Tag: ಪುಣೆ ವಾರಿಯರ್ಸ್

  • ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಮರೆಯಲಾಗದ ದಿನ – ಇತಿಹಾಸ ಸೃಷ್ಟಿಸಿದ್ದ ಗೇಲ್

    ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಮರೆಯಲಾಗದ ದಿನ – ಇತಿಹಾಸ ಸೃಷ್ಟಿಸಿದ್ದ ಗೇಲ್

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಇಂದು ಮರೆಯಲಾಗದ ದಿನ ಏಕೆಂದರೆ 7 ವರ್ಷದ ಹಿಂದೆ ಇದೇ ಏಪ್ರಿಲ್ 23ರಂದು ಕ್ರಿಸ್ ಗೇಲ್ ಅವರು ಇತಿಹಾಸವನ್ನು ಸೃಷ್ಟಿ ಮಾಡಿದ್ದರು.

    2013ರ ಐಪಿಎಲ್ 6ರ ಅವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿ ಆಡುತ್ತಿದ್ದ ವೆಸ್ಟ್ ಇಂಡೀಸ್‍ನ ದೈತ್ಯ ಆಟಗಾರ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧ ವೈಯಕ್ತಿಯ ಅತೀ ಹೆಚ್ಚು ರನ್ ಸಿಡಿಸಿದ್ದರು. 2013ರ ಐಪಿಲ್ 6ನೇ ಅವೃತ್ತಿಯ 31ನೇ ಪಂದ್ಯದಲ್ಲಿ ಪುಣೆ ಬೌಲರ್ಸ್‍ಗಳು ಕಾಡಿದ್ದ ಗೇಲ್, ಅಂದು ಕೇವಲ 66 ಎಸೆತಗಳಲ್ಲಿ 175 ರನ್ (17 ಸಿಕ್ಸ್ 13 ಬೌಂಡರಿ) ಸಿಡಿಸಿ ಹೊಸ ದಾಖಲೆ ಬರೆದಿದ್ದರು.

    ಪುಣೆ ಬೌಲರ್ ಗಳ ಮೇಲೆ ಸವಾರಿ ಮಾಡಿದ್ದ ಗೇಲ್, ಚಿನ್ನಸ್ವಾಮಿ ಕ್ರೀಡಾಂಗಣದ ಮೂಲೆ ಮೂಲೆಗೆ ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 30 ಎಸೆತದಲ್ಲಿ ವೇಗದ ಸೆಂಚೂರಿ ಸಿಡಿಸಿದ್ದರು. ಜೊತೆಗೆ ಒಂದು ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 17 ಸಿಕ್ಸರ್ ಸಿಡಿಸಿದ ದಾಖಲೆಯನ್ನು ಮಾಡಿದ್ದರು ಹಾಗೂ 175 ರನ್ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ವೈಯಕ್ತಿಕ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಕ್ಕೂ ಮುಂಚೆ ಬ್ರೆಂಡನ್ ಮೆಕಲಮ್ ಅವರು 158 ರನ್ ಸಿಡಿಸಿದ್ದು ವೈಯಕ್ತಿಕ ಅತೀ ಹೆಚ್ಚು ರನ್ ಆಗಿತ್ತು.

    ಅಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಪುಣೆ ತಂಡ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಅಹ್ವಾನ ಮಾಡಿತ್ತು. ಅಂತೆಯೇ ಕ್ರಿಸ್ ಗೇಲ್ ಮತ್ತು ದಿಲ್ಶನ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದರು. ಆದರೆ ಒಂದು ಓವರ್ ಮುಗಿದ ನಂತರ ಮಳೆ ಬಂದು ಪಂದ್ಯ ಅರ್ಧ ಗಂಟೆ ನಿಂತು ಹೋಗಿತ್ತು. ನಂತರ ಬ್ಯಾಟಿಂಗ್ ಇಳಿದ ಗೇಲ್ ಪುಣೆ ಬೌಲರ್ಸ್ ಗಳನ್ನು ಅಕ್ರಮಣಕಾರಿಯಾಗಿ ದಂಡಿಸಿದ್ದರು. ಗೇಲ್ ಅವರ 175 ರನ್, ದಿಲ್ಶನ್ ಅವರ 33 ರನ್ ಹಾಗೂ ಎಬಿಡಿ ವಿಲಿಯರ್ಸ್ ಸ್ಫೋಟಕ 8 ಬಾಲಿಗೆ 31 ರನ್‍ಗಳ ನೆರವಿನಿಂದ ಆರ್‍ಸಿಬಿ ಒಟ್ಟು 263 ರನ್ ಗಳಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಗಳಿಸಿದ ತಂಡವಾಗಿ ದಾಖಲೆ ಬರೆದಿತ್ತು.

    ನಂತರ ಬ್ಯಾಟಿಂಗ್‍ಗೆ ಬಂದ ಪುಣೆ ವಾರಿಯರ್ಸ್ ತಂಡ ಬೆಂಗಳೂರು ತಂಡದ ಬಿಗು ಬೌಲಿಂಗ್ ದಾಳಿಗೆ ನಲುಗಿ ಹೋಗಿತ್ತು. ರವಿ ರಮ್‍ಪಾಲ್ ಮತ್ತು ಜೈದೇವ್ ಉನಾದ್ಕತ್ ಅವರ ಮಾರಕ ದಾಳಿಗೆ ತತ್ತರಿಸಿದ ಪುಣೆ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 133 ರನ್ ಗಳಿಸಿತ್ತು. ಈ ಮೂಲಕ ಬೆಂಗಳೂರು ತಂಡ 130 ರನ್‍ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಪುಣೆ ಪರ ಸ್ಟೀವ್ ಸ್ಮಿತ್ ಅವರು 42 ರನ್ ಹೊಡೆದಿದದ್ದರು.

    ಆಲ್‍ರೌಂಡರ್ ಆಟ ಪ್ರದರ್ಶಸಿದ್ದ ಗೇಲ್
    ಅಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರದಿದ್ದ ಜನರಿಗೆ ಗೇಲ್ ಉತ್ತಮ ಮನರಂಜನೆ ನೀಡಿದ್ದರು. ಬ್ಯಾಟಿಂಗ್ ನಲ್ಲಿ ಸಿಕ್ಸ್ ಮೇಲೆ ಸಿಕ್ಸ್ ಭಾರಿಸಿ ಅಭಿಮಾನಿಗಳು ಹುಚ್ಚೆಂದು ಕುಣಿಯುವಂತೆ ಮಾಡಿದ್ದ ಗೇಲ್, ನಂತರ ಬೌಲಿಂಗ್‍ನಲ್ಲೂ ಕಮಾಲ್ ಮಾಡಿದ್ದರು. ಪಂದ್ಯದ ಕೊನೆಯ ಓವರ್ ಅನ್ನು ಬೌಲ್ ಮಾಡಿದ್ದ ಗೇಲ್ 5 ರನ್ ನೀಡಿ ಎರಡು ವಿಕೆಟ್‍ಗಳನ್ನು ಪಡೆದಿದ್ದರು. ಆ ಓವರ್ ನಲ್ಲಿ ವಿಕೆಟ್ ಪಡೆದು ಗೇಲ್ ಸಂಭ್ರಮಿಸಿದ್ದ ರೀತಿ ಮತ್ತು ಆಂಪೈರ್ ಗೆ ಔಟ್ ಎಂದು ಮನವಿ ಮಾಡಿದ್ದ ಶೈಲಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು.