Tag: ಪೀರನವಾಡಿ

  • ಪೀರನವಾಡಿ ಪುತ್ಥಳಿ ಗಲಾಟೆ – ವಿಚಾರಣೆಗೆ ಬೊಮ್ಮಾಯಿ ಸೂಚನೆ

    ಪೀರನವಾಡಿ ಪುತ್ಥಳಿ ಗಲಾಟೆ – ವಿಚಾರಣೆಗೆ ಬೊಮ್ಮಾಯಿ ಸೂಚನೆ

    ಬೆಂಗಳೂರು: ಬೆಳಗಾವಿಯ ಪೀರನವಾಡಿನಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಗಲಾಟೆ ವಿಚಾರ ಸಂಬಂಧ ಪೊಲೀಸರು ದಾಖಲಿಸಿಕೊಂಡಿರುವ ಎಫ್‍ಐಆರ್ ಬಗ್ಗೆ ವಿಚಾರಣೆ ನಡೆಸಲು ಸೂಚಿಸಿರುವುದಾಗಿ ಗೃಹ ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಚಿವರು, ರಾಜ್ಯ ಸರ್ಕಾರ ಕನ್ನಡಿಗರ ಪರವಾಗಿದೆ ಅವರ ಹಿತರಕ್ಷಣೆಯನ್ನು ಕಾಪಾಡಲು ಬದ್ಧವಾಗಿದೆ. ಬೆಳಗಾವಿಯ ಪೀರನವಾಡಿನಲ್ಲಿ ಪೋಲಿಸರು ದಾಖಲು ಮಾಡಿಕೊಂಡಿರುವ ಎಫ್‍ಐಆರ್ ಬಗ್ಗೆ ಎಡಿಜಿಪಿ (L&O) ಅವರಿಗೆ ವಿಚಾರಣೆ ಮಾಡಲು ಸೂಚಿಸಿದ್ದೇನೆ. ಅವರು ಈಗಾಗಲೇ ಘಟನಾ ಸ್ಥಳದಲ್ಲಿದ್ದು, ಶಾಂತಿ ಸಭೆಯನ್ನು ನಡೆಸಿ ಸಮಸ್ಯೆಯನ್ನು ಸೌಹಾರ್ದತೆಯಾಗಿ ಬಗೆಹರಿಸುವಂತೆ ಸೂಚಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಕನ್ನಡಪರ ಹೋರಾಟಗಾರರು ಮತ್ತು ರಾಯಣ್ಣನ ಅಭಿಮಾನಿಗಳು ಪೀರನವಾಡಿಗೆ ತೆರಳಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಿ, ರಾಯಣ್ಣನಿಗೆ ಜೈಕಾರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು.

  • 20 ಮಂದಿ ಕನ್ನಡ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್

    20 ಮಂದಿ ಕನ್ನಡ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್

    ಬೆಳಗಾವಿ: ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಿದ ಕನ್ನಡ ಸಂಘಟನೆಗಳ 20 ಮಂದಿ ಕಾರ್ಯಕರ್ತರ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಲಾಗಿದೆ.

    ದೊಂಬಿ, ಅತಿಕ್ರಮ ಪ್ರವೇಶ, ಮಾರಕಾಸ್ತ್ರಗಳೊಂದಿಗೆ ಗಲಭೆ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಅಡಿ ಆರೋಪ ಸಾಬೀತಾದರೆ ಕನಿಷ್ಠ 3 ತಿಂಗಳಿಂದ 3 ವರ್ಷದವರೆಗೆ ಜೈಲು ಶಿಕ್ಷೆ ಆಗುವ ಸಾಧ್ಯತೆಯಿದೆ.

    ಆದರೆ ಕನ್ನಡ ಕನ್ನಡ ಧ್ವಜಕ್ಕೆ ಚಪ್ಪಲಿ ಎಸೆದವರೊಂದಿಗೆ ಸಂಧಾನ ಮಾಡಲು ಸರ್ಕಾರ ಮುಂದಾಗಿದ್ದು ಟೀಕೆಗೆ ಗುರಿಯಾಗಿದೆ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಸಭೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸಿ ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಟ್ವೀಟ್‌ ಮಾಡಿ ಬೆಳಗಾವಿಯ ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ‌ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿರುವವರ ಮೇಲಿನ ಪೊಲೀಸರ ಲಾಠಿ ಪ್ರಹಾರ ಖಂಡನೀಯ. ನಾನು ಈಗಷ್ಟೆ ಅಲ್ಲಿನ ಜಿಲ್ಲಾಧಿಕಾರಿ‌ ಮತ್ತು ಪೊಲೀಸ್ ಕಮಿಷನರ್ ಜೊತೆ ಮಾತನಾಡಿ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

    ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು, ಬೆಳಗಾವಿ ಜಿಲ್ಲೆ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ವಿರೋಧಿಸಿ ಮರಾಠೀ ಭಾಷಿಗರು ದಾಂಧಲೆ ನಡೆಸಿದ್ದು ಅಕ್ಷಮ್ಯ. ನಮ್ಮ ನೆಲದಲ್ಲಿ ಅಪ್ರತಿಮ ಹೋರಾಟಗಾರ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

    ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಹೆಮ್ಮೆ. ಅವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನ ಕೆಣಕಿದಂತೆ. ನಾಡಿನ ವೀರಪುತ್ರ ಮತ್ತು ವನಿತೆಯರ ವಿರುದ್ಧ ನಮ್ಮ ನೆಲದಲ್ಲಿ ತಗಾದೆ ತೆಗೆದರೆ ತಕ್ಕಪಾಠ ಕಲಿಸಬೇಕಾಗುತ್ತದೆ. ನಮ್ಮ ನಾಡಿನ ನೆಲ-ಜಲ, ಭಾಷೆ ಮತ್ತು ಗಡಿ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈ ನೆಲದ ಅಸ್ಮಿತೆಗೆ ಭಂಗ ತರುವವರನ್ನು ಹೆಡೆಮುರಿ ಕಟ್ಟುವುದು ಸ್ವಾಭಿಮಾನಿ ಕನ್ನಡಿಗರ ರಕ್ತದಲ್ಲೇ ಇದೆ. ಕನ್ನಡಿಗರೆಂದರೆ -ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯನ್, ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಎಂದು ಹೇಳಿದ್ದಾರೆ.

  • ಪೀರನವಾಡಿಯಲ್ಲಿ ಪ್ರತಿಮೆ ಪಾಲಿಟಿಕ್ಸ್‌ – ಎರಡು ಗುಂಪುಗಳ ಮೇಲೆ ಲಾಠಿಚಾರ್ಜ್‌

    ಪೀರನವಾಡಿಯಲ್ಲಿ ಪ್ರತಿಮೆ ಪಾಲಿಟಿಕ್ಸ್‌ – ಎರಡು ಗುಂಪುಗಳ ಮೇಲೆ ಲಾಠಿಚಾರ್ಜ್‌

    ಬೆಳಗಾವಿ: ಪೀರನವಾಡಿಯಲ್ಲಿ ಪ್ರತಿಮೆ ಸ್ಥಾಪನೆ ವಿಚಾರವಾಗಿ ಕಿತ್ತಾಟ ನಡೆಸಿದ್ದ ಎರಡು ಗುಂಪುಗಳ ಮೇಲೆ ಪೊಲೀಸರು ಲಾಠಿಜಾರ್ಜ್‌ ನಡೆಸಿದ್ದಾರೆ.

    ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯನ್ನು ಖಂಡಿಸಿ ಇಂದು ಅಲ್ಲಿದ್ದ ಎಂಇಎಸ್‌ ಪುಂಡರು ಶಿವಾಜಿ ಪ್ರತಿಮೆ ಸ್ಥಾಪನೆ ಮುಂದಾಗಿದ್ದರು. ಈ ವೇಳೆ ಅಲ್ಲಿದ್ದ ಜನತೆ ತಡೆದಿದ್ದರು.  ಎರಡು ಕಡೆ ಜನರು ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.  ಎರಡು ಗುಂಪುಗಳ ಜನ ಹೆಚ್ಚು ಸೇರುತ್ತಿದ್ದತೆ ಎಚ್ಚೆತ್ತ ಪೊಲೀಸರು ಲಾಠಿಚಾರ್ಜ್‌ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

    ರಾತ್ರಿ ಏನಾಗಿತ್ತು?
    ಕನ್ನಡಪರ ಹೋರಾಟಗಾರರು ಮತ್ತು ರಾಯಣ್ಣನ ಅಭಿಮಾನಿಗಳು ಪೀರನವಾಡಿಗೆ ತೆರಳಿ ಪ್ರತಿಮೆ ಸ್ಥಾಪನೆ ಮಾಡಿ, ರಾಯಣ್ಣನಿಗೆ ಜೈಕಾರ ಹಾಕಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು.

    ನಿನ್ನೆ ರಾಯಣ್ಣ ಅಭಿಮಾನಿಗಳು ಬೆಳಗಾವಿ ಚಲೋ ಹಮ್ಮಿಕೊಂಡಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಿರಲಿಲ್ಲ. ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ರಾಜ್ಯ ಕುರುಬರ ಸಂಘ ಮತ್ತು ಕನ್ನಡ ಸಂಘಟನೆಯ ನೂರಾರು ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದರು. ನಾಳೆ ಸಚಿವ ಈಶ್ವರಪ್ಪ ಜೊತೆ ಮಾತುಕತೆ ನಡೆಸಿ ವಿವಾದ ಇತ್ಯರ್ಥ ಮಾಡುತ್ತೇನೆ ಎಂದಿದ್ದರು.

    ಇತ್ತ ರಾತ್ರೋರಾತ್ರಿ ಪೀರನವಾಡಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಎಂಇಎಸ್‌ ಕಾರ್ಯಕರ್ತರು ಮೂರ್ತಿ ಪ್ರತಿಷ್ಠಾಪನೆ ಬೆನ್ನಲ್ಲೇ ಬೆಳ್ಳಂಬೆಳಗ್ಗೆ ಶಿವಾಜಿ ಮೂರ್ತಿ ಸ್ಥಾಪನೆಗೆ ಮುಂದಾಗಿದ್ದರು.

    ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಶಿವಾಜಿ ಮೂರ್ತಿಯನ್ನು ವಶಕ್ಕೆ ಪಡೆದುಕೊಂಡರು. ಅಲ್ಲದೇ ಶಿವಾಜಿ ಮೂರ್ತಿ ಪ್ರತಿಮೆ ಸ್ಥಾಪನೆ ಮಾಡಲು ಬಂದ ಎಂಇಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಪೊಲೀಸರ ಹಾಗೂ ಮರಾಠಿ ಭಾಷಿಕರ ನಡುವೆ ವಾಗ್ವಾದ ನಡೆದಿತ್ತು.