Tag: ಪೇಜಾವರ ಶ್ರೀಗಳು

  • ನದಿ ದಾಟಿ ಸೀಮೋಲ್ಲಂಘನೆ, ಕುದುರೆ ಏರಿ ಪುರ ಪ್ರವೇಶಿಸಿದ ಪೇಜಾವರ ಶ್ರೀಗಳು

    ನದಿ ದಾಟಿ ಸೀಮೋಲ್ಲಂಘನೆ, ಕುದುರೆ ಏರಿ ಪುರ ಪ್ರವೇಶಿಸಿದ ಪೇಜಾವರ ಶ್ರೀಗಳು

    – ಶ್ರೀಗಳ ಚಾತುರ್ಮಾಸ್ಯ ಸಮಾಪ್ತಿ

    ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ವೃತಾಚರಣೆ ಅಂತ್ಯಗೊಂಡಿದೆ. ಪೇಜಾವರ ಮಠದ ಶಾಖಾ ಮಠವಾಗಿರುವ ನೀಲಾವರದಲ್ಲಿ ಈ ಬಾರಿ ಶ್ರೀಗಳು ವೃತಾಚರಣೆ ಕೈಗೊಂಡಿದ್ದರು. ಎರಡು ತಿಂಗಳುಗಳ ಕಾಲ ಪೂಜೆ ಪುನಸ್ಕಾರ, ವ್ರತಾಚರಣೆ ಜೊತೆ ಗೋವುಗಳ ಸೇವಾ ಕಾರ್ಯದಲ್ಲಿ ನಿರತರಾಗಿದ್ದರು.

    ಚಾತುರ್ಮಾಸ್ಯದ ಕೊನೆಯ ಪೂಜೆಯನ್ನು ಶ್ರೀಗಳು ನೆರವೇರಿಸಿದದರು. ಆರಂಭದಲ್ಲಿ ಪಟ್ಟದ ದೇವರಿಗೆ ನಂತರ ಗೋಶಾಲೆಯ ಕೆರೆಯ ಮಧ್ಯೆ ಇರುವ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆಯನ್ನು ಅರ್ಪಿಸಿದರು. ಚಾತುರ್ಮಾಸ್ಯ ಆರಂಭದಲ್ಲಿ ಮೃತ್ತಿಕೆಯನ್ನು ಮಾಡಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ಚಾತುರ್ಮಾಸದ ಅಂತ್ಯಕಾಲದಲ್ಲಿ ಮೃತ್ತಿಕಾ ವಿಸರ್ಜನೆಯನ್ನು ದೇವಸ್ಥಾನದ ಕೆರೆಯಲ್ಲಿ ಶ್ರೀಗಳು ನೆರವೇರಿಸಿದರು. ಚಾತುರ್ಮಸ್ಯ ವೃತಾಚರಣೆಯನ್ನು ಬಿಟ್ಟ ನಂತರ ಭಕ್ತಾದಿಗಳಿಗೆ ತೀರ್ಥವನ್ನು ಕೊಡುವ ಸಂಪ್ರದಾಯವಿದೆ. ಹೀಗಾಗಿ ಸ್ವತಃ ಸ್ವಾಮೀಜಿಯವರೇ ತೀರ್ಥ ವಿತರಣೆ ಮಾಡಿದರು.

    ಚತುರ್ಮಸ್ಯ ಸಮಾಪ್ತಿ ಆದ ಹಿನ್ನೆಲೆ ನೀಲಾವರ ಗೋಶಾಲೆಯಲ್ಲಿ ಭಜನಾ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ ಏರ್ಪಡಿಸಲಾಗಿತ್ತು. ಒಂದು ಊರಿನಲ್ಲಿ ಸ್ವಾಮೀಜಿ ವ್ರತಾಚರಣೆಯನ್ನು ಕೈಗೊಂಡರೆ ವೃತ ಮುಗಿದ ಮೇಲೆ ಅವರು ಊರನ್ನು ಬಿಡಬೇಕು ಎಂಬ ನಂಬಿಕೆಯಿದೆ. ಸಂಪ್ರದಾಯದಂತೆ ಸ್ವಾಮೀಜಿಯವರು ಸೀಮೋಲ್ಲಂಘನ ಮಾಡಿದರು. ನೀಲಾವರದಿಂದ ಎರಡು ಕಿಲೋಮೀಟರ್ ನಷ್ಟು ದೂರ ಇರುವ ಸೀತಾನದಿಯಲ್ಲಿ ಪ್ರಕ್ರಿಯೆ ನೆರವೇರಿತು. ನದಿ ತಟದ ಪಂಚಮಿಕಾನ ನಾಗ ಕ್ಷೇತ್ರದಲ್ಲಿ ಸ್ವಾಮೀಜಿಗಳು ದೋಣಿಯಲ್ಲಿ ಕುಳಿತು ಸೀತಾನದಿಯನ್ನು ದಾಟುವ ಪ್ರಕ್ರಿಯೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಶ್ರೀಗಳಿಗೆ ಗ್ರಾಮಸ್ಥರು, ಸ್ಥಳೀಯರಿಂದ ಗೌರವ ಸಲ್ಲಿಸಲಾಯಿತು. ಸ್ವಾಮೀಜಿ ಭಕ್ತರಿಗೆ ಮಂತ್ರಾಕ್ಷತೆಯನ್ನು ನೀಡಿ ಊರಿನ ಸಕಲ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಮಾಡಿದರು. ಬಿಳಿ ಕುದುರೆ ಏರಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪುರಪ್ರವೇಶ ನಡೆಸಿದರು.

    ಯತಿಗಳಿಗೆ ಚಾತುರ್ಮಾಸ್ಯ ವ್ರತ ಬಹಳ ಮಹತ್ವದ್ದು. ಈ ಸಂದರ್ಭದಲ್ಲಿ ಆಹಾರದ ನಿಯಮ, ಒಂದು ಪ್ರದೇಶದಲ್ಲಿ ಉಳಿದು ದೇವರ ಕಾರ್ಯ ಮಾಡುವಂತದ್ದು. ಈ ಸಂದರ್ಭದಲ್ಲಿ ನಾಲ್ಕು ತಿಂಗಳು ವೃತ ಆಚರಣೆ ಆಗುತ್ತದೆ. ಭಗವಂತ ಪವಡಿಸುವ ಸಂದರ್ಭದಲ್ಲಿ ವಿಶೇಷ ಸಾಧನ ಅನುಷ್ಠಾನಗಳನ್ನು ಮಾಡಬೇಕು. ನಾಲ್ಕು ಮಾಸಗಳ ಕಾಲ ನಾಲ್ಕು ಪ್ರತ್ಯೇಕ ಆಹಾರ ಪದ್ಧತಿಯನ್ನು ಕೂಡ ಅನುಸರಿಸಲಾಗುತ್ತದೆ. ಮೊದಲ ಮಾಸದಲ್ಲಿ ತರಕಾರಿ ಮತ್ತು ಕೆಲವು ಧಾನ್ಯಗಳನ್ನು ಸೇವಿಸುವುದು ನಿಷೇಧ ವಾಗಿರುತ್ತದೆ. 2ನೇ ಮಾಸ ಮೊಸರನ್ನು ಸಂಪೂರ್ಣವಾಗಿ ತ್ಯಾಗ ಮಾಡುತ್ತೇವೆ. 3ನೇ ತಿಂಗಳಿನಲ್ಲಿ ಹಾಲನ್ನು ಸಂಪೂರ್ಣವಾಗಿ ತ್ಯಾಗ ಮಾಡಿ, ಮತ್ತೆಲ್ಲ ವಸ್ತುಗಳನ್ನು ಉಪಯೋಗ ಮಾಡುತ್ತೇವೆ. ನಾಲ್ಕನೆ ತಿಂಗಳು ದ್ವಿದಳ ಧಾನ್ಯಗಳನ್ನು ಒಳಗೊಳ್ಳುವಂತಹ ತರಕಾರಿ ಮತ್ತು ಯಾವುದೇ ಆಹಾರ ವಸ್ತುಗಳನ್ನು ಸೇವನೆ ಮಾಡುವುದಿಲ್ಲ. ಅಹಿಂಸಾ ವ್ರತವನ್ನು ಪಾಲನೆ ಮಾಡಬೇಕು. ಅದರಲ್ಲೂ ಚಾತುರ್ಮಾಸ್ಯ ಸಂದರ್ಭದಲ್ಲಿ ಓಡಾಟ ಮಾಡುವಂತಿಲ್ಲ. ಇದಕ್ಕೆ ಧೃಡವಾದ ಕಾರಣಗಳಿವೆ. ಮಳೆಗಾಲದಲ್ಲಿ ಹುಳು ಹುಪ್ಪಟೆಗಳು ಜಂತುಗಳು ಹುಟ್ಟುವಂತಹ ಕಾಲ. ಸಂಚಾರ ಕಾಲದಲ್ಲಿ ನಡಿಗೆ, ವಾಹನಗಳ ಅಡಿಗೆ ಬಿದ್ದು ಜೀವಿಗಳು ಸಾವನ್ನಪ್ಪುವ ಸಾಧ್ಯತೆ ಇರುವುದರಿಂದ ಓಡಾಟ ಸಲ್ಲದು ಎಂದು ಪೇಜಾವರಶ್ರೀ ಹೇಳಿದರು.

    ಈ ಕುರಿತು ಮಠದ ವಿದ್ವಾಂಸ ವಾಸುದೇವ ಭಟ್ ಮಾತನಾಡಿ, ಹಿಂದಿನ ಕಾಲದಲ್ಲಿ ಒಂದು ಊರನ್ನು ಬೇರ್ಪಡಿಸುವುದು ಒಂದು ಬೆಟ್ಟ ಒಂದು ನದಿ. ಚಾತುರ್ಮಾಸ್ಯ ಕುಳಿತುಕೊಂಡ ಯತಿ ಊರನ್ನು ದಾಟಿ ಹೋಗುವುದು, ಒಂದು ಸೀಮೆಯನ್ನು ಬಿಡುವ ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಚಾತುರ್ಮಾಸ್ಯ ವ್ರತವನ್ನು ಸಂಪೂರ್ಣಗೊಳಿಸಿದಂತಹ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೀತಾ ನದಿಯನ್ನು ದಾಟಿ ನಮ್ಮ ಸಂಚಾರವನ್ನು ಆರಂಭಿಸಿದ್ದಾರೆ. ಅವರ ಮಠಾಧೀಶರು 33ನೇ ಚಾತುರ್ಮಾಸ್ಯವನ್ನು ನೀಲಾವರದಲ್ಲಿ ಮಾಡಿದ್ದಾರೆ. ಅಷ್ಟಮಠಗಳ ಪೈಕಿ ಕಲ್ಯಾಣಪುರ ಹೊಳೆಯನ್ನು ದಾಟಿ ಸೀತಾ ನದಿ ಮತ್ತು ಸುವರ್ಣಾ ನದಿಯ ನಡುವೆ ಚಾತುರ್ಮಾಸ್ಯ ಕುಳಿತುಕೊಂಡಿರುವ ಮೊದಲ ಯತಿ ಎಂದು ಹೇಳಿದರು.

  • ಪೇಜಾವರ ಶ್ರೀಗಳಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ

    ಪೇಜಾವರ ಶ್ರೀಗಳಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ

    ಉಡುಪಿ: ಮಹಾಮಾರಿ ಕೊರೊನಾ ಎಫೆಕ್ಟ್ ನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಇನ್ನೂ ದಿನಾಂಕವೇ ಫಿಕ್ಸ್ ಮಾಡೋದಕ್ಕೆ ಆಗುತ್ತಿಲ್ಲ. ಪಿಯುಸಿ ವಿದ್ಯಾರ್ಥಿಗಳ ಒಂದು ಪರೀಕ್ಷೆ ಬಾಕಿಯಾಗಿದೆ. ಆದ್ರೆ ಪೇಜಾವರ ಶ್ರೀಗಳು ಲಾಕ್‍ಡೌನ್ ನಡುವೆಯೇ ಪರೀಕ್ಷೆ ನಡೆಸುತ್ತಿದ್ದಾರೆ.

    ಸ್ಥಗಿತವಾದ ಪರೀಕ್ಷೆಗಳ ಬಗ್ಗೆ ಸಚಿವರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ತಲೆಕೆಡಿಸಿಕೊಂಡು ಕೂತಿದ್ದಾರೆ. ಈ ನಡುವೆ ಪೇಜಾವರ ಮಠ ನಿರಾತಂಕವಾಗಿ ಪರೀಕ್ಷೆಗಳನ್ನು ನಡೆಸುತ್ತಿದೆ. ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖುದ್ದಾಗಿ ವಾಟ್ಸಪ್‍ನಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸುತ್ತಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ಸ್ವಾಮೀಜಿ ಮತ್ತು ಪ್ರಾಚಾರ್ಯರು 400 ವಿದ್ಯಾರ್ಥಿಗಳಿಗೆ ಓರಲ್ ಎಕ್ಸಾಂ ಮಾಡುತ್ತಿದ್ದಾರೆ.

    ವಾಟ್ಸಪ್ ವಿಡಿಯೋ ಕಾಲ್ ಮೂಲಕ ಪೇಜಾವರ ಸ್ವಾಮೀಜಿ ಪ್ರಶ್ನೆ ಕೇಳ್ತಾರೆ. ವಿದ್ಯಾರ್ಥಿಗಳು ಅದಕ್ಕೆ ಉತ್ತರ ಕೊಡುತ್ತಾರೆ. ಕಾವ್ಯ-ವ್ಯಾಕರಣ, ವೇದಾಂತ, ನ್ಯಾಯ ಶಾಸ್ತ್ರ, ಮೀಮಾಂಸದ ಪ್ರಶ್ನೆಗಳನ್ನು ಶ್ರೀಗಳು ಮಧ್ಯ ಮಧ್ಯ ಕೇಳುತ್ತಾರೆ. ಒಬ್ಬ ವಿದ್ಯಾರ್ಥಿಗೆ ಪರೀಕ್ಷೆ ಮಾಡಲು ಕನಿಷ್ಟ 2 ಗಂಟೆ ಬೇಕಾಗುತ್ತದೆ. ಬೆಳಗ್ಗೆ 3:30ಕ್ಕೆ ಎದ್ದು, ನಿತ್ಯಕರ್ಮ ಮುಗಿಸುವ ಶ್ರೀಗಳು ಬೆಳಗ್ಗೆ 5ರಿಂದ ಪರೀಕ್ಷೆ ಆರಂಭಿಸುತ್ತಾರೆ. 9 ಗಂಟೆಗೆ ಪೂಜೆ ನೆರವೇರಿಸುತ್ತಾರೆ. ಮಧ್ಯಾಹ್ನ ಮತ್ತೆ ಪರೀಕ್ಷೆ ಆರಂಭಿಸುತ್ತಾರೆ ಎಂದು ಮಾಹಿತಿ ಲಭ್ಯವಾಗಿದೆ.

    ದಿನಕ್ಕೆ 8ರಿಂದ 10 ಗಂಟೆಗಳ ಕಾಲ ಈ ಪ್ರಕ್ರಿಯೆ ನಡೆಯುತ್ತದೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳು, ದೆಹಲಿ, ಚೆನ್ನೈ, ಹೈದರಾಬಾದ್‍ನಲ್ಲಿರುವ ವಿದ್ಯಾರ್ಥಿಗಳು ಆನ್‍ಲೈನ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ವಿಡಿಯೋ ಕಾಲ್‍ನಲ್ಲಿ ಪರೀಕ್ಷೆ ನಡೆಸುವುದು ಸವಾಲು ಎಂದಿದ್ದಾರೆ.

  • ವಿಷ್ಣು ದಶಾವತಾರ, ಹನುಮಾನ್ ನಮಸ್ಕಾರದ ಮೂಲಕ ಪೇಜಾವರ ಶ್ರೀಗಳಿಗೆ ಯೋಗ ನಮನ

    ವಿಷ್ಣು ದಶಾವತಾರ, ಹನುಮಾನ್ ನಮಸ್ಕಾರದ ಮೂಲಕ ಪೇಜಾವರ ಶ್ರೀಗಳಿಗೆ ಯೋಗ ನಮನ

    ಉಡುಪಿ: ಪೇಜಾವರ ಶ್ರೀಗಳು ಕೊನೆಯ ದಿನಗಳಲ್ಲಿ ಪಾದರಸದಂತೆ ಓಡಾಡಿದ ಯತಿಶ್ರೇಷ್ಠರು. ವಯಸ್ಸು 89 ಆದರೂ ಅವರ ಮನಸ್ಸು 29ರ ಯುವಕನಂತಿತ್ತು. ದಿನವೊಂದಕ್ಕೆ ಒಂದೂವರೆ ಸಾವಿರ ಕಿಲೋ ಮೀಟರ್ ಪ್ರಯಾಣಿಸಿದರೂ ದಣಿಯದ ದೇಹ. ಶ್ರೀಗಳು ಛಾಪು ಮೂಡಿಸದ ಕ್ಷೇತ್ರವಿಲ್ಲ. ಇಷ್ಟೆಲ್ಲದಕ್ಕೆ ಕಾರಣ ಅವರ ನಿರಂತರ ಯೋಗ. ವೃಂದಾವನಸ್ಥ ಶ್ರೀಗಳಿಗೆ ಉಡುಪಿಯಲ್ಲಿ ಕಠಿಣ ಯೋಗದ ಮೂಲಕವೇ ನಮನ ಅರ್ಪಿಸಲಾಯಿತು.

    ವೃಂದಾವನಸ್ಥರಾದ ಪೇಜಾವರ ಶ್ರೀಗಳನ್ನು ಸನ್ಯಾಸಿ ಅಂತ ತಗೊಂಡರೆ ಸನ್ಯಾಸಿ. ಸಾಮಾಜಿಕ ಕ್ರಾಂತಿಕಾರಿ ಅಂತ ನೋಡಿದರೆ ಅದಕ್ಕೂ ಸಲ್ಲುತ್ತಾರೆ. ರಾಜಕೀಯ ನಾಯಕರಿಗೆ ರಾಜಗುರು. ಪೇಜಾವರ ಶ್ರೀಗಳು ಪರಿಸರ ಕಾಳಜಿಯನ್ನೂ ಹೊಂದಿದ್ದರು. ಶ್ರೀಗಳ ಬಹುಮುಖಿ ವ್ಯಕ್ತಿತ್ವಕ್ಕೆ ಕಾರಣ ಅವರು ಪ್ರಾತಃಕಾಲ 4ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದ ಯೋಗಾಸನ.

    ಯೋಗಪಟುವಾಗಿದ್ದ ಪೇಜಾವರ ಶ್ರೀಗಳಿಗೆ ಉಡುಪಿಯಲ್ಲಿ ವಿಭಿನ್ನ ರೀತಿಯ ಯೋಗ ನುಡಿನಮನ ನಡೆಯಿತು. ಕೃಷ್ಣಮಠದ ರಾಜಾಂಗಣದಲ್ಲಿ ವೈಕುಂಠ ಏಕಾದಶಿ ಸಂದರ್ಭ ಕಠಿಣ ವಿಷ್ಣು ದಶಾವತಾರ ಯೋಗ ಮತ್ತು ಹನುಮಾನ್ ನಮಸ್ಕಾರ ಆಸನಗಳನ್ನು ಪ್ರದರ್ಶನ ಮಾಡಲಾಯಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೂರಾರು ಸದಸ್ಯರು ಯೋಗ ನಮನ ಸಲ್ಲಿಸಿದರು. ವಿಷ್ಣುವಿನ ಮತ್ಸ್ಯ, ಕೂರ್ಮ, ನರಸಿಂಹ ಅವತಾರಗಳನ್ನು ಯೋಗಾಸನ ಭಂಗಿಯ ಮೂಲಕ ಮಾಡಿ ಹರಿಪಾದ ಸೇರಿದ ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ಗೌರವ ಅರ್ಪಣೆ ಮಾಡಲಾಯಿತು.

    ವಿಶ್ವಾದ್ಯಂತ ಸಪ್ತ ನಮಸ್ಕಾರದಲ್ಲಿ ಸೂರ್ಯ ನಮಸ್ಕಾರ ಮಾತ್ರ ಪ್ರಸಿದ್ಧಿ ಪಡೆದಿದೆ. ಶಿವ ನಮಸ್ಕಾರ, ಗಣಪತಿ ನಮಸ್ಕಾರ, ಹಿಮಾಲಯ ಗಣಪತಿ ನಮಸ್ಕಾರ, ದುರ್ಗಾ ನಮಸ್ಕಾರಗಳೆಂಬ ನಾಲ್ಕು ನಮಸ್ಕಾರ ಬಹಳ ಕಠಿಣ ಆಸನಗಳಿವೆ. ಶ್ರೀ ಪತಂಜಲಿ ಯೋಗ ಸಮಿತಿ, ತಜ್ಞರಯ, ವೈದ್ಯರು ಸಮಾಲೋಚನೆ ಮಾಡಿ ಉಡುಪಿಯಲ್ಲಿ ಕಷ್ಟಕರ ಆಸನ ಪ್ರದರ್ಶಿಸಲಾಯಿತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ನೂರಾರು ಯೋಗಪಟುಗಳು ಪಾಲ್ಗೊಂಡರು. ಪೇಜಾವರಶ್ರೀ ಗಳೇ 15 ವರ್ಷಗಳ ಹಿಂದೆ ಎಸ್‍ಪಿವೈಎಸ್‍ಎಸ್ ಸಂಘಟನೆಯ ಯೋಗವನ್ನು ಆಶೀರ್ವದಿಸಿದ್ದರಂತೆ. ಪರ್ಯಾಯ ಸಂದರ್ಭದಲ್ಲಿ ಯೋಗಾಭ್ಯಾಸದಲ್ಲೂ ತೊಡಗಿಸಿಕೊಂಡಿದ್ದರಿಂದ ವೃಂದಾವನಸ್ಥರಾದ ಪೇಜಾವರ ಶ್ರೀಗಳಿಗೆ ಯೋಗನಮನ ಸಲ್ಲಿಸಲಾಯಿತು.

    ಸಂಘಟಕಿ ಭವಾನಿ ಮಾತನಾಡಿ, ಪೇಜಾವರ ಶ್ರೀಗಳ ಜೊತೆ ನಮ್ಮ ಸಂಸ್ಥ 15 ವರ್ಷದಿಂದ ಸಂಪರ್ಕದಲ್ಲಿದೆ. ನಮ್ಮ ಯೋಗ ತರಗತಿಗಳಿಗೆ ಆಶೀರ್ವಾದ ನೀಡಿ, ಪ್ರೋತ್ಸಾಹಿಸಿದ್ದಾರೆ. ಅವರಿಗೆ ನಾವು ಮಾಡುತ್ತಿರುವ ದೊಡ್ಡ ನುಡಿನಮನ ಅಂದರೆ ಯೋಗಾಭ್ಯಾಸ ಎಂದರು.

    ವಿಭಾಗ ಮುಖ್ಯಸ್ಥ ಅಣ್ಣಾ ಲಕ್ಷ್ಮೀನಾರಾಯಣ ಮಾತನಾಡಿ, ಬಹಳ ಕಠಿಣ ಯೋಗದ ಪ್ರದರ್ಶನ ಇದು. ನಮ್ಮ ಸಮಿತಿಯೇ ಕಂಡುಕೊಂಡ ಭಂಗಿಗಳು ಇವು. ದೇವರು ಧ್ಯಾನ, ದೇಹ ದಂಡನೆ ಮೂಲಕ ಆರೋಗ್ಯ ಕಾಪಾಡುವ ವಿಧಾನ ಇದು. ಶ್ರೀಗಳು ಕೊನೆಯವರೆಗೂ ಯೋಗಾಭ್ಯಾಸ ಮಾಡಿದ್ದರಿಂದ ಚುರುಕಾಗಿ ಓಡಾಡುತ್ತಿದ್ದರು ಎಂದು ಹೇಳಿದರು.

    ಯೋಗ ಪಟುಗಳು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ, ದೀಪನಮನವನ್ನೂ ಸಲ್ಲಿಸಿದರು. ಉಚಿತ ಯೋಗ ಶಿಕ್ಷಣ ನೀಡಿ, ಯೋಗ ಶಿಕ್ಷಕರನ್ನು ಹುಟ್ಟುಹಾಕುತ್ತಿರುವ ಈ ಸಂಸ್ಥೆ ಸಂಸ್ಕಾರ ,ಸಂಸ್ಕೃತಿ ಜೊತೆ ಉದ್ಯೋಗವನ್ನು ನೀಡುತ್ತಿದೆ.

  • ಪೇಜಾವರಶ್ರೀಗಳಿಗೆ ನಾಳೆ ಯೋಗ ಗೌರವ- ಅಪರೂಪದ ವಿಷ್ಣುದಶಾವತಾರ, ಹನುಮಾನ್ ನಮಸ್ಕಾರಕ್ಕೆ ಸಿದ್ಧತೆ

    ಪೇಜಾವರಶ್ರೀಗಳಿಗೆ ನಾಳೆ ಯೋಗ ಗೌರವ- ಅಪರೂಪದ ವಿಷ್ಣುದಶಾವತಾರ, ಹನುಮಾನ್ ನಮಸ್ಕಾರಕ್ಕೆ ಸಿದ್ಧತೆ

    ಉಡುಪಿ: ವೃಂದಾವನಸ್ಥರಾದ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸೋಮವಾರ ಉಡುಪಿಯಲ್ಲಿ ವಿಭಿನ್ನವಾಗಿ ಯೋಗ ನಮನ ಅರ್ಪಣೆ ಮಾಡಲಿದೆ.

    ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೃಷ್ಣಮಠದ ರಾಜಾಂಗಣದಲ್ಲಿ ವಿಷ್ಣು ದಶಾವತಾರ ನಮಸ್ಕಾರ ಯೋಗ ಮತ್ತು ಹನುಮಾನ ನಮಸ್ಕಾರ ನಡೆಯಲಿದೆ. ಈ ಮೂಲಕ ಶ್ರೀಗಳಿಗೆ ನುಡಿನಮನ ಸಲ್ಲಿಸಲಾಗುವುದು ಎಂದು ಸಂಸ್ಥೆಯ ಉಡುಪಿ ಸಂಚಾಲಕಿ ಭವಾನಿ ಭಟ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಪ್ತ ನಮಸ್ಕಾರದಲ್ಲಿ ಸೂರ್ಯ ನಮಸ್ಕಾರ, ಶಿವ ಗಣಪತಿ ನಮಸ್ಕಾರ, ಹಿಮಾಲಯ ಗಣಪತಿ ನಮಸ್ಕಾರ, ದುರ್ಗಾ ನಮಸ್ಕಾರಗಳಿವೆ. ಈ ಪೈಕಿ ಎರಡು ನಮಸ್ಕಾರವನ್ನು ಪೇಜಾವರ ಶ್ರೀಗಳಿಗೆ ಅರ್ಪಣೆ ಮಾಡಲಿದ್ದೆವೆ. ಜೊತೆಗೆ ವೈದ್ಯರ ಜೊತೆ ಸಮಾಲೋಚನೆ ಮಾಡಿ ಅಭಿಪ್ರಾಯ ಪಡೆದು ಹನುಮಾನ್ ನಮಸ್ಕಾರ ಪ್ರದರ್ಶನ ಮಾಡಲಿದ್ದು, ಇದು ಬಹಳ ಅಪರೂಪದ ಯೋಗವಾಗಿದೆ ಎಂದರು.

    ಮೊತ್ತ ಮೊದಲ ಬಾರಿಗೆ ಪ್ರದರ್ಶನ ನಡೆಯಲಿದೆ. ಸೋಮವಾರ ವೈಕುಂಠ ಏಕಾದಶಿ ದಿನ. ದಕ್ಷಿಣ ಕನ್ನಡ, ಉಡುಪಿಯ 500 ಯೋಗ ಬಂಧುಗಳು ಪಾಲೊಳ್ಳುತ್ತಾರೆ. ಶ್ರೀಗಳ ಆಶೀರ್ವಾದ ಪಡೆಯುವ ಉದ್ದೇಶದಿಂದ ಇದನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸಂಸ್ಥೆ ಕೇವಲ ಯೋಗ ಪ್ರದರ್ಶನ, ತರಗತಿ ಮಾಡುವುದಿಲ್ಲ. ಯೋಗ ಶಿಕ್ಷಣ ತರಬೇತಿ ಮಾಡುತ್ತೇವೆ. ಮುಂದೆ ಯೋಗ ಶಿಕ್ಷಕನನ್ನಾಗಿ ಮಾಡುತ್ತೇವೆ ಎಂದು ಮಂಗಳೂರಿನ ಅಣ್ಣಾ ಲಕ್ಷ್ಮೀನಾರಾಯಣ ಮಾಹಿತಿ ನೀಡಿದರು. ಜಗನ್ನಾಥ ಲಲಿತಾ ಕೆದ್ಲಾಯ, ಶ್ಯಾಮಲಾ ಯೋಗ ನಮನದ ಮಾಹಿತಿ ನೀಡಿದರು.

  • ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರ ಒತ್ತಾಯ

    ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರ ಒತ್ತಾಯ

    ಉಡುಪಿ: ರಾಷ್ಟ್ರಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯರಾಗಿ ಎಂಟು ದಿನಗಳು ಕಳೆದಿದೆ. ಉಡುಪಿಯಲ್ಲಿ ಶ್ರೀಗಳ ನುಡಿನಮನ, ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತಿದೆ.

    ವಿಶ್ವೇಶತೀರ್ಥರೇ ಕಟ್ಟಿಸಿದ ಮಠದ ರಾಜಾಂಗಣದಲ್ಲಿ ಶ್ರೀಗಳಿಗೆ ಉಡುಪಿಯ ಜನತೆ, ಜನಪ್ರತಿನಿಧಿಗಳು, ಗಣ್ಯರ ಕಡೆಯಿಂದ ನುಡಿನಮನ ನಡೆದಿದೆ. ನುಡಿನಮನ ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.

    ಸಾರ್ವಜನಿಕರ ಒತ್ತಾಯಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಶ್ರೀಗಳನ್ನು ಮಹಾತ್ಮನಿಗೆ ಹೋಲಿಸಿದರು. ಪೇಜಾವರ ಶ್ರೀಗಳ ಜೀವನವೇ ಒಂದು ಪಾಠ. ಅವರ ಪ್ರವಚನ ಅನುಸರಿಸುವ ಅಗತ್ಯವಿಲ್ಲ. ಅವರ ಜೀವನ ಪದ್ಧತಿ ಮತ್ತು ಬದ್ಧತೆ ಅನುಕರಣೆ ಮಾಡಿದರೆ ಸಾಕು ಎಂದರು.

    ಪೇಜಾವರ ಶ್ರೀಗಳು ಜನಮಾನಸದಲ್ಲಿ ಉಳಿಯಬೇಕು. ಅಷ್ಟ ಮಠದ ಶ್ರೀಗಳು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಸ್ಮಾರಕ ನಿರ್ಮಾಣ, ಅದರ ರೂಪುರೇಷೆ ಬಗ್ಗೆ ಚರ್ಚೆ ಮಾಡುತ್ತೇವೆ. ಪೇಜಾವರ ಶ್ರೀಗಳನ್ನು ಪಡೆದ ಉಡುಪಿ ಧನ್ಯ. ಅವರನ್ನು ಕಳೆದುಕೊಂಡು ಎಲ್ಲಾ ಕ್ಷೇತ್ರಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ನುಡಿನಮನ ಅರ್ಪಿಸಿದರು.

    ಸಾವಿರಾರು ಜನ ವಿಶ್ವೇಶತೀರ್ಥ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪೇಜಾವರ ಶ್ರೀಗಳ ಸ್ಮಾರಕ ಕೃಷ್ಣ ಮಠದಲ್ಲಿ ಸ್ಥಾಪನೆಯಾಗಬೇಕೋ, ಉಡುಪಿಯ ನಗರ ಪ್ರದೇಶದಲ್ಲಿ ಸ್ಥಾಪನೆ ಮಾಡಬೇಕೋ ಎಂಬ ಚರ್ಚೆ ಶುರುವಾಗಿದೆ. ಸ್ಮಾರಕ ನಿರ್ಮಾಣ ಮಾಡಬೇಕಾ ಅಥವಾ ಬೃಂದಾವನ ನಿರ್ಮಾಣ ಆಗಬೇಕಾ ಎಂಬ ಬಗ್ಗೆ ಕೂಡಾ ಚರ್ಚೆಗಳು ನಡೆಯುತ್ತಿವೆ.

  • ಪೇಜಾವರ ಶ್ರೀಗಳ ನಿಧನ ದೇಶಕ್ಕೆ ತುಂಬಲಾರದ ನಷ್ಟ: ಅಲೋಕ್ ಕುಮಾರ್

    ಪೇಜಾವರ ಶ್ರೀಗಳ ನಿಧನ ದೇಶಕ್ಕೆ ತುಂಬಲಾರದ ನಷ್ಟ: ಅಲೋಕ್ ಕುಮಾರ್

    ಮಂಗಳೂರು: ದೇಶ ಕಂಡ ಅಪರೂಪದ ಯತಿವರೇಣ್ಯರಾದ ಪೇಜಾವರ ಶ್ರೀಗಳ ನಿಧನ ಭಾರತ ದೇಶಕ್ಕೆ ತುಂಬಲಾರದ ನಷ್ಟ ಎಂದು ವಿಶ್ವ ಹಿಂದೂ ಪರಿಷತ್‍ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಸಂತಾಪ ಸೂಚಿಸಿದರು.

    ಮಂಗಳೂರಿನ ಸಂಘನಿಕೇತನದಲ್ಲಿ ಐದು ದಿನಗಳ ಕಾಲ ನಡೆದ ವಿಶ್ವ ಹಿಂದೂ ಪರಿಷತ್‍ನ ಅಂತರಾಷ್ಟ್ರೀಯ ಬೈಠಕ್‍ನಲ್ಲಿ ಭಾಗವಹಿಸಿದ ಅವರು ಪೇಜಾವರ ಶ್ರೀಗಳ ಸಾಧನೆಯ ಬಗ್ಗೆ ಮೆಲುಕು ಹಾಕಿಕೊಂಡರು. ಪೇಜಾವರ ಶ್ರೀಗಳು ರಾಮ ಜನ್ಮ ಭೂಮಿಗಾಗಿ ಆಂದೋಲನ ಮಾಡಿದವರಲ್ಲಿ ಮುಂಚೂಣಿಯಲ್ಲಿ ಇದ್ದರು. ಆರ್ಟಿಕಲ್ 29-30 ಬಗ್ಗೆಯೂ ಧ್ವನಿ ಎತ್ತುವಂತೆ ಸ್ವಾಮೀಜಿ ಸೂಚಿಸಿದ್ದರು. ಅಸ್ಪೃಶ್ಯತೆ ವಿರುದ್ಧ ಹೋರಾಟದಲ್ಲಿ ಸ್ವಾಮೀಜಿ ವಿಎಚ್‍ಪಿ ಜೊತೆಯಿದ್ದರು. ನಮಗೆಲ್ಲ ಮಾರ್ಗದರ್ಶಕರಾಗಿದ್ದ ಶ್ರೀಗಳ ನಿರ್ದೇಶನದಂತೆ ಮುಂದಿನ ದಿನಗಳಲ್ಲಿಯೂ ವಿಶ್ವ ಹಿಂದೂ ಪರಿಷತ್ ನಡೆಯಲಿದೆ ಎಂದರು.

    ರಾಮ ಮಂದಿರ ನಿರ್ಮಾಣ ವಿಚಾರಕ್ಕಾಗಿ ಈ ಬಾರಿ ದೇಶದ ಜನ ಪ್ರತೀ ಮನೆ, ಗ್ರಾಮದಲ್ಲಿ ರಾಮ ನವಮಿಯನ್ನು ಆಚರಿಸಲಿದ್ದಾರೆ. ಇಡೀ ವಿಶ್ವದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಳಿಸುವಂತೆ ವಿಎಚ್‍ಪಿಯಿಂದ ಜನರಲ್ಲಿ ಮನವಿ ಮಾಡುತ್ತೇವೆ ಎಂದರು. ಶ್ರೀ ರಾಮ ಸಮಾಜದ ಎಲ್ಲಾ ವರ್ಗಗಳ ಹತ್ತಿರ ಹೋಗಿದ್ದರು, ಅದೇ ರೀತಿ ಸಮಾಜದ ಎಲ್ಲಾ ವರ್ಗಗಳನ್ನು ಸಂಪರ್ಕಿಸಿ ಒಂದುಗೂಡಿಸುವ ಕೆಲಸ ವಿಎಚ್‍ಪಿ ಮಾಡಲಿದೆ. 2025ಕ್ಕೆ ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

    ದೇಶದಲ್ಲಿ ಮಹಿಳೆಯರು, ಹಿರಿಯರು, ಮಕ್ಕಳ ಮೇಲಾಗುವ ದೌರ್ಜನ್ಯ ತಡೆಗೆ ಕಾರ್ಯಕ್ರಮ ಕೈಗೊಳ್ಳುವುದರ ಜೊತೆಗೆ ಸರ್ಕಾರ ಸಮಾಜದ ಒಂದುಗೂಡುವಿಕೆಯಲ್ಲಿ ಐದು ವಿಚಾರ ತೆಗೆದುಕೊಳ್ಳಲಿದೆ. ಭೋಜನ, ಬಟ್ಟೆ, ಮನೆ, ಶಿಕ್ಷಣ, ಉದ್ಯೋಗದ ಬಗ್ಗೆ ಪ್ರಚಾರ ನಡೆಸಲು ಬೈಠಕ್‍ನಲ್ಲಿ ತೀರ್ಮಾಣ ಕೈಗೊಳ್ಳಲಾಗಿದೆ ಎಂದು ಹೇಳಿದರು.

  • ಕನ್ನಡ ಪರ ಸಂಘಟನೆಯಿಂದ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ

    ಕನ್ನಡ ಪರ ಸಂಘಟನೆಯಿಂದ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ

    ಬೆಂಗಳೂರು: ಪರಮ ಪೂಜ್ಯ ಶ್ರೀ ವಿಶ್ವೇಶ ತೀರ್ಥರು ಅಪಾರ ಭಕ್ತರನ್ನ, ಶಿಷ್ಯ ವೃಂದವನ್ನ ಅಗಲಿ ಬೃಂದಾವನದಲ್ಲಿ ಕೃಷ್ಣೈಕ್ಯರಾಗಿದ್ದಾರೆ. ಭಾನುವಾರ ಬೆಳಗ್ಗೆ ಶ್ರೀಗಳು ದೇಹತ್ಯಾಗ ಮಾಡಿ ಶ್ರೀಕೃಷ್ಣನ ಪಾದ ಸೇರಿದ್ದಾರೆ.

    ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕನ್ನಡಪರ ಸಂಘಟನೆಗಳು ಇಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಶ್ರೀಗಳ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ, ದೀಪ ಬೆಳಗಿ ಪೇಜಾವರ ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

    ಇಂದು ಬೆಳಗ್ಗೆ ಕರುನಾಡ ಸಂಘಟನೆಗಳ ಒಕ್ಕೂಟದ ಸದಸ್ಯರು ಹಾಗೂ ಶ್ರೀಗಳ ಭಕ್ತರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೃಷ್ಣೈಕ್ಯರಾದ ಶ್ರೀ ವಿಶ್ವೇಶತೀರ್ಥರ ಆತ್ಮಕ್ಕೆ ಶ್ರೀಕೃಷ್ಣ ಪರಮಾತ್ಮ ಶಾಂತಿ ನೀಡಲಿ ಎಂದು ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ.

  • ಪೇಜಾವರ ಶ್ರೀಗಳ ಬೃಂದಾವನದ ಮುಂದೆ ಶಿಷ್ಯ ವೃಂದದಿಂದ ಮಂತ್ರಪಟನೆ

    ಪೇಜಾವರ ಶ್ರೀಗಳ ಬೃಂದಾವನದ ಮುಂದೆ ಶಿಷ್ಯ ವೃಂದದಿಂದ ಮಂತ್ರಪಟನೆ

    – ದಿನ ಪೂರ್ತಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು

    ಬೆಂಗಳೂರು: ಉಡುಪಿಯ ಪೇಜಾವರ ಶ್ರೀಗಳು ತಾವೇ ಕಟ್ಟಿ ಬೆಳೆಸಿದ ವಿದ್ಯಾಪೀಠದಲ್ಲಿ ಶ್ರೀ ಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ಪ್ರವೇಶ ಮಾಡಿದ್ದಾರೆ. ರಾತ್ರಿಯಿಂದನೂ ಕೂಡ ಭಜನೆ ಆರಾಧನೆಗಳು ನಡೆದಿವೆ. ಜೊತೆಗೆ ಮುಂಜಾನೆ 5 ಗಂಟೆಗೆ ಶ್ರೀಯುತರ ಶಿಷ್ಯ ವೃಂದದಿಂದ ಮಂತ್ರಪಟನೆ ಆಗಿದೆ.

    ಶಿಷ್ಯ ವೃಂದದವರಿಂದ ಬೃಂದಾವನದ ಮುಂದೆ ಪವಮಾನಸೂಕ್ತ ಮಂತ್ರಪಟನೆ. ವಾಯು ದೇವರ ಮೂರು ಅವತಾರಗಳಾದ ಹನುಮಂತ, ಭೀಮ ಮತ್ತು ಮಧ್ವ ದೇವರ ಮಂತ್ರ ಪಟನೆ ನಡೆಯುತ್ತಿದ್ದು, ಇಂದು 9 ಗಂಟೆಗೆ ಹವನ ಹೋಮ ಆರಂಭವಾಗಿದೆ.

    ಪೂರ್ಣ ಪ್ರಜ್ಞಾ ವಿದ್ಯಾಪೀಠದ ಕೃಷ್ಣ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ನಿರ್ಮಾಣ ಆಗಿದೆ. ಭಕ್ತರಿಗೆ ವಿಶ್ವೇಶ ತೀರ್ಥ ಶ್ರೀಗಳ ಬೃಂದಾವನ ವೀಕ್ಷಣೆಗೆ ಅನುಮತಿ ನೀಡಲಾಗಿದೆ. ಮುಂಜಾನೆಯಿಂದಲೂ ಭಕ್ತರು ಶ್ರೀಯುತರ ಬೃಂದಾವನದ ದರ್ಶನ ಪಡೆಯುತ್ತಿದ್ದಾರೆ. 11 ದಿನಗಳವರೆಗೂ ವಿಶೇಷ ಪಾರಾಯಣ ಧಾರ್ಮಿಕ ಕಾರ್ಯಕ್ರಮಗಳು ಬೃಂದಾವನದ ಮುಂದೆ ನೆರವೇರಲಿವೆ. ಇಂದು ಸಹ ಪೂಜಾ ವಿಧಿ ವಿಧಾನಗಳು ನಡೆಯಲಿದ್ದು, ಭಕ್ತರು ಭಾಗವಹಿಸಬಹುದಾಗಿದೆ.

    ಚತುರ್ವೇದ ಪಾರಾಯಣ, ಅನ್ನ ಸಂತಪರ್ಣೆ ಭಜನೆ, ಚರ್ತುಮೂರ್ತಿ ಆರಾಧನೆ, ಐದು ಮೂರ್ತಿಗಳ ಆರಾಧನೆ, ಹವನ ಹೋಮ ಮತ್ತು ಪವನ ಸೂಕ್ತ ಮಂತ್ರ ಪಠಣೆಗಳು ಇಂದು ವಿದ್ಯಾಪೀಠದಲ್ಲಿ ನೆರವೇರಲಿದೆ.

  • ಉತ್ತರ ಭಾರತದಲ್ಲಿ ವಿದ್ಯಾಪೀಠದ ಕನಸು ನನಸಾಗುವ ವೇಳೆಗೆ ಕೃಷ್ಣೈಕ್ಯ

    ಉತ್ತರ ಭಾರತದಲ್ಲಿ ವಿದ್ಯಾಪೀಠದ ಕನಸು ನನಸಾಗುವ ವೇಳೆಗೆ ಕೃಷ್ಣೈಕ್ಯ

    ನವದೆಹಲಿ: ಬೆಂಗಳೂರಿನ ವಿದ್ಯಾಪೀಠ ಮಠದಲ್ಲಿ ಅಂತ್ಯಕ್ರಿಯೆ ಆಗಬೇಕು ಎನ್ನುವುದು ಪೇಜಾವರ ಶ್ರೀಗಳ ಕೊನೆಯ ಆಶಯವಾಗಿತ್ತು. ಅದರಂತೆ ಉತ್ತರ ಭಾರತದಲ್ಲೂ ಒಂದು ವಿದ್ಯಾಪೀಠ ಆರಂಭಿಸಬೇಕು ಎನ್ನುವುದು ಅವರ ಮತ್ತೊಂದು ಕನಸಾಗಿತ್ತು.

    ಶ್ರೀಗಳ ಕನಸಿನಂತೆ ದೆಹಲಿಯ ವಸಂತ್ ಕುಂಜ್‍ನಲ್ಲಿರುವ ಶ್ರೀಕೃಷ್ಣ ಮಠದಲ್ಲಿ ವಿದ್ಯಾಪೀಠ ಆರಂಭವಾಗುತ್ತಿದೆ. ಆದರೆ ಅದನ್ನು ನೋಡಲು ಶ್ರೀಗಳಿಲ್ಲ ಎನ್ನುವುದು ಬೇಸರದ ಸಂಗತಿ. ಇದನ್ನೂ ಓದಿ: ವಿಶ್ವಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯ – ಬೆಂಗಳೂರಿನ ವಿದ್ಯಾಪೀಠದಲ್ಲಿ ವೃಂದಾವನಸ್ಥ

    ಕಳೆದ ಮೂರು ತಿಂಗಳಿಂದ ಇಲ್ಲಿರುವ ಮಠದಲ್ಲಿ ವಿದ್ಯಾಪೀಠ ಆರಂಭಿಸುವ ಪ್ರಕ್ರಿಯೆಗಳು ಆರಂಭವಾಗಿದೆ. ಕನ್ನಡ, ಸಂಸ್ಕೃತ ಮತ್ತು ಹಿಂದಿಯಲ್ಲಿ ಇಲ್ಲಿ ವೇದ ಉಪನಿಷತ್ತು, ಪುರಾಣಗಳನ್ನು ಭೋಧಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತಕ್ಕಾಗಿ ಬೆಂಗಳೂರಿನಲ್ಲಿ ವಿದ್ಯಾಪೀಠ ನಿರ್ಮಿಸಿದ್ದು ವೇದ ಉಪನಿಷತ್ತು ಕಲಿಯುವ ಮಕ್ಕಳಿಗೆ ಅನುಕೂಲವಾಗಿದೆ. ಅದರಂತೆ ಉತ್ತರ ಭಾರತದ ಮಕ್ಕಳಿಗೂ ಅನುಕೂಲವಾಗುವಂತೆ ದೆಹಲಿಯಲ್ಲಿ ವಿದ್ಯಾಪೀಠ ಆರಂಭಿಸಬೇಕೆಂದು ಮಠದ ಸಿಬ್ಬಂದಿ ಬಳಿ ಶ್ರೀಗಳು ಹೇಳಿಕೊಂಡಿದ್ದರಂತೆ.

    ಶ್ರೀಗಳ ಕನಸಿನಂತೆ ದೆಹಲಿಯ ಶ್ರೀಕೃಷ್ಣ ಮಠದಲ್ಲಿ ವಿದ್ಯಾಪೀಠ ಆರಂಭವಾಗುತ್ತಿದ್ದು, ಆರಂಭಿಕವಾಗಿ ಅಯೋಧ್ಯೆಯಿಂದ ಆರು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಡಿಸೆಂಬರ್ 5 ಕ್ಕೆ ಮಠಕ್ಕೆ ಬಂದಿದ್ದ ಶ್ರೀಗಳು ಸಭೆ ನಡೆಸಿ ಎಲ್ಲ ಕೆಲಸಗಳನ್ನು ನೋಡಿಕೊಂಡು ಹೋಗಿದ್ದರು. ಆದರೆ ವಿದ್ಯಾಪೀಠ ಪೂರ್ಣ ಆಗುವ ಮೊದಲು ಶ್ರೀಗಳು ನಿಧನವಾಗಿದ್ದು ಮಠದ ಭಕ್ತರಲ್ಲಿ ಬೇಸರ ತಂದಿದೆ.

  • ವಿಶ್ವಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯ – ಬೆಂಗಳೂರಿನ ವಿದ್ಯಾಪೀಠದಲ್ಲಿ ವೃಂದಾವನಸ್ಥ

    ವಿಶ್ವಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯ – ಬೆಂಗಳೂರಿನ ವಿದ್ಯಾಪೀಠದಲ್ಲಿ ವೃಂದಾವನಸ್ಥ

    – ಶ್ರೀಗಳದ್ದು ಇಚ್ಛಾ ಮರಣಿ ಎಂದ ಪುತ್ತಿಗೆ ಶ್ರೀ
    – ಕೊನೆಯಾಸೆಯಂತೆ ವಿದ್ಯಾಪೀಠದಲ್ಲಿ ಅಂತಿಮ ಕ್ರಿಯಾ ವಿಧಿವಿಧಾನ

    ಬೆಂಗಳೂರು: ಮಹಾಸಂತ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಕೃಷ್ಣನಲ್ಲಿ ಲೀನರಾಗಿದ್ದಾರೆ. ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರಶ್ರೀಗಳ ಅಂತಿಮ ವಿಧಿವಿಧಾನಗಳು ಮಾಧ್ವ ಪರಂಪರೆಗೆ ಅನುಗುಣವಾಗಿ ಮಾಡಲಾಯಿತು.

    ನ್ಯಾಷನಲ್ ಕಾಲೇಜು ಮೈದಾನದಿಂದ ಸಂಜೆ ಪಾರ್ಥಿವ ಶರೀರವನ್ನು ವಿದ್ಯಾಪೀಠಕ್ಕ ತರಲಾಯಿತು. ಶ್ರೀಗಳಿಗೆ ಶ್ರೀಕೃಷ್ಣನ ದರ್ಶನ ಮಾಡಿಸಲಾಯಿತು. ಪಾರ್ಥಿವ ಶರೀರಕ್ಕೆ ಗೋಪಿಚಂದನ ಮತ್ತು ಮುದ್ರಾಧಾರಣೆಗಳು ನಡೆಯಿತು. ಹೊಸಬಟ್ಟೆ ಉಡಿಸಿ ಅಲಂಕಾರ ಮಾಡಿದ ನಂತರ ಶಿಷ್ಯರು ಕೃಷ್ಣ ಮತ್ತು ರಾಘವೇಂದ್ರ ಸ್ವಾಮೀಜಿಗಳ ಸನ್ನಿಧಾನದಲ್ಲಿ ಪೂಜೆ ಮಾಡಿಸಿದರು.

    ಪೂಜೆಯ ಬಳಿಕ ಛತ್ರ ಚಾಮರದೊಂದಿಗೆ ಶ್ರೀಗಳ ಪಾರ್ಥಿವ ಶರೀರವನ್ನು ಬೃಂದಾವನಕ್ಕೆ ತರಲಾಯಿತು. ಈ ವೇಳೆ ಎರಡೂ ಬದಿಗೆ ನಿಂತಿದ್ದ ಭಕ್ತರು ಶ್ರೀಗಳಿಗೆ ಹೂ ಮಳೆ ಸುರಿಸಿದರು. ಬೃಂದಾವನದಲ್ಲಿ ಪೇಜಾವರ ಶ್ರೀಗಳನ್ನು ಜಪಮಾಡುವ ಭಂಗಿಯಲ್ಲಿ ಕೂರಿಸಲಾಯಿತು. ಶ್ರೀಗಳ ದೇಹದ ಎತ್ತರದ ಎರಡುಪಟ್ಟು ಆಳದ ಗುಂಡಿ(11 ಅಡಿ ಆಳ, 8 ಅಡಿ ಉದ್ದ) ತೋಡಿ, ಪಾರ್ಥಿವ ಶರೀರವನ್ನು ಇರಿಸಲಾಗಿತ್ತು.

    ತೀರ್ಥ ಪ್ರೋಕ್ಷಣೆ ಮಾಡಿದ ಬಳಿಕ ಪಾರ್ಥಿವ ಶರೀರದ ಸುತ್ತಲೂ ವಿವಿಧ ಕ್ಷೇತ್ರಗಳಿಂದ ತಂದ ಮಣ್ಣು, ಕರ್ಪೂರ, ಹತ್ತಿ, ಉಪ್ಪು ಇತ್ಯಾದಿ ತುಂಬಲಾಗಿತ್ತು. ನೆತ್ತಿಯ ಮೇಲಿನ ಭಾಗದಲ್ಲಿ ಒಂದು ತೂತಿರುವ ಪಾತ್ರೆಯಲ್ಲಿ ಸಾಲಿಗ್ರಾಮ ಇತ್ಯಾದಿ ಪೂಜಾ ಪರಿಕರಗಳನ್ನು ಇರಿಸಲಾಗಿತ್ತು. ಬಳಿಕ ಪೂರ್ತಿ ಬೃಂದಾವನವನ್ನು ಮಣ್ಣಿನಿಂದ ಮುಚ್ಚಲಾಯಿತು.

    ಅಂತಿಮ ವಿಧಿವಿಧಾನಕ್ಕೆ ಮುನ್ನ ಕುಶಾಲು ತೋಪು ಸಿಡಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ವಂಚಿತರಾದವರಿಗೆ ಪಾಸ್ ಕೊಟ್ಟು ಶ್ರೀಗಳ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.

    ಹರ್ನಿಯಾ ಆಪರೇಷನ್ ನಡೆದಾಗಲೇ ಪೇಜಾವರ ಶ್ರೀಗಳು ತಮ್ಮ ಕೊನೆಯಾಸೆ ಬಿಚ್ಚಿಟ್ಟಿದ್ದರು. ಲಿಖಿತ ರೂಪದಲ್ಲಿ ಕೊನೆಯಾಸೆಯನ್ನು ಶ್ರೀಗಳು ಬರೆದುಕೊಟ್ಟಿದ್ದರು. ಅದೇನಂದರೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಅಂತಿಮ ಕ್ರಿಯಾ ವಿಧಿವಿಧಾನ ನಡೆಯಬೇಕು ಅಂತ ಲಿಖಿತ ರೂಪದಲ್ಲಿ ಬರೆದು ಆಗಾಗ ಕಿರಿಯ ಶ್ರೀಗಳಿಗೆ ಅದನ್ನು ತೋರಿಸುತ್ತಿದ್ದರು. ಜಾಗವನ್ನು ಕೂಡ ಸೂಚಿಸಿ, ಇಲ್ಲೇ ನನ್ನ ಬೃಂದಾವನ ಆಗಬೇಕು ಎಂದು ಶ್ರೀಗಳು ಬರೆದು ಕೊಟ್ಟಿದ್ದರು.

    ಬೆಳಗ್ಗೆ ಕೃಷ್ಣೈಕ್ಯ: ಪೇಜಾವರ ಶ್ರೀಗಳನ್ನು ಬೆಳಗ್ಗೆ 6:55ಕ್ಕೆ ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮಠಕ್ಕೆ ಕೊಂಡೊಯ್ಯಲಾಯಿತು. ಬಳಿಕ 9:20 ಗಂಟೆ ಹೊತ್ತಿಗೆ ಶ್ರೀಗಳ ಉಸಿರು ಕೃಷ್ಣ ಆತ್ಮ ಸೇರಿತು. ಈ ವೇಳೆ, ಮಠದಲ್ಲಿ “ಗೋವಿಂದ ಗೋವಿಂದ” ಎನ್ನುವ ಘೋಷಣೆ ಮೊಳಗಿಸುವ ಮೂಲಕ ಕೃಷ್ಣೈಕ್ಯರಾದ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. 10:20ಕ್ಕೆ ಪೇಜಾವರ ಶ್ರೀಗಳ ಪಾರ್ಥಿವ ಶರೀರವನ್ನು ಮಠದಿಂದ ಹೊರಕ್ಕೆ ತರಲಾಯಿತು. ಬಳಿಕ ಮದ್ವಸರೋವರಕ್ಕೆ ಕೊಂಡೊಯ್ದು ಪುಣ್ಯಸ್ನಾನ ಮಾಡಿಸಿ, ಕನಕನ ಕಿಂಡಿ ಮೂಲಕ ಕೃಷ್ಣನ ದರ್ಶನ ಮಾಡಿಸಿ ಮಠದೊಳಗೆ ಆರತಿ ಎತ್ತಿಸಲಾಯಿತು.

    ಉಡುಪಿ ನಗರದ ಶ್ರೀಗಳ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಿಸಲಾಯಿತು. ಮಧ್ಯಾಹ್ನ 12:15 ಗಂಟೆಗೆ ಮೃತದೇಹವನ್ನು ಅಜ್ಜರಕಾಡಿನ ಮೈದಾನಕ್ಕೆ ತರಲಾಯಿತು. ಈ ವೇಳೆ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮಧ್ಯಾಹ್ನ 1:30 ಗಂಟೆಯ ವರೆಗೂ ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. ಬಳಿಕ 1.40ಕ್ಕೆ ಬೆಂಗಳೂರಿನತ್ತ ಏರ್‍ಲಿಫ್ಟ್ ಮಾಡಲಾಯಿತು.

    ವಿಶೇಷ ಹೆಲಿಕಾಕ್ಟರ್ ಮೂಲಕ 1:38 ಆದಿ ಉಡುಪಿ ಹೆಲಿಪ್ಯಾಡ್ ನಿಂದ ಬೆಂಗಳೂರಿಗೆ ರವಾನಿಸಲಾಯ್ತು. ಕೊನೆಗೂ ತನ್ನ ಎರಡನೇ ಆಸೆಯ್ನೂ ಪೇಜಾವರ ಶ್ರೀಗಳು ಪೂರೈಸಿದರು. ವೃಂದಾವನವೂ ಶ್ರೀಗಳ ಇಚ್ಛೆಯಂತೆಯೇ ನಡೆದಿದೆ. ಇದಕ್ಕೆ ಹೇಳಿದ್ದು ಪೇಜಾವರಶ್ರೀ ಹಠವಾದಿ ಅಂತ. ಒಟ್ಟಿನಲ್ಲಿ ನಾಡು ಕಂಡ ಹಿರಿಯ ಸಂತ ಕಣ್ಮರೆಯಾಗುವುದು ಎಲ್ಲರಿಗೂ ಬೇಸರ ತಂದಿದೆ.

    ಇಚ್ಛಾ ಮರಣಿ: ಶ್ರೀಗಳಿಗೆ ಸಾವು ಸನ್ನಿಹಿತವಾಗುತ್ತಿದೆ ಎನ್ನುವುದು ಗೊತ್ತಿತ್ತು ಎನ್ನುವಂತೆ ಕೊನೆ ದಿನಗಳಲ್ಲಿ ತಮ್ಮಿಷ್ಟದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಡಿಸೆಂಬರ್ 17ಕ್ಕೆ ತಿರುಪತಿಗೆ ತೆರಳಿ ದರ್ಶನ ಪಡೆದಿದ್ದರು. 18ರಂದು ಬೆಂಗಳೂರಿನ ವಿದ್ಯಾಪೀಠಕ್ಕೆ ಬಂದಿದ್ದರು. 19ರಂದು ಹಾಸನದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಹುಟ್ಟೂರು ರಾಮಕುಂಜ ತೆರಳಿ ಅಲ್ಲಿಂದ ಪಾಜಕಕ್ಕೆ ಹೋಗಿದ್ದರು. ಅಲ್ಲಿ ಸಂಜೆ 15 ನಿಮಿಷಗಳ ಕಾಲ ಗುರುಕುಲದಲ್ಲಿ ಪ್ರವಚನ ನೀಡಿದ್ದರು. ಅಷ್ಟೊತ್ತಿಗೆ ಶ್ರೀಗಳ ಆರೋಗ್ಯ ಏರುಪೇರಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಪೇಜಾವರ ಶ್ರೀಗಳು ಇಚ್ಛಾ ಮರಣಿ ಎನ್ನುವ ಮಾತು ಕೇಳಿಬಂದಿದೆ. ಯಾಕಂದರೆ ಅಷ್ಠ ಮಠಗಳಲ್ಲಿ ಒಂದಾದ ಪುತ್ರಿಗೆ ಮಠದ ಸುಗುಣೇಂದ್ರ ಶ್ರೀಗಳು ಮಾತನಾಡಿ, ಪೇಜಾವರ ಶ್ರೀಗಳು ಮಂತ್ರಾಲಯದಲ್ಲಿ ನನಗೆ ಸಿಕ್ಕಿದ್ದರು. 23ರ ನಂತರ ಸದ್ಯಕ್ಕೆ ವಿದೇಶಕ್ಕೆ ಹೋಗಬೇಡಿ ಎಂದಿದ್ದರು. ಯಾಕೆ ಎಂದು ಕೇಳಿದಕ್ಕೆ ಶ್ರೀಗಳು ನಸು ನಕ್ಕಿದ್ದರು. ಶ್ರೀಗಳಿಗೆ ಮೊದಲೇ ಮುನ್ಸೂಚನೆ ಇತ್ತು ಅನ್ನಿಸುತ್ತಿದೆ. ಹಾಗಾಗಿ ನಾನು ವಿದೇಶಕ್ಕೆ ಹೋಗಿಲ್ಲ ಎಂದು ತಿಳಿಸಿದ್ದಾರೆ.