Tag: ಪುಣ್ಯ ಸ್ನಾನ

  • ಮಹಾ ಕುಂಭಮೇಳ‌ – ರುದ್ರಾಕ್ಷಿ ಮಾಲೆ ಧರಿಸಿ ತ್ರಿವೇಣಿ ಸಂಗಮದಲ್ಲಿ ಮೋದಿ ಪುಣ್ಯಸ್ನಾನ

    ಮಹಾ ಕುಂಭಮೇಳ‌ – ರುದ್ರಾಕ್ಷಿ ಮಾಲೆ ಧರಿಸಿ ತ್ರಿವೇಣಿ ಸಂಗಮದಲ್ಲಿ ಮೋದಿ ಪುಣ್ಯಸ್ನಾನ

    – ಮೋದಿ ಇದೇ ದಿನ ಆಯ್ಕೆ ಮಾಡಿಕೊಂಡಿದ್ದು ಏಕೆ?

    ಪ್ರಯಾಗ್‌ರಾಜ್‌: 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಪುಣ್ಯ ಸ್ನಾನ (Holy Bath) ಮಾಡಿದ್ದಾರೆ.

    ಬೆಳಗ್ಗೆ 11:30 ಗಂಟೆ ಸುಮಾರಿಗೆ ಬೋಟ್‌ ಮೂಲಕ ಪ್ರಯಾಗ್‌ರಾಜ್‌ನ (Prayag Raj) ತ್ರಿವೇಣಿ ಸಂಗಮ್‌ಘಾಟ್‌ಗೆ ತೆರಳಿದ ಮೋದಿ ಕೊರಳಲ್ಲಿ ರುದ್ರಾಕ್ಷಿ ಮಾಲೆ, ಕೇಸರಿ ಹಾಗೂ ಕಡುನೀಲಿ ವಸ್ತ್ರ ಧರಿಸಿ ಪುಣ್ಯಸ್ನಾನ ಮಾಡಿದ್ದಾರೆ. ಇದೇ ವೇಳೆ ರುದ್ರಾಕ್ಷಿ ಮಾಲೆಯನ್ನು ಹಿಡಿದು ಸೂರ್ಯದೇವ ಹಾಗೂ ಗಂಗಾ ಮಾತೆಗೆ ನಮಿಸಿದ್ದಾರೆ.

    ಇದಾದ ಬಳಿಕ ತಟದಲ್ಲಿ ನಿಂತು ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ದೇಶದ ಒಳಿತಾಗಿ ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಶ್ರುತಿ, ಸಪ್ತಮಿ ಗೌಡ ಪರಿಚಯಿಸಿದ ಸೀರಿಯಲ್‌ಗೆ ಪ್ರೇಕ್ಷಕರಿಂದ ಸಿಕ್ತು ಅದ್ಭುತ ರೆಸ್ಪಾನ್ಸ್

    ಹಿಂದೂಗಳಿಗೆ ಪವಿತ್ರ ದಿನ ಎಂದೇ ಹೇಳಲಾಗುವ ರಥ ಸಪ್ತಮಿಯ ದಿನದಂದು ಪ್ರಧಾನಿಗಳು ಪುಣ್ಯಸ್ನಾನ ಮಾಡಿದ್ದಾರೆ. ಇದಾದ ಬಳಿಕ ಇಲ್ಲಿನ ಸಂತರೊಂದಿಗೆ ಚರ್ಚಿಸಲಿರುವ ಮೋದಿ 12 ಗಂಟೆ ಸುಮಾರಿಗೆ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Sweden shooting | ಶಾಲಾ ಆವರಣದಲ್ಲಿ ದುಷ್ಕರ್ಮಿಯಿಂದ ಗುಂಡಿನ ದಾಳಿ – 10 ಮಂದಿ ಸಾವು

