Tag: ಪೇಜಾವರ ಶ್ರೀಗಳು

  • ಮಲೆನಾಡಿಗೆ ನಕ್ಸಲ್ ಪ್ಯಾಕೇಜ್, ನೀರಾವರಿ ಕ್ರಾಂತಿ, ದೇವಾಲಯಗಳ ಜೀರ್ಣೋದ್ಧಾರ

    ಮಲೆನಾಡಿಗೆ ನಕ್ಸಲ್ ಪ್ಯಾಕೇಜ್, ನೀರಾವರಿ ಕ್ರಾಂತಿ, ದೇವಾಲಯಗಳ ಜೀರ್ಣೋದ್ಧಾರ

    ಚಿಕ್ಕಮಗಳೂರು: ಶರಣಾಗತಿ ನಕ್ಸಲರಿಗೆ ನೀಡುವ ಶರಣಾಗತಿ ಪ್ಯಾಕೇಜ್‍ಗೆ ಪೇಜಾವರ ಶ್ರೀಗಳೇ ಕಾರಣಕರ್ತರು.

    ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರಿನಲ್ಲಿ ದಿಢೀರ್ ಉದ್ಭವವಾದ ರಕ್ತಸಿಕ್ತ ನಕ್ಸಲ್ ಚಳವಳಿ ಕಾರಾವಳಿ-ಮಲೆನಾಡಗರನ್ನು ಬೆಚ್ಚಿ ಬೀಳಿಸಿತ್ತು. ಮಲೆನಾಡಿಗರು ನೆಮ್ಮದಿಯಿಂದ ಓಡಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆಗ ಕರಾವಳಿ-ಮಲೆನಾಡಿನ ಅರಣ್ಯವಾಸಿಗಳ ಆಂತರಿಕ ಹಾಗೂ ಬೌದ್ಧಿಕ ಭಯವನ್ನು ಹೊಗಲಾಡಿಸಲು ಪೇಜಾವರರು ಆಳವಾದ ಅಧ್ಯಯನಕ್ಕೆ ಇಳಿದಿದ್ದರು.

    ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 70 ಗ್ರಾಮ ಪಂಚಾಯಿತಿಯ ಜನರೊಂದಿಗೆ ನಿಂತಿದ್ದರು. ಮಲೆನಾಡಿಗೆ ಮರಣಶಾಸನವಾಗಿದ್ದ ಕುದುರೆಮುಖ ನ್ಯಾಷನಲ್ ಪಾರ್ಕ್ ವಿರುದ್ಧ ಬಡವರ ಬೆನ್ನಿಗಿದ್ದರು. ನಕ್ಸಲ್ ಎನ್‍ಕೌಂಟರ್‍ಗಳಿಂದ ಬೆಚ್ಚಿ ಬಿದ್ದಿದ್ದ ಮಲೆನಾಡಿಗರು ಪ್ರತಿ ದಿನ ಆತಂಕದ ಬದುಕು ಸಾಗಿಸುತ್ತಿದ್ದರು. ಆ ಭಾಗದ ಶಾಂತಿ ಸ್ಥಾಪನೆಗೆ ಪೇಜಾವರ ಶ್ರೀಗಳು ಪಣ ತೊಟ್ಟಿದ್ದರು. ಸ್ವತಃ ಪಾದಯಾತ್ರೆ ಮೂಲಕ ಜನರಲ್ಲಿ ಧೈರ್ಯ ತುಂಬಿದ್ದರು. ಚಿಕ್ಕಮಗಳೂರಿನ ಕೆರೆಕಟ್ಟೆ, ಮುಂಡಗಾರು, ಮೆಣಸಿನ ಹಾಡ್ಯ ಸೇರಿದಂತೆ ನಾಲ್ಕು ಜಿಲ್ಲೆಯ 70 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಜನರಿಗೆ ಧೈರ್ಯ ತುಂಬಲು ನಡೆಸಿದ ಪಾದಯಾತ್ರೆಯಲ್ಲಿ ಶ್ರೀಗಳು ಯಶಸ್ವಿ ಕೂಡ ಆಗಿದ್ದರು.

    ದಿನದಿಂದ ದಿನಕ್ಕೆ ನಕ್ಸಲ್ ಚಟುವಟಿಕೆ ಗರಿಗೆದರಿದಾಗ ಸರ್ಕಾರದ ಮುಂದಿದ್ದದ್ದು ಎರಡೇ ಆಯ್ಕೆ. ಒಂದು ಎನ್‍ಕೌಂಟರ್, ಮತ್ತೊಂದು ಬಂಧಿಸಿ ಜೈಲಿಟ್ಟುವುದು. ಸರ್ಕಾರ ಕೂಡ ನಕ್ಸಲ್ ಸಮಸ್ಯೆ ಹಿಮ್ಮೆಟ್ಟಲು ಮುಂದಾಗಿತ್ತು. ಆಗ ಅವರಿಗೂ ಬದುಕಲು ಅವಕಾಶ ನೀಡಿ ಎಂದು ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರಕ್ಕೆ ಸಲಹೆ ನೀಡಿದ್ದು ಇದೇ ಪೇಜಾವರ ಶ್ರೀಗಳು. ಇವರ ಸಲಹೆಯ ಫಲದಿಂದ ದೇಶದಲ್ಲೇ ಮೊದಲ ಬಾರಿಗೆ ನಕ್ಸಲ್ ಪ್ಯಾಕೇಜ್ ಜಾರಿಗೆ ಬಂತು. ಶರಣಾಗುವ ನಕ್ಸಲರಿಗೆ ಸರ್ಕಾರ ನೀಡುವ ಪ್ಯಾಕೇಜಿಗೆ ಪೇಜಾವರರೇ ಕಾರಣಕರ್ತರಾದರು. ಕರ್ನಾಟಕದ ಬಳಿಕ ತಮಿಳುನಾಡು ಸರ್ಕಾರ ದೇಶದ ಎರಡನೇ ರಾಜ್ಯವಾಗಿ ಈ ಯೋಜನೆಯನ್ನ ಜಾರಿಗೆ ತಂದಿತು.

    ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಮಲೆನಾಡಿನ ಭಾಗದಲ್ಲಿ 28ಕ್ಕೂ ಹೆಚ್ಚು ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಿದ ಕೀರ್ತಿ ಪೇಜಾವರ ಶ್ರೀಗಳಿಗೆ ಸಲ್ಲುತ್ತದೆ. ಎಲ್ಲ ದೇವಾಲಯಗಳು ನಕ್ಸಲ್ ಪ್ರದೇಶದ್ದೆ. ಕೊಪ್ಪ ತಾಲೂಕಿನ ವರ್ಲೆ ಗ್ರಾಮದಲ್ಲಿ ಕುಮಾರಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ದೇವಸ್ಥಾನವನ್ನು ಅಗೆದು ದೇವರ ಮೂರ್ತಿಯನ್ನು ತೆಗೆದಾಗ ಅಲ್ಲಿ ಪೇಜಾವರರಿಗೆ ಸುಮಾರು 400 ವರ್ಷದ ಹಳೆಯ ಚಿನ್ನದ ನಾಣ್ಯ ಸಿಕ್ಕಿತ್ತು.

    ಸರ್ಕಾರ ಮಾಡಬೇಕಾದ ಕೆಲಸವನ್ನು ಪೇಜಾವರರೇ ಮಾಡಿದ್ದರು. ನಾಲ್ಕು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾವಿರಾರು ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಹೆಮ್ಮೆ ಪೇಜಾವರರದ್ದು. ಬಡ ಜನರ ಅಭಿವೃದ್ಧಿ, ಗ್ರಾಮಗಳ ಬೆಳವಣಿಗೆ, ಮಕ್ಕಳ ವಿದ್ಯಾಭ್ಯಾಸ, ಹಳ್ಳಿಗರ ಆರೋಗ್ಯ ಸೇರಿದಂತೆ ನೂರಾರು ಧರ್ಮಕಾರ್ಯ ಮಾಡಿದ್ದಾರೆ. ಇದೀಗ ಅವರ ಸಾವಿನಿಂದಾಗಿ ಮಲೆನಾಡಿಗೂ ಪೇಜಾವರರಿಗೂ ಇದ್ದ ಆತ್ಮೀಯತೆಯ ಕೊಂಡಿ ಕಳಚಿ ಬಿದ್ದಂತಾಗಿದೆ. ಅವರ ಹೆಜ್ಜೆ ಗುರುತುಗಳು ಮಲೆನಾಡಿಗರ ಅದರಲ್ಲೂ ಕುಗ್ರಾಮಗಳ ದಲಿತರ ಮನೆ-ಮನದಲ್ಲಿ ಎಂದೆಂದಿಗೂ ಚಿರಸ್ಥಾಯಿ.

  • ಪೇಜಾವರ ಶ್ರೀಗಳಿಗೆ ಮುಖವಾಡ ಇರಲಿಲ್ಲ – ಬರಗೂರು ರಾಮಚಂದ್ರಪ್ಪ

    ಪೇಜಾವರ ಶ್ರೀಗಳಿಗೆ ಮುಖವಾಡ ಇರಲಿಲ್ಲ – ಬರಗೂರು ರಾಮಚಂದ್ರಪ್ಪ

    ಧಾರವಾಡ: ಪೇಜಾವರ ಶ್ರೀಗಳ ನಿಧನ ನೋವಿನ ವಿಚಾರ, ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಂಬನಿ ಮಿಡಿದಿದ್ದಾರೆ.

    ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ವಿಚಾರಗಳಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದವು, ಸೈದ್ಧಾಂತಿಕವಾಗಿ ಅವರು ನನ್ನ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಆದರೆ ಸಾವಿಗೆ ಯಾವುದೇ ಸಿದ್ಧಾಂತವಿಲ್ಲ. ಈ ಸಂದರ್ಭದಲ್ಲಿ ಅವರನ್ನು ನೆನೆಯಬೇಕು, ಏಕೆಂದರೆ ಅನೇಕ ಚರ್ಚೆಗಳಿಗೆ, ಚಿಂತನೆಗಳಿಗೆ ಅವರು ಮುಖಾಮುಖಿಯಾದವರು. ಇಂಥ ಅವರ ವ್ಯಕ್ತಿತ್ವ ತುಂಬಾ ಮುಖ್ಯ ಎಂದರು.

    ವಿಚಾರವನ್ನು ಒಪ್ಪುವುದು ಬಿಡುವುದು ಬೇರೆ ಮಾತು. ಆದರೆ ಚರ್ಚೆ ಮಾಡುವ ಗುಣ ಬಹಳ ಮುಖ್ಯ. ಆ ಗುಣ ಅವರಲ್ಲಿ ಇತ್ತು. ಪೇಜಾವರ ಶ್ರೀಗಳಿಗೆ ಮುಖವಾಡ ಇರಲಿಲ್ಲ, ಚರ್ಚೆಗೆ ಅವರು ಎಲ್ಲ ವಿಚಾರಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದರು ಎಂದು ಶ್ರೀಗಳ ಕುರಿತು ವಿವರಿಸಿದರು.

    ವೈಚಾರಿಕ ವಾಗ್ವಾದಕ್ಕೆ ಇಳಿಯುತ್ತಿದ್ದರು. ಅಂಥ ಚರ್ಚೆಗೆ ಕಾರಣವಾದ ಅವರು ಇಂದು ಇಲ್ಲ. ಪೇಜಾವರ ಶ್ರೀಗಳು ನಂಬಿದ ಚೌಕಟ್ಟಿನೊಳಗೆ ಇಫ್ತಾರ್ ಕೂಟ ಏರ್ಪಡಿಸಿದ್ದರು. ಅವರ ಈ ಧೈರ್ಯವನ್ನು ಇಂದು ನೆನಪಿಸಿಕೊಳ್ಳಬೇಕು. ಬೇರೆ ಧರ್ಮವನ್ನು ಗೌರವಿಸಿದ ಅವರಿಗೆ ತುಂಬು ಹೃದಯದಿಂದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಬರಗೂರು ಈ ವೇಳೆ ಹೇಳಿದರು.

  • ಪೇಜಾವರ ಶ್ರೀಗಳದ್ದು ಪುಟ್ಟ ದೇಹ, ದಿಟ್ಟ ಮಾತಾಗಿತ್ತು: ಗವಿಮಠದ ಸ್ವಾಮೀಜಿ

    ಪೇಜಾವರ ಶ್ರೀಗಳದ್ದು ಪುಟ್ಟ ದೇಹ, ದಿಟ್ಟ ಮಾತಾಗಿತ್ತು: ಗವಿಮಠದ ಸ್ವಾಮೀಜಿ

    ಕೊಪ್ಪಳ: ಪೇಜಾವರ ಶ್ರೀಗಳು ಅಸ್ತಂಗತರಾಗಿರುವುದಕ್ಕೆ ಕೊಪ್ಪಳದ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

    ಕೊಪ್ಪಳದಲ್ಲಿ ಮಾತನಾಡಿದ ಸ್ವಾಮೀಜಿ, ಪೇಜಾವರ ಮಠದ ಶ್ರೀಗಳು ವ್ಯಕ್ತಿತ್ವ ಆಧರಣಿಯ ಮತ್ತು ಅನುಕರಣಿಯವಾಗಿದೆ. ಅವರದು ಪುಟ್ಟ ದೇಹ, ದಿಟ್ಟ ಮಾತಾಗಿತ್ತು. ಮುಖದಲ್ಲಿ ಸದಾ ದೈವಿ ಕಳೆ, ಮನದಲ್ಲಿ ಸದಾ ದೇಶಪ್ರೇಮ ಇತ್ತು ಎಂದು ನೆನೆದರು.

    ವಿಶ್ವೇಶತೀರ್ಥ ಶ್ರೀಪಾದರು ಜನರ ಕಣ್ಣಿಂದ ದೂರ ಆಗಿರಬಹುದು, ಮಣ್ಣಲ್ಲಿ ಮರೆಯಾಗಬಹುದು ಲಕ್ಷ ಲಕ್ಷ ಭಕ್ತರ ಹೃದಯದಿಂದ ದೂರ ಆಗುವ ವ್ಯಕ್ತಿತ್ವ ಅವರದ್ದಲ್ಲ. ಆಧ್ಯಾತ್ಮ ಚೇತನ ಅಗಲಿದ್ದು ಈ ನಾಡಿಗೆ ತುಂಬದ ಹಾನಿಯಾಗಿದೆ. ಅವರ ಆದರ್ಶಗಳು, ಆಲೋಚನೆಗಳು ನಮಗೆ ಬೆಳಕಾಗಲಿವೆ ಎಂದರು.

    ಪೇಜಾವರ ಶ್ರೀಗಳು 2012ರ ಜನೇವರಿ 11ರಂದು ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಉದ್ಘಾಟನೆ ನೆರವೆರಿಸಿದ್ದರು. ಜಾತ್ರಾ ಮಹೋತ್ಸವ ನೋಡಿ ತುಂಬ ಸಂತೋಷ ಪಟ್ಟಿದ್ದರು. ನಮ್ಮ ಜಾತ್ರೆಯನ್ನು ನೋಡಿ ಪೂರಿ ಜಗನ್ನಾಥ್ ಜಾತ್ರೆಗೆ ಹೋಲಿಸಿ ನಮಗೆಲ್ಲ ಮಾರ್ಗದರ್ಶನ ಮಾಡಿದ್ದರು. ನಮ್ಮೆಲ್ಲರಿಗೂ ಸಂತೋಷ ಪಡುವ ಮಾತನಾಡಿ ನಮಗೆಲ್ಲ ಹುರಿದುಂಬಿಸಿದ್ದು ಇನ್ನೂ ಸ್ಮರಣೆಯಲ್ಲಿದೆ ಎಂದು ನೆನೆದರು.

  • ಕೈಗಾ ಘಟಕ ನಿರ್ಮಾಣಕ್ಕೆ ವಿರೋಧಿಸಿ ಕೇಂದ್ರಕ್ಕೆ ಖಡಕ್ ಸಂದೇಶ ಕೊಟ್ಟಿದ್ದ ಶ್ರೀಗಳು

    ಕೈಗಾ ಘಟಕ ನಿರ್ಮಾಣಕ್ಕೆ ವಿರೋಧಿಸಿ ಕೇಂದ್ರಕ್ಕೆ ಖಡಕ್ ಸಂದೇಶ ಕೊಟ್ಟಿದ್ದ ಶ್ರೀಗಳು

    ಕಾರವಾರ: ಶತಮಾನದ ದಾರ್ಶನಿಕ ಸಂತ ಪೇಜಾರವ ಶ್ರೀಗಳು ಅಸ್ತಂಗತರಾಗಿರುವುದಕ್ಕೆ ಎಲ್ಲೆಡೆ ಶೋಕ ವ್ಯಕ್ತವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅಪಾರ ಭಕ್ತವೃಂದ ಹೊಂದಿದ್ದ ಅವರು ಜಿಲ್ಲೆಯ ಜನರು ಮತ್ತು ಇಲ್ಲಿನ ಮಠ ಮಂದಿರಗಳ ಜೊತೆಯಲ್ಲಿ ಸದಾ ಓಡನಾಟವನ್ನೂ ಸಹ ಶ್ರೀಗಳು ಹೊಂದಿದ್ದರು.

    ಕೈಗಾ ಹೋರಾಟ:
    ಉತ್ತರ ಕನ್ನಡ ಜಿಲ್ಲೆಗೆ ಪೇಜಾವರ ಶ್ರೀಗಳು ಕೈಗಾ ವಿಚಾರದಲ್ಲಿ ಬಹುದೊಡ್ಡ ಬೆಂಬಲ ನೀಡಿದ್ದರು. ಪರಿಸರ ಹೋರಾಟದಲ್ಲಿ ಮೊದಲಿನಿಂದಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದರು. ಕೈಗಾದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 5 ಮತ್ತು 6ನೇ ಘಟಕಕ್ಕೆ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಇತ್ತೀಚಿಗೆ ನಡೆದ ಕೈಗಾ ವಿರೋಧಿ ಸಭೆಯಲ್ಲೂ ಪಾಲ್ಗೊಂಡು ಕೇಂದ್ರಕ್ಕೆ ನೇರವಾದ ಸಂದೇಶವನ್ನು ಶ್ರೀಗಳು ರವಾನಿಸಿದ್ದರು. ಅದಕ್ಕಾಗಿ ತಾವು ಪ್ರಾಣ ಕೊಡಲೂ ಸಿದ್ಧ ಎಂದು ಹೇಳಿದ್ದರು. ಇದನ್ನೂ ಓದಿ: ದೆಹಲಿಯ ಕೊರೆಯುವ ಚಳಿ ನಡುವೆ ಪೇಜಾವರ ಶ್ರೀಗಳ ಪೂಜೆ

    ಜಿಲ್ಲೆಯ ಶಿರಸಿ ತಾಲೂಕಿನ ವಾದಿರಾಜ ಮಠ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿದೆ. ಉಡುಪಿಯಲ್ಲಿ ಮಠವನ್ನು ಹೊಂದಿದ್ದರೂ ಸೋಂದಾದಲ್ಲಿ ವಾದಿರಾಜ ಮಠದ ಮೂಲ ಮಠವಿದೆ. ಶ್ರೀಗಳೂ ಸಹ ಅಲ್ಲೆ ಇರುವ ಕಾರಣ ಪೇಜಾವರ ಶ್ರೀಗಳು ಸಾಕಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು. ಅಲ್ಲಿ ಪೂಜೆ ಪುನಸ್ಕಾರಗಳನ್ನೂ ಸಹ ನೆರವೇರಿಸಿದ್ದರು. ಇದನ್ನೂ ಓದಿ: ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಹಸ್ತ – ದಲಿತರ ಎದುರೇ ಕೃಷ್ಣನ ಪೂಜೆ

    ಶಿರಸಿಯ ರಾಘವೇಂದ್ರ ಮಠದಲ್ಲಿ ಪೇಜಾವರ ಶ್ರೀಗಳು ತಂಗುತ್ತಿದ್ದರು. ರಾಘವೇಂದ್ರನ ಭಕ್ತರಾಗಿರುವ ಅವರು ಶಿರಸಿಯ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ಅಲ್ಲೇ ವಾಸ ಮಾಡುತ್ತಿದ್ದರು. ಕೆಲವೊಮ್ಮೆ ಸನ್ನಿಧಿಯ ಕಟ್ಟೆಯ ಮೇಲೂ ನಿದ್ರಿಸಿದ್ದರು ಎಂದು ಮಠದ ಹಿರಿಯರು ತಿಳಿಸಿದ್ದಾರೆ.

    ಇಷ್ಟೇ ಅಲ್ಲದೆ ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ಜೊತೆಯಲ್ಲಿ ಸಾಕಷ್ಟು ಆತ್ಮೀಯತೆಯನ್ನು ಪೇಜಾವರ ಶ್ರೀಗಳು ಹೊಂದಿದ್ದರು. ಸ್ವರ್ಣವಲ್ಲಿ ಶ್ರೀಗಳ ಭಗವದ್ಗೀತಾ ಅಭಿಯಾನದಲ್ಲಿ ಅವರು ಪಾಲ್ಗೊಂಡಿದ್ದರು. ಇತ್ತೀಚಿಗೆ ಚಿತ್ರದುರ್ಗದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಕಾರ್ಯಕ್ರದಲ್ಲಿ ಪೇಜಾವರ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಅಲ್ಲದೇ ಉಡುಪಿಯಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಸ್ವರ್ಣವಲ್ಲೀ ಶ್ರೀಗಳು ಭಾಗವಹಿಸಿದ್ದರು.

  • ದೆಹಲಿಯ ಕೊರೆಯುವ ಚಳಿ ನಡುವೆ ಪೇಜಾವರ ಶ್ರೀಗಳ ಪೂಜೆ

    ದೆಹಲಿಯ ಕೊರೆಯುವ ಚಳಿ ನಡುವೆ ಪೇಜಾವರ ಶ್ರೀಗಳ ಪೂಜೆ

    – ದೆಹಲಿಯ ಕೃಷ್ಣ ಮಠದಲ್ಲಿ ನೀರವ ಮೌನ

    ನವದೆಹಲಿ: ಪೇಜಾವರ ಶ್ರೀಗಳು ತಮ್ಮ ಪೂಜೆಯಿಂದಲೇ ಸಾಕಷ್ಟು ಪ್ರಖ್ಯಾತಿ ಆಗಿದ್ದವರು. ದಿನದಲ್ಲಿ ಎಂತಹದ್ದೇ ಪ್ರಮುಖ ಕೆಲಸವಿದ್ದರೂ ಶ್ರೀಕೃಷ್ಣನ ಪೂಜೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಪೂಜೆಯ ಬಳಿಕವೇ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದರು.

    ದೆಹಲಿಯ ಕೊರತೆಯುವ ಚಳಿಯಲ್ಲೂ ನಡುಗುತ್ತಾ ಪೇಜಾವರ ಶ್ರೀಗಳು ಮಠದಲ್ಲಿ ಪೂಜೆ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಕಳೆದ ಡಿಸೆಂಬರ್ 5 ರಂದು ದೆಹಲಿಯಲ್ಲಿ ರಾಜ್ಯದ ಸಂಸದರಿಗೆ ಸನ್ಮಾನ ಕಾರ್ಯಕ್ರಮ ಹಿನ್ನೆಲೆ ಪೇಜಾವರ ಶ್ರೀಗಳು ಮಠಕ್ಕೆ ಬಂದಿದ್ದರು. ಈ ವೇಳೆ ಬೆಳ್ಳಂಬೆಳಗ್ಗೆ ಕೊರತೆಯುವ ಚಳಿಯ ನಡುವೆ ಶ್ರೀಗಳು ಪೂಜೆ ಮಾಡುತ್ತಿದ್ದರು.

    ತೀವ್ರ ಚಳಿಯ ಹಿನ್ನೆಲೆ ಮಠದ ಸಿಬ್ಬಂದಿ ಪೂಜೆ ತಡ ಮಾಡಿದ್ದರು. ಆದರೆ ಸ್ವಾಮೀಜಿಗಳು ಪ್ರತಿದಿನದ ಸಮಯದಂತೆ ಬೆಳಗ್ಗೆಯೇ ಪೂಜೆ ಮಾಡಲೇ ಬೇಕು ಎಂದು ಹಠ ಮಾಡಿ ಪೂಜೆಗೆ ವ್ಯವಸ್ಥೆ ಮಾಡಿಸಿದ್ದರು. ತಟ್ಟೆಯಲ್ಲಿ ಹನುಮಂತನ ಮೂರ್ತಿ ಇಟ್ಟು ಹೂವು ಹಾಕಿ ಪೂಜೆ ಮಾಡಿದ್ದರು. ಈ ವೇಳೆ ಕೊರೆಯುವ ಚಳಿಗೆ ಅವರ ಮೈ ನಡಗುತ್ತಿರುವುದು ವಿಡಿಯೋದಲ್ಲಿ ನೋಡಬಹುದು.

    ನೀರವ ಮೌನ:
    ಪೇಜಾವರ ಶ್ರೀಗಳ ನಿಧನ ಸುದ್ದಿ ಬೆನ್ನೆಲೆ ದೆಹಲಿ ಶ್ರೀಕೃಷ್ಣ ಮಠದಲ್ಲಿ ದುಃಖದ ಛಾಯೆ ಆವರಿಸಿದೆ. ಮಠದ ಭಕ್ತರು ಮೌನವಾಗಿದ್ದು ಶ್ರೀಗಳ ಅಂತಿಮ ದರ್ಶನಕ್ಕೆ ಬೆಂಗಳೂರಿಗೆ ತೆರಳುತ್ತಿದ್ದಾರೆ. ಸದ್ಯ ದೆಹಲಿಯ ಮಠದಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿಗಳಿದ್ದು ಎಲ್ಲರೂ ಮೌನಕ್ಕೆ ಶರಣರಾಗಿದ್ದಾರೆ.

    ಶ್ರೀಗಳ ನಿಧನ ಹಿನ್ನೆಲೆ ಮಠದಲ್ಲಿ ಶಾಂತಿ ಮಂತ್ರ ಪಟಿಸಲಾಯಿತು ಮತ್ತು ಮೌನಚಾರಣೆ ಮಾಡುವ ಮೂಲಕ ಶ್ರೀಗಳ ಆತ್ಮಕ್ಕೆ ಶಾಂತಿ ಕೋರಲಾಗಿದೆ. ವಿದ್ಯಾರ್ಥಿ ದೆಸೆಯಿಂದ ಪೇಜಾವರ ಶ್ರೀಗಳ ಅನುಯಾಯಿಗಳಾಗಿದ್ದ ಭಕ್ತರದಲ್ಲಿ ದುಃಖ ಮಡುಗಟ್ಟಿತ್ತು. ಪಬ್ಲಿಕ್ ಟಿವಿ ಜೊತೆಗೆ ಅವರು ತಮ್ಮ ನೆನಪುಗಳನ್ನು ಹಂಚಿಕೊಂಡರು.

    ದೆಹಲಿ ಶ್ರೀಕೃಷ್ಣ ಮಠದ ಭಕ್ತರೊಬ್ಬರು ಮಾತನಾಡಿ, ಶ್ರೀಗಳು ಅಗಲಿಕೆ ದುಃಖ ತಂದಿದೆ. ಅವರು ಅನೇಕ ವಿದ್ಯಾರ್ಥಿ ನಿಯಲಗಳನ್ನು ಕಟ್ಟಿಸಿ ವಿದ್ಯೆ ಹಾಗೂ ಅನ್ನದಾನ ಮಾಡಿದ್ದಾರೆ. ಅನೇಕ ಗ್ರಂಥಗಳನ್ನು ರಚಿಸಿ ಸಂಸ್ಕೃತವನ್ನು ಸಾಮಾನ್ಯರಿಗೂ ಅರ್ಥವಾಗಲು ಶ್ರಮಿಸಿದರು. ಅನೇಕ ಪಂಡಿತರನ್ನು ಶ್ರೀಗಳು ನಾಡಿಗೆ ಕೊಟ್ಟಿದ್ದಾರೆ.

    ಪೇಜಾವರ ಶ್ರೀಗಳು ಭಕ್ತರ ಅನುಕೂಲಕ್ಕಾಗಿ ದೆಹಲಿಯ ವಸಂತ್ ಕುಂಜ್‍ನಲ್ಲಿ ಶ್ರೀಕೃಷ್ಣ ಮಠವನ್ನು 2003 ರಲ್ಲಿ ನಿರ್ಮಿಸಿದ್ದರು. ದೇಶದ ಬೇರೆ ಬೇರೆ ಕಡೆಯಿಂದ ಬರುವ ಭಕ್ತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗಿದೆ. 2010ರಲ್ಲಿ ಮಠದ ಅಂಗಳದಲ್ಲೇ ಶ್ರೀಕೃಷ್ಣ ದೇವಸ್ಥಾನ ಕಟ್ಟಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು.

  • ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಹಸ್ತ – ದಲಿತರ ಎದುರೇ ಕೃಷ್ಣನ ಪೂಜೆ

    ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಹಸ್ತ – ದಲಿತರ ಎದುರೇ ಕೃಷ್ಣನ ಪೂಜೆ

    ಚಿಕ್ಕಮಗಳೂರು: ಕೃಷ್ಣನ ಪರಮಭಕ್ತ ಪೇಜಾವರ ಶ್ರೀಗಳು ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಯ ಕನಸು ಕಂಡಿದ್ದರು. ಮಲೆನಾಡಿನ ಕುಗ್ರಾಮಗಲ್ಲಿ ಭೇಟಿ ನೀಡಿ ವಾಸ್ತವ್ಯ ಹೂಡಿದ್ದ ಶ್ರೀಗಳು ಮಲೆನಾಡಿಗೆ ಹಲವು ಕೊಡುಗೆಗಳನ್ನ ನೀಡಿದ್ದಾರೆ.

    ಜಿಲ್ಲೆಯ ಕೊಪ್ಪ ತಾಲೂಕಿನ ದಲಿತರ ಕುಗ್ರಾಮ ಮೆಣಸಿನಹಾಡ್ಯದಲ್ಲಿ ವಾಸ್ತವ್ಯ ಮಾಡಿದ್ದ ಪೇಜಾವರ ಶ್ರೀಗಳು ಬೆಳಗ್ಗೆ ಹಳ್ಳದ ಪಕ್ಕದಲ್ಲೇ ಕೃಷ್ಣನ ಪೂಜೆ ಮಾಡಿದ್ದರು. ಸ್ಥಳಿಯರ ಪ್ರಕಾರ ಋಷಿಮುನಿಗಳು ತಪ್ಪಸ್ಸು ಮಾಡಿದ್ದ ಜಾಗ, ಋಷಿಮುನಿಗಳ ಪರಂಪರೆ, ಸನ್ಯಾಸಿಗಳ ಸಂಸ್ಕೃತಿಯೇ ಕಾಡು ಎಂದು ಹಳ್ಳದಲ್ಲಿ ತಾವು ತಂದಿದ್ದ ಪೂಜಾ ಸಾಮಾಗ್ರಿಗಳನ್ನ ತೊಳೆದು ಅಲ್ಲೇ ಶ್ರೀಗಳು ಪೂಜೆ ಮಾಡಿದ್ದರು. ಕೃಷ್ಣನಿಗೆ ಎಡೆ ಇಡಲು ಅಲ್ಲೇ ಅನ್ನವನ್ನೂ ತಯಾರಿಸಿದ್ದರು. ಅವರ ಪೂಜಾ-ಕೈಂಕರ್ಯ ಎಲ್ಲಾ ಮುಗಿಯೋವರೆಗೂ ಪೂಜೆಯನ್ನ ನೋಡಲು ದಲಿತರಿಗೆ ಅವಕಾಶ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು.

    ಮಲೆನಾಡಿನಲ್ಲಿ ಶ್ರೀಗಳು:
    ಕಾಫಿನಾಡು ಹಾಗೂ ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶಕ್ಕೂ ಪೇಜಾವರ ಶ್ರೀಗಳಿಗೂ ಅವಿನಾಭಾವ ಸಂಬಂಧವಿತ್ತು. ಬಡವರು, ದೀನ-ದಲಿತರು ಹಾಗೂ ಹಿಂದುಳಿದ ವರ್ಗದವರ ಕಷ್ಟಕ್ಕೆ ನೆರವಾಗುತ್ತಿದ್ದ ಪೇಜಾವರ ಶ್ರೀಗಳು, ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿಯ ಕನಸು ಕಂಡು ಸಹಾಯ ಹಸ್ತ ನೀಡಿದ್ದರು.

    ದೂರದಿಂದ ಕುಡಿಯೋ ನೀರನ್ನ ಹೊತ್ತು ತರುತ್ತಿದ್ದ ಹಿಂದುಳಿದ ವರ್ಗದ ಕುಟುಂಬಸ್ಥರಿಗೆ ಪೈಪ್ ಲೈನ್ ಮೂಲಕ ನೀರಿನ ಸೌಲಭ್ಯ ಕಲ್ಪಿಸಿಕೊಳ್ಳಲು ಹಣದ ನೆರವನ್ನು ಶ್ರೀಗಳು ನೀಡಿದ್ದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಗ್ಗತ್ತಲಲ್ಲಿದ್ದ ಕುಟುಂಬಗಳಿಗೆ ಶ್ರೀಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಾಯ ಮಾಡಿದ್ದರು. ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾಭ್ಯಾಸಕ್ಕೂ ಪೇಜಾವರ ಶ್ರೀಗಳು ನೆರವಾಗಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣದ ನೆರವು ನೀಡಿದ್ದರು. ಮಲೆನಾಡಿನ ನಕ್ಸಲ್ ಪೀಡಿತ ಹಾಗೂ ಕುಗ್ರಾಮಗಳ ಅಭಿವೃದ್ಧಿಯ ಕನಸು ಕಂಡಿದ್ದ ಶ್ರೀಗಳು ಮಲೆನಾಡಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

    ಪೇಜಾವರ ಶ್ರೀಗಳ ಅಗಲಿಕೆಗೆ ಪಂಚಪೀಠಗಳ ಜಗದ್ಗುರು ಬಾಳೆಹೊನ್ನೂರಿನ ವೀರ ಸೋಮೇಶ್ವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ. ಪೇಜಾವರ ಶ್ರೀಗಳು, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಷ್ಟ್ರಾಭಿಮಾನದ ಸಂಸ್ಕೃತಿ ಸಂವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರ ಎಲ್ಲಾ ಆಶಯಗಳು ಸಕಾರಗೊಳ್ಳಲಿ ಎಂದು ಸಂತಾಪ ಸೂಚಿಸಿದರು.

  • ಹೊಳೆ ಆಂಜನೇಯಸ್ವಾಮಿ ದೇಗುಲದೊಂದಿಗೆ ಅವಿನಾಭಾವ ನಂಟು ಹೊಂದಿದ್ದ ಪೇಜಾವರ ಶ್ರೀಗಳು

    ಹೊಳೆ ಆಂಜನೇಯಸ್ವಾಮಿ ದೇಗುಲದೊಂದಿಗೆ ಅವಿನಾಭಾವ ನಂಟು ಹೊಂದಿದ್ದ ಪೇಜಾವರ ಶ್ರೀಗಳು

    ಮಂಡ್ಯ: ಪುರಾಣ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೂ ಉಡುಪಿಯ ಪೇಜಾವರ ಮಠದ ಪೀಠಾಧ್ಯಕ್ಷ ಶ್ರೀ ವಿಶ್ವೇಶತೀರ್ಥ ಶ್ರೀಗಳಿಗೂ ಅವಿನಾಭಾವ ಸಂಬಂಧವಿದ್ದು, ಹಲವು ವರ್ಷಗಳಿಂದ ಹೊಳೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದರು.

    ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಹೊರ ವಲಯದಲ್ಲಿ ವ್ಯಾಸರಾಜರು ಮತ್ತು ಶ್ರೀಪಾದ ರಾಜರು ಪ್ರತಿಷ್ಠಾಪಿಸಿರುವ ಹೊಳೆ ಆಂಜನೇಯಸ್ಬಾಮಿ ದೇವಾಲಯವಿದೆ. ಈ ದೇಗುಲಕ್ಕೆ ಪೇಜಾವರ ಶ್ರೀಗಳು ಹಲವು ಬಾರಿ ಭೇಟಿ ನೀಡಿದ್ದರು. 2004ರಲ್ಲಿ ಶ್ರೀಗಳು ಮೊದಲ ಬಾರಿಗೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ 2014 ದೇವಾಲಯದ ಸಮೀರ ರಥ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿ ಭಕ್ತರಿಗೆ ಆಶೀರ್ವದಿಸಿದ್ದರು. ಇದನ್ನೂ ಓದಿ: ಹರ್ನಿಯಾ ಆಪರೇಷನ್ ನಡೆದಾಗಲೇ ಕೊನೆಯಾಸೆ ಬಿಚ್ಚಿಟ್ಟಿದ್ದ ಪೇಜಾವರ ಶ್ರೀ

    2015ರಲ್ಲಿ ತುಲಾಭಾರ ಕಾರ್ಯಕ್ರಮದಲ್ಲಿ ಹಾಗೂ 2018ರಲ್ಲಿ ಸೋಂದೇ ಶ್ರೀಗಳ ಜೊತೆ ಹೊಳೆ ಆಂಜನೇಯಸ್ವಾಮಿ ದರ್ಶಕ್ಕೆ ಶ್ರೀಗಳು ಆಗಮಿಸಿದ್ದರು. ದೇವಾಲಯಕ್ಕೆ ಭೇಟಿ ನೀಡಿದ್ದಾಗಲೆಲ್ಲ ಸ್ವತಃ ತಾವೇ ಆಂಜನೇಯನಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ ಪೇಜಾವರಿ ಶ್ರೀಗಳು ಪೂಜೆ ಸಲ್ಲಿಸುತ್ತಿದ್ದರು. ಹೀಗಾಗಿ ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಪೇಜಾವರ ಶ್ರೀಗಳಿಗೆ ಬೆಳ್ಳಿ ಸಿಂಹಾಸನ ಕೊಡಬೇಕೆಂದು ದೇವಾಲಯದ ಸಿಬ್ಬಂದಿ ನಿಶ್ಚಯಿಸಿದ್ದರು. ಆದರೆ ಈ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಶ್ರೀಗಳು ಎಲ್ಲರನ್ನು ಅಗಲಿ ಕೃಷ್ಣೈಕ್ಯರಾಗಿದ್ದಾರೆ.

  • ವ್ಹೀಲ್ ಚೇರ್‌ನಲ್ಲಿ ಕೆಆರ್‌ಎಸ್‌ಗೆ ಭೇಟಿ ನೀಡಿದ್ದ ಶ್ರೀಗಳು

    ವ್ಹೀಲ್ ಚೇರ್‌ನಲ್ಲಿ ಕೆಆರ್‌ಎಸ್‌ಗೆ ಭೇಟಿ ನೀಡಿದ್ದ ಶ್ರೀಗಳು

    ಮಂಡ್ಯ: ಹಲವು ವರ್ಷಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಕೆಲವೇ ದಿನಗಳಲ್ಲಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಉಡುಪಿಯ ಪೇಜಾವರ ಶ್ರೀಗಳು ವ್ಹೀಲ್ ಚೇರ್‌ನಲ್ಲಿ ಕೆಆರ್‌ಎಸ್‌ಗೆ ಬಂದು ಕಾವೇರಿ ತಾಯಿಗೆ ನಮಿಸಿದ್ದರು.

    ಆಗಸ್ಟ್ ತಿಂಗಳಿನಲ್ಲಿ ಅಚ್ಚರಿಯ ರೀತಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಡ್ಯಾಂ ಭರ್ತಿಯಾಗುವುದರ ಮೂಲಕ ಮಂಡ್ಯ, ಮೈಸೂರು ಬೆಂಗಳೂರು ಭಾಗದ ಲಕ್ಷಾಂತರ ಜನರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಈ ನಿಟ್ಟಿನಲ್ಲಿ ಉಡುಪಿಯ ಪೇಜಾವರ ಶ್ರೀಗಳು ತಮ್ಮ ಆರೋಗ್ಯದ ಸ್ಥಿತಿ ಚೆನ್ನಾಗಿ ಇಲ್ಲದಿದ್ದರೂ ಸಹ ಆಗಸ್ಟ್ 11 ರಂದು ಕೆಆರ್‌ಎಸ್‌ನ ವೀಕ್ಷಣೆ ಮಾಡಿದ್ದರು.

    ತಮ್ಮ ಹಿತೈಷಿಗಳ ಜೊತೆ ಕೆಆರ್‌ಎಸ್‌ ಭೇಟಿ ನೀಡಿದ್ದ ಶ್ರೀಗಳು, ಕೆಆರ್‌ಎಸ್‌ ಡ್ಯಾಂನ ಮೇಲೆ ವ್ಹೀಲ್ ಚೇರ್‌ನಿಂದಲೇ ಒಂದು ರೌಂಡ್ ಹಾಕಿದ್ದರು. ನಂತರ ವರುಣ ಶಾಂತನಾಗಿ ಜನ ಜೀವನ ಸುಗುಮವಾಗುವಂತೆ ಮತ್ತು ಕಾವೇರಿ ತಾಯಿ ಸದಾ ಉಕ್ಕಿ ಹರಿಯುತ್ತಿರಲಿ ಎಂದು ಕಾವೇರಿ ತಾಯಿಯನ್ನು ಪ್ರಾರ್ಥನೆ ಮಾಡಿದ್ದರು.

    ಈ ಬಾರಿ ಕೆಆರ್‌ಎಸ್‌ ಜಲಾಶಯ ಭರ್ತಿ ಆಗುವುದು ಸಂದೇಹ ಎಂಬ ಸ್ಥಿತಿ ನಿರ್ಮಾಣವಾಗಿದ್ದ ವೇಳೆ, ವರುಣನ ಕೃಪೆಯಿಂದ ಕೆಆರ್‌ಎಸ್‌ ಜಲಾಶಯ ಕೆಲವೇ ದಿನಗಳಲ್ಲಿ ಭರ್ತಿಯಾಗಿತ್ತು. ಇದಲ್ಲದೇ ಆ ವೇಳೆ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಟ್ಟಿದ್ದರಿಂದ, ಜಲಾನಯನ ಪ್ರದೇಶದಲ್ಲಿ ಪ್ರವಾಹ ಉಂಟಾಗಿತ್ತು.

  • ಬಾಲ್ಯದಿಂದಲೂ ಪೇಜಾವರ ಶ್ರೀಗಳ ಜೊತೆ ತುಂಬಾ ಒಡನಾಟವಿತ್ತು: ಸುಬುಧೇಂದ್ರತೀರ್ಥ ಸ್ವಾಮೀಜಿ

    ಬಾಲ್ಯದಿಂದಲೂ ಪೇಜಾವರ ಶ್ರೀಗಳ ಜೊತೆ ತುಂಬಾ ಒಡನಾಟವಿತ್ತು: ಸುಬುಧೇಂದ್ರತೀರ್ಥ ಸ್ವಾಮೀಜಿ

    ರಾಯಚೂರು: ಪೇಜಾವರ ಶ್ರೀಗಳ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ. ಅವರು ಕೃಷ್ಣೈಕ್ಯರಾಗಿರುವ ಬಗ್ಗೆ ತಿಳಿದು ಆಘಾತವಾಗಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಗಳು ಕಂಬನಿ ಮಿಡಿದಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸುಬುಧೇಂದ್ರತೀರ್ಥ ಶ್ರೀಗಳು, ಪೇಜಾವರ ಶ್ರೀಗಳ ಅಗಲಿಕೆಯಿಂತ ಆಘಾತವಾಗಿದೆ. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ. ಅವರು ಕಿರಿಯ ವಯಸ್ಸಿನಲ್ಲೇ ಸಾಮಾಜಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದರು. ಅಲ್ಲದೆ ದೇಶದ ವಿವಿಧ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಧಾರ್ಮಿಕವಾಗಿ ಸಲಹೆ ಸೂಚನೆಗಳನ್ನ ನೀಡಿ ದೇಶದ ಅಭಿವೃದ್ಧಿಗೆ, ಒಳಿತಿಗೆ ಶ್ರೀಗಳು ತಮ್ಮ ಅಮೂಲ್ಯ ಸೇವೆ ಸಲ್ಲಿಸಿರುವವರು ಎಂದು ಪೇಜಾವರ ಶ್ರೀಗಳ ಸೇವೆಯನ್ನು ನೆನೆದರು. ಇದನ್ನೂ ಓದಿ: ಹರ್ನಿಯಾ ಆಪರೇಷನ್ ನಡೆದಾಗಲೇ ಕೊನೆಯಾಸೆ ಬಿಚ್ಚಿಟ್ಟಿದ್ದ ಪೇಜಾವರ ಶ್ರೀ

    ಮಂತ್ರಾಲಯ ಮಠಕ್ಕೂ ಪೇಜಾವರ ಮಠಕ್ಕೂ ಸುಮಾರು 5 ತಲೆಮಾರಿನ ಸಂಬಂಧವಿದೆ. ನಮ್ಮ ಬಾಲ್ಯದಿಂದಲೂ ಪೇಜಾವರ ಶ್ರೀಗಳ ಜೊತೆ ತುಂಬಾ ಒಡನಾಟವಿತ್ತು. ಪೂರ್ವಾಶ್ರಮದಲ್ಲಿದ್ದಾಗ ಅವರ ಜೊತೆ ಅನುಬಂಧ ಹೆಚ್ಚಿತ್ತು. ಅವರ ಈ ಇಹಲೋಕ ಯಾತ್ರೆ ಪೂರ್ಣವಾಗಿರುವುದನ್ನ ಜೀರ್ಣಿಸಿಕೊಳ್ಳಲು ನಮಗೆ ಕಷ್ಟವಾಗುತ್ತಿದೆ ಎಂದು ದು:ಖ ವ್ಯಕ್ತಪಡಿಸಿದರು. ಇದನ್ನೂ ಓದಿ: 8ನೇ ವಯಸ್ಸಿನಲ್ಲಿ ದೀಕ್ಷೆ, ದಲಿತ ಪರ ಹೋರಾಟ, 5ನೇ ಬಾರಿ ಪರ್ಯಾಯ ಪೀಠ ಏರಿ ಸಾಧನೆ

    ಪೇಜಾವರ ಶ್ರೀಗಳು ಇಲ್ಲದೇ ಶ್ರೀ ಮಠದ ಕಾರ್ಯಕ್ರಮ ಮಾಡಿದ್ದೇ ಇಲ್ಲ. ಕೆಲ ದಿನಗಳ ಹಿಂದೆ ರಾಯಚೂರಿನಲ್ಲಿ ನಡೆದ ಕಾರ್ಯಕ್ರಮಗಳಿಗೆ ಪೇಜಾವರ ಶ್ರೀಗಳು ಮುಖ್ಯ ಅತಿಥಿಗಳಾಗಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ವೇಳೆ ಸಮಾಜದ ಬಗ್ಗೆ ಅನೇಕ ಹಿತ ನುಡಿಗಳನ್ನು ನಮಗೆ ತಿಳಿಸಿದ್ದರು. ಅವರು ಯಾವಾಗಲೂ ಹಿಂದೂ ಸಂಘಟನೆ, ಸಮಾಜದ ವಿಚಾರದಲ್ಲಿ ನಮಗೆ ನೀವು ಉತ್ತರಾಧಿಕಾರಿಗಳು ಇದ್ದಂತೆ ಎಂದು ಅವರು ಬಹಿರಂಗವಾಗಿ ಘೋಷಿಸಿದ್ದನ್ನ ಸುಬುಧೇಂದ್ರತೀರ್ಥ ಶ್ರೀಗಳು ಸ್ಮರಿಸಿದರು.

    ಇಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಅವರು ಉಡುಪಿಗೆ ಹೋದಾಗ ಶ್ರೀಗಳಿಗೆ ಅನಾರೋಗ್ಯ ಕಾಡಿತ್ತು. ಆಗ ನಾವು ಕೂಡ ಉಡುಪಿ ಮಠಕ್ಕೆ ತೆರೆಳಿ ಶ್ರೀಗಳನ್ನು ಭೆಟಿ ಮಾಡಿ, ಆರೋಗ್ಯ ವಿಚಾರಿಸಿದ್ದೆವು. ರಾಜ್ಯದಲ್ಲೆಡೆ ಇರುವ ನಮ್ಮ ಶ್ರೀಮಠದ ಶಾಖಾ ಮಠಗಳಲ್ಲಿ ಅವರ ಆರೋಗ್ಯ ಸುಧಾರಣೆಗೆ ಹೋಮ, ಹವನ, ಪ್ರಾರ್ಥನೆ ಮಾಡಿಸಿದ್ದೆವು. ಪೇಜಾವರ ಶ್ರೀಗಳನ್ನು ಆಸ್ಪತ್ರೆಯಿಂದ ಉಡುಪಿ ಮಠಕ್ಕೆ ಕರೆತರುವಾಗ ವರುಣ ದೇವ ಕೂಡ ಹನಿ ಹನಿ ಮಳೆ ಸುರಿಸಿದನು. ಇದು ಶ್ರೀಗಳ ತಪಸ್ಸು, ಸಾಧನೆ, ಒಳ್ಳೆತನಕ್ಕೆ ಸಾಕ್ಷಿ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗ್ಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ

    ಪೇಜಾವರ ಶ್ರೀಗಳಿಗೆ ಮುಖ್ಯವಾಗಿ ನಮ್ಮ ಹಿಂದೂ ಸಂಸ್ಕೃತಿ, ಸಮಾಜ ಸುಧಾರಣೆಗೊಳ್ಳಬೇಕು ಎಂಬ ಆಸೆ ಇತ್ತು. ಅದೇರೀತಿ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಎಲ್ಲೆಡೆ ಶಾಂತಿ ನೆಲೆಗೊಳ್ಳಬೇಕು, ಮತ-ಮತಗಳ ಸಾಮರಸ್ಯ ಉಂಟಾಗಬೇಕು ಎನ್ನುವ ಹಲವು ಸಾಮಾಜಿಕ ಕಳಕಳಿಗಳ ಬಗ್ಗೆ ಶ್ರೀಗಳು ತಿಳಿಸಿದ್ದರು. ನಾವೆಲ್ಲರೂ ಅವರ ಅಭಿಮಾನಿಗಳು, ಅವರ ಒಡನಾಟ ಇರುವಂತವರು. ಅವರಿಂದ ಸಹಾಯ ಪಡೆದಂತಹ ಪ್ರತಿಯೊಬ್ಬರು ಕೂಡ ಅವರ ಆಶಯಗಳ ಬಗ್ಗೆ, ಅನಿಸಿಕೆಗಳ ಬಗ್ಗೆ, ಯೋಜನೆಗಳ ಬಗ್ಗೆ ಎಲ್ಲರೂ ಕೂಡಿ ಹೆಜ್ಜೆ ಇಟ್ಟಾಗ ಅವರ ಆತ್ಮಕ್ಕೆ ಸಂತೋಷವಾಗುತ್ತದೆ ಎಂದು ಪೇಜಾವರ ಶ್ರೀಗಳ ಸೇವೆ, ಆಸೆಗಳ ಬಗ್ಗೆ ಸುಬುಧೇಂದ್ರತೀರ್ಥ ಶ್ರೀಗಳು ಹಂಚಿಕೊಂಡರು.

  • ಅಯೋಧ್ಯೆಯ ತೀರ್ಪಿಗಾಗಿ ಶ್ರೀಗಳು ಕಾಯುತ್ತಿದ್ರು ಅನ್ಸುತ್ತೆ: ಸದಾನಂದ ಗೌಡ

    ಅಯೋಧ್ಯೆಯ ತೀರ್ಪಿಗಾಗಿ ಶ್ರೀಗಳು ಕಾಯುತ್ತಿದ್ರು ಅನ್ಸುತ್ತೆ: ಸದಾನಂದ ಗೌಡ

    ಉಡುಪಿ: ಮೊನ್ನೆ ಮೊನ್ನೆಯವರೆಗೂ ಜನಸೇವೆ ಮಾಡಿದ ಶ್ರೀಗಳು ಶ್ರೀಕೃಷ್ಣನ ಪಾದ ಸೇರಿದ್ದಾರೆ. ಅಯೋಧ್ಯೆಯ ತೀರ್ಪಿಗಾಗಿ ಶ್ರೀಗಳು ಕಾಯುತ್ತಿದ್ದರು ಅನಿಸುತ್ತೆ. ಶ್ರೀಗಳ ಚಿಂತನೆ, ವಿಚಾರ ಸದಾ ಜೀವಂತ ಎಂದು ಕೇಂದ್ರ ಸಚಿವ ಸದಾನಂದ ಗೌಡರು ಸಂತಾಪ ಸೂಚಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೇಜಾವರ ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದರು. ಪೇಜಾವರ ಶ್ರೀಗಳು ಶತಮಾನ ಕಂಡಂತಹ ಅದ್ಭುತ ಧಾರ್ಮಿಕ ಗುರುಗಳು ಇವತ್ತು ನಮ್ಮನೆಲ್ಲಾ ಅಗಲಿದ್ದಾರೆ. ಶ್ರೀಕೃಷ್ಣನ ಪಾದ ಸೇರಿದ್ದಾರೆ. ಅವರ ಬಗ್ಗೆ ಹೇಗೆ ಮತನಾಡಲಿ ಎಂದು ನನಗೆ ಗೊತ್ತಾಗುತ್ತಿಲ್ಲ. ಶ್ರೀಗಳು ಸಾಮಾಜಿಕ ಕಳಕಳಿ ಜೊತೆಗೆ ಧಾರ್ಮಿಕತೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಮೊನ್ನೆ ಮೊನ್ನೆಯವರೆಗೂ ಕೂಡ ಈ ಇಳಿ ವಯಸ್ಸಿನಲ್ಲೂ ಶ್ರೀಗಳು ಅದ್ಭುತ ಜನಸೇವೆ ಮಾಡಿದ್ದಾರೆ. ಸಾಮಾಜಿಕ ಪರಿವರ್ತನೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಬಹುಶಃ ಶ್ರೀಗಳು ಅಯೋಧ್ಯೆ ತೀರ್ಪಿಗಾಗಿ ಕಾಯುತ್ತಿದ್ದರು ಅನಿಸುತ್ತೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು ಎನ್ನುವುದಕ್ಕೆ ನಿರಂತರವಾಗಿ ತಮ್ಮ ಸೌಹಾರ್ದತಾ ಮನೋಭಾವದಿಂದ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನವನ್ನ ಶ್ರೀಗಳು ಮಾಡಿದ್ದರು ಎಂದು ಸದಾನಂದ ಗೌಡರು ಪೇಜಾವರ ಶ್ರೀಗಳ ಸೇವೆಯನ್ನು ನೆನೆದರು. ಇದನ್ನೂ ಓದಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ

    ಅಸ್ಪೃಶ್ಯತೆ ಜಗತ್ತಿಗಿರುವ ಅತ್ಯಂತ ದೊಡ್ಡ ಶಾಪ. ಅದರಲ್ಲೂ ನಮ್ಮ ದೇಶದಲ್ಲಿ ಹೆಚ್ಚು. ಪೇಜಾವರ ಶ್ರೀಗಳು ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ ಪಠಾಧೀಶರು, ಅವರು ಹರಿಜನ ಕೇರಿಗಳಿಗೆ ಹೋಗಿ ಕ್ರಾಂತಿ ಮಾಡಿದವರು. ಅವರ ಚಿಂತನೆ, ವಿಚಾರ ಸದಾ ಜೀವಂತ ಎಂದರು. ಶ್ರೀಗಳನ್ನು ಹೆಲಿಕಾಪ್ಟರ್ ಮೂಲಕ ಅಜ್ಜರಜಾಡಿನಿಂದ ಶಿಫ್ಟ್ ಮಾಡಲಾಗುತ್ತೆ. ಬೆಂಗಳೂರಿನಲ್ಲೂ ಕೂಡ ಶ್ರೀಗಳ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ತಿಳಿಸಿದರು.