Tag: ಪಿ.ಸಿ.ಘೋಷ್

  • ಭಾರತದ ಮೊದಲ ಲೋಕಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಪಿ.ಸಿ.ಘೋಷ್

    ಭಾರತದ ಮೊದಲ ಲೋಕಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಪಿ.ಸಿ.ಘೋಷ್

    ನವದೆಹಲಿ: ಭಾರತ ಮೊದಲ ಲೋಕಪಾಲರಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಪಿಣಕಿ ಚಂದ್ರ ಘೋಷ್ ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

    ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪಿ.ಸಿ.ಘೋಷ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಪ್ರಮಾಣ ವಚನ ಕಾರ್ಯಕ್ರಮವು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಸಮ್ಮುಖದಲ್ಲಿ ನಡೆಯಿತು.

    ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಮಾರ್ಚ್ 19ರಂದು ಪಿ.ಸಿ.ಘೋಷ್ ಅವರನ್ನು ಲೋಕಪಾಲರಾಗಿ ಆಯ್ಕೆ ಮಾಡಿ ಘೋಷನೆ ಮಾಡಿದ್ದರು.

    ನ್ಯಾ.ಪಿ.ಸಿ.ಘೋಷ್ ಅವರು ನಾಲ್ಕು ವರ್ಷಗಳ ಕಾಲ ಸುಪ್ರೀಂಕೋರ್ಟ್ ನ್ಯಾಯಧೀಶರಾಗಿ ಸೇವೆ ಸಲ್ಲಿಸಿ ಮೇ 2017ರಂದು ನಿವೃತ್ತರಾಗಿದ್ದರು. ಲೋಕಪಾಲರಾಗಿ ಆಯ್ಕೆಯಾಗುವುದಕ್ಕೂ ಮುನ್ನ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎಂಎಚ್‍ಆರ್‍ಡಿ) ಸದಸ್ಯರಾಗಿದ್ದರು.

    ಲೋಕಪಾಲ ಕಾರ್ಯವ್ಯಾಪ್ತಿ ಏನು?:
    ಲೋಕಪಾಲರು ಹಾಲಿ ಮತ್ತು ಮಾಜಿ ಪ್ರಧಾನಿಗಳು, ಸಂಸದರು, ಕೇಂದ್ರ ಮಂತ್ರಿಗಳು, ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಸಿಬ್ಬಂದಿ ಹಾಗೂ 10 ಲಕ್ಷ ರೂ.ಗಿಂತ ಹೆಚ್ಚಿನ ವಿದೇಶಿ ದೇಣಿಗೆ ಸ್ವೀಕರಿಸುವ ಸರ್ಕಾರೇತರ ಸಂಸ್ಥೆಗಳ(ಎನ್‍ಜಿಒ) ಮೇಲೆ ಕೇಳಿಬರುವ ದೂರುಗಳ ತನಿಖೆಯನ್ನು ನಡೆಸುವ ಅಧಿಕಾರವನ್ನು ಹೊಂದಿದ್ದಾರೆ.