Tag: ಪುಣೆ

  • ತವರು ಮನೆ ಸೇರಿದ್ದ ಪತ್ನಿಗಾಗಿ ಮಗನನ್ನೇ ಕಿಡ್ನಾಪ್ ಮಾಡಿದ!

    ತವರು ಮನೆ ಸೇರಿದ್ದ ಪತ್ನಿಗಾಗಿ ಮಗನನ್ನೇ ಕಿಡ್ನಾಪ್ ಮಾಡಿದ!

    – ಸ್ನೇಹಿತರ ಸಹಾಯ ಪಡೆದು ಅಪಹರಣ
    – ಬಾಲಕನನ್ನು ತಾಯಿಗೆ ಒಪ್ಪಿಸಿದ ಪೊಲೀಸರು

    ಪುಣೆ: ಮಕ್ಕಳನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನೊಂದಿಗೆ ಮುನಿಸಿಕೊಂಡು ಪತ್ನಿ ತವರು ಮನೆ ಸೇರಿದ್ದಕ್ಕಾಗಿ ಮಗನನ್ನೇ ಕಿಡ್ನಾಪ್ ಮಾಡಿರುವ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಸೊಲ್ಹಾಪುರ ಮೂಲದ 30 ವರ್ಷದ ವ್ಯಕ್ತಿ, ಆತನ 3 ವರ್ಷದ ಮಗನೊಂದಿಗೆ ಪಿಂಪ್ರಿ ಚಿಂಚ್ ವಾಡ್ ನಲ್ಲಿ ಪತ್ತೆಯಾಗಿದ್ದಾನೆ. ಸ್ವಂತ ಮಗನನ್ನೇ ಅಪಹರಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.

    ಪತ್ನಿ ಕೆಲವು ತಿಂಗಳ ಹಿಂದೆ ಆಕೆಯ ತವರು ಮನೆಗೆ ತೆರಳಿದ್ದು, ವಾಪಸ್ ಬಂದಿರಲಿಲ್ಲ. ಹೀಗಾಗಿ ಪತ್ನಿ ನೆನಪಲ್ಲೇ ಇದ್ದ ವ್ಯಕ್ತಿ ಆಕೆ ವಾಪಸ್ ಬರುವಂತೆ ಮಾಡಲು ತನ್ನ ಮಗನನ್ನೇ ಕಿಡ್ನಾಪ್ ಮಾಡುವ ಪ್ಲಾನ್ ಮಾಡಿ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿ ದ್ದಾನೆ. ಅಂತೆಯೇ ಬಾಲಕನನ್ನು ಅಪಹರಿಸುವ ಮೂಲಕ ಸ್ನೇಹಿತರು ವ್ಯಕ್ತಿಗೆ ಸಹಾಯ ಮಾಡಿದ್ದಾರೆ.

    ಇತ್ತ 3 ವರ್ಷದ ಪುಟ್ಟ ಕಂದಮ್ಮ ಎಲ್ಲೂ ಕಾಣಿಸದಿದ್ದಾಗ ಮಹಿಳೆಯ ತಾಯಿ, ಮೊಮ್ಮಗನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ದೂರಿನಲ್ಲಿ ಮಧ್ಯಾಹ್ನದ ವೇಳೆ ತನ್ನ ಮನೆಯ ಬಳಿ ಅಪರಿಚಿತ ವ್ಯಕ್ತಿಗಳು ಓಡಾಡಿದ್ದನ್ನು ನೋಡಿರುವುದಾಗಿ ಉಲ್ಲೇಖಿಸಿದ್ದಾರೆ.

    ದೂರು ಸ್ವೀಕರಿಸಿರುವ ಪೊಲೀಸರು ಮಗುವಿನ ಪತ್ತೆಗಾಗಿ ಬಲೆ ಬೀಸಿದರು. ಈ ವೇಳೆ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಿದ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಆರೋಪಿಗಳು ಮಗುವಿನ ತಂದೆಯ ಸ್ನೇಹಿತರು ಎಂಬುದಾಗಿ ತಿಳಿದುಬಂತು. ಅಲ್ಲದೆ ತನ್ನ ಸ್ನೇಹಿತನಿಗೆ ಸಹಾಯ ಮಾಡುವ ಸಲುವಾಗಿ ಬಾಲಕನನ್ನು ಕಿಡ್ನಾಪ್ ಮಾಡಿರುವುದಾಗಿ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾರೆ.

    ಘಟನೆ ಸಂಬಂಧ ಇಬ್ಬರನ್ನು ಬಂಧಿಸಿರುವ ಪೊಲೀಸರು ಮಗುವನ್ನು ತಾಯಿಗೆ ಒಪ್ಪಿಸಿದ್ದಾರೆ.

  • ಪುಣೆಯ ಅನಾಥಾಶ್ರಮದಿಂದ ಐಸಿಸಿ ಹಾಲ್ ಆಫ್ ಫೇಮ್‍ವರೆಗೆ- ಆಸೀಸ್ ಆಟಗಾರ್ತಿ ಲಿಸಾ ಸ್ಥಳೇಕರ್ ಜರ್ನಿ

    ಪುಣೆಯ ಅನಾಥಾಶ್ರಮದಿಂದ ಐಸಿಸಿ ಹಾಲ್ ಆಫ್ ಫೇಮ್‍ವರೆಗೆ- ಆಸೀಸ್ ಆಟಗಾರ್ತಿ ಲಿಸಾ ಸ್ಥಳೇಕರ್ ಜರ್ನಿ

    ಮೆಲ್ಬೊರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಲ್ ಆಫ್ ಫೇಮ್ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಅತ್ಯಂತ ಗೌರವದ ಸಾಧನೆಯಾಗಿದೆ.

    ಕ್ರಿಕೆಟ್‍ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮಂದಿಗೆ ಮಾತ್ರ ಈ ಗೌರವ ಪಡೆಯುವ ಅರ್ಹತೆ ಲಭಿಸುತ್ತದೆ. ಕಳೆದ ವಾರ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಸಾ ಸ್ಥಳೇಕರ್, ಪಾಕ್ ಮಾಜಿ ಆಟಗಾರ ಜಹೀರ್ ಅಬ್ಬಾಸ್, ದಕ್ಷಿಣ ಆಫ್ರಿಕಾ ಆಲ್‍ರೌಂಡರ್ ಜಾಕ್ ಕಾಲಿಸ್ ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿದೆ. ಲೀಸಾ ಸ್ಥಳೇಕರ್ ಈ ಪ್ರಶಸ್ತಿಯನ್ನು ಪಡೆದ 9ನೇ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಭಾರತದಲ್ಲಿ ಜನಿಸಿದ್ದ ಲಿಸಾ ಸ್ಥಳೇಕರ್ ಅವರನ್ನು ಆಸ್ಟ್ರೇಲಿಯಾದ ಹರೇನ್ ಮತ್ತು ಸ್ಯೂ ಸ್ಥಳೇಕರ್ ಅವರು ಪುಣೆಯ ಒಂದು ಅನಾಥ ಆಶ್ರಮದಲ್ಲಿ ದತ್ತು ಪಡೆದ ಸಂದರ್ಭದಲ್ಲಿ ಆಕೆಗೆ ಕೇವಲ ಮೂರು ವಾರ ವಯಸ್ಸಾಗಿತ್ತು. ಬಳಿಕ ಆಸ್ಟ್ರೇಲಿಯಾಗೆ ಲಿಸಾ ಪೋಷಕರು ಕರೆದುಕೊಂಡು ಹೋಗಿದ್ದರು. ಇತ್ತೀಚೆಗೆ ತಮ್ಮ ತಂದೆಗೆ ಬಗ್ಗೆ ಮಾತನಾಡಿದ್ದ ಸ್ಥಳೇಕರ್, ನನ್ನ ತಂದೆಗೆ ಕ್ರಿಕೆಟ್ ಎಂದರೇ ತುಂಬಾ ಇಷ್ಟ. ಆದ್ದರಿಂದ ನಾನು ಕ್ರಿಕೆಟ್ ಆಡುತ್ತಿದ್ದೆ. 8-9 ವಯಸ್ಸಿನ ವೇಳೆಗೆ ಕ್ರಿಕೆಟನ್ನು ಪೂರ್ತಿಯಾಗಿ ಇಷ್ಟಪಟ್ಟಿದೆ ಎಂದು ತಿಳಿಸಿದ್ದರು.

    1990ರಲ್ಲಿ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಲೀಗ್ ಮೂಲಕ ಪಾದಾರ್ಪಣೆ ಮಾಡಿ ಸುದೀರ್ಘ ಕಾಲ ಕ್ರಿಕೆಟ್ ಆಡಿದ್ದ ಸ್ಥಳೇಕರ್, ಆಸೀಸ್ ಪರ ನಾಲ್ಕು ವಿಶ್ವಕಪ್‍ಗಳನ್ನು ಆಡಿದ್ದಾರೆ. ಆಸೀಸ್ ಪರ 8 ಟೆಸ್ಟ್, 125 ಏಕದಿನ, 54 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ 1 ಸಾವಿರ ರನ್ ಹಾಗೂ 100 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಕ್ರಿಕೆಟ್ ನಿವೃತ್ತಿ ಹೇಳಿದ ಬಳಿಕ ಕ್ರಿಕೆಟ್ ವಿಶ್ಲೇಷಣೆ, ಕೋಚ್, ಕ್ರಿಕೆಟ್ ಅಸೋಸಿಶಿಯೇಷನ್ ಸದಸ್ಯರಾಗಿ ಕ್ರಿಕೆಟ್ ಸೇವೆಯನ್ನು ಮುಂದುವರಿಸಿದ್ದಾರೆ.

    ಕ್ರಿಕೆಟ್‍ನಲ್ಲಿ ಮಾತ್ರವಲ್ಲದೇ ಮೈದಾನದ ಹೊರಗೂ ಸ್ಥಳೇಕರ್ ಅನೇಕ ಮೈಲಿಗಲ್ಲುಗಳಿಗೆ ಕಾರಣರಾಗಿದ್ದು, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ ಸ್ಥಾನ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  • ಅಯೋಧ್ಯೆಯಲ್ಲಿ ರಾಮ-ಲಕ್ಷ್ಮಣ ವಿಗ್ರಹಕ್ಕೆ ಮೀಸೆ ಬೇಕೇ ಬೇಕು: ಸಂಭಾಜಿ ಭಿಡೆ

    ಅಯೋಧ್ಯೆಯಲ್ಲಿ ರಾಮ-ಲಕ್ಷ್ಮಣ ವಿಗ್ರಹಕ್ಕೆ ಮೀಸೆ ಬೇಕೇ ಬೇಕು: ಸಂಭಾಜಿ ಭಿಡೆ

    ಪುಣೆ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡುವ ರಾಮ-ಲಕ್ಷ್ಮಣನ ವಿಗ್ರಹಕ್ಕೆ ಮೀಸೆ ಬೇಕು ಎಂದು ಹಿಂದುತ್ವ ಪ್ರತಿಪಾದಕ ಸಂಭಾಜಿ ಭಿಡೆ ಆಗ್ರಹಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಬುಧವಾರ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ನಡೆಯಲಿದೆ. ಭೂಮಿ ಪೂಜೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ಹನುಮಂತನ ದೇವಾಲಯಕ್ಕೆ ತೆರಳಿ ಆಂಜನೇಯನಿಗೆ ಪೂಜೆ ಮಾಡಲಿದ್ದಾರೆ.

    ಈ ಸಂಬಂಧ ಈಗಾಗಲೇ ಶ್ರೀರಾಮಂದಿರ ಟ್ರಸ್ಟ್ ನ ಗೋವಿಂದಗಿರಿ ಜೀ ಮಹಾರಾಜ್ ಜೊತೆ ಮಾತನಾಡಿ, ನೀವು ಸ್ಥಾಪಿಸುವ ರಾಮ ಹಾಗೂ ಲಕ್ಷ್ಣಣ ಪ್ರತಿಮೆಗಳಿಗೆ ಮೀಸೆ ಇರಬೇಕು. ಒಂದು ವೇಳೆ ನೀವು ರಾಮ-ಲಕ್ಷ್ಮಣ ವಿಗ್ರಹಗಳಿಗೆ ಮೀಸೆ ಇಟ್ಟಿಲ್ಲವೆಂದರೆ, ನನ್ನಂತಹ ಭಕ್ತರಿಗೆ ದೇವಾಲಯ ನಿರ್ಮಿಸಿದರೂ ಪ್ರಯೋಜನವಿಲ್ಲದಂತಾಗುತ್ತದೆ ಎಂದಿದ್ದಾರೆ.

    ಶ್ರೀರಾಮಮಂದಿರಕ್ಕೆ ಭೂಮಿಪೂಜೆ ಮಾಡುವ ಮೊದಲು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಆಗಸ್ಟ್ 5ರಂದು ನಡೆಯುವ ಕಾರ್ಯವನ್ನು ದಸರಾ, ದೀಪಾವಳಿ ಹಬ್ಬಗಳಂತೆ ಆಚರಿಸೋಣ ಎಂದು ಇದೇ ವೇಳೆ ಭಿಡೆ ಕರೆ ನೀಡಿದರು. ಇದನ್ನೂ ಓದಿ: ಭೂಮಿ ಪೂಜೆಯಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ- ಟ್ರಸ್ಟ್ ಮನವಿ

    ಮಧ್ಯಾಹ್ನ 12.15ಕ್ಕೆ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. 25 ನಿಮಿಷಗಳ ಕಾಲ ನಡೆಯಲಿರುವ ಪೂಜೆ ನಡೆಯಲಿದ್ದು, ಭೂಮಿ ಪೂಜೆ ಬಳಿಕ 45 ನಿಮಿಷ ಮೋದಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಸರಯೂ ನದಿ ಬಳಿ ಮೋದಿ ತೆರಳಲಿದ್ದಾರೆ. ಒಟ್ಟು 2 ಗಂಟೆ 15 ನಿಮಿಷಕ್ಕೂ ಅಧಿಕ ಕಾಲ ಅಯೋಧ್ಯೆಯಲ್ಲಿ ಮೋದಿ ಇರಲಿದ್ದಾರೆ.

  • ಕೊರೊನಾ ಗೆದ್ದ ಸಹೋದರಿಯನ್ನು ಭರ್ಜರಿಯಾಗಿ ಸ್ವಾಗತಿಸಿದ ಯುವತಿ- ವಿಡಿಯೋ ವೈರಲ್

    ಕೊರೊನಾ ಗೆದ್ದ ಸಹೋದರಿಯನ್ನು ಭರ್ಜರಿಯಾಗಿ ಸ್ವಾಗತಿಸಿದ ಯುವತಿ- ವಿಡಿಯೋ ವೈರಲ್

    – ಯುವತಿಯ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ

    ಪುಣೆ: ಮಹಾಮಾರಿ ಕೊರೊನಾ ವೈರಸ್ ಗೆದ್ದವರ ಮೇಲೆ ಹೂಮಳೆ ಸುರಿಸಿ ಆತ್ಮೀಯವಾಗಿ ಸ್ವಾಗತಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಯುವತಿ ಚೀನಿ ವೈರಸ್ ಗೆದ್ದು ಬಂದ ತನ್ನ ಸಹೋದರಿಯನ್ನು ವಿಭಿನ್ನವಾಗಿ ಸ್ವಾಗತಿಸುವ ಮೂಲಕ ಸಖತ್ ಸುದ್ದಿಯಾಗಿದ್ದಾಳೆ.

    ಹೌದು. ಪುಣೆ ಮೂಲದ ಸಲೋನಿ ಸತ್ಪೂಟ್ ಎಂಬ ಯುವತಿ ತನ್ನ ಸಹೋದರಿಯನ್ನು ಹಿಂದಿಯ ಚಿಲ್ಲರ್ ಪಾರ್ಟಿ ಸಿನಿಮಾದ ಹಾಡಿಗೆ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದ್ದಾಳೆ. ಯುವತಿ ಡ್ಯಾನ್ಸ್ ಮಾಡುವ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ಏನಿದೆ?
    ತನ್ನ ಸಹೋದರಿ ಚೀನೀ ವೈರಸ್ ಕೋವಿಡ್ 19 ನಿಂದ ಗುಣಮುಖರಾಗಿ ಮನೆಗೆ ವಾಪಸ್ ಆಗುತ್ತಿದ್ದಾರೆ. ಈ ವೇಳೆ ಸಲೋನಿ ಸಖತ್ ಸ್ಟೆಪ್ಸ್ ಹಾಕಿ ಸ್ವಾಗತಿಸಿದ್ದಾರೆ. ಈ ವೇಳೆ ಗುಣಮುಖರಾದವರು ಕೂಡ ಸಲೋನಿಗೆ ಸಾಥ್ ನೀಡಿದ್ದು, ಇಬ್ಬರೂ ಸಖತ್ತಾಗಿ ಡ್ಯಾನ್ಸ್ ಮಾಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಇತ್ತೀಚೆಗೆ ಸಲೋನಿಯನ್ನು ಬಿಟ್ಟು ಆಕೆಯ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಬಂದಿತ್ತು. ಮೊದಲು ಸಲೋನಿ ತಂದೆಗೆ ಕೊರೊನಾ ಪಾಸಟಿವ್ ಬಂದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆ ಬಳಿಕ ಮನೆಯವರನ್ನು ಟೆಸ್ಟ್ ಗೆ ಕರೆದೊಯ್ಯಲಾಯಿತು. ಈ ವೇಳೆ ಮನೆಯ ನಾಲ್ವರಿಗೆ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಎಲ್ಲರನ್ನೂ ಆಸ್ಪತ್ರೆಯಲ್ಲಿ ದಾಖಲಿಸಿಲಾಯಿತು. ಇತ್ತ ಸಲೋನಿ ವರದಿ ಮಾತ್ರ ನೆಗೆಟಿವ್ ಎಂದು ಬಂದಿದ್ದು, ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು.

    ಈ ಮಧ್ಯೆ ಮೊದಲು ಸಲೋನಿ ತಂದೆ-ತಾಯಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದು, ಆ ನಂತರ ಕೆಲ ದಿನಗಳ ಬಳಿಕ ಸಹೋದರಿ ಕೊರೊನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಸಹೋದರಿ ಮನೆಗೆ ಪಾಸ್ಸಾಗುತ್ತಿದ್ದಂತೆಯೇ ಸಲೋನಿ ಸಖತ್ ಡ್ಯಾನ್ಸ್ ಮಾಡುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡಳು.

    ಸದ್ಯ ಸಲೋನಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈಕೆಯ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ತನ್ನ ಸಹೋದರಿಯ ಮೇಲೆ ಆಕೆಗಿರುವ ಪ್ರೀತಿಯನ್ನು ತೋರ್ಪಡಿಸಿದ್ದಾಳೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

  • ಲಾಕ್‍ಡೌನ್ ವೇಳೆ ಕಂಪನಿ ಹಣ ಬಳಸಿದ್ದನೆಂದು ಉದ್ಯೋಗಿಯ ಮರ್ಮಾಂಗಕ್ಕೆ ಸ್ಯಾನಿಟೈಸರ್ ಸುರಿದ್ರು!

    ಲಾಕ್‍ಡೌನ್ ವೇಳೆ ಕಂಪನಿ ಹಣ ಬಳಸಿದ್ದನೆಂದು ಉದ್ಯೋಗಿಯ ಮರ್ಮಾಂಗಕ್ಕೆ ಸ್ಯಾನಿಟೈಸರ್ ಸುರಿದ್ರು!

    ಪುಣೆ: ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲೆಂದು ಇಡೀ ದೇಶವನ್ನೇ ಹಲವು ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಲವರು ಸಿಲುಕಿಕೊಂಡು ಪರದಾಟ ಅನುಭವಿಸಿದ್ದರು. ಹಾಗೆಯೇ ಯುವಕನೊಬ್ಬ ಕೂಡ ದೆಹಲಿಯಲ್ಲಿ ಸಿಲುಕಿಕೊಂಡಿದ್ದನು. ಈ ವೇಳೆ ಈತ ಕಂಪನಿ ಹಣ ಬಳಕೆ ಮಾಡಿದ್ದನೆಂದು ಆರೋಪಿಸಿ ಆತನನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

    ಹೌದು. 30 ವರ್ಷದ ಯುವಕನನ್ನು ಕಂಪನಿ ಮಾಲೀಕ ಸೇರಿ ಮೂವರು ಅಪಹರಿಸಿದ್ದಲ್ಲದೇ ಆತನಿಗೆ ಚಿತ್ರಹಿಂಸೆ ಕೊಟ್ಟ ಘಟನೆ ಮಹಾರಾಷ್ಟ್ರದ ಕೊತ್ರುಡ್ ಎಂಬಲ್ಲಿ ನಡೆದಿದೆ. ಈ ಘಟನೆ ಜೂನ್ 13, 14ರಂದು ಸಂಸ್ಥೆಯ ಕಚೇರಿಯಲ್ಲಿಯೇ ನಡೆದಿದ್ದರೂ, ಜುಲೈ 2ರಂದು ಪೌಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಾರ್ಚ್ ತಿಂಗಳಲ್ಲಿ ಯುವಕ ಕಂಪನಿಗೆ ಸಂಬಂಧಿಸಿದ ಕೆಲಸದ ನಿಮಿತ್ತ ನವದೆಹಲಿಗೆ ತೆರಳಿದ್ದನು. ಈ ವೇಳೆ ಆತನಿಗೆ ಕಂಪನಿಯೇ ಅಲ್ಲಿ ಉಳಿದುಕೊಳ್ಳಲು ಹೋಟೆಲ್ ಒಂದನ್ನು ಬುಕ್ ಮಾಡಿಕೊಟ್ಟಿತ್ತು. ಆದರೆ ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಯುವಕ ದೆಹಲಿಯ ಅದೇ ಹೊಟೇಲಿನಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಯ್ತು. ಪರಿಣಾಮ ಕಂಪನಿ ಹಣದಲ್ಲಿಯೇ ಆತ ಲಾಕ್ ಡೌನ್ ಕಳೆದಿದ್ದಾನೆ.

    ಹೀಗೆ ಲಾಕ್ ಡೌನ್ ಮುಗಿದ ಬಳಿಕ ಅಂದರೆ ಮೇ 7ರಂದು ಯುವಕ ವಾಪಸ್ ಪುಣೆಗೆ ಬಂದಿದ್ದಾನೆ. ಈ ವೇಳೆ ಕಂಪನಿಯವರು ಆತನನ್ನು 17 ದಿನಗಳ ಕಾಲ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿತ್ತು. ಹೀಗಾಗಿ ಯುವಕ ಸ್ವಂತ ಹಣದಲ್ಲಿ ಹೋಟೆಲೊಂದರಲ್ಲಿ ಕ್ವಾರಂಟೈನ್ ಆಗಿದ್ದಾನೆ. ವಿಪರ್ಯಾಸ ಎಂದರೆ ಕ್ವಾರಂಟೈನ್ ಮಗಿಯುವುದರೊಳಗೆ ಯುವಕನ ಕೈಯಲ್ಲಿ ಹಣ ಖಾಲಿಯಾಗಿತ್ತು.

    ಇತ್ತ ಜೂನ್ 13ರಂದು ಯುವಕ ಕೆಲಸಕ್ಕೆ ಹಾಜರಾಗಿದ್ದಾನೆ. ಈ ವೇಳೆ ಸಿಟ್ಟಿಗೆದ್ದ ಕಂಪನಿ ಮಾಲೀಕ ಮತ್ತು ಇನ್ನಿಬ್ಬರು ಸೇರಿ ಆತನನ್ನು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಯುವಕನಿಗೆ ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೆ ಆತನ ಮರ್ಮಾಂಗಕ್ಕೆ ಸ್ಯಾನಿಟೈಸರ್ ಸುರಿದು ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಸದ್ಯ ಯುವಕ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ಮುಂದುವರಿದಿದ್ದು, ಇದೂವರೆಗೂ ಯಾರನ್ನೂ ಬಂಧಿಸಿಲ್ಲ.

  • ಕೊರೊನಾ ಹಾಟ್‍ಸ್ಪಾಟ್ ಪುಣೆಯಿಂದ ಬಂದು ಕ್ವಾರಂಟೈನ್ ಆಗಲು ನಕಾರ- ಯುವತಿ ರಂಪಾಟ

    ಕೊರೊನಾ ಹಾಟ್‍ಸ್ಪಾಟ್ ಪುಣೆಯಿಂದ ಬಂದು ಕ್ವಾರಂಟೈನ್ ಆಗಲು ನಕಾರ- ಯುವತಿ ರಂಪಾಟ

    ಗದಗ: ರಾಜ್ಯದಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಪೈಕಿ ಬಹುಪಾಲು ಅನ್ಯರಾಜ್ಯಗಳದ್ದವೇ ಆಗಿವೆ. ಅದರಲ್ಲೂ ಮಹಾರಾಷ್ಟ್ರದ ಪಾಲು ದೊಡ್ಡದು. ಇಂತಹ ಸಂದರ್ಭದಲ್ಲಿ ದೇಶದ ಕೊರೊನಾ ಹಾಟ್‍ಸ್ಪಾಟ್‍ನಿಂದ ಬಂದ ಯುವತಿ ಕ್ವಾರಂಟೈನ್ ಆಗಲು ನಿರಾಕರಿಸಿದ್ದು, ರಂಪಾಟ ಮಾಡಿದ್ದಾರೆ.

    ಯುವತಿ ಪುಣೆಯಿಂದ ಗದಗ ರೈಲ್ವೆ ನಿಲ್ದಾಣಕ್ಕೆ ಬಂದು ಇಳಿದಿದ್ದು, ಇಲ್ಲಿ ಕ್ವಾರಂಟೈನ್ ಆಗುವುದಿಲ್ಲ ಎಂದು ರಂಪಾಟ ನಡೆಸಿದ್ದಾರೆ. ನಮ್ಮ ಊರು ಕೊಪ್ಪಳ ಜಿಲ್ಲೆಯ ಗಂಗಾವತಿ. ಅಲ್ಲಿಯೇ ಕ್ವಾರಂಟೈನ್ ಆಗುತ್ತೇನೆ. ನನ್ನನ್ನು ಅಲ್ಲಿಗೆ ಕಳುಹಿಸಿಕೊಡಿ ಎಂದು ಖ್ಯಾತೆ ತೆಗೆದಿದ್ದಾರೆ.

    ತಂದೆ ಸಾವು, ತಾಯಿ ಅನಾರೋಗ್ಯದಿಂದ ಇದ್ದಾರೆ. ಹೀಗಾಗಿ ನಾನು ಗಂಗಾವತಿಗೆ ಹೋಗಲೇಬೇಕು ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲೇ ಕ್ವಾರಂಟೈನ್ ಮಾಡಿ. ಗದಗನಲ್ಲಿ ಸರ್ಕಾರಿ, ಖಾಸಗಿ ಕ್ವಾರಂಟೈನ್ ಯಾವುದೂ ಬೇಡ ಎಂದು ಯುವತಿ ರಂಪಾಟ ಮಾಡಿದ್ದಾರೆ.

  • ಪಾಕ್ ಕ್ರಿಕೆಟರ್ ಬ್ಯಾಟನ್ನು 7 ಕೋಟಿಗೆ ಖರೀದಿಸಿದ ಪುಣೆ ಸಂಸ್ಥೆ

    ಪಾಕ್ ಕ್ರಿಕೆಟರ್ ಬ್ಯಾಟನ್ನು 7 ಕೋಟಿಗೆ ಖರೀದಿಸಿದ ಪುಣೆ ಸಂಸ್ಥೆ

    ಇಸ್ಲಾಮಾಬಾದ್: ಕೋವಿಡ್-19 ವೈರಸ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಹಣ ಸಂಗ್ರಹಿಸಲು ಪಾಕಿಸ್ತಾನ ಟೆಸ್ಟ್ ನಾಯಕ ಅಜರ್ ಅಲಿ ಅವರು ಹರಾಜಿಗೆ ಇಟ್ಟಿದ್ದ ಬ್ಯಾಟ್ ಅನ್ನು ಪುಣೆ ಸಂಸ್ಥೆಯೊಂದು 8 ಕೋಟಿ ರೂ.ಗೆ ಖರೀದಿಸಿದೆ.

    ಅಜರ್ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 302 ರನ್ ಗಳಿಸಲು ಬಳಸಿದ ಬ್ಯಾಟ್ ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಧರಿಸಿದ್ದ ಜರ್ಸಿಯನ್ನು ಆನ್‍ಲೈನ್‍ನಲ್ಲಿ ಹರಾಜಿಗೆ ಇಟ್ಟಿದ್ದರು. ಈ ಮೂಲಕ ಹಣವನ್ನು ಸಂಗ್ರಹಿಸಿ ಹೆಮ್ಮಾರಿ ಕೊರೊನಾ ವಿರುದ್ಧ ಹೋರಾಡುತ್ತಿರುವವರ ಸಹಾಯಕ್ಕೆ ಮುಂದಾಗಿದ್ದರು.

    ಪಾಕ್ ಆಟಗಾರ ಅಜರ್ ಅಲಿ ಅವರು ಬ್ಯಾಟ್ ಮತ್ತು ಜರ್ಸಿ ಎರಡಕ್ಕೂ ಪಾಕಿಸ್ತಾನ ತಂಡದ ಆಟಗಾರರ ಆಟೋಗ್ರಾಫ್ ಹಾಕಿಸಿದ್ದರು. ಬ್ಯಾಟ್ ಜರ್ಸಿಗಾಗಿ ತಲಾ 10 ಲಕ್ಷ ಪಾಕಿಸ್ತಾನ ರೂ. ಮೂಲ ಬೆಲೆಯನ್ನು ನಿಗಧಿಪಡಿಸಿದ್ದರು.

    ಪುಣೆ ಮೂಲದ ಬ್ಲೇಡ್ಸ್ ಆಫ್ ಗ್ಲೋರಿ ಕ್ರಿಕೆಟ್ ಮ್ಯೂಸಿಯಂ ಬ್ಯಾಟ್‍ಗೆ 7 ಕೋಟಿ ರೂ. ನೀಡುವ ಮೂಲಕ ಖರೀದಿಸಿದೆ. ಶರ್ಟ್ ಹರಾಜು ಕೂಡ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ಕ್ಯಾಲಿಫೋರ್ನಿಯಾ ಮೂಲದ ಪಾಕಿಸ್ತಾನಿ ಕಾಶ್ ವಿಲ್ಲಾನಿ ಹರಾಜು ಮುಗಿಯುವ ಮುನ್ನ ಶರ್ಟ್ ಗಾಗಿ ಅತಿ ಹೆಚ್ಚು 8.30 ಕೋಟಿ ರೂ. ಬಿಡ್‍ನೊಂದಿಗೆ ಖರೀದಿಸಿದೆ.

    ಕೊರೊನಾ ವೈರಸ್ ವಿರುದ್ಧದ ಅಜರ್ ಅಲಿ ಹೋರಾಟಕ್ಕೆ ನ್ಯೂಜೆರ್ಸಿಯಲ್ಲಿರುವ ಪಾಕಿಸ್ತಾನದ ಜಮಾಲ್ ಖಾನ್ ಕೂಡ ಸಾಥ್ ನೀಡಿದ್ದಾರೆ. ಅವರು 1,00,000 ರೂ. ದೇಣಿಗೆ ನೀಡಿದ್ದಾರೆ.

    ಈ ಹಿಂದೆ ಟ್ವೀಟ್ ಮಾಡಿದ್ದ ಅಜರ್ ಅಲಿ, ಈ ಬ್ಯಾಟ್ ಮತ್ತು ಜರ್ಸಿ ನನ್ನ ಅತ್ಯಂತ ಪ್ರಿಯ ವಸ್ತುಗಳು. ಆದರೆ ಕಷ್ಟದ ಸಮಯದಲ್ಲಿ ಇವುಗಳನ್ನು ಜನರ ಅನುಕೂಲಕ್ಕಾಗಿ ಬಳಸಲು ಖುಷಿಯಾಗುತ್ತದೆ. ಇವೆರಡನ್ನೂ ಹರಾಜಿಗಿಟ್ಟು ಬಂದ ಹಣವನ್ನು ಕೊರೊನಾ ವೈರಸ್ ಸಂತ್ರಸ್ತರಿಗೆ ನೀಡಿಲು ನಿರ್ಧಸಿದ್ದೇನೆ. ಪ್ರತಿಯೊಂದರ ಮೂಲ ಬೆಲೆ 10 ಲಕ್ಷ ಪಾಕಿಸ್ತಾನ ರೂಪಾಯಿಗಳು. ಮೇ 5ರ ವರಗೂ ಹರಾಜು ಅವಧಿ ಇದೆ ಎಂದು ತಿಳಿಸಿದ್ದರು.

    2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಜರ್ ಅಲಿ 59 ರನ್ ಗಳಿಸಿ ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ 2016ರಲ್ಲಿ ಯುಎಇಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 302 ರನ್ ಗಳಿಸಿದ್ದರು. ಈ ಮೂಲಕ ಡೇ-ನೈಟ್ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಗಳಿಸಿದ ಮೊದಲ ಅಂತಾರಾಷ್ಟ್ರೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

  • ಕೋವಿಡ್ 19 ಗೆದ್ದ ವ್ಹೀಲ್‌ಚೇರ್‌ನಲ್ಲಿ ಓಡಾಡೋ 92 ವರ್ಷದ ಅಜ್ಜಿ

    ಕೋವಿಡ್ 19 ಗೆದ್ದ ವ್ಹೀಲ್‌ಚೇರ್‌ನಲ್ಲಿ ಓಡಾಡೋ 92 ವರ್ಷದ ಅಜ್ಜಿ

    – ಪಾರ್ಶ್ವವಾಯುಗೆ ತುತ್ತಾಗಿದ್ದ ಅಜ್ಜಿ
    – 14 ದಿನದಲ್ಲೇ ಗೆದ್ದು ಬೀಗಿದ ನಾನ್ಜೆಜೆನೇರಿಯನ್

    ಪುಣೆ: ಇಲ್ಲಿಯವರೆಗಿನ ಪ್ರಕರಣಗಳಲ್ಲಿ ಕೋವಿಡ್ 19ಗೆ ಹೆಚ್ಚಾಗಿ ವಯಸ್ಸಾದವರೇ ಬಲಿಯಾಗಿದ್ದು, ಇತ್ತ ಪ್ರಧಾನಿ ಮೋದಿ ಕೂಡ 65 ವರ್ಷ ಮೇಲ್ಪಟ್ಟವರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದ್ದರು. ಆದರೆ ಇದೀಗ 92 ವರ್ಷದ ಅಜ್ಜಿಯೊಬ್ಬರು ಸಾವು ಗೆದ್ದು ಬೀಗಿದ್ದಾರೆ.

    ಹೌದು. ಪುಣೆ ಮೂಲದ ಅಜ್ಜಿ ನಾನ್ಜೆಜೆನೇರಿಯನ್ ಕೊರೊನಾ ವೈರಸ್ ಎಂಬ ಮಾರಕ ರೋಗವನ್ನು ಮೆಟ್ಟಿ ನಿಂತಿದ್ದಾರೆ. ನಾನ್ಜೆಜೆನೇರಿಯನ್ ಅವರು 7 ತಿಂಗಳ ಹಿಂದೆಯಿಂದ ಪಾರ್ಶ್ವವಾಯುಗೆ ತುತ್ತಾಗಿದ್ದರು. ಇದೀಗ ಈಕೆಯ ಜೊತೆ ಕುಟುಂಬದ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಬಳಿಕ ಎಲ್ಲರನ್ನು ಏಪ್ರಿಲ್ ಮೊದಲ ವಾರದಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    92 ವರ್ಷದ ವೃದ್ಧೆ ಪಾರ್ಶ್ವವಾಯುವಿನಿಂದ ದೇಹದ ಎಡಬದಿಯಲ್ಲಿ ಸಂಪೂರ್ಣವಾಗಿ ಸ್ವಾದೀನ ಕಳೆದುಕೊಂಡಿದ್ದು, ವ್ಹೀಲ್‌ಚೇರ್‌ನಲ್ಲೇ ಓಡಾಡುತ್ತಿದ್ದರು. ಈಕೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದೀಗ ಈಕೆ 14 ದಿನದಲ್ಲಿ ಕೋವಿಡ್ 19 ಗೆದ್ದಿದ್ದಾರೆ. ಹೀಗಾಗಿ ಕೊರೊನಾಗೆ ಬಲಿಯಾಗಲು ವಯಸ್ಸಿನ ಹಂಗಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ ಎಂದು ಆಸ್ಪತ್ರೆಯ ವೈದ್ಯ ಡಾ. ವಿಜಯ್ ನಟ್ರಾಜನ್ ತಿಳಿಸಿದ್ದಾರೆ.

    ಒಬ್ಬರು ವಯಸ್ಸಾದ ಮಹಿಳೆ ಕೊರೊನಾ ವೈರಸ್ ಗೆದ್ದಿದ್ದಾರೆ ಅಂದರೆ ಹಿರಿಯ ನಾಗರಿಕರು ಕೂಡ ಸಾವು ಗೆಲ್ಲಬಹುದು ಎಂಬುದು ಇದರಿಂದ ತಿಳಿಯುತ್ತದೆ. ಹೀಗಾಗಿ ಕೊರೊನಾ ಬಂದರೆ ಯಾವ ವಯಸ್ಸಿನವರೂ ಭಯಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

    ವೃದ್ಧೆಗೆ ಕೋವಿಡ್ 19ನ ಯಾವುದೇ ಲಕ್ಷಗಳಿರಲಿಲ್ಲ. ಆದರೆ ಆಕೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಕಾರಣ ಆಕೆಯನ್ನು 14 ದಿನಗಳ ಕಾಲ ಗ್ರಹಬಂಧನದಲ್ಲಿಟ್ಟಿದ್ದೆವು. ಬಳಿಕ ಪರೀಕ್ಷೆ ನಡೆಸಿದಾಗ ಆಕೆಯ ಆರೋಗ್ಯ ಉತ್ತಮವಾಗಿತ್ತು ಎಂದು ನಟ್ರಾಜನ್ ತಿಳಿಸಿದ್ದಾರೆ.

  • ಹುಬ್ಬಳ್ಳಿಯಲ್ಲಿ ಕೊರೊನಾ ಶಂಕಿತ ಟೆಕ್ಕಿ ಸಾವು

    ಹುಬ್ಬಳ್ಳಿಯಲ್ಲಿ ಕೊರೊನಾ ಶಂಕಿತ ಟೆಕ್ಕಿ ಸಾವು

    ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಿಂದ ಸ್ವಗ್ರಾಮಕ್ಕೆ ಆಗಮಿಸಿದ್ದ ಎಂಜಿನಿಯರ್ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿ ಮೃತ ದುರ್ದೈವಿ. ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವ ಅನುಮಾನ ವ್ಯಕ್ತವಾಗಿದೆ.

    ಟೆಕ್ಕಿ ಜ್ವರ, ನೆಗಡಿ, ಕೆಮ್ಮ, ನ್ಯೂಮೋನಿಯಾ ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಕಿಮ್ಸ್ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಕ್ತ ಮಾದರಿ ಹಾಗೂ ಥ್ರೋಟ್ ಸ್ವ್ಯಾಬ್ ಅನ್ನು ಶಿವಮೊಗ್ಗಕ್ಕೆ ರವಾನೆ ಮಾಡಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಮೃತಪಟ್ಟಿದ್ದಾರೆ.

    ಕಿಮ್ಸ್‌ನಲ್ಲಿ ರಕ್ತದ ಮಾದರಿ ಪರೀಕ್ಷೆ ವೇಳೆ ಕಾಮಣಿ ರೋಗ ಪತ್ತೆಯಾಗಿದೆ. ಹೀಗಾಗಿ ಕಾಮಾಲೆ ರೋಗದಿಂದ ಮೃತ್ತಪಟ್ಟಿರುವುದಾಗಿ ಕಿಮ್ಸ್ ವೈದ್ಯರ ಸ್ಪಷ್ಟನೆ ನೀಡಿದ್ದಾರೆ. ಆದರೆ ಶಿವಮೊಗ್ಗದಿಂದ ರಿಪೋರ್ಟ್ ಬರುವುದನ್ನು ವೈದ್ಯರು ಕಾಯುತ್ತಿದ್ದಾರೆ.

  • ಪುಣೆ ನರ್ಸ್‍ಗೆ ಪ್ರಧಾನಿ ಮೋದಿ ಕರೆ

    ಪುಣೆ ನರ್ಸ್‍ಗೆ ಪ್ರಧಾನಿ ಮೋದಿ ಕರೆ

    ಮುಂಬೈ: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪುಣೆಯ ನಾಯ್ಡು ಆಸ್ಪತ್ರೆಯ ದಾದಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆಸ್ಪತ್ರೆಯ ಸಿಬ್ಬಂದಿ ಮಾಡಿದ ಕಾರ್ಯವನ್ನು ಶ್ಲಾಘಿಸಿದ್ದಾರೆ.

    ಶುಕ್ರವಾರ ಸಂಜೆ ಪ್ರಧಾನಿ ಕಚೇರಿಯಿಂದ ನರ್ಸ್ ಛಾಯ ಜಗ್ತಾಪ್ ಅವರಿಗೆ ಕರೆ ಬಂದಿದೆ ಎಂದು ಪುಣೆ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಹೇಳಿದ್ದಾರೆ. ಕರೆ ಮಾಡಿ ಮರಾಠಿಯಲ್ಲಿ ಮಾತನಾಡಿದ ಮೋದಿ ಅವರು, ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದಾರೆ. ನಂತರ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಛಾಯ ಜಗ್ತಾಪ್ ಅವರು ತಮ್ಮ ಸುರಕ್ಷತೆ ಮತ್ತು ಕುಟುಂಬದ ಭಯವನ್ನು ಹೇಗೆ ನಿವಾರಿಸುತ್ತಿದ್ದಾರೆ ಎಂದು ಮೋದಿ ಅವರು ಕೇಳಿದ್ದಾರೆ.

    ಇದಕ್ಕೆ ಉತ್ತರಿಸಿದ ಛಾಯ ಅವರು, ನನ್ನ ಕುಟುಂಬದ ಬಗ್ಗೆ ನನಗೆ ಕಾಳಜಿ ಇದೆ. ಆದರೆ ನಾನು ಕೆಲಸ ಮಾಡಬೇಕು. ಈ ಪರಿಸ್ಥಿತಿಯಲ್ಲಿ ನಾವು ರೋಗಿಗಳಿಗೆ ಸೇವೆ ಸಲ್ಲಿಸಬೇಕಾಗಿದೆ. ನಾನು ಅದನ್ನು ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ. ನಂತರ ಪ್ರಧಾನಿ ಅವರು ಆಸ್ಪತ್ರೆಗೆ ಬರುವ ರೋಗಿಗಳು ಭಯಭೀತರಾಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಛಾಯ ಹೌದು ಕೆಲವರು ತುಂಬಾ ಭಯಪಡುತ್ತಾರೆ. ನಾವು ಅವರೊಂದಿಗೆ ಮಾತನಾಡಿ ಧೈರ್ಯ ತುಂಬುತ್ತೇವೆ ಎಂದು ತಿಳಿಸಿದ್ದಾರೆ.

    ನಾವು ರೋಗಿಗಳಿಗೆ ಸಕಾರಾತ್ಮಕ ಸ್ಥೈರ್ಯವನ್ನು ತುಂಬುತ್ತೇವೆ. ಈಗಾಗಲೇ ನಮ್ಮ ಆಸ್ಪತ್ರೆಯಿಂದ ಏಳು ಕೊರೊನಾ ರೋಗಿಗಳು ಪೂರ್ತಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಛಾಯ ಅವರು ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮೋದಿ ಅವರು, ಕೊರೊನಾ ವೈರಸ್ ವಿರುದ್ಧ ನಿರಂತರ ಹೋರಾಡುತ್ತಿರುವ ನಿಮ್ಮಂತಹ ವೈದ್ಯಕೀಯ ಸಿಬ್ಬಂದಿಗೆ ಏನಾದರೂ ಹೇಳ ಬಯಸುತ್ತೀರಾ ಎಂದು ಕೇಳಿದ್ದಾರೆ.

    ಆಗ ಛಾಯ ಅವರು, ಭಯಪಡುವ ಅಗತ್ಯವಿಲ್ಲ. ನಾವು ಈ ರೋಗವನ್ನು ಓಡಿಸಬೇಕು ಮತ್ತು ನಮ್ಮ ದೇಶವನ್ನು ಗೆಲ್ಲುವಂತೆ ಮಾಡಬೇಕು. ಇದು ಆಸ್ಪತ್ರೆಗಳು ಮತ್ತು ಅಲ್ಲಿನ ಸಿಬ್ಬಂದಿ ವರ್ಗದವರ ಧ್ಯೇಯ ವಾಕ್ಯವಾಗಿರಬೇಕು ಎಂದು ಸಂದೇಶ ನೀಡಿದ್ದಾರೆ. ಛಾಯ ಅವರು ಈ ಮಾತನ್ನು ಹೇಳುತ್ತಿದ್ದಂತೆ ಖುಷಿಯಾದ ಮೋದಿ ಅವರು, ಛಾಯ ಅವರ ಭಕ್ತಿ ಮತ್ತು ಸೇವೆಗೆ ಅಭಿನಂದಿಸಿದ್ದಾರೆ.

    ನಿಮ್ಮಂತೆಯೇ ಲಕ್ಷಾಂತರ ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯರು ಇದೀಗ ದೇಶದ ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ನೀವು ಎಲ್ಲರೂ ನಿಜವಾದ ತಪಸ್ವಿಗಳು. ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ನಿಮ್ಮ ಅನುಭವಗಳನ್ನು ಕೇಳಿ ನನಗೆ ಸಂತೋಷವಾಗಿದೆ ಎಂದು ಮೋದಿ ಹರ್ಷ ವ್ಯಕ್ತಪಡಸಿದ್ದಾರೆ.

    ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ ಆದರೆ ನೀವು ರಾಷ್ಟ್ರದಾದ್ಯಂತ ಸೇವೆ ಸಲ್ಲಿಸುತ್ತಿದ್ದೀರಿ. ನಾವು ನಿಮಗೆ ಕೃತಜ್ಞರಾಗಿರಬೇಕು. ನಿಮ್ಮಂತಹ ಪ್ರಧಾನ ಮಂತ್ರಿಯನ್ನು ಪಡೆಯಲು ದೇಶವು ಅದೃಷ್ಟ ಮಾಡಿದೆ ಎಂದು ಛಾಯ ಅವರು ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಾಯ್ಡು ಆಸ್ಪತ್ರೆ ಪುಣೆಯಲ್ಲಿ ಅಧಿಕ ಕೊರೊನಾ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ.