Tag: ಪುಣೆ

  • ಓಲಾ ಕ್ಯಾಬ್‍ನಲ್ಲೇ ಹೆರಿಗೆ- ತಾಯಿ ಮಗುವಿಗೆ 5 ವರ್ಷ ಫ್ರೀ ರೈಡ್!

    ಓಲಾ ಕ್ಯಾಬ್‍ನಲ್ಲೇ ಹೆರಿಗೆ- ತಾಯಿ ಮಗುವಿಗೆ 5 ವರ್ಷ ಫ್ರೀ ರೈಡ್!

    ಪುಣೆ: ಮಹಿಳೆಯೊಬ್ಬರು ಓಲಾ ಕ್ಯಾಬ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗುವಿಗೆ ಮುಂದಿನ 5 ವರ್ಷಗಳವರೆಗೆ ಉಚಿತವಾಗಿ ಓಲಾದಲ್ಲಿ ಪ್ರಯಾಣಿಸುವ ಅವಕಾಶವನ್ನು ಕಂಪನಿ ನೀಡಿದೆ.

    ಹೌದು. ಪುಣೆಯ ರಮೇಶ್ ಸಿಂಗ್ ಹಾಗೂ ಈಶ್ವರಿ ಸಿಂಗ್ ವಿಶ್ವಕರ್ಮ ಎಂಬ ದಂಪತಿ ಓಲಾ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈಶ್ವರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಈಶ್ವರಿಗೆ ಅಕ್ಟೋಬರ್ 24ರಂದು ಹೆರಿಗೆ ದಿನಾಂಕ ನಿಗದಿಯಾಗಿತ್ತು. ಆದ್ರೆ ಅಕ್ಟೋಬರ್ 2ರಂದು ಈಶ್ವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ದಂಪತಿ ಪುಣೆಯಿಂದ 12 ಕಿಮೀ ದೂರದಲ್ಲಿರೋ ಕಮಲ ನೆಹರು ಆಸ್ಪತ್ರೆಗೆ ತೆರಳಲೆಂದು ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ 5 ಕಿಮಿ ದೂರ ಕ್ರಮಿಸುವ ವೇಳೆಗೆ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಈಶ್ವರಿ ಜೊತೆಗಿದ್ದ ಸಂಬಂಧಿಕರೊಬ್ಬರ ಸಹಾಯದಿಂದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಕ್ಯಾಬ್ ಚಾಲಕ ತಾಯಿ-ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

    ಗುರುವಾರದಂದು ತಾಯಿ- ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಆರೋಗ್ಯವಾಗಿದ್ದಾರೆ ಎಂಬುವುದಾಗಿ ವರದಿಯಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಓಲಾ ಕಂಪನಿಯವರು ಈ ಉಚಿತ ರೈಡ್‍ನ ಉಡುಗೊರೆಯನ್ನು ನೀಡಿದ್ದಾರೆ. ಮಗುವಿನ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿರುವ ವಿಶೇಷ ಕೂಪನ್ ಮೂಲಕ ಅವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

    ಈಶ್ವರಿ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋದ ಚಾಲಕ ಗಲಾಂಡೆ ಡಿಸ್ಚಾರ್ಜ್ ಆದ ತಾಯಿ ಹಾಗೂ ಮಗುವನ್ನು ಅದೇ ಕ್ಯಾಬ್‍ನಲ್ಲಿ ಉಚಿತವಾಗಿಯೇ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಮಹಿಳೆಗೆ ಸಹಾಯ ಮಾಡಿದ್ದಕ್ಕೆ ಕ್ಯಾಬ್ ಚಾಲಕ ಗಲಾಂಡೆ ಅವರಿಗೂ ಕೂಡ ಕಂಪನಿ ಸನ್ಮಾನಿಸಿದೆ.

  • 4 ನಾಯಿಗಳ ಸಜೀವ ದಹನ, 16 ನಾಯಿಗಳಿಗೆ ವಿಷ ಪ್ರಾಶನ!

    4 ನಾಯಿಗಳ ಸಜೀವ ದಹನ, 16 ನಾಯಿಗಳಿಗೆ ವಿಷ ಪ್ರಾಶನ!

    ಪುಣೆ: ನಾಲ್ಕು ನಾಯಿಗಳನ್ನ ಹಗ್ಗದಿಂದ ಕಟ್ಟಿ ಎಳೆದುಕೊಂಡು ಹೋಗಿ ಸಜೀವವಾಗಿ ದಹಿಸಿರೋ ಅಮಾನವೀಯ ಘಟನೆ ಪುಣೆಯ ಬನೇರ್‍ನಲ್ಲಿ ನಡೆದಿದೆ. ಅಲ್ಲದೆ ಇತರೆ 16 ನಾಯಿಗಳಿಗೆ ವಿಷ ಹಾಕಲಾಗಿದ್ದು ಪುಣೆಯ ಪ್ರಾಣಿ ಪ್ರಿಯರನ್ನ ಬೆಚ್ಚಿಬೀಳಿಸಿದೆ.

    ಸರ್ಕಾರೇತ್ತರ ಸಂಸ್ಥೆಯಾದ ಆಕ್ಷನ್ ಫಾರ್ ಅನಿಮಲ್ಸ್ ಅಗೇನ್ಸ್ಟ್ ಕ್ರುಯೆಲ್ಟಿ ಅಂಡ್ ಟ್ರೌಮಾದ ಸದಸ್ಯರು ತನಿಖೆ ಮಾಡುವ ವೇಳೆ ಬೆಂಕಿಯಿಂದ ಸುಟ್ಟ ನಾಯಿಗಳ ಚಿದ್ರಗೊಂಡ ಅಂಗಾಗಗಳು ಪತ್ತೆಯಾಗಿದೆ. ಅಲ್ಲದೆ ಇನ್ನೂ ಕೆಲವು ನಾಯಿಗಳ ಕೊಳೆತ ಅಂಗಾಗಗಳು ಪತ್ತೆಯಾಗಿದ್ದು ಸಾಮೂಹಿಕವಾಗಿ ವಿಷ ಪ್ರಾಶನ ಮಾಡಿರುವುದನ್ನ ಸೂಚಿಸಿದೆ. ಅಲ್ಲದೆ ಪೊದೆಗಳಲ್ಲಿ ನಾಯಿಗಳ ಅಸ್ಥಿಪಂಜರಗಳು ದೊರಕಿದ್ದು ಈ ಪ್ರದೇಶದಲ್ಲಿ ಇನ್ನೂ ಹೆಚ್ಚು ಬೀದಿ ನಾಯಿಗಳನ್ನ ಹತ್ಯೆ ಮಾಡಿರುವುದು ಬಹಿರಂಗವಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಎನ್‍ಜಿಓದ ಸದಸ್ಯರಿಗೆ ವಿಷಯ ತಿಳಿದಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿದ್ರು. ನಂತರ ಚತುಶೃಂಗಿ ಪೊಲೀಸರು ಸೆಪ್ಟೆಂಬರ್ 28ರಂದು ಪಂಚನಾಮಾ ಮಾಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಎಫ್‍ಐಆರ್ ದಾಖಲಿಸಿಕೊಳ್ಳಲಿದ್ದಾರೆ.

    ಸೆಪ್ಟೆಂಬರ್ 28ರಂದು ಎರಡು ಬೀದಿನಾಯಿಗಳು ಹಾಗೂ ಒಂದು ನಾಯಿಮರಿ 100 ಚದರ ಅಡಿ ಅಂತರದಲ್ಲಿ ಸತ್ತುಬಿದ್ದಿದ್ದನ್ನು ನೋಡಿದೆವು. ಈ ಬಗ್ಗೆ ಮತ್ತಷ್ಟು ತನಿಖೆ ಮಾಡಿದಾಗ ಇನ್ನೂ 11 ನಾಯಿಗಳ ಮೃತದೇಹಗಳು ಪತ್ತೆಯಾದ್ವು. ಅವುಗಳಲ್ಲಿ ಶೇ. 50ರಿಂದ 70ರಷ್ಟು ಭಾಗ ಕೊಳೆತಿತ್ತು. ನಾಲ್ಕು ನಾಯಿಗಳ ಕಾಲುಗಳನ್ನ ಕಟ್ಟಲಾಗಿದ್ದು, ಸುಮಾರು 50 ಮೀಟರ್ ದೂರ ಎಳೆದುಕೊಂಡು ಹೋಗಿ ಬೆಂಕಿ ಹಚ್ಚಲಾಗಿದೆ ಎಂದು ಎನ್‍ಜಿಓದ ಅಧಿಕಾರಿಗಳು ಹೇಳಿದ್ದಾರೆ. ಸ್ಥಳದಲ್ಲಿ ಕನಿಷ್ಠ 21 ನಾಯಿಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ:ನಾಯಿಗೆ ವಿಷ ಹಾಕಿ ಕಳ್ಳತನ – ಯಾಮಾರಿ ಮನೆಯಲ್ಲೇ ಮೊಬೈಲ್ ಬಿಟ್ಟು ಪರಾರಿ

  • ಹೊಸ ಚಪ್ಪಲಿ ಕೊಡಿಸಲಿಲ್ಲ ಅಂತ ಗೆಳೆಯನನ್ನೇ ಕೊಲೆ ಮಾಡ್ದ!

    ಹೊಸ ಚಪ್ಪಲಿ ಕೊಡಿಸಲಿಲ್ಲ ಅಂತ ಗೆಳೆಯನನ್ನೇ ಕೊಲೆ ಮಾಡ್ದ!

    ನವದೆಹಲಿ: ಕ್ಷುಲ್ಲಕ ಕಾರಣಕ್ಕೆ ಅನೇಕ ಕೊಲೆಗಳು ನಡೆದಿರುವ ಬಗ್ಗೆ ಕೇಳಿದ್ದೀವಿ. ಆದ್ರೆ ಇಲ್ಲೊಬ್ಬ ಹೊಸ ಚಪ್ಪಲಿ ಕೊಡಿಸಲಿಲ್ಲ ಅಂತ ತನ್ನ ಗೆಳೆಯನನ್ನ ಕೊಲೆ ಮಾಡಿದ್ದಾನೆ.

    47 ವರ್ಷದ ರಾಮ್‍ದತ್ ರಜಪುತ್ ಅಲಿಯಾಸ್ ದತ್ತಾ ಮಾಚಿವಾಲೆ ತನ್ನ ಸ್ನೇಹಿತ ರಾಮ್‍ಸ್ನೇಹ ರಾವತ್(32) ರನ್ನು ಕೊಲೆ ಮಾಡಿದ್ದಾನೆ. ರಾವತ್ ಕಳೆದ 2 ತಿಂಗಳಿನಿಂದ ಹೊಸ ಚಪ್ಪಲಿ ತರುವುದಾಗಿ ಹೇಳುತ್ತಿದ್ದರು. ಆದ್ರೆ ತಂದುಕೊಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ.

    ಸೆಪ್ಟೆಂಬರ್ 24ರಂದು ಈ ಘಟನೆ ನಡೆದಿದ್ದು, ಕೃತ್ಯವೆಸಗಿದ ನಂತರ ಪುಣೆಯಿಂದ ರಜಪುತ್ ಪರಾರಿಯಾಗಿದ್ದ. ಭಾನುವಾರದಂದು ಪೊಲೀಸರು ರಜಪುತ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ರಾವತ್ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು. ರಜಪುತ್ ಮೀನುಗಾರನಾಗಿದ್ದ. ಇಬ್ಬರೂ ಒಂದೇ ಸಮುದಾಯದವರಾಗಿದ್ದರಿಂದ ಸ್ನೇಹಿತರಾಗಿದ್ದರು. ರಜಪುತ್‍ಗೆ ರಾವತ್ ಒಳ್ಳೆಯ ಮೀನು ತಂದುಕೊಡುತ್ತಿದ್ದ. ಆದ್ರೆ ಅದಕ್ಕೆ ಹಣ ತೆಗೆದುಕೊಳ್ಳುತ್ತಿರಲಿಲ್ಲ ಅಂತ ಚಿಂಚವಾಡ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ವಿಠಲ್ ಹೇಳಿದ್ದಾರೆ.

    ಸೆಪ್ಟೆಂಬರ್ 24ರಂದು ರಜಪುತ್‍ಗೆ ಚಪ್ಪಲಿ ಗಿಫ್ಟ್ ಮಾಡುವುದಾಗಿ ರಾವತ್ ಕಳೆದ 2 ತಿಂಗಳಿನಿಂದ ಹೇಳುತ್ತಾ ಬಂದಿದ್ದರು. ಆದ್ರೆ ತಾನು ಹೇಳಿದಂತೆ ರಾವತ್ ಆ ದಿನ ಚಪ್ಪಲಿ ತಂದಿರಲಿಲ್ಲ. ಇದರಿಂದ ಇಬ್ಬರ ನಡುವೆ ಜಗಳವಾಗಿತ್ತು. ನಂತರ ಅದೇ ರಾತ್ರಿ ರಜಪೂತ್ ರಾವತ್‍ರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪುಣೆಯಿಂದ ಪರಾರಿಯಾಗಿದ್ದ ಎಂದು ವಿಠಲ್ ತಿಳಿಸಿದ್ದಾರೆ.

    ರಜಪುತ್ ಎಲ್ಲಿಗೆ ಪರಾರಿಯಾಗಿದ್ದಾನೆ ಎಂಬ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಕೆಲವು ವಿವರಣೆ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ನಮ್ಮ ತಂಡ ಆತನನ್ನು ಹಿಡಿಯಲು ಮುಂಬೈಗೆ ದೌಡಾಯಿಸಿತು. ಆದ್ರೆ ಆತ ಅಲ್ಲಿಂದ ಉತ್ತರಪ್ರದೇಶಕ್ಕೆ ಪರಾರಿಯಾಗಿದ್ದ. ಅಲ್ಲಿ ನಾವು ಆತನನ್ನು ಹಿಡಿದು ಪುಣೆಗೆ ತಂದಿದ್ದೇವೆ. ತಾನು ಮಾತು ಕೊಟ್ಟಂತೆ ರಾವತ್ ಚಪ್ಪಲಿ ತಂದುಕೊಡದ ಕಾರಣ ಕೊಲೆ ಮಾಡಿರುವುದಾಗಿ ರಜಪುತ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಮಾತು ಕೊಟ್ಟಂತೆ ನಡೆದುಕೊಳ್ಳದ್ದಕ್ಕೆ ಪಾಠ ಕಲಿಸಲು ಹೀಗೆ ಮಾಡಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೋಮವಾರದಂದು ರಜಪುತ್‍ನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಒಂದು ವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  • ಮಹಿಳಾ ಪೇದೆಯ ಸ್ನಾನದ ವಿಡಿಯೋ ತೆಗೆದ ಪೇದೆ ಅರೆಸ್ಟ್!

    ಮಹಿಳಾ ಪೇದೆಯ ಸ್ನಾನದ ವಿಡಿಯೋ ತೆಗೆದ ಪೇದೆ ಅರೆಸ್ಟ್!

    ಪುಣೆ: ಮಹಿಳೆಯರಿಗೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸಬೇಕಾದ ಪೇದೆಯೊಬ್ಬ ಈಗ ತನ್ನ ಮಹಿಳಾ ಕಾನ್ ಸ್ಟೇಬಲ್ ಒಬ್ಬರು ಸ್ನಾನ ಮಾಡುತ್ತಿರುವ ವಿಡಿಯೋವನ್ನು ಸೆರೆಹಿಡಿಯಲು ಹೋಗಿ ಬಂಧನಕ್ಕೆ ಒಳಗಾಗಿದ್ದಾನೆ.

    33 ವರ್ಷದ ಮಹಿಳಾ ಕಾನ್‍ಸ್ಟೇಬಲ್ ಸ್ನಾನ ಮಾಡುತ್ತಿರುವುದನ್ನು ಪಕ್ಕದ ಮನೆಯಲ್ಲಿದ್ದ  ಸಮೀರ್ ಪಟೇಲ್(30) ವಿಡಿಯೋ ಮಾಡಿದ್ದ. ಈಗ ಮಹಿಳಾ ಪೇದೆಯ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ ಐಪಿಸಿ ಸೆಕ್ಷನ್ 354 ಸಿ, 323, 504 ಮತ್ತು 506 ಕಾಯ್ದೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ ಪುಣೆ ನಗರದ ಪೊಲೀಸರು ಆರೋಪಿ ಕಾನ್ ಸ್ಟೇಬಲ್ ನನ್ನು (30)  ಬಂಧಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ನಾನು ಮತ್ತು ನನ್ನ ಪತಿ ಪುಣೆಯ ಔಂಧ್‍ನ ಪೊಲೀಸ್ ವಸತಿ ನಿಲಯದಲ್ಲಿ ವಾಸವಾಗಿದ್ದೇವೆ. ಸೋಮವಾರ ನನ್ನ ಕೆಲಸವನ್ನು ಮುಗಿಸಿ ಮನೆಗೆ ಬಂದು ಸ್ನಾನ ಮಾಡಲು ಸ್ನಾನಗೃಹಕ್ಕೆ ಹೋಗಿದ್ದೆ. ಯಾರೋ ಸ್ನಾನಗೃಹ ಕಿಟಕಿಯಿಂದ ನನ್ನನ್ನು ನೋಡುತ್ತಿರುವುದು ನನ್ನ ಗಮನಕ್ಕೆ ಬಂತು. ನೋಡಿದಾಗ ನನಗೆ ಶಾಕ್ ಆಯ್ತು, ವ್ಯಕ್ತಿಯೊಬ್ಬ ಮೊಬೈಲ್ ಫೋನ್‍ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದ. ಈ ವ್ಯಕ್ತಿ ಯಾರು ಎಂದು ತಿಳಿಯಲು ಹೊರಗಡೆ ಬಂದಾಗ ನಾನು ಸಮೀರ್ ನನ್ನು ನೋಡಿದೆ. ಆತ ನನ್ನನ್ನು ಆಕ್ಷೇಪರ್ಹವಾಗಿ ದಿಟ್ಟಿಸಿ ನೋಡುತ್ತಿದ್ದ ಎಂದು ಎಂದು ಮಹಿಳಾ ಕಾನ್‍ಸ್ಟೇಬಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸಂತ್ರಸ್ತೆ ಸಮೀರ್‍ನನ್ನು ಪ್ರಶ್ನಿಸಿದ್ದಾಗ ಆತನ ಕುಟುಂಬದ ಸದಸ್ಯರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಆದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಕೆಲ ಗಂಟೆಗಳ ನಂತರ ಹೇಳಿಕೆಯನ್ನು ಪಡೆದುಕೊಂಡೆವು. ತಕ್ಷಣ ಅವನು ಕೆಲಸ ನಿರ್ವಹಿಸುತ್ತಿದ್ದ ಖಾಡಕ್ ಪೊಲೀಸ್ ಠಾಣೆಗೆ ಹೋಗಿ ಬಂಧಿಸಿ ಅವನ ಫೋನ್ ವಶಪಡಿಸಿಕೊಂಡೆವು. ಈ ಘಟನೆಯ ಹಿಂದಿನ ಕಾರಣವನ್ನು ಅವನು ತಿಳಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ದಯಾನಂದ್ ಧೋಮ್ ಹೇಳಿದರು.

    ಆರೋಪಿ ಕಾನ್‍ಸ್ಟೇಬಲ್ ಸಮೀರ್ ಪಟೇಲ್ ಜೊತೆಗೆ ಅವನ ಪತ್ನಿ ಪೂನಂ, ತಾಯಿ ಮತ್ತು ತಮ್ಮನನ್ನು ಕೂಡ ಬಂಧಿಸಲಾಗಿದೆ. ಮಂಗಳವಾರ ಆರೋಪಿ ಪಟೇಲ್‍ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ ಒಂದು ದಿನ ಪೊಲೀಸ್ ಕಸ್ಟಡಿಯಲ್ಲಿ ಇರುವಂತೆ ಆದೇಶ ನೀಡಿದೆ ಎಂದು ತಿಳಿಸಿದರು.

     

  • ಟೀ ಚೆಲ್ಲಿದ್ದಕ್ಕೆ ಚೂರಿಯಿಂದ ಇರಿದು ಕೊಂದೇ ಬಿಟ್ಟ!

    ಟೀ ಚೆಲ್ಲಿದ್ದಕ್ಕೆ ಚೂರಿಯಿಂದ ಇರಿದು ಕೊಂದೇ ಬಿಟ್ಟ!

    ಪುಣೆ: ಅಚಾನಕ್ಕಾಗಿ ವ್ಯಕ್ತಿ ಮೇಲೆ ಟೀ ಬಿದ್ದಿದ್ದಕ್ಕೆ 19 ವರ್ಷದ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆಯೊಂದು ಪುಣೆ ವಿಶ್ವವಿದ್ಯಾಲಯದ ಸಮೀಪ ನಡೆದಿದೆ.

    ಮೃತ ದುರ್ದೈವಿ ಯುವಕನನ್ನು ಅಕ್ತರ್ ಖಾನ್ ಎಂಬುವುದಾಗಿ ಗುರುತಿಸಲಾಗಿದೆ. ಘಟನೆಯಿಂದ ಅಕ್ತರ್ ಗೆಳೆಯ 21 ವರ್ಷದ ಕರೀಂ ಸೈಯದ್ ಎಂಬಾತನ ಕೈ ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಇನ್ನು ಘಟನೆ ಸಂಬಂಧಿಸಿದಂತೆ ಮತ್ತೋರ್ವ ಗೆಳೆಯ ಅಮ್ಜಿತ್ ನಡಾಫ್ ದೂರು ದಾಖಲಿಸಿದ್ದು, ಚತುಶ್ರ್ರಿಂಗಿ ಪೊಲೀಸರು ಐಪಿಸಿ ಸೆಕ್ಷನ್ 302(ಕೊಲೆ) ಹಾಗೂ 307(ಕೊಲೆಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    `ಮನೆಗೆ ವಾಪಾಸ್ಸಾಗೋ ಮೊದಲು ನಾವು ಮೂವರು ಗೆಳೆಯರು ಟೀ ಕುಡಿಯಲೆಂದು ಹೋಗಿದ್ದೆವು. ಅಂತೆಯೇ ಟೀ ಸ್ಟಾಲ್ ನಲ್ಲಿ ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಆಟೋ-ರಿಕ್ಷಾದಿಂದಿಳಿದ ವ್ಯಕ್ತಿ ನೇರವಾಗಿ ಅದೇ ಟೀ ಸ್ಟಾಲ್ ಗೆ ಬಂದ್ರು. ಇದೇ ವೇಳೆ ಗೆಳೆಯ ಅಕ್ತರ್ ಕೈಲಿದ್ದ ಗ್ಲಾಸ್ ನಿಂದ ಅಚಾನಕ್ ಆಗಿ ಟೀ ಚೆಲ್ಲಿತ್ತು. ಇದು ಆ ವ್ಯಕ್ತಿಯ ಬಟ್ಟೆಯ ಮೇಲೆ ಬಿತ್ತು. ಇದರಿಂದ ಕೋಪಗೊಂಡ ಆತ ಬೈಯಲು ಶುರು ಮಾಡಿದ. ಆದ್ರೆ ಅಕ್ತರ್ ಕ್ಷಮಿಸುವಂತೆ ಪರಿಪರಿಯಾಗಿ ಬೇಡಿಕೊಂಡರೂ ಸುಮ್ಮನಾಗದ ವ್ಯಕ್ತಿ ಹರಿತವಾದ ಚೂರಿಯಿಂದ ಅಕ್ತರ್ ಗೆ ಇರಿದಿದ್ದಾನೆ. ಈ ವೇಳೆ ನಾನು ಅಲ್ಲಿಂದ ಓಡಿ ಪಾರಾಗಿದ್ದು, ಅಕ್ತರ್ ಹಾಗೂ ಗೆಳೆಯ ಕರೀಂಗೆ ಗಂಭೀರ ಗಾಯಗಳಾಗಿದೆ’ ಅಂತ ನಡಾಫ್ ಘಟನೆಯ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾನೆ.

    ಮೃತ ಯುವಕ ನಿರುದ್ಯೋಗಿಯಾಗಿದ್ದು, ಘಟನೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುವುದು. ಅಲ್ಲದೇ ಆರೋಪಿಯನ್ನು ಕೂಡ ಈ ಮೂಲಕ ಶೀಘ್ರವೇ ಪತ್ತೆ ಹಚ್ಚಲಾಗುವುದು ಅಂತ ಚತುಶ್ರ್ರಿಂಗಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ದನ್ಯಾನಂದ್ ಧೋಮ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • 3 ವರ್ಷದ ಬಾಲಕನ ಮುಖ ಊದಿಕೊಳ್ಳುವಂತೆ ಥಳಿಸಿದ್ಳು ಟ್ಯೂಷನ್ ಟೀಚರ್

    3 ವರ್ಷದ ಬಾಲಕನ ಮುಖ ಊದಿಕೊಳ್ಳುವಂತೆ ಥಳಿಸಿದ್ಳು ಟ್ಯೂಷನ್ ಟೀಚರ್

    ಪುಣೆ: 3 ವರ್ಷದ ಬಾಲಕನ ಮೇಲೆ ಟ್ಯೂಷನ್ ಶಿಕ್ಷಕಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ಪುಣೆಯಲ್ಲಿ ನಡೆದಿದೆ.

    ಶಿಕ್ಷಕಿ ಮಗುವಿಗೆ ಹೇಗೆ ಥಳಿಸಿದ್ದಾಳೆಂದರೆ ಘಟನೆ ನಡೆದು ಮೂರು ದಿನಗಳಾದ್ರೂ ಮಗುವಿನ ಮುಖದಲ್ಲಿ ಊತ ಇಳಿದಿಲ್ಲ. ಸೆಪ್ಟೆಂಬರ್ 11ರಂದು ಇಲ್ಲಿನ ಪಿಂಪಲ್ ಸೌದಾನಗರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ ಪೊಲೀಸರು ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮಗುವಿನ ಪೋಷಕರ ದೂರಿನನ್ವರ ಪೊಲೀಸರು ಶಿಕ್ಷಕಿ ಭಾಗ್ಯಶ್ರೀ ಪಿಳ್ಳೈನನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 324 ಹಾಗೂ 2015ರ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75ರಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಆರೋಪಿ ಶಿಕ್ಷಕಿ ಭಾಗ್ಯಶ್ರೀ ಪಿಳ್ಳೈ ವಾಸವಿರುವ ಸೌದಾನಗರ್ ಪ್ರದೇಶದಲ್ಲೇ ಮಗುವಿನ ಪೋಷಕರು ವಾಸವಿದ್ದಾರೆ. ಬಾಲಕನ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ತಮ್ಮ ಮಗ ಚೆನ್ನಾಗಿ ಓದಲೆಂದು ಶಿಕ್ಷಕಿಯ ಬಳಿ ಟ್ಯೂಷನ್‍ಗೆ ಕಳಿಸುತ್ತಿದ್ದರು.

    ಸೋಮವಾರದಂದು ಬಾಲಕ ಭಾಗ್ಯಶ್ರೀ ಅವರ ಮನೆಗೆ ಹೋಗಿದ್ದ. ಪೋಷಕರು ಮನೆಗೆ ಹಿಂದಿರುಗಿದ ನಂತರ ಮಗುವಿನ ಮುಖ ತುಂಬಾ ಊದಿಕೊಂಡಿರುವುದನ್ನ ನೋಡಿದ್ದರು. ಈ ಬಗ್ಗೆ ಬಾಲಕನನ್ನು ಕೇಳಿದಾಗ ತನ್ನ ಶಿಕ್ಷಕಿ ಮರದ ಸ್ಕೇಲ್‍ನಿಂದ ಕೈ, ಬೆನ್ನು ಹಾಗೂ ತಲೆಗೆ ಹೊಡೆದಿದ್ದಾಗಿ ಹೇಳಿದ್ದಾನೆ ಎಂದು ಸಾಂಗ್ವಿ ಪೊಲೀಸ್ ಠಾಣೆಯ ಹಿರಿಯ ಇನ್‍ಸ್ಪೆಕ್ಟರ್ ಅಜಯ್ ಚಾಂದ್‍ಖೇಡೇ ಹೇಳಿದ್ದಾರೆ.

    ಮಗುವಿನ ಪರಿಸ್ಥಿತಿ ನೋಡಿ ಪೋಷಕರು ಶಿಕ್ಷಕಿ ವಿರುದ್ಧ ದೂರು ದಾಖಲಿಸಲು ಸಾಂಗ್ವಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದ್ರೆ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಸಸೂನ್ ಆಸ್ಪತ್ರೆಗೆ ಕಳಿಸಿದ್ರು ಎಂದು ಪೋಷಕರು ಹೇಳಿದ್ದಾರೆ.

    ಟ್ಯೂಷನ್ ಟೀಚರ್ ಮಗುವಿನ ಚಿಕಿತ್ಸೆಗೆ ಹಣ ಕೊಡಲು ಒಪ್ಪಿದ್ದರಿಂದ ಪೋಷಕರು ಪ್ರಕರಣ ದಾಖಲಿಸಬೇಕೋ ಬೇಡವೋ ಎಂಬ ಬಗ್ಗೆ ದ್ವಂದ್ವದಲ್ಲಿದ್ದರು. ಆದ್ರೆ ಬುಧವಾರದಂದು ಪ್ರಕರಣ ದಾಖಲಿಸಲು ತೀರ್ಮಾನಿಸಿದ್ರು. ಅವರು ನಮ್ಮ ಬಳಿ ಬಂದ ಕೂಡಲೇ ಪ್ರಕರಣ ದಾಖಲಿಸಿದ್ದೇವೆ. ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿದ್ದೇವೆ ಎಂದು ಅಜಯ್ ಹೇಳಿದ್ದಾರೆ.

    ದೂರು ಸ್ವೀಕರಿಸಿದ ನಂತರ ಆರೋಪಿ ಶಿಕ್ಷಕಿ ಭಾಗ್ಯಶ್ರೀಯನ್ನು ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಒಂದು ದಿನ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

  • ಅಪಘಾತವಾಗಿ ಟೆಕ್ಕಿ ರಕ್ತದ ಮಡುವಿನಲ್ಲಿ ನರಳಾಡ್ತಿದ್ರೆ ಫೋಟೋ ಕ್ಲಿಕ್ಕಿಸಿದ್ರು!

    ಅಪಘಾತವಾಗಿ ಟೆಕ್ಕಿ ರಕ್ತದ ಮಡುವಿನಲ್ಲಿ ನರಳಾಡ್ತಿದ್ರೆ ಫೋಟೋ ಕ್ಲಿಕ್ಕಿಸಿದ್ರು!

    ಪುಣೆ: ಇತ್ತೀಚಿನ ದಿನಗಳಲ್ಲಿ ಅಪಘಾತವಾಗಿ ವ್ಯಕ್ತಿ ರಸ್ತೆಯಲ್ಲಿ ಬಿದ್ದು ಗೋಗರೆದ್ರೂ ಸಹಾಯಕ್ಕೆ ಬಾರದ ಅನೇಕ ಘಟನೆಗಳನ್ನು ನೀವು ಓದಿರ್ತೀರಿ. ಅಂತೆಯೇ ಪುಣೆಯಲ್ಲೂ ಕೂಡ ಟೆಕ್ಕಿಯೊಬ್ಬರೂ ಅಪಘಾಕ್ಕೀಡಾಗಿ ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ, ಅವರ ಸಹಾಯಕ್ಕೆ ಬರದೆ ಫೋಟೋ, ವಿಡಿಯೋ ಮಾಡುದ್ರಲ್ಲೇ ಕಾಲ ಕಳೆದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

    ಸತೀಶ್ ಪ್ರಭಾಕರ್ ಮೆಟೆ(25) ಎಂಬವರು ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡಿದ ಸಾಫ್ಟ್ ವೇರ್ ಎಂಜಿನಿಯರ್. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ತೀವ್ರ ಗಾಯಗೊಂಡ ಮೆಟೆ ಅವರನ್ನು ಕೊನೆಗೂ ವ್ಯಕ್ತಿಯೊಬ್ಬರು ಕರುಣೆ ತೋರಿಸಿ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆ ನಗರದ ಭೋಸಾರಿಯಲ್ಲಿ ಬುಧವಾರ ಸಂಜೆ ನಡೆದಿದೆ.

    ಘಟನೆ ನಡೆದ ವೇಳೆ ಸ್ಥಳದಲ್ಲಿ ಸುತ್ತ-ಮುತ್ತ ಜನ ಸೇರಿದ್ರೂ, ಎಲ್ಲರೂ ಘಟನೆಯ ಫೋಟೋ ಹಾಗೂ ವಿಡಿಯೋ ಮಾಡುವುದ್ರಲ್ಲೇ ಬ್ಯುಸಿಯಾಗಿದ್ದರು. ಕೆಲ ಹೊತ್ತು ಯಾರೋಬ್ಬರೂ ಸತೀಶ್ ಸಹಾಯಕ್ಕೆ ಬರಲಿಲ್ಲ. ಈ ವೇಳೆ ಡೆಂಟಿಸ್ಟ್ ಡಾಕ್ಟರ್ ಕೇಟ್ ಭೋಸಾರಿಯಲ್ಲಿ ತಮ್ಮ ಕ್ಲಿನಿಕ್ ಗೆ ಹೋಗುತ್ತಿರುವವರು ಅದೇ ಮಾರ್ಗವಾಗಿ ಬಂದ್ರು. ಜನ ನರೆದಿದ್ದನ್ನು ಕಂಡ ವೈದ್ಯರು ಅಲ್ಲೇ ಇಳಿದು ನೋಡಿದಾಗ ಸತೀಶ್ ರಕ್ತದ ಮಡುವಿನಲ್ಲಿ ಬಿದ್ದು, ತಮ್ಮ ಕೈ ಹಾಗೂ ಕಾಲುಗಳನ್ನು ಅಲ್ಲಾಡಿಸುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಕೂಡಲೇ ಕೇಟ್ ಆಟೋವೊಂದನ್ನು ಕರೆದು ಸತೀಶ್ ನನ್ನು ಪಿಂಪ್ರಿಯ ಯಶ್ವಂತ್ರಾವ್ ಚವಾಣ್ ಸ್ಮಾರಕ ಆಸ್ಪತ್ರೆಗೆ ಕರೆದುಕೊಂಡು ಹೋದ್ರು. ಹೀಗೆ ಆಸ್ಪತ್ರೆಗೆ ಕರೆದೊಯ್ಯುವಾಗ ಕೇಟ್ ಗಾಯಗೊಂಡ ವ್ಯಕ್ತಿಯನ್ನು ಸರಿಯಾಗಿ ನೋಡಿದ್ರು. ಗಾಯಾಳು ತಲೆಗೆ, ಕಿವಿ ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದ್ದು, ರಕ್ತ ಸೋರುತ್ತಿತ್ತು. ಅಲ್ಲದೇ ಹೊಟ್ಟೆಯ ಮೇಲೆ ವಾಹನದ ಟಯರ್ ಮಾರ್ಕ್ ಕೂಡ ಎದ್ದು ಕಾಣುತ್ತಿತ್ತು.

    ಆಸ್ಪತ್ರೆಗೆ ದಾಖಲಿಸಿದ ಬಳಿಕ ವೈದ್ಯರು ಗಾಯಾಳು ಸತೀಶ್ ಗೆ ಪ್ರಥಮ ಚಿಕಿತ್ಸೆ(ಸಿಪಿಆರ್) ನೀಡಲು ಮುಂದಾದ್ರು, ಆದ್ರೆ ಈ ಚಿಕಿತ್ಸೆಗೆ ಸತೀಶ್ ಸ್ಪಂದಿಸಲಿಲ್ಲ. ಹೀಗಾಗಿ ಸತೀಶ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಘಟನೆ ನಡೆದ ಕೂಡಲೇ ನರೆದವರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುತ್ತಿದ್ದರೆ ಸತೀಶ್ ಬದುಕುಳಿಯುತ್ತಿದ್ದರೋ ಏನೋ? ಆದ್ರೆ ಜನ ಘಟನೆಯ ಫೋಟೋ ಹಾಗೂ ವಿಡಿಯೋ ಮಾಡುದ್ರಲ್ಲೇ ಮಗ್ನರಾದ್ರು ಅಂತ ಕೇಟ್ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಸತೀಶ್ ಮೆಟೆ ಮೂಲತಃ ಔರಂಗಾಬಾದ್ ನವರಾಗಿದ್ದು, ಭೋಸಾರಿಯಾದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದರು. ಹೀಗಾಗಿ ಅವರು ಪುಣೆಯ ಮೋಶಿ ಪ್ರದೇಶದಲ್ಲಿ ನೆಲೆಸಿದ್ದರು. ಘಟನೆಯ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಇಂತಹ ಘಟನೆಗಳು ನಡೆದಾಗ ಕೂಡಲೇ 020-27130003 ನಂಬರಿಗೆ ಕರೆ ಮಾಡುವಂತೆ ಮನವಿ ಜನರಲ್ಲಿ ಮಾಡಿದ್ದಾರೆ.

  • ಬರೋಬ್ಬರಿ 15 ವರ್ಷ ನಗ್ನವಾಗಿಯೇ ಬಂಧಿಯಾಗಿದ್ದ ಗೋವಾ ಮಹಿಳೆಯ ರಕ್ಷಣೆ!

    ಬರೋಬ್ಬರಿ 15 ವರ್ಷ ನಗ್ನವಾಗಿಯೇ ಬಂಧಿಯಾಗಿದ್ದ ಗೋವಾ ಮಹಿಳೆಯ ರಕ್ಷಣೆ!

    ಪುಣೆ: ಅಸಹಜ ವರ್ತನೆ ತೋರುತ್ತಿದ್ದ 50 ವರ್ಷದ ಮಹಿಳೆಯನ್ನು ಬರೋಬ್ಬರಿ 15 ವರ್ಷ ಕೋಣೆಯೊಳಗೆ ನಗ್ನವಾಗಿಯೇ ಕೂಡಿ ಹಾಕಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿದ ಘಟನೆ ಬುಧವಾರ ಉತ್ತರ ಗೋವಾದ ಕಾಂಡೋಲಿಂ ಗ್ರಾಮದಲ್ಲಿ ನಡೆದಿದೆ.

    ಮಹಿಳೆಯನ್ನು ಸುನಿತಾ ವರ್ಲೆಕರ್ ಎಂದು ಗುರುತಿಸಲಾಗಿದ್ದು, ಈಕೆಯ ಸಹೋದರನ ಕುಟುಂಬದವರೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸದ್ಯ ಸುನಿತಾರನ್ನು ಮಹಿಳಾ ಹಕ್ಕುಗಳ ಆಯೋಗದ ಕಾರ್ಯಕರ್ತೆಯರು ರಕ್ಷಿಸಿದ್ದಾರೆ.

    ಏನಿದು ಘಟನೆ?: ಸುನಿತಾ ಅಸಹಜ ವರ್ತನೆ ತೋರುತ್ತಿದ್ದಾರೆ ಅಂತಾ ಆಕೆಯ ಸಹೋದರ ಹಾಗೂ ಕುಟುಂಬಸ್ಥರು ಕತ್ತಲ ಕೋಣೆಯೊಳಗೆ ಕೂಡಿ ಹಾಕಿದ್ದರು. ಈ ಕುರಿತು ಸರ್ಕಾರೇತರ ಸಂಸ್ಥೆ(ಎನ್‍ಜಿಒ)ದವರು ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತೆಯರಿಗೆ ಮಾಹಿತಿ ರವಾನಿಸಿದ್ದು, ಸದ್ಯ ಕಾರ್ಯಕರ್ತೆಯರು ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಬಳಿಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಂತರ ಪಣಜಿ ಮೂಲದ ಮನೋಚಿಕಿತ್ಸೆ ಮತ್ತು ಮಾನವ ನಡತೆ ಸುಧಾರಣೆ ಕೇಂದ್ರಕ್ಕೆ ಸೇರಿಸಲಾಗಿದೆ.

    ಸುನಿತಾರಿಗೆ ಕರೆಂಟಿಲ್ಲದ ಕತ್ತಲ ಕೋಣೆಯೊಳಗೆ ಒಡೆದ ಗೋಡೆಯ ಸಂದಿಯ ಮೂಲಕ ಆಹಾರವನ್ನು ಕೊಡುತ್ತಿದ್ದರು. ತೊಡಲು ಬಟ್ಟೆಯನ್ನು ಕೂಡ ಕೊಡುತ್ತಿರಲಿಲ್ಲ. ಒಟ್ಟಿನಲ್ಲಿ ಹೊರಗಡೆ ಪ್ರಪಂಚವನ್ನೇ ಕಾಣದ ಸುನೀತಾ ಕೋಣೆಯೊಳಗೆ ನಗ್ನವಾಗಿಯೇ ಇದ್ದು, ಎಲ್ಲವನ್ನೂ ಅಲ್ಲೇ ಮಾಡುತ್ತಿದ್ದರು. ಹೀಗಾಗಿ ಕೋಣೆಯೊಳಗೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿತ್ತು ಎಂದು ಎಸ್‍ಪಿ ಕಾರ್ತಿಕ್ ಕಶ್ಯಪ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

    ಆಕೆಯ ಸಹೋದರ ಮೋಹನ್ ದಾಸ್ ಹಾಗೂ ಕುಟುಂಬಸ್ಥರೇ ಮಹಿಳೆಯನ್ನು ಕೋಣೆಯೊಳಗೆ ಬಂಧಿಸಿದ್ದಾರೆ. ಹೀಗಾಗಿ ಸುಜಾತಾಳನ್ನು ಅಕ್ರಮವಾಗಿ ಕೋಣೆಯಲ್ಲಿ 15 ವರ್ಷಗಳಿಂದ ಕೂಡಿಟ್ಟ ಅಪರಾಧಕ್ಕಾಗಿ ಆಕೆಯ ಅಣ್ಣ ಮೋಹನ್ದಾಸ್ ಮತ್ತು ಆತನ ಮನೆಯವರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 342(ಅಕ್ರಮ ಬಂಧನ)ದ ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಈ ಸಂಬಂಧ ಈಗಿನ್ನೂ ಅವರು ಯಾರನ್ನೂ ಬಂಧಿಸಿಲ್ಲ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ ಎಂದು ಕಶ್ಯಪ್ ತಿಳಿಸಿದ್ದಾರೆ.

  • ಕಾರಿನ ಲೋನ್ ಹಣ ತೀರಿಸಲು 4 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡ್ದ

    ಕಾರಿನ ಲೋನ್ ಹಣ ತೀರಿಸಲು 4 ವರ್ಷದ ಬಾಲಕಿಯನ್ನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡ್ದ

    ಮುಂಬೈ: ಕಾರಿನ ಲೋನ್ ಹಣ ತೀರಿಸುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಮಾಲೀಕನ 4 ವರ್ಷದ ಮಗಳನ್ನೇ ಅಪಹರಣ ಮಾಡಿ ಕೊಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ.

    4 ವರ್ಷದ ತನಿಷ್ಕಾ ಕೊಲೆಯಾದ ಬಾಲಕಿ. ತನಿಷ್ಕಾ ಶವ ಅಕೋಲಾದಲ್ಲಿ ಪತ್ತೆಯಾಗಿದ್ದು, ಆರೋಪಿಗಳಾದ ಶುಭಂ ಜಮ್ನಿಕ್ ಹಾಗೂ ಆತನ ಸ್ನೇಹಿತ ಪ್ರತೀಕ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಬಾಲಕಿ ತನಿಷ್ಕಾ ಕಿರಾಣಿ ಅಂಗಡಿ ಮಾಲೀಕರಾದ ಅಮೋಲ್ ಅರುಡೆ ಎಂಬವರ ಮಗಳು. ಇವರು ಕೆಲವು ಮನೆಗಳನ್ನ ಬಾಡಿಗೆಗೂ ಕೊಟ್ಟಿದ್ರು. ಆರೋಪಿ ಶುಭಂ ಕಾರ್‍ವೊಂದನ್ನ ಖರೀದಿಸಿದ್ದು ಅದರ ಲೋನ್ ಹಣ ತೀರಿಸಲಾಗಿರಲಿಲ್ಲ. ಹೀಗಾಗಿ 5 ಲಕ್ಷ ರೂ. ಹಣ ಹೊಂದಿಸಲು ತನ್ನ ಸ್ನೇಹಿತನ ಜೊತೆಗೂಡಿ ಈ ಕಿಡ್ನ್ಯಾಪ್ ಪ್ಲಾನ್ ರೂಪಿಸಿದ್ದ. ಜೂನ್ 28ರಂದು ತನ್ನ ಮಾಲೀಕನ ಮಗಳಾದ ತನಿಷ್ಕಾಳನ್ನ ದಿಗಿ ನಗರದ ಮನೆಯಿಂದ ಕಿಡ್ನ್ಯಾಪ್ ಮಾಡಿದ್ದ.

    ನನ್ನ ಮಗಳು ಬುದ್ಧಿವಂತೆ. ಆಕೆ ಅಪರಿಚಿತರು ಕರೆದರೆ ಹೋಗುವಂತವಳಲ್ಲ. ಆದ್ದರಿಂದ ಆಕೆ ಕಾಣೆಯಾದಾಗ ಇದು ಅಪರಿಚಿತರ ಕೃತ್ಯವಲ್ಲ ಎಂದು ನನಗೆ ತಿಳಿದಿತ್ತು. ಆದ್ದರಿಂದ ನಾನು ಕೂಡಲೇ ಪೊಲೀಸ್ ಠಾಣೆಗೆ ಹೋದೆ. ಆದ್ರೆ ಅಕೆಯನ್ನ ಉಳಿಸಿಕೊಳ್ಳಲು ಆಗಲಿಲ್ಲ. ಆರೋಪಿಗಳು ಈಗಾಗಲೇ ಬಂಧಿತರಾಗಿದ್ದಾರೆ. ಆದ್ರೆ ಇದು ಶುಭಂನ ಕೆಲಸ ಎಂದು ತಿಳಿದು ನನಗೆ ಶಾಕ್ ಆಯಿತು. ತನಿಷ್ಕಾ ಕಾಣೆಯಾದಾಗ ಆಕೆಯನ್ನು ಪತ್ತೆಹಚ್ಚಲು ಅವನೂ ಕೂಡ ನಮ್ಮೊಂದಿಗಿದ್ದ. ಆದರೆ ಈಗ ಅವನೇ ನನ್ನ ಮಗಳ ಕೊಲೆಗಾರನಾಗಿದ್ದಾನೆ. ನಾನು ಅಸಹಾಯಕನಾಗಿದ್ದೇನೆ. ಅವನನ್ನ ಎಷ್ಟೆಲ್ಲಾ ಚೆನ್ನಾಗಿ ನೋಡಿಕೊಂಡೆವು. ಆದ್ರೆ ಅವನು ನಮಗೆ ಈ ರೀತಿ ಮಾಡಿದ್ದಾನೆ ಎಂದು ತನಿಷ್ಕಾ ತಂದೆ ದುಃಖಿತರಾಗಿದ್ದಾರೆ.

    ದಿಗಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹರೀಶ್ ಮಾನೆ ಈ ಬಗ್ಗೆ ಹೇಳಿಕೆ ನೀಡಿದ್ದು, ನಾವು ಎಲ್ಲಾ ಕಡೆ ಹುಡುಕಾಡಿದ ನಂತರ ಹಾಗೂ ಬಾಲಕಿಯ ತಂದೆ ಅಂದುಕೊಂಡಂತೆ ಇದು ಅಪರಿಚಿತರ ಕೃತ್ಯವಲ್ಲ ಎಂಬ ಭರವಸೆ ಇದ್ದಿದ್ದರಿಂದ ನಮಗೆ ಶುಭಂ ಮೇಲೆ ಅನುಮಾನ ಮೂಡಿತು. ನಾಲ್ಕು ದಿನಗಳ ಕಾಲ ಆತ ನಮ್ಮ ದಿಕ್ಕು ತಪ್ಪಿಸಿದ್ದ. ಆದ್ರೆ ನಂತರ ಒಂದೊಂದೇ ವಿಚಾರ ಬಾಯ್ಬಿಟ್ಟ. ಆತ ಕಾರ್‍ವೊಂದನ್ನ ಖರೀದಿಸಿದ್ದು, ಲೋನ್ ಹಣ ತೀರಿಸಿರಲಿಲ್ಲ. ಹೀಗಾಗಿ ತನ್ನ ಸ್ನೇಹಿತನ ಜೊತೆಗೂಡಿ ಕಿಡ್ನ್ಯಾಪ್ ಪ್ಲಾನ್ ಮಾಡಿ 5 ಲಕ್ಷ ರೂ.ಗಾಗಿ ಬೇಡಿಕೆ ಇಡಬೇಕು ಎಂದುಕೊಂಡಿದ್ದ. ಆದ್ರೆ ತನಿಷ್ಕಾಳನ್ನ ಕಿಡ್ನ್ಯಾಪ್ ಮಾಡಿದ ನಂತರ ಆಕೆ ಗಲಾಟೆ ಮಡಿದ್ದಳು. ಹೀಗಾಗಿ ಇವರು ಪ್ಲಾಸ್ಟಿಕ್ ಬ್ಯಾಗ್‍ವೊಂದನ್ನ ಆಕೆಯ ಮುಖದ ಮೇಲೆ ಹಾಕಿ ಆಕೆಯ ಬಾಯಿ ಮುಚ್ಚಿಸಿದ್ದರು. ನಂತರ ಮುರ್ತಿಜಾಪುರಕ್ಕೆ ಕೊಂಡೊಯ್ದು ಒಂದು ಗೋಣಿಚೀಲದಲ್ಲಿ ಬಾಲಕಿಯನ್ನ ಹಾಕಿ ಬೆಂಕಿ ಹಚ್ಚಿದ್ದರು. ನಂತರ ಅರೆಬೆಂದ ದೇಹವನ್ನ ಅಲ್ಲೇ ಒಂದು ನಿರ್ಜನ ಪ್ರದೇಶದಲ್ಲಿ ಗುಂಡಿ ತೋಡಿ ಮುಚ್ಚಿದ್ದರು ಎಂದು ತಿಳಿಸಿದ್ದಾರೆ.

  • ಯುವತಿಯರೇ ಎಚ್ಚರ: ಸಿನಿಮಾದಲ್ಲಿ ಆ್ಯಕ್ಟ್ ಮಾಡ್ಬೇಕು ಅಂತಾ ಆಡಿಷನ್ ಹೋಗೋ ಮೊದ್ಲು ಈ ಸುದ್ದಿ ಓದಿ

    ಯುವತಿಯರೇ ಎಚ್ಚರ: ಸಿನಿಮಾದಲ್ಲಿ ಆ್ಯಕ್ಟ್ ಮಾಡ್ಬೇಕು ಅಂತಾ ಆಡಿಷನ್ ಹೋಗೋ ಮೊದ್ಲು ಈ ಸುದ್ದಿ ಓದಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿರುವಾಗಲೇ ಕನ್ನಡ ಚಿತ್ರರಂಗದ ತಲೆತಗ್ಗಿಸಿವಂತಹ ಕೆಲಸ ಮಾಡಿದ್ದಾರೆ ಕೆಲವರು. ಸಿನಿಮಾ ಮಾಡ್ತಿನಿ ನಿಮಗೆ ಅವಕಾಶಕೊಡ್ತಿನಿ ಅಂತ ಹೇಳಿ ದೂರದ ಪುಣೆಯಲ್ಲಿ ಅವಕಾಶಕ್ಕಾಗಿ ಕಾಯ್ತಿದ್ದ ಹೆಣ್ಣುಮಕ್ಕಳನ್ನ ಯಾಮಾರಿಸಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ರಾಮಾ ಶಾಮಾ ಭಾಮಾ, ಹೃದಯವಂತ, ಮಾತಾಡು ಮಾತಾಡು ಮಲ್ಲಿಗೆ, ರಾಜಾಹುಲಿ ಅಂತ ಸದಭಿರುಚಿ ಸಿನಿಮಾಗಳನ್ನ ಕನ್ನಡ ಸಿನಿರಸಿಕರಿಗೆ ಕೊಟ್ಟ ನಿರ್ಮಾಪಕ ಕೆ. ಮಂಜು ಅವರ ಹೆಸರನ್ನ ನಕಲಿ ನಿರ್ಮಾಪಕ ಬಳಸಿದ್ದಾನೆ.

    ತನ್ನ ಪರಿಚಯ ಹೀಗೆ ಮಾಡ್ತಿದ್ದ:
    ನಾನು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ. 40 ಸಿನಿಮಾ ನಿರ್ಮಾಣ ಮಾಡಿದ್ದೇನೆ. ಹೊಸ ಸಿನಿಮಾದಲ್ಲಿ ಅಭಿನಯಿಸಲು ನಾಯಕಿಯರು ಬೇಕಾಗಿದ್ದಾರೆ ಅಂತ ಹೇಳಿ ಪುಣೆಯಲ್ಲಿ ಆಡಿಷನ್ ಮಾಡಿದ್ದ.

    ಇಲ್ಲಿ ಕೆಲ ಹುಡುಗಿಯರನ್ನು ಆಯ್ಕೆ ಮಾಡಿ ಹೈದರಾಬಾದ್‍ಗೆ ಜೊತೆಯಲ್ಲಿ ಕರೆದುಕೊಂಡು ಬಂದು ಅಲ್ಲಿಂದ ಬೆಂಗಳೂರಿಗೆ ಕರೆ ತಂದಿದ್ದಾನೆ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಲಾಡ್ಜಿಂಗ್ ವ್ಯವಸ್ಥೆ ಮಾಡಿಕೊಟ್ಟ ಬಳಿಕ ಈತ ಸಿನಿಮಾದಲ್ಲಿ ಎಲ್ಲದಕ್ಕೂ ಸಿದ್ಧವಾಗಿರಬೇಕು, ಮದ್ಯಪಾನ ಮಾಡ್ಬೇಕು. ತುಂಡುಬಟ್ಟೆ ಹಾಕಬೇಕು ಅಂತ ಪುಸಲಾಯಿಸಿದ್ದಾನೆ. ಎರಡ್ಮೂರು ದಿನ ಬೆಂಗಳೂರಿನಲ್ಲಿ ಇರಿಸಿಕೊಂಡು ವಾಪಸ್ ಕಳುಹಿಸಿದ್ದಾನೆ.

    ಆಡಿಷನ್ ನಡೆದ ಮೇಲೆ ಆತನಿಂದ ಯಾವುದೇ ಕರೆ ಬರದ ಹಿನ್ನೆಲೆಯಲ್ಲಿ ಆತನಿಂದ ಮೋಸ ಹೋದ ಯುವತಿ, ಸ್ಯಾಂಡಲ್‍ವುಡ್ ನಿರ್ದೇಶಕನಾಗಿರುವ  ಕೆ ಮಂಜು ಅವರ ನಂಬರ್ ಅನ್ನು ಪತ್ತೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ವೇಳೆ ಅವರು ನಾನು ಯಾವುದೇ ರೀತಿಯ ಆಡಿಷನ್ ಮಾಡಿಲ್ಲ. ನನಗೆ ಗೊತ್ತೆ ಇಲ್ಲ ಎಂದು ಹೇಳಿದ್ದಾರೆ.

    ಇದಾದ ಬಳಿಕ ನಕಲಿ ನಿರ್ಮಾಪಕ ಮಂಜುನಾಥ್‍ಗೆ ಕೆ ಮಂಜು ಅವರು ಕರೆ ಮಾಡಿದಾಗ, ಸರ್ ನಮ್ಮ ಸಂಬಂಧಿಕರ ಸಾವಾಗಿದೆ ಆಮೇಲೆ ಮಾತಾಡ್ತಿನಿ ಅಂತ ಹೇಳಿದ್ದಾನೆ. ಇದಾದ ಬಳಿಕ ಯಾವುದೇ ಫೋನ್ ಬಂದಿಲ್ಲ ಅಂತಾ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.