Tag: ಪುಣೆ

  • ವೀಡಿಯೋ: ಅಪಘಾತದ ಬಳಿಕ ರಸ್ತೆ ಸ್ವಚ್ಛಗೊಳಿಸಿದ ಮಹಿಳಾ ಟ್ರಾಫಿಕ್ ಪೊಲೀಸ್

    ವೀಡಿಯೋ: ಅಪಘಾತದ ಬಳಿಕ ರಸ್ತೆ ಸ್ವಚ್ಛಗೊಳಿಸಿದ ಮಹಿಳಾ ಟ್ರಾಫಿಕ್ ಪೊಲೀಸ್

    – ಪೊರಕೆ ಹಿಡಿದ ಅಧಿಕಾರಿಗೆ ವ್ಯಕ್ತವಾಗ್ತಿದೆ ಪ್ರಶಂಸೆ

    ಮುಂಬೈ: ಸೋಮವಾರ ಪುಣೆಯ ತಿಲಕ್ ರಸ್ತೆಯಲ್ಲಿ ನಡೆದ ಅಪಘಾತದ ನಂತರ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಟ್ರಾಫಿಕ್ ಮಹಿಳಾ ಕಾನ್ಸ್ ಟೇಬಲ್ ಕಸಗುಡಿಸುವ ಮೂಲಕ ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ.

    ಸೋಮವಾರ ಸಂಜೆ ತಿಲಕ್ ನಗರದಲ್ಲಿ ಸಂಭವಿಸಿದ ಅಪಘಾತದ ನಂತರ ಮೋಟಾರ್ ಸೈಕಲ್‍ನ ಗಾಜು ಮತ್ತು ಫೈಬರ್ ತುಂಡುಗಳು ರಸ್ತೆಯಲ್ಲಿ ಬಿದ್ದಿದ್ದವು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಕಾನ್ಸ್ ಟೇಬಲ್ ಅಮಲ್ದಾರ್ ರಜಿಯಾ ಸಯ್ಯದ್, ಪೊರಕೆ ಹಿಡಿದು ರಸ್ತೆಯನ್ನು ಗುಡಿಸುತ್ತಿರುವ ದೃಶ್ಯ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಇದೇ ವಿಚಾರವಾಗಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ವೀಡಿಯೋವನ್ನು ಮೈಕ್ರೋ ಬ್ಲೋಗಿಂಗ್‍ನಲ್ಲಿ ಶೇರ್ ಮಾಡಿಕೊಳ್ಳುವುದರ ಜೊತೆಗೆ ಮಹಿಳಾ ಪೊಲೀಸ್ ಅಮಲ್ದಾರ್ ರಜಿಯಾ ಸಯ್ಯದ್, ಸಣ್ಣ ಅಪಘಾತದಿಂದ ರಸ್ತೆ ಮೇಲೆ ಬಿದ್ದಿದ್ದ ಗಾಜಿನ ತುಂಡುಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ತಾವೇ ಪೊರಕೆ ಹಿಡಿದು ಕಸ ಗುಡಿಸುಲು ಮುಂದಾಗಿದ್ದಾರೆ. ನಾಗರೀಕರ ಸುರಕ್ಷತೆಗೆ ಅವರು ಕೈಗೊಂಡಿರುವ ಕಾರ್ಯ ಮೆಚ್ಚುವಂತದ್ದು ಎಂದು ಟ್ವೀಟ್ ಮಾಡಿದ್ದಾರೆ.

    ನಾಗರಿಕರ ಸುರಕ್ಷತೆಗಾಗಿ ಮಹಿಳಾ ಟ್ರಾಫಿಕ್ ಪೊಲೀಸ್ ಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಛಗೊಳಿಸಿರುವ ವೀಡಿಯೋಗೆ ಇದೀಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

  • ಕೊರೊನಾ ಲಸಿಕೆ ದಿನ ರಂಗೋಲಿ ಮೂಲಕ ಸ್ವಾಗತಿಸಿದ ಆಸ್ಪತ್ರೆ ಸಿಬ್ಬಂದಿ

    ಕೊರೊನಾ ಲಸಿಕೆ ದಿನ ರಂಗೋಲಿ ಮೂಲಕ ಸ್ವಾಗತಿಸಿದ ಆಸ್ಪತ್ರೆ ಸಿಬ್ಬಂದಿ

    ಪುಣೆ: ಕೊರೊನಾ ಲಸಿಕೆ ವಿತರಣೆಗೆ ಸಜ್ಜಾದ ಆಸ್ಪತ್ರೆಯ ಸಿಬ್ಬಂದಿ ರಂಗೋಲಿ ಹಾಕಿ ಜನರನ್ನು ಸ್ವಾಗತಿಸಿದ್ದಾರೆ. ಈ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಿ ಲಸಿಕೆಗಾಗಿ ಬರುವ ಜನರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

    ಭಾರತವು ಅತೀ ದೊಡ್ಡ ಲಸಿಕಾ ದಿನವನ್ನು ಆಚರಿಸಲು ಮುಂದಾಗುತ್ತಿದ್ದಂತೆ ಪುಣೆಯ ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯ ಮುಂಭಾಗ ನೀಲಿ ಮತ್ತು ಬಿಳಿ ಬಣ್ಣದ ಹೂವಿನ ರಂಗೋಲಿ ಬಿಡಿಸಿ ಮಧ್ಯದಲ್ಲಿ ಸ್ವಾಗತ ಎಂದು ಬರೆದು ಲಸಿಕೆ ಹಾಕಿಸಿಕೊಳ್ಳಲು ಬರುವ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆ ಸಿಬ್ಬಂದಿ ಲಸಿಕೆ ಅಂತಿಮವಾಗಿ ನಮ್ಮ ಕೈ ಸೇರಿರುವುದು ತುಂಬಾ ಸಂತೋಷವಾಗಿದೆ, ನಾವು ಲಸಿಕೆ ಕೊಡಲು ಸಿದ್ಧರಾಗಿದ್ದೇವೆ ಎಂದು ಸಂತೋಷ ಹಚ್ಚಿಕೊಂಡರು.

    ದೇಶದ ಪ್ರಧಾನಿ ಮೋದಿ ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಇದು ದೇಶಕ್ಕೆ ಸಿಕ್ಕಿರುವ ನಿರ್ಣಾಯಕ ಗೆಲುವು ಎಂದು ಬಣ್ಣಿಸಿದರು. ನಂತರ ಮಾತಾನಾಡಿದ ಮೋದಿ ಕೊರೊನಾ ವಿರುದ್ಧ ಲಸಿಕೆ ಬಂದರು ಕೂಡ ಯಾರು ಈ ಸಾಂಕ್ರಾಮಿಕ ರೋಗವನ್ನು ಲಘುವಾಗಿ ಪರಿಗಣಿಸಬೇಡಿ. ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಪಾಲಿಸುವುದು ಮರೆಯದಿರಿ ‘ದವಾಯಿ ಭಿ ಕಡೈ ಭಿ’ ಎಂದು ಜನರಿಗೆ ಎಚ್ಚರಿಕೆ ನೀಡಿದರು.

    ಈ ಲಸಿಕಾ ಕಾರ್ಯ ದೇಶದ ಸಂಪೂರ್ಣ ಉದ್ದಗಲಕ್ಕೂ ಮುಂದುವರಿಯಲಿದ್ದು ವಿಶ್ವದ ಅತೀ ದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮವಾಗಲಿದೆ. ಸರ್ಕಾರ ತಿಳಿಸಿರುವಂತೆ ಮೊದಲು ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಎರಡು ಕೋಟಿ ಮುಂಚೂಣಿ ಕೆಲಸಗಾರರಿಗೆ ಲಸಿಕೆ ನೀಡಲಾಗುತ್ತದೆ. ನಂತರ ಮುಂದಿನ ಭಾಗದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತಯಾರಿ ನಡೆಸಿದೆ. ಇದಾದ ನಂತರ 50 ವರ್ಷ ಕೆಳಗಿನ ವಯಸ್ಸಿನವರಿಗೆ ನೀಡುವ ಗುರಿ ಹೊಂದಿದೆ.

  • ತಂದೆಯಿಂದಲೇ ಅವಳಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ

    ತಂದೆಯಿಂದಲೇ ಅವಳಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ

    – ಎಫ್‍ಐಆರ್ ದಾಖಲು

    ಮುಂಬೈ: ತಂದೆಯೇ ತನ್ನ ಅವಳಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲೆ ಬೆಳಕಿಗೆ ಬಂದಿದೆ. ಕಾಮುಕ ಪತಿಯ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ.

    ಪತಿ ಕಳೆದ ನಾಲ್ಕು ವರ್ಷಗಳಿಂದ ಅವಳಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಿದ್ದಾನೆ, 2016ರಲ್ಲಿ ಒಬ್ಬ ಮಗಳು ಹೊಟ್ಟೆ ನೋವು ಅಂತ ಹೇಳಿದಳು. ಆಕೆಯನ್ನ ಆಸ್ಪತ್ರೆಗೆ ಕರೆದೊಯದ್ದಾಗ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಸೋನೋಗ್ರಾಫಿ ಮಾಡಿಸುವಂತೆ ವೈದ್ಯರು ಸೂಚಿಸಿದರು. ಆದ್ರೆ ಗಂಡ ಡಾಕ್ಟರ್ ನೀಡಿದ ವರದಿಯನ್ನ ಸುಟ್ಟು ಹಾಕಿದನು.

    ಒಂದು ದಿನ ನಾನು ಮಕ್ಕಳ ಜೊತೆ ಕೋಣೆಯೊಳಗೆ ಮಲಗಿದ್ದೆ. ಪತಿ ಹೊರಗೆ ಹಾಲ್ ನಲ್ಲಿ ಮಲಗಿಕೊಂಡಿದ್ದನು. ರಾತ್ರಿ ಸುಮಾರು 2 ಗಂಟೆಗೆ ಮಗಳು ಅಳಲಾರಂಭಿಸಿದಳು. ಕೇಳಿದಾಗ ತಂದೆ ತನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದರ ಬಗ್ಗೆ ಹೇಳಿದಳು. ಮತ್ತೊಬ್ಬ ಮಗಳು ಸಹ ತನ್ನೊಂದಿಗೆ ನಡೆದ ಘಟನೆಯನ್ನ ವಿವರಿಸಿದಳು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪತಿಯ ನಡವಳಿಕೆಯಿಂದ ಬೇಸತ್ತ ಮಹಿಳೆ ಜೂನ್ 2020ರಿಂದ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಪತಿ ಫ್ಯಾಬ್ರಿಕ್ ಅಂಗಡಿ ನಡೆಸುತ್ತಿದ್ದು, ಮಹಿಳೆ ಮನೆಯಲ್ಲಿ ಮೆಸ್ ಮಾಡಿಕೊಂಡಿದ್ದಾರೆ. ದಂಪತಿಗೆ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿವೆ.

  • 8 ವಿಮಾನಗಳ ಮೂಲಕ ಪುಣೆಯಿಂದ 1.1 ಕೋಟಿ ಲಸಿಕೆ ಸಾಗಾಟ

    8 ವಿಮಾನಗಳ ಮೂಲಕ ಪುಣೆಯಿಂದ 1.1 ಕೋಟಿ ಲಸಿಕೆ ಸಾಗಾಟ

    ಪುಣೆ: ಕಳೆದ ಒಂದು ವರ್ಷದಿಂದ ಕೊರೋನಾ ಹೆಮ್ಮಾರಿ ದಾಳಿಯಿಂದ ತತ್ತರಿಸಿ ಹೋಗಿರುವ ದೇಶ, ಇನ್ನು ಕೆಲವೇ ಕೆಲವು ದಿನಗಳಲ್ಲಿ ನಿಟ್ಟುಸಿರು ಬಿಡಲಿದೆ. ಮನುಕುಲವನ್ನು ಕಾಡಿದ ಭೀಕರ ವೈರಸ್ ಅನ್ನು ಎದುರಿಸಲು ಲಸಿಕೆ ಬಂದಾಗಿದೆ.

    ನಾಲ್ಕು ದಿನಗಳಲ್ಲಿ ದೇಶಾದ್ಯಂತ ಲಸಿಕೆ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೆ ಶರಗವೇಗದಲ್ಲಿ ಸಿದ್ಧತೆಗಳು ನಡೆದಿವೆ. ಇದರ ಭಾಗವಾಗಿ ಇಂದು ಮೊದಲ ಕಂತಿನ ಲಸಿಕೆಗಳನ್ನು ಬೆಂಗಳೂರು ಸೇರಿದಂತೆ ದೇಶದ 13 ಪ್ರಮುಖ ನಗರಗಳಿಗೆ 8 ವಿಮಾನಗಳ ಮೂಲಕ ಸಾಗಣೆ ಮಾಡಲಾಗಿದೆ.

    ಬೆಳಗಿನ ಜಾವ 4.30ಕ್ಕೆ ಪುಣೆಯ ಸೆರಂ ಸಂಸ್ಥೆ, ಮೂರು ಟ್ರಕ್‍ಗಳಲ್ಲಿ ಮೊದಲ ಕಂತಿನ ಕೋವಿಶೀಲ್ಡ್ ಲಸಿಕೆಗಳನ್ನು ವಿಮಾನ ನಿಲ್ದಾಣಕ್ಕೆ ಸಾಗಿಸಿತು. ಅಲ್ಲಿಂದ ವಿಮಾನಗಳ ಮೂಲಕ ವಿವಿಧೆಡೆಗಳಿಗೆ ಲಸಿಕೆಗಳನ್ನು ಸುರಕ್ಷಿತವಾಗಿ ಸಾಗಣೆ ಮಾಡಲಾಯಿತು.

    ಒಂದೆರಡು ದಿನಗಳಲ್ಲಿ ಪ್ರಮುಖ ನಗರಗಳ ಪ್ರಧಾನ ಲಸಿಕಾ ಕೇಂದ್ರದಿಂದ ಈಗಾಗಲೇ ಗುರುತಿಸಲಾದ ಆರೋಗ್ಯ ಕೇಂದ್ರಗಳಿಗೆ ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತದೆ. ಜನವರಿ 16ರಿಂದ ಮೊದಲ ಹಂತದ ವ್ಯಾಕ್ಸಿನೇಷನ್ ಕಾರ್ಯ ಶುರುವಾಗಲಿದ್ದು, 3 ಕೋಟಿ ಕೊರೋನಾ ವಾರಿಯರ್ಸ್‍ಗೆ ಲಸಿಕೆ ನೀಡಲಾಗುತ್ತದೆ.

    ಲಸಿಕೆ ಪೂರೈಕೆಯನ್ನು ಐತಿಹಾಸಿಕ ಕ್ಷಣ ಎಂದು ಸೆರಂ ಸಿಇಓ ಆದಾರ್ ಪೂನಾವಾಲಾ ಬಣ್ಣಿಸಿದ್ದಾರೆ. ಮುಂದಿನ ದಿನಗಳಲ್ಲಿ 1000 ರೂಪಾಯಿಗೆ ಓಪನ್ ಮಾರ್ಕೆಟ್‍ನಲ್ಲಿ ಲಸಿಕೆ ಮಾರಾಟ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

    ಸಾಗಾಟ ಹೇಗಾಯ್ತು?
    ಪುಣೆಯ ಸೆರಂನಿಂದ 1.1ಕೋಟಿ ಕೋವಿಶೀಲ್ಡ್ ಲಸಿಕೆಗಳನ್ನು 478 ಬಾಕ್ಸ್‍ಗಳ ಮೂಲಕ ಕೋವಿಶೀಲ್ಡ್ ಲಸಿಕೆ ರವಾನೆ ಮಾಡಲಾಗಿದೆ. ಕೋವಿಶೀಲ್ಡ್ ಲಸಿಕೆಗಳ ಒಂದೊಂದು ಬಾಕ್ಸ್ 32 ಕೆಜಿ ತೂಕವನ್ನು ಹೊಂದಿದ್ದು, ಪ್ರತಿಯೊಂದು ಬಾಕ್ಸ್‌ನಲ್ಲಿ  5 ಎಂಎಲ್‍ನ 1200 ಲಸಿಕೆ ಬಾಟಲ್ ಇರಲಿದೆ.

    ಫಲಾನುಭವಿಗಳಿಗೆ 0.5 ಎಂಎಲ್ ಡೋಸ್ ಮಾತ್ರ ನೀಡಬೇಕಾಗುತ್ತದೆ. ದೇಶದ ವಿವಿಧೆಡೆಗಳಿಗೆ ಒಟ್ಟು 15.296 ಟನ್ ತೂಕದ ಲಸಿಕೆ ರವಾನೆಯಾಗಿದೆ. ಅಕ್ಟೋಬರ್ 20 ರಂದು ಲಸಿಕೆಗಳನ್ನು ಉತ್ಪಾದನೆ ಮಾಡಲಾಗಿದ್ದು, ಏಪ್ರಿಲ್ 20ರವರೆಗೆ ಬಳಸಬಹುದಾಗಿದೆ.

    ಏರ್ ಇಂಡಿಯಾ, ಗೋ ಏರ್, ಸ್ಪೈಸ್ ಜೆಟ್ ವಿಮಾನಗಳ ಮೂಲಕ ದೆಹಲಿ, ಬೆಂಗಳೂರು, ಅಹ್ಮದಾಬಾದ್, ಕೊಲ್ಕೊತಾ, ಚೆನ್ನೈ, ಲಕ್ನೋ, ಕರ್ನಾಲ್, ಪಾಟ್ನಾ, ಹೈದರಾಬಾದ್, ವಿಜಯವಾಡ, ಗುವಾಹಟಿ, ಚಂಡೀಘಡ, ಭುವನೇಶ್ವರಕ್ಕೆ ಲಸಿಕೆ ಸಾಗಣೆ ಮಾಡಲಾಗಿದೆ. ಮುಂಬೈಯಿಂದ ಬೆಳಗಾವಿಗೆ 1.47 ಲಕ್ಷ ಡೋಸ್ ಲಸಿಕೆ ರಸ್ತೆ ಮಾರ್ಗದ ಮೂಲಕ ಬರಲಿದೆ.

  • ಕೋವಿಶೀಲ್ಡ್ ಹೊತ್ತು ಹೊರಟ 3 ಟ್ರಕ್- ಕರ್ನಾಟಕ್ಕೆ ಬರಲಿದೆ 6 ಲಕ್ಷ 34 ಸಾವಿರ ಲಸಿಕೆ

    ಕೋವಿಶೀಲ್ಡ್ ಹೊತ್ತು ಹೊರಟ 3 ಟ್ರಕ್- ಕರ್ನಾಟಕ್ಕೆ ಬರಲಿದೆ 6 ಲಕ್ಷ 34 ಸಾವಿರ ಲಸಿಕೆ

    ಪುಣೆ: ಕೋವಿಡ್-19 ವಿರುದ್ಧ ಭಾರತದ ಲಸಿಕಾ ಅಭಿಯಾನದ ಮೊದಲ ಭಾಗವಾಗಿ 30 ಕೋಟಿ ಜನರಿಗೆ ಲಸಿಕೆ ಪೊರೈಕೆ ಮಾಡಲು 3 ಟ್ರಕ್‍ಗಳಲ್ಲಿ ಲಸಿಕೆ ಸಾಗಾಟಕ್ಕೆ ಮಂಗಳವಾರ ಚಾಲನೆ ಸಿಕ್ಕಿದೆ. ಪುಣೆಯ ಸೆರಂ ಇನ್‍ಸ್ಟಿಟ್ಯೂಟ್‍ನಿಂದ 3 ಟ್ರಕ್ ಗಳಲ್ಲಿ ಹೊರಟ ಲಸಿಕೆ ದೇಶದ 13 ಸ್ಥಳಗಳಿಗೆ ವಿಮಾನದ ಮೂಲಕ ಸಾಗಲಿದೆ.

    ಲಸಿಕೆ ಹೊಂದಿರುವ ಎಲ್ಲಾ ಮೂರು ಟ್ರಕ್‍ಗಳು ತಾಪಮಾನ ನಿಯಂತ್ರಿತವಾಗಿದ್ದು. ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ಸರಕು ಸಾಗಾಟ ವಿಮಾನದ ಮೂಲಕ ದೇಶದ ವಿವಿಧ ಲಸಿಕಾ ಕೇಂದ್ರಕ್ಕೆ ರವಾನೆಯಾಗಲಿದೆ. ಪುಣೆಯ ಸೆರಂ ಇನ್‍ಸ್ಟಿಟ್ಯೂಟ್‍ನಿಂದ ಬೆಳಗ್ಗೆ 5 ಗಂಟೆಗೆ ಹೊರಟ ಟ್ರಕ್‍ಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಕೊಡಲಾಯಿತು.

    ಲಸಿಕೆಯ ರವಾನೆಯ ಕುರಿತು ಮಾತಾನಾಡಿದ ಪುಣೆಯ ಡಿಸಿಪಿ ನಮ್ರತಾ ಪಾಟೀಲ್, ಇನ್‍ಸ್ಟಿಟ್ಯೂಟ್ ಮೊದಲ ಲಸಿಕೆ ರವಾನೆಯನ್ನು ಎಲ್ಲಾ ಪೂರ್ವ ತಯಾರಿಯೊಂದಿಗೆ ಮಾಡಿದೆ. ನಾವು ಲಸಿಕೆಯ ರವಾನೆಗಾಗಿ ಬೇಕಾಗಿದ್ದ ಭದ್ರತೆಯನ್ನು ಮಾಡಿಕೊಟ್ಟಿದ್ದೇವೆ ಎಂದರು.

    13 ನಗರಗಳಿಗೆ ಲಸಿಕೆ: ಪುಣೆ ವಿಮಾನ ನಿಲ್ದಾಣದಿಂದ ಲಸಿಕೆ 13 ಸ್ಥಳಗಳಾದ ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನಾಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಕ್ನೋ, ಚಂಡೀಗಢ ಮತ್ತು ಭುವನೇಶ್ವರಗಳಿಗೆ ವಿಮಾನದ ಮೂಲಕ ತಲುಪಲಿದೆ.

    ಟ್ರಕ್ ಒಂದರಲ್ಲಿ 478 ಬಾಕ್ಸ್ ಗಳು ತುಂಬಿ ಹೊರಟಿದ್ದು ಒಂದು ಬಾಕ್ಸ್ ನ ತೂಕ 32 ಕೆ.ಜಿ ಆಗಿದೆ. ಇದು 10 ಗಂಟೆ ಸುಮಾರಿಗೆ ಲಸಿಕಾ ಕೇಂದ್ರಗಳಿಗೆ ಬಂದಿಳಿಯಲಿದೆ. ಮುಂದಿನ ದಿನಗಳಲ್ಲಿ ಇತರ 5 ಟ್ರಕ್‍ಗಳಲ್ಲಿ ಗುಜಾರಾತ್, ಮಧ್ಯಪ್ರದೇಶ ಮತ್ತು ಹರಿಯಾಣಕ್ಕೆ ಸಂಚಾರ ಮಾಡಲಿದ್ದು, ಈ ವಿಶೇಷ ಟ್ರಕ್‍ಗಳು ಕೂಲ್ ಎಕ್ಸ್ ಕೋಲ್ಡ್ ಚೈನ್ ಲಿಮಿಟೆಡ್‍ಗೆ ಸೇರಿರುವುದಾಗಿದೆ.

    ಜನವರಿ 16ರಿಂದ ಪ್ರಾರಂಭವಾಗಲಿರುವ ಲಸಿಕಾ ಪ್ರಕ್ರಿಯೆಯು ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ವಾರಿಯರ್ಸ್ ಗೆ ನೀಡುವ ಸಲುವಾಗಿ ಸರ್ಕಾರ ಸೆರಂ ಇನ್‍ಸ್ಟಿಟ್ಯೂಟ್‍ನಿಂದ 1.1 ಕೋಟಿ ಡೋಸ್ ಖರೀದಿಸಲು ಆದೇಶ ಹೊರಡಿಸಿದೆ. ಕೋವಿಶೀಲ್ಡ್ ಪ್ರತಿ ಡೋಸ್‍ಗೆ 210 ರೂ ವೆಚ್ಚವಾಗಲಿದೆ. ಏಪ್ರಿಲ್ ವೇಳೆಗೆ 4.5 ಕೋಟಿ ಡೋಸ್ ಖರೀದಿಸಲು ಸರ್ಕಾರ ನಿರ್ಧಾರ ಮಾಡಿದೆ.

    ಕೆಲವೇ ಗಂಟೆಗಳಲ್ಲಿ ಬೆಂಗಳೂರಿಗೆ ಕೋವಿಶೀಲ್ಡ್ ಲಸಿಕೆ ಆಗಮನವಾಗಲಿದ್ದು, ಪುಣೆಯಿಂದ ಕೋವಿಶೀಲ್ಡ್ ಲಸಿಕೆ ಹೊತ್ತ ವಿಮಾನ ಬೆಂಗಳೂರಿನತ್ತ ಹಾರಾಟ ಮಾಡಿದೆ. ಕರ್ನಾಟಕಕ್ಕೆ 13 ಲಕ್ಷದ 34 ಸಾವಿರ ಕೋವಿಡ್ ಲಸಿಕೆ ಪೊರೈಕೆಯಾಗಲಿದೆ. ಆರಂಭದಲ್ಲಿ ಕರ್ನಾಟಕದಲ್ಲಿ 6 ಲಕ್ಷದ 30 ಸಾವಿರ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲು ತಿರ್ಮಾನಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 235 ಲಸಿಕೆ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಣೆಯಾಗಲಿದೆ.

  • 250 ರೂ.ಗೆ 1 ಡೋಸ್‌ – ಮಾರ್ಚ್‌ನಲ್ಲಿ ಮೆಡಿಕಲ್‌ ಸ್ಟೋರ್‌ನಲ್ಲಿ ಲಭ್ಯ?

    250 ರೂ.ಗೆ 1 ಡೋಸ್‌ – ಮಾರ್ಚ್‌ನಲ್ಲಿ ಮೆಡಿಕಲ್‌ ಸ್ಟೋರ್‌ನಲ್ಲಿ ಲಭ್ಯ?

    – ಶೀಘ್ರವೇ ಸೀರಂ ಜೊತೆ ಖರೀದಿ ಸಂಬಂಧ ಸರ್ಕಾರ ಒಪ್ಪಂದ
    – ಆರಂಭದಲ್ಲಿ ಸಿಗಲಿದೆ 6 ಕೋಟಿ ಡೋಸ್

    ನವದೆಹಲಿ: ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್‌ ಲಸಿಕೆ ಖರೀದಿ ವಿಚಾರವಾಗಿ ಶೀಘ್ರವೇ ಪುಣೆಯ ಸೀರಂ ಮತ್ತು ಭಾರತ ಸರ್ಕಾರದ ನಡುವೆ ಒಪ್ಪಂದ ನಡೆಯುವ ಸಾಧ್ಯತೆಯಿದೆ.

    ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಸೀರಂ 1 ಡೋಸ್‌ಗೆ 250 ರೂ. ದರ ನಿಗದಿ ಪಡಿಸಿದ್ದು ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    ಈ ಕುರಿತು ಮಾತನಾಡಿದ ಸಂಸ್ಥೆ ಸಿಇಒ ಅದರ್ ಪೂನಾವಾಲಾ, ಖಾಸಗಿಯಾಗಿ ಖರೀದಿಸಿದರೆ ಈ ಲಸಿಕೆಗೆ ದರ ಪ್ರತಿ ಡೋಸ್‌ಗೆ 1 ಸಾವಿರ ರೂ. ಆಗಲಿದೆ. ಆದರೆ ಸರ್ಕಾರ ಭಾರೀ ಪ್ರಮಾಣದಲ್ಲಿ ಖರೀದಿಸಿದರೆ ಕಡಿಮೆ ಹಣಕ್ಕೆ ಸಿಗಲಿದೆ ಎಂದು ಹೇಳಿದ್ದಾರೆ.

    ಒಪ್ಪಂದದ ಬಳಿಕ ಆರಂಭದಲ್ಲಿ 6 ಕೋಟಿ ಡೋಸ್‌, ಜನವರಿ- ಫೆಬ್ರವರಿಯಲ್ಲಿ 10 ಕೋಟಿ ಲಸಿಕೆಯನ್ನು ಕಂಪನಿ ಸರ್ಕಾರಕ್ಕೆ ನೀಡಲಿದೆ.

    ಸೀರಂ ಕಂಪನಿ ಬಿಲ್‌ ಗೇಟ್ಸ್‌ ಪ್ರತಿಷ್ಠಾನದ ಜೊತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಜಗತ್ತಿನ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ 250 ರೂ. ನಂತೆ ಲಸಿಕೆಯನ್ನು ನೀಡಬೇಕಿದೆ.

    ಮಾರ್ಚ್‌ ವೇಳೆಗೆ ಕೋವಿಶೀಲ್ಡ್‌ ಲಸಿಕೆ ಭಾರತದ ಮೆಡಿಕಲ್‌ ಸ್ಟೋರ್‌ನಲ್ಲೂ ಸಿಗುವ ಸಾಧ್ಯತೆಯಿದೆ. ಆದರೆ ಇಲ್ಲಿ 1 ಡೋಸ್‌ ಬೆಲೆ 600 ರೂ. ಇರಬಹುದು ಎಂದು ಕಂಪನಿ ಸುಳಿವು ನೀಡಿದೆ.

    ಕೋವಿಶೀಲ್ಡ್‌ ಲಸಿಕೆ ಶೇ.70ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪನಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ  ಸೀರಂ ಸಂಸ್ಥೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ(ಡಿಸಿಜಿಐ) ಅರ್ಜಿ ಸಲ್ಲಿಸಿದೆ.

    ಭಾರತದಲ್ಲಿಈ ರೀತಿ ಮನವಿ ಮಾಡಿಕೊಂಡ ಮೊದಲ ದೇಶಿಯ ಸಂಸ್ಥೆ ಸೀರಂ ಆಗಿದೆ. ಆಕ್ಸ್‌ಫರ್ಡ್‌ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆ ಜಂಟಿಯಾಗಿ ಸಂಶೋಧಿಸಿದ ಕೋವಿಶೀಲ್ಡ್ ಲಸಿಕೆಯನ್ನು ಸಿರಂ ಸಂಸ್ಥೆ ಭಾರತದಲ್ಲಿ ಉತ್ಪಾದನೆ ಮಾಡುತ್ತಿದೆ.

    ಸದ್ಯ ಕೋವಿಶೀಲ್ಡ್ ಲಸಿಕೆಯ ಮೂರನೇ ಹಂತದ ಪ್ರಯೋಗ ಭಾರತದಲ್ಲಿ ನಡೆಯುತ್ತಿದೆ. ಇದು ಪೂರ್ಣಗೊಳ್ಳುವ ಮೊದಲೇ ಲಸಿಕೆಗೆ ಬಳಕೆಗೆ ಅನುಮತಿ ಕೋರಲಾಗಿದೆ. ಕೋವಿಶೀಲ್ಡ್‌ನಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಎಂದು ಸೀರಂ ಸಂಸ್ಥೆ ಹೇಳಿಕೊಂಡಿದೆ.

  • ಭಾರತೀಯ ಸೇನಾಧಿಕಾರಿ ಅಂತ ಜನರನ್ನು ಮೋಸ ಮಾಡ್ತಿದ್ದ ಯುವಕ ಅರೆಸ್ಟ್

    ಭಾರತೀಯ ಸೇನಾಧಿಕಾರಿ ಅಂತ ಜನರನ್ನು ಮೋಸ ಮಾಡ್ತಿದ್ದ ಯುವಕ ಅರೆಸ್ಟ್

    – ಯುವಕನ ಪತ್ನಿಯೂ ಬಂಧನ

     ಮುಂಬೈ: ಭಾರತೀಯ ಸೇನಾಧಿಕಾರಿ ಎಂದು ಹೇಳಿಕೊಂಡು ಜನರನ್ನು ಮೋಸಗೊಳಿಸುತ್ತಿದ್ದ 23 ವರ್ಷದ ಯುವಕನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದೆ.

    ಇತ್ತೀಚೆಗೆ ಭಾರತೀಯ ಸೇನಾಧಿಕಾರಿಯಂತೆ ನಟಿಸಿ ಜನರನ್ನು ಮೋಸಗೊಳಿಸುತ್ತಿರವ ವ್ಯಕ್ತಿಯನ್ನು ಬಂಧಿಸಿದ್ದೇವೆ. ಮಿಲಿಟರಿ ಗುಪ್ತಚರ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೊಬ್ಬಳನ್ನೂ ಬಂಧಿಸಲಾಗಿದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಸ್ಥಳೀಯ ಅಪರಾಧ ಶಾಖೆಯ (ಎಲ್‍ಸಿಬಿ) ಹಿರಿಯ ಇನ್ಸ್‍ಪೆಕ್ಟರ್ ಪದ್ಮಕರ್ ಘನ್ವತ್ ತಿಳಿಸಿದ್ದಾರೆ.

    ಪುಣೆ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‍ಡಿಎ) ಬಳಿಯ ಕಿರ್ಕಾಟ್ವಾಡಿ ಪ್ರದೇಶದಲ್ಲಿ ಸೇನಾ ಅಧಿಕಾರಿಯಾಗಿ ನಟಿಸುತ್ತಿದ್ದ ಯುವಕನ್ನು ಬಂಧಿಸಿದ್ದಾರೆ. ಈ ವ್ಯಕ್ತಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಎಂದು ಹೇಳಿಕೊಂಡು ನಟಿಸುತ್ತಿದ್ದನು.  ಪೊಲೀಸ್ ಅವರ ನಿವಾಸದಿಂದ ಹಲವಾರು ನಕಲಿ ಮತ್ತು ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

    ಆರೋಪಿಯನ್ನು ಅಂಕಿತ್ ಕುಮಾರ್ ಸಿಂಗ್ (23) ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಹಸನ್ಪುರ ಅಮ್ರೋಹ್ ಮೂಲದವನಾಗಿದ್ದಾನೆ. 10 ಗುರುತಿನ ಚೀಟಿಗಳು, ಎರಡು ಮೊಬೈಲ್‍ಗಳು, ಟ್ಯಾಬ್ಲೆಟ್, ಪ್ರಿಂಟರ್, ಲ್ಯಾಪ್‍ಟಾಪ್, ನಕಲಿ ದಾಖಲೆಗಳು ಮತ್ತು ಭಾರತೀಯ ಸೇನಾಧಿಕಾರಿ ಸಮವಸ್ತ್ರ, ಬೂಟುಗಳು, ಸೊಂಟದ ಬೆಲ್ಟ್ ಮತ್ತು ಕ್ಯಾಪ್ ಅನ್ನು ಪೊಲೀಸರು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.

    ಪೊಲೀಸರಿಗೆ ಬಂದಿರುವ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾಗ ಲೆಫ್ಟಿನೆಂಟ್ ಕರ್ನಲ್ ಅಧಿಕಾರಿಯ ಸೋಗಿನಲ್ಲಿ ಆರೋಪಿ ಜನರನ್ನು ಯುವಕ ಮೋಸ ಮಾಡುತ್ತಿದ್ದನು. ಅರೋಪಿಯ ಹೆಂಡತಿ ಮೀನಾಕ್ಷಿ ಎಂಬ ಮಹಿಳೆಯನ್ನು ಬಂಧಿಸಿ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸೇನೆಯ ನೇಮಕಾತಿ ದಂಧೆಯ ಭಾಗವಾಗಿದ್ದಾರೆಯೇ ಎಂದು ತಿಳಿಯಲು ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡುತ್ತೇವೆ ಪೊಲೀಸರು ತಿಳಿಸಿದ್ದಾರೆ.

  • ಕಸದೊಂದಿಗೆ 3 ಕೋಟಿ ಮೌಲ್ಯದ ಒಡವೆ ಬಿಸಾಕಿ ಪರದಾಡಿದ ಮಹಿಳೆ!

    ಕಸದೊಂದಿಗೆ 3 ಕೋಟಿ ಮೌಲ್ಯದ ಒಡವೆ ಬಿಸಾಕಿ ಪರದಾಡಿದ ಮಹಿಳೆ!

    ಮುಂಬೈ: ಮನೆಯನ್ನು ಸ್ವಚ್ಛಗೊಳಿಸಿದ ಬಳಿಕ ಮಹಿಳೆ ಕಸದ ಜೊತೆಗೆ ಸುಮಾರು 3 ಕೋಟಿ ರೂ. ಬೆಲೆಯ ಚಿನ್ನಾಭರಣವನ್ನೂ ಬಿಸಾಕಿರುವ ಅಚ್ಚರಿಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ದೀಪಾವಳಿ ಅಂಗವಾಗಿ ಮಹಿಳೆ ರೇಖಾ ಸುಲೆಕರ್ ಮನೆಯನ್ನು ಸ್ವಚ್ಛಗೊಳಿಸಿದ್ದು, ಈ ವೇಳೆ ಸುಮಾರು 3 ಕೋಟಿ ರೂ.ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಸಹ ಬೇರೆಡೆ ಎತ್ತಿ ಇಟ್ಟಿದ್ದಾರೆ. ಬಳಿಕ ಕಸ ಸಂಗ್ರಹಿಸುವ ವಾಹನಕ್ಕೆ ನೀಡಿದ್ದಾರೆ. ಬಳಿಕ ರೇಖಾ ಅವರಿಗೆ ಅರಿವಾಗಿದ್ದು, ಕಸದ ಜೊತೆಗೆ ಬೆಲೆ ಬಾಳುವ ಒಡವೆ ತುಂಬಿದ್ದ ಚೀಲವನ್ನೂ ಹಾಕಿರುವುದು ನೆನಪಾಗಿದೆ.

    ಚಿನ್ನವನ್ನು ಹಾಕಿರುವುದು ಅರಿವಿಗೆ ಬರುತ್ತಿದ್ದಂತೆ ಕುಟುಂಬದವರು ಪಿಸಿಎಂಸಿ(ಪಿಂಪ್ರಿ-ಚಿಂಚವಾಡ ಮುನ್ಸಿಪಲ್ ಕಾರ್ಪೋರೇಶನ್) ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಬ್ಯಾಗ್ ಹಾಕಲು ವಾಹನ ಕಸದ ಡಂಪಿಂಗ್ ಯಾರ್ಡ್‍ಗೆ ತೆರಳಿದ್ದು, ನೀವೂ ಅಲ್ಲಿಗೆ ಹೋಗಿ ಎಂದು ಸೂಚಿಸಿದ್ದಾರೆ. ಬಳಿಕ ಕುಟುಂಬಸ್ಥರು ಅಲ್ಲಿಗೆ ತೆರಳಿದ್ದಾರೆ. ಅಲ್ಲದೆ ಪಿಸಿಎಂಸಿ ಉದ್ಯೋಗಿ ಒಂದು ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿದ್ದು, ಅಂತಿಮವಾಗಿ ಬೆಲೆಬಾಳುವ ಒಡವೆಗಳು ತುಂಬಿದ್ದ ಬ್ಯಾಗ್‍ನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ಬ್ಯಾಗ್‍ನ್ನು ಸುರಕ್ಷಿತವಾಗಿ ಮಾಲೀಕರಿಗೆ ತಲುಪಿಸಿದ್ದಾರೆ.

  • ಡ್ರೈವಿಂಗ್ ಕಲಿಸುವ ನೆಪದಲ್ಲಿ ಟೆಕ್ಕಿಯಿಂದ 2.5 ಲಕ್ಷ ದೋಚಿದ ತರಬೇತುದಾರ

    ಡ್ರೈವಿಂಗ್ ಕಲಿಸುವ ನೆಪದಲ್ಲಿ ಟೆಕ್ಕಿಯಿಂದ 2.5 ಲಕ್ಷ ದೋಚಿದ ತರಬೇತುದಾರ

    – ಗೂಗಲ್ ಪೇ ಮೂಲಕ ಹಣವರ್ಗಾವಣೆ

    ಪುಣೆ: ಡ್ರೈವಿಂಗ್ ಹೇಳಿಕೊಡುವ ನೆಪದಲ್ಲಿ ತರಬೇತುದಾರನೊಬ್ಬ ಮಹಿಳಾ ಟೆಕ್ಕಿಯಿಂದ 2.5 ಲಕ್ಷ ರೂ. ದೋಚಿರುವ ಘಟನೆ ಪುಣೆಯ ಕೊಂಡ್ವಾ ಪ್ರದೇಶದಲ್ಲಿ ನಡೆದಿದೆ.

    ಶ್ರೀದೇವಿ ರಾವ್(35) ಅವರನ್ನು ಪ್ರತ್ಯೇಕ ಪ್ರದೇಶಕ್ಕೆ ಕರೆದೊಯ್ದ ಫೋನ್ ಮೂಲಕ ಹಣವನ್ನು ಆರೋಪಿ ವರ್ಗಾಯಿಸಿಕೊಂಡಿದ್ದಾನೆ. ಎಟಿಎಂ ಕಾರ್ಡ್ ನಿಂದ ಹಣವನ್ನು ತೆಗೆದಿದ್ದಾನೆ. ಟೆಕ್ಕಿ ಧರಿಸಿದ್ದ ಚಿನ್ನಾಭರಣವನ್ನು ಸಹ ಲೂಟಿ ಮಾಡಿದ್ದಾನೆ. ನಗದು ಮತ್ತು ಚಿನ್ನಾಭರಣ ಒಟ್ಟು ಸೇರಿಸಿ 2.5 ಲಕ್ಷ ರೂ. ಮೊತ್ತವನ್ನು ದೋಚಿದ್ದಾನೆ ಎಂದು ಟೆಕ್ಕಿ ಆರೋಪ ಮಾಡಿದ್ದಾರೆ.

    ಆರೋಪಿ ಪರಿಚಿತನಾಗಿದ್ದು, ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ಟೆಕ್ಕಿಗೆ ಕಳೆದ ಎಂಟು ದಿನಗಳಿಂದ ಡ್ರೈವಿಂಗ್ ಕಲಿಸುವ ನೆಪದಲ್ಲಿ ಹಣ ದೋಚಿ ಪರಾರಿಯಾಗಿದ್ದಾನೆ. ಮಂಗಳವಾರ ಮಧ್ಯಾಹ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಂಧ್ವಾ ಪೊಲೀಸ್ ಠಾಣೆಯಲ್ಲಿ ರಾಜೇಶ್ ಸಿಂಗ್ ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

    ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಈ ಮಹಿಳೆ ಪೊಷಕರು ಕೊಂಧ್ವಾದಲ್ಲಿ ವಾಸಿಸುತ್ತಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಅವರು ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ಟೆಕ್ಕಿಗೆ ರಾಜೇಶ್ ಸಿಂಗ್ ಎಂಬುವ ವ್ಯಕ್ತಿ ಡ್ರೈವಿಂಗ್ ಹೇಳಿಕೊಡುವ ನೆಪದಲ್ಲಿ ಹಣವನ್ನು ದೋಚಿದ್ದಾನೆ.

    ದೂರಿನಲ್ಲಿ ಏನಿದೆ?
    ರಾಜೇಶ್ ಸಿಂಗ್ ಡ್ರೈವಿಂಗ್ ಹೇಳಿ ಕೊಡುವ ನೆಪದಲ್ಲಿ ತನ್ನ ಸ್ನೇಹಿತರೊಂದಿಗೆ ಪ್ರತ್ಯೇಕ ಸ್ಥಳಕ್ಕೆ ಕರೆದೊಕೊಂಡು ಹೋಗಿ ಗೂಗಲ್ ಪೇ ಮೂಲಕ 40 ಸಾವಿರ ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ. ಎಟಿಎಂ ಕಾರ್ಡ್‍ನಿಂದ 10 ಸಾವಿರ ರೂ. ಗಳನ್ನು ತೆಗೆದುಕೊಂಡಿದ್ದು ಅಲ್ಲದೇ 2 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದಾನೆ. ನನ್ನ ಕೈಗಳನ್ನು ಕಟ್ಟಿ ಹಣವನ್ನು ಫೋನ್ ಮೂಲಕ ವರ್ಗಾಯಿಸಬೇಕೆಂದು ಒತ್ತಾಯಿಸಿ ಮೊಬೈಲ್ಫೋನ್ ಕಸಿದುಕೊಂಡನು. ಅಗತ್ಯವಿರುವ ಎಲ್ಲಾ ಪಾಸ್‍ವರ್ಡ್‍ಗಳ ನನ್ನಿಂದ ಪಡೆದುಕೊಂಡು ಹಣವನ್ನು ವರ್ಗಾಯಿಸಿಕೊಂಡಿದ್ದಾನೆ ಎಂದು ಟೆಕ್ಕಿ ದೂರು ನೀಡಿದ್ದಾನೆ.

    ನಗದು ಮತ್ತು ಚಿನ್ನಾಭರಣ ಸೇರಿ ಒಟ್ಟು 2.5 ಲಕ್ಷ ರೂಪಾಯಿ ಮೌಲ್ಯದ ಹಣವನ್ನು ಟೆಕ್ಕಿ ಮಹಿಳೆಯಿಂದ ಲೂಟಿ ಮಾಡಲಾಗಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಆರೋಪಿಗಳನ್ನೂ ಹುಡುಕುತ್ತೇವೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 363 (ಅಪಹರಣ) ಮತ್ತು 394 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೊಂಧ್ವಾ ಪಿಎಸ್‍ನ ಹಿರಿಯ ಪೆÇಲೀಸ್ ಇನ್ಸ್‍ಪೆಕ್ಟರ್ ಸರ್ದಾರ್ ಪಾಟೀಲ್ ತಿಳಿಸಿದ್ದಾರೆ.

  • ಓರ್ವನ ಕೊಲೆಗೆ 100 ಜನ ಬಂದ್ರು- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಓರ್ವನ ಕೊಲೆಗೆ 100 ಜನ ಬಂದ್ರು- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    – ನೂರರಲ್ಲಿ 10 ಆರೋಪಿಗಳ ಬಂಧನ
    – ಕೈಯಲ್ಲಿ ಮಚ್ಚು, ದೊಣ್ಣೆ, ಲಾಂಗು, ಕಲ್ಲು, ಇಟ್ಟಿಗೆ

    ಮುಂಬೈ/ಪುಣೆ: ಓರ್ವನ ಕೊಲೆಗೆ ನೂರು ಜನ ಬಂದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ದುಷ್ಕರ್ಮಿಗಳು ಸಾಲು ಸಾಲು ಬೈಕುಗಳಲ್ಲಿ ಹೋಗುತ್ತಿರೋದನ್ನ ವೀಡಿಯೋದಲ್ಲಿ ಗಮನಿಸಬಹುದು. ಯುವಕನ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಸ್ಥಳದಲ್ಲಿದ್ದ 10 ವಾಹನಗಳನ್ನು ಜಖಂಗೊಳಿಸಿದ್ದಾರೆ.

    ಮಹಾರಾಷ್ಟ್ರದ ಪುಣೆಯ ನೆಹರೂ ನಗರದಲ್ಲಿ ಶುಕ್ರವಾರ ರಾತ್ರಿ 9.30ಕ್ಕೆ ಈ ಘಟನೆ ನಡೆದಿದೆ. 35 ವರ್ಷದ ನೀಲೇಶ್ ಸುಭಾಷ್ ಜಾಧವ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸುಭಾಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಆಶೀಷ್ ಜಗಧನೆ (31), ಇರ್ಫಾನ್ ಶೇಖ್ (30), ಜೀತೇಶ್ ಮಂಜುಲೆ (28), ಜಾವೇದ್ ಔಟಿ (29), ಆಕಾಶ್ ಹಜಾರೆ (30) ಸೇರಿದಂತೆ ನೂರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕೊಂದು ಬಿಡಿ, ಹೊಡೆದಾಕಿ: ಹಲ್ಲೆಗೊಳಗಾದ ನೀಲೇಶ್ ನೆಹರೂ ನಗರದಲ್ಲಿ ಕೆಲಸ ಮಾಡಿಕೊಂಡಿದ್ದನು. ಶುಕ್ರವಾರ ರಾತ್ರಿ 9.30ಕ್ಕೆ ಕಾರಿನಲ್ಲಿರಿಸಿದ್ದ ಲ್ಯಾಪ್‍ಟಾಪ್ ತೆಗೆದುಕೊಳ್ಳಲು ನೀಲೇಶ್ ಕಚೇರಿಯಿಂದ ಹೊರ ಬಂದ ವೇಳೆ ದಾಳಿ ನಡೆದಿದೆ. ಬೈಕು ಗಳಲ್ಲಿ ಬಂದ ನೂರು ಜನರ ಗ್ಯಾಂಗ್ ನೀಲೇಶ್ ನನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಮಚ್ಚು, ಲಾಂಗು, ದೊಣ್ಣೆ, ಕಲ್ಲು, ಇಟ್ಟಿಗೆ ಸೇರಿದಂತೆ ಮಾರಕಾಸ್ತ್ರಗಳನ್ನ ತಮ್ಮ ಜೊತೆಯಲ್ಲಿ ತಂದಿದ್ದರು. ಹಲ್ಲೆ ವೇಳೆ ಆರೋಪಿಗಳು, ಇವನನ್ನ ಕೊಂದು ಬಿಡಿ, ಹೊಡೆದಾಕಿ ಎಂದು ಜೋರು ಜೋರಾಗಿ ಕೂಗಿದ್ದಾರೆ ಎಂದು ಪಿಂಪ್ರಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.

    ನೀಲೇಶ್ ಮೇಲೆ ಎರಡರಿಂದ ಮೂರು ಬಾರಿ ಲಾಂಗುಗಳಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಲು ಗ್ಯಾಂಗ್ ಸೇರುತ್ತಿದ್ದಂತೆ ಎಚ್ಚೆತ್ತ ನೀಲೇಶ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳು ಹಲ್ಲೆಯ ಬಳಿಕ ಬೈಕುಗಳಲ್ಲಿ ತಿರುಗಾಡಿ ಸ್ಥಳೀಯರನ್ನ ಹೆದರಿಸಿದ್ದಾರೆ. ಪೊಲೀಸರು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರ ನೀಲೇಶ್ ಕುಟುಂಬಸ್ಥರು ಮತ್ತು ಆಪ್ತರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.