಳಿಕ ಮಹಿಳೆ ಫೇಸ್‍ಬುಕ್‍ನಲ್ಲಿ ಟ್ರಾಫಿಕ್ ಪೊಲೀಸ್ ಪೇದೆ ಪ್ರದೀಪ್‍ನನ್ನು ಪರಿಚಯ ಮಾಡಿಕೊಂಡಿದ್ದಳು. ಇವರಿಬ್ಬರ ಪರಿಚಯ ಸ್ನೇಹವಾಗಿ, ಒಬ್ಬರನೊಬ್ಬರು ಪ್ರೀತಿ ಮಾಡಲು ಶುರು ಮಾಡಿದ್ದರು.

    ನನಗೆ ಮದುವೆಯಾಗಿ ಪತಿ ಮೃತಪಟ್ಟಿದ್ದು, ಒಬ್ಬ ಮಗನಿದ್ದಾನೆ ಎಂದು ಮಹಿಳೆ ಪ್ರದೀಪ್‍ಗೆ ತಿಳಿಸಿದ್ದಾಳೆ. ಆದರೂ ಪ್ರದೀಪ್, ಪರವಾಗಿಲ್ಲ ನಾನು ನಿಮಗೆ ಜೀವನ ಕೊಡುತ್ತೇನೆ ಎಂದು ಹೇಳಿ ಮಹಿಳೆಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾನೆ. ಇದಾದ ಬಳಿಕ ಇಬ್ಬರು ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಎಲ್ಲ ಮುಗಿದ ಬಳಿಕ ಪ್ರದೀಪ್  ನನಗೆ ಮೋಸ ಮಾಡಿದ್ದಾನೆ ಎಂದು ಮಹಿಳೆ ಕಣ್ಣೀರು ಹಾಕುತ್ತಿದ್ದಾಳೆ.

    ಮದುವೆಯಾದ ಮೇಲೆ ಒಂದು ವರ್ಷ ಜೊತೆಯಲ್ಲೇ ವಾಸವಿದ್ದು ಕಳೆದ ಜೂನ್ ತಿಂಗಳಲ್ಲಿ ಪ್ರದೀಪ್ ಅವರ ಮನೆಯವರು ಬಂದು ನನ್ನ ಜೊತೆ ಜಗಳವಾಡಿದ್ದಾರೆ. ಅಲ್ಲದೆ ನನ್ನ ಮೇಲೆ ಹಲ್ಲೆ ಕೂಡ ಮಾಡಿ ನಮ್ಮಿಬ್ಬರನ್ನು ದೂರ ಮಾಡಿದ್ದಾರೆ. ವಿಧವೆ ನನ್ನ ಪತಿಯನ್ನು ನನಗೆ ಕೊಡಿಸಿ ಎಂದು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದು ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ.

  • ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಎಸಿಪಿ ಟಿಕ್‍ಟಾಕ್ ವಿಡಿಯೋ ವೈರಲ್

    ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಎಸಿಪಿ ಟಿಕ್‍ಟಾಕ್ ವಿಡಿಯೋ ವೈರಲ್

    ಗಾಂಧಿನಗರ: ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಗುಜರಾತ್ ಎಸಿಪಿ ಈಗ ಖುದ್ದು ಟಿಕ್‍ಟಾಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಸಿಪಿ ಮಂಜಿತ ವಂಜಾರ ಸ್ಪಷ್ಟನೆ ನೀಡಿದ್ದಾರೆ.

    ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳಾ ಪೇದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದು ವಿವಾದ ಆಗುತ್ತಿದ್ದಂತೆ ಎಸಿಪಿ ಮಂಜಿತ ವಂಜಾರ ಅವರನ್ನು ಸಸ್ಪೆಂಡ್ ಮಾಡಿದ್ದರು. ಈಗ ಎಸಿಪಿ ಮಂಜಿತ ವಂಜಾರ ಅವರ ಟಿಕ್‍ಟಾಕ್ ವಿಡಿಯೋ ವೈರಲ್ ಆಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಡಿಯೋ ನನ್ನ ಸ್ನೇಹಿತರ ಖಾತೆಯಿಂದ ಒಂದು ವರ್ಷದ ಹಿಂದೆ ಅಪ್ಲೋಡ್ ಆಗಿದೆ. ಇಬ್ಬರು ಮಹಿಳಾ ಪೇದೆ ಪೊಲೀಸ್ ಠಾಣೆಯೊಳಗೆ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಅಲ್ಲದೆ ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರನ್ನು ಅಮಾನತುಗೊಳಿಸಿಲ್ಲ. ಬದಲಾಗಿ ಕೆಲಸದ ಸಮಯದಲ್ಲಿ ಅವರು ಯೂನಿಫಾರಂ ಧರಿಸದ್ದಕ್ಕೆ ಅವರನ್ನು ಸಸ್ಪೆಂಡ್ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ವಿಡಿಯೋ ವೈರಲ್ ಆಗಿದ್ದಕ್ಕೆ ಎಸಿಪಿ ಮಂಜಿತ ವಂಜಾರ ಅವರು, ನಾನು ಒಬ್ಬ ಯುವ ಮಹಿಳಾ ಪೊಲೀಸ್ ಅಧಿಕಾರಿಯಾಗಿ ನನಗೆ ಸಾಮಾಜಿಕ ಜಾಲತಾಣ ಉಪಯೋಗಿಸಲು ನನಗೆ ಹಕ್ಕಿದೆ. ಅಲ್ಲದೆ ನಾನು ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಂ, ಸ್ನ್ಯಾಪ್‍ಚಾಟ್ ಹಾಗೂ ಟಿಕ್‍ಟಾಕ್ ಬಳಸುತ್ತೇನೆ. ಸಾಮಾಜಿಕ ಜಾಲತಾಣದಿಂದ ನನಗೆ ಅಪರಾಧಗಳನ್ನು ಕಂಡು ಹಿಡಿಯಲು ಸಹಾಯವಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

  • ಶೂಟಿಂಗ್ ವೇಳೆ ಇಬ್ಬರ ದುರ್ಮರಣ ಪ್ರಕರಣ- ತನಿಖೆ ವೇಳೆ ಸ್ಫೋಟಕ ಸತ್ಯ ಬಯಲು

    ಶೂಟಿಂಗ್ ವೇಳೆ ಇಬ್ಬರ ದುರ್ಮರಣ ಪ್ರಕರಣ- ತನಿಖೆ ವೇಳೆ ಸ್ಫೋಟಕ ಸತ್ಯ ಬಯಲು

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಭಿನಯದ `ರಣಂ’ ಚಿತ್ರದ ಶೂಟಿಂಗ್ ವೇಳೆ ಇಬ್ಬರು ದುರ್ಮರಣಕ್ಕೀಡಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸಪ್ಪನ ಹಣದ ದಾಹಕ್ಕೆ ಇಬ್ಬರು ಅಮಾಯಕರು ಬಲಿಯಾಗಿರುವುದು ಆಂತರಿಕ ತನಿಖೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ.

    ಶೂಟಿಂಗ್ಗೆ ಅನುಮತಿ ಇಲ್ಲದೇ ಹೋದರೂ 5 ಸಾವಿರ ಹಣ ಪಡೆದು ಪೇದೆ ಶೂಟಿಂಗ್ ಮಾಡಿಸಿದ್ದನು. ತನಿಖಾ ವರದಿ ಕೈ ಸೇರುತ್ತಿದ್ದಂತೆಯೇ ಪೊಲೀಸ್ ಪೇದೆಯನ್ನು ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ. ಬಾಗಲೂರು ಠಾಣೆಯ ಪೇದೆಯಾಗಿದ್ದ ಭೀಮಾ ಶಂಕರ್ ಕೇವಲ 5,000 ರೂ. ಲಂಚ ಪಡೆದು ಇಬ್ಬರ ಸಾವಿಗೆ ಕಾರಣವಾಗಿದ್ದಾನೆ.

    ಮಾರ್ಚ್ ತಿಂಗಳ 29ರಂದು ಬಾಗಲೂರಿನ ಶೆಲ್ ಕಂಪನಿ ಬಳಿ ‘ರಣಂ’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆಗ ಸಿಲಿಂಡರ್ ಬ್ಲಾಸ್ಟ್ ಆಗಿ ಸಮೀರಾ ಬಾನು (28) ಹಾಗೂ ಆಕೆಯ ಮಗಳು ಆಯೇಶಾ ಮೃತಪಟ್ಟಿದ್ದರು. ಪ್ರಕರಣದ ತನಿಖೆ ವೇಳೆ ಪೊಲೀಸರಲ್ಲೇ ಆಂತರಿಕ ವೈಫಲ್ಯದ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಆಂತರಿಕ ತನಿಖೆ ನಡೆಸುವಂತೆ ಸೂಚಿಸಿದ್ದರು.

    ಶೂಟಿಂಗ್‍ಗೆ ಯಾವುದೇ ಅನುಮತಿ ಇಲ್ಲದಿದ್ದರೂ ವೈಯಕ್ತಿಕವಾಗಿ ಭೀಮಾ ಶಂಕರ್ ಹಣ ಪಡೆದಿದ್ದನು. ಶೂಟಿಂಗ್ ನಡೆಸುವ ಮುನ್ನ ಚಿತ್ರದ ನಿರ್ದೇಶಕನ ಅನುಮತಿ ಕೋರಿ ಯಲಹಂಕ ಎಸಿಪಿ ಕಚೇರಿಗೆ ತೆರಳಿದ್ದರು. ಆದರೆ ಯಲಹಂಕ ಎಸಿಪಿ ಎಂಎಸ್ ಶ್ರೀನಿವಾಸ್ ಸೂಕ್ತ ದಾಖಲೆ ನೀಡುವವರೆಗೂ ಅನುಮತಿ ಇಲ್ಲ ಎಂದಿದ್ದರು. ಇದೇ ಸಮಯ ದುರುಪಯೋಗ ಪಡಿಸಿಕೊಂಡಿದ್ದ ಭೀಮಾ ಶಂಕರ್ ಚಿತ್ರತಂಡದಿಂದ ಐದು ಸಾವಿರ ಹಣ ಪಡೆದು ತಾನೇ ಸೆಕ್ಯೂರಿಟಿ ನೀಡುವ ರೀತಿ ಕೆಲಸ ಮಾಡಿದ್ದನು. ಯಾವುದೇ ಅನುಮತಿ ಇಲ್ಲದೆ ಚಿತ್ರೀಕರಣ ನಡೆಯುವ ವೇಳೆ ಸಿಲಿಂಡರ್ ಸ್ಫೋಟ ದುರಂತ ನಡೆದಿತ್ತು.

    ಸದ್ಯಕ್ಕೆ ವಿದ್ಯಾರಣ್ಯಪುರ ಪೇದೆಯಾಗಿ ಭೀಮಾ ಶಂಕರ್ ಕಾರ್ಯನಿರ್ವಹಿಸುತ್ತಿದ್ದಾನೆ. ಈ ಬಗ್ಗೆ ವರದಿ ಬಂದ ಕೂಡಲೇ ಭೀಮಾ ಶಂಕರ್ ಅಮಾನತು ಮಾಡಲಾಗುತ್ತದೆ. ಈಶಾನ್ಯ ವಿಭಾಗದ ಡಿಸಿಪಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

  • ಪೊಲೀಸ್ ಕ್ವಾಟರ್ಸ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೇದೆ ಮಗಳು ಬಲಿ

    ಪೊಲೀಸ್ ಕ್ವಾಟರ್ಸ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೇದೆ ಮಗಳು ಬಲಿ

    ಬೆಂಗಳೂರು: ಶಿವಾಜಿನಗರದ ಪೊಲೀಸ್ ಕ್ವಾಟರ್ಸ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೇದೆಯೊಬ್ಬರು ಮಗಳು ಬಲಿಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಹರ್ಷಾಲಿ(4) ಮೃತ ದುರ್ದೈವಿ. ಹರ್ಷಾಲಿ ಕಬ್ಬನ್ ಪಾರ್ಕ್ ಸಂಚಾರಿ ಠಾಣೆ ಪೇದೆ ಲೋಕೇಶಪ್ಪ ಮಗಳಾಗಿದ್ದು, ಇದೇ ತಿಂಗಳು 5ನೇ ತಾರೀಖಿನಂದು ಆಟವಾಡಲು ಪಾರ್ಕಿಗೆ ಹೋಗಿದ್ದಳು. ಈ ವೇಳೆ ಶಿವಾಜಿನಗರ ಕ್ವಾಟರ್ಸ್ ನಲ್ಲಿ ಒಣಗಿದ್ದ ಮರಕ್ಕೆ ಬೆಂಕಿ ಹಾಕಲಾಗಿತ್ತಿ. ಒಣಗಿದ್ದ ಮರಕ್ಕೆ ಬೆಂಕಿ ಹಾಕಿದ್ದನ್ನ ಗಮನಿಸದೆ ಅಲ್ಲಿಯೇ ಆಟವಾಡುತ್ತಿದ್ದ ಹರ್ಷಾಲಿ ಬೆಂಕಿಗೆ ಬಿದ್ದಿದ್ದಳು.

    ಬೆಂಕಿಗೆ ಬಿದ್ದ ಹರ್ಷಾಲಿಯನ್ನು ಸಾರ್ವಜನಿಕರು ಕಾಪಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಒಂದು ವಾರ ಚಿಕಿತ್ಸೆ ನೀಡಿದರೂ ಹರ್ಷಾಲಿ ಬದುಕುಳಿಯಲಿಲ್ಲ. ಇಷ್ಟಾದರೂ ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಕ್ವಾಟರ್ಸ್ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಹೊಸದಾಗಿ ಮದ್ವೆ ಆಗಿದ್ದೀನಿ, ಹೊಸ ಹುರುಪಿನಲ್ಲಿದ್ದೀನಿ – ಬೆಂಗ್ಳೂರು ಪೇದೆಯ ರಜೆ ಪತ್ರ ವೈರಲ್

    ಹೊಸದಾಗಿ ಮದ್ವೆ ಆಗಿದ್ದೀನಿ, ಹೊಸ ಹುರುಪಿನಲ್ಲಿದ್ದೀನಿ – ಬೆಂಗ್ಳೂರು ಪೇದೆಯ ರಜೆ ಪತ್ರ ವೈರಲ್

    ಬೆಂಗಳೂರು: ನಾನು ಹೊಸದಾಗಿ ಮದುವೆ ಆಗಿದ್ದೀನಿ. ಅಲ್ಲದೇ ಹೊಸ ಹುರುಪಿನಲ್ಲಿ ಇದ್ದೀನಿ. ಹಾಗಾಗಿ ನನಗೆ 10 ದಿನ ಪರಿವರ್ತಿತ ರಜೆ ಅಥವಾ ಗಳಿಕೆ ರಜೆ ನೀಡಿ ಎಂದು ಪೇದೆಯೊಬ್ಬರು ವಿನೂತನವಾಗಿ ರಜೆ ಪತ್ರವನ್ನು ಬರೆದಿದ್ದಾರೆ.

    ಪೇದೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಹೊಸ ಮದುವೆ ಗಂಡಿಗೆ ರಜೆ ನೀಡಿ ಎಂದು ಹಾಸ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

    ಪತ್ರದಲ್ಲಿ ಏನಿದೆ?
    ನನಗೆ ಹೊಸದಾಗಿ ಮದುವೆ ಆಗಿದ್ದು, ಹೊಸ ಹುರುಪು ಇದೆ. ನಮ್ಮ ಊರಿನಲ್ಲಿ ನಮ್ಮ ಮನೆ ದೇವರ ಪೂಜಾ ಕಾರ್ಯಕ್ರಮ ಇರುವ ಕಾರಣ ನನಗೆ ಫೆಬ್ರವರಿ 24ರಿಂದ ಮಾರ್ಚ್ 5ರವರೆಗೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ 10 ದಿನಗಳ ವರೆಗೆ ಪರಿವರ್ತಿತ ರಜೆ ಅಥವಾ ಗಳಿಕೆ ರಜೆಯನ್ನು ಮಂಜೂರು ಮಾಡಬೇಕಾಗಿ ನಿವೇದಿಸಿಕೊಳ್ಳುತ್ತೇನೆ ಎಂದು ವಿನೂತನವಾಗಿ ಬೇಗೂರು ಪೊಲೀಸ್ ಠಾಣೆಗೆ ರಜೆ ಪತ್ರ ಬರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಣ ನೀಡಲ್ಲ ಎಂದಿದ್ದಕ್ಕೆ ಬ್ಲೇಡ್‍ನಿಂದ ಪೇದೆಯ ಕುತ್ತಿಗೆ, ಕೈ-ಕಾಲು ಕೊಯ್ದ ಯುವಕರು

    ಹಣ ನೀಡಲ್ಲ ಎಂದಿದ್ದಕ್ಕೆ ಬ್ಲೇಡ್‍ನಿಂದ ಪೇದೆಯ ಕುತ್ತಿಗೆ, ಕೈ-ಕಾಲು ಕೊಯ್ದ ಯುವಕರು

    ಶಿವಮೊಗ್ಗ: ಗಾಂಜಾ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬರ ಮೇಲೆ ಮಾರಣಾಂತಿಕವಾಗಿ ಬಸ್ ನಿಲ್ದಾಣದಲ್ಲಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕುಂಸಿ ಠಾಣೆ ಪೊಲೀಸ್ ಪೇದೆ ಮಂಜುನಾಥ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಮಂಗಳವಾರ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದಲ್ಲಿದ್ದಾಗ ಈ ಘಟನೆ ನಡೆದಿದೆ. ಇಬ್ಬರು ಯುವಕರು ಮಂಜುನಾಥ್ ಬಳಿ ಬಂದು ಹಣ ಕೇಳಿದ್ದಾರೆ. ಹಣ ನೀಡುವುದಿಲ್ಲ ಎಂದಿದ್ದಕ್ಕೆ ಕೋಪಗೊಂಡ ಯುವಕರು ಕುತ್ತಿಗೆ, ಕೈ- ಕಾಲಿಗೆ ಬ್ಲೇಡಿನಲ್ಲಿ ಕೊಯ್ದಿದ್ದಾರೆ.

    ಜನ ಸೇರುತ್ತಿದ್ದಂತೆ  ಇಬ್ಬರೂ ಯುವಕರು ಸ್ಥಳದಿಂದ ಪರಾರಿ ಆಗಿದ್ದಾರೆ. ತಕ್ಷಣ ಗಾಯಗೊಂಡ ಮಂಜುನಾಥ್ ಅವರನ್ನು ಮೆಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಮಂಜುನಾಥ್ ಕುಂಸಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಪ್ರತ್ಯಕ್ಷದರ್ಶಿಗಳು ಯುವಕರನ್ನು ಗುರುತಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಈ ಘಟನೆ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ಆಟೋ ಚಾಲಕ ನದೀಂ ಹಾಗೂ ನಜೀರ್ ಎಂಬ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಸದ್ಯಕ್ಕೆ ಇಬ್ಬರು ಗಾಂಜಾ ನಶೆಯಲ್ಲಿದ್ದು, ಇನ್ನೂ ಯಾವುದೇ ಮಾಹಿತಿ ತಿಳಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv