Tag: ಪೆರಾರಿವಾಲನ್

  • ರಾಜೀವ್‌ ಗಾಂಧಿ ಹತ್ಯೆ ಪ್ರಕರಣ – ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ನಳಿನಿ

    ರಾಜೀವ್‌ ಗಾಂಧಿ ಹತ್ಯೆ ಪ್ರಕರಣ – ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ನಳಿನಿ

    ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಅವರು ಗುರುವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ. ಎ.ಜಿ.ಪೆರಾರಿವಾಲನ್ ಅವರಂತೆ ತನ್ನನ್ನೂ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

    ಸಹ ಅಪರಾಧಿಯಾಗಿದ್ದ ಎ.ಜಿ.ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ನಳಿನಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೂ ಮೊದಲು ನಳಿನಿ ಅವರು ಬಿಡುಗಡೆ ಮಾಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತ್ತು. ಇದನ್ನೂ ಓದಿ: ಎಲ್ಲರೂ ಮನುಷ್ಯರೇ: ರಾಜೀವ್ ಗಾಂಧಿ ಹಂತಕನ ಪ್ರತಿಕ್ರಿಯೆ

    ಅರ್ಜಿಯನ್ನು ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್, ಸಂವಿಧಾನದ 142ನೇ ಪರಿಚ್ಛೇದದ ಅಡಿಯಲ್ಲಿ ಸುಪ್ರೀಂ ಕೋರ್ಟ್ ಹೊಂದಿರುವ ವಿಶೇಷ ಅಧಿಕಾರಗಳನ್ನು ತಾನು ಹೊಂದಿಲ್ಲ. ಆದ್ದರಿಂದ 2022ರ ಮೇ ತಿಂಗಳಲ್ಲಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್‌ನಂತೆ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

    ಈ ಹಿಂದೆ, ಮತ್ತೊಬ್ಬ ಸಹ ಅಪರಾಧಿ ಪಿ.ರವಿಚಂದ್ರನ್ ಕೂಡ ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಇದೀಗ 30 ವರ್ಷಗಳಿಂದ ಜೈಲಿನಲ್ಲಿರುವ ರವಿಚಂದ್ರನ್ ಅವರು ಔಪಚಾರಿಕ ಬಿಡುಗಡೆಗಾಗಿ ತಮ್ಮ ಪ್ರಕರಣವು ಮುಕ್ತಾಯಗೊಳ್ಳುವವರೆಗೆ ಮಧ್ಯಂತರ ಜಾಮೀನು ಕೋರಿದ್ದಾರೆ. ಇದನ್ನೂ ಓದಿ: ರಾಜೀವ್‌ಗಾಂಧಿ ಹತ್ಯೆಪ್ರಕರಣ: ನನ್ನ ಮಗಳೂ ಬಿಡುಗಡೆ ಆಗ್ತಾಳೆಂಬ ನಂಬಿಕೆಯಿದೆ ಎಂದ ನಳಿನಿ ತಾಯಿ

    ಪೆರಾರಿವಾಲನ್ ಬಿಡುಗಡೆಯನ್ನು ಉಲ್ಲೇಖಿಸಿ ತಮ್ಮ ಮನವಿ ಸಲ್ಲಿಸುವುದಾದರೆ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು ಎಂದು ಹೈಕೋರ್ಟ್ ಹೇಳಿತ್ತು. ಮೇ 18 ರಂದು, ಹತ್ಯೆ ಪ್ರಕರಣದ ಏಳು ಅಪರಾಧಿಗಳಲ್ಲಿ ಒಬ್ಬರಾದ ಎ.ಜಿ.ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಲು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನಗೆ ನೀಡಿರುವ ಪರಮಾಧಿಕಾರವನ್ನು ಚಲಾಯಿಸಿ ಆದೇಶ ಹೊರಡಿಸಿತ್ತು.

    ಪೆರಾರಿವಾಲನ್ ಬಿಡುಗಡೆಯ ನಂತರ, ರವಿಚಂದ್ರನ್ ಅವರು ತನ್ನನ್ನೂ ಸೇರಿದಂತೆ ಉಳಿದ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಪತ್ರ ಕಳುಹಿಸಿದ್ದರು. ರಾಜ್ಯಪಾಲರು ಮೂರು ವರ್ಷಗಳಿಂದ ಬಿಡುಗಡೆಯ ಕಡತಗಳನ್ನು ಪರಿಗಣಿಸದೆ ಇರಿಸಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ ಎಂದು ಖಂಡಿಸಿದ್ದರು. ಇದನ್ನೂ ಓದಿ: ವಿಮಾನದೊಳಗೆ ಸಿಗರೇಟ್ ಸೇದುತ್ತಾ ಪೋಸ್ ಕೊಟ್ಟ ವ್ಯಕ್ತಿ – ಸಿಂಧಿಯಾಗೆ ಬೆಂಡೆತ್ತಿದ ನೆಟ್ಟಿಗರು!