    ಇಂದೇ ಪ್ರಧಾನಿಗಳ ಪುಣ್ಯಸ್ನಾನ ಏಕೆ?:
    ಇಂದು ರಥಸಪ್ತಮಿಯ ದಿನವಾಗಿದೆ. ರಥ ಸಪ್ತಮಿ ಹಬ್ಬವನ್ನು ರೈತರಿಗೆ ಸುಗ್ಗಿಯ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನದಿಂದಲೇ ಬೇಸಿಗೆಯೂ ಪ್ರಾರಂಭವಾಗುತ್ತದೆ. ಈ ದಿನವನ್ನು ದಾನ – ಧರ್ಮ ಮಾಡುವುದಕ್ಕೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನದಂದು ದಾನ ಮಾಡುವುದರಿಂದ ಹಿಂದೆ ಮಾಡಿದ ಎಲ್ಲಾ ಪಾಪಗಳು ಮತ್ತು ರೋಗಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡುವ ಸಂಪ್ರದಾಯವಿದೆ. ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ದೇಹದ ಎಲ್ಲಾ ರೋಗಗಳು, ವಿಶೇಷವಾಗಿ ಚರ್ಮಕ್ಕೆ ಸಂಬಂಧಿಸಿದಂತಹ ರೋಗಗಳು ಗುಣವಾಗುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕಾಗಿಯೇ ರಥ ಸಪ್ತಮಿಯನ್ನು ಆರೋಗ್ಯ ಸಪ್ತಮಿ ಎಂದೂ ಕರೆಯುತ್ತಾರೆ. ಹಾಗಾಗಿಯದೇ ಮೋದಿ ದೇಶಕ್ಕೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಪುಣ್ಯಸ್ನಾನ ಮಾಡಿದ್ದಾರೆ ಎಂದು ಜೋತಿಷಿಗಳು ಹೇಳುತ್ತಾರೆ.

  • ಮಂತ್ರಾಲಯದಲ್ಲಿ ಸಂಭ್ರಮದ ಸಂಕ್ರಾಂತಿ- ತುಂಗಭದ್ರೆಯಲ್ಲಿ ಮಿಂದೇಳುತ್ತಿರುವ ಭಕ್ತರು

    ಮಂತ್ರಾಲಯದಲ್ಲಿ ಸಂಭ್ರಮದ ಸಂಕ್ರಾಂತಿ- ತುಂಗಭದ್ರೆಯಲ್ಲಿ ಮಿಂದೇಳುತ್ತಿರುವ ಭಕ್ತರು

    ರಾಯಚೂರು: ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿಯನ್ನ ರಾಯಚೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿ ದಡದಲ್ಲಿ ಜನ ಪುಣ್ಯಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಇನ್ನೂ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯ ಮಠದಲ್ಲೂ ಸಂಕ್ರಾಂತಿ ಸಂಭ್ರಮ ಜೋರಾಗಿದೆ.

    ಮಂತ್ರಾಲಯದಲ್ಲಿ ತುಂಗಸ್ನಾನಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ದಂಡು ಹರಿದು ಬಂದಿದೆ. ತುಂಗಭದ್ರೆಗೆ ಪೂಜೆಯನ್ನ ಸಲ್ಲಿಸಿ ಭಕ್ತರು ಪಾವನರಾಗುತ್ತಿದ್ದಾರೆ. ನದಿಯಲ್ಲಿ ದೀಪಗಳನ್ನ ಹಚ್ಚಿ ತೇಲಿಬಿಡುವ ಮೂಲಕ ಭಕ್ತಿ ಸಮರ್ಪಿಸುತ್ತಿದ್ದಾರೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಈ ದಿನ ಪುಣ್ಯ ಸ್ನಾನ ಮಾಡಿದರೆ ಪಾಪಕರ್ಮಗಳೆಲ್ಲಾ ಕರಗಿ ಹೋಗುತ್ತವೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ತುಂಗಭದ್ರಾ ಸ್ನಾನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

    ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು, ಭಕ್ತರು ಸ್ನಾನಕ್ಕಾಗಿ ಪರದಾಡುವ ಪರಸ್ಥಿತಿಯೂ ನಿರ್ಮಾಣವಾಗಿದೆ. ಆದರೂ ನಿಂತ ನೀರಿನಲ್ಲೆ ಅರಗೋಲಿನಲ್ಲಿ ತೆರಳಿ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಹಬ್ಬದ ವಿಶೇಷ ಖಾದ್ಯಗಳನ್ನ ತಂದು ನದಿದಡದಲ್ಲಿ ಮನೆ ಮಂದಿಯಲ್ಲಾ ಕುಳಿತು ಊಟ ಮಾಡುತ್ತ ಸಂಕ್ರಾಂತಿ ಹಬ್ಬದ ಸವಿ ಸವಿಯುತ್ತಿದ್ದಾರೆ.

  • ಭೀಮಾ ಪುಷ್ಕರದಲ್ಲಿ ಮಿಂದೆದ್ದು ಪಾವನರಾದ ಭಕ್ತರು

    ಭೀಮಾ ಪುಷ್ಕರದಲ್ಲಿ ಮಿಂದೆದ್ದು ಪಾವನರಾದ ಭಕ್ತರು

    ರಾಯಚೂರು: ತೆಲಂಗಾಣ ಕರ್ನಾಟಕ ಗಡಿಯಲ್ಲಿ ಭೀಮಾ ಪುಷ್ಕರದ ಸಂಭ್ರಮ ಮನೆಮಾಡಿದ್ದು, 12 ವರ್ಷಕ್ಕೆ ಒಮ್ಮೆ ಬರುವ ಭೀಮಾ ಪುಷ್ಕರದಲ್ಲಿ ಪುಣ್ಯ ಸ್ನಾನ ಮಾಡಲು ಜನ ದೂರದ ಊರುಗಳಿಂದ ಬರುತ್ತಿದ್ದಾರೆ.

    ಜಿಲ್ಲೆಯಲ್ಲಿ ಭೀಮಾನದಿ ಹರಿಯುವುದಿಲ್ಲವಾದರೂ ತೆಲಂಗಾಣ ಗಡಿಯಲ್ಲಿ ಭೀಮಾ-ಕೃಷ್ಣ ಸಂಗಮವಾಗುವುದರಿಂದ ಪುಷ್ಕರಕ್ಕೆ ಮಹತ್ವ ಬಂದಿದೆ. ನದಿಯಲ್ಲಿ ಮಾಡುವ ಸ್ನಾನ ಪುಣ್ಯ ಸ್ನಾನ ಅಂತಲೇ ಮೊದಲಿನಿಂದಲೂ ನಂಬಿಕೆ ಇದೆ. ಆದರೆ ಪುಷ್ಕರದ ವೇಳೆ ಆಯಾ ನದಿಯಲ್ಲಿ ಮುಕ್ಕೋಟಿ ದೇವರು ಮಿಂದೇಳುವುದರಿಂದ ಆ ಸ್ನಾನ ಪರಮ ಪವಿತ್ರ ಸ್ನಾನವೆಂದೇ ನಂಬಲಾಗುತ್ತದೆ.

    ಗುರು ಯಾವ ರಾಶಿಗೆ ಪ್ರವೇಶಿಸುತ್ತಾನೆ ಎನ್ನುವುದರ ಮೇಲೆ ಒಂದೊಂದು ನದಿಯ ಪುಷ್ಕರ ನಿರ್ಧಾರವಾಗುತ್ತದೆ. ಸಿಂಹ ರಾಶಿಯಲ್ಲಿ ಗೋದಾವರಿ ನದಿಗೆ, ಕನ್ಯಾ ರಾಶಿಯಲ್ಲಿ ಕೃಷ್ಣ ನದಿಗೆ, ತುಲಾ ರಾಶಿಯಲ್ಲಿ ಕಾವೇರಿ ನದಿಗೆ ಹಾಗೂ ವೃಶ್ಚಿಕ ರಾಶಿಯಲ್ಲಿ ಭೀಮಾನದಿಗೆ ಪುಷ್ಕರ ಬರುತ್ತದೆ.

    12 ವರ್ಷಗಳ ಬಳಿಕ ಭೀಮಾ ನದಿಯಲ್ಲಿ ಪುಷ್ಕರ ನಡೆಯುತ್ತಿದ್ದು, ವಿಶೇಷವಾಗಿ ಕೃಷ್ಣದೇವರಾಯ, ನಿಜಾಮಶಾಯಿ, ಆದಿಲ್‍ಶಾಯಿಗಳ ರಾಜ್ಯಗಳ ಗಡಿ ಸಂಗಮದ ಪ್ರದೇಶದಲ್ಲೆ ಈಗ 12 ದಿನ ಕಾಲ ಪುಷ್ಕರ ನಡೆಯುತ್ತಿದೆ. ಹೀಗಾಗಿ ರಾಯಚೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಭೀಮಾ ನದಿ ಪುಷ್ಕರದ ಪುಣ್ಯ ಸ್ನಾನಕ್ಕಾಗಿ ತೆಲಂಗಾಣಕ್ಕೆ ತೆರಳುತ್ತಿದ್ದಾರೆ.

    ಈ ಬಗ್ಗೆ ಅರ್ಚಕರಾದ ಶೇಷಗಿರಿಯಾಚಾರ್ ಪ್ರತಿಕ್ರಿಯಿಸಿ, ಪುಷ್ಕರಕ್ಕೆ ಬರುವ ಭಕ್ತರು ಪುಣ್ಯಸ್ನಾನದ ಜೊತೆ ಪಿಂಡ ಪ್ರಧಾನವನ್ನು ಮಾಡುತ್ತಾರೆ. ಇಲ್ಲಿ ದಾನಗಳನ್ನು ಮಾಡುವ ಮೂಲಕ ತಮ್ಮ ಪಾಪಕರ್ಮಗಳನ್ನು ಕಳೆದುಕೊಳ್ಳುತ್ತಾರೆ. ಈ ಬಾರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿರುವುದರಿಂದ ಪುಷ್ಕರಕ್ಕೆ ಅನಾನುಕೂಲಗಳು ಸಹ ಆಗಿವೆ. ಆದರೂ ಸಹ ಪುಣ್ಯ ಸ್ನಾನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಭೀಮಾನದಿಗೆ ಬರುತ್ತಾರೆ ಎಂದು ತಿಳಿಸಿದರು.

    ಪುಷ್ಕರದ ಕುರಿತು ಸ್ಥಳೀಯರಾದ ಚಕ್ರಪಾಣಿ ಆಚಾರ್ ಮಾತನಾಡಿ, ಕರ್ನಾಟಕದಲ್ಲೇ ಹೆಚ್ಚು ದೂರದವರೆಗೆ ಸಾಗುವ ಭೀಮಾನದಿಯು ತೆಲಂಗಾಣ ಪ್ರವೇಶಿಸಿ ಪುನಃ ಕೃಷ್ಣಾ ನದಿಯಲ್ಲಿ ಸಂಗಮವಾಗುತ್ತದೆ. ತೆಲಂಗಾಣದ ಮೆಹಬೂಬನಗರ ಜಿಲ್ಲೆಯ ಕೃಷ್ಣ ಮಂಡಲದಲ್ಲಿ ಬರುವ ಕುಸಮತಿ ಹಾಗೂ ತಂಗಡಗಿಯಲ್ಲಿ ಪುಷ್ಕರಕ್ಕೆ ಸಕಲ ವ್ಯವಸ್ಥೆಗಳನ್ನ ಮಾಡಲಾಗಿದೆ. ಗುರು ರಾಘವೇಂದ್ರ ಸ್ವಾಮಿಗಳ ಪ್ರೀತಿಗೆ ಪಾತ್ರರಾದ ಮಹಾಯತಿ ಕೃಷ್ಣದ್ವೈಪಾದರು ಐಕ್ಯವಾದ ಸ್ಥಳವು ಇಲ್ಲೇ ಇರುವುದರಿಂದ ಪುಷ್ಕರಕ್ಕೆ ಇನ್ನಷ್ಟು ಮಹತ್ವ ಬಂದಿದೆ ಎಂದು ವಿವರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv