Tag: ಪೃಥ್ವಿ ರೆಡ್ಡಿ

  • ಪೊರಕೆ ಹಿಡಿದ ಮತ್ತೋರ್ವ ಕನ್ನಡದ ನಟ : ‘ಆಮ್ ಆದ್ಮಿ ಪಾರ್ಟಿ’ಗೆ ಸೇರ್ಪಡೆಯಾದ ಟೆನ್ನಿಸ್ ಕೃಷ್ಣ

    ಪೊರಕೆ ಹಿಡಿದ ಮತ್ತೋರ್ವ ಕನ್ನಡದ ನಟ : ‘ಆಮ್ ಆದ್ಮಿ ಪಾರ್ಟಿ’ಗೆ ಸೇರ್ಪಡೆಯಾದ ಟೆನ್ನಿಸ್ ಕೃಷ್ಣ

    ಕೆಲ ತಿಂಗಳ ಹಿಂದೆಯಷ್ಟೇ ಕನ್ನಡದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದರು. ಇದೀಗ ಮತ್ತೋರ್ವ ನಟ ಪೊರೆಕೆ ಹಿಡಿದಿದ್ದು, ಖ್ಯಾತ ಹಾಸ್ಯನಟ ಟೆನ್ನಿಸ್‌ ಕೃಷ್ಣ ಕೂಡ ಆಮ್‌ ಆದ್ಮಿ ಪಾರ್ಟಿಗೆ ಗುರುವಾರ ಸೇರ್ಪಡೆಯಾದರು. ಖಾಸಗೀ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರು ಕೃಷ್ಣರವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

    ಎಎಪಿ ಸೇರ್ಪಡೆ ಬಳಿಕ ಮಾತನಾಡಿದ ಟೆನ್ನಿಸ್‌ ಕೃಷ್ಣ, ದೇಶದ ರಾಜಕೀಯದಲ್ಲಿ ಬದಲಾವಣೆ ತರುವ ಪ್ರಯತ್ನದಲ್ಲಿ ಆಮ್‌ ಆದ್ಮಿ ಪಾರ್ಟಿ ಯಶಸ್ವಿಯಾಗುತ್ತಿದೆ. ದೆಹಲಿಯಲ್ಲಿ ಶಿಕ್ಷಣ, ಆರೋಗ್ಯ,ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಧಿಸಿ ತೋರಿಸಿರುವ ಎಎಪಿಯು ಈಗ ಪಂಜಾಬ್‌ನಲ್ಲೂ ಮೋಡಿ ಮಾಡುತ್ತಿದೆ ಎಂದರು. ಇದನ್ನೂ ಓದಿ:ಸಿಂಪಲ್ ಸುನಿ `ಗತವೈಭವ’ದಲ್ಲಿ ದೇವಕನ್ಯೆಯಾಗಿ ಆಶಿಕಾ ರಂಗನಾಥ್‌

    ಭ್ರಷ್ಟ ಪಕ್ಷಗಳನ್ನು ಬದಿಗೊತ್ತಿ ದೇಶವನ್ನು ಕಾಪಾಡಲು ಎಎಪಿಯಿಂದ ಮಾತ್ರ ಸಾಧ್ಯ.ಸಾಮಾನ್ಯ ಜನರ ಬಗ್ಗೆ ಅಪಾರ ಕಾಳಜಿಯುಳ್ಳ ಆಮ್‌ ಆದ್ಮಿ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಎಎಪಿಯನ್ನು ಬಳಸಿಕೊಂಡು ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪ್ರವೇಶಿಸಬೇಕು ಎಂದು ಹೇಳಿದರು.

    ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ,ಕರ್ನಾಟಕದಲ್ಲಿ ಆಮ್‌ ಆದ್ಮಿ ಪಾರ್ಟಿಯು ಭದ್ರವಾಗಿ ಬೇರೂರುತ್ತಿದೆ. ಸಿನಿಮಾ ಸಾಧಕರು,ದಕ್ಷ ಅಧಿಕಾರಿಗಳು,ರೈತ ನಾಯಕರು,ಸಮಾಜಸೇವಕರು, ವಕೀಲರು, ಉಪನ್ಯಾಸಕರು ಮುಂತಾದ ವಿವಿಧ ಕ್ಷೇತ್ರದ ಗಣ್ಯರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.

