Tag: ಪುರಾಣ

  • Navratri 2025 Day 6: ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ಕಾತ್ಯಾಯಿನಿ ದೇವಿ

    Navratri 2025 Day 6: ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ಕಾತ್ಯಾಯಿನಿ ದೇವಿ

    ವರಾತ್ರಿಯ ಆರನೇ ದಿನವನ್ನು ಕಾತ್ಯಾಯಿನಿ ದೇವಿ (Katyayani Devi) ಎಂದು ಕರೆಯಲ್ಪಡುವ ದುರ್ಗಾ ದೇವಿಯ ಉಗ್ರ ಅವತಾರಕ್ಕೆ ಸಮರ್ಪಿಸಲಾಗಿದೆ. ಸಿಂಹದ ಮೇಲೆ ಸವಾರಿ ಮಾಡುವ, ಕಮಲದ ಹೂವು, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಮಹಿಷಾಸುರಮರ್ಧಿನಿಯನ್ನು ಷಷ್ಠಿಯಂದು ಅಂದರೆ ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ. ನವರಾತ್ರಿಯ ಆರನೇ ದಿನ ಪೂಜಿಸಲ್ಪಡುವ ಕಾತ್ಯಾಯಿನಿ ದೇವಿ, ಮಹಿಷಾಸುರನನ್ನು ಕೊಂದವಳು, ದೇವತೆಗಳನ್ನು ರಾಕ್ಷಸರ ಸೆರೆಯಿಂದ ಬಿಡಿಸಿದವಳು. ಈಕೆ ಮಹಿಷಾಸುರ ಮರ್ಧಿನಿ, ಸುಜನರಕ್ಷಕಿ. ಈ ದಿನ ತಾಯಿಯನ್ನು ಪೂಜಿಸುವವರಿಗೆ ಆಯುರಾರೋಗ್ಯ ಭಾಗ್ಯ ಸದಾ ಇರುತ್ತದೆ ಇರುತ್ತದೆ.

    ಕಾತ್ಯಾಯಿನಿ ದೇವಿಯನ್ನು ಶತ್ರುಗಳಿಂದ ಮತ್ತು ತೊಂದರೆಗಳಿಂದ ಮುಕ್ತಿ ನೀಡುವವಳು ಎಂದು ಪರಿಗಣಿಸಲಾಗಿದೆ. ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಈಕೆ. ಈ ತಾಯಿ ಮಹಿಷಾಸುರನನ್ನು ಕೊಂದಳು, ನಂತರ ಶುಂಭ ಮತ್ತು ನಿಶುಂಭರನ್ನೂ ಕೂಡ ಕೊಂದಳು. ಅಷ್ಟೇ ಅಲ್ಲ, ರಾಕ್ಷಸರು ಸೆರೆಯಲ್ಲಿ ಇಟ್ಟಿದ್ದ ಎಲ್ಲಾ ಒಂಬತ್ತು ಗ್ರಹಗಳು ಕೂಡ ಈಕೆಯ ಮೂಲಕ ಬಿಡುಗಡೆ ಹೊಂದಿದವು.

    ಮಹರ್ಷಿ ಕಾತ್ಯಾಯನರು ದೇವಿ ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದರು. ಪರಿಣಾಮವಾಗಿ ಅವರು ದೇವಿಯನ್ನು ತಮ್ಮ ಮಗಳಾಗಿ ಪಡೆದರು. ದೇವಿಯು ಮಹರ್ಷಿ ಕಾತ್ಯಾಯನರ ಆಶ್ರಮದಲ್ಲಿ ಜನಿಸಿದಳು. ಕಾತ್ಯಾಯನರ ಮಗಳಾದ ಕಾರಣದಿಂದ ಅವಳನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ದೇವಿಯು ಜನಿಸುವ ಮುನ್ನ ಮಹಿಷಾಸುರನೆಂಬ (Mahishasura) ರಾಕ್ಷಸನ ದೌರ್ಜನ್ಯವು ಲೋಕದಲ್ಲಿ ಬಹಳಷ್ಟು ಹೆಚ್ಚಾಗಿತ್ತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ ಸೃಷ್ಟಿಸಿದರು. ಅಶ್ವಿನಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಕಾತ್ಯಾಯನ ಮುನಿ ಮನೆಯಲ್ಲಿ ತ್ರಿದೇವರ ಪ್ರಕಾಶಮಾನವಾದ ದೇವತೆ ಜನಿಸಿದಳು. ಇದರ ನಂತರ ಕಾತ್ಯಾಯನ ಋಷಿ ತಾಯಿಯನ್ನು ಮೂರು ದಿನಗಳ ಕಾಲ ಪೂಜಿಸಿದರು. ಇದರ ನಂತರ, ದಶಮಿಯ ದಿನದಂದು, ಮಹಿಷಾಸುರನನ್ನು ಕಾತ್ಯಾಯಿನಿ ಕೊಂದಳು. ಶುಂಭ ಮತ್ತು ನಿಶುಂಭರೂ ಸ್ವರ್ಗದ ಮೇಲೆ ದಾಳಿ ನಡೆಸಿ ಹಾಳುಮಾಡಿದ್ದರು. ಇಂದ್ರನ ಸಿಂಹಾಸನವನ್ನೂ ಸಹ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲ ನವಗ್ರಹಗಳನ್ನೂ ಒತ್ತೆಯಾಳಾಗಿರಿಸಿಕೊಂಡಿದ್ದರು. ರಾಕ್ಷಸರು ಬೆಂಕಿ ಮತ್ತು ಗಾಳಿಯ ಶಕ್ತಿಯನ್ನು ಕೂಡ ವಶಪಡಿಸಿಕೊಂಡರು. ಇದರಿಂದ ನೊಂದ ಎಲ್ಲಾ ದೇವತೆಗಳು ದೇವಿಯಿದ್ದ ಆಶ್ರಯಕ್ಕೆ ಹೋದರು ಮತ್ತು ಅವರನ್ನು ಅಸುರರ ದೌರ್ಜನ್ಯದಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದರು. ತಾಯಿ ಈ ಅಸುರರನ್ನು ಕೊಂದು ಎಲ್ಲರನ್ನೂ ಅವರ ಭಯದಿಂದ ಮುಕ್ತಗೊಳಿಸಿದಳು.

    ದುರ್ಗಾ ದೇವಿಯ ಆರನೇ ಅವತಾರವಾದ ಕಾತ್ಯಾಯಿನಿ ದೇವಿಯನ್ನು ಅಧಿದೇವತೆ, ಆಕೆಯನ್ನು ಯುದ್ಧದ ದೇವತೆ ಎಂದೂ ಕರೆಯುತ್ತಾರೆ. ತಾಯಿಯ ರೂಪವು ಚಿನ್ನದಂತೆ ಪ್ರಕಾಶಮಾನವಾಗಿದೆ ಮತ್ತು ಅತ್ಯಂತ ದೈವಿಕವಾಗಿದೆ. ತಾಯಿಗೆ ನಾಲ್ಕು ತೋಳುಗಳಿವೆ, ಆಕೆ ತನ್ನ ನಾಲ್ಕು ಕೈಗಳಲ್ಲಿ ಒಂದು ಕೈಯಲ್ಲಿ ಕಮಲದ ಹೂವನ್ನು, ಮತ್ತೊಂದರಲ್ಲಿ ಖಡ್ಗವನ್ನು ಮತ್ತು ಇನ್ನೆರೆಡು ಕೈಗಳಲ್ಲಿ ಭಕ್ತರಿಗೆ ಆಶೀರ್ವಾದವನ್ನು ಕೊಡುವ ಮುದ್ರೆಯನ್ನು ಹೊಂದಿದ್ದು, ಸಿಂಹಾಸನರೂಢಳಾಗಿದ್ದಾಳೆ. ಶಾಸ್ತ್ರಗಳ ಪ್ರಕಾರ ತಾಯಿಯನ್ನು ಸರಿಯಾಗಿ ಪೂಜಿಸಿ ಕೆಲವು ವಿಶೇಷ ಉಪಾಯಗಳನ್ನು ಮಾಡುವುದರಿಂದ ಹೆಣ್ಣು ಮಕ್ಕಳ ವಿವಾಹವು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ ಮತ್ತು ಸೂಕ್ತ ವರ ದೊರೆಯುತ್ತಾನೆ ಎನ್ನುವ ನಂಬಿಕೆಯಿದೆ.

    ಕಾತ್ಯಾಯಿನಿಯು ಗುರು ಗ್ರಹವನ್ನು ಆಳುತ್ತಾಳೆ. ಗುರುಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜನ್ಮಕುಂಡಲಿಯಲ್ಲಿ ಗುರು ದೋಷವಿದ್ದರೂ ಪರಿಹಾರವಾಗುವುದು.

    ಕಾತ್ಯಾಯಿನಿ ದೇವಿ ಕಥೆ:
    ದೇವಿಯ ಆರನೇ ರೂಪವಾದ ತಾಯಿ ಕಾತ್ಯಾಯಿನಿಯನ್ನು ಶ್ರೀ ರಾಮ ಮತ್ತು ಶ್ರೀ ಕೃಷ್ಣ ಇಬ್ಬರೂ ಪೂಜಿಸುತ್ತಿದ್ದರು. ಕಾತ್ಯಾಯಿನಿ ದೇವಿಯ ಕಥೆ ಭಾಗವತ, ಮಾರ್ಕಂಡೇಯ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖವಾಗಿದೆ. ದೇವಿ ದುರ್ಗೆಯ ಪರಮ ಭಕ್ತನಾದ ಮಹರ್ಷಿ ಕಾತ್ಯಾಯನ ದಂಪತಿಗೆ ಮಕ್ಕಳಿರಲಿಲ್ಲ. ಅವರು ದೇವಿಯನ್ನು ಕುರಿತು ತಪಸ್ಸು ಕೈಗೊಂಡಾಗ ಆಕೆ ಪ್ರತ್ಯಕ್ಷವಾಗಿ ತಾನು ಕಾತ್ಯಾಯನ ಮಹರ್ಷಿಯ ಮಗಳಾಗಿ ಜನಿಸುವುದಾಗಿ ಆಶೀರ್ವಾದ ಮಾಡಿದಳು ಎಂದು ಪುರಾಣದ ಕಥೆ ಹೇಳುತ್ತದೆ.

    ತಾಯಿ ಕಾತ್ಯಾಯಿನಿ ದೇವಿಯ ಅವತಾರದ ಉದ್ದೇಶವು ಮಹಿಷಾಸುರನನ್ನು ಸಂಹಾರ ಮಾಡುವುದಾಗಿತ್ತು. ಋಷಿಮುನಿಗಳು ಪೂಜಿಸಿದ ನಂತರ ಅವತಾರ ಎತ್ತಿದ ತಾಯಿ ಕಾತ್ಯಾಯನಿಯು ಅಶ್ವಿನಿ ಮಾಸದ ಶುಕ್ಲ ನವಮಿ ತಿಥಿಯಲ್ಲಿ ಮಹಿಷನೊಂದಿಗೆ ಯುದ್ಧ ಮಾಡಿ ಸಂಹಾರ ಮಾಡಿದಳು. ದಶಮಿ ದಿನದಂದು ದೇವಿಯು ಜೇನುತುಪ್ಪ ತುಂಬಿದ ವೀಳ್ಯದ ಎಲೆಯನ್ನು ಸೇವಿಸಿ ನಂತರ ಮಹಿಷನನ್ನು ಕೊಂದಳು ಎಂದು ಪುರಾಣದ ಕಥೆಗಳು ಹೇಳುತ್ತವೆ. ಇದಾದ ನಂತರ ತಾಯಿಯನ್ನು ಮಹಿಷಾಸುರ ಮರ್ದಿನಿ ಎನ್ನುವ ಹೆಸರಿನಿಂದ ಕರೆಯಲಾಯಿತು.

    ಧಾರ್ಮಿಕ ಪುರಾಣಗಳ ಪ್ರಕಾರ, ಕಾತ್ಯಾಯಿನಿಯು ದೇವತೆಗಳ ಸಂಯೋಜಿತ ಶಕ್ತಿಗಳಿಂದ ಪ್ರಕಟವಾದವಳು. ಸಾವಿರ ಸೂರ್ಯರು, ಮೂರು ಕಣ್ಣುಗಳು, ಕಪ್ಪು ಕೂದಲು ಮತ್ತು ಬಹು ಕೈಗಳ ಶಕ್ತಿಯೊಂದಿಗೆ, ಕಾತ್ಯಾಯಿನಿ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು.

    ಹಿಂದೂ ಧರ್ಮದಲ್ಲಿ, ಮಹಿಷಾಸುರನು ಶಕ್ತಿಯುತ ಅರ್ಧ-ಮಾನವ ಅರ್ಧ-ಎಮ್ಮೆ ರಾಕ್ಷಸನಾಗಿದ್ದನು, ಅವನು ತನ್ನ ಆಕಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ಕೆಟ್ಟ ಕಾರ್ಯಕ್ಕಾಗಿ ಬಳಸಿದನು. ಅವನ ಕಿರುಕುಳದಿಂದ ಕೋಪಗೊಂಡ ಎಲ್ಲಾ ದೇವರುಗಳು ಕಾತ್ಯಾಯಿನಿಯನ್ನು ಸೃಷ್ಟಿಸಲು ತಮ್ಮ ಶಕ್ತಿಯನ್ನು ಒಂದುಗೂಡಿಸಿದರು ಮತ್ತು ದೇವಿ ಮತ್ತು ರಾಕ್ಷಸನ ನಡುವಿನ ಯುದ್ಧವನ್ನು ‘ಕೆಟ್ಟದರ ಮೇಲೆ ಒಳ್ಳೆಯದರ ವಿಜಯ’ ಎಂದು ಗುರುತಿಸಲಾಗಿದೆ.

    ಶಿವನು ಅವಳಿಗೆ ತ್ರಿಶೂಲವನ್ನು ಕೊಟ್ಟರೆ, ಭಗವಾನ್ ವಿಷ್ಣುವು ಸುದರ್ಶನ ಚಕ್ರವನ್ನು, ಅಗ್ನಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವನು ಒಂದು ಗುಡುಗು, ಬ್ರಹ್ಮದೇವನು ನೀರಿನ ಕಲಶದೊಂದಿಗೆ ರುದ್ರಾಕ್ಷಿಯನ್ನು ನೀಡಿದರು. ಈ ಆಯುಧಗಳ ಸಹಾಯದಿಂದ ದೇವಿ ಕಾತ್ಯಾಯಿನಿ ಮಹಿಷಾಸುರನ ವಧೆ ಮಾಡಿದಳು ಎಂದು ಪುರಾಣ ಕಥೆಗಳು ಹೇಳುತ್ತವೆ.

  • ಹಾವಿನ ದ್ವೇಷ 12 ವರುಷ – ಹಾಗೇ ಪ್ರೀತಿಯೂ ಪುರಾಣದಿಂದಲೇ ಹುಟ್ಟಿದ್ದಾ?

    ಹಾವಿನ ದ್ವೇಷ 12 ವರುಷ – ಹಾಗೇ ಪ್ರೀತಿಯೂ ಪುರಾಣದಿಂದಲೇ ಹುಟ್ಟಿದ್ದಾ?

    ಪ್ರೀತಿ… ಇದು ಜಗತ್ತಿನ ಮೂಲೆ ಮೂಲೆಗಳಲ್ಲೂ ಹಬ್ಬಿರುವ ಒಂದು ಸಂಬಂಧ. ಸಾಮಾನ್ಯವಾಗಿ ವ್ಯಕ್ತಿಗಳ ನಡುವೆ ಪ್ರೇಮ ಕಾವ್ಯ, ವಸ್ತು ಹಾಗೂ ವ್ಯಕ್ತಿಗಳ ನಡುವಿನ ಸಂಬಂಧ, ಪ್ರಾಣಿ ಹಾಗೂ ವ್ಯಕ್ತಿಗಳ ನಡುವೆ ಸಂಬಂಧ ಇವೆಲ್ಲವುಗಳನ್ನು ದಿನನಿತ್ಯ ನಾವು ಕಣ್ತುಂಬಿ ಕೊಳ್ಳುತ್ತೇವೆ. ಹೀಗಿರುವಾಗ ಕೆಲವು ವಿಭಿನ್ನ, ಆಶ್ಚರ್ಯಕರ ಘಟನೆಗಳು ನಮ್ಮ ಜೀವನದಲ್ಲಿ ನಡೆಯುತ್ತದೆ.

    ಅಂತಹದ್ದೇ ಆದ ಒಂದು ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿತ್ತು. ಹೌದು, ಮಧ್ಯ ಪ್ರದೇಶದ ಮೊರೆನಾ ಎಂಬಲ್ಲಿ ವಿಚಿತ್ರ ಘಟನೆ ಎಂದು ಸಂಭವಿಸಿತ್ತು. ಇದನ್ನು ನೋಡಿದ ಹಲವರು ನಿಜಕ್ಕೂ ಇದು ವಿಚಿತ್ರವೇ ಹೌದು ಎಂದಿದ್ದಾರೆ. ಅದೊಂದು ದಿನ ರಸ್ತೆಯ ಮೇಲೆ ನಾಗರಹಾವು ಹಾದು ಹೋಗಬೇಕಾದರೆ ವಾಹನವೊಂದು ಅದರ ಮೇಲೆ ಹರಿದುಹೋದ ಪರಿಣಾಮ ಹಾವು ರಸ್ತೆಯಲ್ಲಿ ಸಾವನ್ನಪ್ಪಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲಿ ರಸ್ತೆ ಬದಿಯ ಪೊದೆಯಿಂದ ಹೊರಬಂದ ಹಾವು ಒಂದು ಸತ್ತು ಬಿದ್ದ ಹಾವಿನ ಬಳಿಗೆ ಬಂತು. ಆ ಹಾವು ಸತ್ತ ಬಿದ್ದ ಹಾವಿನ ಪಕ್ಕದಲ್ಲಿಯೇ 24 ಗಂಟೆ ಇದ್ದು ಬಳಿಕ ಸಾವನ್ನಪ್ಪಿರುವುದು ಗೊತ್ತಾಗಿದೆ. ಈ ದೃಶ್ಯ ನಿಜಕ್ಕೂ ವಿಚಿತ್ರವೇನಿಸುತ್ತದೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡಿದ ನಂತರ ಹಲವು ರೀತಿಯ ಕಾಮೆಂಟ್ಗಳು ಉದ್ಭವವಾಗಿದ್ದವು. ಹೆಣ್ಣು ಹಾವು ಸತ್ತಿರುವ ಗಂಡು ಹಾವಿಗಾಗಿ ಶೋಕ ವ್ಯಕ್ತಪಡಿಸಿ ಬಳಿಕ ತಾನು ಸಾವನ್ನಪ್ಪಿದೆ. ಇನ್ನು ಕೆಲವರು ಇದೊಂದು ದುರಂತ ಪ್ರೇಮಕಥೆ ಎಂದಿದ್ದಾರೆ. ತನ್ನ ಪ್ರೀತಿಯನ್ನು ಕಳೆದುಕೊಂಡು ಸಹಿಸಲಾಗದೆ ಸ್ವಇಚ್ಛೆಯಿಂದ ತಾನು ಪ್ರಾಣ ಬಿಟ್ಟಿದೆ ಎಂದಿದ್ದಾರೆ. ಜೊತೆಗೆ ಈ ಎರಡು ಹಾವುಗಳಿಗೂ ಪುರಾಣದಲ್ಲಿ ಪ್ರೀತಿ ಇತ್ತು ಎಂತಲೂ ಹೇಳಿದ್ದಾರೆ. ನಿಜಕ್ಕೂ ಪುರಾಣದಲ್ಲಿ ನಾಗಲೋಕದಲ್ಲಿ ಹಾವಿಗೆ ಪ್ರೀತಿಯಿತ್ತಾ? ಪುರಾಣಗಳ ಪ್ರೀತಿ ಇಂದಿಗೂ ಶಾಶ್ವತವಾಗಿದೆಯಾ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ.

    ಭಾರತೀಯ ಪರಂಪರೆ ಅಥವಾ ಸಂಪ್ರದಾಯದಲ್ಲಿ ಹಾವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಇದನ್ನು ಪೂಜಿಸುವುದು ಹೌದು. ಇನ್ನು ನಾಗರಹಾವು ಹಾಗೂ ಶಿವನಿಗೆ ನಿಕಟವಾದ ಸಂಬಂಧವಿದ್ದು, ಸದಾ ಶಿವನ ಕೊರಳಲ್ಲಿ ಇರುವ ನಾಗನಿಗೂ ವಿಭಿನ್ನ ಕಥೆಗಳು ಹಾಗೂ ಜಾನಪದ ನಂಬಿಕೆಯೂ ಇದೆ. ಕಥೆಗಳ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಹಾವುಗಳು ಸೇಡು ತೀರಿಸಿಕೊಳ್ಳುವುದು ಕಂಡುಬಂದಿದೆ. ಇಷ್ಟೇ ಅಲ್ಲದೆ ಹಲವು ಸಿನಿಮಾ ಹಾಗೂ ಧಾರವಾಹಿಗಳ ಮೂಲಕ ನಾಗಲೋಕದ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ಪುರಾಣ ಒಂದು ಕಡೆಯಾದರೆ ವಿಜ್ಞಾನವು ಇನ್ನೊಂದು ರೀತಿಯಲ್ಲಿ ಹೇಳುತ್ತದೆ.

    ಸಾಮಾನ್ಯವಾಗಿ ಹಾವುಗಳಿಗೆ ಭಾವನೆಗಳು ಇರುತ್ತವೆ. ಆದರೆ ಮನುಷ್ಯರಂತೆ ಪ್ರೀತಿ ಹಾಗೂ ಸಂತೋಷದ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ. ಆದರೆ ಭಯ, ಒತ್ತಡ ಇಂತವುಗಳನ್ನು ಮಾತ್ರ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಹಾವುಗಳು ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಬೆಸೆಯುವುದಿಲ್ಲ. ಹಾವು ಹಾಗೂ ಇನ್ನಿತರೆ ಸಸ್ತನಿಗಳಿಗೆ ಭಾವನಾತ್ಮಕ ಸಂಬಂಧ ಇರುವುದಿಲ್ಲ. ಆದರೆ ಪ್ರಸ್ತುತ ಈ ಘಟನೆಯಲ್ಲಿ ಹಾವಿನ ಪಕ್ಕದಲ್ಲಿ ಇನ್ನೊಂದು ಹಾವು ಇರುವುದು ಭಾವನೆಯನ್ನು ಉಂಟುಮಾಡುತ್ತದೆ.

    ಈ ಕುರಿತು ಸಂಶೋಧಕರು ಹೇಳಿದ್ದೇನು?
    – ಸಾಮಾನ್ಯವಾಗಿ ಹಾವುಗಳು ಒಂಟಿಯಾಗಿರುತ್ತವೆ. ಆದರೆ ತಮ್ಮ ಪ್ರಾಥಮಿಕ ಸಮ್ಮಿಲನಕ್ಕಾಗಿ ಒಟ್ಟಿಗೆ ಸೇರುತ್ತವೆ. ಜೊತೆಗೆ ತಕ್ಷಣವೇ ಬೇರ್ಪಡುತ್ತವೆ.
    – ಹಾವುಗಳು ತಮ್ಮ ಸಂಗಾತಿಯನ್ನು ಗುರುತಿಸುತ್ತವೆ. ಅಥವಾ ನೆನಪಿಸಿಕೊಳ್ಳುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ.
    – ಅನ್ನು ಹೊರತುಪಡಿಸಿ ಯಾವುದೇ ರೀತಿಯ ಭಾವನಾತ್ಮಕ ಸಂಬಂಧಗಳಿರುವುದಿಲ್ಲ
    – ಪ್ರಾಣಿ ಜಗತ್ತಿನಲ್ಲಿ ಕೆಲವೇ ಕೆಲವು ಬೆರಳೆಣಿಕೆ ಎಷ್ಟು ಜಾತಿಗಳು ಮಾತ್ರ ತಮ್ಮ ಸಂಗಾತಿಯನ್ನು ಬಿಟ್ಟು ಕೊಡದೆ ಇರುವುದು, ತಮ್ಮ ಸಂಗಾತಿಗಾಗಿ ಭಾವನೆಯನ್ನು ವ್ಯಕ್ತಪಡಿಸುವುದನ್ನು ಮಾಡುತ್ತವೆ. ಆದರೆ ಹಾವುಗಳು ಈ ವರ್ಗಕ್ಕೆ ಸೇರುವುದಿಲ್ಲ

    SNAKE
    ಹಾಗಾದರೆ ಹಾವಿನ ಪಕ್ಕದಲ್ಲಿ ಹಾವು ಸತ್ತಿದ್ದು ಹೇಗೆ?

    – ತಜ್ಞರ ಪ್ರಕಾರ, ಗಂಡು ಹಾವಿನ ವಾಸನೆಗೆ ಆಕರ್ಷಿತವಾಗಿ ಅದು ಅಲ್ಲಿಗೆ ಹೋಗಿರಬಹುದು.
    – ವಾತಾವರಣದಲ್ಲಿನ ತಾಪಮಾನದಿಂದಾಗಿ ಅದರ ಚಲನಾ ಶಕ್ತಿ ಕಡಿಮೆಯಾಗಿ ಅದು ಒತ್ತಡಕ್ಕೆ ಒಳಗಾಗಿ ಅಲ್ಲಿಯೇ ಉಳಿದಿರಬಹುದು. ಅಥವಾ ಉದ್ದೇಶಪೂರ್ವಕವಾಗಿ ಹಾವಿನ ಪಕ್ಕದಲ್ಲಿ ಉಳಿದಿರಬಹುದು ಎನ್ನಲಾಗಿದೆ.
    – ಇನ್ನು ಹಾವು ಸತ್ತ 24 ಗಂಟೆಗಳ ಬಳಿಕ ಇನ್ನೊಂದು ಹಾವು ಸತ್ತಿರುವುದು ಕಾಕತಾಳೀಯ. ಆದರೆ ಸತ್ತ ಹಾವಿನ ಗಾಯದಿಂದಾಗಿ ಅಥವಾ ಯಾವುದಾದರೂ ವಿಷಕಾರಿ ಪ್ರಾಣಿಯನ್ನು ಅಥವಾ ಕೀಟವನ್ನು ಸೇವಿಸಿ, ಬಳಿಕ ಅದೇ ವಿಷಯವನ್ನು ಈ ಹಾವು ಸೇವಿಸಿ ಸಾವನ್ನಪ್ಪಿರಬಹುದು ಎನ್ನಲಾಗಿದೆ.

    ಹಾವಿನ ಜಾತಿಯಾದ ಕಿಂಗ್ ಕೋಬ್ರಾ ಹಾವುಗಳು ಮಿಲನದ ನಂತರ ಜೊತೆಯಾಗಿರುವುದಿಲ್ಲ. ಆದರೆ ತನ್ನ ಮೊಟ್ಟೆಯ ರಕ್ಷಣೆಗಾಗಿ ಹಾವುಗಳು ಅದರ ಜೊತೆಗೆ ಇರುತ್ತವೆ. ಇದು ಗಂಡು ಹಾಗೂ ಹೆಣ್ಣು ಹಾವುಗಳು ಜೊತೆಗೆ ಇರುವ ಉದ್ದೇಶದಿಂದಲ್ಲ. ಇದು ತಮ್ಮ ಸಂತತಿಯ ರಕ್ಷಣೆಗಾಗಿ ಎರಡು ಹಾವುಗಳು ಜೊತೆಗಿರುತ್ತವೆ. ಆದರೆ ಅದಾದ ನಂತರ ಹಾವುಗಳು ಜೀವನ ಪರ್ಯಂತ ಸಂಗಾತಿಯಾಗಿರುವುದಿಲ್ಲ ಹಾಗೂ ನೋವನ್ನು ಅನುಭವಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಇನ್ನೂ ಕೆಲವು ಮಾಹಿತಿಗಳ ಪ್ರಕಾರ, ಗಂಡು ಹಾವು ಹೆಣ್ಣು ಹಾವಿನೊಂದಿಗೆ ಮಿಲನದ ಸಲುವಾಗಿ ಕಾಯುತ್ತಿರುತ್ತವೆ. ಇನ್ನು ಹೆಣ್ಣು ಹಾವುಗಳು ಕೂಡ ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಹಲವು ಗಂಡು ಹಾವಿನೊಂದಿಗೆ ಸಂಗಾತಿಯಾಗಿರುತ್ತವೆ.

