Tag: ಪುಣೆ

  • ರಸ್ತೆ ಬದಿ ಜೀವನ ನಡೆಸುತ್ತಿದ್ದ ನಿವೃತ್ತ ಆರ್ಮಿ ಕ್ಯಾಪ್ಟನ್ ಥಳಿಸಿ ಕೊಲೆ!

    ರಸ್ತೆ ಬದಿ ಜೀವನ ನಡೆಸುತ್ತಿದ್ದ ನಿವೃತ್ತ ಆರ್ಮಿ ಕ್ಯಾಪ್ಟನ್ ಥಳಿಸಿ ಕೊಲೆ!

    ಪುಣೆ: ಸೈನ್ಯದಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿಯನ್ನು ರಸ್ತೆ ಬದಿ ಬದುಕಲು ಬಿಡದೆ ದುಷ್ಕರ್ಮಿಗಳು ಹಣಕ್ಕಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಈ ಘಟನೆ ಗುರುವಾರ ರಾತ್ರಿ ನಡೆದಿದೆ. ಮಾಜಿ ಕ್ಯಾಪ್ಟನ್ ರವೀಂದ್ರ ಬಲಿ (67) ಕೊಲೆಯಾದ ವ್ಯಕ್ತಿ. ಕಳೆದ ರಾತ್ರಿ ದುಷ್ಕರ್ಮಿಗಳಿಬ್ಬರು ಅವರ ಜೊತೆ ಜಗಳವಾಡಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ರವಿಂದ್ರ ಅವರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಸ್ಥಳೀಯ ಸೆಕ್ಯುರಿಟಿಯೊಬ್ಬರು ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ರವೀಂದ್ರ ಅವರು ಕಳೆದ ಕೆಲ ವರ್ಷಗಳಿಂದ ಕುಟಂಬದಿಂದ ದೂರವಿದ್ದು, ರಸ್ತೆ ಬದಿಯ ಸಣ್ಣ ಟೆಂಟ್‍ನಲ್ಲಿ ಒಬ್ಬರೇ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತ ಪ್ರಾಥಮಿಕ ತನಿಖೆ ವೇಳೆ ರವೀಂದ್ರ ಅವರ ಕುಟುಂಬಸ್ಥರ ಮಾಹಿತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಪುಣೆಯ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ವರ್ಜಿನಿಟಿ ಟೆಸ್ಟ್ ವಿರುದ್ಧ ಅಭಿಯಾನಕ್ಕೆ ವಾಟ್ಸಪ್ ಗ್ರೂಪ್ ಆರಂಭಿಸಿದ ಯುವಕರು

    ವರ್ಜಿನಿಟಿ ಟೆಸ್ಟ್ ವಿರುದ್ಧ ಅಭಿಯಾನಕ್ಕೆ ವಾಟ್ಸಪ್ ಗ್ರೂಪ್ ಆರಂಭಿಸಿದ ಯುವಕರು

    ಪುಣೆ: ಮದುವೆಯ ರಾತ್ರಿ ವಧುವಿನ ಕನ್ಯತ್ವ ಪರೀಕ್ಷೆ ಮಾಡುವ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ “ಸ್ಟಾಪ್ ದಿ ವಿ ರಿಚುವಲ್” ಎಂಬ ಹೆಸರಿನಲ್ಲಿ ಪುಣೆಯ ಕೆಲವು ಯುವಕ-ಯುವತಿಯರು ವಾಟ್ಸಪ್ ಗುಂಪೊಂದನ್ನ ರಚಿಸಿ ಅಭಿಯಾನ ಆರಂಭಿಸಿದ್ದಾರೆ.

    ಈ ಪದ್ಧತಿ ಸಂವಿಧಾನಕ್ಕೆ ವಿರುದ್ಧ ಹಾಗೂ ಕಾನೂನಿಗೆ ವಿರುದ್ಧ ಎಂದು ಪೊಲೀಸ್ ಅಧಿಕಾರಿಗಳ ಬಳಿ ದೂರು ದಾಖಲಿಸಿದ್ದಾರೆ. ಕಂಜರ್‍ಭಾತ್ ಸಮುದಾಯದಲ್ಲಿ ಈ ಪದ್ಧತಿ ಅಸ್ತಿತ್ವದಲ್ಲಿದೆ. ದಂಪತಿಯ ಮದುವೆಯ ರಾತ್ರಿ ಗ್ರಮ ಪಂಚಾಯ್ತಿ ಬಿಳಿ ಬಣ್ಣದ ಬೆಡ್‍ಶೀಟ್ ಹಾಸುತ್ತದೆ. ಒಂದು ವೇಳೆ ಬೆಡ್‍ಶೀಟ್ ಮೇಲೆ ಕೆಂಪು ಕಲೆ ಆಗಿದ್ದರೆ ಮಹಿಳೆ ಈ ಪರೀಕ್ಷೆಯಲ್ಲಿ ಪಾಸ್ ಆಗುತ್ತಾಳೆ. ಇಲ್ಲವಾದ್ರೆ ಆಕೆ ಮದುವೆಗೆ ಮುನ್ನ ದೈಹಿಕ ಸಂಪರ್ಕ ಹೊಂದಿದ್ದಳು ಎಂದು ಆರೋಪಿಸಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಮಹಿಳೆಯ ಒಪ್ಪಿಗೆ ಇಲ್ಲದೆಯೂ ಇಂತಹ ಪರೀಕ್ಷೆಯನ್ನು ಮಾಡಲಾಗುತ್ತದೆ.

    ನಾವು ತ್ರಿವಳಿ ತಲಾಖ್ ಹಾಗೂ ಫೇಸ್‍ಬುಕ್‍ನಲ್ಲಿ ಖಾಸಗಿತನದ ಹಕ್ಕಿನ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದ್ದೆವು. ನಮ್ಮ (ಕಂಜರ್‍ಭಾತ್) ಸಮುದಾಯದ ಕೆಲವು ಸಮಾನ ಮನಸ್ಕರು ಇದಕ್ಕೆ ಗುಣಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಈ ಶೋಷಣೆಯ ವಿರುದ್ಧ ಪ್ರತಿಭಟಿಸಲು ಮುಂದೆ ಬಂದಿದ್ದೇವೆ. ಇದು ಸಂವಿಧಾನದ ಆರ್ಟಿಕಲ್ 14 ಹಾಗೂ 21ಕ್ಕೆ ವಿರುದ್ಧ ಎಂದು ಈ ಗುಂಪಿನ ಸ್ಥಾಪಕ ವಿವೇಕ್ ತಮೈಚೇಕರ್ ಹೇಳಿದ್ದಾರೆ.

    ಇದು ನಮ್ಮ ಸಂಪ್ರದಾಯವಾದ್ದರಿಂದ ಈ ಆಚರಣೆಯನ್ನ ಮಾಡಬೇಕು. ಇಲ್ಲವಾದ್ರೆ ಹೆಣ್ಣುಮಕ್ಕಳು ಹಾಳಾಗ್ತಾರೆ ಎಂದು ಇಲ್ಲಿನ ಜನ ನಂಬಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ನಾವು ಅಭಿಯಾನ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

  • ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಗ್ಯಾಸ್ ಟ್ಯಾಂಕರ್

    ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಗ್ಯಾಸ್ ಟ್ಯಾಂಕರ್

    ಬಾಗಲಕೋಟೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರೊಂದು ಉರುಳಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಬಳಿ ನಡೆದಿದೆ.

    ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಈ ಘಟನೆ ನಡೆದಿದೆ. ಟ್ಯಾಂಕರ್ ಪೂನಾದಿಂದ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡಕ್ಕೆ ತುತ್ತಾಗಿದೆ. ಗ್ಯಾಸ್ ಇಲ್ಲದೆ ಟ್ಯಾಂಕರ್ ಖಾಲಿಯಾಗಿ ತೆರಳುತ್ತಿದ್ದುದ್ರಿಂದ ಭಾರೀ ಅನಾಹುತವೊಂದು ತಪ್ಪಿದೆ.

    ಸ್ಥಳಕ್ಕೆ ಕುಳಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಚಾಲಕ ಪಲಾನಯಸ್ವಾಮಿ ಅಪಾಯದಿಂದ ಪಾರಾಗಿದ್ದಾರೆ.

     

     

  • ಮದ್ಯಪಾನ ಮಾಡದ ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿಯ ರ‍್ಯಾಂಕ್‌ ಚಿನ್ನದ ಪದಕ!

    ಮದ್ಯಪಾನ ಮಾಡದ ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿಯ ರ‍್ಯಾಂಕ್‌ ಚಿನ್ನದ ಪದಕ!

    ಪುಣೆ: ಸಸ್ಯಹಾರಿ ಆಗಿರುವ, ಮದ್ಯಪಾನ ಮಾಡದ ವಿದ್ಯಾರ್ಥಿಗೆ ಮಾತ್ರ ರ‍್ಯಾಂಕ್‌ ನೀಡುವುದಾಗಿ ಪುಣೆ ವಿಶ್ವವಿದ್ಯಾಲಯ ನಿಯಮ ರೂಪಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

    ಹೌದು, ಪುಣೆಯ ಸಾವಿತ್ರಿಭಾಯಿ ಪುಲೆ ವಿಶ್ವವಿದ್ಯಾಲಯ ಚಿನ್ನದ ಪದಕ ನೀಡುವ ವಿದ್ಯಾರ್ಥಿ ಹೇಗಿರಬೇಕು ಎನ್ನುವುದಕ್ಕೆ ಕೆಲ ನಿಯಮಗಳನ್ನು ರೂಪಿಸಿ ಸುತ್ತೋಲೆ ಹೊರಡಿಸಿದೆ.

    ಸುತ್ತೋಲೆಯಲ್ಲಿ ಮಹರ್ಷಿ ಕೀರ್ತಂಕರ್ ಶೀರಲ್ ಮಾಮ ಚಿನ್ನದ ಪದಕ ಪಡೆಯುವ ವಿದ್ಯಾರ್ಥಿ ಹೇಗಿರಬೇಕು ಎನ್ನುವುದಕ್ಕೆ 10 ನಿಯಮಗಳನ್ನು ಪ್ರಕಟಿಸಿದ್ದು ಈ ನಿಯಮಗಳಲ್ಲಿ ವಿದ್ಯಾರ್ಥಿ ಸಸ್ಯಹಾರಿ ಆಗಿರಬೇಕು ಮತ್ತು ಮದ್ಯಪಾನ ಮಾಡಿರಬಾರದು ಎಂದು ತಿಳಿಸಲಾಗಿದೆ.

    ಸುತ್ತೋಲೆಯಲ್ಲಿ ಏನಿದೆ?
    ಸಸ್ಯಹಾರಿ ಮತ್ತು ಮದ್ಯ ಸೇವನೆ ಅಲ್ಲದೇ ಈ ಪದಕವನ್ನು ಪಡೆಯುವ ವಿದ್ಯಾರ್ಥಿ ರಕ್ತದಾನ ಶಿಬಿರ, ಶ್ರಮದಾನ, ಪರಿಸರ ರಕ್ಷಣೆ, ಮಲಿನ್ಯ ನಿಯಂತ್ರಣ ಕೆಲಸ, ಸಾಹಿತ್ಯ, ಶುಚಿತ್ವ, ಏಡ್ಸ್ ಜಾಗೃತಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರಬೇಕು ಎನ್ನುವ ಅಂಶ ಸುತ್ತೋಲೆಯಲ್ಲಿದೆ.

    ಯಾಕೆ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಕೇಳಿದ್ದಕ್ಕೆ ವಿವಿ, ಈ ಚಿನ್ನದ ಪದಕವನ್ನು ಟ್ರಸ್ಟ್ ಒಂದು ಪ್ರಯೋಜನೆ ಮಾಡಿದ್ದು, ಟ್ರಸ್ಟ್ ಈ ಪದಕವನ್ನು ಪಡೆಯುವ ವಿದ್ಯಾರ್ಥಿ ಈ ಎಲ್ಲ ಅರ್ಹತೆಯನ್ನು ಹೊಂದಿರಬೇಕು ಎಂದು ಷರತ್ತು ವಿಧಿಸಿತ್ತು. ಹೀಗಾಗಿ ನಾವು ಈ ನಿಯಮವನ್ನು ಸುತ್ತೋಲೆಯಲ್ಲಿ ಸೇರಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿತ್ತು.

    ಪುಣೆ ವಿವಿಯ ಈ ವಿಶೇಷ ನಿಯಮಕ್ಕೆ ಶಿವಸೇನೆ ಮತ್ತು ಎನ್‍ಸಿಪಿ ಆಕ್ಷೇಪ ವ್ಯಕ್ತಪಡಿಸಿತ್ತು. ವಿವಾದವಾಗುತ್ತಿದ್ದಂತೆ ವಿಶ್ವವಿದ್ಯಾಲಯ ಈಗ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.

    ವಿವಿಯ ರಿಜಿಸ್ಟ್ರರ್ ಅರವಿಂದ್ ಶಾಲಿಗ್ರಮ್ ಪ್ರತಿಕ್ರಿಯಿಸಿ, 2006ರಲ್ಲಿ ಮೊದಲ ಬಾರಿಗೆ ಈ ರೀತಿಯ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಈಗ ಪ್ರತಿ ವರ್ಷ ಹೊರಡಿಸಲಾಗುತ್ತಿದೆ. ಯೋಗಿ ಮಹರ್ಷಿ ಶೀಲರ್‍ಮಾಮ ಟ್ರಸ್ಟ್ ವತಿಯಿಂದ ಚಿನ್ನದ ಪದಕ ನೀಡಲಾಗುತ್ತಿದೆ. ಅವರು ಸೂಚಿಸಿದ ಷರತ್ತುಗಳನ್ನು ವಿಧಿಸಿ ವಿವಿ ಪ್ರತಿವರ್ಷ ಈ ಸುತ್ತೋಲೆಯನ್ನು ಹೊರಡಿಸಲಾಗುತ್ತಿದೆ ಹೊರತು ವಿವಿಯ ಪಾತ್ರ ಇದರಲ್ಲಿ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈಗ ಮಾಧ್ಯಮಗಳಿಗೆ ಸಿಕ್ಕಿರುವ ಸುತ್ತೋಲೆ ಇದೇ ಅಕ್ಟೋಬರ್ 31 ರಂದು ಹೊರಡಿಸಲಾಗಿದೆ.

    ಎನ್‍ಸಿಪಿ ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಿ, ಪುಣೆ ವಿವಿ ನಿರ್ಧಾರ ನಿಜಕ್ಕೂ ಶಾಕಿಂಗ್. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳದೇ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.

     

  • ಕ್ಯಾನ್ಸರ್‍ನಿಂದ ಮಾಣಿಕ್‍ಚಂದ್ ಗುಟ್ಕಾ ಕಂಪೆನಿಯ ಮಾಲೀಕ ನಿಧನ

    ಕ್ಯಾನ್ಸರ್‍ನಿಂದ ಮಾಣಿಕ್‍ಚಂದ್ ಗುಟ್ಕಾ ಕಂಪೆನಿಯ ಮಾಲೀಕ ನಿಧನ

    ಪುಣೆ: ಮಾಣಿಕ್ ಚಂದ್ ಗುಟ್ಕಾ ಕಂಪನಿಯ ಮಾಲೀಕ ಮಾಲೀಕ್ ರಸಿಕ್‍ಲಾಲ್ ಮಾಣಿಕ್‍ಚಂದ್ ಧರಿವಾಲ್ (80) ಪುಣೆಯ ರೂಬಿ ಹಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಮಂಗಳವಾರ ರಾತ್ರಿ 8 ಗಂಟೆಯ ವೇಳೆಗೆ ಮೃತಪಟ್ಟಿದ್ದಾರೆ.

    ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿರೂರಿನಲ್ಲಿ ಜನಸಿದ್ದ ಧರಿವಾಲ್ ಅವರು, ತನ್ನ ತಂದೆ 20 ಬೀಡಿ ಕಾರ್ಖಾನೆಗಳನ್ನು ಅನುವಂಶಿಕವಾಗಿ ಪಡೆದಿದ್ದರು. ನಂತರ ಗುಟ್ಕಾ ವ್ಯವಹಾರದಲ್ಲಿ ಹೆಸರು ಮಾಡಿದ್ದರು. ಧರಿವಾಲ್ ಅವರ ಮೇಲೆ 2004 ರಲ್ಲಿ ಮುಂಬೈ ಪೊಲೀಸರು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ಕಾಯ್ದೆ (ಮೋಕಾ) ಯ ಅಡಿ ದೂರು ದಾಖಲಿಸಿದ್ದರು. ಪ್ರಸುತ್ತ ಅವರ ಮರಣದಿಂದ ಅವರ ಮೇಲಿನ ವಿಚಾರಣೆ ಸ್ಥಗಿತಗೊಳ್ಳಲಿದೆ ಎಂದು ಧರಿವಾಲ್ ಪರ ವಕೀಲ ಹೇಳಿದ್ದಾರೆ.

    ಕಳೆದ ವರ್ಷ ಕೇಂದ್ರ ತನಿಖಾ ದಳ (ಸಿಬಿಐ) ಪೊಲೀಸರು ಧರಿವಾಲ್ ಮತ್ತು ಜೋಷಿ ಅವರ ವಿರುದ್ಧ ಪಾಕಿಸ್ತಾನ ಕರಾಚಿಯಲ್ಲಿ ಗುಟ್ಕಾ ಉತ್ಪಾದನಾ ಘಟಕ ಸ್ಥಾಪನೆಯ ಆರೋಪದಡಿ ಪ್ರಕರಣವನ್ನು ದಾಖಲಿಸಿದ್ದರು. ಅಲ್ಲದೇ ಇವರ ಮೇಲೆ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಪರ ಕಾರ್ಯ ನಿರ್ವಹಿಸುತ್ತಿರುವ ಕುರಿತು ಆರೋಪವನ್ನು ಮಾಡಲಾಗಿತ್ತು.

    ಧರಿವಾಲ್ ವಿರುದ್ಧ ಎಷ್ಟೇ ಆರೋಪಗಳಿದ್ದರೂ ಎಂದು ಅವರು ಪೊಲೀಸ್ ಕಸ್ಟಡಿಗೆ ಒಳಪಟ್ಟಿರಲಿಲ್ಲ. ಇವರ ಬಂಧನದ ಸಮಯದಲ್ಲಿ ಅನಾರೋಗ್ಯದ ಕುರಿತ ದಾಖಲೆಗಳನ್ನು ನೀಡಿ ಜಾಮೀನು ಪಡೆಯುತ್ತಿದ್ದರು.

    ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರರದಲ್ಲಿ ಗುಟ್ಕಾ ಉತ್ಪಾದನೆ ಹಾಗೂ ಮಾರಾಟ ನಿಷೇಧಿಸಿದ ನಂತರ ಪ್ಯಾಕೇಜಿಂಗ್, ರೋಲರ್ ಹಿಲ್ ಗಿರಣಿ, ರಿಯಲ್ ಎಸ್ಟೇಟ್, ಪವನ ಶಕ್ತಿ, ಪ್ಯಾಕ್ಡ್ ಕುಡಿಯುವ ನೀರು ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತೊಡಗಿದ್ದರು.

  • ಭಾರತಕ್ಕೆ 6 ವಿಕೆಟ್‍ಗಳ ಜಯ: ಸರಣಿ ಜೀವಂತ

    ಭಾರತಕ್ಕೆ 6 ವಿಕೆಟ್‍ಗಳ ಜಯ: ಸರಣಿ ಜೀವಂತ

    ಪುಣೆ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ ಆರು ವಿಕೆಟ್ ಗಳಿಂದ ಜಯಗಳಿಸಿದೆ.

    ಗೆಲ್ಲಲು 231 ರನ್ ಗಳ ಸುಲಭ ಸವಾಲನ್ನು ಪಡೆದ ಭಾರತ 46 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 232 ರನ್ ಹೊಡೆಯುವ ಮೂಲಕ ಗುರಿ ಮುಟ್ಟಿತು.

    ಭಾರತದ ಪರ ಶಿಖರ್ ಧವನ್ 68 ರನ್(84 ಎಸೆತ, 5 ಬೌಂಡರಿ, 2 ಸಿಕ್ಸರ್), ದಿನೇಶ್ ಕಾರ್ತಿಕ್ ಔಟಾಗದೇ 64 ರನ್( 92 ಎಸೆತ, 4 ಬೌಂಡರಿ) ವಿರಾಟ್ ಕೊಹ್ಲಿ 29 ರನ್(29 ಎಸೆತ, 3 ಬೌಂಡರಿ, 1 ಸಿಕ್ಸರ್, ಹಾರ್ದಿಕ್ ಪಾಂಡ್ಯ 30 ರನ್ (31 ಎಸೆತ, 2 ಬೌಂಡರಿ, 1 ಸಿಕ್ಸರ್), ಧೋನಿ ಔಟಾಗದೇ 18 ರನ್( 21 ಎಸೆತ, 3 ಬೌಂಡರಿ) ಹೊಡೆದರು.

    ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತ್ತು.

    ನ್ಯೂಜಿಲೆಂಡ್ ಪರ ಟಾಮ್ ಲಥಾಮ್ 38, ಹೆನ್ರಿ ನಿಕೊಲ್ಸ್ 42, ಕೊಲಿನ್ ಡೆ ಗ್ರಾಡ್‍ಹೋಮ್ 41, ಸ್ಯಾಟ್ನಾರ್ 29 ರನ್ ಹೊಡೆದರು. ಭಾರತದ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಬೂಮ್ರಾ ಮತ್ತು ಚಹಲ್ ತಲಾ 2 ವಿಕೆಟ್ ಪಡೆದರು. ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

    ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 6 ವಿಕೆಟ್ ಗಳ ಗೆಲುವು ಸಾಧಿಸಿತ್ತು. ಈಗ ಈ ಪಂದ್ಯವನ್ನು ಭಾರತ ಜಯಗಳಿಸಿದ್ದು, ಸರಣಿಯ ಕೊನೆಯ ಪಂದ್ಯ ಅಕ್ಟೋಬರ್ 29ರ ಭಾನುವಾರ ಕಾನ್ಪುರದಲ್ಲಿ ನಡೆಯಲಿದೆ.

     

  • 2ನೇ ಏಕದಿನ ಗೆಲ್ಲಲು ಟೀಂ ಇಂಡಿಯಾಗೆ 231 ರನ್ ಗುರಿ

    2ನೇ ಏಕದಿನ ಗೆಲ್ಲಲು ಟೀಂ ಇಂಡಿಯಾಗೆ 231 ರನ್ ಗುರಿ

    ಪುಣೆ: ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ನ್ಯೂಜಿಲೆಂಡ್ 231 ರನ್ ಗಳ ಗುರಿಯನ್ನು ನೀಡಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿದೆ.

    ನ್ಯೂಜಿಲೆಂಡ್ ಪರ ಟಾಮ್ ಲಥಾಮ್ 38, ಹೆನ್ರಿ ನಿಕೊಲ್ಸ್ 42, ಕೊಲಿನ್ ಡೆ ಗ್ರಾಡ್‍ಹೋಮ್ 41, ಸ್ಯಾಟ್ನಾರ್ 29 ರನ್ ಹೊಡೆದರು. ಭಾರತದ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಬೂಮ್ರಾ ಮತ್ತು ಚಹಲ್ ತಲಾ 2 ವಿಕೆಟ್ ಪಡೆದರು. ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

    ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 6 ವಿಕೆಟ್ ಗಳ ಗೆಲುವು ಸಾಧಿಸಿತ್ತು.

  • ‘ಬುಕ್ಕಿ’ ಮುಂದೆ 340 ರನ್ ಹೊಡೆದ್ರೂ ಚೇಸ್ ಮಾಡಬಹುದು ಅಂದಿದ್ದ ಪುಣೆ ಕ್ಯೂರೇಟರ್ ಅಮಾನತು

    ‘ಬುಕ್ಕಿ’ ಮುಂದೆ 340 ರನ್ ಹೊಡೆದ್ರೂ ಚೇಸ್ ಮಾಡಬಹುದು ಅಂದಿದ್ದ ಪುಣೆ ಕ್ಯೂರೇಟರ್ ಅಮಾನತು

    ಪುಣೆ: ಭಾರತ ನ್ಯೂಜಿಲೆಂಡ್ ಎರಡನೇ ಪಂದ್ಯಕ್ಕೂ ಮುನ್ನ ಪುಣೆ ಪಿಚ್ ಕ್ಯೂರೇಟರ್ ಪಾಂಡುರಂಗ ಸಲಗಾಂವ್ಕರ್ ಅವರನ್ನು ಬಿಸಿಸಿಐ ಸೂಚನೆ ಮೇರೆಗೆ ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಅಮಾನತುಗೊಳಿಸಿದೆ.

    ಇಂಡಿಯಾ ಟುಡೇ ವಾಹಿನಿ ಬುಕ್ಕಿಗಳ ರೂಪದಲ್ಲಿ ತೆರಳಿ ನಡೆಸಿದ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಸಲ್‍ಗಾಂವ್ಕರ್ ಪಿಚ್ ಸ್ವಭಾವ ಏನು, ಪಿಚ್ ಹೇಗೆ ಇರಲಿದೆ ಎನ್ನುವುದನ್ನು ವಿವರಿಸಿದ್ದರು.

    ಈ ಸುದ್ದಿ ಬುಧವಾರ ಬೆಳಗ್ಗೆ ಪ್ರಸಾರವಾಗುತ್ತಿದ್ದಂತೆ ಬಿಸಿಸಿಐ ಶಿಸ್ತುಕ್ರಮವನ್ನು ಕೈಗೊಂಡಿದೆ. ವೇಷಮರೆಸಿ ಬಂದಿದ್ದ ವಾಹಿನಿಯ ವರದಿಗಾರರು ತಮಗೆ ಬೇಕಾದಂತೆ ಪಿಚ್ ನಿರ್ಮಿಸಬೇಕೆಂದು ಹೇಳಿಕೊಂಡಿದ್ದರು. ಇದಕ್ಕೆ ಸಲ್‍ಗಾಂವ್ಕರ್ ಒಪ್ಪಿದ್ದರು.

    ಐಸಿಸಿ ನಿಯಮಗಳ ಅನ್ವಯ ಪಂದ್ಯ ಆರಂಭಕ್ಕೂ ಮುನ್ನ ಯಾವುದೇ ಕಾರಣಕ್ಕೂ ಪಿಚ್ ನ ಕುರಿತು ಮಾಹಿತಿಯನ್ನು ಕ್ಯೂರೇಟರ್ ಯಾರಿಗೂ ನೀಡುವಂತಿಲ್ಲ. ಆದರೆ ಸಲ್‍ಗಾಂವ್ಕರ್ ಈ ಪಿಚ್ ನಲ್ಲಿ 337 -340 ರನ್ ಪೇರಿಸಬಹುದು. 340 ರನ್ ಹೊಡೆದರೂ ಇದನ್ನು ಚೇಸ್ ಮಾಡಬಹುದು ಎಂದು ತಿಳಿಸಿದ್ದರು.

  • ಪುಣೆಯ ಎಫ್‍ಟಿಐಐ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ

    ಪುಣೆಯ ಎಫ್‍ಟಿಐಐ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ

    ನವದೆಹಲಿ: ಪುಣೆಯ ಫಿಲಂ ಮತ್ತು ಟೆಲಿವಿಶನ್ ಇನ್ಸಿಟ್ಯೂಟ್ ಆಫ್ ಇಂಡಿಯಾ(ಎಫ್‍ಟಿಐಐ) ನೂತನ ಅಧ್ಯಕ್ಷರಾಗಿ ನಟ ಅನುಪಮ್ ಖೇರ್ ಆಯ್ಕೆ ಆಗಿದ್ದಾರೆ.

    ಈ ಹಿಂದೆ ಅನುಪಮ್ ಖೇರ್ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಟ್(ಸಿಬಿಎಫ್‍ಸಿ) ಮತ್ತು ನ್ಯಾಷನಲ್ ಡ್ರಾಮಾ ಸ್ಕೂಲ್(ಎನ್‍ಎಸ್‍ಡಿ) ಮುಖ್ಯಸ್ಥರಾಗಿ ಆಯ್ಕೆ ಆಗಿದ್ದರು.

    ಈ ಹಿಂದೆ ಎಫ್‍ಟಿಟಿಐ ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್ ಅವರನ್ನು ಆಯ್ಕೆ ಮಾಡಲಾಗಿತ್ತು. ಗಜೇಂದ್ರ ಚೌಹಾಣ್ ಆಯ್ಕೆಯನ್ನು ವಿರೋಧಿಸಿ ಈ ಹಿಂದೆ 140 ದಿನಗಳ ಕಾಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಗಜೇಂದ್ರ ಚೌಹಾಣ್ ಈ ಹುದ್ದೆಗೆ ಏರಲು ಯಾವುದೇ ಅರ್ಹತೆ ಇಲ್ಲ. ರಾಜಕೀಯ ಪ್ರೇರಿತವಾಗಿ ಚೌಹಾಣ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಮಾರ್ಚ್ ನಲ್ಲಿ ವಿದ್ಯಾರ್ಥಿಗಳು ಈ ಪ್ರತಿಭಟನೆಯನ್ನು ಕೈಬಿಟ್ಟಿದ್ದರು.

  • 425 ರೂ. ಬೆಲೆಯ ಚಪ್ಪಲಿ ಕಳುವಾಗಿದ್ದಕ್ಕೆ ದೂರು!

    425 ರೂ. ಬೆಲೆಯ ಚಪ್ಪಲಿ ಕಳುವಾಗಿದ್ದಕ್ಕೆ ದೂರು!

    ಪುಣೆ: ವ್ಯಕ್ತಿ ಕಾಣೆಯಾಗಿದ್ದಾರೆ, ಚಿನ್ನಾಭರಣ ದೋಚಿದ್ದಾರೆ, ವಾಹನ ಕಳವಾಗಿದೆ, ಹಣ ಕದ್ದಿದ್ದಾರೆ ಎಂಬಂತಹ ಹಲವಾರು ನಾಪತ್ತೆಯಾಗಿರುವ ದೂರುಗಳನ್ನು ಕೇಳಿದ್ದೇವೆ, ಆದರೆ ಪುಣೆಯಲ್ಲಿ ವ್ಯಕ್ತಿಯೊಬ್ಬರು ಚಪ್ಪಲಿ ನಾಪತ್ತೆಯಾಗಿವೆ ಎಂದು ದೂರನ್ನು ದಾಖಲಿಸಿದ್ದಾರೆ.

    ಖಿಡ್ನಿ ತಕಲ್ಕರವಾಡಿ ರಸ್ತೆಯ ಪಾಲಾಶ್ ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ನ 3 ನೇ ಮಹಡಿಯಲ್ಲಿ ವಾಸವಾಗಿರುವ ವಿಶಾಲ್ ಕಲೇಕರ್(36) ಎಂಬುವರು ತಮ್ಮ ಚಪ್ಪಲಿಗಳನ್ನು ಯಾರೋ ಕದ್ದಿದ್ದಾರೆಂದು ಪುಣೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

    ನಾನು 425 ರೂಪಾಯಿ ನೀಡಿ ಹೊಸ ಕಪ್ಪು ಬಣ್ಣದ ಸ್ಯಾಂಡಲ್ ಗಳನ್ನು ಖರೀದಿಸಿದ್ದೆ. ಅವುಗಳನ್ನು ಮನೆಯ ಹೊರಗಡೆ ಬಿಟ್ಟಿರುವಾಗ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಚಪ್ಪಲಿಯನ್ನು, ಅಕ್ಟೋಬರ್ 3 ರಂದು ಮುಂಜಾನೆ ಸುಮಾರು 3 ರಿಂದ 8 ಗಂಟೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೂರಿದ್ದಾರೆ.

    ಕಲೇಕಾರ್ ಅವರು ನೀಡಿದ ದೂರನ್ನು ಪೊಲೀಸರು ಐಪಿಸಿ ಸೆಕ್ಷನ್ 379(ಸಂಪತ್ತು ಕಳವು) ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕಲೇಕಾರ್ ಗುರುತಿಸಿದ ಅಥವಾ ಅನುಮಾನಿಸಿದ ವ್ಯಕ್ತಿಗಳನ್ನು ವಿಚಾರಿಸಲಾಗಿದ್ದು ಆದರೆ ಯಾರನ್ನು ಬಂಧಿಸಿಲ್ಲ, ಯಾರು ಕದ್ದಿದ್ದಾರೆಂದು ಇದುವರೆಗೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ಅಧಿಕಾರಿ ನಾಯ್ಕ್ ಎಸ್‍ಎಂ ಧೋಳೆಯವರು ಈ ತನಿಖೆಯನ್ನು ನಡೆಸುತ್ತಿದ್ದಾರೆ.