    ಸೆಪ್ಟೆಂಬರ್ 2018ರಲ್ಲಿ ತಮಿಳುನಾಡು ಸರ್ಕಾರ ಮಾಡಿದ ಶಿಫಾರಸಿನ ಆಧಾರದ ಮೇಲೆ ಜೈಲಿನಿಂದ ಅವಧಿಪೂರ್ವ ಬಿಡುಗಡೆಗಾಗಿ ಪೆರಾರಿವಾಲನ್ ಅವರ ಮನವಿಯನ್ನು ಪುರಸ್ಕರಿಸಿ, ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು. ಆದರೆ ಇತರ ಆರು ಅಪರಾಧಿಗಳು ಜೈಲಿನಲ್ಲಿದ್ದಾರೆ.

    ರವಿಚಂದ್ರನ್ ಅವರು ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿಯಲ್ಲಿ ಪೆರಾರಿವಾಲನ್ ಅವರ ಬಿಡುಗಡೆ ಸಂಬಂಧ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದಾರೆ. ಮೇ 21, 1991ರ ರಾತ್ರಿ ತಮಿಳುನಾಡಿನ ಪೆರಂಬದೂರಿನಲ್ಲಿ ಚುನಾವಣಾ ರ‍್ಯಾಲಿ ವೇಳೆ ಧನು ಎಂದು ಗುರುತಿಸಲ್ಪಟ್ಟ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ರಾಜೀವ್‌ಗಾಂಧಿ ಹತ್ಯೆಪ್ರಕರಣ: ನನ್ನ ಮಗಳೂ ಬಿಡುಗಡೆ ಆಗ್ತಾಳೆಂಬ ನಂಬಿಕೆಯಿದೆ ಎಂದ ನಳಿನಿ ತಾಯಿ

    ರಾಜೀವ್‌ಗಾಂಧಿ ಹತ್ಯೆಪ್ರಕರಣ: ನನ್ನ ಮಗಳೂ ಬಿಡುಗಡೆ ಆಗ್ತಾಳೆಂಬ ನಂಬಿಕೆಯಿದೆ ಎಂದ ನಳಿನಿ ತಾಯಿ

    ನವದೆಹಲಿ: ರಾಜೀವ್‌ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿರುವ ಸುಪ್ರೀಂ ಕೋರ್ಟ್ ತೀರ್ಪಿನಿಂದ ಉತ್ಸುಕವಾಗಿರುವ ಮತ್ತೋರ್ವ ಆರೋಪಿಯ ತಾಯಿ ನನ್ನ ಮಗಳೂ ಬಿಡುಗಡೆ ಆಗ್ತಾಳೆ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮತ್ತೋರ್ವ ಆರೋಪಿ ನಳಿನಿ ಅವರ 82 ವರ್ಷದ ತಾಯಿ ಪದ್ಮಾ ಶಂಕರನಾರಾಯಣನ್ ಈ ಕುರಿತು ಮಾತನಾಡಿದ್ದಾರೆ. 31 ವರ್ಷಗಳ ಬಳಿಕ ರಾಜೀವ್‌ಗಾಂಧಿ ಹಂತಕ ಪೆರಾರಿವಾಲನ್ ಅನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದು, ಪೆರಾರಿವಾಲನ್ ಕುಟುಂಬ ಸಂತೋಷವಾಗಿದೆ ಎಂದಿದ್ದಾರೆ. ಇದನ್ನೂ ಓದಿ: 31 ವರ್ಷಗಳ ನಂತರ ರಾಜೀವ್ ಗಾಂಧಿ ಹಂತಕ ಜೈಲಿನಿಂದ ಬಿಡುಗಡೆ

    ಪೆರಾರಿವಾಲನ್ ಬಿಡುಗಡೆಗಾಗಿ ಅವನ ತಾಯಿ ಅರ್ಪುತಮ್ಮಾಳ್ ಸಾಕಷ್ಟು ನೋವು ಅನುಭವಿಸಿದ್ದರು. ತಮ್ಮ ಮಗನನ್ನು ಪಡೆಯಲು ಹಲವು ನಾಯಕರನ್ನು ಭೇಟಿ ಮಾಡಿದ್ದರು. ಆದರೆ, ನನ್ನ ಕುಟುಂಬಕ್ಕೆ ಅಂತಹ ಬೆಂಬಲವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಹಾರ್ದಿಕ್ ಪಟೇಲ್

    ಪೆರಾರಿವಾಲನ್ ಬಿಡುಗಡೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಆರೋಪಿ ಸ್ಥಾನದಲ್ಲಿರುವ ನಳಿನಿಗೆ ಮಗುವಿದ್ದ ಕಾರಣ ಆಕೆಗೆ ಮರಣದಂಡನೆ ತೆಗೆದುಹಾಕಿತು. ಇದೀಗ ಮತ್ತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ `ಉಳಿದ 6 ಮಂದಿ ಬಿಡುಗಡೆಗೆ ರಾಜ್ಯ ಸರ್ಕಾರ ಶ್ರಮಿಸಲಿದೆ’ ಎಂದು ಹೇಳಿದ್ದನ್ನು ಟಿವಿಯಲ್ಲಿ ನೋಡಿದ್ದೇನೆ. ಹಾಗಾಗಿ ನನ್ನ ಮಗಳೂ ಶೀಘ್ರದಲ್ಲೇ ಬಿಡುಗಡೆಯಾಗುತ್ತಾಳೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

  • ಎಲ್ಲರೂ ಮನುಷ್ಯರೇ: ರಾಜೀವ್ ಗಾಂಧಿ ಹಂತಕನ ಪ್ರತಿಕ್ರಿಯೆ

    ಎಲ್ಲರೂ ಮನುಷ್ಯರೇ: ರಾಜೀವ್ ಗಾಂಧಿ ಹಂತಕನ ಪ್ರತಿಕ್ರಿಯೆ

    ಚೆನ್ನೈ: ಮರಣದಂಡನೆಯ ಅಗತ್ಯವಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಅಪರಾಧಿ ಎ.ಜಿ.ಪೆರಾರಿವಾಲನ್ ಅಭಿಪ್ರಾಯಪಟ್ಟಿದ್ದಾನೆ.

    ಹತ್ಯೆ ಪ್ರಕರಣದಲ್ಲಿ 31 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಪೆರಾರಿವಾಲನ್‌ನನ್ನು ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶ ಹೊರಡಿಸಿತು. ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ನಂತರ ಪೆರಾರಿವಾಲನ್ ಮಾತನಾಡಿದ್ದಾನೆ.

    ನಾನು ಈಗಷ್ಟೇ ಹೊರಬಂದಿದ್ದೇನೆ. ಇದು 31 ವರ್ಷಗಳ ಕಾನೂನು ಹೋರಾಟ. ನಾನು ಸ್ವಲ್ಪ ಉಸಿರಾಡಬೇಕಾಗಿದೆ. ನನಗೆ ಸ್ವಲ್ಪ ಸಮಯ ನೀಡಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾನೆ. ಇದನ್ನೂ ಓದಿ: 31 ವರ್ಷಗಳ ನಂತರ ರಾಜೀವ್ ಗಾಂಧಿ ಹಂತಕ ಜೈಲಿನಿಂದ ಬಿಡುಗಡೆ

    ಮರಣದಂಡನೆಯ ಅಗತ್ಯವಿಲ್ಲ ಎಂದು ನಾನು ಸ್ಪಷ್ಟವಾಗಿ ನಂಬುತ್ತೇನೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಅನೇಕ ನ್ಯಾಯಮೂರ್ತಿಗಳು ಹಾಗೆ ಹೇಳಿದ್ದಾರೆ. ಎಲ್ಲರೂ ಮನುಷ್ಯರೇ ಎಂದು ಹೇಳಿಕೆ ನೀಡಿದ್ದಾನೆ.

    ಅನೇಕ ಅಪರಿಚಿತರು ನಮಗೆ ಬೆಂಬಲ ನೀಡಿದ್ದಾರೆ. ನನಗೆ ತುಂಬಾ ಜನರ ಪರಿಚಯವಿಲ್ಲ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾನೆ. ಇದನ್ನೂ ಓದಿ: ಭಾರತಕ್ಕೆ ನೆಹರು ಕುಟುಂಬವಾದದ ಪಿತಾಮಹರಾದರೆ, ಕರ್ನಾಟಕಕ್ಕೆ ದೇವೇಗೌಡರೇ ಕುಟುಂಬವಾದದ ಪಿತಾಮಹ: ಬಿಜೆಪಿ

    1991ರ ಮೇ 21ರಂದು ರಾಜೀವ್ ಗಾಂಧಿ ಅವರು ಎಲ್‌ಟಿಟಿಇ ಉಗ್ರರಿಂದ ತಮಿಳುನಾಡಿನಲ್ಲಿ ಹತ್ಯೆಗೀಡಾದರು. ಆರಂಭದಲ್ಲಿ ಚೆನ್ನೈ ವಿಶೇಷ ನ್ಯಾಯಾಲಯವು ಪೆರಾರಿವಾಲನ್‌ಗೆ ಮರಣದಂಡನೆಯನ್ನು ವಿಧಿಸಿತ್ತು. ನಂತರ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು.

  • 31 ವರ್ಷಗಳ ನಂತರ ರಾಜೀವ್ ಗಾಂಧಿ ಹಂತಕ ಜೈಲಿನಿಂದ ಬಿಡುಗಡೆ

    31 ವರ್ಷಗಳ ನಂತರ ರಾಜೀವ್ ಗಾಂಧಿ ಹಂತಕ ಜೈಲಿನಿಂದ ಬಿಡುಗಡೆ

    ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದಿದ್ದ ಹಂತಕ ಪೆರಾರಿವಾಲನ್‌ನನ್ನು 31 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

    31 ವರ್ಷಗಳ ಕಾಲ ಜೈಲಿನಲ್ಲಿದ್ದ ಪೆರಾರಿವಾಲನ್ ತಮಿಳುನಾಡು ಸರ್ಕಾರದ ಮನವಿ ಮೇರೆಗೆ ಬಿಡುಗಡೆಗೊಂಡಿದ್ದಾರೆ. ರಾಜೀವ್ ಗಾಂಧಿ ಹತ್ಯೆಯಲ್ಲಿ ಶಾಮೀಲಾಗಿದ್ದ ಏಳು ಮಂದಿಯಲ್ಲಿ ಒಬ್ಬರಾಗಿದ್ದ ಪೆರಾರಿವಾಲನ್ 30 ವರ್ಷಗಳಿಗೂ ಅಧಿಕ ಕಾಲ ಸೆರೆಮನೆ ವಾಸ ಅನುಭವಿಸಿದ್ದರು.

    ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಬಿ. ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು ಪೆರಾರಿವಾಲ್‍ನನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಹಾರ್ದಿಕ್ ಪಟೇಲ್

    ಕ್ಷಮಾಪಣೆ ಅರ್ಜಿ ಬಗ್ಗೆ ರಾಷ್ಟ್ರಪತಿಗಳು ನಿರ್ಧರಿಸುವವರೆಗೆ ನ್ಯಾಯಾಲಯ ಕಾಯಬೇಕು ಎಂಬ ಕೇಂದ್ರ ಮನವಿ ಮಾಡಿತ್ತು. ಆದರೆ ರಾಷ್ಟ್ರಪತಿಗಳು ನಿರ್ಧಾರ ಕೈಗೊಳ್ಳುವ ಮೊದಲೇ ಕೋರ್ಟ್ ಬಿಡುಗಡೆ ಮಾಡಲು ಸೂಚಿಸಿದೆ.

    supreme court 12

    2018ರಲ್ಲಿ ತಮಿಳುನಾಡು ಸರ್ಕಾರ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡುವಂತೆ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಕಳುಹಿಸಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಪೆರಾರಿವಾಲನ್ ಅವರಿಗೆ ಕೋರ್ಟ್ ಮಾರ್ಚ್ 9 ರಂದು ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: 132 ಚೀನಾ ವಿಮಾನ ಪತನ ಉದ್ದೇಶಪೂರ್ವಕ – ಅಮೆರಿಕ ವರದಿ ಹೇಳಿದ್ದೇನು?

    1991ರ ಮೇ 21ರಂದು ರಾಜೀವ್ ಗಾಂಧಿ ಅವರು ಎಲ್‌ಟಿಟಿಇ ಉಗ್ರರಿಂದ ತಮಿಳುನಾಡಿನಲ್ಲಿ ಹತ್ಯೆಯಾಗಿದ್ದರು. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಅಪರಾಧಿಗಳಲ್ಲಿ ಪೆರಾರಿವಾಲನ್ ಒಬ್ಬರಾಗಿದ್ದರು. ಕಳೆದ 31 ವರ್ಷಗಳಿಂದ ಜೀವಾವಧಿ ಶಿಕ್ಷೆಯನ್ನು ಪೆರಾರಿವಾಲನ್ ಅನುಭವಿಸುತ್ತಿದ್ದರು.