Tag: ಪುಷ್ಕರ

  • ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ತುಂಗಭದ್ರಾ ಪುಷ್ಕರ ಸ್ನಾನಕ್ಕೆ ಬ್ರೇಕ್

    ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ತುಂಗಭದ್ರಾ ಪುಷ್ಕರ ಸ್ನಾನಕ್ಕೆ ಬ್ರೇಕ್

    – ತಾಲೂಕು ಆಡಳಿತದಿಂದ ಆದೇಶ

    ಶಿವಮೊಗ್ಗ: ದಕ್ಷಿಣ ಭಾರತದ ವಾರಾಣಸಿ ಎಂದೇ ಖ್ಯಾತಿ ಪಡೆದಿರುವ ತುಂಗಾ-ಭದ್ರಾ ನದಿಯ ಸಂಗಮವಾಗಿರುವ ಕೂಡ್ಲಿಯಲ್ಲಿ ಈ ಬಾರಿ ಇತಿಹಾಸ ಪ್ರಸಿದ್ಧ ಪುಷ್ಕರ ಸ್ನಾನಕ್ಕೆ ಬ್ರೇಕ್ ಬಿದ್ದಿದೆ. ಕೋವಿಡ್-19 ಸೋಂಕು ಹರಡುವ ಭೀತಿ ಹಿನ್ನೆಲೆ ಈ ಬಾರಿಯ ಪುಷ್ಕರವನ್ನು ನಿಷೇಧಿಸಿ ತಾಲೂಕು ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಪ್ರಾಚೀನ ಕಾಲದಿಂದಲೂ ಪೂಜೆ, ಧ್ಯಾನ ಮತ್ತು ಶಾಂತಿಯ ಪ್ರಮುಖ ತಾಣವಾಗಿರುವ ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ತುಂಗಾ ಮತ್ತು ಭದ್ರಾ ಎರಡು ನದಿಗಳ ಸಂಗಮವಾಗಿದೆ. ದೇಶದಲ್ಲಿ ನದಿಗಳು ಸೇರುವ ಪವಿತ್ರ ಸ್ಥಳಗಳಲ್ಲಿ ಪುಷ್ಕರ ನಡೆಯುವುದು ಸಂಪ್ರದಾಯವಾಗಿದ್ದು, ಇಂದಿನಿಂದ 12 ದಿನಗಳ ಕಾಲ ಈ ಪುಷ್ಕರ ಸಂಭ್ರಮ ನಡೆಯುತ್ತದೆ. ಗುರುವು ಇಂದಿನಿಂದ ತನ್ನ ಪಥ ಬದಲಾಯಿಸುತ್ತಿದ್ದು, ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಪುಣ್ಯ ದಿನಗಳಂದು ಸಾವಿರಾರು ವರ್ಷಗಳ ಪುರಾಣ ಪ್ರಸಿದ್ಧ ತಾಣವಾಗಿರುವ ಕೂಡ್ಲಿಯಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಪುಷ್ಕರ ಸ್ನಾನ ನಡೆಯುವುದು ಸಂಪ್ರದಾಯವಾಗಿದೆ. ಆದರೆ ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ರೇಕ್ ಬಿದ್ದಿದೆ.

    ಇಂದಿನಿಂದ ಆರಂಭವಾಗಬೇಕಿದ್ದ ಪುಷ್ಕರ ಸ್ನಾನಕ್ಕೆ ನಿರ್ಬಂಧ ಹೇರಲಾಗಿದ್ದು, ಕೂಡ್ಲಿ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮ ಪಂಚಾಯಿತಿ ಈ ಬಾರಿಯ ಪುಷ್ಕರವನ್ನು ನಿಷೇಧಗೊಳಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಹೊರಗಿನಿಂದ ಬರುವವರಿಗೆ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಇಂದು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಪುಷ್ಕರ ಸ್ನಾನ ಮಾಡಿದರು.

    ರಾಜ್ಯದ ವಿವಿಧೆಡೆಯಿಂದ ಜನ ಆಗಮಿಸಿ ಪುಷ್ಕರದ ದಿನಗಳಲ್ಲಿ ಸ್ನಾನ ಮಾಡಲು ಆಗಮಿಸುತ್ತಿದ್ದರು. ಇಂದಿನ ಯೋಗದ ದಿನ ಸಂಗಮದಲ್ಲಿ ಸ್ನಾನ ಮಾಡಿದರೆ ರೋಗ-ರುಜಿನಗಳು ಮಾಯವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಆದರೆ ಇದಕ್ಕೆ ಇದೀಗ ಬ್ರೇಕ್ ಬಿದ್ದಿದೆ. ತಾಲೂಕು ಆಡಳಿತದ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಪುಷ್ಕರ ನಡೆಸಲೇಬೇಕೆಂದು ಒತ್ತಾಯಿಸುತ್ತಿದ್ದಾರೆ.

  • ತುಂಗಭದ್ರಾ ಪುಷ್ಕರಕ್ಕೆ ಮಂತ್ರಾಲಯ ಮಠದಲ್ಲಿ ಭರ್ಜರಿ ಸಿದ್ಧತೆ

    ತುಂಗಭದ್ರಾ ಪುಷ್ಕರಕ್ಕೆ ಮಂತ್ರಾಲಯ ಮಠದಲ್ಲಿ ಭರ್ಜರಿ ಸಿದ್ಧತೆ

    ರಾಯಚೂರು: 12 ವರ್ಷಕ್ಕೆ ಒಂದು ಬಾರಿ ಬರುವ ಸಂಭ್ರಮದ ಪುಷ್ಕರ ಈ ಬಾರಿ ತುಂಗಭದ್ರಾ ನದಿಯಲ್ಲಿ ನಡೆಯಲಿದೆ. ಹೀಗಾಗಿ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠ ಪುಷ್ಕರಕ್ಕೆ ಭರ್ಜರಿ ತಯಾರಿ ನಡೆಸಿದೆ. ಭಕ್ತರ ಪುಣ್ಯ ಸ್ನಾನಕ್ಕೆ ಹದಿನೈದು ದಿನಗಳ ಮುಂಚಿತವಾಗಿಯೇ ಮಠ ಅಂತಿಮ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

    ತುಂಗಭದ್ರಾ ನದಿಯ ಪುಷ್ಕರ ಪುಣ್ಯ ಸ್ನಾನಕ್ಕೆ ಈಗ ದಿನಗಣನೇ ಆರಂಭವಾಗಿದೆ. 12 ವರ್ಷಕ್ಕೆ ಒಂದು ಬಾರಿ ಬರುವ ಪುಷ್ಕರ ಆಚರಣೆ ಈ ವರ್ಷ ತುಂಗಾಭದ್ರ ನದಿಗೆ ಬಂದಿದೆ. ಪುಷ್ಕರವನ್ನು ಗುರು ಮಕರ ರಾಶಿಗೆ ಪ್ರವೇಶಿಸಿದ ಸಮಯದಿಂದ 12 ದಿನಗಳವರೆಗೆ ಆಚರಿಸಲಾಗುತ್ತದೆ. ನವೆಂಬರ್ 20ರಿಂದ ಡಿಸೆಂಬರ್ 1ರ ವರೆಗೆ ತುಂಗಭದ್ರಾ ನದಿಯ ಪುಷ್ಕರ ನಡೆಯಲಿದೆ. ಈ ವೇಳೆ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಅನ್ನೋ ನಂಬಿಕೆಯಿದೆ. ಈ ಹಿನ್ನೆಲೆ ಮಂತ್ರಾಲಯದಲ್ಲಿ ಗುರು ರಾಯರ ಉತ್ಸವದೊಂದಿಗೆ ತುಂಗಭದ್ರಾ ನದಿಯ ತೀರದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

    ಮಠದಲ್ಲಿ ಅನ್ನಪ್ರಸಾದ, ಪರಿಮಳ ಪ್ರಸಾದದ ವ್ಯವಸ್ಥೆಯನ್ನು ಭಕ್ತರಿಗೆ ಕಲ್ಪಿಸಲಾಗಿದೆ. ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವ ನಿಯಮಪಾಲನೆಗೆ ಒತ್ತುಕೊಡಲಾಗಿದೆ. ಪುಷ್ಕರದ ವೇಳೆ ದಿನಕ್ಕೆ 25 ಸಾವಿರ ಭಕ್ತಾಧಿಗಳು ಬರುವ ಸಾಧ್ಯತೆ ಇದೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ತಿಳಿಸಿದ್ದಾರೆ.

    ಪುಷ್ಕರ ವೇಳೆ ದೇಶದ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನೆಲೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮಠ ಮನವಿ ಮಾಡಿದೆ. ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಇಲ್ಲಿನ ಐದು ಘಾಟ್‍ಗಳಲ್ಲಿ ಒಂದು ಘಾಟ್ ನಲ್ಲಿ ಒಂದು ಗಂಟೆಗೆ 60 ಜನ ಸ್ನಾನ ಮಾಡಲು ಅವಕಾಶ ನೀಡಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ 6 ಗಂಟೆಯವರೆಗೆ ತುಂಗಾಸ್ನಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

    ಮಠದ ಸಿಬ್ಬಂದಿಯಿಂದ ಆವರಣದಲ್ಲಿ ಕೋವಿಡ್ ನಿಯಮ ಪಾಲಿಸುವಂತೆ ಭಕ್ತರಿಗೆ ತಿಳುವಳಿಕೆ ನೀಡಲು ಸಿದ್ಧತೆ ನಡೆದಿದೆ. ವಿವಿಧೆಡೆಯಿಂದ ಪುಣ್ಯ ಸ್ನಾನ ಹಾಗೂ ರಾಯರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ವಸತಿ ಗೃಹ, ತಾತ್ಕಾಲಿಕ ಶಾಮಿಯಾನ ಕಲ್ಪಿಸಲಾಗುತ್ತಿದೆ. ಪ್ರಾಥಮಿಕ ಚಿಕಿತ್ಸೆ, ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲಾ ತಯಾರಿಗಳನ್ನು ಮಠದ ಆಡಳಿತ ಮಂಡಳಿ ನಡೆಸಿದೆ.

  • ಭೀಮಾ ಪುಷ್ಕರದಲ್ಲಿ ಮಿಂದೆದ್ದು ಪಾವನರಾದ ಭಕ್ತರು

    ಭೀಮಾ ಪುಷ್ಕರದಲ್ಲಿ ಮಿಂದೆದ್ದು ಪಾವನರಾದ ಭಕ್ತರು

    ರಾಯಚೂರು: ತೆಲಂಗಾಣ ಕರ್ನಾಟಕ ಗಡಿಯಲ್ಲಿ ಭೀಮಾ ಪುಷ್ಕರದ ಸಂಭ್ರಮ ಮನೆಮಾಡಿದ್ದು, 12 ವರ್ಷಕ್ಕೆ ಒಮ್ಮೆ ಬರುವ ಭೀಮಾ ಪುಷ್ಕರದಲ್ಲಿ ಪುಣ್ಯ ಸ್ನಾನ ಮಾಡಲು ಜನ ದೂರದ ಊರುಗಳಿಂದ ಬರುತ್ತಿದ್ದಾರೆ.

    ಜಿಲ್ಲೆಯಲ್ಲಿ ಭೀಮಾನದಿ ಹರಿಯುವುದಿಲ್ಲವಾದರೂ ತೆಲಂಗಾಣ ಗಡಿಯಲ್ಲಿ ಭೀಮಾ-ಕೃಷ್ಣ ಸಂಗಮವಾಗುವುದರಿಂದ ಪುಷ್ಕರಕ್ಕೆ ಮಹತ್ವ ಬಂದಿದೆ. ನದಿಯಲ್ಲಿ ಮಾಡುವ ಸ್ನಾನ ಪುಣ್ಯ ಸ್ನಾನ ಅಂತಲೇ ಮೊದಲಿನಿಂದಲೂ ನಂಬಿಕೆ ಇದೆ. ಆದರೆ ಪುಷ್ಕರದ ವೇಳೆ ಆಯಾ ನದಿಯಲ್ಲಿ ಮುಕ್ಕೋಟಿ ದೇವರು ಮಿಂದೇಳುವುದರಿಂದ ಆ ಸ್ನಾನ ಪರಮ ಪವಿತ್ರ ಸ್ನಾನವೆಂದೇ ನಂಬಲಾಗುತ್ತದೆ.

    ಗುರು ಯಾವ ರಾಶಿಗೆ ಪ್ರವೇಶಿಸುತ್ತಾನೆ ಎನ್ನುವುದರ ಮೇಲೆ ಒಂದೊಂದು ನದಿಯ ಪುಷ್ಕರ ನಿರ್ಧಾರವಾಗುತ್ತದೆ. ಸಿಂಹ ರಾಶಿಯಲ್ಲಿ ಗೋದಾವರಿ ನದಿಗೆ, ಕನ್ಯಾ ರಾಶಿಯಲ್ಲಿ ಕೃಷ್ಣ ನದಿಗೆ, ತುಲಾ ರಾಶಿಯಲ್ಲಿ ಕಾವೇರಿ ನದಿಗೆ ಹಾಗೂ ವೃಶ್ಚಿಕ ರಾಶಿಯಲ್ಲಿ ಭೀಮಾನದಿಗೆ ಪುಷ್ಕರ ಬರುತ್ತದೆ.

