Tag: ಪೆಟ್ರೋಲ್ ಟ್ಯಾಂಕರ್

  • ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕ್ಯಾನ್‌ನಲ್ಲಿ ತುಂಬಿಕೊಳ್ಳುತ್ತಿದಾಗ ಸ್ಫೋಟ – 70 ಮಂದಿ ಸಾವು

    ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕ್ಯಾನ್‌ನಲ್ಲಿ ತುಂಬಿಕೊಳ್ಳುತ್ತಿದಾಗ ಸ್ಫೋಟ – 70 ಮಂದಿ ಸಾವು

    ಅಬುಜಾ: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟಗೊಂಡ ಪರಿಣಾಮ 70 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರ ನೈಜೀರಿಯಾದ (Nigeria) ಕಡುನಾ (Kaduna) ನಗರದ ಡಿಕ್ಕೊ ಜಂಕ್ಷನ್‌ನಲ್ಲಿ ನಡೆದಿದೆ.

    ಶನಿವಾರ ಈ ಘಟನೆ ಸಂಭವಿಸಿದ್ದು, 60,000 ಲೀಟರ್ ಪೆಟ್ರೋಲ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಸ್ಫೋಟಗೊಂಡಿದೆ. ಟ್ರಕ್ ಪಲ್ಟಿಯಾದಾಗ ಚೆಲ್ಲಿದ್ದ ಪೆಟ್ರೋಲ್‌ನ್ನು ತುಂಬಿಕೊಳ್ಳಲು ಹೋಗಿದ್ದವರ ಪೈಕಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ. ಜೊತೆಗೆ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿವೆ ಎಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿಳಿಸಿದೆ.ಇದನ್ನೂ ಓದಿ: ಬಣ ಬಡಿದಾಟದ ನಡುವೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೆ ಸುನಿಲ್ ಕುಮಾರ್ ಮನವಿ

    ಈ ಕುರಿತು ನೈಜರ್ ರಾಜ್ಯದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಮುಖ್ಯಸ್ಥ ಕುಮಾರ್ ತ್ಸುಕ್ವಾಮ್ ಮಾತನಾಡಿ, ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನೈಜೇರಿಯಾ ರಾಜಧಾನಿ ಅಬುಜಾವನ್ನು ಕಡುನಾಗೆ ಸಂಪರ್ಕಿಸುವ ರಸ್ತೆಯ ಡಿಕ್ಕೊ ಜಂಕ್ಷನ್‌ನಲ್ಲಿ ಈ ಅವಘಡ ಸಂಭವಿಸಿದ್ದು, ಇಲ್ಲಿಯವರೆಗೆ ಸಾವಿನ ಸಂಖ್ಯೆ 70ಕ್ಕೆ ಏರಿದೆ ಎಂದು ತಿಳಿಸಿದರು.

    ನೈಜೀರಿಯಾದಲ್ಲಿ ಕಳೆದ 18 ತಿಂಗಳಲ್ಲಿ ಪೆಟ್ರೋಲ್ ಬೆಲೆ ಐದು ಪಟ್ಟು ಹೆಚ್ಚಾಗಿದೆ. ಹೀಗಾಗಿ ಟ್ರಕ್ ಪಲ್ಟಿಯಾದ ಸಮಯದಲ್ಲಿ ಪೆಟ್ರೋಲ್ ತೆಗೆದುಕೊಳ್ಳಲು ಹೋದವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ ಎಂದು ಹೇಳಿದರು.

    ಕಳೆದ ಅಕ್ಟೋಬರ್ ತಿಂಗಳಲ್ಲಿ ಆಫ್ರಿಕಾದ ಜಿಗಾವಾ ರಾಜ್ಯದಲ್ಲಿ ನಡೆದ ಸ್ಫೋಟದಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.ಇದನ್ನೂ ಓದಿ: ನಾಗು ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

  • ಪೆಟ್ರೋಲ್ ಟ್ಯಾಂಕರ್ ಹರಿದು ವ್ಯಕ್ತಿ ಸ್ಥಳದಲ್ಲೇ ಸಾವು

    ಪೆಟ್ರೋಲ್ ಟ್ಯಾಂಕರ್ ಹರಿದು ವ್ಯಕ್ತಿ ಸ್ಥಳದಲ್ಲೇ ಸಾವು

    ಗದಗ: ಪೆಟ್ರೋಲ್ ಟ್ಯಾಂಕರ್ ವಾಹನ ಹರಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

    ಜಿಲ್ಲಾಡಳಿತ ಭವನದ ಎದುರಿಗೆ ಈ ದುರ್ಘಟನೆ ನಡೆದಿದೆ. ಮೃತ ವ್ಯಕ್ತಿ ಒಕ್ಕಲಗೇರಿ ಓಣಿಯ 32 ವರ್ಷದ ಮಹಾದೇವಪ್ಪ ಕುಂಬಾರ ಎಂದು ಗುರುತಿಸಲಾಗಿದೆ. ಈ ಟ್ಯಾಂಕರ್ ಹುಬ್ಬಳ್ಳಿಯಿಂದ ಗದಗ ಮಾರ್ಗವಾಗಿ ಕೊಪ್ಪಳಕ್ಕೆ ಹೊರಟಿತ್ತು ಎನ್ನಲಾಗುತ್ತಿದೆ.

    ಘಟನೆಯ ಬಗ್ಗೆ ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೈಕಲ್ ಮೇಲೆ ಮನೆಗೆ ಕಟ್ಟಿಗೆ ಒಯ್ಯುತ್ತಿದ್ದ ವ್ಯಕ್ತಿಯ ಮೇಲೆ ಟ್ಯಾಂಕರ್ ಹರಿದಿದ್ದು, ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅವಘಡ ನಡೆದಿದೆ. ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಂತಿದ್ದ ಟ್ರಕ್‍ಗೆ ಗುದ್ದಿದ ಕಾರು- 6 ಯುವಕರು ಸಾವು

    ನಿಂತಿದ್ದ ಟ್ರಕ್‍ಗೆ ಗುದ್ದಿದ ಕಾರು- 6 ಯುವಕರು ಸಾವು

    – ಪಾರ್ಟಿಯಿಂದ ಬರ್ತಿದ್ದ ವೇಳೆ ಅಪಘಾತ

    ಭೋಪಾಲ್: ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಂತಿದ್ದ  ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 6 ಯುವಕರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ತಲವಾಲಿ ಬಳಿ ನಡೆದಿದೆ.

    ಮೃತರನ್ನು ರಿಶಿ ಪವಾರ್(19), ಸೂರಜ್(25), ಚಂದ್ರಭಾನ ರಘುವಂಶಿ(23), ಸೋನು ಜತ್(23), ಸುಮಿತ್ ಸಿಂಗ್(30) ಮತ್ತು ದೇವ್(28) ಎಂದು ಗುರುತಿಸಲಾಗಿದೆ. ಮೃತರು ಇಂದೋರ್‍ ನಿವಾಸಿಗಳಾಗಿದ್ದಾರೆ. ಈ ಯುವಕರ ತಂಡ ಪಾರ್ಟಿ ಮುಗಿಸಿಕೊಂಡು ಮಾಂಗ್ಲಿಯಾದಿಂದ ತಮ್ಮ ನಗರಕ್ಕೆ ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ ಎಂದು ಲಸುದಿಯ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    ವೇಗವಾಗಿ ಚಲಿಸುತ್ತಿದ್ದ ಕಾರು ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಂತಿದ್ದ ತೈಲ ಸಾಗಾಣೆ ಮಾಡುವ ಟ್ಯಾಂಕರ್‍ಗೆ ಗುದ್ದಿದೆ. ಕಾರ್ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಈ ವೇಳೆ ಕಾರಿನಲ್ಲಿದ್ದ ಕೆಲ ಯುವಕರ ದೇಹದ ಭಾಗಗಳು ಕಟ್ ಆಗಿವೆ.

    ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗಾಗಿ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಪೋಷಕರಿಗೆ ಮೃತದೇಹವನ್ನು ನೀಡುತ್ತೇವೆ. ಚಾಲಕ ನಿದ್ರೆ ಮಂಪರಿಗೆ ಜಾರಿರಬಹುದು ಅಥವಾ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಕಾರು ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

  • ಚಲಿಸುತ್ತಿದ್ದ ಪೆಟ್ರೋಲ್ ಟ್ಯಾಂಕರ್‌ನಲ್ಲಿ ಬೆಂಕಿ ಅವಘಡ

    ಚಲಿಸುತ್ತಿದ್ದ ಪೆಟ್ರೋಲ್ ಟ್ಯಾಂಕರ್‌ನಲ್ಲಿ ಬೆಂಕಿ ಅವಘಡ

    ಧಾರವಾಡ: ಚಲಿಸುತ್ತಿದ್ದ ಪೆಟ್ರೋಲ್ ಟ್ಯಾಂಕರ್‌ನಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ಧಾರವಾಡ ನಗರದ ಜಿಲ್ಲಾ ನ್ಯಾಯಾಲಯದ ಮುಂದೆ ನಡೆದಿದೆ.

    ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಟ್ಯಾಂಕರಿನ ಕ್ಯಾಬಿನ್‍ನಲ್ಲಿ ಏಕಾಏಕಿ ಬೆಂಕಿ ಹೊತ್ತಿ ಉರಿದಿದೆ. ಕೂಡಲೇ ಎಚ್ಚೆತ್ತ ಚಾಲಕ ಸ್ಥಳದಲ್ಲೇ ಟ್ಯಾಂಕರ್ ನಿಲ್ಲಿಸಿದ್ದಾನೆ. ಪೆಟ್ರೋಲ್ ಖಾಲಿ ಮಾಡಿ ಈ ಟ್ಯಾಂಕರ್ ವಾಪಸ್ಸಾಗುತ್ತಿತ್ತು.

    ಟ್ಯಾಂಕರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಲಾರಿ ಚಾಲಕ ಸ್ಥಳದಲ್ಲೇ ಟ್ಯಾಂಕರ್ ನಿಲ್ಲಿಸಿ ಸ್ಥಳೀಯರ ಜೊತೆ ಬೆಂಕಿ ನಂದಿಸಲು ಪ್ರಯತ್ನ ಮಾಡಿದ್ದಾನೆ. ಆದರೆ ಈ ಪ್ರಯತ್ನ ವಿಫಲವಾದ ಕಾರಣ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಟ್ಯಾಂಕರ್‌ಗೆ ಬೆಂಕಿ ಹತ್ತಿದ ಸ್ಥಳದಲ್ಲಿ ಪೆಟ್ರೋಲ್ ಬಂಕ್ ಹಾಗೂ ಮನೆಗಳು ಇವೆ. ಆದರೆ ಹೆಚ್ಚಿನ ಅನಾಹುತ ತಪ್ಪಿದ್ದರಿಂದ ಜನರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಲ್ಟಿಯಾಗಿ ಧಗಧಗನೆ ಹೊತ್ತಿ ಉರಿಯುತ್ತಿದೆ ಪೆಟ್ರೋಲ್ ಟ್ಯಾಂಕರ್- 5ಕ್ಕೂ ಹೆಚ್ಚು ಮನೆಗಳು ಭಸ್ಮ

    ಪಲ್ಟಿಯಾಗಿ ಧಗಧಗನೆ ಹೊತ್ತಿ ಉರಿಯುತ್ತಿದೆ ಪೆಟ್ರೋಲ್ ಟ್ಯಾಂಕರ್- 5ಕ್ಕೂ ಹೆಚ್ಚು ಮನೆಗಳು ಭಸ್ಮ

    ಚಿಕ್ಕಮಗಳೂರು: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ 5ಕ್ಕೂ ಹೆಚ್ಚು ಮನೆಗಳು ಧಗಧಗನೆ ಹೊತ್ತಿ ಉರಿದು ಘಟನೆ ಚಿಕ್ಕಮಗಳೂರು ಕಡೂರು ತಾಲೂಕು ಗಿರಿಯಾಪುರ ಗ್ರಾಮದಲ್ಲಿ ನಡೆದಿದೆ.

    ಕಡೂರಿನಿಂದ ಹೊಸದುರ್ಗ ಕಡೆಗೆ ಪೆಟ್ರೋಲ್ ಟ್ಯಾಂಕರ್ ಹೋಗುತ್ತಿತ್ತು. ಈ ವೇಳೆ ಲಾರಿ ಪಕ್ಕದಲ್ಲೇ ಬೈಕ್ ಬಂದಿದ್ದು, ಅಪಘಾತ ತಡೆಯಲು ಹೋಗಿ ಲಾರಿ ಪಲ್ಟಿ ಆಗಿದೆ. ಬೈಕ್ ಮೇಲೆ ಪೆಟ್ರೋಲ್ ಟ್ಯಾಂಕರ್ ಬಿದ್ದಿದೆ.

    ಬೈಕಿನ ಮೇಲೆ ಬಿದ್ದ ಬಳಿಕ ಟ್ಯಾಂಕರ್ ಹೊತ್ತಿ ಉರಿದಿದೆ. ಹೊತ್ತು ಉರಿಯುತ್ತಿದ್ದಂತೆ ಕ್ಲೀನರ್ ಸ್ಥಳದಲ್ಲೇ ಸಜೀವ ದಹನವಾಗಿದ್ದರೆ. ಚಾಲಕ ಮೈತುಂಬಾ ಬೆಂಕಿ ಮೆತ್ತಿಕೊಂಡೇ ಓಡಿ ಬಂದಿದ್ದಾನೆ. ಸ್ಥಳೀಯರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಳೆ ಬಂದಿದ್ದ ಕಾರಣ ಲಾರಿ ಪಲ್ಟಿ ಹೊಡೆದಿದೆ. ಅಕ್ಕಪಕ್ಕದಲ್ಲಿ ಮನೆ ಇದ್ದ ಕಾರಣ 5ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿದೆ. 5 ಅಗ್ನಿ ಶಾಮಕ ದಳ ವಾಹನಗಳು ಈಗ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ.

    ಸುಮಾರು 100 ಮೀ. ವ್ಯಾಪ್ತಿಯಲ್ಲಿ ಬೆಂಕಿ ಆವರಿಸಿದ್ದು, ಸದ್ಯ ಅಕ್ಕಪಕ್ಕದ ಮನೆಯಲ್ಲಿದ್ದವರು ಹಿಂದಿನ ಬಾಗಿಲಿನಿಂದ ಹೊರ ಬಂದಿದ್ದಾರೆ.

     

    https://youtu.be/ES0e6bTA3F4

  • ವಾಹನ ಸವಾರರೇ ಗಮನಿಸಿ.. ನಾಳೆ ಪೆಟ್ರೋಲ್, ಡೀಸೆಲ್ ಸಿಗಲ್ಲ!

    ವಾಹನ ಸವಾರರೇ ಗಮನಿಸಿ.. ನಾಳೆ ಪೆಟ್ರೋಲ್, ಡೀಸೆಲ್ ಸಿಗಲ್ಲ!

    ಬೆಂಗಳೂರು: ನಗರದ ಹೊಸಕೋಟೆ ಬಳಿಯ ದೇವನಗುಂಡಿ ತೈಲ ಘಟಕ ಹಾಗೂ ಟರ್ಮಿನಲ್ ಸಂಪರ್ಕ ರಸ್ತೆಯನ್ನು ದುರಸ್ಥಿಗೆ ಒತ್ತಾಯಿಸಿ ಪೆಟ್ರೋಲ್ ಪೂರೈಕೆ ಮಾಡೋ ಟ್ಯಾಂಕರ್ ಚಾಲಕರು ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದಾಗಿ ನಗರಕ್ಕೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದು, ನಾಳೆ ಬಂಕ್ ಗಳಲ್ಲಿ ಪೆಟ್ರೋಲ್ ಸಿಗುವ ಸಾಧ್ಯತೆ ಕಡಿಮೆ ಇದೆ.

    ಕಳೆದ ಎರಡು ವರ್ಷಗಳ ಹಿಂದೆಯೂ ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಲಾರಿ ಚಾಲಕರು ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ತೈಲ ಪೂರೈಕೆ ಸಂಸ್ಥೆಗಳು ಚಾಲಕರ ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆದಿದ್ದರು. ಕಳೆದ ಎರಡು ದಿನಗಳ ಹಿಂದೆ ಟ್ಯಾಂಕರ್ ಪಲ್ಟಿಯಾಗಿ ಚಾಲಕರೊಬ್ಬರು ಮೃತಪಟ್ಟಿದ್ದರು. ಇದರಿಂದ ಅನಿವಾರ್ಯವಾಗಿ ಚಾಲಕರು ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ಕಳೆದ ಬಾರಿ ಪ್ರತಿಭಟನೆ ನಡೆಸಿದ ವೇಳೆ ರಸ್ತೆ ದುರಸ್ಥಿ ಕಾರ್ಯ ನಡೆಸುವ ಭರವಸೆ ನೀಡಿದ್ದ ತೈಲ ಪೂರೈಕೆ ಸಂಸ್ಥೆಗಳು 500 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದವು. ಆದರೆ ಹಣ ಇದ್ದರು ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿರಲಿಲ್ಲ. ಪ್ರಸ್ತುತ ನಗರದಲ್ಲಿ ಇರುವ ಪೆಟ್ರೋಲ್ ಬಂಕ್ ಗಳಲ್ಲಿ ಶೇಖರಣೆ ಮಾಡಿರುವ ತೈಲವನ್ನಷ್ಟೇ ಪೂರೈಕೆ ಮಾಡಲು ಸಾಧ್ಯವಿದೆ. ಇದರ ನಂತರ ಮತ್ತೆ ತೈಲ ಪೂರೈಕೆ ಮಾಡುವವರೆಗೂ ಇಂಧನ ಲಭ್ಯವಾಗುವ ಸಾಧ್ಯತೆಗಳು ಕಡಿಮೆ ಇದೆ.

    ಪ್ರತಿಭಟನೆ ನಡೆಸುತ್ತಿರುವ ಟ್ಯಾಂಕರ್ ಚಾಲಕರ ಮನವೊಲಿಸಲು ಈಗಾಗಲೇ ತೈಲ ಕಂಪನಿಗಳು ಸಭೆ ನಡೆಸಿವೆ. ಆದರೆ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಆರಂಭವಾಗುವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾನಿರತರು ತಿಳಿಸಿದ್ದಾರೆ. ದೇವನಗುಂದಿ ಸಮೀಪದ ತೈಲ ಘಟಕದ ಬಳಿ 1500ಕ್ಕೂ ಹೆಚ್ಚು ಟ್ಯಾಂಕರ್ ಚಾಲಕರು ಪ್ರತಿಭಟನೆ ಕೈಗೊಂಡಿದ್ದಾರೆ. ಇದರಿಂದ ಬೆಂಗಳೂರು ಸೇರಿದಂತೆ ರಾಮನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ತೈಲ ಪೂರೈಕೆ ಸ್ಥಗಿತವಾಗಲಿದೆ.

    https://www.youtube.com/watch?v=nCWqHObzQ9E