    ದೇಶಕ್ಕೆ ಆಮ್‌ ಆದ್ಮಿ ಪಾರ್ಟಿಯೊಂದೇ ಆಶಾಕಿರಣ ಎಂಬುದು ಯುವಜನತೆಗೆ ಮನವರಿಕೆಯಾಗುತ್ತಿದೆ. ಜನಪ್ರಿಯ ನಟರಾದ ಟೆನಿಸ್ ಕೃಷ್ಣರವರ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ. ಸ್ವಚ್ಛ ರಾಜಕೀಯ ಹಾಗೂ ಪಾರದರ್ಶಕ ಆಡಳಿತವೇ ನಮ್ಮೆಲ್ಲರ ಧ್ಯೇಯವಾಗಿದ್ದು, ಇದನ್ನು ಸಾಧಿಸಲು ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ‌ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಮುಖ್ಯಮಂತ್ರಿ ಚಂದ್ರು AAP ಸೇರ್ಪಡೆಗೆ ಮುಹೂರ್ತ ಫಿಕ್ಸ್

    ಮುಖ್ಯಮಂತ್ರಿ ಚಂದ್ರು AAP ಸೇರ್ಪಡೆಗೆ ಮುಹೂರ್ತ ಫಿಕ್ಸ್

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಮುಖಂಡ ಹಾಗೂ ನಟ ಮುಖ್ಯಮಂತ್ರಿ ಚಂದ್ರು ಇದೀಗ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

    ಆಮ್ ಆದ್ಮಿ ಪಾರ್ಟಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದ್ದು ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ.

    ನಾಡಿನ ಸಜ್ಜನ ಗಣ್ಯರ ಆಮ್ ಆದ್ಮಿ ಪಾರ್ಟಿ ಸೇರ್ಪಡೆ ಪರ್ವ ಮುಂದುವರಿದಿದೆ. ಈಗ ಖ್ಯಾತ ನಟ ಹಾಗೂ ವಿಧಾನಸಭೆ, ವಿಧಾನ ಪರಿಷತ್ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಎಎಪಿ ಸೇರ್ಪಡೆಯಾಗುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಮುಖ್ಯಮಂತ್ರಿ ಚಂದ್ರು ಗುಡ್ ಬೈ

    ಕಾಂಗ್ರೆಸ್ ಹಿರಿಯ ಮುಖಂಡ ಮುಖ್ಯಮಂತ್ರಿ ಚಂದ್ರು ರಾಜ್ಯಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷೆಯಂತೆ ಅವರಿಗೆ ರಾಜ್ಯಸಭೆ ಟಿಕೆಟ್ ಸಿಗಲಿಲ್ಲ. ಇದರ ಬೆನ್ನಲ್ಲೆ ವೈಯಕ್ತಿಕ ಕಾರಣಗಳನ್ನು ನೀಡಿ ಒಂದು ವಾರದ ಹಿಂದೆಯಷ್ಟೇ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲೂ ಪುರಾತನ ದೇವಾಲಯ ಒಡೆದು ಮಸೀದಿ ನಿರ್ಮಾಣ: ಅಭಯ್ ಪಾಟೀಲ್

    ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಸಾಂಸ್ಕೃತಿಕ ಘಟಕದ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಆದರೂ ಪಕ್ಷ ಗುರುತಿಸಿರಲಿಲ್ಲ ಎಂದು ರಾಜೀನಾಮೆ ನೀಡುವ ಮೂಲಕ ಪರೋಕ್ಷವಾಗಿ ಅಸಮಾಧಾನ ತೋರಿದ್ದರು. ಅಷ್ಟೇ ಅಲ್ಲದೆ ಕಾಂಗ್ರೆಸ್ ನಾಯಕರ ವಿರುದ್ಧ ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದ್ದರು.

