Tag: ಪೂನಂ ಯಾದವ್

  • 4 ಓವರ್‌ಗಳಲ್ಲಿ 24 ರನ್ ನೀಡಿ, 4 ವಿಕೆಟ್ ಕಿತ್ತ ರಾಧಾ- ಶ್ರೀಲಂಕಾಗೆ 7 ವಿಕೆಟ್ ಸೋಲು

    4 ಓವರ್‌ಗಳಲ್ಲಿ 24 ರನ್ ನೀಡಿ, 4 ವಿಕೆಟ್ ಕಿತ್ತ ರಾಧಾ- ಶ್ರೀಲಂಕಾಗೆ 7 ವಿಕೆಟ್ ಸೋಲು

    – ಗೆಲುವಿನ ಓಟ ಮುಂದುವರಿಸಿದ ಭಾರತ
    – ಅರ್ಧ ಶತಕ ಕೈಚೆಲ್ಲಿಕೊಂಡ ಶೆಫಾಲಿ
    – ಕೊನೆಗೂ ಎರಡಂಕಿ ರನ್ ದಾಟಿದ ಕೌರ್

    ಮೆಲ್ಬರ್ನ್: ಶೆಫಾಲಿ ವರ್ಮಾ ಬ್ಯಾಟಿಂಗ್ ಹಾಗೂ ರಾಧಾ ಯಾದವ್ ಬೌಲಿಂಗ್ ಸಹಾಯದಿಂದ ಭಾರತ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 7 ವಿಕೆಟ್‍ಗಳಿಂದ ಗೆದ್ದು ಬೀಗಿದೆ.

    ಮೆಲ್ಬರ್ನ್ ನ ಜಂಕ್ಷನ್ ಓವಲ್‍ನಲ್ಲಿ ನಡೆದ ಎ ಗುಂಪಿನ ತನ್ನ ಕೊನೆ ಪಂದ್ಯದಲ್ಲಿ ಭಾರತದ 32 ಎಸೆತಗಳು ಬಾಕಿ ಇರುವಂತೆ ಶ್ರೀಲಂಕಾವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಭಾರತಕ್ಕೆ 114 ರನ್‍ಗಳ ಗುರಿ ನೀಡಿತ್ತು. ಭಾರತ ತಂಡ 14.4 ಓವರ್‌ಗಳಲ್ಲಿ 3 ವಿಕೆಟ್‍ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು.

    ಭಾರತದ ಓಪನರ್ ಶೆಫಾಲಿ ವರ್ಮಾ 47 ರನ್ (34 ಎಸೆತ, 7 ಬೌಂಡರಿ, 1 ಸಿಕ್ಸ್) ಗಳಿಸಿದರು. ಅವರು ಈ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಅರ್ಧಶತಕ ಕೈಚೆಲ್ಲಿಕೊಂಡರು. ಕ್ಯಾಪ್ಟನ್ ಹರ್ಮನ್‍ಪ್ರೀತ್ ಕೌರ್ ಕೊನೆಗೂ ಈ ಪಂದ್ಯದಲ್ಲಿ ಎರಡಂಕಿ ರನ್ ದಾಟಿದ್ದಾರೆ. ಆದರೆ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸ್ಮೃತಿ ಮಂದನಾ 17 ರನ್ ಗಳಿಸಿದರು.

    ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್ ನಷ್ಟದಲ್ಲಿ 113 ರನ್ ಗಳಿಸಿತ್ತು. ಕ್ಯಾಪ್ಟನ್ ಚಮರಿ ಅಟ್ಟಪಟ್ಟ್ 33 ರನ್ (24 ಎಸೆತ, 5 ಬೌಂಡರಿ, 1 ಸಿಕ್ಸ್) ಹಾಗೂ ಕವಿಶಾ ಡೆಲ್ಹಾರಿ 25 ರನ್ (16 ಎಸೆತ, 2 ಬೌಂಡರಿ) ಗಳಿಸಿದರು. ಉಳಿದಂತೆ 6 ಆಟಗಾರರು ಎರಡಂಕಿ ರನ್ ಗಳಿಸುವಲ್ಲಿ ವಿಫಲರಾದರು.

    ರಾಧಾ ಯಾದವ್ ಭಾರತ ಪರ ಅದ್ಭುತ ಬೌಲಿಂಗ್ ಮಾಡಿದರು. ಅವರು 4 ಓವರ್‌ಗಳಲ್ಲಿ 23 ರನ್ ನೀಡಿ, 4 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ 2 ವಿಕೆಟ್ ಪಡೆದರೆ, ಶಿಖಾ ಪಾಂಡೆ, ದೀಪ್ತಿ ಶರ್ಮಾ ಹಾಗೂ ಪೂನಂ ಯಾದವ್ ತಲಾ ಒಂದು ವಿಕೆಟ್ ಕಿತ್ತರು.

    ಕೌರ್, ಮಂದನಾ ವೈಫಲ್ಯ:
    ಸ್ಮೃತಿ ಮಂದನಾ ಮತ್ತು ನಾಯಕಿ ಹರ್ಮನ್‍ಪ್ರೀತ್ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದ್ದಾರೆ. ಸ್ಮೃತಿ 17 ರನ್ ಮತ್ತು ಕೌರ್ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಈ ಟೂರ್ನಿಯಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡುತ್ತಿರುವ ಶೆಫಾಲಿ, ಮತ್ತೆ ಬ್ಯಾಟ್‍ನ ಮ್ಯಾಜಿಕ್ ತೋರಿಸಿದರು. ಅವರು 47 ರನ್ ಗಳಿಸಿದರು. ಆದರೆ ಶೆಫಾಲಿ ಸತತ ಎರಡನೇ ಬಾರಿ ಅರ್ಧಶತಕವನ್ನು ಕಳೆದುಕೊಂಡಿದ್ದಾರೆ.

    ಈಗಾಗಲೇ ಸೆಮಿ ತಲುಪಿರುವ ಭಾರತ:
    ಈ ಟೂರ್ನಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ಎರಡೂ ಪಂದ್ಯಗಳಲ್ಲಿ ಸೋಲು ಕಂಡ ಶ್ರೀಲಂಕಾ ಸೆಮಿಫೈನಲ್‍ನಿಂದ ಹೊರಬಿದ್ದಿದೆ. ಮೊದಲ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು 17 ರನ್, ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 18 ರನ್‍ಗಳಿಂದ ಸೋಲಿಸಿತ್ತು. ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್‍ನ್ನು 3 ರನ್‍ಗಳಿಂದ ಮಣಿಸಿತ್ತು.

    ಶೆಫಾಲಿ, ಪೂನಂ ಅದ್ಭುತ ಪ್ರದರ್ಶನ:
    ಓಪನರ್ ಸ್ಮೃತಿ ಮಂದಾನಾ ಮತ್ತು ಹರ್ಮನ್‍ಪ್ರೀತ್ ಅವರು ಈವರೆಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲತೆ ತೋರಿದರು. ಅಂತಹ ಪರಿಸ್ಥಿತಿಯಲ್ಲಿ ಈ ಆಟಗಾರರಿಗೆ ಸೆಮಿಫೈನಲ್ ಪಂದ್ಯದ ಮೊದಲು ಶ್ರೀಲಂಕಾ ವಿರುದ್ಧ ಅವಕಾಶವಿತ್ತು. ಓಪನರ್ ಶೆಫಾಲಿ ವರ್ಮಾ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ಹೊಂದಿದ್ದಾರೆ. ಲೆಗ್ ಸ್ಪಿನ್ನರ್ ಪೂನಂ ಯಾದವ್ ಟೂರ್ನಿಯಲ್ಲಿ ಒಟ್ಟು 9 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

  • 4 ಓವರ್‌ನಲ್ಲಿ 19 ರನ್ ನೀಡಿ 4 ವಿಕೆಟ್ ಕಿತ್ತ ಪೂನಂ- 17 ರನ್‍ಗಳಿಂದ ಸೋತ ಆಸೀಸ್

    4 ಓವರ್‌ನಲ್ಲಿ 19 ರನ್ ನೀಡಿ 4 ವಿಕೆಟ್ ಕಿತ್ತ ಪೂನಂ- 17 ರನ್‍ಗಳಿಂದ ಸೋತ ಆಸೀಸ್

    – ಸತತ ಮೂರನೇ ಬಾರಿಗೆ ಮೊದಲ ಪಂದ್ಯದಲ್ಲಿ ಗೆದ್ದ ಭಾರತ

    ಸಿಡ್ನಿ: ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಭಾರತವು ಸತತ ಮೂರನೇ ಬಾರಿಗೆ ತನ್ನ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ.

    ಸಿಡ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 17 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ಭಾರತವು 2018ರ ವಿಶ್ವಕಪ್‍ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‍ನ್ನು 34 ರನ್‍ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಹರ್ಮನ್‍ಪ್ರೀತ್ ಕೌರ್ 103 ರನ್ (51 ಎಸೆತ, 7 ಬೌಂಡರಿ, 8 ಸಿಕ್ಸರ್) ದಾಖಲಿಸಿದ್ದರು.

    2016ರ ಮಹಿಳಾ ವಿಶ್ವಕಪ್‍ನಲ್ಲಿಯೂ ಭಾರತ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 72 ರನ್‍ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮಿಥಾಲಿ ರಾಜ್ 42 ರನ್ ಹಾಗೂ ಹರ್ಮನ್‍ಪ್ರೀತ್ ಕೌರ್ 40 ರನ್ ಗಳಿಸಿದ್ದರು. ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಜಯವನ್ನು ಭಾರತ ತಂಡ ದಾಖಲಿಸಿದೆ. 2018ರಲ್ಲಿ ಭಾರತದ ಮಹಿಳಾ ತಂಡವು ಆಸೀಸ್ ಪಡೆಯನ್ನು ಸೋಲಿಸಿತ್ತು.

    ಇಂದಿನ ಪಂದ್ಯದಲ್ಲಿ ಪೂನಂ ಯಾದವ್ ಭಾರತ ಪರ ಗರಿಷ್ಠ 4 ವಿಕೆಟ್ ಪಡೆದು ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಶಿಖಾ ಪಾಂಡೆ 3 ವಿಕೆಟ್, ರಾಜೇಶ್ವರಿ ಗೈಕ್ವಾಡ್ 1 ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.

    ಇದಕ್ಕೂ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ, ಭಾರತದ ಆರಂಭಿಕ ಆಟಗಾರರಾದ ಸ್ಮೃತಿ ಮಂದನಾ ಹಾಗೂ ಶೆಫಾಲಿ ವರ್ಮಾ ಜೋಡಿಯನ್ನು ಮುರಿಯಲು ಪರದಾಡಿತು. ಈ ಜೋಡಿಯು ಮೊದಲ ವಿಕೆಟ್‍ಗೆ 41 ರನ್ ಕೊಡುಗೆ ನೀಡಿತು. ಮಂದನಾ ವಿಕೆಟ್ ಬೆನ್ನಲ್ಲೇ 6 ರನ್‍ಗಳಿಗೆ ಭಾರತ ಮತ್ತೆರಡು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆಗ ದೀಪ್ತಿ ಶರ್ಮಾ ಏಕಾಂಗಿಯಾಗಿ ಹೋರಾಡಿ ಔಟಾಗದೆ 49 ರನ್ ಹಾಗೂ ಕೃಷ್ಣಮೂರ್ತಿ ಅಜೇಯ 9 ರನ್ ಗಳಿಸಿದರು. ಇದರಿಂದಾಗಿ ಭಾರತವು 20 ಓವರ್‍ಗಳಲ್ಲಿ 4 ವಿಕೆಟ್‍ಗಳ ನಷ್ಟಕ್ಕೆ 132 ರನ್ ಗಳಿಸಿತ್ತು.

    ಭಾರತ ನೀಡಿದ್ದ 133 ರನ್‍ಗಳ ಗುರಿ ಬೆನ್ನಟ್ಟಿದ ಆಸೀಸ್ ತಂಡ ಪರ ಅಲಿಸಾ ಹಿಲ್ಲಿ 51 ರನ್ ಹಾಗೂ ಆಶ್ಲೇ ಗಾಡ್ರ್ನರ್ 34 ರನ್ ಮಾತ್ರ ಎರಡಂಕಿ ರನ್ ಗಳಿಸಿದರು. ಉಳಿದ ಎಲ್ಲಾ ಆಟಗಾರರು ಒಂದಂಕಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು. ಪರಿಣಾಮ ಒಂದು ಎಸೆತ ಬಾಕಿ ಇರುವಂತೆ ಆಸೀಸ್ ಪಡೆ ಎಲ್ಲಾ ವಿಕೆಟ್ ಕಳೆದುಕೊಂಡು 115 ರನ್ ಗಳಿಸಿ ಸೋಲಿಗೆ ತುತ್ತಾಯಿತು.

    ಚಾಂಪಿಯನ್ ಪಟ್ಟ ಏರದ ಭಾರತ:
    ಇದುವರೆಗೆ 6 ಬಾರಿ ಮಹಿಳಾ ಟಿ20 ವಿಶ್ವಕಪ್ ನಡೆದಿದೆ. ಈ ಪೈಕಿ ಭಾರತವು ಒಂದು ಬಾರಿಯೂ ಫೈನಲ್‍ಗೆ ತಲುಪಿಲ್ಲ. ಆದರೆ ಆಸ್ಟ್ರೇಲಿಯಾ 4 ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ಕೊನೆಯ ಬಾರಿ ಆಸ್ಟ್ರೇಲಿಯಾ ಫೈನಲ್‍ನಲ್ಲಿ ಇಂಗ್ಲೆಂಡ್‍ನ್ನು 8 ವಿಕೆಟ್‍ಗಳಿಂದ ಸೋಲಿಸಿತ್ತು. ಭಾರತ 3 ಬಾರಿ (2009, 2010, 2018) ಸೆಮಿಫೈನಲ್ ತಲುಪಿದೆ. ಸೆಮಿಫೈನಲ್‍ನಲ್ಲಿ ಕೊನೆಯ ಬಾರಿ ಇಂಗ್ಲೆಂಡ್ ವಿರುದ್ಧ ಸೋತಿತ್ತು.