    ಪುರಾಣ ಹೇಳುವುದೇನು?
    ಪುರಾಣಗಳ ಪ್ರಕಾರ ಹಾವುಗಳು ತಮ್ಮ ಸಂಗಾತಿ ಜೊತೆಗಿರುತ್ತವೆ. ಜೊತೆಗಿಲ್ಲದೆ ಇರುವಾಗ ಅವುಗಳಿಗಾಗಿ ದುಃಖಿಸುತ್ತದೆ ಎಂದು ತೋರಿಸಿಕೊಂಡು ಬಂದಿದೆ. ಬಹಳ ಹಿಂದಿನಿಂದಲೂ ನಾಗರಿಕತೆಗಳಲ್ಲಿ ಹಾವಿನ ಬಗ್ಗೆ ಭಯ, ಪೂಜೆ ಹಾಗೂ ಪ್ರೀತಿ ಇವೆಲ್ಲವು ಜನರನ್ನು ಆಕರ್ಷಿಸಿದೆ. ಇನ್ನು ಹಾವಿನ ಕಲ್ಪನೆಯ ಜೀವನವನ್ನು ಧರ್ಮ, ಜಾನಪದ ಹಾಗೂ ಸಿನಿಮಾದಲ್ಲಿ ವಿಭಿನ್ನ ರೀತಿಯಾಗಿ ಕಥೆ ಕಟ್ಟಲಾಗಿದೆ.

    ಪ್ರತಿಯೊಂದು ಕಥೆಯಲ್ಲಿಯೂ ನಾಗ ನಾಗಿಣಿಯ ಹುಡುಕಾಟದಲ್ಲಿ ಪ್ರೀತಿ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಶಿವಪುರಾಣ, ಮಹಾಭಾರತ ಹಾಗೂ ಭಗವತ ಪುರಾಣಗಳಲ್ಲಿ ಹಾವಿನ ಪ್ರೀತಿ ಕಂಡು ಬರುತ್ತದೆ.

    ಅದೇ ರೀತಿ ಈ ಮೊರೆನಾದ ನಾಗರಹಾವುಗಳ ಕಥೆಯು ಪ್ರೀತಿ ಅಥವಾ ತ್ಯಾಗದ ಭಾವನೆ ಇರಬಹುದು ಎಂದು ಕಲ್ಪನೆ ಮಾಡಿಕೊಳ್ಳಬಹುದು ವಿನಃ ಇನ್ಯಾವುದೇ ಸಂಬಂಧವಿಲ್ಲ. ಈ ರೀತಿಯ ಘಟನೆಗಳು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಅಪರೂಪವಾಗಿ ಸಂಭವಿಸುವ ಒಂದು ಸಂಗತಿ. ಇನ್ನು ಇವುಗಳ ಪ್ರೀತಿ ಪ್ರೇಮ ಎಂದು ಹೇಳುವುದು ಕಾಕತಾಳೀಯವಷ್ಟೇ. ಆದರೆ ಇದಕ್ಕೂ ವಿಜ್ಞಾನಕ್ಕೂ ಪುರಾಣಕ್ಕೂ ಯಾವುದೇ ಸಂಬಂಧವಿಲ್ಲ.

  • Maha Shivaratri| ಶಿವ ತಾಂಡವ ನೃತ್ಯ ಮಾಡಿದ್ದು ಯಾಕೆ?

    Maha Shivaratri| ಶಿವ ತಾಂಡವ ನೃತ್ಯ ಮಾಡಿದ್ದು ಯಾಕೆ?

    ಶಿವನು ನಾಟ್ಯ ಮತ್ತು ಸಂಗೀತ ಪ್ರಿಯ. ಈ ಕಾರಣಕ್ಕೆ ಆತನಿಗೆ ನಟರಾಜ (Nataraj) ಎಂಬ ಹೆಸರು ಬಂದಿದೆ. ಅಜ್ಞಾನವನ್ನು ಜ್ಞಾನ ನೃತ್ಯ ಮತ್ತು ಸಂಗೀತದಿಂದ ತೊಡೆದು ಹಾಕಬಹುದು ಎಂಬುದನ್ನು ತೋರಿಸಿಕೊಟ್ಟವನು ಶಿವ. ಆದರಲ್ಲೂ ಆತನ ತಾಂಡವ ನೃತ್ಯ (Tandav Nritya) ಬಹಳ ಪ್ರಸಿದ್ಧ. ಶಿವ ತಾಂಡವ ನೃತ್ಯ ಮಾಡಿದ್ದಕ್ಕೂ ಒಂದು ಕಥೆಯಿದೆ.

    ದೇವಲೋಕದಲ್ಲಿ ದೇವೇಂದ್ರ ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬನಾದ ದಕ್ಷ (Daksha) ಆಗಮಿಸುತ್ತಾನೆ. ದಕ್ಷ ಬಂದಾಗ ಋಷಿಗಳು, ದೇವತೆಗಳು ಎದ್ದು ನಿಂತು ಗೌರವಿಸುತ್ತಾರೆ. ಎಲ್ಲರೂ ಎದ್ದು ನಿಂತು ಗೌರವಿಸಿದರೂ ಅಲ್ಲಿದ್ದ ಶಿವ (Shiva) ಮಾತ್ರ ಎದ್ದು ನಿಂತು ಗೌರವಿಸುವುದಿಲ್ಲ. ಹಾಗೆ ನೋಡಿದರೆ ದಕ್ಷನಿಗೆ ಶಿವ ಅಳಿಯನಾಗಬೇಕು. ದಕ್ಷ ತನ್ನ ಮಗಳಾದ ಸತಿ ದೇವಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡಿಸಿದ್ದ. ಹೀಗಾಗಿ ಮಾವನಾದ ನನಗೆ ಶಿವ ಗೌರವ ನೀಡದೇ ಅವಮಾನ ಮಾಡಿದ್ದಾನೆ ಎಂದು ಮನಸ್ಸಿನಲ್ಲೇ ದಕ್ಷ ಭಾವಿಸಿ ಸಿಟ್ಟುಮಾಡಿಕೊಳ್ಳುತ್ತಾನೆ.

    ಸರಿಯಾಗಿ ನೆಲೆ ಇಲ್ಲದ ಈತನಿಗೆ ಬ್ರಹ್ಮನ ಮಾತು ಕೇಳಿ ಮಗಳನ್ನು ಕೊಟ್ಟು ಮದುವೆ ಮಾಡಿಸಿದ್ದೆ. ನನ್ನ ಮಗಳನ್ನು ಮದುವೆಯಾದ ಈತ ನನಗೆ ಶಿಷ್ಯನಾಗಬೇಕು. ಆದರೆ ಈಗ ನನಗೆ ಎಲ್ಲರ ಮುಂದೆ ಅವಮಾನ ಮಾಡಿದ್ದಾನೆ. ನನಗೆ ಅವಮಾನ ಮಾಡಿದ ಈತ ದೇವತೆಗಳೊಂದಿಗೆ ಹವಿರ್ಭಾಗವನ್ನು ಹೊಂದಲು ಯೋಗ್ಯನಲ್ಲ ಎಂದು ಹೇಳಿದ. ಅಷ್ಟೇ ಅಲ್ಲದೇ ನನಗೆ ಅವಮಾನ ಮಾಡಿದ ಈತನಿಗೆ ಅವಮಾನ ಮಾಡುತ್ತೇನೆ ಎಂದು ಪ್ರತಿಜ್ಞೆ ತೊಡುತ್ತಾನೆ. ಇದನ್ನೂ ಓದಿ: ಭಕ್ತಿ ಪ್ರಿಯ ಶಿವ.. ಪರಮೇಶ್ವರನ ಅಚ್ಚುಮೆಚ್ಚಿನ ಭಕ್ತರಿವರು

    ಮನೆಗೆ ಬಂದ ಬಳಿಕ ಕೆಲ ದಿನಗಳಲ್ಲಿ ನಿರೀಶ್ವರಯಾಗವನ್ನು ಕೈಗೊಳ್ಳುತ್ತಾನೆ. ಯಾವುದೇ ಕಾರಣಕ್ಕೂ ಶಿವನಿಗೆ ಇಲ್ಲಿ ಪೂಜೆ ಮಾಡಕೂಡದು ಎಂದು ಕಟ್ಟಪ್ಪಣೆ ಹೊರಡಿಸುತ್ತಾನೆ. ಅಂತರಿಕ್ಷದಲ್ಲಿ ಗುಂಪು ಗುಂಪಾಗಿ ದೇವತೆಗಳನ್ನು ಹೋಗುವುದನ್ನು ನೋಡಿದ ಸತಿ ವಿಚಾರ ತಿಳಿದು ನಾನು ತಂದೆ ಮಾಡುತ್ತಿರುವ ಯಾಗಕ್ಕೆ ಹೋಗಬೇಕು ಎಂದು ಹಂಬಲಿಸುತ್ತಾಳೆ. ಅದರಂತೆ ಪತಿ ಶಿವನ ಬಳಿ ತೆರಳಿ ದಂಪತಿಯಾದ ನಾವು ಈ ಯಾಗಕ್ಕೆ ಹೋಗೋಣ ಎನ್ನುತ್ತಾಳೆ. ಅದಕ್ಕೆ ಶಿವ, ನಮಗೆ ಯಾವುದೇ ಆಹ್ವಾನ ಇಲ್ಲ. ಆಹ್ವಾನ ಇಲ್ಲದ ಕಾರ್ಯಕ್ರಮಕ್ಕೆ ಹೋಗುವುದು ಸರಿಯಲ್ಲ ಎಂದು ಹೇಳುತ್ತಾನೆ. ಶಿವ ಎಷ್ಟೇ ಹೇಳಿದರೂ ಸತಿದೇವಿ ಹೋಗಲೇಬೇಕು ಎಂದು ಹಠ ಹಿಡಿಯುತ್ತಾಳೆ. ಕೊನೆಗೆ ನೀವು ಬಾರದೇ ಇದ್ದರೆ ನಾನು ಹೋಗುತ್ತೇನೆ ಎಂದು ಹೇಳಿ ಹೋಗುತ್ತಾಳೆ. ನಂದಿ ಸೇರಿದಂತೆ ಸಾವಿರಾರು ಶಿವಗಳು ಸತಿಯನ್ನು ಹಿಂಬಾಲಿಸುತ್ತಾ ದಕ್ಷನ ಯಾಗ ಶಾಲೆಗೆ ಬರುತ್ತವೆ.

    ದಕ್ಷನ ಸೂಚನೆಯ ಕಾರಣ ಯಾರೂ ಸತಿಯನ್ನು ಮಾತನಾಡಿಸಲಿಲ್ಲ ಗೌರವ ಸಿಗಲಿಲ್ಲ. ನಂತರ ಶಿವನಿಗೆ ಹವಿರ್ಭಾಗವನ್ನೇ ಕೊಡಬಾರದು ಎಂಬ ಭಾವನೆಯಿಂದಲೇ ನಡೆಯುತ್ತಿರುವ ಯಜ್ಞವನ್ನು ಕಂಡು ಸತಿ ದೇವಿ ಸಿಟ್ಟಾಗುತ್ತಾಳೆ. ತನ್ನ ಪತಿಗೆ ಅವಮಾನ ಮಾಡಿದ ಯಜ್ಞ ಯಜ್ಞವೇ ಅಲ್ಲ ಎಂದು ಭಾವಿಸಿ, ಮುಂದಿನ ಜನ್ಮದಲ್ಲಿ ಪರಶಿವನೇ ಪತಿಯಾಗಬೇಕೆಂದು ಪ್ರಾರ್ಥನೆ ಮಾಡಿ ಆ ಯಜ್ಞಕ್ಕೆ ಹಾರಿ ತನ್ನ ದೇಹತ್ಯಾಗ ಮಾಡುತ್ತಾಳೆ.

    ತನ್ನ ಗಣಗಳಿಂದ ಸತಿ ದೇಹತ್ಯಾಗ ಮಾಡಿದ ವಿಚಾರ ತಿಳಿದು ಶಿವ ಸಿಟ್ಟಾಗುತ್ತಾನೆ. ಕೈಲಾಸದಲ್ಲಿ ಕೋಪಗೊಂಡು ಭಯಂಕರವಾಗಿ ಕಣ್ಣು ಕೆಂಪಾಗಿ ಮಾಡಿ ಮಾಡಿ ವೀರವೇಷದ ನೃತ್ಯ ಮಾಡುತ್ತಾನೆ. ತನ್ನ ಎಲ್ಲಾ ಶಕ್ತಿ ಬಳಸಿ ಮಾಡಿದ ಈ ವೀರವೇಷದ ನೃತ್ಯವೇ ತಾಂಡವ ನೃತ್ಯ. ಈ ತಾಂಡವ ನೃತ್ಯದ ವೇಳೆ ಕ್ರೋಧದಲ್ಲಿ ಸ್ವಲ್ಪ ಕೂದಲನ್ನು ಪರ್ವತಕ್ಕೆ ಎಸೆಯುತ್ತಾನೆ. ಈ ವೇಳೆ ಅತ್ಯಂತ ಭಯಾನಕವಾದ ಶಿವನ ಉಗ್ರ ರೂಪವಾದ ಮೊದಲ ರುದ್ರ ಅವತಾರ ವೀರಭದ್ರ ಹುಟ್ಟುತ್ತಾನೆ. ನಂತರ ಶಿವನು ತನ್ನ ಇನ್ನೊಂದು ಕೂದಲನ್ನು ಪರ್ವತದ ಮೇಲೆ ಎಸೆಯುತ್ತಾನೆ. ಎರಡನೇ ಬಾರಿ ಕೂದಲು ಬಿದ್ದ ಜಾಗದಲ್ಲಿ ಭದ್ರಕಾಳಿ ಕಾಣಿಸಿಕೊಳ್ಳುತ್ತಾಳೆ.

    ಶಿವನು ಅವರಿಬ್ಬರಿಗೂ ಯಜ್ಞವನ್ನು ನಾಶಮಾಡಿ ದಕ್ಷನ ತಲೆಯನ್ನು ತರಲು ಆಜ್ಞಾಪಿಸುತ್ತಾನೆ. ಯಾವುದೇ ಗಂಧರ್ವ, ದೇವತೆ ಅಥವಾ ದೇವರು ತಡೆದರೆ ನೀವು ಅವರನ್ನು ನಾಶಮಾಡಿ ಎಂದು ಸೂಚಿಸುತ್ತಾನೆ. ಇವರಿಬ್ಬರ ಜೊತೆ ಶಿವನು ಒಂದು ಕೋಟಿ ಶಿವ ಗಣಗಳನ್ನು ಯುದ್ಧಕ್ಕೆ ಕಳುಹಿಸುತ್ತಾನೆ. ಭಯಂಕರ ಯುದ್ಧ ನಡೆದು ವೀರಭದ್ರ ದಕ್ಷನ ತಲೆಯನ್ನು ಕತ್ತರಿಸುತ್ತಾನೆ. ಆರಂಭ ಮಾಡಿದ ಯಜ್ಞ ನಿಲ್ಲಬಾರದು ಎನ್ನುವ ಕಾರಣಕ್ಕೆ ದೇವತೆಗಳು ಶಿವನ ಬಳಿ ತೆರಳಿ ಮರಳಿ ದಕ್ಷನಿಗೆ ಜೀವ ಕೊಡುವಂತೆ ಕೇಳಿಕೊಳ್ಳುತ್ತಾರೆ. ದಯಾಳುವಾಗಿದ್ದ ಶಿವ ದಕ್ಷನಿಗೆ ಮತ್ತೆ ಜೀವ ನೀಡುತ್ತಾನೆ. ದಕ್ಷ ತನ್ನ ಅಪರಾಧಗಳಿಗೆ ಕ್ಷಮೆಯಾಚಿಸುತ್ತಾನೆ. ಶಿವನು ಕ್ಷಮಿಸಿದ ಬಳಿಕ ಈ ಯಜ್ಞ ಪೂರ್ಣಗೊಳ್ಳುತ್ತದೆ.

  • ದಸರಾ ವಿಶೇಷ: ದೇವಿಗೆ ಚಾಮುಂಡಿ, ರಕ್ತೇಶ್ವರಿ ಹೆಸರು ಬಂದಿದ್ದು ಹೇಗೆ?

    ದಸರಾ ವಿಶೇಷ: ದೇವಿಗೆ ಚಾಮುಂಡಿ, ರಕ್ತೇಶ್ವರಿ ಹೆಸರು ಬಂದಿದ್ದು ಹೇಗೆ?

    ದೇವಿ ಮಹಾತ್ಮೆಯ ಐದನೇ ಅಧ್ಯಾಯದಲ್ಲಿ ಶುಂಭ ನಿಶುಂಭರ (Shumba, Nishumba) ಕಥೆ ಬರುತ್ತದೆ. ಶುಂಭ, ನಿಶುಂಭರು ರಾಕ್ಷಸರಾಗಿದ್ದು ದೇವಲೋಕವನ್ನು ಆಕ್ರಮಿಸುವ ಕನಸು ಕಾಣುತ್ತಾರೆ. ಈ ಕನಸು ನನಸಾಗಬೇಕಾದರೆ ನಮಗೆ ವಿಶೇಷ ವರ ಸಿಗಬೇಕೆಂದು ತಿಳಿದು ಬ್ರಹ್ಮನನ್ನು ಮೆಚ್ಚಿಸಲು ಘೋರ ತಪಸ್ಸು ಮಾಡುತ್ತಾರೆ. ಇವರ ತಪಸ್ಸನ್ನು ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಈ ವೇಳೆ ಅಯೋನಿಜೆಯಾದ ಕನ್ಯೆ ಅಲ್ಲದೇ ಯಾರಿಂದಲೂ ನಮಗೆ ಮರಣ ಬಾರಬಾರದು ಎಂದು ವರ ಕೇಳುತ್ತಾರೆ. ಬ್ರಹ್ಮ ತಥಾಸ್ತು ಎಂದು ಹೇಳಿ ಈ ವಿಶೇಷ ವರವನ್ನು ದಯಪಾಲಿಸುತ್ತಾನೆ.

    ವರ ಸಿಕ್ಕಿದ ಬೆನ್ನಲ್ಲೇ ಶುಂಭ, ನಿಶುಂಭರು ದೇವಲೋಕಕ್ಕೆ ಹೋಗಿ ಯುದ್ಧ ಮಾಡಿ ದೇವತೆಗಳನ್ನು ಅಲ್ಲಿಂದ ಓಡಿಸುತ್ತಾರೆ. ಈ ವೇಳೆ ಏನು ಮಾಡಬೇಕು ಎನ್ನುವುದನ್ನು ತಿಳಿಯದ ದೇವತೆಗಳು ನೇರವಾಗಿ ಆದಿಶಕ್ತಿಯಾದ ಪಾರ್ವತಿಯ ಬಳಿ ಬರುತ್ತಾರೆ. ಪಾರ್ವತಿಯ (Parvathi) ಬಳಿ ಬರುವುದಕ್ಕೂ ಕಾರಣವಿದೆ. ಹಿಂದೆ ಮಹಿಷಾಸುರನನ್ನು ಸಂಹಾರ ಮಾಡಿದ ಬಳಿಕ ದೇವಿ ನಿಮಗೆ ಯಾವುದೇ ಕಷ್ಟ ಬಂದರೂ ನನ್ನ ಬಳಿ ಬನ್ನಿ. ನಿಮ್ಮ ಕಷ್ಟವನ್ನು ನಾನು ಪಾರು ಮಾಡುತ್ತೇನೆ ಎಂದು ದೇವತೆಗಳಿಗೆ ಅಭಯ ನೀಡಿದ್ದಳು.

    ದೇವತೆಗಳು ಲೋಕಕಂಟಕರಾಗಿರುವ ಶುಂಭ, ನಿಶುಂಭರ ಕಾಟವನ್ನು ವಿವರಿಸಿ ನಮ್ಮನ್ನು ರಕ್ಷಿಸಬೇಕೆಂದು ಆದಿಶಕ್ತಿಯ ಬಳಿ ಮೊರೆ ಇಡುತ್ತಾರೆ. ದೇವತೆಗಳು ಆದಿಶಕ್ತಿಯನ್ನು ಹೊಗಳಿದಾಗ ಆಕೆಯ ದೇಹದಿಂದ ಕೌಶಿಕಿಯೆಂಬ (Kaushiki) ಸ್ತ್ರೀ ಹೊರಬಂದು ದೇವತೆಗಳಿಂದ ಸಕಲ ಆಯುಧಗಳನ್ನು ಪಡೆಯುತ್ತಾಳೆ. ನಂತರ ಸೌಂದರ್ಯಭರಿತವಾದ ಬಾಲೆಯ ರೂಪವನ್ನು ತಳೆದು ಹಿಮಾಲಯದ ತಪ್ಪಲಿನಲ್ಲಿ ಉಯ್ಯಾಲೆಯಾಡುತ್ತಾ ವಿನೋದಲ್ಲಿ ಕುಳಿತು ತನ್ನದೇ ಲೋಕದಲ್ಲಿ ವಿಹರಿಸುತ್ತಿರುತ್ತಾಳೆ.

    ಈ ಸಂದರ್ಭದಲ್ಲಿ ಬೇಟೆಯಾಡಲು ಬಂದಿದ್ದ ಶುಂಭ, ನಿಶುಂಭರ ಸೇನಾಧಿಪತಿಯಾದ ಚಂಡ, ಮುಂಡರು (Chanda, Munda) ದೇವಿಯನ್ನು ನೋಡಿ ಮನಸೋಲುತ್ತಾರೆ. ಈಕೆಯ ಸೌಂದರ್ಯವನ್ನು ನೋಡಿ ಈ ವಿಚಾರವನ್ನು ಶುಂಭನಿಗೆ ತಿಳಿಸುತ್ತಾರೆ. ಶುಂಭ ಆಕೆಯನ್ನು ಕರೆ ತರುವಂತೆ ಧೂಮ್ರಲೋಚನಿಗೆ ಸೂಚಿಸುತ್ತಾನೆ. ಈ ವೇಳೆ ದೇವಿ,”ನನ್ನ ಕೈ ಹಿಡಿಯಬೇಕಾದ ವರನಾದವನು ನನಗಿಂತಲೂ ಬಲಶಾಲಿಯಾಗಿರಬೇಕು. ನನ್ನನ್ನು ಯಾರು ಯುದ್ಧದಲ್ಲಿ ಸೋಲಿಸುತ್ತಾರೋ ಅವರನ್ನು ಮದುವೆಯಾಗುತ್ತೇನೆ. ಹೀಗಾಗಿ ಯುದ್ಧದಲ್ಲಿ ಸೋಲಿಸಿದರೆ ಮಾತ್ರ ಶುಂಭನನ್ನು ಮದುವೆಯಾಗುತ್ತೇನೆ” ಎಂದು ಹೇಳುತ್ತಾಳೆ. ಈ ಕಾದಾಟದಲ್ಲಿ ಧೂಮ್ರಲೋಚನ ಹತನಾದ ವಿಚಾರ ತಿಳಿದು ಶುಂಭ ಚಂಡ, ಮುಂಡರಿಗೆ ಆಕೆಯನ್ನು ಕರೆ ತರುವಂತೆ ಆದೇಶಿಸುತ್ತಾನೆ. ಚಂಡಮುಂಡರು ದೇವಿ ಜೊತೆ ಯದ್ಧ ಮಾಡುತ್ತಾರೆ. ಈ ಸಮಯದಲ್ಲಿ ದೇವಿ ಕಪ್ಪು ಬಣ್ಣಕ್ಕೆ ತಿರುಗಿ ಆಕೆಯ ಹಣೆಯಿಂದ ಕಾಳಿ ಹೊರ ಬಂದು ಇಬ್ಬರನ್ನು ಸಂಹಾರ ಮಾಡುತ್ತಾಳೆ. ಇಬ್ಬರನ್ನು ಸಂಹಾರ ಮಾಡಿದ್ದಕ್ಕೆ ʼಚಾಮುಂಡಿʼ, ʼಚಾಮುಂಡೇಶ್ವರಿʼ ಎಂಬ ಹೆಸರು ದೇವಿಗೆ ಬರುತ್ತದೆ. ಇದನ್ನೂ ಓದಿ: ಶಿರಸಿ ಮಾರಿಕಾಂಬಾ ದರ್ಶನಕ್ಕೆ ವಸ್ತ್ರಸಂಹಿತೆ ಜಾರಿ

    ಚಂಡಮುಂಡರನ್ನು ದೇವಿ ಹತ್ಯೆ ಮಾಡಿದ ವಿಚಾರ ತಿಳಿದು ಶುಂಭ ರಕ್ತ ಬೀಜನನನ್ನು (Raktabeeja) ಯುದ್ಧಕ್ಕೆ ಕಳುಹಿಸುತ್ತಾನೆ. ಯುದ್ಧದ ಸಮಯದಲ್ಲಿ ಆತನ ರಕ್ತದ ಬಿಂದುಗಳು ನೆಲಕ್ಕೆ ಬೀಳುತ್ತಿದ್ದಂತೆ ಮತ್ತಷ್ಟು ರಾಕ್ಷಸರು ಹುಟ್ಟುತ್ತಿರುತ್ತಾರೆ. ರಕ್ತದಿಂದ ರಾಕ್ಷಸರು ಜನಿಸಲು ಕಾರಣವಿದೆ. ತನ್ನ ದೇಹದಿಂದ ಬಿದ್ದ ಒಂದೊಂದು ತೊಟ್ಟು ರಕ್ತವೂ ತನ್ನಂತೆಯೇ ಪರಾಕ್ರಮಶಾಲಿಯಾದ ರಾಕ್ಷಸರು ಹುಟ್ಟುವಂತೆ ಈಶ್ವರನಿಂದ ವರ ಪಡೆದಿದ್ದ. ಯುದ್ಧದಲ್ಲಿ ಈತನನ್ನು ಸೋಲಿಸುವುದು ಅಸಾಧ್ಯ ಎಂದು ತಿಳಿದ ದೇವಿ ನಾಲಗೆಯನ್ನು ಹೊರ ಚಾಚಿ ಯುದ್ಧ ಮಾಡುತ್ತಾಳೆ. ನಾಲಗೆಯ ಮೇಲೆ ನಿಂತು ರಕ್ತಬೀಜ ಯುದ್ಧ ಮಾಡಿದ. ಆತನ ದೇಹದಿಂದ ಬಿದ್ದ ರಕ್ತವನ್ನು ನಾಲಗೆಯ ಮೂಲಕ ಹೀರಿದ್ದರಿಂದ ರಕ್ತಬೀಜನ ಶಕ್ತಿ ಕಡಿಮೆಯಾಗಿ ಕೊನೆಗೆ ಹತನಾಗುತ್ತಾನೆ. ರಕ್ತಬೀಜನನ್ನು ಸಂಹರಿಸಿದ್ದಕ್ಕೆ ದೇವಿಗೆ ʼರಕ್ತೇಶ್ವರಿʼ ಎಂಬ ಹೆಸರು ಬರುತ್ತದೆ.

    ದುಮ್ರಲೋಚನ, ಚಂಡ, ಮುಂಡ, ರಕ್ತ ಬೀಜನನ್ನು ಹತ್ಯೆ ಮಾಡಿದ್ದಕ್ಕೆ ಸಿಟ್ಟಾದ ನಂತರ ಶುಂಭ, ನಿಶುಂಭರು ದೇವಿಯೊಡನೆ ಯುದ್ಧಕ್ಕೆ ಬರುತ್ತಾರೆ. ಇವರಿಬ್ಬರನ್ನು ಕೌಶಿಕಿ ಸಂಹಾರ ಮಾಡಿ ದೇವಲೋಕವನ್ನು ಮರಳಿ ದೇವತೆಗಳಿಗೆ ನೀಡುತ್ತಾಳೆ.

  • ಅಶರೀರವಾಣಿಯ ಭಯ, ತಂಗಿಗೆ ಸೆರೆವಾಸ – ಕೃಷ್ಣ ಹುಟ್ಟಿದಾಗ ಏನಾಯ್ತು?

    ಅಶರೀರವಾಣಿಯ ಭಯ, ತಂಗಿಗೆ ಸೆರೆವಾಸ – ಕೃಷ್ಣ ಹುಟ್ಟಿದಾಗ ಏನಾಯ್ತು?

    ಶರೀರವಾಣಿಯ ಭಯ, 6 ಮಕ್ಕಳ ಹತ್ಯೆ, ತಂಗಿಗೆ ಸೆರೆವಾಸ, ಕೊನೆಗೆ ಕೃಷ್ಣನಿಂದ (Krishna) ಹತ್ಯೆ. ಪುರಾಣದಲ್ಲಿ ಕೃಷ್ಣ ಮತ್ತು ಕಂಸನ (Kamsa) ಕಥೆ ಬಹಳ ರೋಚಕ. ಹುಟ್ಟುವ ಮೊದಲೇ ಸಾಯಿಸಲು ಮುಂದಾಗಿದ್ದ ಕಂಸ ಕೃಷ್ಣ ಹುಟ್ಟಿದ ನಂತರವೂ ಸಾಕಷ್ಟು ಕಾಟ ಕೊಡುತ್ತಾನೆ. ಕೊನೆಗೆ ವಿಧಿ ಲಿಖಿತದಂತೆ ಕೃಷ್ಣನಿಂದಲೇ ಸಾವನ್ನಪ್ಪುತ್ತಾನೆ.

    ಮಥುರೆಯ ರಾಜನಾದ ಕಂಸ, ತನ್ನ ತಂಗಿ ದೇವಕಿಯಯನ್ನು (Devaki) ವಸುದೇವನಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ. ವಿವಾಹದ ಅನಂತರ ಮೆರವಣಿಗೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ,”ದೇವಕಿಯ 8ನೇ ಮಗನಿಂದ ನಿನಗೆ ಮರಣ ಬರಲಿದೆ” ಎಂಬ ಅಶರೀರವಾಣಿಯೊಂದು ಕೇಳಿಸುತ್ತದೆ. ಅಶರೀರವಾಣಿ ಕೇಳಿ ಭಯಗೊಂಡ ಕಂಸ ತಂಗಿ, ಬಾವರನ್ನೇ ಕೊಲ್ಲಲು ಮುಂದಾಗುತ್ತಾನೆ. ಈ ವೇಳೆ ಪ್ರಾಣ ಭಿಕ್ಷೆ ಕೇಳಿದ ದಂಪತಿ, ಇದು ನ್ಯಾಯಸಮ್ಮತವಲ್ಲ, 8ನೇ ಮಗು ಹುಟ್ಟಿದ ಮೇಲೆ ಅದನ್ನು ನಿನಗೆ ತಂದುಕೊಡುತ್ತೇವೆ ಎಂದು ಹೇಳುತ್ತಾರೆ.

    ದೇವಕಿಯ ಮಕ್ಕಳಿಂದಲೇ ಮೃತ್ಯು ಎಂದು ತಿಳಿದು ದೇವಕಿ ಮತ್ತು ವಸುದೇವನನ್ನ (Vasdeva) ಅರಮನೆಯ ಸೆರೆಮನೆಯಲ್ಲಿ (Jail) ಇರಿಸುತ್ತಾನೆ. ದೇವಕಿ 6 ಮಕ್ಕಳನ್ನು ಹೆತ್ತರೂ ಕಂಸ ಆ ಮಕ್ಕಳನ್ನು ಬೆಳೆಸುತ್ತಿರುತ್ತಾನೆ. ಈ ವೇಳೆ ನಾರದರು ಬಂದು ಮುಂದೆ ಈ ಮಕ್ಕಳು ಹುಟ್ಟುವ 8ನೇ ಮಗುವಿನೊಂದಿಗೆ ಸೇರಿ ನಿನ್ನನ್ನು ಕೊಲ್ಲಲು ಮುಂದಾದರೆ ಏನು ಮಾಡುತ್ತೀಯಾ ಎಂದು ಕೇಳುತ್ತಾರೆ. ಇದರಿಂದ ಭಯಗೊಂಡು ಕಂಸ ಆ 6 ಮಂದಿ ಮಕ್ಕಳನ್ನು ಹತ್ಯೆ ಮಾಡುತ್ತಾನೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಬಾಲಕೃಷ್ಣ, ಲೋಲ, ಮುರಳಿ ಕೊಳಲ ಲೀಲ- ಎಲ್ಲೆಲ್ಲೂ ಭಗವಾನ್ ಶ್ರೀಕೃಷ್ಣ ಜಪ

    ಕಂಸನ ಕೃತ್ಯದಿಂದ ದು:ಖಿತಳಾದ ದೇವಕಿ 7ನೇ ಬಾರಿ ಗರ್ಭ ಧರಿಸುತ್ತಾಳೆ. ಈ ಬಾರಿ ದೇವಕಿ ಮತ್ತು ವಸುದೇವ ವಿಷ್ಣುವಿನ ಮೊರೆ ಹೋಗುತ್ತಾರೆ. ಈ ವೇಳೆ ವಿಷ್ಣು ಯೋಗಮಾಯೆ ಶಕ್ತಿ ಬಳಸಿ ದೇವಕಿ ಗರ್ಭದಲ್ಲಿನ ಪಿಂಡವನ್ನು ತೆಗೆದು ರೋಹಿಣಿಯ ಸ್ತ್ರೀ ಗರ್ಭದಲ್ಲಿ ಇರಿಸುತ್ತಾನೆ. ರೋಹಿಣಿ ಹೊಟ್ಟೆಯಲ್ಲಿ ಹುಟ್ಟುವ ಮಗುವೇ ಬಲರಾಮ. 7ನೇ ಮಗು ಹುಟ್ಟದ್ದನ್ನು ಕಂಡು ದೇವಕಿಗೆ ಗರ್ಭಪಾತವಾಯಿತು ಎಂದು ಕಂಸ ಅಂದುಕೊಳ್ಳುತ್ತಾನೆ.

    ದೇವಕಿ 8ನೇ ಮಗುವಿಗೆ ಗರ್ಭವತಿಯಾಗುತ್ತಿದ್ದಂತೆಯೇ ಕಾರಾಗೃಹದ ಸುತ್ತಾ ಸೈನಿಕರನ್ನು ನಿಯೋಜಿಸಿದ. ಬಹಳ ಎಚ್ಚರವಾಗಿರಬೇಕೆಂದು ತನ್ನ ಸೈನಿಕರಿಗೆ ಸೂಚಿಸಿದ್ದ. ಹೇಗೂ 8ನೇ ಮಗುವನ್ನು ಕಂಸ ಸಾಯಿಸುತ್ತಾನೆ. ಅದರ ಬದಲು ನಾನೇ ಮಗುವನ್ನು ಸಾಯಿಸುತ್ತೇನೆ ಎಂದು ದೇವಕಿ ಹೊಟ್ಟೆಗೆ ಬಡಿಯಲು ಆರಂಭಿಸುತ್ತಾಳೆ. ಈ ವೇಳೆ ವಿಷ್ಣು ದೇವರು ಪ್ರತ್ಯಕ್ಷವಾಗಿ, ನಾನು ನಿನ್ನ ಹೊಟ್ಟೆಯಲ್ಲಿ 8ನೇ ಮಗುವಾಗಿ ಜನಿಸಬೇಕೆಂದುಕೊಂಡಿದ್ದೇನೆ ಎಂದು ಹೇಳುತ್ತಾನೆ.

    ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದ ರಾತ್ರಿ ದೇವಕಿಗೆ ಜೋರಾಗಿ ಹೆರಿಗೆ ನೋವು ಪ್ರಾರಂಭವಾಗುತ್ತದೆ. ಮಧ್ಯರಾತ್ರಿ ಮಗು ಜನಿಸುತ್ತದೆ. ಮಗು ಜನಿಸುತ್ತಿದ್ದಂತೆ ಜೈಲಿನಲ್ಲಿ ಕಾವಲು ಕಾಯುತ್ತಿದ್ದ ಸೈನಿಕರು ನಿದ್ದೆಗೆ ಜಾರುತ್ತಾರೆ. ಸೆರೆಮನೆಯ ಬಾಗಿಲುಗಳು ತಾನಾಗಿಯೇ ತೆರೆಯುತ್ತದೆ. ಈ ಸಂದರ್ಭದಲ್ಲಿ ವಸುದೇವನ ಕನಸಿನಲ್ಲಿ ವಿಷ್ಣು ಬರುತ್ತಾನೆ. ನಿನಗೆ ಹುಟ್ಟಿದ 8ನೇ ಮಗುವನ್ನು ಗೋಕುಲದಲ್ಲಿರುವ ನಂದ ಮತ್ತು ಯಶೋಧೆಗೆ ನೀಡಬೇಕು. ಅವರಿಗೆ ಹುಟ್ಟಿದ ಹೆಣ್ಣು ಮಗುವನ್ನು ನೀನು ಪಡೆಯಬೇಕು ಎಂದು ಹೇಳುತ್ತಾನೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2024: ಕೃಷ್ಣ ಜನ್ಮಭೂಮಿ ಮಥುರಾ ಅಂಗಳದ ಪ್ರಮುಖ ಕೃಷ್ಣ ಮಂದಿರಗಳು

    ವಿಷ್ಣುವಿನ ಆದೇಶದಂತೆ ವಸುದೇವನು ತಲೆಮೇಲೆ ಬುಟ್ಟಿಯಲ್ಲಿ ಮಗುವನ್ನು ಹೊತ್ತು ರಾತ್ರಿ ಹೊರಡುತ್ತಾನೆ. ಅಂದು ರಾತ್ರಿ ಭಾರೀ ಮಳೆ ಸುರಿದಿದ್ದರಿಂದ ಯುಮುನಾ ನದಿ ಉಕ್ಕಿ ಹರಿಯುತ್ತಿರುತ್ತಾಳೆ. ನದಿಯಲ್ಲಿ ತಲೆಯವರೆಗೂ ನೀರು ಬಂದರೂ ವಸುದೇವ ಮಗುವನ್ನು ಎತ್ತಿಕೊಂಡು ನಡೆಯುತ್ತಿದ್ದನು. ಈ ವೇಳೆ ಒಂದು ಪವಾಡವೇ ನಡೆಯಿತು. ಯಮುನಾ ಎರಡು ಭಾಗವಾಗಿ ಮಧ್ಯಬಾಗದಲ್ಲಿ ಅವರಿಗೆ ದಾರಿ ಮಾಡಿಕೊಟ್ಟಿತು. ಗೋಕುಲವನ್ನು ತಲುಪಿದ ವಸುದೇವನು ಯಶೋಧೆಯ ಮಡಿಲಲ್ಲಿ ತನ್ನ ಮಗುವನ್ನು ಮಲಗಿಸಿ ಅಲ್ಲಿ ಯಶೋಧೆಗೆ ಆಗ ತಾನೇ ಜನಿಸಿದ ಹೆಣ್ಣು ಮಗುವಿನೊಂದಿಗೆ ಮಥುರೆಗೆ ಮರಳುತ್ತಾನೆ.

    ದೇವಕಿ 8ನೇ ಮಗುವಿಗೆ ಜನ್ಮ ನೀಡಿದ್ದನ್ನು ಕೇಳಿ ಆಮಗುವನ್ನು ಕೊಲ್ಲಲು ಮುಂದಾಗುತ್ತಾನೆ. ಈ ವೇಳೆ ಆ ಹಣ್ಣು ಮಗು ಆಕಾಶಕ್ಕೆ ಹಾರಿ ನಿನ್ನನ್ನು ಹತ್ಯೆ ಮಾಡಲಿರುವ ಮಗು ಬೇರೆ ಕಡೆ ಬೆಳೆಯುತ್ತಿದೆ ಎಂದು ಹೇಳಿ ಮಾಯವಾಗುತ್ತದೆ. ಕೃಷ್ಣ ಗೋಕುಲದಲ್ಲಿ ಬೆಳೆಯುತ್ತಿದ್ದಾನೆ ಎಂದು ತಿಳಿದು ಕಂಸ ನಾನಾ ರಾಕ್ಷಸರನ್ನು ಕಳುಹಿಸುತ್ತಾನೆ. ಕೃಷ್ಣ ಆ ರಾಕ್ಷಸರನ್ನು ಕೊಂದು ಕೊನೆಗೆ ಕಂಸನನ್ನು ಬಾಲ್ಯದಲ್ಲೇ ಕೊಲ್ಲುತ್ತಾನೆ.

     

  • ನಾಗರ ಪಂಚಮಿ ವಿಶೇಷ: ಜನಮೇಜಯ ಸರ್ಪಯಾಗಕ್ಕೆ ಮುಂದಾಗಿದ್ದು ಯಾಕೆ?

    ನಾಗರ ಪಂಚಮಿ ವಿಶೇಷ: ಜನಮೇಜಯ ಸರ್ಪಯಾಗಕ್ಕೆ ಮುಂದಾಗಿದ್ದು ಯಾಕೆ?

    ನಾಗರ ಪಂಚಮಿ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಗರ ಪಂಚಮಿಯ (Nagara Panchami) ನಂತರ ಸಾಲು ಸಾಲು ಹಬ್ಬಗಳು ಬರತೊಡಗುತ್ತದೆ. ವರ ಮಹಾಲಕ್ಷ್ಮಿ ಹಬ್ಬ, ಗಣೇಶ ಚತುರ್ಥಿ, ರಕ್ಷಾ ಬಂಧನ… ಹೀಗೆ ಒಂದರ ಹಿಂದೆ ಒಂದು ಬರತೊಡಗುತ್ತದೆ.

    ಪುರಾಣದಲ್ಲಿ ಹಾವಿನ ಕುರಿತಾಗಿ ಹಲವು ಕಥೆಗಳು ಇದೆ. ಅದರಲ್ಲಿ ಪ್ರಮುಖವಾಗಿ ಜನಮೇಜಯ ನಡೆಸಿದ್ದ ಸರ್ಪಯಾಗ ಬಹಳ ವಿಶೇಷ. ಜನಮೇಜಯ ಯಾರು? ಆತ ಸರ್ಪಯಾಗ ನಡೆಸಿದ್ದು ಯಾಕೆ? ನಾಗರ ಪಂಚಮಿಗೆ ಏನು ಸಂಬಂಧ ಎಲ್ಲಾ ಕಥೆಗಳನ್ನು ಇಲ್ಲಿ ತಿಳಿಸಲಾಗಿದೆ.

    ಏನಿದು ಸರ್ಪಯಾಗ?
    ಅಭಿಮನ್ಯುವಿನ ಪುತ್ರ ಪರೀಕ್ಷಿತನ ಮಗನಾದ ಜನಮೇಜಯ (Janamejaya) ವೈಶಂಪಾಯ ಮಹರ್ಷಿಯಿಂದ ಮಹಾಭಾರತದ (Mahabharata) ಕಥೆಯನ್ನು ಕೇಳುತ್ತಾನೆ. ತನ್ನ ತಂದೆ ಪರೀಕ್ಷಿತನು ಸರ್ಪ ರಾಜ ತಕ್ಷಕನಿಂದ ಕಚ್ಚಿ ಮೃತಪಟ್ಟಿದ್ದನ್ನು ತಿಳಿದು ಸರ್ಪಗಳ ಮೇಲೆ ಸೇಡು ತೀರಿಸಲು ಮುಂದಾಗುತ್ತಾನೆ. ನನ್ನ ತಂದೆಯನ್ನು ಕಚ್ಚಿದ ಸರ್ಪಗಳು ಲೋಕದಲ್ಲೇ ಇರಬಾರದು ಎಂದು ಸಂಕಲ್ಪ ಮಾಡಿ ದೊಡ್ಡ ಸರ್ಪಯಾಗಕ್ಕೆ ಮುಂದಾಗುತ್ತಾನೆ. ಇದನ್ನೂ ಓದಿ: ನಾಗರ ಪಂಚಮಿ | ಭಾರತದಲ್ಲಿ ಎಲ್ಲೆಲ್ಲಿ, ಆಚರಣೆ ಹೇಗೆ?

    ಪರೀಕ್ಷಿತನು ತಕ್ಷಕನಿಂದ ಸಾವನ್ನಪ್ಪಲು ಕಾರಣವಿದೆ. ಕುರುಕ್ಷೇತ್ರ ಯುದ್ಧ ಮುಗಿದು ಕೆಲ ವರ್ಷ ಆಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಪಾಂಡವರ ನಂತರ ಅಭಿಮನ್ಯು – ಉತ್ತರೆಯ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ. ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ಹೋದಾಗ ಬಾಯಾರಿಕೆ ಆಗುತ್ತದೆ. ಈ ವೇಳೆ ಆತ ಶಮಿಕ ಮುನಿಯ ಆಶ್ರಮವನ್ನು ಪ್ರವೇಶಿಸುತ್ತಾನೆ. ಮುನಿ ಧ್ಯಾನಸ್ಥನಾಗಿದ್ದ ಕಾರಣ ಪರೀಕ್ಷಿತನನ್ನು ಸರಿಯಾಗಿ ಸತ್ಕರ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಪರೀಕ್ಷಿತ ಅಲ್ಲೇ ಸತ್ತು ಬಿದ್ದಿದ್ದ ಒಂದು ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟುಹೋಗುತ್ತಾನೆ. ನಂತರ ಮುನಿಪುತ್ರ ಶೃಂಗಿ ಆಶ್ರಮಕ್ಕೆ ಬಂದು ತಂದೆಯ ಕೊರಳಿನಲ್ಲಿ ಹಾವು ಇರುವುದನ್ನು ಕಂಡು ಸಿಟ್ಟಾಗುತ್ತಾನೆ. ಅಷ್ಟೇ ಅಲ್ಲದೇ ನನ್ನ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅವಮಾನ ಮಾಡಿದವನು 7 ದಿನದ ಒಳಗಡೆ ಸರ್ಪ ಕಡಿದು ಸಾವನ್ನಪ್ಪಲಿ ಎಂದು ಶಪಿಸುತ್ತಾನೆ. ಈ ಶಾಪಕ್ಕೆ ತುತ್ತಾಗಿದ್ದ ಪರೀಕ್ಷಿತ ತಕ್ಷಕನಿಂದ ಸಾವನ್ನಪ್ಪುತ್ತಾನೆ.

    ತಂದೆಯ ಸಾವಿಗೆ ತಕ್ಷಕ ಕಾರಣ ಎಂದು ತಿಳಿದ ಜನಮೇಜ ದೊಡ್ಡ ಸರ್ಪಯಾಗ ಮಾಡುವಂತೆ ಋತ್ವಿಜರಿಗೆ ಸೂಚಿಸುತ್ತಾನೆ. ಸರ್ಪ ಯಾಗದಲ್ಲಿ ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡುತ್ತಿದ್ದರು. ಸರ್ಪವು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದುಹೋಗುತ್ತಿದ್ದವು.

    ಎಲ್ಲಾ ಹಾವುಗಳ ದಹನವಾಗಬೇಕೆಂಬ ಪ್ರತಿಜ್ಞೆ ಈಡೇರಬೇಕೆಂದು ಜನಮೇಜಯ ಪಣ ತೊಟ್ಟಿದ್ದ. ತನ್ನ ಸಂತತಿಯವರು ಎಲ್ಲರೂ ಬಲಿಯಾಗುತ್ತಿರುವುದನ್ನು ಕಂಡು ತಕ್ಷಕ ದೇವೇಂದ್ರನ ಮೊರೆ ಹೋಗಿ ರಕ್ಷಿಸುವಂತೆ ಕೇಳಿಕೊಳ್ಳುತ್ತಾನೆ. ಆಗ ದೇವೇಂದ್ರ ನನ್ನನ್ನು ಗಟ್ಟಿಯಾಗಿ ಹಿಡಿದಿಕೋ ಯಾವುದೇ ಯಾಗಗಳು ನಿನ್ನನ್ನು ಸೆಳೆಯಲು ಸಾಧ್ಯವಾಗುವುದಿಲ್ಲ ಎಂದು ಅಭಯ ನೀಡುತ್ತಾನೆ. ಇಂದ್ರನ ಮಾತಿನಂತೆ ತಕ್ಷಕ ಆತನನ್ನು ಗಟ್ಟಿ ಹಿಡಿದುಕೊಳ್ಳುತ್ತಾನೆ.

    ಸರ್ಪಯಾಗದ ತೀವ್ರತೆಗೆ ಬೆದರಿದ ಸರ್ಪಗಳು ತಮ್ಮ ಜರತ್ಕಾರುವಿನ ಮೊರೆ ಹೋಗುತ್ತವೆ. ಸರ್ಪಗಳ ಪ್ರಾರ್ಥನೆಗೆ ಒಗೊಟ್ಟ ಜರತ್ಕಾರು ತನ್ನ ಪುತ್ರನಾದ ಆಸ್ತಿಕ ಋಷಿಯನ್ನು ಜನಮೇಜಯನಲ್ಲಿಗೆ ಕಳುಹಿಸುತ್ತಾಳೆ. ಬ್ರಹ್ಮಚಾರಿಯಾದ ಆಸ್ತಿಕ ಜನಮೇಜಯ ನಡೆಸುತ್ತಿದ್ದ ಯಾಗಶಾಲೆಗೆ ಬರುತ್ತಾನೆ. ಇಂದ್ರ ಸಹಿತವಾಗಿ ತಕ್ಷಕ ಯಾಗಕ್ಕೆ ಬೀಳುವ ಸಮಯದಲ್ಲಿ ಯಾಗ ಶಾಲೆ ಪ್ರವೇಶಿಸಿದ ತಕ್ಷಕ ಬ್ರಹ್ಮಚಾರಿಗೆ ದಕ್ಷಿಣೆ ನೀಡದೇ ಯಾಗ ಹೇಗೆ ನಡೆಸುತ್ತೀರಿ ಎಂದು ಪ್ರಶ್ನಿಸುತ್ತಾನೆ.

    ಈ ವೇಳೆ ಇಕ್ಕಟ್ಟಿಗೆ ಸಿಲುಕಿದ ಜನಮೇಜಯ, ನಿನಗೆ ಏನು ಬೇಕೋ ಕೇಳು. ಅದನ್ನು ನಾನು ನೀಡುತ್ತೇನೆ ಎಂದು ಹೇಳುತ್ತಾನೆ. ತಕ್ಷನಿಂದ ಈ ಮಾತು ಬಂದ ಕೂಡಲೇ ಈಗಲೇ ಸರ್ಪಯಾಗ ನಿಲ್ಲಿಸು. ಇದೇ ನೀನು ನನಗೆ ನೀಡುವ ದಕ್ಷಿಣೆ ಎಂದು ಆಸ್ತಿಕ ಹೇಳುತ್ತಾನೆ. ಆಸ್ತಿಕ ಕೇಳಿದ ಈ ದಕ್ಷಿಣೆಯಿಂದ ಏನು ಮಾಡಬೇಕು ಎಂದು ತೋಚದೇ ಕೊನೆಗೆ ಕೊಟ್ಟ ಮಾತಿನಂತೆ ಯಾಗವನ್ನು ನಿಲ್ಲಿಸಿದ. ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಕಣ್ಣೆದುರೇ ಇದ್ದರೂ ಜನಮೇಜಯ ಏನು ಮಾಡುವಂತಿರಲಿಲ್ಲ.

    ಯಾಗ ನಿಂತ ಬಳಿಕ ಆಸ್ತಿಕ, ಪ್ರಾಣಿ ಹಿಂಸೆ ಮಾಡಬಾರದು ಜನಮೇಜಯನಿಗೆ ಎಂದು ಬುದ್ಧಿ ಹೇಳುತ್ತಾನೆ. ನಂತರ ಇಂದ್ರ ಶೃಂಗಿಯ ಶಾಪದಿಂದ ನಿನ್ನ ತಂದೆ ಪರೀಕ್ಷಿತ ಮೃತಪಡುತ್ತಾನೆ. ಇದರಲ್ಲಿ ತಕ್ಷಕನ ಪಾತ್ರ ಏನಿಲ್ಲ ಎಂದು ತಿಳಿಹೇಳುತ್ತಾನೆ. ಇಂದ್ರನ ಹೇಳಿದ ಕಥೆಯಿಂದ ಜನಮೇಜಯನಿಗೆ ಸರ್ಪಗಳ ಮೇಲಿದ್ದ ಸಿಟ್ಟು ಕಡಿಮೆಯಾಗುತ್ತದೆ.

    ನಾಗಕುಲವೇ ನಾಶವಾಗುವ ಸಂದರ್ಭದಲ್ಲಿ ಆಸ್ತಿಕ ಬಂದು ಈ ಸರ್ಪ ಯಜ್ಞವನ್ನು ತಡೆದದ್ದು ಶ್ರಾವಣ ಮಾಸದ ಐದನೇ ದಿನ. ಆಸ್ತಿಕ ನಾಗಯಜ್ಞ ನಿಲ್ಲಿಸಿ ನಾಗಗಳ ಕುಲವನ್ನು ಉಳಿಸಿದ ದಿನವನ್ನೇ ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ.

  • ನವರಾತ್ರಿ ಹಬ್ಬ – ಆಯುಧ ಪೂಜೆ ಮಾಡೋದು ಯಾಕೆ? ಪುರಾಣ ಕಥೆ ಏನು?

    ನವರಾತ್ರಿ ಹಬ್ಬ – ಆಯುಧ ಪೂಜೆ ಮಾಡೋದು ಯಾಕೆ? ಪುರಾಣ ಕಥೆ ಏನು?

    ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ಬರುವ ನವರಾತ್ರಿ ಹಬ್ಬವನ್ನು (Navratri Festival) ಹಿಂದೂಗಳು (Hindu) ವೈಭವದಿಂದ ಆಚರಿಸುತ್ತಾರೆ. 9 ರಾತ್ರಿಗಳ ಪರ್ಯಂತ ಆಚರಿಸುವ ಹಬ್ಬವಾಗಿರುವುದರಿಂದ ಇದಕ್ಕೆ ನವರಾತ್ರಿ ಎಂಬ ಹೆಸರು ಬಂದಿರುತ್ತದೆ. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ (Ayudha Puja) ಹೆಚ್ಚಿನ ಮಹತ್ವವಿದೆ.

    ಆಯುಧ ಪೂಜೆಯಂದು ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ವಿಧದ ಆಯುಧಗಳನ್ನು ಪೂಜಿಸಲಾಗುತ್ತಿದೆ. ಈ ದಿನ ವಸ್ತುಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ. ರೈತರು ನೇಗಿಲು ಕೃಷಿಗೆ ಬಳಸುವ ವಸ್ತುಗಳಿಗೆ ಪೂಜೆ ಮಾಡಿದರೆ ಸೈನಿಕರು ಬಂದೂಕು, ಫಿರಂಗಿ, ಯುದ್ಧ ಟ್ಯಾಂಕರ್, ವಿಮಾನಗಳಿಗೆ ಪೂಜೆ ಮಾಡುತ್ತಾರೆ. ಮನೆಯಲ್ಲಿರುವ ಪುಟಾಣಿ ಸೈಕಲಿನಿಂದ ಹಿಡಿದು ದೊಡ್ಡ ವಾಹನಗಳಿಗೆ ಪೂಜೆ ನಡೆದರೆ ಕಚೇರಿಗಳಲ್ಲಿ ಕಂಪ್ಯೂಟರ್‌, ಉತ್ಪಾದನಾ ಯಂತ್ರಗಳಿಗೆ ಪೂಜೆ ನಡೆಯುತ್ತದೆ.

    ಆಯುಧ ಪೂಜೆಯ ಹಿಂದೆ ಪೌರಾಣಿಕ ಕಥೆಯೂ ಇದೆ. ದ್ವಾಪರ ಯುಗದಲ್ಲಿ ಪಾಂಡವರು (Pandavas) 12 ವರ್ಷಗಳ ವನವಾಸ, ಒಂದು ವರ್ಷ ಅಜ್ಞಾತವಾಸ ಮಾಡುತ್ತಾರೆ. ಅಜ್ಞಾತವಾಸವನ್ನು ಮತ್ಸ್ಯನಗರದ ವಿರಾಟರಾಯನ ಅರಮನೆಯಲ್ಲಿ ಕಳೆಯುತ್ತಾರೆ. ಅಜ್ಞಾತಕ್ಕೆ ತೆರಳುವ ಮುನ್ನ ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಬನ್ನಿ ವೃಕ್ಷದಲ್ಲಿ ಅಡಗಿಸಿ ಇಡುತ್ತಾರೆ.  ಇದನ್ನೂ ಓದಿ: ನವರಾತ್ರಿ 2023: ಘೋರ ತಪಸ್ಸಿನಿಂದ ಶಿವನನ್ನು ಪಡೆದ ಮಹಾಗೌರಿ

    ಅಜ್ಞಾತ ವಾಸದ ಕೊನೆಯಲ್ಲಿ ವಿರಾಟರಾಯನ ಗೋವುಗಳನ್ನು ಕೌರವರು ಅಪಹರಿಸುತ್ತಾರೆ. ಈ ಗೋವುಗಳನ್ನು ಬಿಡಿಸಿ ಕೌರವರ ಜೊತೆ ಯುದ್ಧ ಮಾಡಲು ಶಮಿ ವೃಕ್ಷದ ಮೇಲಿರಿಸಿದ್ದ ಆಯುಧಗಳನ್ನು ಕೆಳಗಡೆ ಇಳಿಸುತ್ತಾರೆ. ಅರ್ಜುನ ತನ್ನ ಗಾಂಡೀವವನ್ನು ಧರಿಸಿ ಯುದ್ಧ ಮಾಡಿ ಗೋವುಗಳನ್ನು ಕೌರವರ ಸೆರೆಯಿಂದ ಬಿಡಿಸುತ್ತಾನೆ. ಪಾಂಡವರು 12 ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಸಾಧಿಸಿದ ವಿಜಯದ ಕುರುಹಾಗಿ ಕೂಡ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ.

    ಹಿಂದೆ ರಾಜರಿಗೆ ಆಯುಧಗಳ ಬಹಳ ಮುಖ್ಯವಾಗಿದ್ದವು. ಈ ಕಾರಣಕ್ಕೆ ನಮ್ಮನ್ನು ರಕ್ಷಿಸುವ ಕತ್ತಿ, ಖಡ್ಗಗದಂತಹ ಆಯುಧಗಳಿಗೆ ಒಂದು ದಿನ ವಿರಾಮ ನೀಡಿ ಅವುಗಳಿಗೆ ಕೃತಜ್ಞತೆ ಅರ್ಪಿಸಲು ಆಯುಧ ಪೂಜೆ ದಿನದಂದು ವಿಶೇಷ ಪೂಜೆ ಮಾಡಲಾಗುತ್ತದೆ. ಇದರ ಜೊತೆ ದಂಡಯಾತ್ರೆಯನ್ನು ಕೈಗೊಳ್ಳುವ ಸಂದರ್ಭದಲ್ಲಿ ಆಯುಧ ಪೂಜೆ ದಿನ ಆಯುಧಗಳಿಗೆ ಪೂಜೆ ಮಾಡಿ ನಂತರ ಯದ್ಧಕ್ಕೆ ತೆರಳುತ್ತಿದ್ದರು.

    ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವೀಕ ಶಕ್ತಿ ಇದೆ. ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ.

     

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೃಷ್ಣ ಜನ್ಮಾಷ್ಟಮಿ ಹಬ್ಬದ ಮಹತ್ವವೇನು?

    ಕೃಷ್ಣ ಜನ್ಮಾಷ್ಟಮಿ ಹಬ್ಬದ ಮಹತ್ವವೇನು?

    ಕೃಷ್ಣ ಜನ್ಮಾಷ್ಟಮಿ ದೇಶಾದ್ಯಂತ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ ಹಾಗೂ ಇದನ್ನು ವೈಭವದಿಂದ ಆಚರಿಸಲಾಗುತ್ತದೆ.

    ಆಚರಣೆ ಎಲ್ಲಿ, ಹೇಗೆ?
    ಈ ದಿನ ಕೃಷ್ಣಜನ್ಮಾಷ್ಟಮಿ ಹಬ್ಬವಾಗಿದ್ದು, ಇದನ್ನು ಎಲ್ಲೆಡೆ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಉಡುಪಿಯ ಕೃಷ್ಣ ಮಠದಲ್ಲಿ ಅತ್ಯಂತ ಅದ್ದೂರಿಯಿಂದ ಕೃಷ್ಣನ ಅಷ್ಟಮಿಯನ್ನು ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಎಲ್ಲಾ ಕೃಷ್ಣನ ಮಂದಿರದಲ್ಲಿ ಕೂಡ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಎಲ್ಲಾ ಕಡೆ ಸಾಂಪ್ರದಾಯಿಕ ಆಟಗಳು, ಚಿಕ್ಕ ಮಕ್ಕಳಿಗೆ ರಾಧಾ ಕೃಷ್ಣನ ಅಲಂಕಾರ ಮಾಡಿ ನೋಡುವುದೇ ಈ ಒಂದು ಹಬ್ಬದ ವಿಶೇಷ.

    ಪುರಾಣದಲ್ಲೇನಿದೆ?
    ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.

    ಕೃಷ್ಣ ತ್ಯಾಗಮಯಿ:
    ಶ್ರೀಕೃಷ್ಣನ ಬಗ್ಗೆ ಎಲ್ಲರಿಗೂ ಗೌರವ ಹೆಚ್ಚು ಏಕೆಂದರೆ ಆತನ ತ್ಯಾಗ ಮನೋಭಾವದಿಂದ. ಎಷ್ಟೇ ರಾಜರನ್ನು ಗದ್ದರೂ ಗದ್ದುಗೆ ಏರಲಿಲ್ಲ. ಉದಾ-ಕಂಸನನ್ನು ಕೊಂದು ಅವನ ತಂದೆ ಉಗ್ರಸೇನನಿಗೆ ಮಥುರಾ ಪಟ್ಟ ಕಟ್ಟಿದ. ಜರಾಸಂಧನನ್ನು ಕೊಂದು ಅವನ ಮಗ ಸಾಲ್ವನಿಗೆ ಪಟ್ಟಕಟ್ಟಿದ. ಸತ್ಯ ಧರ್ಮಮೀರಿದವರು ಬಂಧುಗಳಾದರೂ ಶಿಕ್ಷಾರ್ಹರು ಎಂಬ ನೀತಿಯನ್ನು ಮಾವ ಕಂಸ, ಭಾವ ಶಿಶುಪಾಲ, ಅಜ್ಜ ಮಾಗಧ ಮುಂತಾದವರನ್ನು ವಧಿಸುವ ಮೂಲಕ ತೋರಿಸಿದ್ದಾನೆ.

    ಇಷ್ಟೆಲ್ಲಾ ಆದರೂ ಶ್ರೀಕೃಷ್ಣನ ನಯ-ವಿನಯ ಅನುಕರಣೀಯ. ರಾಜ ಯಾಗದಲ್ಲಿ ಆತ ಬ್ರಾಹ್ಮಣರ ಹಾಗೂ ಹಿರಿಯರ ಕಾಲು ತೊಳೆಯುತ್ತಾನೆ. ಇಂತಹ ದೊಡ್ಡ ಗುಣದಿಂದಲೇ ಅವನಿಗೆ ಆ ಯಾಗದ ದೊಡ್ಡ ಸ್ಥಾನವಾದ ‘ಅಗ್ರಪೂಜೆ’ ಲಭಿಸಿತು. ನಂಬಿ ಕರೆದರೆ ‘ಓ’ ಎಂದು ಓಡಿ ಬಂದು ಉದ್ಧರಿಸುವುದು ಅವನ ವೈಶಿಷ್ಟ್ಯ.

    ಸುಧಾಮನ ಪ್ರಸಂಗ, ದೌಪದಿಯ ವಸ್ತ್ರಾಪಹರಣ ಸಂದರ್ಭ, ದೂರ್ವಾಸಾತಿಥ್ಯ ಸನ್ನಿವೇಶ, ಕುಬ್ಜೆಯ ಗೂನು ತಿದ್ದಿ ಮುದ್ದಾಗಿ ಮಾಡಿದ್ದು, ಧೃತರಾಷ್ಟ್ರನಿಗೆ ದಿವ್ಯದೃಷ್ಟಿ ನೀಡಿದ್ದು ಮುಂತಾದ ಸಂದರ್ಭಗಳು ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತವೆ.

    ಇಂತಹ ಮಹಾಮಹಿಮನ ಜನ್ಮಸ್ಮರಣೆ ನಿಜಕ್ಕೂ ಅರ್ಥಪೂರ್ಣ. ಶ್ರೀಕೃಷ್ಣನು ನಮ್ಮ ಜೀವನದ ಕಲುಷಿತ ಕಾಳ ರಾತ್ರಿಯಲ್ಲಿ ಜನಿಸಿ ಎಲ್ಲರನ್ನೂ ಪವಿತ್ರಾತ್ಮರನ್ನಾಗಿ ಮಾಡಲಿ ಎಂದು ಪ್ರಾರ್ಥಿಸುವ ಶುಭದಿನ ಇದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂಗಳಿಗೆ ಮುನ್ನುಡಿ ಹಬ್ಬ ನಾಗರ ಪಂಚಮಿ – ಪುರಾಣ, ಇತಿಹಾಸದಲ್ಲಿ ಸರ್ಪದ ಬಗ್ಗೆ ಇರುವ ಉಲ್ಲೇಖಗಳೇನು?

    ಹಿಂದೂಗಳಿಗೆ ಮುನ್ನುಡಿ ಹಬ್ಬ ನಾಗರ ಪಂಚಮಿ – ಪುರಾಣ, ಇತಿಹಾಸದಲ್ಲಿ ಸರ್ಪದ ಬಗ್ಗೆ ಇರುವ ಉಲ್ಲೇಖಗಳೇನು?

    ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ನಾಗರ ಪಂಚಮಿ ಮುನ್ನುಡಿ ಎಂಬಂತೆ ಬರುತ್ತದೆ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪಡುವ ಈ ಹಬ್ಬದ ಬಳಿಕ ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿ, ನವರಾತ್ರಿ ಸೇರಿದಂತೆ ಇತರ ಹಬ್ಬಗಳು ಬರುತ್ತವೆ. ನಾಗರ ಪಂಚಮಿಗೆ ಸಂಬಂಧಿಸಿದಂತೆ ಪುರಾಣ, ಇತಿಹಾಸ ಮಾತ್ರವಲ್ಲದೇ ಜಾನಪದದ ಸಾಕಷ್ಟು ಕಥೆಗಳಿವೆ.

    ನಾಗನ ಪೂಜೆ ಭಾರತದ ಪ್ರಾಚೀನ ಸಂಪ್ರದಾಯ. ನಾಗರ ಪಂಚಮಿಯನ್ನು ಪವಿತ್ರವಾದ ದಿನ ಎಂದು ನಂಬಲಾಗಿದೆ. ಪುರಾಣದಲ್ಲಿ ವಾಸುಕಿ, ತಕ್ಷಕ, ಕಾಳೀಯ, ಮಣಿಭದ್ರ, ಕಾರ್ಕೋಟಕ, ಧನಂಜಯ ನಾಗದೇವರುಗಳಾಗಿ ಕಾಣಿಸಿಕೊಂಡಿದ್ದಾರೆ. ಇವರ ಪ್ರತಿಮೆಗಳಿಗೆ ಕ್ಷೀರಾಭಿಷೇಕ ಮಾಡುವ ಪದ್ಧತಿ ವ್ಯಾಪಕವಾಗಿದೆ.

    ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ಶಿವನ ಆಭರಣ ವಾಗಿ, ವಿಷ್ಣುವಿನ ಹಾಸಿಗೆಯಾಗಿ, ಕುಂಡಲಿನೀ ಶಕ್ತಿಯ ಪ್ರತೀಕವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಮೇರುವೆಂಬ ಬಿಲ್ಲಿನ ಹೆದೆಯಾಗಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜಚಿಹ್ನೆಯಾಗಿ, ಭೂಮಿಯನ್ನು ಹೊತ್ತ ಆದಿಶೇಷನಾಗಿ, ಪಾರ್ಶ್ವನಾಥ ತೀರ್ಥಂಕರನ ಶಿರೋಲಾಂಛನವಾಗಿ, ಲಕ್ಷ್ಮಣ, ಬಲರಾಮ, ಸುಬ್ರಹ್ಮಣ್ಯ ಸ್ವಾಮಿಯ ಅನನ್ಯ ಸ್ವರೂಪವಾಗಿರುವ ನಾಗ ಹಿಂದೂಗಳ ಪಾಲಿನ ದೇವರಾಗಿದ್ದಾನೆ.

    ಸಿಂಧೂ ಸಂಸ್ಕೃತಿಯ ಅವಶೇಷಗಳಲ್ಲಿ ಸರ್ಪಮಿಥುನ ಸಿಕ್ಕಿದ್ದನ್ನು ಗಮನಿಸಿದಾಗ, ಮಾನವ ಜನಾಂಗ ಆದಿಕಾಲದಿಂದಲೂ ಈ ನಾಗಾರಾಧನೆ ನಡೆಸಿಕೊಂಡು ಬಂದಿದ್ದು ತಿಳಿದುಬರುತ್ತದೆ. ಭಾರತದಾದ್ಯಂತ ಶೈವ, ಶಾಕ್ತ, ವೈಷ್ಣವ, ಬೌದ್ಧ, ಜೈನ ಮುಂತಾದ ಎಲ್ಲ ಸಂಪ್ರದಾಯಗಳಲ್ಲೂ ನಾಗನ ಪೂಜೆ ಮಾಡಲಾಗುತ್ತದೆ. ಇಷ್ಟಾರ್ಥ ಸಿದ್ಧಿಗಾಗಿ, ಪುತ್ರಪ್ರಾಪ್ತಿಗಾಗಿ ಪ್ರಾರ್ಥಿಸುವ ನಾಗ ಸತ್ತರೆ ವೈದೀಕ ರೀತಿಯಲ್ಲಿ ಉತ್ತರಕ್ರಿಯೆ ನಡೆಸುಬ ಪದ್ಧತಿಯೂ ಇದೆ.

    ನಾಗಾರಾಧನೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಜಪಾನ್, ಚೀನಾ, ಈಜಿಪ್ಟ್, ಗ್ರೀಸ್ ಮುಂತಾದ ಪುರಾತನ ಸಂಸ್ಕೃತಿಯ ಜನತೆಯೂ ನಾಗನನ್ನು ಪೂಜಿಸಿಕೊಂಡು ಬಂದಿದೆ. ಭಾರತದ ಇತಿಹಾಸದಲ್ಲಿ ಹಿಂದಿನಿಂದಲೂ ನಾಗವಂಶಗಳಿದ್ದವು. ಇತ್ತೀಚೆಗೆ ನಾಗ ಜನಾಂಗದ ಒಂದು ಪ್ರತ್ಯೇಕ ಪ್ರಾಂತವೇ ಏರ್ಪಟ್ಟಿದೆ. ನಾಗವಂಶೀಯರು ಕೇರಳ, ಅಸ್ಸಾಂ, ನಾಗಾಲ್ಯಾಂಡ್‌ಗಳಲ್ಲಿ ಇದ್ದಾರೆ.

    ನಾಗರ ಪಂಚಮಿ ಆಚರಣೆ ಹೇಗೆ?
    ಶ್ರಾವಣ ಶುದ್ಧ ಪಂಚಮಿಯ ದಿನ, ಗೋಮಯದಿಂದ ಬಾಗಿಲು ಸಾರಿ, ನಾಗನ ಚಿತ್ರಗಳನ್ನು ಬರೆದು ನೇಮನಿಷ್ಠೆಯಿಂದ ಪೂಜೆ ಮಾಡುತ್ತಾರೆ. ಕೆಲವರು ಪ್ರತಿ ಷಷ್ಠಿ ದಿನ ಸುಬ್ರಹ್ಮಣ್ಯನ ಪೂಜೆಮಾಡಿ ಹಾಲೆರೆಯುತ್ತಾರೆ. ಶ್ವೇತಾಂಬರ ಜೈನರು ಶ್ರಾವಣ ಶುದ್ಧ ಪಂಚಮಿಯಲ್ಲಿ ನಾಗಪಂಚಮಿ ವ್ರತವನ್ನೂ, ಮಾರ್ಗಶಿರ ಶುದ್ಧ ಪಂಚಮಿಯಲ್ಲಿ ನಾಗರ ದೀಪಾವಳಿಯನ್ನೂ ಆಚರಿಸುತ್ತಾರೆ.

    ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬತ್ತೀಸ ಶಿರಾಳ್ ಗ್ರಾಮದಲ್ಲಿ ನಾಗರ ಪಂಚಮಿ ದಿನ ಜೀವಂತ ನಾಗರಹಾವುಗಳನ್ನು ಪೂಜಿಸುತ್ತಾರೆ. ಸರ್ಪ ಕುಂಡಲಿನಿ ಶಕ್ತಿಯ ಸಂಕೇತ. ಸರ್ಪದ ಮಂಡಲಾಕಾರವು ಪೂರ್ಣವೃತ್ತ ಅಥವಾ ಶೂನ್ಯ. ಈ ಪೂರ್ಣದಲ್ಲಿ ಪೂರ್ಣವನ್ನು ಕಳೆದರೆ ಶೇಷವೂ ಪೂರ್ಣ. ಈ ಶೇಷನೇ ಆದಿಶೇಷನೆಂದೂ ಹೇಳುವರು. ಆದ್ದರಿಂದ ಅನಂತನೆಂಬ ಪೂರ್ಣವೃತ್ತದಲ್ಲಿ ಶೇಷಶಾಯಿ ವಿಷ್ಣುವಿರುವನು. ಅನಂತನೇ ಶೇಷ, ಶೇಷನೇ ಅನಂತ, ಶೂನ್ಯವು ಕೇವಲ ಶೂನ್ಯವಲ್ಲ. ಅದರ ಮಧ್ಯೆ ಸಚ್ಚಿದಾನಂದ ಸ್ವರೂಪದ ಕುಂಡಲಿನಿ ಶಕ್ತಿಯಿಂದಾವೃತವಾದ ವಿಭುವಿರುವನು ಎಂಬ ದಿವ್ಯ ಬೋಧೆನೆಯನ್ನು ನಾಗಪೂಜೆಯು ತಿಳಿಸುತ್ತದೆ. ಇದನ್ನೂ ಓದಿ: Naga Panchami: ಚಂದನವನದಲ್ಲಿ ನಾಗಾರಾಧನೆ: ಹಿರಿತೆರೆಗೂ ಹರಿದು ಬಂದ ಹಾವು!

    ಈ ದಿನ ಭಯ ಭಕ್ತಿಯಿಂದ ಪೂಜೆ ಮಾಡುವವರಿಗೆ ಯಾವುದೇ ಭಯವಿಲ್ಲ. ಭೂಮಿ, ಅಂತರಿಕ್ಷಗಳಲ್ಲೂ, ಅಶ್ವತ್ಥ ವೃಕ್ಷಗಳಲ್ಲೂ ವಾಸಿಸುವ ಸರ್ಪಗಳಿಗೆ ಸಾಷ್ಟಾಂಗ ನಮಸ್ಕಾರ ಎಂಬರ್ಥದ ಶ್ಲೋಕ ಕೃಷ್ಣ ಯಜುರ್ವೇದ ಸಂಹಿತೆಯಲ್ಲಿ ಬರುತ್ತದೆ.

    ನಾಗಪಂಚಮಿ ಹೆಣ್ಣುಮಕ್ಕಳ ಹಬ್ಬ ಎಂದು ಆಚರಿಸಲಾಗುತ್ತದೆ. ಅದು ಅವರಿಗೆ ಮಾಂಗಲ್ಯಪ್ರದ ಎಂದೂ ಸಂತಾನ ಪ್ರದ ಎಂದೂ ನಂಬಿಕೆ. ಈ ಹಬ್ಬ ತವರಿನ ಸೌಹಾರ್ದ ಸೂಚಕವೂ ಆಗಿದೆ. ಅಣ್ಣತಮ್ಮಂದಿರನ್ನು ಕರೆದು ಬೆನ್ನನ್ನು ಹಾಲಿನಿಂದ ಸವರಿ ಒಳ್ಳೆಯದಾಗಲಿ ಎಂದು ಪ್ರೀತಿಯಿಂದ ಹಾರೈಸುತ್ತಾರೆ.

    ಉತ್ತರ ಕರ್ನಾಟಕದಲ್ಲಿ ಇದನ್ನು ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಅಂದು ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸುತ್ತಾರೆ. ಪಂಜಾಬಿನಲ್ಲಿ ಸರ್ಪದೇವತೆಯ ಸೂಚಕವಾಗಿ ಗೋಡೆಯ ಮೇಲೆ ಕಪ್ಪು ಚಿತ್ರ ಬರೆಯುತ್ತಾರೆ. ಇದರಿಂದ ಮನೆಗೆ ಸರ್ಪಬಾಧೆಯಿಲ್ಲ ಎಂಬುದು ನಂಬಿಕೆ. ಆಸ್ತಿಕ ಋಷಿಯ ಹೆಸರು ಬರೆಯುವುದರಿಂದ ಸರ್ಪ ಒಳಗೆ ಬರುವುದಿಲ್ಲ ಎಂಬ ಭಾವನೆ ಸರ್ವತ್ರ ಭಾರತದಲ್ಲಿ ಪ್ರಚಲಿತವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಗರ ಪಂಚಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ? ಹೆಣ್ಮಕ್ಕಳ ಹಬ್ಬ ಯಾಕೆ? ಇಲ್ಲಿದೆ ಕಥೆ

    ನಾಗರ ಪಂಚಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ? ಹೆಣ್ಮಕ್ಕಳ ಹಬ್ಬ ಯಾಕೆ? ಇಲ್ಲಿದೆ ಕಥೆ

    ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪುಡುವ ಈ ಹಬ್ಬ ಮುಂದೆ ಬರಲಿರುವ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ, ಊರಿನ ಜಾತ್ರೆಗೆ, ಎಲ್ಲ ಶುಭ ಆಚರಣೆಗಳಿಗೆ ಮೊದಲ ಮೆಟ್ಟಿಲು.

    ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮಧ್ಯೆ. ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ.

    ಸ್ಕಂದ ಪುರಾಣದಲ್ಲಿ ನಾಗರ ಪಂಚಮಿಯ ಬಗ್ಗೆ ಕೆಲ ಮಾಹಿತಿಗಳು ಸಿಗುತ್ತದೆ. ಶ್ರೀಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಕೇಳಿದಾಗ ಆತನ ಒಂದು ಕಥೆಯನ್ನು ಹೇಳುತ್ತಾನೆ.

    ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಭಕ್ತಿಯಿಂದ ಕನ್ನಿಕೆ ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಕನ್ನಿಕೆ, ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆ ಯಶಸ್ವಿಯಾದ ದಿನವೇ ನಾಗರ ಪಂಚಮಿ.

    ಹೆಣ್ಣುಮಕ್ಕಳ ಹಬ್ಬ:
    ನಾಗರಪಂಚಮಿ ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬ. ನಾಗರಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ. ನಾಗರಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. `ನಾಗರ ಪಂಚಮಿ ಬಂತು, ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ‘ ಎನ್ನುವ ಜಾನಪದ ಹಾಡು ಹಬ್ಬದ ವಿಶೇಷತೆ ಸಾರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ.

    ಸಿಂಧೂ ಜನರಲ್ಲೂ ನಂಬಿಕೆಯಿತ್ತು:
    ನಮ್ಮ ಪೂರ್ವಜರ ಕಾಲದಿಂದಲೂ ನಾಗಪೂಜೆ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಸಿಂಧೂ ಸಂಸ್ಕೃತಿಯ ಉತ್ಕನನ ತಾಣಗಳಲ್ಲಿ ಸಿಕ್ಕಿರುವ ಅನೇಕ ಅವಶೇಷಗಳು ಅಲ್ಲಿನ ಜನರು ನಾಗ (ಸರ್ಪ) ಪೂಜೆ ಮಾಡುತ್ತಿದ್ದರು ಎನ್ನುವುದು ತಿಳಿದುಬರುತ್ತದೆ. ಅವರ ನಂತರ ಬಂದಿರುವ ಅನೇಕ ರಾಜಮನೆತನಗಳು ಸರ್ಪವನ್ನು ವಿಶೇಷವಾಗಿ ಪೂಜಿಸುತ್ತಿದ್ದರು. ಈ ಬಗ್ಗೆ ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಮಾನವ ಜನಾಂಗದವರು ಆದಿಕಾಲದಿಂದಲೂ ಈ ನಾಗಾರಾಧನೆ ನಡೆಸಿಕೊಂಡು ಬಂದಿದ್ದರು ತಿಳಿದುಬರುತ್ತದೆ.

    ಭಾರತದ ಇತಿಹಾಸದ ಪುಟಗಳಲ್ಲಿ ನಾಗವಂಶಗಳ ಕುರಿತಾಗಿ ಉಲ್ಲೇಖವಿದೆ. ಈಗಲೂ ಭಾರತದ ಕೇರಳ, ಅಸ್ಸಾಂ, ನಾಗಾಲ್ಯಾಂಡ್‍ಗಳಲ್ಲಿ ನಾಗಾ ಜನಾಂಗದ (ನಾಗವಂಶೀಯರು) ಇದ್ದಾರೆ. ಭಾರತಕ್ಕಷ್ಟೇ ನಾಗ ಪೂಜೆ ಸೀಮಿತವಾಗಿಲ್ಲ. ಗ್ರೀಸ್, ಜಪಾನ್, ಚೀನಾ, ಈಜಿಪ್ಟ್ ಸೇರಿದಂತೆ ಮುಂತಾದ ಪುರಾತನ ಸಂಸ್ಕøತಿಯುಳ್ಳ ಜನತೆ ನಾಗ ಪೂಜೆ ಮಾಡುತ್ತಿದ್ದರು. ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬತ್ತೀಸ ಶಿರಾಳ್ ಗ್ರಾಮದಲ್ಲಿ ನಾಗರಪಂಚಮಿ ದಿನ ಜೀವಂತ ನಾಗರಹಾವುಗಳನ್ನು ಪೂಜಿಸಲಾಗುತ್ತದೆ.

    ಕ್ಷೀರಾಭಿಷೇಕ ಮಾಡೋದು ಯಾಕೆ?
    “ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ” ಎಂಬ ಶ್ಲೋಕವು ನಾಗ ದೇವನ ವಿವಿಧ ಹೆಸರುಗಳನ್ನು ಹೇಳುತ್ತದೆ. ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆ ಮಾಡಲಾಗುತ್ತದೆ. ಸರ್ಪಭಯ ಮತ್ತು ವಿಷದಿಂದ ತೊಂದರೆಯಾಗದೇ ಇರಲು ಹಲವು ಕಡೆ ನಾಗನ ಕಲ್ಲುಗಳಿಗೆ ಕ್ಷೀರಾಭಿಷೇಕ ಮಾಡುವ ಪದ್ಧತಿಯಿದೆ.

    ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಶ್ರಾವಣ ಶುದ್ಧ ಪಂಚಮಿಯ ದಿನ, ಗೋಮಯ (ಸಗಣಿ)ಯಿಂದ ಬಾಗಿಲು ಸಾರಿಸಿ, ರಂಗೋಲಿ, ಇಲ್ಲವೇ ಅರಿಶಿಣ, ಕುಂಕುಮದಿಂದ ನಾಗರ ಚಿತ್ರಗಳನ್ನು ಬರೆದು ನೇಮನಿಷ್ಠೆಯಿಂದ ಪೂಜೆ ಮಾಡುತ್ತಾರೆ.

    ಸರ್ಪಯಜ್ಞವನ್ನು ನಿಲ್ಲಿಸಿದ ದಿನ:
    ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಋತ್ವಿಜರು ಹೋಮಮಾಡಲು ಆರಂಭಿಸಿದಾಗ ಸರ್ಪಗಳು ಒಂದರ ಹಿಂದೆ ಒಂದರಂತೆ ಬಂದು ಅಗ್ನಿಕುಂಡಕ್ಕೆ ಬಿದ್ದು ಬುದಿಯಾಗತೊಡಗಿತು. ಇದನ್ನು ಕಂಡ ಉಳಿದ ಸರ್ಪಗಳು ಸರ್ಪರಾಜ ವಾಸುಕಿಯ ತಂಗಿಯಾದ ಜರತ್ಕಾರು ಬಳಿ ಹೋಗಿ  ದಯವಿಟ್ಟು ನಮ್ಮನ್ನು ಆ ರಾಜನ ಹೋಮದಿಂದ ರಕ್ಷಿಸು ಎಂದು ಬೇಡಿಕೊಳ್ಳುತ್ತವೆ. ಸರ್ಪಗಳ ಮನವಿಗೆ ಜರತ್ಕಾರು ಒಪ್ಪಿ ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸಿ ಬರುವಂತೆ ಸೂಚನೆ ನೀಡುತ್ತಾಳೆ. ಆಸ್ತೀಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ತನ್ನ ವಿದ್ಯಾಬಲದಿಂದ ಪ್ರಾಣಿ ಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂದು ಬೋಧಿಸಿದ. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿದೆಯಂತೆ.

    ಶಿವನ ಆಭರಣ, ವಿಷ್ಣುವಿನ ಹಾಸಿಗೆ, ಗಣಪತಿಯ ಹೊಟ್ಟೆಯ ಪಟ್ಟಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವರತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜದ ಚಿಹ್ನೆಯಾಗಿ ನಾಗ ಕಾಣಿಸಿಕೊಳ್ಳುತ್ತಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv