ಮುಂಬೈ: ಗೇಟಿನ ಬಳಿ ನಿಂತಿದ್ದ ಕಾರಿಗೆ ಮಹಿಳಾ ಚಾಲಕಿಯೊಬ್ಬಳು ತನ್ನ ಕಾರಿನಿಂದ ಐದು ಬಾರಿ ಡಿಕ್ಕಿ ಹೊಡೆದು ಜಖಂ ಮಾಡಿರುವ ಘಟನೆ ಮುಂಬೈನ ಪುಣೆಯಲ್ಲಿ ನಡೆದಿದೆ.
ಮನೆಯ ಗೇಟ್‍ವೊಂದರ ಬಳಿ ನಿಲ್ಲಿಸಿದ್ದ ಇಂಡಿಕಾ ಕಾರಿಗೆ ಡಸ್ಟರ್ ಕಾರಿನಲ್ಲಿ ಬಂದ ಮಹಿಳೆಯೊಬ್ಬರು ಐದು ಬಾರಿ ಡಿಕ್ಕಿ ಹೊಡೆದಿರುವ ದೃಶ್ಯ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಮಹಿಳೆ ಈ ರೀತಿ ಏಕೆ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ.
#WATCH A driver hits her car against a parked car repeatedly, in Pune's Ramnagar area. Additional CP, Pimpri-Chinchawad says, "A woman driver damaged three cars with her car in Ramnagar area; Case registered, further investigation underway." (20th August) pic.twitter.com/QE1kLrWsJF
ಈ ಘಟನೆ ಸಾರ್ವಜನಿಕರ ಎದುರೇ ನಡೆದಿದ್ದು, ನಿಂತಿದ್ದ ಕಾರಿಗೆ ಮೊದಲು ಹಿಂಬದಿಯಿಂದ ಮಹಿಳೆ ಕಾರಿನಲ್ಲಿ ಡಿಕ್ಕಿ ಹೊಡೆಸುತ್ತಾರೆ. ಆ ಬಳಿಕ ಮತ್ತೆ ವಾಪಸ್ ತಿರುಗಿಸಿಕೊಂಡು ಮುಂದಿನಿಂದಲೂ ಡಿಕ್ಕಿ ಹೊಡೆಯುತ್ತದೆ. ಹೀಗೆ ಜನರ ಮುಂದೆಯೇ ಒಂದು ಕಾರಿಗೆ ಐದು ಬಾರಿ ಡಿಕ್ಕಿ ಹೊಡೆದು ನಂತರ ವೇಗವಾಗಿ ಕಾರು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗುತ್ತಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಪುಣೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಪಿಂಪ್ರಿ ಚಿಂಚವಾಡ್, ಈ ಕಾರು ಸೇರಿ ರಾಮ್‍ನಗರ ಪ್ರದೇಶದಲ್ಲಿ ಇನ್ನೂ ಮೂರು ಕಾರುಗಳನ್ನು ಜಖಂಗೊಳಿಸಿದ್ದಾರೆ. ಕಾರಿನ ಚಲಾಕಿ ವಿರುದ್ಧ ಪ್ರಕರಣವನ್ನು ನೋಂದಾಯಿಸಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬೆಳಗಾವಿ: ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಮಳೆಯ ಅರ್ಭಟ ಮುಂದುವರಿದೆ. ಬೆಳಗಾವಿಯಿಂದ ಮಹಾರಾಷ್ಟ್ರವನ್ನು ಸಂಪರ್ಕಿಸುವ ಏಕೈಕ ಮಾರ್ಗವಾಗಿದ್ದ ಪುಣೆ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭೂ ಕುಸಿತ ಸಂಭವಿಸಿದೆ.
ಈ ಕುರಿತು ಉತ್ತರ ಐಜಿಪಿ ರಾಘವೇಂದ್ರ ಸುಹಾಸ್ ಮಾಹಿತಿ ನೀಡಿದ್ದು, ಭೂಕುಸಿತದಿಂದ ಪುಣೆ ಬೆಂಗಳೂರು ರಸ್ತೆ ಸಂಪರ್ಕ ಕಡಿತವಾಗಿದೆ. ಪರಿಣಾಮ ನಾಳೆ ಮಧ್ಯಾಹ್ನ ವರೆಗೂ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರು ಪ್ರಯಾಣ ಮಾಡದಂತೆ ಮನವಿ ಐಜಿಪಿ ರಾಘವೇಂದ್ರ ಸುಹಾಸ್ ಮಾಡಿದ್ದಾರೆ.
ಭೂ ಕುಸಿತ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದಲೇ ರಾಜ್ಯದ ಗಡಿಯಲ್ಲಿ ವಾಹನ ಸ್ಥಗಿತಗೊಳಿಸಿದ್ದಾಗಿ ಬೆಳಗಾವಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯವನ್ನು ಕಾಣಬಹುದಾಗಿದೆ.
ಇತ್ತ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದ ಬಳಿ ಕೃಷ್ಣ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಆಟೋ ಚಾಲಕನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಕೃಷ್ಣ ನದಿಯ ನೀರನ ಪ್ರವಾಹ ಹೆಚ್ಚಾಗಿದ್ದು, ನದಿ ದಡಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಆದರೆ ಅಧಿಕಾರಿಗಳ ಎಚ್ಚರಿಕೆಯ ನಡುವೆಯೂ ಸೇತುವೆ ದಾಟಲು ಯತ್ನಿಸಿದ್ದ ಸಂದರ್ಭದಲ್ಲಿ ಆಟೋ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿತ್ತು. ಈ ಸಂದರ್ಭದಲ್ಲಿ ಜೀವ ರಕ್ಷಣೆಗೆ ಚಾಲಕ ಆಟೋ ಮೇಲ್ ಭಾಗದಲ್ಲಿ ನಿಂತಿದ್ದ ಇದನ್ನು ಕಂಡ ಗ್ರಾಮಸ್ಥರು ಆತನನ್ನು ರಕ್ಷಣೆ ಮಾಡಿದ್ದಾರೆ.
ಪುಣೆ: 28 ವರ್ಷದ ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ಕೊಂದು ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಅಲಿಯಾ ಭಗ್ಬಾನ್ (9), ಜೋಭಾ (7) ಮತ್ತು ಜಿಯಾನ್ (6) ಮೂವರು ಮಕ್ಕಳನ್ನು ಕೊಂದು ತಾಯಿ ಫಾತಿಮಾ ಅಕ್ರಮ್ ಭಗ್ವಾನ್ (28) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಭಾನುವಾರ ಸಂಜೆ ಬೆಳಕಿಗೆ ಬಂದಿದೆ. ಫಾತಿಮಾ ತನ್ನ ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತರು ಕರ್ನಾಟಕ ಮೂಲದವರಾಗಿದ್ದು, ಮೃತ ಫಾತಿಮಾ ಮನೆ ಕೆಲಸ ಮಾಡುತ್ತಿದ್ದಳು. ಈಕೆ ಮೂವರು ಮಕ್ಕಳು ಮತ್ತು ಪತಿ ಅಕ್ರಮ್ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಮೂವರು ಮಕ್ಕಳು ಸಾವಿತ್ರಿಬಾಯಿ ಫುಲೆ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಜೀವನೋಪಾಯಕ್ಕಾಗಿ ಮತ್ತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಲು ಇತ್ತೀಚೆಗೆ ಪುಣೆಯ ಪಿಂಪ್ರಿ-ಚಿಂಚ್‍ವಾಡ್ ಪ್ರದೇಶಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಪತಿ ಅಕ್ರಮ್ ಭಾನುವಾರ ಸಂಜೆ ಮನೆಗೆ ಮರಳಿದಾಗ ಒಳಗಿನಿಂದ ಬಾಗಿಲು ಲಾಕ್ ಆಗಿತ್ತು. ಎಷ್ಟೆ ಬಡಿದರೂ ಬಾಗಿಲು ತೆರಯಲಿಲ್ಲ. ಇದರಿಂದ ಗಾಬರಿಗೊಂಡ ಅಕ್ರಮ್ ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಾಗಿಲನ್ನು ಮುರಿದು ಒಳಗೆ ಹೋಗಿದ್ದಾರೆ. ಆಗ ಮೂವರು ಮಕ್ಕಳು ಮೃತಪಟ್ಟಿದ್ದು, ಫಾತಿಮಾ ಬೇರೆ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಶಂಕರ್ ಅವತಡೆ ಹೇಳಿದ್ದಾರೆ.
ಪತಿ ಅಕ್ರಮ್ ಹಣ್ಣು ಮಾರಾಟಗಾರನಾಗಿದ್ದು, ಹೆಚ್ಚು ಹಣ ಸಂಪಾದಿಸುತ್ತಿರಲಿಲ್ಲ. ಜೊತೆಗೆ ಇತ್ತೀಚೆಗೆ ವ್ಯಾಪಾರದಲ್ಲಿ ಭಾರೀ ನಷ್ಟವನ್ನು ಅನುಭವಿಸಿದ್ದನು. ಈ ವಿಚಾರಕ್ಕೆ ಕೆಲವು ದಿನಗಳಿಂದ ದಂಪತಿಯ ಮಧ್ಯೆ ಜಗಳ ನಡೆಯುತಿತ್ತು. ಇತ್ತ ಫಾತಿಮಾ ತಂದೆ ಕೂಡ ಸಾವನ್ನಪ್ಪಿದ್ದು, ಫಾತಿಮಾ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸದ್ಯಕ್ಕೆ ನಾವು ಈ ಪ್ರಕರಣ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮನೆಯಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರವಾರ: ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರು ಸಿದ್ದರಾಮಯ್ಯ ಮಾತಿನಂತೆ ನಡೆದುಕೊಂಡಿದ್ದು, ಬಿಜೆಪಿ ಸಂಪರ್ಕದಲ್ಲಿ ಇಲ್ಲ ಎಂದಿದ್ದಾರೆ.
ರಾತ್ರಿಯಷ್ಟೇ ಕ್ಷೇತ್ರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಪಬ್ಲಿಕ್ ಟಿವಿ ಮಾತನಾಡಿದ ಅವರು, ನಾವು ಯಾವ ಬಿಜೆಪಿ ನಾಯಕರ ಜೊತೆ ಸಂಪರ್ಕವಿಲ್ಲ. ಸದ್ಯ ರಾಜ್ಯದಲ್ಲಿ ಆಗುತ್ತಿರುವ ಬಿಜೆಪಿ ಸರ್ಕಾರ ರಚನೆಯ ಬೆಳವಣಿಗೆಗೆ ನಮಗೆ ಯಾವುದೇ ಸಂಬಂಧ ಇಲ್ಲ. ನಾವು ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಕೊಟ್ಟಿದ್ದೇವೆ. ಇಂದಿಗೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದರು.
ಶಾಸಕ ರಾಜೀನಾಮೆ ಸಲ್ಲಿಕೆ ಮಾಡಿರುವುದರಿಂದ ರಾಜೀನಾಮೆ ಅಂಗೀಕಾರ ಬಳಿಕ ಎಲ್ಲರೂ ಒಟ್ಟಿಗೆ ಸೇರಿ ತೀರ್ಮಾನ ಮಾಡುತ್ತೇವೆ. ನಮ್ಮ ನಾಯಕರು ಸಿದ್ದರಾಮಯ್ಯ ಅವರು, ಅವರೇ ದೂರ ಉಳಿಯಿರಿ ಎಂದಿದ್ದಾರೆ. ಸ್ಪೀಕರ್ ಅವರಿಗೆ ಮನವಿ ಮಾಡಿದ್ದು, ಅವರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ನಮ್ಮ ಮುಂದಿನ ತೀರ್ಮಾನ ಇರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರದ ಜನರ ಕ್ಷಮೆಯಾಚನೆ ಮಾಡಿರುವ ಅವರು, ಕಳೆದ 1 ತಿಂಗಳಿನಿಂದ ನಡೆದ ರಾಜಕೀಯ ಬೆಳವಣಿಗೆ ನನಗೂ ಅಸಮಾಧಾನ ಉಂಟು ಮಾಡಿದೆ. ಆದರೆ ಅನಿವಾರ್ಯ ಕಾರಣಗಳಿಂದ ರಾಜೀನಾಮೆ ನೀಡಿದ್ದೇನೆ. 120 ಶಾಸಕರಲ್ಲಿ ನಾವು 20 ಶಾಸಕರು 4 ರಿಂದ 7 ಬಾರಿ ಶಾಸಕರಾಗಿದ್ದೇವೆ. ಆದರೆ ನಾವು ಯಾರನ್ನು ಟೀಕೆ ಮಾಡಲ್ಲ. ಈಗ ನಾವು ತೆಗೆದುಕೊಂಡಿರುವ ನಿರ್ಧಾರ ಧೃಡವಾಗಿದ್ದು, ಸ್ಪೀಕರ್ ಅವರು ಯಾವ ಒತ್ತಡಕ್ಕೂ ಒಳಗಾಗದೇ ತೀರ್ಮಾನ ಕೈಗೊಳ್ಳುವ ವಿಶ್ವಾಸ ಇದೆ ಎಂದರು.
ಕ್ಷೇತ್ರಕ್ಕೆ ಆಗಮಿಸಿದ್ದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಅವರು, ನಾನು ತುರ್ತು ಕೆಲಸಕ್ಕೆ ಬಂದಿದ್ದು ನಿಜ. ನಮ್ಮ ಯಾವ ನಿಲುವಿನಲ್ಲಿ ಒಗ್ಗಟ್ಟಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂತಿಮ ನಿರ್ಣಯಕ್ಕೆ ನಾವೆಲ್ಲರೂ ಬಾಧ್ಯಸ್ಥರು. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಧ್ಯಕ್ಷರಿಗೆ ಕೊಟ್ಟಿದ್ದೇವೆ ನಮ್ಮ ನಿರ್ಣಯವನ್ನು ಸ್ವೀಕರಿಸಬೇಕು ಎಂದು ಪ್ರಾರ್ಥನೆ ಮಾಡಿದ್ದೇವೆ. ಸೂಕ್ತ ನಿರ್ಣಯ ಸಿಗುತ್ತೆ ಎಂದು ನಂಬಿಕೊಂಡಿದ್ದೇವೆ. ಆ ನಿರ್ಣಯದ ನಂತರ ನಮ್ಮ ನಡೆ ಬಹಿರಂಗ ಮಾಡುತ್ತೇವೆ ಎಂದು ತಿಳಿಸಿದರು.
ಶಿವರಾಮ್ ಹೆಬ್ಬಾರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅತೃಪ್ತ ಶಾಸಕರ ಹಿಂದೆ ಸಿದ್ದರಾಮಯ್ಯ ಅವರು ಇದ್ದರಾ ಎಂಬ ಪ್ರಶ್ನೆ ಮೂಡಿದೆ. ಆದರೆ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅತೃಪ್ತ ಶಾಸಕರನ್ನ ಸೇರಿಸಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ದಿಕ್ಕು ತಪ್ಪಿಸಲು ಶಿವರಾಮ್ ಹೆಬ್ಬಾರ್ ಈ ಹೇಳಿಕೆ ನೀಡಿದ್ದಾರಾ ಎಂಬ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ವಿಶ್ವಾಸ ಮತಯಾಚನೆಯ ವೇಳೆ ಮಾತನಾಡಿದ್ದ ಸಿದ್ದರಾಮಯ್ಯ, ಈ ಹೊಲಸು ರಾಜಕೀಯ ಬೆಳವಣಿಗೆಗಳ ಹಿಂದೆ ಬಿಜೆಪಿ ಪಕ್ಷ ಇದೆ ಎಂಬುದು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿದೆ. ರಾಜ್ಯದ ಮತದಾರರು ಮೂರ್ಖರಲ್ಲ. ಇದಕ್ಕೆ ಮುಂದಿನ ಚುನಾವಣೆಗಳು ತಕ್ಕ ಪಾಠ ಕಲಿಸಲಿವೆ. ಅಧಿಕಾರದಾಸೆಗೆ ಶಾಸಕರನ್ನು ಖರೀದಿಸಿ, ಇದ್ದ ಸರ್ಕಾರವನ್ನು ಅಸ್ಥಿರಗೊಳಿಸಿ ಜನರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರ ರಚಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.
ಇಂದಿನ ಹದಗೆಟ್ಟ ರಾಜಕೀಯ ಪರಿಸ್ಥಿತಿಗೂ ನಮಗೂ ಸಂಬಂಧವೇ ಇಲ್ಲ ಎಂದು ಬಿಜೆಪಿಯವರು ನಾಟಕ ಮಾಡುತ್ತಿದ್ದಾರೆ. ಇದೊಂದು ರೀತಿ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ತಿಳಿಯದು ಎಂಬಂತಿದೆ. ಮುಂದೆ ಬಿಜೆಪಿ ಸರ್ಕಾರ ಬಂದು ಈಗ ಪಕ್ಷಾಂತರ ಮಾಡಿದವರೆಲ್ಲ ಬಿಜೆಪಿಯಲ್ಲಿ ಮಂತ್ರಿಗಳಾದರೆ ಜಗತ್ತಿಗೆ ಇವರ ಕುತಂತ್ರ ತಿಳಿಯುವುದಿಲ್ಲವೇ? ನಮಗೆ ದ್ರೋಹ ಬಗೆದು ಪಕ್ಷವನ್ನು ಬಿಟ್ಟು ಯಾರು ಬಿಜೆಪಿ ಜತೆ ಹೋಗಿದ್ದಾರೋ, ಅವರನ್ನು ಪ್ರಳಯವಾದರೂ ಮತ್ತೆ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದಿದ್ದರು.
ಕಾರವಾರ: ದಿಢೀರ್ ಬೆಳವಣಿಗೆಗಳ ನಡುವೆ ಮುಂಬೈನಿಂದ ಕ್ಷೇತ್ರಕ್ಕೆ ಆಗಮಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಂಡಾಯ ಶಾಸಕ ಶಿವರಾಮ್ ಹೆಬ್ಬಾರ್ ರಾತ್ರೋ ರಾತ್ರಿ ಮತ್ತೆ ಮುಂಬೈಗೆ ಮರಳಿದ್ದಾರೆ.
ತುರ್ತು ಕೆಲಸ ನಿಮಿತ್ತ ಕ್ಷೇತ್ರಕ್ಕೆ ಆಗಮಿಸಿದ್ದ ಶಿವರಾಮ್ ಹೆಬ್ಬಾರ್ ಅವರು ಯಲ್ಲಾಪುರದಲ್ಲಿರುವ ಮನೆಗೆ ಮಾಧ್ಯಮಗಳು ಬರದಂತೆ ನಿರ್ಬಂಧ ಹೇರಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಸೇರುವ ಕುರಿತು ಕುಟುಂಬದವರೊಂದಿಗೆ ಹಾಗೂ ಆಪ್ತರೊಂದಿಗೆ ಚರ್ಚೆ ನಡೆಸಿದ್ದರು ಎನ್ನಲಾಗಿತ್ತು.
ಶಾಸಕರು ಸ್ವಗೃಹಕ್ಕೆ ಮರಳಿರುವ ಕುರಿತು ವರದಿ ಪ್ರಸಾರವಾಗುತ್ತಿದ್ದಂತೆ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ನೀಡಿ, ನಾನು ತುರ್ತು ಕೆಲಸಕ್ಕೆ ಬಂದಿದ್ದು ನಿಜ. ನಮ್ಮ ಯಾವ ನಿಲುವಿನಲ್ಲಿ ಒಗ್ಗಟ್ಟಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂತಿಮ ನಿರ್ಣಯಕ್ಕೆ ನಾವೆಲ್ಲರೂ ಬಾಧ್ಯಸ್ಥರು. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಧ್ಯಕ್ಷರಿಗೆ ಕೊಟ್ಟಿದ್ದೇವೆ ನಮ್ಮ ನಿರ್ಣಯವನ್ನು ಸ್ವೀಕರಿಸಬೇಕು ಎಂದು ಪ್ರಾರ್ಥನೆ ಮಾಡಿದ್ದೇವೆ. ಸೂಕ್ತ ನಿರ್ಣಯ ಸಿಗುತ್ತೆ ಎಂದು ನಂಬಿಕೊಂಡಿದ್ದೇವೆ. ಆ ನಿರ್ಣಯದ ನಂತರ ನಮ್ಮ ನಡೆ ಬಹಿರಂಗ ಮಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಸೇರುವ ಕುರಿತು ನಮ್ಮ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸೇರುವ ವದಂತಿ ಬಗ್ಗೆ ಈಗ ಉತ್ತರ ಕೊಡುವುದಿಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ ಅದರ ನಿರ್ಣಯದ ನಂತರ ನಮ್ಮ ನಡೆ ನಿರ್ಧರಿಸುತ್ತೇವೆ ಎಂದು ತಿಳಿಸಿದರು.
ದೋಸ್ತಿ ಸರ್ಕಾರ ಉರುಳಿದರೂ ಮಹಾರಾಷ್ಟ್ರ ಸೇರಿದ್ದ ಅತೃಪ್ತ ಶಾಸಕರು ಮಾತ್ರ ಸದ್ಯಕ್ಕೆ ವಾಪಸ್ ಬರುವ ನಿರ್ಧಾರವನ್ನು ಮಾಡಿಲ್ಲ. ಸ್ಪೀಕರ್ ಅವರ ಎದುರು ಇರುವ ಅನರ್ಹತೆ ಪ್ರಕರಣಗಳನ್ನು ಅವರು ಇನ್ನೂ ಇತ್ಯರ್ಥ ಮಾಡಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ರಾಜ್ಯಕ್ಕೆ ಬಂದರೆ ಕೈ ನಾಯಕರ ಒತ್ತಡಕ್ಕೆ ಸಿಲುಕಬಹುದು ಎಂಬ ಭಯ ಅತೃಪ್ತರನ್ನು ಕಾಡುತ್ತಿದೆ. ಹೀಗಾಗಿ ಅತೃಪ್ತರು ಪುಣೆ ರೆಸಾರ್ಟಿನಲ್ಲಿಯೇ ಇರಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಪುಣೆ: ಬ್ಲೂವೇಲ್ ರೀತಿಯ ಆನ್‍ಲೈನ್ ಗೇಮ್‍ನಲ್ಲಿನ ಟಾಸ್ಕನ್ನು ಪೂರ್ಣಗೊಳಿಸಲು ಹೋಗಿ 20 ವರ್ಷದ ಯವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಈ ಘಟನೆ ಬುಧವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನೇಣು ಬಿಗಿದುಕೊಂಡು ಸಾವನ್ನಪ್ಪಿದ ಯುವಕನನ್ನು ಲೋನಿಖಂಡ್ ನಗರ ಪ್ರದೇಶದ ವಾಣಿಜ್ಯ ವಿಭಾಗದ ವಿದ್ಯಾರ್ಥಿ ದಿವಾಕರ್ ಮಾಲಿ ಎಂದು ಗುರುತಿಸಲಾಗಿದೆ.
ನೇಣು ಹಾಕಿಕೊಳ್ಳುವ ಮುಂಚೆ ದಿವಾಕರ್ ಮಾಲಿ ಪತ್ರ ಬರೆದಿದ್ದು, ಅದರಲ್ಲಿ ಪಂಜರದಲ್ಲಿದ್ದ ಬ್ಲ್ಯಾಕ್ ಪ್ಯಾಂಥರ್ (ಕರಿ ಚಿರತೆ) ಈಗ ಸ್ವತಂತ್ರವಾಗಿದೆ. ಈಗ ಅದರ ಮುಂದೆ ಯಾವುದೇ ನಿರ್ಬಂಧಗಳು ಇಲ್ಲ. ಇದು ಅಂತ್ಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ, ಮಾಲಿ ಪತ್ರದಲ್ಲಿ ತನ್ನನ್ನು ತಾನು ಬ್ಲ್ಯಾಕ್ ಪ್ಯಾಂಥರ್ ಎಂದು ಹೇಳಿಕೊಂಡಿದ್ದಾನೆ. ಆದ್ದರಿಂದ ಇದು ಯಾವುದೋ ರೀತಿಯ ಆನ್‍ಲೈನ್ ಗೇಮ್ ಆಡಲು ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಮತ್ತು ಅವನು ಬರೆದ ಪತ್ರ ಇಂಗ್ಲಿಷ್ ಹಾಗೂ ಮರಾಠಿ ಭಾಷೆಯಲ್ಲಿ ಇದ್ದು ಅದರ ಮೇಲೆ ಬ್ಲ್ಯಾಕ್ ಪ್ಯಾಂಥರ್ ಚಿತ್ರ ಬಿಡಿಸಿ ಸೂರ್ಯ ಮತ್ತೆ ಹೊಳೆಯುತ್ತಾನೆ ಎಂದು ಬರೆದಿದ್ದಾನೆ ಎಂದು ಹೇಳಿದ್ದಾರೆ.
ಮಾಲಿ ಮನೆಯವರು ಮತ್ತು ನೆರೆಹೊರೆಯವರು ಹೇಳುವ ಪ್ರಕಾರ, ಅವನು ಬ್ಲೂವೇಲ್ ರೀತಿಯ ಆನ್‍ಲೈನ್ ಗೇಮ್‍ನಲ್ಲಿ ಬರುವ ಟಾಸ್ಕನ್ನು ಮಾಡಲು ಹೋಗಿ ತನ್ನ ಜೀವನವನ್ನು ಕಳೆದುಕೊಂಡ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಮಾಲಿ ತಾಯಿ, ಎಲ್ಲ ಪೋಷಕರು ತಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದಕ್ಕೆ ನಿರ್ಬಂಧ ಹೇರಬೇಕೆಂದು ನಾನು ಮನವಿ ಮಾಡುತ್ತೇನೆ. ನಾನು ನನ್ನ ಮಗನನ್ನು ಕಳೆದುಕೊಂಡೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಬ್ಲೂವೇಲ್ ಚಾಲೆಂಜ್ ಎಂಬುದು ಒಂದು ಆನ್‍ಲೈನ್ ಆಟವಾಗಿದ್ದು, ಇದನ್ನು ಆಡುವವರಿಗೆ ಈ ಗೇಮ್ ಮೂಲಕವೇ ಟಾಸ್ಕ್ ಗಳನ್ನು ನೀಡಲಾಗುತ್ತದೆ. ಆಡುವವರು ಅದನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಇದರಲ್ಲಿ ತನ್ನ ಮೇಲೆ ತಾನೇ ಹಲ್ಲೆ ಮಾಡಿಕೊಳ್ಳುವ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ಗಳನ್ನು ನೀಡಲಾಗುತ್ತದೆ.
ಪುಣೆ: ಬಾವಿಯಲ್ಲಿ ಬಿದ್ದು ಮೇಲೆ ಹತ್ತಲು ಸಾಧ್ಯವಾಗದೆ ಒದ್ದಾಡುತ್ತಿದ್ದ 4 ವರ್ಷದ ಗಂಡು ಚಿರತೆಯನ್ನು ರಕ್ಷಿಸುವಲ್ಲಿ ವೈಲ್ಡ್ ಲೈಫ್ ಎಸ್‍ಓಎಸ್ ಹಾಗೂ ಶಿರೂರ್ ರೇಂಜ್ ರಕ್ಷಣಾ ತಂಡ ಯಶಸ್ವಿಯಾಗಿದ್ದು, ವಿಡಿಯೋ ವೈರಲ್ ಆಗಿದೆ.
#WATCH: A leopard was rescued, today, by Shirur Range Rescue team and Wildlife SOS, from a well in Fakte village of Shirur Taluka, Pune. The leopard was later shifted to Manikdoh Leopard Rescue Centre in Junnar, for treatment. #Maharashtrapic.twitter.com/SkqjUY79mj
ಶಿರೂರ್ ತಾಲೂಕಿನ ಫಕ್ಟೆ ಎಂಬ ಗ್ರಾಮದಲ್ಲಿ ಬಾವಿಯೊಂದಕ್ಕೆ ಚಿರತೆ ಆಕಸ್ಮಿಕವಾಗಿ ಬಿದ್ದಿತ್ತು. ಶಿರೂರ್ ರೇಂಜ್‍ನ ರಕ್ಷಣಾ ತಂಡದ ಸ್ವಯಂ ಸೇವಕ ವಿಟಲ್ ಬಾಬುರಾವ್ ಬುಜ್ಬಲ್ ಮಾಹಿತಿ ನೀಡಿದ ನಂತರ ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ ರಕ್ಷಿಸಿವೆ.
ರೇಂಜ್ ಫಾರೆಸ್ಟ್ ಆಫೀಸರ್ ಮನೋಹರ್ ರಾಮ್‍ದೇವ್, ಮಾಣಿಕ್‍ದೋ ಚಿರತೆ ರಕ್ಷಣಾ ಕೇಂದ್ರದ ಪಶು ವೈದ್ಯಾಧಿಕಾರಿ, ಡಾ.ಅಜಯ್ ದೇಶಮುಖ್, ಅವರ ನೇತೃತ್ವದಲ್ಲಿ ಚಿರತೆಯನ್ನು ರಕ್ಷಿಸಲಾಗಿದೆ.
ರಕ್ಷಣೆಯ ನಂತರ ಚಿರತೆಯನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಮಾಣಿಕ್‍ದೋ ಚಿರತೆ ರಕ್ಷಣಾ ಕೇಂದ್ರಕ್ಕೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಿರತೆ ರಕ್ಷಣೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುಣೆ: ಭಾರೀ ಮಳೆಯಿಂದಾಗಿ ವಸತಿ ಕಟ್ಟಡದ ಗೋಡೆ ಕುಸಿದು ಬಿದ್ದ ಪರಿಣಾಮ 15 ಮಂದಿ ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಈ ದುರ್ಘಟನೆ ಇಂದು ಮುಂಜಾನೆ ಪುಣೆಯ ಕೊಂಧ್ವಾ ಪ್ರದೇಶದಲ್ಲಿ ಸಂಭವಿಸಿದೆ. ನಾಲ್ವರು ಮಕ್ಕಳು, ಓರ್ವ ಮಹಿಳೆ ಸೇರಿದಂತೆ 15 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಅನೇಕ ಕಾರುಗಳು ಸಹ ಜಖಂ ಆಗಿವೆ. ಅಪಾರ್ಟ್ ಮೆಂಟ್‍ನ ಪಕ್ಕದಲ್ಲಿ ಟಿನ್ ಶೆಡ್‍ಗಳ ಮೇಲೆ ಗೋಡೆ ಕುಸಿದ ಪರಿಣಾಮ ಪಾರ್ಕಿಂಗ್ ಲಾಟ್ ನಲ್ಲಿ ನಿಲ್ಲಿಸಿದ ಕಾರುಗಳು ಕುಸಿದ ಗೋಡೆಗಳ ಅವಶೇಷಗಳಡಿ ಸಿಕ್ಕಿ ಜಖಂ ಆಗಿವೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್) ಮತ್ತು ಅಗ್ನಿಶಾಮಕ ಇಲಾಖೆಯ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಗೋಡೆ ಕೆಳಗೆ ಸಿಲುಕಿಕೊಂಡಿರುವ ಜನರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ಮಾಡುತ್ತಿದ್ದಾರೆ. ಈ ಗೋಡೆ ಮುಂಜಾನೆ 1.45ಕ್ಕೆ ಕುಸಿದಿದ್ದು, ಈ ದುರಂತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರೀ ಮಳೆಯದಿಂದಾಗಿ ಗೋಡೆ ಕುಸಿದಿದೆ. ಆದರೂ ನಮ್ಮ ತಂಡವು ಗೋಡೆ ಕುಸಿತಕ್ಕೆ ನಿಖರ ಕಾರಣದ ಬಗ್ಗೆ ತನಿಖೆ ನಡೆಸುತ್ತಿದೆ. ಈ ಘಟನೆಗೆ ಯಾರು ಜವಾಬ್ದಾರರಾಗಿರುತ್ತಾರೋ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮುಖ್ಯಸ್ಥ ಕೆ.ವೆಂಕಟೇಶಮ್ ತಿಳಿಸಿದರು.
ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗಾಗಿ ಆ ಶೆಡ್‍ಗಳನ್ನು ನಿರ್ಮಿಸಲಾಗಿತ್ತು. ವಸತಿ ಕಟ್ಟಡ ಕುಸಿದಾಗ ಗೋಡೆಯ ಭಗ್ನಾವಶೇಷಗಳು ಆ ಶೆಡ್‍ಗಳ ಮೇಲೆ ಬಿದ್ದಿವೆ. ಮಾಹಿತಿ ತಿಳಿದು ಅಗ್ನಿಶಾಮಕ ಇಲಾಖೆ, ಪುಣೆ ಪೊಲೀಸ್ ಮತ್ತು ಎನ್‌ಡಿಆರ್‌ಎಫ್ ಸ್ಥಳಕ್ಕೆ ಬಂದು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ ಎಂದು ಎನ್‌ಡಿಆರ್‌ಎಫ್ ಅಧಿಕಾರಿ ಸದಾನಂದ್ ಗಾವ್ಡೆ ಹೇಳಿದ್ದಾರೆ.
ಪುಣೆಯಲ್ಲಿ ಶುಕ್ರವಾರ ಭಾರೀ ಮಳೆಯಾಗಿದ್ದು, ಗುರುವಾರದಿಂದಲೇ ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 73.1 ಮಿಲಿಮೀಟರ್ ಮಳೆಯಾಗಿದೆ. ಇದು 2010 ರಿಂದ ಜೂನ್ ಬಳಿಕ ಅತಿ ಹೆಚ್ಚು ಪ್ರಮಾಣದ ಮಳೆ ಎಂದು ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಶುಕ್ರವಾರ ಮಳೆ ಸಂಬಂಧಿತ ಘಟನೆಯಿಂದ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಐದು ಮಂದಿ ಗಾಯಗೊಂಡಿದ್ದಾರೆ.
ಇಂದು ಮುಂಜಾನೆ ಮುಂಬೈನ ಚೆಂಬೂರಿನಲ್ಲೂ ಗೋಡೆ ಕುಸಿದಿರುವ ಮೊತ್ತೊಂದು ಘಟನೆ ನಡೆದಿದೆ. ಪಾರ್ಕಿಂಗ್ ಮಾಡಿದ್ದ ಆಟೋರಿಕ್ಷಾದ ಮೇಲೆ ಗೋಡೆ ಕುಸಿದಿದೆ. ಸದ್ಯಕ್ಕೆ ಅಗ್ನಿಶಾಮಕ ದಳ ಸ್ಥಳಕ್ಕೆ ಹೋಗಿ ರಕ್ಷಣಾ ಕಾರ್ಯವನ್ನು ಮಾಡುತ್ತಿದೆ.
Pune police commissioner K Venkatesham on wall collapse in Kondhwa: Our team is investigating the reasons behind the incident. Firm action will be taken against those responsible. We will check whether proper permissions were taken and safety measures were followed. #Punepic.twitter.com/bdl0RLi1Nu
ಪುಣೆ: ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಏಳು ಚಿನ್ನದ ಪದಕ ಗೆದ್ದಿದ್ದ 21 ವರ್ಷದ ಈಜುಪಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಸಾಹಿಲ್ ಜೋಶಿ(21) ಅತ್ಮಹತ್ಯೆ ಮಾಡಿಕೊಂಡ ಈಜುಪಟು. ಕೋಥ್ರೂಡ್ ಪ್ರದೇಶದ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪೋಷಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಸೀಲಿಂಗ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಹಿಲ್ ತಂದೆ ತನ್ನ ಮಗನಿಗೆ ಆಫೀಸ್‍ನಿಂದ ಕರೆ ಮಾಡಿದ್ದಾರೆ ಸಾಕಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸದ ಹಿನ್ನೆಲೆಯಲ್ಲಿ ತಂದೆ ಮನೆಗೆ ಬಂದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ರೀತಿಯ ಡೆತ್ ನೋಟ್ ಸಿಕಿಲ್ಲ. ಯಾವುದೋ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಎಂಬಿಬಿಎಸ್ ಓದುತ್ತಿದ್ದ ಜೋಶಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಆದ್ದರಿಂದ ನಾವು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಜೋಶಿ ಅವರ ಕೋಚ್ ಮನೋಜ್ ಎರಾಂಡೆ, ಜೋಶಿ ಅತ್ಯಂತ ಪ್ರತಿಭಾವಂತ ಈಜುಗಾರನಾಗಿದ್ದ. ಅವನು ರಾಷ್ಟ್ರೀಯ ಮಟ್ಟದಲ್ಲಿ 9 ಸ್ಪರ್ಧೆಗಳಲ್ಲಿ ಭಾಗವಹಿಸಿ 7 ಚಿನ್ನದ ಪದಕ ಗೆದ್ದಿದ್ದಾನೆ. ಅವನ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ ಎಂದು ಹೇಳಿದ್ದಾರೆ.
ಪುಣೆ: ಹುಂಜದ ಕಾಟಕ್ಕೆ ಬೇಸತ್ತ ಮಹಿಳೆಯೊಬ್ಬಳು ಅದರ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸರ ಮೊರೆ ಹೋಗಿರುವ ವಿಚಿತ್ರ ಘಟನೆ ಪುಣೆಯಲ್ಲಿ ನಡೆದಿದೆ.
ಹೌದು. ವಿಚಿತ್ರ ಎನಿಸಿದರೂ ಇದು ನಿಜ. ಹುಂಜ ಕಾಟ ಕೊಡುತ್ತಿದೆ ಎಂದು ಪೊಲೀಸ್ ಠಾಣೆಗೆ ಬಂದ ಮಹಿಳೆ, ಹುಂಜ ಹಾಗೂ ಅದರ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾಳೆ.
ಪ್ರತಿದಿನ ಮನೆ ಮುಂದೆ ಬಂದು ಹುಂಜ ಕೂಗಿ ನನ್ನ ನಿದ್ರೆಯನ್ನು ಹಾಳು ಮಾಡುತ್ತಿದೆ. ಒಂದು, ಎರಡು ದಿನವಾದರೆ ಹೇಗೋ ಹುಂಜದ ಕಾಟ ತಡೆದುಕೊಳ್ಳಬಹುದಾಗಿತ್ತು. ಆದರೆ ಇದು ದಿನಾಲೂ ನನಗೆ ಕಾಟ ಕೊಡುತ್ತೆ. ಇದರಿಂದ ನನ್ನ ನಿದ್ರೆ ಹಾಳಾಗುತ್ತಿದೆ ಎಂದು ಮಹಿಳೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ.
ದೂರು ನೀಡಿದ್ದ ಮಹಿಳೆ, ಸಹೋದರಿ ಮನೆಗೆ ಉಳಿಯಲು ಬಂದಾಗ ಈ ಘಟನೆ ನಡೆದಿದೆ. ಸ್ವಲ್ಪ ದಿನ ಸಹೋದರಿ ಮನೆಯಲ್ಲಿದ್ದ ಮಹಿಳೆ ಈಗ ತನ್ನ ಊರಿಗೆ ವಾಪಸ್ ಆಗಿದ್ದಾಳೆ. ಆದರೆ ಮಹಿಳೆ ದೂರಿನ ಆಧಾರದ ಮೇಲೆ ಪೊಲೀಸರು ಸಹೋದರಿ ಮನೆಗೆ ವಿಚಾರಣೆಗೆ ಹೋದಾಗ, ಮಹಿಳೆ ವಿಲಕ್ಷಣ ಸ್ವಭಾವದವಳು. ಹಾಗಾಗಿ ವಿಚಾರಣೆ ಬೇಡವೆಂದು ಸಹೋದರಿ ಪೊಲೀಸರಿಗೆ ಹೇಳಿದ್ದಾಳೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.