ಹೈದರಾಬಾದ್: ಮಹಿಳೆಯೊಬ್ಬರು ಪುರೋಹಿತರೊಬ್ಬರಿಗೆ ದೇವಸ್ಥಾನದ ಒಳಗಡೆಯೇ ಹಿಗ್ಗಾಮುಗ್ಗ ಥಳಿಸಿದ ಘಟನೆ ವಿಜಯವಾಡದ ಭವಾನಿಪುರಂ ಎಂಬಲ್ಲಿ ನಡೆದಿದೆ.
ಪುರೋಹಿತ ಹಾಗೂ ದೇವಸ್ಥಾನದ ಸಮಿತಿ ಸದಸ್ಯನ ಮಧ್ಯೆ ಇದ್ದ ವೈಮನಸ್ಸೇ ಈ ಘಟನೆಗೆ ಕಾರಣ ಎಂದು ವರದಿಯಾಗಿದೆ. ಥಳಿತಕ್ಕೊಳಗಾದ ಕೋಟ ಪವನ್ ಹೆಚ್ ಬಿ ಕಾಲೋನಿಯಲ್ಲಿರುವ ಸೈತ್ರಿಶಕ್ತಿ ದೇವಸ್ಥಾನದಲ್ಲಿ ಪುರೋಹಿತನಾಗಿ ಕೆಲಸ ಮಾಡುತ್ತಿದ್ದರು.
ಪವನ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಮಿತಿ ಸದಸ್ಯ ಮೋಹನ್ ರೆಡ್ಡಿ ಮಧ್ಯೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ರೆಡ್ಡಿ, ದೇವಸ್ಥಾನದ ಅಕ್ಕಪಕ್ಕ ಎಲ್ಲೂ ಕಾಣಿಸಿಕೊಳ್ಳಬಾರದೆಂದು ಬೆದರಿಕೆ ಹಾಕಿದ್ದರು. ಹೀಗಾಗಿ ಪವನ್ ಪೊಲೀಸ್ ಠಾಣೆಯಲ್ಲಿ ರೆಡ್ಡಿ ವಿರುದ್ಧ ದೂರು ಕೂಡ ದಾಖಲಿಸಿದ್ದರು.

ಭಾನುವಾರ ತಂದೆಯನ್ನು ಭೇಟಿ ಮಾಡಲೆಂದು ಹೋಗುತ್ತಿರುವ ವೇಳೆ ಪವನ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮೋಹನ್ ರೆಡ್ಡಿ ಮಗಳು ಆರೋಪ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಪತ್ನಿ ಹಾಗೂ ಮಗಳು ದೇವಸ್ಥಾನಕ್ಕೆ ಬಂದಿದ್ದು, ಪವನ್ ಪೂಜೆಗೆ ರೆಡಿಯಾಗುತ್ತಿದ್ದಾಗ ಇಬ್ಬರೂ, ಪವನ್ ಮೇಲೆ ಮೆಣಸಿನ ಹುಡಿಯನ್ನು ಎರಚಿ, ಬಟ್ಟೆ ಮುಸುಕು ಹಾಕಿ ಚೆನ್ನಾಗಿ ಥಳಿಸಿದ್ದಾರೆ. ಈ ವೇಳೆ ಉಳಿದ ಪುರೋಹಿತರು ಅಲ್ಲಿಗೆ ದೌಡಾಯಿಸಿ ಪವನ್ ನನ್ನು ರಕ್ಷಿಸಿದ್ದಾರೆ.
ಇದಾದ ಬಳಿಕ ಮೋಹನ್ ರೆಡ್ಡಿ ಮಗಳು ಪವನ್ ವಿರುದ್ಧ ದೂರು ದಾಖಲಿಸಿದ್ದಾಳೆ. ಇತ್ತ ಪವನ್ ಕೂಡ ತನ್ನ ಮೇಲೆ ದಾಳಿ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನಿಡಿದ್ದಾರೆ. ಸದ್ಯ ಪೊಲೀಸರು ಇಬ್ಬರ ದೂರನ್ನೂ ದಾಖಲಿಸಿಕೊಂಡಿದ್ದು, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ.






