Tag: ಪುಣೆ

  • ಐಪಿಎಲ್ ನಿಂದ ನಿವೃತ್ತಿ ಸುಳಿವು ನೀಡಿದ್ರಾ ಧೋನಿ?

    ಐಪಿಎಲ್ ನಿಂದ ನಿವೃತ್ತಿ ಸುಳಿವು ನೀಡಿದ್ರಾ ಧೋನಿ?

    ಪುಣೆ: ಎರಡು ವರ್ಷಗಳ ಬಳಿಕ ಐಪಿಎಲ್ ಗೆ ಕಮ್ ಬ್ಯಾಕ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಪ್ರವೇಶಿಸಿದೆ. ಈ ವೇಳೆಯೇ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್ ನಿವೃತ್ತಿ ಸೂಚನೆ ನೀಡಿದ್ದಾರೆ.

    ತಂಡದ ಪ್ರದರ್ಶನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಧೋನಿ, ಚೆನ್ನೈ ತಂಡದ ಫ್ರಾಚೈಂಸಿಗಳು ಆಟಗಾರರಿಗೆ ಉತ್ತಮ ಅವಕಾಶ ನೀಡಿದ್ದಾರೆ. ಹಾಗೆಯೇ ತಂಡದ ಹಲವು ಆಟಗಾರರು ಮುಂದಿನ ಎರಡು ವರ್ಷಗಳ ಬಳಿಕ ಟಿ20 ಮಾದರಿಯಲ್ಲಿ ಆಡುವುದು ಕಷ್ಟಸಾಧ್ಯ. ಆಟಗಾರರು ಶಾರ್ಟ್ ಫಾರ್ಮ್ ಗೇಮ್ ಗೆ ಹೊಂದಾಣಿಕೆ ಸಹ ಆಗುವುದಿಲ್ಲ. ಚೆನ್ನೈ 10 ವರ್ಷ ಪೂರೈಸುವ ವೇಳೆ ಆಟಗಾರರಿಗೆ ಉತ್ತಮ ನೆನಪಿರುತ್ತದೆ ಎಂದು ಹೇಳಿದ್ದಾರೆ.

    36 ವರ್ಷದ ಧೋನಿ ಅವರ ಈ ಹೇಳಿಕೆಯಿಂದ ಸದ್ಯ ಚೆನ್ನೈ ತಂಡ ಐಪಿಎಲ್ ನಲ್ಲಿ 10 ವರ್ಷ ಪೂರ್ಣಗೊಳಿಸಿದ ಬಳಿಕ ಐಪಿಎಲ್ ನಿಂದ ನಿವೃತ್ತಿ ಹೇಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

    ಇದೇ ವೇಳೆ ಟೂರ್ನಿಯ ಆರಂಭದಲ್ಲಿ ಚೆನ್ನೈ ತಂಡದ ವಿರುದ್ಧ ಕೇಳಿ ಬಂದ ವಿಮರ್ಶೆಯಲ್ಲಿ ತಂಡದ ಬಹುತೇಕರು ಹಿರಿಯ ಆಟಗಾರರಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಧೋನಿ, ತಂಡದ ಆಟಗಾರರು ಪರಸ್ಪರ ಉತ್ತಮ ಭಾವನೆ ಹೊಂದಿದ್ದಾರೆ. ಅದ್ದರಿಂದ ಪಂದ್ಯವನ್ನು ಸುಲಭವಾಗಿ ತಿಳಿಯಲು ಸಾಧ್ಯ. ಅಲ್ಲದೇ ಇದು ತಂಡದ ನಾಯಕನ ಕಾರ್ಯ ಸುಲಭವಾಗಿಸುತ್ತದೆ. ಒಂದು ಉತ್ತಮ ತಂಡ ಆಯ್ಕೆ ಮಾಡದಿದ್ದರೆ, ಉತ್ತಮ ಪ್ರದರ್ಶನ ನೀಡುವುದು ಕಷ್ಟವಾಗುತ್ತದೆ. ತಂಡದ ಆಟಗಾರರು ಫಾರ್ಮ್ ಹೊಂದಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

    ಧೋನಿ ತಮ್ಮ ವೃತ್ತಿ ಜೀವನದಲ್ಲಿ ಟೀಂ ಇಂಡಿಯಾ ಹಲವು ಕಪ್ ಗಳನ್ನು ಗೆಲ್ಲಲು ಕಾರಣರಾಗಿದ್ದು. ಅಲ್ಲದೇ ಎರಡು ವಿಶ್ವಕಪ್ ಗೆದ್ದ ತಂಡದ ನಾಯಕತ್ವ ವಹಿಸಿದ್ದರು. ಐಪಿಎಲ್ ನಲ್ಲಿ ಚೆನ್ನೈ 2 ಬಾರಿ ಕಪ್ ಹಾಗೂ ಮೂರು ಬಾರಿ ರನ್ನರ್ ಆಪ್ ಸ್ಥಾನರೆಗೂ ಮುನ್ನಡೆಸಿದ್ದರು. ಎರಡು ವರ್ಷಗಳ ನಿಷೇಧ ಬಳಿಕ ಈ ಬಾರಿ ಟೂರ್ನಿಯಲ್ಲಿ ಭಾಗಹಿಸಿರುವ ಚೆನ್ನೈ ಕಪ್ ಗೆಲ್ಲುವ ಫೇವರೆಟ್ ತಂಡವಾಗಿದೆ. ಇದನ್ನು ಓದಿ: ಟಿ20ಗೆ ಧೋನಿ ನಿವೃತ್ತಿ ಹೇಳೋದು ಉತ್ತಮ: ವಿವಿಎಸ್ ಲಕ್ಷ್ಮಣ್

    ಧೋನಿ ಈಗಾಗಲೇ ಟೆಸ್ಟ್ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಧೋನಿ ಈ ಹಿಂದೆಯೂ ನಿವೃತ್ತಿ ಬಗ್ಗೆ ಪ್ರಶ್ನಿಸಿದ ವೇಳೆಯೂ ತಮ್ಮ ದೇಹ ಆಟಕ್ಕೆ ಸಹಕಾರ ನೀಡುವವರೆಗೂ ಮುಂದುವರೆಯುವುದಾಗಿ ಹೇಳಿದ್ದರು. ಧೋನಿ ಸದ್ಯ ನಿವೃತ್ತಿಯ ಬಗ್ಗೆ ಸ್ಪಷ್ಟ ಹೇಳಿಕೆ ನೀಡದೆ ಇದ್ದರೂ ಅವರ ಈ ಹೇಳಿಕೆಗಳು ನಿವೃತ್ತಿಗೆ ಪುಷ್ಠಿ ನೀಡುತ್ತಿವೆ ಎನ್ನಬಹುದು. ಇದನ್ನು ಓದಿ: ಧೋನಿ ಸುತ್ತಲೂ ಹೊಟ್ಟೆ ಕಿಚ್ಚು ಪಡೋ ಜನರಿದ್ದಾರೆ: ರವಿ ಶಾಸ್ತ್ರಿ

    https://www.instagram.com/p/BjDCPRqHu-p/?utm_source=ig_embed

  • ಪುಣೆ ಕ್ರೀಡಾಂಗಣ ಸಿಬ್ಬಂದಿಗೆ ವಿಶೇಷ ಗಿಫ್ಟ್ ಕೊಟ್ಟ ಧೋನಿ

    ಪುಣೆ ಕ್ರೀಡಾಂಗಣ ಸಿಬ್ಬಂದಿಗೆ ವಿಶೇಷ ಗಿಫ್ಟ್ ಕೊಟ್ಟ ಧೋನಿ

    ಪುಣೆ: ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಕ್ರೀಡಾಂಗಣವಾಗಿದ್ದ ಪುಣೆಯ ಮಹಾರಾಷ್ಟ್ರ ಅಸೋಸಿಯೇಷನ್ ಕ್ರೀಡಾಂಗಣದ ಸಿಬ್ಬಂದಿಗೆ ಚೆನ್ನೈ ತಂಡದ ನಾಯಕ ಧೋನಿ ವಿಶೇಷ ಕೊಡುಗೆ ನೀಡಿದ್ದಾರೆ.

    ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಕೊನೆಯ ಪಂದ್ಯದ ಬಳಿಕ ಕ್ರೀಡಾಂಗಣದ ಸಿಬ್ಬಂದಿಯ ಶ್ರಮವನ್ನು ಗುರುತಿಸಿ ತಲಾ 20 ಸಾವಿರ ರೂ. ನಗದು ಗಿಫ್ಟ್ ನೀಡಲಾಗಿದೆ. ಬಳಿಕ ಸಿಬ್ಬಂದಿಯೊಂದಿಗೆ ಧೋನಿ ಹಾಗೂ ಚೆನ್ನೈ ತಂಡ ಆಟಗಾರರು ಫೋಟೋ ಸಹ ತೆಗೆಸಿಕೊಂಡಿದ್ದಾರೆ.

    ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಚೆನ್ನೈ ತಂಡದ ವಕ್ತಾರರು, ಇದು ಸಿಬ್ಬಂದಿ ಶ್ರಮಕ್ಕೆ ನೀಡಿದ ಸಣ್ಣ ಕೊಡುಗೆ ಮಾತ್ರ. ಕಡಿಮೆ ಅವಧಿಯಲ್ಲಿ ಕ್ರೀಡಾಂಗಣವನ್ನು ಸಿದ್ಧಪಡಿಸಿ ಅವಕಾಶ ನೀಡಿದ್ದರು. ಅದ್ದರಿಂದ ಧೋನಿ ಸೇರಿದಂತೆ ಆಟಗಾರರ ಸಲಹೆ ಮೇರೆಗೆ ಈ ನಿರ್ಧಾರ ಮಾಡಲಾಯಿತು ಎಂದು ತಿಳಿಸಿದ್ದಾರೆ.

    ಈ ಬಾರಿ ಟೂರ್ನಿಯ ಆರಂಭದ ಪಂದ್ಯಗಳು ಚೆನ್ನೈ ನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿತ್ತು. ಆದರೆ ಕಾವೇರಿ ಕುರಿತ ವಿಚಾರವಾಗಿ ತಮಿಳುನಾಡಿನಲ್ಲಿ ನಡೆದ ಗಲಾಟೆ ಬಳಿಕ ಐಪಿಎಲ್ ಪಂದ್ಯಗಳಿಗೆ ವಿರೋಧ ವ್ಯಕ್ತವಾಗಿತ್ತು. ಈ ಕಾರಣದಿಂದ ಪಂದ್ಯಗಳನ್ನು ಚೆನ್ನೈ ನಿಂದ ಪುಣೆಗೆ ವರ್ಗಾವಣೆ ಮಾಡಲಾಗಿತ್ತು.

    ಬಳಿಕ ಪುಣೆಯ ಕ್ರೀಡಾಂಗಣದಲ್ಲಿ ಚೆನ್ನೈ ತಂಡ ಆಡಿದ 6 ಪಂದ್ಯಗಳಲ್ಲಿ 5 ರಲ್ಲಿ ಗೆದ್ದು ಬೀಗಿದೆ. ಪಂಜಾಬ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 18 ಅಂಕಗಳೊಂದಿಗೆ 2ನೇ ಸ್ಥಾನಗಳಿಸಿದೆ.

  • ಪಂಜಾಬ್ ಪ್ಲೇ ಆಫ್ ಪ್ರವೇಶಿಸದಿದ್ದರೂ ಪ್ರೀತಿ ಜಿಂಟಾ ಖುಷಿಯಾಗಿದ್ದು ಏಕೆ ಗೊತ್ತಾ? ವೈರಲ್ ವಿಡಿಯೋ

    ಪಂಜಾಬ್ ಪ್ಲೇ ಆಫ್ ಪ್ರವೇಶಿಸದಿದ್ದರೂ ಪ್ರೀತಿ ಜಿಂಟಾ ಖುಷಿಯಾಗಿದ್ದು ಏಕೆ ಗೊತ್ತಾ? ವೈರಲ್ ವಿಡಿಯೋ

    ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಸೋತು ಟೂರ್ನಿಯಿಂದ ಹೊರಬಿದ್ದರೂ, ತಂಡದ ಸಹ ಮಾಲೀಕರಾಗಿರುವ ಪ್ರೀತಿ ಜಿಂಟಾ ಮಾತ್ರ ಸಂತಸ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ತಂಡದ ಸಿಬ್ಬಂದಿಯೊಬ್ಬರ ಜೊತೆ ಮಾತುಕತೆ ನಡೆಸುತ್ತಿರುವ ದೃಶ್ಯಗಳು ಸೆರೆಯಾಗಿದೆ. ಆದರೆ ಈ ವಿಡಿಯೋದಲ್ಲಿ ಧ್ವನಿ ದಾಖಲಾಗದೇ ಇದ್ದರೂ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಗೆ ಪ್ರವೇಶಿಸದೇ ಹೊರಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಚೆನ್ನೈ ವಿರುದ್ಧದ ಪಂದ್ಯದ ಬಳಿಕ ಪ್ರೀತಿ ಜಿಂಟಾ ಟ್ವಿಟ್ಟರ್ ನಲ್ಲಿ ಪ್ಲೇ ಆಫ್ ಪ್ರವೇಶಿಸಿದ ನಾಲ್ಕು ತಂಡಗಳಿಗೆ ಶುಭಕೋರಿದ್ದಾರೆ. ಅಲ್ಲದೇ ಮುಂದಿನ ವರ್ಷ ತಾವು ಕಮ್ ಬ್ಯಾಕ್ ಮಾಡುವುದಾಗಿ ಬರೆದು ಕೊಂಡಿದ್ದಾರೆ.

    ಆರ್ ಅಶ್ವಿನ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದಿದೆ. ಸತತ ಗೆಲುವುಗಳ ಮೂಲಕ ಟೂರ್ನಿ ಆರಂಭಿಸಿದ ಪಂಜಾಬ್ ತಂಡ ಮೊದಲ 5 ಪಂದ್ಯಗಳಲ್ಲಿ 4 ರಲ್ಲಿ ಜಯಗಳಿಸಿತ್ತು. ಬಳಿಕ ನಡೆದ 9 ಪಂದ್ಯದಲ್ಲಿ ಸತತವಾಗಿ ಸೋಲು ಕಾಣುವ ಮೂಲಕ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದೆ. ಒಟ್ಟಾರೆ ಟೂರ್ನಿಯಲ್ಲಿ ಪಂಜಾಬ್ ತಂಡ 14 ಪಂದ್ಯಗಳಲ್ಲಿ 6 ರಲ್ಲಿ ಮಾತ್ರ ಗೆಲುವು ಪಡೆದಿದೆ.

    ಇನ್ನು ಟೂರ್ನಿಯಲ್ಲಿ ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ಸಹ ನೀರಸ ಪ್ರದರ್ಶನವನ್ನು ನೀಡಿ ಪ್ಲೇ ಆಫ್ ಪ್ರವೇಶಿಸದೇ ಹೊರ ನಡೆದಿದೆ. 14 ಪಂದ್ಯಗಳಲ್ಲಿ 6 ರಲ್ಲಿ ಜಯ ಗಳಿಸಿರುವ ಮುಂಬೈ 12 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಿದೆ.

  • ಕೊಹ್ಲಿ ವಿಕೆಟ್ ಪಡೆದ್ರು ಸಂತೋಷ ಪಟ್ಟಿಲ್ಲ ಯಾಕೆ: ಜಡೇಜಾ ಹೇಳ್ತಾರೆ ಓದಿ

    ಕೊಹ್ಲಿ ವಿಕೆಟ್ ಪಡೆದ್ರು ಸಂತೋಷ ಪಟ್ಟಿಲ್ಲ ಯಾಕೆ: ಜಡೇಜಾ ಹೇಳ್ತಾರೆ ಓದಿ

    ಪುಣೆ: ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದ ವೇಳೆ ತಾನು ಇನ್ನಿಂಗ್ಸ್ ನ ಮೊದಲ ಬೌಲ್ ಎಸೆದ ಕಾರಣ ಸೆಲೆಬ್ರೇಟ್ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಸಿಎಸ್‍ಕೆ ಬೌಲರ್ ರವೀಂದ್ರ ಜಡೇಜಾ ಹೇಳಿದ್ದಾರೆ.

    ಶನಿವಾರ ಚೆನ್ನೈ ಹಾಗೂ ಆರ್ ಸಿಬಿ ನಡುವಿನ ಪಂದ್ಯದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿದ ಜಡೇಜಾ, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಸಂತಸ ತಂದಿದೆ. ನನ್ನ ಬೌಲಿಂಗ್ ಎಂಜಾಯ್ ಮಾಡಿದ್ದೇನೆ ಎಂದರು.

    ಈ ಹಿಂದಿನ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ದುಬಾರಿ ಬೌಲಿಂಗ್ ಮಾಡಿದ ಜಡೇಜಾ ಆರ್ ಸಿಬಿ ವಿರುದ್ಧ ಮೂರು ವಿಕೆಟ್ ಪಡೆದು ಮಿಂಚಿದ್ದರು. ಪಂದ್ಯದಲ್ಲಿ ಮೊದಲ ಪವರ್ ಪ್ಲೇ ಮುಗಿದ ಬಳಿಕ ಸ್ಟ್ರೈಕ್ ನಲ್ಲಿದ್ದ ಕೊಹ್ಲಿ ಅವರಿಗೆ ಬೌಲ್ ಮಾಡುವ ಅವಕಾಶವನ್ನು ಪಡೆದಿದ್ದರು. ಮೊದಲ ಎಸೆತದಲ್ಲೇ ಕೊಹ್ಲಿ ಬಿಗ್ ವಿಕೆಟ್ ಪಡೆದ ರವೀಂದ್ರ ಜಡೇಜಾ ಯಾವುದೇ ಸಂಭ್ರಮಾಚರಣೆ ಮಾಡದಿರುವುದನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. (ಗಮನಕ್ಕೆ ಸರ್ ರವೀಂದ್ರ ಜಡೇಜಾ  ಅಧಿಕೃತ ಟ್ವಿಟ್ಟರ್ ಖಾತೆಯಲ್ಲ)

     

     

    https://twitter.com/Iambadri11/status/992722422318039041

  • ಧೋನಿ ಮುಡಿಗೆ ಮತ್ತೊಂದು ದಾಖಲೆಯ ಗರಿಮೆ

    ಧೋನಿ ಮುಡಿಗೆ ಮತ್ತೊಂದು ದಾಖಲೆಯ ಗರಿಮೆ

    ಪುಣೆ: ಇಲ್ಲಿನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ ಎಂಎಸ್ ಧೋನಿ ಐಪಿಎಲ್ ನಲ್ಲಿ 150 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಡೆದಿದ್ದಾರೆ.

    ಟೀಂ ಇಂಡಿಯಾವನ್ನು ಹಲವು ಟೂರ್ನಿಗಳಲ್ಲಿ ಮುನ್ನಡೆಸಿ ಭಾರತಕ್ಕೆ 2 ವಿಶ್ವಕಪ್ ತಂದುಕೊಟ್ಟು ಅಭಿಮಾನಿಗಳ ಮನಸ್ಸು ಗೆದ್ದಿರುವ ಧೋನಿ ಐಪಿಎಲ್ ನಲ್ಲೂ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡು ಬಾರಿ ಕಪ್ ತನ್ನದಾಗಿಸಿಕೊಂಡಿದೆ. ಅಲ್ಲದೇ 4 ಬಾರಿ ಫೈನಲ್ ವರೆಗೂ ಮುನ್ನಡೆಸಿದ ದಾಖಲೆ ಧೋನಿ ಹೆಸರಿನಲ್ಲಿದೆ.

    ಕಳೆದ 10 ಐಪಿಎಲ್ ಆವೃತ್ತಿಯಲ್ಲಿ 8 ಬಾರಿ ಚೆನ್ನೈ ಹಾಗೂ ಎರಡು ಆವೃತ್ತಿಗಳಲ್ಲಿ ಪುಣೆ ತಂಡವನ್ನು ಮುನ್ನಡೆಸಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿಯೂ ಧೋನಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದು, 11 ನೇ ಆವೃತ್ತಿಯಲ್ಲಿ ಇದುವರೆಗೂ ಆಡಿರುವ 7 ಪಂದ್ಯಗಳನ್ನು ಆಡಿರುವ ಚೆನ್ನೈ 5 ಪಂದ್ಯಗಳಲ್ಲಿ ಗೆಲುವು ಪಡೆದು 10 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಮತ್ತೊಮ್ಮೆ ಕಪ್ ಗೆಲ್ಲುವ ಫೆವರೇಟ್ ತಂಡ ಎನಿಸಿಕೊಂಡಿದೆ.

    ಕಳೆದ ಕೆಲ ದಿನಗಳ ಹಿಂದೆ ನಡೆದ ಪಂದ್ಯದಲ್ಲೂ ಧೋನಿ ಭರ್ಜರಿ ಆಟ ಪ್ರದರ್ಶಿಸಿ ತಾವು ಬೆಸ್ಟ್ ಫಿನಿಷರ್ ಎಂದು ಸಾಬೀತು ಪಡಿಸಿದ್ದರು. ಅಲ್ಲದೇ ಟಿ20 ಯಲ್ಲಿ 5 ಸಾವಿರ ರನ್ ಪೂರೈಸಿದ ನಾಯಕ ಎಂಬ ದಾಖಲೆ ಬರೆದಿದ್ದರು.

  • ಭದ್ರತೆಯ ನಡುವೆಯೂ ಧೋನಿಯ ಕಾಲಿಗೆ ನಮಸ್ಕರಿಸಿದ ಅಭಿಮಾನಿ – ವಿಡಿಯೋ ನೋಡಿ

    ಭದ್ರತೆಯ ನಡುವೆಯೂ ಧೋನಿಯ ಕಾಲಿಗೆ ನಮಸ್ಕರಿಸಿದ ಅಭಿಮಾನಿ – ವಿಡಿಯೋ ನೋಡಿ

    ಪುಣೆ: ಇಲ್ಲಿ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ರಾಜಸ್ತಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಅಭಿಮಾನಿಯೊಬ್ಬ ಬಿಗಿ ಭದ್ರತೆಯ ನಡುವೆಯೂ ಮೈದಾನಕ್ಕೆ ಪ್ರವೇಶಿಸಿ ಎಂಎಸ್ ಧೋನಿ ಕಾಲಿಗೆ ನಮಸ್ಕರಿಸಿದ ಘಟನೆ ನಡೆದಿದೆ.

    ಧೋನಿ ಅವರಿಗೆ ವಿಶ್ವಾದ್ಯಂತ ಹಲವು ಅಭಿಮಾನಿಗಳಿದ್ದು, ಹಲವರು ಧೋನಿಯವರ ಕೂಲ್ ಆಟಕ್ಕೆ ಬೌಲ್ಡ್ ಆಗಿದ್ದಾರೆ. ಎರಡು ವರ್ಷಗಳ ಬಳಿಕ ಐಪಿಎಲ್ ಗೆ ಚೆನ್ನೈ ತಂಡ ಕಮ್ ಬ್ಯಾಕ್ ಮಾಡಿದ ಬಳಿಕ ಅಭಿಮಾನಿಗಳ ಸಂತೋಷ ಇಮ್ಮಡಿಯಾಗಿದೆ.

    ಚೆನ್ನೈ ಬ್ಯಾಟಿಂಗ್ ನಡೆಸುತ್ತಿದ್ದ 12 ಓವರ್ ನಲ್ಲಿ ಸುರೇಶ್ ರೈನಾ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ನಡೆದಿದ್ದರು, ಈ ವೇಳೆ ಬ್ಯಾಟಿಂಗ್ ಇಳಿದ ಧೋನಿ ಅವರ ಬಳಿ ಅಭಿಮಾನಿಯೊಬ್ಬ ಓಡಿ ಬಂದು ಕಾಲಿಗೆ ನಮಸ್ಕರಿಸಿದ. ಅನಿರೀಕ್ಷಿತ ಘಟನೆಯಿಂದ ಸ್ವಲ್ಪವೂ ವಿಚಲಿತರಾಗದ ಧೋನಿ ನಗುತ್ತಲೇ ಮುಂದೇ ಸಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಪಂದ್ಯದಲ್ಲಿ ಶತಕ ಸಿಡಿಸಿದ ವ್ಯಾಟ್ಸನ್ ಚೆನ್ನೈ 64 ರನ್ ಗಳ ಭಾರಿ ಅಂತರದ ಗೆಲವು ಪಡೆಯಲು ಪ್ರಮುಖ ಪಾತ್ರವಹಿಸಿದರು. ಕೇವಲ 57 ಎಸೆತಗಳನ್ನು ಎದುರಿಸಿದ ವ್ಯಾಟ್ಸನ್ 9 ಬೌಂಡರಿ ಹಾಗೂ 6 ಸಿಕ್ಸರ್ ಗಳ ನೆರವಿನಿಂದ 106 ರನ್ ಸಿಡಿಸಿದರು. ಈ ಮೂಲಕ 2018 ರ ಐಪಿಎಲ್ ಆವೃತ್ತಿಯಲ್ಲಿ ಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

    ಕಾವೇರಿ ನೀರಿನ ಹಂಚಿಕೆ ವಿವಾದ ಕುರಿತು ತಮಿಳುನಾಡಿನಲ್ಲಿ ಐಪಿಎಲ್ ಆಟಕ್ಕೆ ವಿರೋಧ ವ್ಯಕ್ತವಾದ ಕಾರಣ ಚೆನ್ನೈ ಪಂದ್ಯಗಳನ್ನು ಪುಣೆಗೆ ವರ್ಗಾವಣೆ ಮಾಡಲಾಗಿತ್ತು. ಚೆನ್ನೈ ತಂಡದ ಅಭಿಮಾನಿಗಳ ಮನವಿ ಮೇರೆಗೆ ಸಿಎಸ್‍ಕೆ ತಂಡ ಪ್ರಾಂಚೈಸಿಗಳು ಅಭಿಮಾನಿಗಳು ಪುಣೆಗೆ ಬರಲು ವಿಶೇಷ ರೈಲು ಸೇವೆಯನ್ನು ನೀಡಿದ್ದರು.

  • ತಿಂಗಳಿಗೆ 12 ಲಕ್ಷ ರೂ. ಸಂಪಾದಿಸುತ್ತಾರೆ ಟೀ ವ್ಯಾಪಾರಿ!

    ತಿಂಗಳಿಗೆ 12 ಲಕ್ಷ ರೂ. ಸಂಪಾದಿಸುತ್ತಾರೆ ಟೀ ವ್ಯಾಪಾರಿ!

    ಪುಣೆ: ದುಡಿಯುವ ಮನಸ್ಸಿದ್ದರೆ ಯಾವುದೇ ಕೆಲಸವಾದ್ರೂ ಕೀಳಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು ನಗರದ ಟೀ ವ್ಯಾಪಾರಿಯೊಬ್ಬರು ತಿಂಗಳಿಗೆ ಬರೋಬ್ಬರಿ 10-12 ಲಕ್ಷ ರೂ. ವರೆಗೆ ಸಂಪಾದನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಪುಣೆ ಮೂಲದ ಯೆವ್ಲೆ ಟೀ ಹೌಸ್ ಈಗ ನಗರದಲ್ಲಿ ಪ್ರತಿಷ್ಠಿತ ಅಂಗಡಿಯಾಗಿ ಹೊರಹೊಮ್ಮಿದೆ. ಯೆವ್ಲೆ ಟೀ ಕಂಪನಿಯ ಸಹ ಸಂಸ್ಥಾಪಕ ನವನಾಥ್ ಯೆವ್ಲೆ ತಮ್ಮ ಈ ಉದ್ಯಮ ಹೇಗೆ ಬೆಳೆಯಿತೆಂಬ ಬಗ್ಗೆ ಮಾತನಾಡಿ, ಭಾರತೀಯರಿಗೆ ಟೀ ಮಾರಾಟ ಉದ್ಯೋಗಾವಕಾಶವನ್ನೂ ಸೃಷ್ಟಿಸುತ್ತಿದೆ. ಈ ಟೀ ವ್ಯಾಪಾರವೂ ಅತೀ ವೇಗವಾಗಿ ಬೆಳೆಯುತ್ತಿರುವುದು ಇನ್ನಷ್ಟು ಖುಷಿ ತಂದಿದೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

    ನಮ್ಮ ಈ ಟೀ ಬ್ರಾಂಡ್ ಅತೀ ವೇಗವಾಗಿ ಬೆಳೆಯುತ್ತಿರುವುದನ್ನ ನೋಡಿ ನನಗೆ ತುಂಬಾ ಖುಷಿಯಾಗಿದೆ. ಈ ಟೀ ಮಾರಾಟವನ್ನ ಅಂತಾರಾಷ್ಟೀಯ ಮಟ್ಟದ ಬ್ರಾಂಡ್ ಆಗಿ ಪರಿವರ್ತಿಸಬೇಕೆಂಬುದು ನನ್ನ ಕನಸಾಗಿದೆ ಎಂದು ಹೇಳಿದರು.

    2011 ರಲ್ಲಿ ನವನಾಥ್ ಮತ್ತು ಅವರ ಪಾಲುದಾರರು ಈ ಟೀ ಅಂಗಡಿ ಪ್ರಾರಂಭ ಮಾಡಲು ಯೋಚಿಸಿದರು. ನಾಲ್ಕು ವರ್ಷಗಳ ಸತತ ಅಧ್ಯಯನದ ನಂತರ ಉತ್ಪನ್ನದ ಗುಣಮಟ್ಟವನ್ನ ಅಂತಿಮಗೊಳಿಸಲಾಯ್ತು.

    ನಗರದಲ್ಲಿ ಈಗ 2 ಅಂಗಡಿಗಳಿದ್ದು ಪ್ರತಿ ಅಂಗಡಿಯಲ್ಲಿ ಸುಮಾರು 12 ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನಕ್ಕೆ ಸುಮಾರು ಮೂರು ಸಾವಿರದಿಂದ ನಾಲ್ಕು ಸಾವಿರದ ವರೆಗೂ ಟೀ ಮಾರಾಟವಾಗುತ್ತಿದೆ. ಪ್ರತಿ ತಿಂಗಳಿಗೆ 10-12 ಲಕ್ಷದ ವರೆಗೂ ಸಂಪಾದನೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ 100 ಅಂಗಡಿಗಳನ್ನು ತೆರೆಯಲು ಯೋಚಿಸಲಾಗಿದೆ ಎಂದು ನವನಾಥ್ ತಿಳಿಸಿದ್ದಾರೆ.

  • ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

    ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

    ಬೆಂಗಳೂರು: ಶಾಂತಿನಗರ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ಖಾಸಗಿ ವಿಮಾನ ಖರೀದಿಸಲು ಪ್ಲಾನ್ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಆನ್ ಲೈನ್ ಹ್ಯಾಕರ್ ಗಳನ್ನು ಬಳಸಿಕೊಂಡು ಕೋಟ್ಯಾಂತರ ರೂ. ಸಂಪಾದನೆ ಮಾಡಿದ್ದ ನಲಪಾಡ್ ವಿಮಾನ ಖರೀದಿ ಮಾಡಲು ಪುಣೆಗೆ ಈ ಹಿಂದೆ ತೆರಳಿ ಮಾತುಕತೆ ನಡೆಸಿದ್ದ. ಇದಾದ ಬಳಿಕ ವಿಮಾನ ಖರೀದಿ ಪ್ರಕ್ರಿಯೆಯಿಂದ ಹಿಂದಕ್ಕೆ ಸರಿದಿದ್ದ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.  ಇದನ್ನೂ ಓದಿ: ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನ- ನಲಪಾಡ್ ನರಕದಿಂದ ಪಬ್ಲಿಕ್ ಟಿವಿಯ ಪ್ರತ್ಯಕ್ಷ ವರದಿ

    ಎಲ್ಲಾ ಹೈಡ್ರಾಮಾದ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಮಂಗಳವಾರ ಹುಬ್ಬಳ್ಳಿಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದರು. ಕೇವಲ ಕಾಲು ತಾಗಿದ್ದಕ್ಕೆ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ ಮಾಡಿಲ್ಲ. ಇದರ ಹಿಂದೆ ಕೋಟ್ಯಾಂತರ ರೂಪಾಯಿಗಳ ಹಗರಣ ಇದೆ. ಕಂಪ್ಯೂಟರ್ ಹ್ಯಾಕಿಂಗ್, ಬಿಟ್ ಕಾಯಿನ್, ಹವಾಲಾ ದಂಧೆಯ ಕರಾಳ ಮುಖ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ಎಂ ಸಿದ್ದರಾಮಯ್ಯ ಈ ಪ್ರಕರಣವನ್ನು ಮುಚ್ಚಿಹಾಕುವ ಯತ್ನದಲ್ಲಿ ಇದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗದಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

     

  • ಮುಂಬೈ ನಿಂದ ಪುಣೆಗೆ ಜಸ್ಟ್ 25 ನಿಮಿಷ ಸಾಕು- ಹೈಪರ್‍ಲೂಪ್ ಪಡೆಯುವಲ್ಲಿ ಭಾರತವೇ ಮೊದಲ ದೇಶವಾಗೋ ನಿರೀಕ್ಷೆ

    ಮುಂಬೈ ನಿಂದ ಪುಣೆಗೆ ಜಸ್ಟ್ 25 ನಿಮಿಷ ಸಾಕು- ಹೈಪರ್‍ಲೂಪ್ ಪಡೆಯುವಲ್ಲಿ ಭಾರತವೇ ಮೊದಲ ದೇಶವಾಗೋ ನಿರೀಕ್ಷೆ

    ನವದೆಹಲಿ: ಮುಂಬೈನಿಂದ ಪುಣೆಗೆ ಕೇವಲ 25 ನಿಮಿಷಗಳಲ್ಲಿ ಪ್ರಯಾಣ ಮಾಡಲು ನೆರವಾಗುವ ಹೈಪರ್‍ಲೂಪ್ ಸಂಚಾರ ವ್ಯವಸ್ಥೆ ನಿರ್ಮಿಸಲು ರಿಚರ್ಡ್ ಬ್ರಾನ್ಸನ್ ಅವರ ವರ್ಜಿನ್ ಹೈಪರ್‍ಲೂಪ್ ಒನ್, ಮಹಾರಾಷ್ಟ್ರ ಸರ್ಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

    ಮಹಾರಾಷ್ಟ್ರ ಹೂಡಿಕೆದಾರರ ಸಮಾವೇಶದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಯೋಜನೆಯಿಂದ ಭಾರತದ ಪ್ರಮುಖ ನಗರಗಳ ನಡುವಿನ ಪ್ರಯಾಣ ಸಮಯ ಸುಮಾರು 2 ಗಂಟೆಯಷ್ಟು ಕಡಿಮೆಯಾಗಲಿದೆ. ರಾಷ್ಟ್ರೀಯ ಹೈಪರ್‍ಲೂಪ್ ನೆಟ್ವರ್ಕ್ ಭಾಗವಾಗಿ ಪುಣೆ-ಮುಂಬೈ ಮಾರ್ಗ ಮೊದಲ ಹಂತದಲ್ಲಿ ನಿರ್ಮಾಣವಾಗಲಿದೆ.

    ಭಾರತವೇ ಮೊದಲಿಗ?: ಹೈಪರ್‍ಲೂಪ್ ಯೋಜನೆಯ ಅನುಷ್ಠಾನಕ್ಕೆ ವಿಶ್ವದ ಹಲವು ಭಾಗಗಳಲ್ಲಿ ಇನ್ನೂ ಪರೀಕ್ಷೆಗಳು ನಡೆಯುತ್ತಿವೆ. ಆದರೂ ಈವರೆಗೆ ಮಾನವ ಸಹಿತ ಹೈಪರ್‍ಲೂಪ್ ರೈಲಿನ ಪರೀಕ್ಷಾರ್ಥ ಸಂಚಾರ ನಡೆದಿಲ್ಲ. ಈ ಕ್ರಾಂತಿಕಾರಿ ಸಂಚಾರ ವ್ಯವಸ್ಥೆಯನ್ನ ಅಳವಡಿಸಿಕೊಳ್ಳುವಲ್ಲಿ ಭಾರತವೇ ಮೊದಲ ರಾಷ್ಟ್ರವಾಗುವ ನಿರೀಕ್ಷೆ ಇದೆ.

    ಯೋಜನೆಗೆ ಎಷ್ಟು ಸಮಯ ಬೇಕು? ವೆಚ್ಛ ಎಷ್ಟು?: ಯೋಜನೆಗೆ ತಗುಲುವ ವೆಚ್ಛ ಹಾಗೂ ಯಾವಾಗ ಚಾಲನೆ ದೊರೆಯಲಿದೆ ಎಂಬ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಪತ್ರಿಕೆಯೊಂದರ ವರದಿಯ ಪ್ರಕಾರ ಪರೀಕ್ಷಾರ್ಥ ಸಂಚಾರ ಪೂರ್ಣಗೊಳ್ಳಲು 3 ವರ್ಷ ಸಮಯ ಹಿಡಿಯಲಿದ್ದು, ವಾಣಿಜ್ಯ ಚಟುವಟಿಕೆ ಆರಂಭಿಸಲು 6 ವರ್ಷ ಹಿಡಿಯಲಿದೆ.

    ಸದ್ಯಕ್ಕೆ ಮುಂಬೈ ಪುಣೆ ನಡುವೆ ಸಂಚರಿಸಲು 3 ಗಂಟೆ ಸಮಯ ಹಿಡಿಯುತ್ತದೆ. ಹೈಪರ್‍ಲೂಪ್ ಯೋಜನೆಯಿಂದಾಗ ಇದು 25 ನಿಮಿಷಕ್ಕೆ ಇಳಿಯಲಿದೆ. ಅಲ್ಲದೆ ಇಷ್ಟೇ ದೂರಕ್ಕೆ ಹೈ ಸ್ಪೀಡ್ ರೈಲ್ವೆ ಲೈನ್ ನಿರ್ಮಿಸಲು ಬೇಕಾಗುವ ವೆಚ್ಛಕ್ಕೆ ಹೋಲಿಸಿದ್ರೆ ಹೈಪರ್‍ಲೂಪ್ ನಿರ್ಮಾಣಕ್ಕೆ ಕಡಿಮೆ ವೆಚ್ಛ ತಗುಲಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಕಳೆದ ವರ್ಷ ಆಂಧ್ರಪ್ರದೇಶದ ಸರ್ಕಾರ ವಿಜಯವಾಡ ಮತ್ತು ಅಮರಾವತಿ ನಗರಗಳನ್ನ ಸಂಪರ್ಕಿಸಲು ಅಮರಿಕದ ಹೈಪರ್‍ಲೂಪ್ ಟ್ರಾನ್ಸ್‍ಪೋರ್ಟೇಷನ್ ಟೆಕ್ನಾಲಾಜೀಸ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಪ್ರಸ್ತುತ ಈ ಎರಡು ನಗರಗಳ ನಡುವಿನ ಪ್ರಯಾಣ ಸಮಯ 1 ಗಂಟೆ ಇದ್ದು, ಹೈಪರ್‍ಲೂಪ್ ನಿಂದ ಕೇವಲ 6 ನಿಮಿಷಗಳಿಗೆ ಇಳಿಯಲಿದೆ.

    ಏನಿದು ಹೈಪರ್‍ಲೂಪ್?: ಹೈಪರ್‍ಲೂಪ್ ಮುಂದಿನ ಪೀಳಿಗೆಯ ರೈಲ್ವೇ ವ್ಯವಸ್ಥೆಯಾಗಿದ್ದು, ಅಯಸ್ಕಾಂತಿಯ ಶಕ್ತಿಯಿಂದ ಸಂಚರಿಸುತ್ತದೆ. ಗಂಟೆಗೆ 1126 ಕಿ.ಮೀ ವೇಗ ಇರಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಕೊಳವೆಯಾಕಾರದ ಈ ವಾಹನ ಶಬ್ದದ ವೇಗದಲ್ಲಿ ಚಲಿಸಲಿದೆ ಎಂದು ವರದಿಯಾಗಿದೆ. ಪ್ರಸ್ತುತ ಭಾರತದಲ್ಲಿ ಅತ್ಯಂತ ವೇಗದ ರೈಲು ಟಾಲ್ಗೋ ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ಆದ್ರೆ ಇದು ಇನ್ನೂ ಪರೀಕ್ಷಾರ್ಥ ಸಂಚಾರದಡಿ ಇದೆ.

    ಲಾಭ ಏನು?: ಪ್ರಸ್ತಾವಿತ 149 ಕಿಮಿ ಇರೋ ಪುಣೆ-ಮುಂಬೈ ಮಾರ್ಗಕ್ಕೆ ಬರೋದಾದ್ರೆ ಇದು ಪುಣೆ, ನವೀಮುಂಬೆ ಅಂತರಾಷ್ಟ್ರಿಯ ವಿಮಾನ ನಿಲ್ದಾಣ ಹಾಗೂ ಮುಂಬೈ ನಗರಗಳನ್ನ ಸಂಪರ್ಕಿಸಲಿದ್ದು, 25 ನಿಮಿಷ ಪ್ರಯಾಣ ಸಮಯ ಇರಲಿದೆ. ರಿಚರ್ಡ್ ಬ್ರಾನ್ಸನ್ ಅವರ ಪ್ರಕಾರ ಈ ವ್ಯವಸ್ಥೆಯಿಂದ 2.6 ಕೋಟಿ ಜನರಿಗೆ ನೆರವಾಗಲಿದ್ದು, 9 ಕೋಟಿ ಗಂಟೆಗೂ ಹೆಚ್ಚು ಪ್ರಯಾಣ ಸಮಯ ಉಳಿತಾಯವಾಗಲಿದೆ. ಮಾರ್ಗವು ಸಂಪುರ್ಣವಾಗಿ ವಿದ್ಯುತ್ ಶಕ್ತಿಯಿಂದ ಕೂಡಿರಲಿದ್ದು, ವರ್ಷಕ್ಕೆ 1.5 ಲಕ್ಷ ಟನ್‍ನಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನ ಕಡಿಮೆ ಮಾಡಲಿದೆ.

    https://www.youtube.com/watch?v=LAWEOwDDt_Y

    https://www.youtube.com/watch?v=OBuVkQIy7eU

    https://www.youtube.com/watch?v=fIRymhj6wXU

  • ನೈಲಾನ್ ಗಾಳಿಪಟ ದಾರಕ್ಕೆ 45ರ ಮಹಿಳೆ ಬಲಿ

    ನೈಲಾನ್ ಗಾಳಿಪಟ ದಾರಕ್ಕೆ 45ರ ಮಹಿಳೆ ಬಲಿ

    ಮುಂಬೈ: ಅನಧಿಕೃತ ನೈಲಾನ್ ಗಾಳಿಪಟ ದಾರದಿಂದಾಗಿ 45 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಪುಣೆಯಲ್ಲಿ ನಡೆದಿದೆ.

    ದಿನಪತ್ರಿಕೆಯೊಂದರಲ್ಲಿ ಮಾರ್ಕೆಟಿಂಗ್ ಮತ್ತು ಅಡ್ವರ್ಟೈಸಿಂಗ್ ಎಕ್ಸಿಕ್ಯೂಟಿವ್ ಆಗಿದ್ದ ಸುವರ್ಣ ಮಜುಮ್ದಾರ್ ಮೃತ ದುರ್ದೈವಿ. ಕಳೆದ ಬುಧವಾರದಂದು ಸುವರ್ಣ ಅವರು ಸಂಜೆ 6 ಗಂಟೆ ವೇಳೆಗೆ ಸ್ಕೂಟರ್‍ನಲ್ಲಿ ಮನೆಗೆ ಹೋಗುತ್ತಿದ್ರು. ಈ ವೇಳೆ ಕತ್ತಿನ ಭಾಗದಲ್ಲಿ ಏನೋ ತುರಿಕೆಯಾದಂತೆ ಅನುಭವವಾಗಿತ್ತು. ದಾರವನ್ನ ಹಿಡಿದು ಅವರು ಕೆರೆದುಕೊಳ್ಳುತ್ತಿದ್ದ ವೇಳೆ ಸಹೋದ್ಯೋಗಿಯೊಬ್ಬರು ಸುವರ್ಣ ಅವರ ಕತ್ತಿನ ಭಾಗದಲ್ಲಿ ಕುಯ್ದಂತೆ ಆಗಿರುವುದು ನೋಡಿದ್ದರು. ಏನಾಗಿದೆ ಎಂದು ಅರಿವಾಗುವಷ್ಟರಲ್ಲಿ ಸುವರ್ಣ ಪ್ರಜ್ಞೆ ತಪ್ಪಿ, ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಸುರ್ವಣ ಸಹೋದ್ಯೋಗಿಯೊಬ್ಬರು ಹೇಳಿದ್ದಾರೆ.

    ಕೂಡಲೇ ಕಚೇರಿಗೆ ವಿಷಯ ತಿಳಿಸಿ ಸುವರ್ಣ ಅವರನ್ನ ಸೂರ್ಯ ಆಸ್ಪತ್ರೆಗೆ ಕರೆದೊಯ್ದರು. ನಂತರ ಅಲ್ಲಿಂದ ಪೂನಾ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಅಲ್ಲಿ ಸುವರ್ಣ ಅವರ ಗಾಯಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಯ್ತು. ತೀವ್ರ ರಕ್ತಸ್ರಾವವಾಗಿದ್ದರಿಂದ ಅವರಿಗೆ 8 ಬಾಟಲ್ ರಕ್ತ ಹಾಕಬೇಕಾಯ್ತು ಎಂದು ಹೇಳಿದ್ದಾರೆ.

    ಸುವರ್ಣ ಅವರ ಕತ್ತಿನ ಮೇಲೆ 3 ಇಂಚು ಆಳದ ಕುಯ್ದ ಗಾಯವಾಗಿ ಸಾಕಷ್ಟು ರಕ್ತಸ್ರಾವವಾಗಿತ್ತು. ಕತ್ತಿನ ಭಾಗದಲ್ಲಿ ನರಗಳಿಗೆ ಹಾನಿಯಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಅವರ ತಲೆಗೆ ರಕ್ತಸಂಚಾರವಾಗದ ಕಾರಣ ಬ್ರೈನ್ ಡೆಡ್ ಆಗಿದೆ ಎಂದು ಶನಿವಾರ ರಾತ್ರಿ ಘೋಷಿಸಿದ್ರು ಎಂದು ಶಿವಾಜಿನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಪ್ರಭಾಕರ್ ಶಿಂಧೆ ಹೇಳಿದ್ದಾರೆ.

    ಸುರ್ವಣ ಅವರ ಸಾವಿಗೆ ಕಾರಣವಾದ ನೈಲಾನ್ ದಾರ ಈಗಾಗಲೇ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಿಷೇಧಿತವಾಗಿದೆ. ಹೀಗಾಗಿ ಐಪಿಸಿ ಸೆಕ್ಷನ್ 304 ಹಾಗೂ 304(ಎ) ಅನ್ವಯ ಪ್ರಕರಣ ದಾಖಲಾಗಿದೆ. ಹತ್ತಿರದ ಸಿಸಿಟಿವಿ ಪರಿಶೀಲನೆ ನಡೆಸಿ ಹಾಗೂ ಕೆಲವು ಮಕ್ಕಳ ವಿಚಾರಣೆ ನಡೆಸಿ ತನಿಖೆ ಮಾಡುತ್ತಿದ್ದೇವೆ. ಈ ರೀತಿಯ ದಾರವನ್ನ ಮಾರುವ ಅಂಗಡಿಗಳಿಗೂ ಭೇಟಿ ನೀಡಲಿದ್ದೇವೆ ಹಾಗೂ ಅವರ ವಿರುದ್ಧವೂ ಪ್ರಕರಣ ದಾಖಲಿಸಲಿದ್ದೇವೆ ಎಂದು ಶಿಂಧೆ ಹೇಳಿದ್ದಾರೆ.