  • ಕಷ್ಟದಲ್ಲಿರುವ ಜನರಿಗೆ ಸರ್ಕಾರದಿಂದ ಕರೆಂಟ್ ಶಾಕ್: ಪೃಥ್ವಿ ರೆಡ್ಡಿ

    ಕಷ್ಟದಲ್ಲಿರುವ ಜನರಿಗೆ ಸರ್ಕಾರದಿಂದ ಕರೆಂಟ್ ಶಾಕ್: ಪೃಥ್ವಿ ರೆಡ್ಡಿ

    ಬೆಂಗಳೂರು: ಬೆಲೆ ಏರಿಕೆ, ಉದ್ಯೋಗ ನಷ್ಟ ಹಾಗೂ ಲಾಕ್‍ಡೌನ್ ಸಂಕಷ್ಟದಿಂದ ತತ್ತರಿಸಿರುವ ಜನರಿಗೆ ವಿದ್ಯುತ್ ದರ ಏರಿಕೆ ಮೂಲಕ ರಾಜ್ಯ ಸರ್ಕಾರವು ಕರೆಂಟ್ ಶಾಕ್ ನೀಡುತ್ತಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಟೀಕಿಸಿದ್ದಾರೆ.

    ವಿದ್ಯುತ್ ದರ ಏರಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಲ್ಲಿ ವಿದ್ಯುತ್ ದರವನ್ನು ಮೂರನೇ ಸಲ ಏರಿಕೆ ಮಾಡಲಾಗುತ್ತಿದೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕವೇ ಅತಿಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಆದರೂ ಇಲ್ಲಿ ಪದೇಪದೆ ಬೆಲೆ ಏರಿಕೆ ಮಾಡಿ ಜನಸಾಮಾನ್ಯರನ್ನು ಹೈರಾಣಾಗಿಸಲಾಗುತ್ತಿದೆ. ಅತೀ ಕಡಿಮೆ ವಿದ್ಯುತ್ ಉತ್ಪಾದನೆ ಮಾಡುವ, ಆಮ್ ಆದ್ಮಿ ಪಾರ್ಟಿ ಆಡಳಿತವಿರುವ ದೆಹಲಿಯಲ್ಲಿ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ತನಕ ಉಚಿತ ವಿದ್ಯುತ್ ನೀಡಲು ಸಾಧ್ಯವಾಗಿದೆ. ನಮ್ಮ ರಾಜ್ಯದಲ್ಲಿ ದರ ಏರಿಕೆಗೆ ಕಡಿವಾಣ ಹಾಕಲೂ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಾವು ಎಷ್ಟೇ ದೊಡ್ಡವರಾದರೂ ಶಾಲೆ, ಗುರುಗಳು ಅಂದಾಗ ಗೌರವದ ಭಾವ ಮೂಡುತ್ತೆ: ಆರ್.ಅಶೋಕ್

    ಕೋವಿಡ್‍ನಿಂದಾಗಿ 2 ವರ್ಷಗಳ ಕಾಲ ಶೇ.40ಕ್ಕಿಂತಲೂ ಹೆಚ್ಚಿನ ಕೈಗಾರಿಕೆಗಳು ಸ್ಥಗಿತಗೊಂಡಿದ್ದವು. ಅವು ವಿದ್ಯುತ್ ಬಳಸದಿದ್ದರೂ ಕನಿಷ್ಠ ವಿದ್ಯುತ್ ದರವನ್ನು ಪಾವತಿಸಿದ್ದವು. ಇದರಿಂದಾಗಿ 2 ವರ್ಷಗಳ ಕಾಲ ವಿದ್ಯುತ್ ಸರಬರಾಜು ಕಂಪನಿಗಳಿಗೆ ಉಚಿತವಾಗಿ ಹಣ ಲಭಿಸಿದೆ. ವಿದ್ಯುತ್ ಪೂರೈಕೆಯಲ್ಲಿ ಅನಗತ್ಯ ವೆಚ್ಚಗಳ ಏರಿಕೆ, ಸರಬರಾಜು ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಸರ್ಕಾರಿ ಸಂಸ್ಥೆಗಳಿಂದ ಬರಬೇಕಾದ 511 ಕೋಟಿ ರೂ. ಶುಲ್ಕ ವಸೂಲಿಯಲ್ಲಿ ವಿಫಲ ಸೇರಿದಂತೆ ಅನೇಕ ಕಾರಣಗಳಿಂದ ವಿದ್ಯುತ್ ಸರಬರಾಜು ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಸರ್ಕಾರದ ತಪ್ಪಿನಿಂದಾಗುತ್ತಿರುವ ಈ ನಷ್ಟವನ್ನು ಗ್ರಾಹಕರ ಮೇಲೆ ಹೊರಿಸುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ಹೀಗೆ ಮಾತನಾಡಿದ್ರೆ ಹಿಟ್ ವಿಕೆಟ್ ಆಗ್ತೀರಾ: ಆರ್.ಅಶೋಕ್ ತಿರುಗೇಟು

    ಆಮ್ ಆದ್ಮಿ ಪಾರ್ಟಿ ಮುಖಂಡರಾದ ಪ್ರಕಾಶ್ ನೆಡುಂಗಡಿ ಮಾತನಾಡಿ, ರಾಜ್ಯದ ಜನರಿಂದ ದುಬಾರಿ ಶುಲ್ಕ ಪಡೆಯುವ ರಾಜ್ಯ ಸರ್ಕಾರವು ಹೊರರಾಜ್ಯಗಳಿಗೆ ಮಾತ್ರ ಅಗ್ಗದ ದರದಲ್ಲಿ ವಿದ್ಯುತ್ ಪೂರೈಸುತ್ತಿದೆ. ಯೂನಿಟ್‍ಗೆ ಕೇವಲ 2.38 ರೂಪಾಯಿಯಂತೆ ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ. ಜೊತೆಗೆ, ಕೇಂದ್ರ ಸರ್ಕಾರದ ವಿದ್ಯುತ್ ಉತ್ಪಾದನಾ ಘಟಕಗಳಿಂದ ರಾಜ್ಯವು ವಿದ್ಯುತ್ ಖರೀದಿಸದಿದ್ದರೂ ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕಾಗಿದೆ. ಇದರಿಂದಾಗಿ ಗ್ರಾಹಕರು ಹೆಚ್ಚು ದರ ಪಾವತಿಸಬೇಕಾಗಿದೆ. ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗುತ್ತಿದ್ದು, ಅದಾನಿ ಪವರ್ ಲಿಮಿಟೆಡ್ ಭಾಗವಾಗಿರುವ ಉಡುಪಿ ಪವರ್ ಲಿಮಿಟೆಡ್‍ಗೆ 2021-22ರಲ್ಲಿ ಶೇ.40ರಷ್ಟು ಅಧಿಕ, ಅಂದರೆ ಯೂನಿಟ್ 6.80 ರೂಪಾಯಿಯನ್ನು ಸರ್ಕಾರ ನೀಡಿದೆ ಎಂದು ಆರೋಪಿಸಿದರು.

  • ರಾಜ್ಯಾದ್ಯಂತ ಎಎಪಿ ಸದಸ್ಯತ್ವ ಅಭಿಯಾನಕ್ಕೆ ಪೃಥ್ವಿ ರೆಡ್ಡಿ ಚಾಲನೆ

    ರಾಜ್ಯಾದ್ಯಂತ ಎಎಪಿ ಸದಸ್ಯತ್ವ ಅಭಿಯಾನಕ್ಕೆ ಪೃಥ್ವಿ ರೆಡ್ಡಿ ಚಾಲನೆ

    ಬೆಂಗಳೂರು: ಆಮ್ ಆದ್ಮಿ ಪಾರ್ಟಿಯ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಬುಧವಾರ ಚಾಲನೆ ನೀಡಿದರು. ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಮಾರಂಭದಲ್ಲಿ ವೈದ್ಯ, ವಕೀಲ, ಪತ್ರಕರ್ತ ಹಾಗೂ ಆಟೋ ಚಾಲಕರೊಬ್ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಅಭಿಯಾನವನ್ನು ಆರಂಭಿಸಲಾಯಿತು.

    ಉತ್ತರಕರ್ನಾಟಕ ಭಾಗದ ಖ್ಯಾತ ಪತ್ರಕರ್ತ ವೆಂಕಣ್ಣಗೌಡ ಗೋವಿಂದಗೌಡ್ರು, ವೈದ್ಯರಾದ ಡಾ.ದೇವಾಂಗ್ ಗೌತಮ್, ವಕೀಲರುಗಳಾದ ತೇಜಸ್ವಿನಿ, ಡಿ.ಯು.ಸೆಂಥಿಲ್ ಕುಮಾರ್, ನ್ಯಾಯಾಂಗ ವಿದ್ಯಾರ್ಥಿನಿ ವರ್ಷಿಕ ಅವರುಗಳನ್ನು ಅಧಿಕೃತವಾಗಿ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಲಾಯಿತು. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ

    ನೋಂದಣೆಯ ನಂತರ ಮಾತನಾಡಿದ ಪೃಥ್ವಿ ರೆಡ್ಡಿ ಅವರು, ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಕ್ಷ ಎಂಬ ಕೀರ್ತಿಗೆ ಆಮ್ ಆದ್ಮಿ ಪಾರ್ಟಿ ಪಾತ್ರವಾಗಿದೆ. ಪಕ್ಷ ಆರಂಭವಾಗಿ ಹತ್ತು ವರ್ಷ ತುಂಬುವ ಮುನ್ನವೇ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಕರ್ನಾಟಕದಲ್ಲಿ ಪಕ್ಷಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಬೇರೂರಿರುವ ಎಎಪಿಯನ್ನು ಹೆಮ್ಮರವಾಗಿ ಬೆಳೆಸುವ ಉದ್ದೇಶದಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.

    ಒಂದೇ ತಿಂಗಳಲ್ಲಿ 50 ಲಕ್ಷ ಸದಸ್ಯರನ್ನು ನೋಂದಣಿ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಜನಪರ ಹೋರಾಟಗಳು, ಮನೆಮನೆ ಭೇಟಿ ಕಾರ್ಯಕ್ರಮಗಳ ಜೊತೆಗೆ ತಂತ್ರಜ್ಞಾನದ ನೆರವಿನಿಂದಲೂ ಜನರ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತೇವೆ. ದೆಹಲಿ ಸಿಎಂ ಕೇಜ್ರಿವಾಲ್ ಅವರ ಸರ್ಕಾರ ಸಾಧನೆಗಳು ಹಾಗೂ ಆಮ್ ಆದ್ಮಿ ಪಾರ್ಟಿಯ ತತ್ತ್ವ ಸಿದ್ಧಾಂತಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಸದಸ್ಯತ್ವ ಅಭಿಯಾನದಿಂದ ರಾಜ್ಯದಲ್ಲಿನ ಪಕ್ಷ ಸಂಘಟನೆಗೆ ಆನೆಬಲ ಬರಲಿದೆ ಎಂದು ಭರವಸೆ ಕೊಟ್ಟರು.

    ಕೇಜ್ರಿವಾಲ್ ಅವರು ಪಾರದರ್ಶಕ ಆಡಳಿತ ನೀಡಿ, ಜನಪರ ಯೋಜನೆಗಳನ್ನು ಜಾರಿಗೆ ತಂದಾಗಲೇ ಕನ್ನಡಿಗರ ಮನಸ್ಸಿನಲ್ಲಿ ಆಮ್ ಆದ್ಮಿ ಪಾರ್ಟಿಯ ಪರವಾಗಿ ಒಲವು ಉಂಟಾಗಿತ್ತು. ಈಗ ಪಂಜಾಬ್‍ನಲ್ಲೂ ಪಕ್ಷವು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ಕನ್ನಡಿಗರಿಗೆ ಎಎಪಿ ಮೇಲಿದ್ದ ಅಭಿಮಾನವನ್ನು ದುಪ್ಪಟ್ಟು ಹೆಚ್ಚಿಸಿದೆ. ಇವೆಲ್ಲವನ್ನು ಗಮನಿಸಿದರೆ, ಸದಸ್ಯತ್ವ ಅಭಿಯಾನವು ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುವುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಪ್ಪನಾಡು ದೇವಸ್ಥಾನ ಹಾಗೂ ಮಾರಿಕಾಂಬಾ ದೇವಸ್ಥಾನ ಕಟ್ಟಿದವರು ಮುಸ್ಲಿಮರು: ರಿಜ್ವಾನ್

    ಸಮಾರಂಭದಲ್ಲಿ ಎಎಪಿ ಮುಖಂಡರಾದ ಮೋಹನ್ ದಾಸರಿ, ನಂಜಪ್ಪ ಕಾಳೇಗೌಡ, ಜಗದೀಶ್.ವಿ.ಸದಂ, ಚನ್ನಪ್ಪಗೌಡ ನೆಲ್ಲೂರು, ಮಂಜುನಾಥ್ ಸ್ವಾಮಿ, ಕುಶಲ್ ಸ್ವಾಮಿ, ಉಷಾ ಮೋಹನ್, ವೀಣಾ ರಾವ್, ವಿಜಯ್ ಶಾಸ್ತ್ರಿಮಠ್, ಅಶೋಕ್ ಮೃತ್ಯುಂಜಯ ಮತ್ತಿತರು ಉಪಸ್ಥಿತರಿದ್ದರು.

  • ಬಿಜೆಪಿ ಸೋಲಿನ ಭೀತಿಯಿಂದ ಚುನಾವಣೆ ಮುಂದೂಡುತ್ತಿದೆ: ಪೃಥ್ವಿ ರೆಡ್ಡಿ

    ಬಿಜೆಪಿ ಸೋಲಿನ ಭೀತಿಯಿಂದ ಚುನಾವಣೆ ಮುಂದೂಡುತ್ತಿದೆ: ಪೃಥ್ವಿ ರೆಡ್ಡಿ

    ಬೆಂಗಳೂರು: ಕೋವಿಡ್ ನಿಯಂತ್ರಣ, ರೈತರ ಸಮಸ್ಯೆ, ಆರ್ಥಿಕತೆ, ಉದ್ಯೋಗ ಸೃಷ್ಟಿ, ರಸ್ತೆ ದುರಸ್ತಿ ಮುಂತಾದ ಎಲ್ಲ ಕ್ಷೇತ್ರದಲ್ಲೂ ವಿಫಲವಾಗಿರುವ ಬಿಜೆಪಿಗೆ ಸೋಲಿನ ಭೀತಿಯಿದೆ. ಆದ್ದರಿಂದಲೇ ಬಿಬಿಎಂಪಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಪದೇ ಪದೇ ಮುಂದೂಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಟ್ಟಿಟ್ಟರ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?

    ಬಿಬಿಎಂಪಿಯ ವಾರ್ಡ್‍ಗಳ ಮರುವಿಂಗಡಣೆ ಕಾರ್ಯವು ಆಮೆಗತಿಯಲ್ಲಿ ಸಾಗುತ್ತಿದೆ. ಕಳೆದ 13 ತಿಂಗಳಿನಿಂದ ಜನಪ್ರತಿನಿಧಿಗಳ ಬದಲು ಅಧಿಕಾರಿಗಳು ಮಹಾನಗರ ಪಾಲಿಕೆಯನ್ನು ಮನಸೋ ಇಚ್ಛೆ ಮುನ್ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗಿದೆ. ಚುನಾವಣೆ ಮುಂದೂಡಲು ಪದೇ ಪದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಲಯದ ಅಮೂಲ್ಯ ಸಮಯವನ್ನೂ ಬಿಜೆಪಿ ಹಾಳು ಮಾಡುತ್ತಿದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಇನ್ನಷ್ಟು ತಿಂಗಳು ಮುಂದೂಡುವ ಉದ್ದೇಶದಿಂದಲೇ ಕ್ಷೇತ್ರ ಮರುವಿಂಗಡಣೆಗೆ ಸರ್ಕಾರ ಪ್ರತ್ಯೇಕ ಆಯೋಗ ರಚಿಸಿದೆ. ಇದನ್ನೂ ಓದಿ: ಹೃದಯಾಘಾತದಿಂದ ಇನ್ಸ್‌ಪೆಕ್ಟರ್‌ ನಿಧನ

    ಕೋವಿಡ್ ಸಂದರ್ಭದಲ್ಲಿ ಬೆಡ್, ಆಕ್ಸಿಜನ್ ಸೌಲಭ್ಯ ಕಲ್ಪಿಸಲು ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರಿತು. ಪೆಟ್ರೋಲ್, ಡಿಸೇಲ್, ಎಲ್‍ಪಿಜಿ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಉದ್ಯೋಗ ಸೃಷ್ಟಿಯಲ್ಲೂ ಸರ್ಕಾರ ವಿಫಲವಾಗಿದ್ದು, ದೇಶದೆಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ದೇಶದ ಅರ್ಥ ವ್ಯವಸ್ಥೆ ಕುಸಿದು ಹೋಗಿದೆ. ದೇಶದ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ರಸ್ತೆಗಳಿಗೆ ಹೊಸದಾಗಿ ಡಾಂಬರು ಹಾಕುವುದು ಹಾಗಿರಲಿ, ಗುಂಡಿಗಳಿಗೆ ವೈಜ್ಞಾನಿಕ ವಿಧಾನದಲ್ಲಿ ತೇಪೆ ಹಾಕಲೂ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಣ್ಣ ಮಳೆಗೂ ತೇಪೆ ಕಿತ್ತುಹೋಗುತ್ತಿದೆ. ಹೀಗೆ ಎಲ್ಲದರಲ್ಲೂ ವಿಫಲವಾಗಿರುವ ಬಿಜೆಪಿಗೆ ಸೋಲಿನ ಭೀತಿಯಿದೆ. ಆದ್ದರಿಂದ ಏನಾದರೊಂದು ಕಾರಣ ಹುಡುಕಿಕೊಂಡು ಚುನಾವಣೆಗಳನ್ನು ಮುಂದೂಡುತ್ತಿದೆ ಎಂದು ಪೃಥ್ವಿ ರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಎಸ್‍ಪಿ ವರ್ಗಾವಣೆ ವಾರ್ – ರಾಜಕೀಯ ಪ್ರಭಾವಿಗಳ ಒತ್ತಡ ಆರೋಪ

  • ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಖ್ಯಾತ ವಕೀಲ ಜಗದೀಶ್

    ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಖ್ಯಾತ ವಕೀಲ ಜಗದೀಶ್

    ಬೆಂಗಳೂರು: ಅಭಿವೃದ್ಧಿಪರ ಆಡಳಿತ ನೀಡಲು ವಿಫಲವಾಗಿರುವ ಹಾಗೂ ಸದಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ರಾಜ್ಯವನ್ನು ಕಾಪಾಡಲು ಆಮ್ ಆದ್ಮಿ ಪಾರ್ಟಿಯ ಅವಶ್ಯಕತೆ ರಾಜ್ಯಕ್ಕಿದೆ ಹಾಗಾಗಿ ಎಎಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಖ್ಯಾತ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಕೆ.ಎನ್.ಜಗದೀಶ್ ಮಹಾದೇವ್‍ರವರು ಹೇಳಿದ್ದಾರೆ.

    ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸಮಾರಂಭದಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸುಮಾರು ಹತ್ತು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇನೆ. ಇದಕ್ಕಾಗಿ ದೊಡ್ಡದೊಡ್ಡ ರಾಜಕಾರಣಿಗಳನ್ನು ಎದುರು ಹಾಕಿಕೊಂಡು ಮುನ್ನಡೆಯುತ್ತಿದ್ದೇನೆ. ಅನೇಕ ಸಂದರ್ಭಗಳಲ್ಲಿ ಕಾರ್ಮಿಕರು, ರೈತರು ಹಾಗೂ ಯುವಜನತೆಯ ನ್ಯಾಯಯುತ ಹೋರಾಟಕ್ಕೆ ಬೆಂಬಲವಾಗಿ ನಿಂತ ತೃಪ್ತಿಯಿದೆ. ನನ್ನಂತೆಯೇ ಎಎಪಿ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದು, ಪಕ್ಷ ಸೇರ್ಪಡೆಯಿಂದ ನನ್ನ ಹೋರಾಟದ ಶಕ್ತಿ ಹೆಚ್ಚಾಗಲಿದೆ. ಪಕ್ಷಕ್ಕೂ ನನ್ನಿಂದ ಅನುಕೂಲವಾಗುವ ದೃಢ ವಿಶ್ವಾಸವಿದೆ ಎಂದು ಹೇಳಿದರು. ಇದನ್ನೂ ಓದಿ: ಜಾರಕಿಹೊಳಿಗೆ ಕೊರೊನಾ ಬಂದಿರುವುದು ಡೌಟ್, ಆಸ್ಪತ್ರೆಯಲ್ಲಿ ಇಲ್ಲ: ವಕೀಲ ಜಗದೀಶ್

    ದೆಹಲಿಯ ಕೇಜ್ರಿವಾಲ್ ಸರ್ಕಾರವು ಜನಪರ ಆಡಳಿತ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಜನವಿರೋಧಿ ಆಡಳಿತ ನೀಡುತ್ತಿದೆ. ಕೇಜ್ರಿವಾಲ್ ಆಡಳಿತದಲ್ಲಿ ಕುಡಿಯುವ ನೀರು, ವಿದ್ಯುತ್, ವೈದ್ಯಕೀಯ ಸೌಲಭ್ಯ ಮುಂತಾದವುಗಳು ಒಂದು ಮಿತಿಯವರೆಗೆ ಉಚಿತವಾಗಿ ಸಿಗುತ್ತಿದೆ. ಆದರೆ ಮೋದಿ ಸರ್ಕಾರವು ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆಯನ್ನು ಮನಬಂದಂತೆ ಹೆಚ್ಚಿಸುವ ಮೂಲಕ ಸಾಮಾನ್ಯ ಜನರನ್ನು ಹೈರಾಣಾಗಿಸುತ್ತಿದೆ. ಇದರ ವಿರುದ್ಧ ಹೋರಾಡಲು ಯುವಜನತೆ ಮುಂದಾಗಬೇಕು. ಭ್ರಷ್ಟ ಹಾಗೂ ಕೋಮುವಾದಿ ನಾಯಕರುಗಳೇ ತುಂಬಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಪ್ರತಿಜ್ಞೆ ಮಾಡಬೇಕು ಎಂದು ಕೆ.ಎನ್.ಜಗದೀಶ್ ಹೇಳಿದರು. ಇದನ್ನೂ ಓದಿ: ಆಧುನಿಕ ಮಹಿಳೆಯರು ಮದುವೆ ಆದ್ರೆ ಮಕ್ಕಳನ್ನು ಹೆರಲು ಬಯಸಲ್ಲ: ಸುಧಾಕರ್

    ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರು ಮಾತನಾಡಿ, ಒಳ್ಳೆಯ ಜನರು ಒಗ್ಗೂಡಿದರೆ ಸಾಮಾನ್ಯರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಬಹುದು ಎಂಬುದನ್ನು ದೆಹಲಿ ರಾಜಕೀಯವು ನಮಗೆ ತೋರಿಸಿದೆ. ದಶಕಗಳಿಂದ ನಮ್ಮ ರಾಜ್ಯದಲ್ಲಿ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ವಿವಿಧ ಸಮಸ್ಯೆಗಳು ಮತ್ತು ಅನ್ಯಾಯದ ವಿರುದ್ಧ ಪ್ರತ್ಯೇಕವಾಗಿ ಹೋರಾಡುತ್ತಿವೆ. ದೊಡ್ಡ ಪ್ರಮಾಣದ ಬದಲಾವಣೆ ತರಲು ಅಂಥವರೆಲ್ಲರೂ ಒಟ್ಟಾಗಿ ಸೇರುವ ಸಮಯ ಈಗ ಬಂದಿದೆ. ವಕೀಲ್ ಸಾಬ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಕೆ.ಎನ್.ಜಗದೀಶ್‍ರವರು ಸಾಮಾನ್ಯ ಜನರಿಗಾಗಿ ಧೈರ್ಯದಿಂದ ಹೋರಾಡಿ ರಾಜ್ಯಾದ್ಯಂತ ಜನರ ಹೃದಯ ಗೆದ್ದಿದ್ದಾರೆ. ಇವರ ಸೇರ್ಪಡೆಯಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಕೆ.ಎನ್.ಜಗದೀಶ್‍ರವರಿಗೆ ಅನೇಕ ಹಿತೈಷಿಗಳು ಮತ್ತು ಅಪಾರ ಅನುಯಾಯಿಗಳಿರುವುದು ನಮ್ಮ ಧ್ವನಿಯನ್ನು ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ಪಕ್ಷದ ಸಂದೇಶವನ್ನು ನಮ್ಮ ರಾಜ್ಯದ ಮೂಲೆಮೂಲೆಗೂ ತಲುಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಅಧ್ಯಕ್ಷ ಮೋಹನ್ ದಾಸರಿ, ಹಿರಿಯ ಮುಖಂಡರಾದ ಲಕ್ಷ್ಮೀಕಾಂತ್ ರಾವ್, ನಂಜಪ್ಪ ಕಾಳೇಗೌಡ, ಕುಶಲಸ್ವಾಮಿ, ಉಷಾ ಮೋಹನ್, ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್, ಜಗದೀಶ್ ವಿ. ಸದಂ ಹಾಗೂ ಇತರೆ ಮುಖಂಡರು ಮತ್ತು ಕೆ.ಎನ್.ಜಗದೀಶ್‍ರವರ ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗವಹಿಸಿದ್ದರು.