    12 ವರ್ಷಗಳ ಬಳಿಕ ಭೀಮಾ ನದಿಯಲ್ಲಿ ಪುಷ್ಕರ ನಡೆಯುತ್ತಿದ್ದು, ವಿಶೇಷವಾಗಿ ಕೃಷ್ಣದೇವರಾಯ, ನಿಜಾಮಶಾಯಿ, ಆದಿಲ್‍ಶಾಯಿಗಳ ರಾಜ್ಯಗಳ ಗಡಿ ಸಂಗಮದ ಪ್ರದೇಶದಲ್ಲೆ ಈಗ 12 ದಿನ ಕಾಲ ಪುಷ್ಕರ ನಡೆಯುತ್ತಿದೆ. ಹೀಗಾಗಿ ರಾಯಚೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಭೀಮಾ ನದಿ ಪುಷ್ಕರದ ಪುಣ್ಯ ಸ್ನಾನಕ್ಕಾಗಿ ತೆಲಂಗಾಣಕ್ಕೆ ತೆರಳುತ್ತಿದ್ದಾರೆ.

    ಈ ಬಗ್ಗೆ ಅರ್ಚಕರಾದ ಶೇಷಗಿರಿಯಾಚಾರ್ ಪ್ರತಿಕ್ರಿಯಿಸಿ, ಪುಷ್ಕರಕ್ಕೆ ಬರುವ ಭಕ್ತರು ಪುಣ್ಯಸ್ನಾನದ ಜೊತೆ ಪಿಂಡ ಪ್ರಧಾನವನ್ನು ಮಾಡುತ್ತಾರೆ. ಇಲ್ಲಿ ದಾನಗಳನ್ನು ಮಾಡುವ ಮೂಲಕ ತಮ್ಮ ಪಾಪಕರ್ಮಗಳನ್ನು ಕಳೆದುಕೊಳ್ಳುತ್ತಾರೆ. ಈ ಬಾರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿರುವುದರಿಂದ ಪುಷ್ಕರಕ್ಕೆ ಅನಾನುಕೂಲಗಳು ಸಹ ಆಗಿವೆ. ಆದರೂ ಸಹ ಪುಣ್ಯ ಸ್ನಾನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಭೀಮಾನದಿಗೆ ಬರುತ್ತಾರೆ ಎಂದು ತಿಳಿಸಿದರು.

    ಪುಷ್ಕರದ ಕುರಿತು ಸ್ಥಳೀಯರಾದ ಚಕ್ರಪಾಣಿ ಆಚಾರ್ ಮಾತನಾಡಿ, ಕರ್ನಾಟಕದಲ್ಲೇ ಹೆಚ್ಚು ದೂರದವರೆಗೆ ಸಾಗುವ ಭೀಮಾನದಿಯು ತೆಲಂಗಾಣ ಪ್ರವೇಶಿಸಿ ಪುನಃ ಕೃಷ್ಣಾ ನದಿಯಲ್ಲಿ ಸಂಗಮವಾಗುತ್ತದೆ. ತೆಲಂಗಾಣದ ಮೆಹಬೂಬನಗರ ಜಿಲ್ಲೆಯ ಕೃಷ್ಣ ಮಂಡಲದಲ್ಲಿ ಬರುವ ಕುಸಮತಿ ಹಾಗೂ ತಂಗಡಗಿಯಲ್ಲಿ ಪುಷ್ಕರಕ್ಕೆ ಸಕಲ ವ್ಯವಸ್ಥೆಗಳನ್ನ ಮಾಡಲಾಗಿದೆ. ಗುರು ರಾಘವೇಂದ್ರ ಸ್ವಾಮಿಗಳ ಪ್ರೀತಿಗೆ ಪಾತ್ರರಾದ ಮಹಾಯತಿ ಕೃಷ್ಣದ್ವೈಪಾದರು ಐಕ್ಯವಾದ ಸ್ಥಳವು ಇಲ್ಲೇ ಇರುವುದರಿಂದ ಪುಷ್ಕರಕ್ಕೆ ಇನ್ನಷ್ಟು ಮಹತ್ವ ಬಂದಿದೆ ಎಂದು ವಿವರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತೀಯ ರೈಲ್ವೇಯಿಂದ ದೇವಸ್ಥಾನಗಳಿಗೆ ವಿಶೇಷ ಪ್ಯಾಕೇಜ್! ಟೆಕೆಟ್ ಎಷ್ಟು?

    ಭಾರತೀಯ ರೈಲ್ವೇಯಿಂದ ದೇವಸ್ಥಾನಗಳಿಗೆ ವಿಶೇಷ ಪ್ಯಾಕೇಜ್! ಟೆಕೆಟ್ ಎಷ್ಟು?

    ಬೆಂಗಳೂರು: ಪ್ರಸಿದ್ಧ ದೇವಸ್ಥಾನಗಳಿಗೆ ಭಾರತೀಯ ರೈಲ್ವೇ ಹತ್ತು ದಿನಗಳ ವಿಶೇಷ ಪ್ಯಾಕೇಜ್ ಪ್ರವಾಸ ಪ್ರಾರಂಭಿಸಿದ್ದು, ಕಡಿಮೆ ದರದಲ್ಲಿ ಮೂರು ರಾಜ್ಯಗಳ ವಿವಿಧ ದೇವಸ್ಥಾನ ಹಾಗೂ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಬಹುದು.

    ಸೆಪ್ಟೆಂಬರ್ 15ರಂದು ಬೆಂಗಳೂರಿನಿಂದ ಪ್ರವಾಸ ಪ್ರಾರಂಭವಾಗಲಿದ್ದು ಒಬ್ಬರಿಗೆ 10,820 ರೂ. ಟಿಕೆಟ್ ದರವನ್ನು ನಿಗದಿಪಡಿಸಿದೆ.

    ಯಾವ ಸ್ಥಳಕ್ಕೆ ಪ್ರವಾಸ?
    ಬೆಂಗಳೂರಿನಿಂದ ಹೊರಟ ರೈಲು ಮಧ್ಯಪ್ರದೇಶದ ಮಹಾಕಾಳೇಶ್ವರ, ಓಂಕಾರೇಶ್ವರ, ರಾಜಸ್ಥಾನದ ಜೈಪುರ, ಪುಷ್ಕರ, ಮಹಾರಾಷ್ಟ್ರದ ತ್ರಿಯಂಬಕೇಶ್ವರ, ಪಂಢರಾಪುರ ಮತ್ತು ಶಿರಿಡಿಗೆ ಕರೆದೊಯ್ಯಲಾಗುವುದು ಎಂದು ಐಆರ್‌ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ವಿಶೇಷ ಸೂಚನೆ:
    ಪ್ರಯಾಣಿಕರಿಗೆ ತಿಂಡಿಯ ವ್ಯವಸ್ಥೆಯನ್ನು ಕೂಡಾ ಐಆರ್‌ಸಿಟಿಸಿ ನಿರ್ವಹಿಸಲಿದೆ. ಆದರೆ ಕೇವಲ ಸಸ್ಯಾಹಾರ ತಿನಿಸುಗಳನ್ನು ಮಾತ್ರ. ಪ್ರತಿದಿನ ಒಂದು ಲೀಟರ್ ನೀರು ಮತ್ತು ಎರಡು ಬಾರಿ ಕಾಫಿ ಅಥವಾ ಟೀ ಒದಗಿಸಲಾಗುತ್ತದೆ. ನಿಲ್ದಾಣಗಳಿಂದ ದೇವಸ್ಥಾನಗಳಿಗೆ ಹೋಗಲು ರೈಲ್ವೆ ನಿಗಮ ಪ್ರಯಾಣಿಕರಿಗೆ ಟ್ಯಾಕ್ಸಿ ವ್ಯವಸ್ಥೆ ಕೂಡಾ ಇದೆ.

    ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಆಗಿಲ್ಲ. ಒಂದು ವೇಳೆ ಮುಂದಿನ ಕೆಲವು ದಿನಗಳಲ್ಲಿ ಸಂಖ್ಯೆ ಏರಿಕೆಯಾದರೆ ಮೈಸೂರು ರೈಲು ನಿಲ್ದಾಣದಿಂದಲೇ ಪ್ರಯಾಣ ಪ್ರಾರಂಭಿಸಲಾಗುವುದು. ಇಲ್ಲದಿದ್ದರೆ ಹಾಸನದಿಂದ ಪ್ರಯಾಣ ಪ್ರಾರಂಭವಾಗಲಿದೆ ಎಂದು ಐಆರ್‌ಸಿಟಿಸಿ ಅಧಿಕಾರಿ ಇಮ್ರಾನ್ ಅಹ್ಮದ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv