Tag: ಪಿ ರಾಜೇಂದ್ರ ಚೋಳನ್

  • ಭಾರೀ ಮಳೆಗೆ ವಿದ್ಯುತ್ ವ್ಯತ್ಯಯ – ನಿರ್ವಹಣೆಗಿಳಿದ ಬೆಸ್ಕಾಂ ಎಂಡಿ

    ಭಾರೀ ಮಳೆಗೆ ವಿದ್ಯುತ್ ವ್ಯತ್ಯಯ – ನಿರ್ವಹಣೆಗಿಳಿದ ಬೆಸ್ಕಾಂ ಎಂಡಿ

    ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆಲವಡೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಆಗಿದೆ. ನಿನ್ನೆ ರಾತ್ರಿಯಿಂದಲೇ ವಿದ್ಯುತ್ ಪೂರೈಕೆ ಸರಿಪಡಿಸಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ ರಾಜೇಂದ್ರ ಚೋಳನ್ ಖುದ್ದು ಕಾರ್ಯಚರಣೆಗಿಳಿದರು.

    ಮಂಗಳವಾರ ರಾತ್ರಿ ಬೆಸ್ಕಾಂನ ಎಲ್ಲಾ ಮುಖ್ಯ ಇಂಜಿನಿಯರ್, ಅಧೀಕ್ಷಕ ಇಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಪರಿಸ್ಥಿತಿ ನಿಭಾಯಿಸಲು ಸೂಚನೆ ನೀಡಿದ ಅವರು, ವಿದ್ಯುತ್ ವ್ಯತ್ಯಯದ ಕುರಿತು ಮೇಲ್ವಿಚರಣೆ ಹಾಗೂ ಕಾಮಗಾರಿ ಮೇಲೆ ನಿಗಾವಹಿಸಿದರು. ಬೆಸ್ಕಾಂ ಎಂಡಿ ಖುದ್ದು ನಿರ್ವಹಣೆಯಿಂದಾಗಿ ಮಂಗಳವಾರ ರಾತ್ರಿಯೇ ವಿದ್ಯುತ್ ವ್ಯತ್ಯಯವನ್ನು ಕೆಲವಡೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿತ್ತು.

    ಇದರ ಮುಂದುವರಿದ ಭಾಗವಾಗಿ, ರಾಜೇಂದ್ರ ಚೋಳನ್ ಕೆಂಗೇರಿ, ರಾಜರಾಜೇಶ್ವರಿ ನಗರ, ಕೋರಮಂಗಲ, ಹೆಚ್‌ಎಸ್‌ಆರ್ ಬಡಾವಣೆ ಹಾಗೂ ಇಂದಿರಾನಗರ ಬೆಸ್ಕಾಂ ವಲಯಗಳಿಗೆ ಬುಧವಾರ ಖುದ್ದು ಭೇಟಿ ನೀಡಿ ವಿದ್ಯುತ್ ಪೂರೈಕೆ ಸರಿಪಡಿಸುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಸಾರ್ವಜನಿಕರ ಜೊತೆ ಮಾತುಕತೆ ನಡೆಸಿದರು. ಭಾರೀ ಮಳೆ ಇದ್ದರೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗದ ರೀತಿ ಕ್ರಮ ವಹಿಸಿದ ಬೆಸ್ಕಾಂ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

    ವಿದ್ಯುತ್ ಪೂರೈಕೆಯಲ್ಲಾಗಿರುವ ಅಡಚಣೆ ಹಾಗೂ ಅದನ್ನು ಸರಿಪಡಿಸಲು ಬೆಸ್ಕಾಂ ಸಿಬ್ಬಂದಿ ವಹಿಸಿರುವ ಕ್ರಮಗಳ ಕುರಿತು ಬೆಸ್ಕಾಂ ಎಂಡಿ ಮೇಲ್ವಿಚಾರಣೆ ಮಾಡಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ರಾಜರಾಜೇಶ್ವರಿ ನಗರದ ಕೆಂಚನಹಳ್ಳಿ ಸಮೀಪದ ಅಪಾರ್ಟ್ಮೆಂಟ್ ಒಂದರ ನಿವಾಸಿಗಳ ಜತೆ ಬೆಸ್ಕಾಂ ಎಂಡಿ ಮಾತುಕತೆ ನಡೆಸಿದರು. ಭಾರೀ ಮಳೆಯಿಂದಾಗಿ ಅಪಾರ್ಟ್ಮೆಂಟ್ ಜಲಾವೃತವಾಗಿತ್ತು. ಕೆಂಚನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಸರಿಪಡಿಸುವ ಕಾಮಗಾರಿಯ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರಾಜೀನಾಮೆ

    ಇಂದಿರಾನಗರದ ತಿಪ್ಪಸಂದ್ರ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಯಾಗಿದ್ದ ವಿದ್ಯುತ್ ಮಾರ್ಗದ ಮರುಸ್ಥಾಪನೆ ಕಾಮಗಾರಿಯನ್ನು ರಾಜೇಂದ್ರ ಚೋಳನ್ ವೀಕ್ಷಿಸಿದರು. ಭಾರೀ ಮಳೆಯಿದ್ದರೂ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಂಡ ಬೆಸ್ಕಾಂ ಕ್ರಮಕ್ಕೆ ಹೆಚ್‌ಎಸ್‌ಆರ್ ಬಡಾವಣೆಯ ನಿವಾಸಿಗಳು ಎಂಡಿ ಅವರನ್ನು ಶ್ಲಾಘಿಸಿದರು. ಮಳೆಯಿಂದಾದ ನಿಖರ ಹಾನಿ ಮತ್ತು ವಿದ್ಯುತ್ ವ್ಯತ್ಯಯ ಕುರಿತು ಬೆಸ್ಕಾಂ ಎಂಡಿ ಬೆಸ್ಕಾಂ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಜೊತೆಗೆ ವಿದ್ಯುತ್ ವ್ಯತ್ಯಯನ್ನು ಸರಿಪಡಿಸಿ, ವಿದ್ಯುತ್ ಪೂರೈಕೆಯನ್ನು ಪುನರ್ ಸ್ಥಾಪಿಸಿರುವ ಪ್ರದೇಶಗಳ ಮಾಹಿತಿ ಪಡೆದರು.

    ಮಳೆಯ ನಡುವೆಯೇ, ಬೆಸ್ಕಾಂ ಸಿಬ್ಬಂದಿ ಮಂಗಳವಾರ ರಾತ್ರಿ ಇಡೀ ಕಾರ್ಯಚರಣೆ ನಡೆಸಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಂಡಿರುವ ಬೆಸ್ಕಾಂ ಲೈನ್ ಮ್ಯಾನ್‌ಗಳ ಕಾರ್ಯವನ್ನು ರಾಜೇಂದ್ರ ಚೋಳನ್ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಲೈನ್ ಮ್ಯಾನ್ ಸಿಬ್ಬಂದಿ ಜೊತೆಗೆ ಮಾತುಕತೆ ನಡೆಸಿದ ಅವರು, ಸುರಕ್ಷತಾ ಕ್ರಮಗಳನ್ನು ಬಳಸಿಕೊಂಡು ಸೇವೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು. ಭಾರೀ ಮಳೆಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ನಿನ್ನೆ ರಾತ್ರಿಯೇ ಕೆಲವಡೆ ಸಂಪರ್ಕ ಮರು ಸ್ಥಾಪಿಸಲಾಗಿದ್ದು, ಕೆಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಶೇ.28 ಜಿಎಸ್‌ಟಿ

    ವಿದ್ಯುತ್ ವ್ಯತ್ಯಯ ವಿವರ:
    ಭಾರೀ ಮಳೆ ಹಿನ್ನೆಲೆಯಲ್ಲಿ ಬೆಸ್ಕಾಂ ಸಹಾಯವಾಣಿ 1912ಗೆ ಮಂಗಳವಾರ ರಾತ್ರಿ 13,734 ಕರೆಗಳು ಬಂದಿದ್ದು, ಈ ಪೈಕಿ 13,165 ಕರೆಗಳು ಪವರ್ ಕಟ್‌ಗೆ ಸಂಬಂಧಿಸಿವೆ. ಬೆಂಗಳೂರು ನಗರ ಜಿಲ್ಲೆಯ ಬೆಸ್ಕಾಂ ವಿಭಾಗದಲ್ಲಿ ಒಟ್ಟು 107 ಫೀಡರ್‌ಗಳು ತೊಂದರೆಗೊಳಗಾಗಿವೆ. ಮಲ್ಲೇಶ್ವರಂ 12, ಹೆಬ್ಬಾಳ 13, ಕೆಂಗೇರಿ 7, ರಾಜಾಜಿನಗರ 4, ಪೀಣ್ಯ 4, ರಾಜರಾಜೇಶ್ವರಿನಗರ 1, ಹೆಚ್‌ಎಸ್‌ಆರ್ ಬಡಾವಣೆ 20, ಇಂದಿರಾನಗರ 4, ಜಾಲಹಳ್ಳಿ 9, ಜಯನಗರ 12, ಕೋರಮಂಗಲ 8, ಶಿವಾಜಿನಗರ 8, ವಿಧಾನಸೌಧ 2 ಹಾಗೂ ವೈಟ್ ಫಿಲ್ಡ್ನಲ್ಲಿ 3 ಫೀಡರ್‌ಗಳು ಮಳೆ, ಗುಡುಗು-ಸಿಡಿಲಿಗೆ ಟ್ರಿಪ್ ಆಗಿತ್ತು.

    ಬೆಸ್ಕಾಂ ಸಿಬ್ಬಂದಿ ಬುಧವಾರ ಬೆಳಗ್ಗೆ ವೇಳೆ ಎಲ್ಲಾ ಫೀಡರ್‌ಗಳನ್ನು ದುರಸ್ಥಿ ಮಾಡಿ, ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.