Tag: ಪಿವಿ ಸಿಂಧು

  • ಪಿವಿ ಸಿಂಧುವನ್ನು ಮದುವೆಯಾಗ್ತೀನಿ, ಇಲ್ಲ ಅಂದ್ರೆ ಕಿಡ್ನಾಪ್ – ಡಿಸಿಗೆ 70ರ ವೃದ್ಧನ ಬೇಡಿಕೆ

    ಪಿವಿ ಸಿಂಧುವನ್ನು ಮದುವೆಯಾಗ್ತೀನಿ, ಇಲ್ಲ ಅಂದ್ರೆ ಕಿಡ್ನಾಪ್ – ಡಿಸಿಗೆ 70ರ ವೃದ್ಧನ ಬೇಡಿಕೆ

    ಚೆನ್ನೈ: ಬ್ಯಾಡ್ಮಿಂಟನ್ ಚಾಂಪಿಯನ್ ಪಿವಿ ಸಿಂಧು ಅವರೊಂದಿಗೆ ವಿವಾಹ ಮಾಡಬೇಕು. ಇಲ್ಲವಾದರೆ ಆಕೆಯನ್ನು ಅಪಹರಿಸುತ್ತೇನೆ ಎಂದು 70 ವರ್ಷದ ವೃದ್ಧ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿರುವ ಘಟನೆ ತಮಿಳುನಾಡಿನ ರಾಮನಾಥಪುರಂನಲ್ಲಿ ನಡೆದಿದೆ.

    ಡಿಸಿ ಅವರಿಗೆ ಅರ್ಜಿ ಸಲ್ಲಿಸಿದ ವೃದ್ಧನ ಹೆಸರು ಮಲೈಸ್ವಾಮಿ. ಆದರೆ ಅರ್ಜಿಯಲ್ಲಿ ಆತ ತನಗೆ ಕೇವಲ 16 ವರ್ಷ ಎಂದು ನಮೂದಿಸಿದ್ದು, ಸಿಂಧುರೊಂದಿಗೆ ವಿವಾಹಕ್ಕೆ ಬೇಕಾದ ಸಿದ್ಧತೆ ನಡೆಸಿಕೊಡಿ ಎಂದು ಕೋರಿದ್ದಾರೆ. ಅಲ್ಲದೇ ಮದುವೆ ಸಿದ್ಧತೆ ಮಾಡದಿದ್ದರೆ ಸಿಂಧುರನ್ನ ಅಪಹರಣ ಮಾಡುವುದಾಗಿಯೂ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಜನರ ಸಮಸ್ಯೆಗಳನ್ನು ಕೇಳಲು ಸಭೆಯನ್ನು ಏರ್ಪಡಿಸುತ್ತಾರೆ. ಈ ಸಭೆಗೆ ಆಗಮಿಸಿದ್ದ ಮಲೈಸ್ವಾಮಿ ಅವರು ಸಿಂಧು ಆಡುವ ಶೈಲಿ ತನಗೆ ಬಹಳ ಇಷ್ಟವಾಗಿದ್ದು, ಆಕೆಯನ್ನು ತನ್ನ ಮದುವೆಯಾಗುವ ಯೋಚನೆ ಇದೆ ಎಂದು ಇಬ್ಬರ ಫೋಟೋಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.

    ಅರ್ಜಿಯಲ್ಲಿ ತಾನು 2004 ರಲ್ಲಿ ಜನಿಸಿರುವುದಾಗಿ ಹೇಳಿರುವ ಮಲೈಸ್ವಾಮಿ ಜಿಲ್ಲಾಧಿಕಾರಿಗೆ ಅರ್ಜಿ ನೀಡಿದ್ದಾರೆ. ಇಂತಹ ವಿಚಿತ್ರ ಅರ್ಜಿ ಪಡೆದಿರುವ ಜಿಲ್ಲಾಧಿಕಾರಿಗಳು ಹಾಗೂ ಸ್ಥಳದಲ್ಲಿದ್ದ ಜನರು ಕ್ಷಣ ಕಾಲ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಸಿಂಧುರೊಂದಿಗೆ ತನ್ನ ಮದುವೆ ಮಾಡಲೇ ಬೇಕು ಎಂದು ವೃದ್ಧ ಮಲೈಸ್ವಾಮಿ ಪಟ್ಟು ಹಿಡಿದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  • ಲಿ ನಿಂಗ್ ಜೊತೆ 4 ವರ್ಷ ಒಪ್ಪಂದ – ಸಹಿ ಹಾಕಿ ಭಾರತದಲ್ಲಿ ದಾಖಲೆ ಬರೆದ ಸಿಂಧು

    ಲಿ ನಿಂಗ್ ಜೊತೆ 4 ವರ್ಷ ಒಪ್ಪಂದ – ಸಹಿ ಹಾಕಿ ಭಾರತದಲ್ಲಿ ದಾಖಲೆ ಬರೆದ ಸಿಂಧು

    ಹೈದರಾಬಾದ್: ಶಟ್ಲರ್ ಪಿವಿ ಸಿಂಧು ಚೀನಾ ಕ್ರೀಡಾ ಉತ್ಪನ್ನಗಳನ್ನು ತಯಾರಿಸುವ ಲಿ ನಿಂಗ್ ಕಂಪನಿಯ ಜೊತೆ 50 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ದೇಶದಲ್ಲೇ ಹೊಸ ದಾಖಲೆ ಬರೆದಿದ್ದಾರೆ.

    ಭಾರತದಲ್ಲಿ ಕ್ರಿಕೆಟ್ ಆಟಗಾರರನ್ನು ಹೊರತು ಪಡಿಸಿ ಅತಿ ಹೆಚ್ಚು ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಈಗ ಸಿಂಧು ಪಾತ್ರರಾಗಿದ್ದಾರೆ. ಇದರ ಜೊತೆಯಲ್ಲೇ 50 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ ದೇಶದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಪಟ್ಟ ಈಗ ಸಿಂಧುಗೆ ಒಲಿದಿದೆ. ಇದನ್ನೂ ಓದಿ: ಕೊಹ್ಲಿಯ ಒಂದು ದಿನದ ಬ್ರಾಂಡ್ ವಾಲ್ಯೂ 4.5-5 ಕೋಟಿ ರೂ.!

    4 ವರ್ಷಗಳ ಪ್ರಚಾರಕ್ಕಾಗಿ ಸಿಂಧು ಅವರು ಲಿ ನಿಂಗ್ ಕಂಪನಿಯ ಜೊತೆ 50 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದ ಪ್ರಕಾರ ಪಿವಿ ಸಿಂಧು ಅವರಿಗೆ ಪ್ರಯೋಜಕತ್ವ ಹಣ ಮತ್ತು 5 ಕೋಟಿ ರೂ. ಮೌಲ್ಯದ ಸಲಕರಣೆಗಳನ್ನು ನೀಡಲಿದೆ. ಇದನ್ನೂ ಓದಿ: ಅತಿ ಹೆಚ್ಚು ಆದಾಯ- ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಪಿವಿ ಸಿಂಧುಗೆ ಮಾತ್ರ ಸ್ಥಾನ

    ಲಿ ನಿಂಗ್ ಕಂಪನಿ ಈಗಾಗಲೇ ಶಟ್ಲರ್ ಕಿಡಂಬಿ ಶ್ರೀಕಾಂತ್ ಜೊತೆ 4 ವರ್ಷಕ್ಕೆ 35 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. ಇದನ್ನೂ ಓದಿ: ಕೊಹ್ಲಿಯ ಒಂದು ಪೋಸ್ಟ್​​ಗೆ ಸಿಗುತ್ತೆ 82 ಲಕ್ಷ ರೂ.! – ಪೋಸ್ಟ್​​ಗೆ ಹೇಗೆ ಹಣ ಪಡೆಯುತ್ತಾರೆ? ಮಾನದಂಡವೇನು?

    2023ರವರೆಗೆ ಲಿ ನಿಂಗ್ ಕಂಪನಿ ಪ್ರಚಾರ ಮಾಡಲಿರುವ ಸಿಂಧು ಈಗಾಗಲೇ ಪಿಎನ್‍ಬಿ ಮೆಟ್‍ಲೈಫ್, ವೈಜಾಗ್ ಸ್ಟೀಲ್, ಬ್ಯಾಂಕ್ ಆಫ್ ಬರೋಡಾ, ಆಪಿಸ್ ಹನಿ, ಜಾನ್ಸನ್ ಆಂಡ್ ಜಾನ್ಸನ್, ಮೂವ್, ಗ್ಯಾಟೋರೇಡ್, ಪ್ಯಾನಾಸೋನಿಕ್ ಬ್ಯಾಟರಿ, ಬ್ರಿಡ್ಜ್ ಸ್ಟೋನ್, ಮಿಶನ್ ಸ್ಫೋರ್ಟ್ಸ್, ಜೆಬಿಎಲ್, ಮಿಂಟ್ರಾ ಕಂಪನಿಯ ಪ್ರಚಾರ ರಾಯಭಾರಿಯಾಗಿದ್ದಾರೆ.

    2018ರ ಜಕರ್ತಾ ಏಷ್ಯನ್ ಕ್ರೀಡೆಯಲ್ಲಿ ಟೀಂ ಇಂಡಿಯಾದ ಬ್ಯಾಡ್ಮಿಂಟನ್ ತಂಡದ ಅಧಿಕೃತ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದ ಲಿ ನಿಂಗ್ 2020ರ ಟೋಕಿಯೋ ಒಲಿಂಪಿಕ್ಸ್ ಭಾರತದ ತಂಡದ ಉಡುಪಿನ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ. ಇದನ್ನೂ ಓದಿ: ವಿರಾಟ್ ಕೊಹ್ಲಿಯ ಜಾಹಿರಾತು ಸಂಭಾವನೆ ಹೆಚ್ಚಳ- 1 ದಿನದ ಸಂಭಾವನೆ ಎಷ್ಟು ಗೊತ್ತಾ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2018ರ ರೌಂಡಪ್ – ಕ್ರೀಡೆಯಲ್ಲಿ ಭಾರತೀಯ ಆಟಗಾರರ ಮಿಂಚು!

    2018ರ ರೌಂಡಪ್ – ಕ್ರೀಡೆಯಲ್ಲಿ ಭಾರತೀಯ ಆಟಗಾರರ ಮಿಂಚು!

    ಬೆಂಗಳೂರು: ಕ್ರೀಡೆಯಲ್ಲಿ ಈ ವರ್ಷ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ದಾಖಲೆ ಬರೆದಿದ್ದರೆ, ಪುರುಷರ ಮತ್ತು ಮಹಿಳೆಯ ಕ್ರಿಕೆಟ್ ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ.

    ಏಷ್ಯನ್ ಗೇಮ್ಸ್ ದಾಖಲೆ: ಇಂಡೋನೇಷ್ಯಾದಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಇತಿಹಾಸದಲ್ಲೇ ಅತಿಹೆಚ್ಚು ಪದಕಗಳನ್ನು ಗೆಲ್ಲವು ಮೂಲಕ ದಾಖಲೆ ಬರೆಯಿತು. 15 ಚಿನ್ನ, 24 ಬೆಳ್ಳಿ, 30 ಕಂಚು ಜಯಿಸುವ ಮೂಲಕ ಒಟ್ಟು 69 ಪದಕಗಳನ್ನು ಭಾರತದ ಸ್ಪರ್ಧಿಗಳು ಗೆದ್ದುಕೊಂಡಿದ್ದರು. 2010ರಲ್ಲಿ ಚೀನಾದಲ್ಲಿ ನಡೆದಿದ್ದ 16ನೇ ಏಷ್ಯನ್ ಗೇಮ್ಸ್‍ನಲ್ಲಿ 65 ಪದಕಗಳನ್ನು ಗೆದ್ದಿದ್ದೇ ಭಾರತದ ಇವರೆಗಿನ ದಾಖಲೆಯಾಗಿತ್ತು.

    ಮೇರಿ ಕೋಮ್ ದಾಖಲೆ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ 6ನೇ ಬಾರಿಗೆ ಚಿನ್ನದ ಜಯಿಸಿ ಅತಿಹೆಚ್ಚು ವಿಶ್ಚ ಚಾಂಪಿಯನ್‍ಶಿಪ್ ಜಯಿಸಿದ ದಾಖಲೆ ಹೊಂದಿರುವ ಕ್ಯೂಬಾ ದಂತಕಥೆ ಫೆಲಿಕ್ಸ್ ಸ್ಯಾವನ್ ದಾಖಲೆಯನ್ನು ಸರಿಗಟ್ಟಿದ್ದರು. ವಿಶ್ವ ಬಾಕ್ಸಿಂಗ್ ಚಾಂಪಿಯನ್‍ನಲ್ಲಿ ಚಿನ್ನ ಗೆಲ್ಲುವ ಮೂಲಕ 6 ಚಿನ್ನ, 1 ಬೆಳ್ಳಿ ಪದಕ ಪಡೆದಿದ್ದಾರೆ.

    ಅಂಡರ್ 19 ವಿಶ್ವಕಪ್: ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ಅಂಡರ್ 19 ತಂಡ 2018ರ ವಿಶ್ವಕಪ್ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿತು. ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದು ಪೃಥ್ವಿಶಾ ನೇತೃತ್ವದ ಭಾರತ ಈ ಮೂಲಕ ನಾಲ್ಕನೇಯ ಬಾರಿ ವಿಶ್ವಕಪ್ ಜಯಿಸಿದ ಸಾಧನೆ ನಿರ್ಮಿಸಿತು.

    ಪಿವಿ ಸಿಂಧು: 2018ರ ಬಿಡಬ್ಲ್ಯುಎಫ್  ವರ್ಲ್ಡ್ ಟೂರ್ ಪ್ರಶಸ್ತಿ ಪಿವಿ ಸಿಂಧು ಗೆದ್ದಿದ್ದಾರೆ. ಈ ಮೂಲಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ 1 ಬೆಳ್ಳಿ ಮತ್ತು 1 ಚಿನ್ನದ ಪದಕ ಗೆದ್ದ ಭಾರತದ ಏಕೈಕ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. 2018ರ ಪ್ರಶಸ್ತಿಯನ್ನು ಸೇರಿಸಿ ಶ್ರೇಯಾಂಕವನ್ನು ಪರಿಷ್ಕೃತಗೊಳಿಸಿದರೆ ಪಿವಿ ಸಿಂಧುಗೆ ವಿಶ್ವ ನಂ.1 ಪಟ್ಟ ಸಿಗುವ ಸಾಧ್ಯತೆಯಿದೆ.

    ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ: ಈ ವರ್ಷ ಟೀಂ ಇಂಡಿಯಾದ ಹಲವು ಹಿರಿಯ ಆಟಗಾರರು ತಮ್ಮ ವೃತ್ತಿ ಬದುಕಿಗೆ ವಿದಾಯ ಘೋಷಿಸಿದರು. ಪ್ರಮುಖವಾಗಿ ಮೊಹಮ್ಮದ್ ಕೈಫ್, ಮುನಾಫ್ ಪಟೇಲ್, ಆರ್ ಪಿ ಸಿಂಗ್, ಗೌತಮ್ ಗಭೀರ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಹೇಳಿದರೆ, ಅಂಬಾಟಿ ರಾಯುಡು ಪ್ರಥಮ ದರ್ಜೆ ಕ್ರಿಕೆಟ್‍ಗೆ ವಿದಾಯ ಹೇಳಿದರು.

    ಇಂಗ್ಲೆಂಡ್‍ನಲ್ಲಿ ಯುವರಾಜ್ ಸಿಂಗ್‍ರೊಂದಿಗೆ ಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಕೈಫ್ ಶ್ರೇಷ್ಠ ಫೀಲ್ಡರ್ ಎಂಬ ಖ್ಯಾತಿ ಪಡೆದಿದ್ದರು. ಅಲ್ಲದೇ 2000 ರಲ್ಲಿ ನಡೆದ ಅಂಡರ್ 19 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಆರ್ ಪಿ ಸಿಂಗ್ ಟೀಂ ಇಂಡಿಯಾ ಕಂಡ ಯಶಸ್ವಿ ಎಡಗೈ ವೇಗಿ ಆಗಿದ್ದು, 2007ರ ಟಿ20 ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

    2008ರ ಆಸ್ಟ್ರೇಲಿಯಾ ತ್ರಿಕೋನ ಏಕದಿನ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಪ್ರವೀಣ್ ಕುಮಾರ್ ಕೂಡ ನಿವೃತಿ ಘೋಷಿಸಿದರು. 2011ರ ವಿಶ್ವಕಪ್ ಫೈನಲ್ ವಿಜೇತ ತಂಡದ ಸದಸ್ಯರಾಗಿದ್ದ ಬಲಗೈ ವೇಗಿ ಮುನಾಫ್ ಪಟೇಲ್ ಕೂಡ ವಿದಾಯ ಹೇಳಿದರು. 2007ರ ಟಿ20 ಮತ್ತು 2011ರ ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಕೂಡ ಇದೇ ವರ್ಷ ನಿವೃತ್ತಿ ಘೋಷಿಸಿದರು. ನಿವೃತ್ತಿಯ ಅಂತಿಮ ಪಂದ್ಯದವರೆಗೂ ತಮ್ಮ ಬ್ಯಾಟಿಂಗ್ ನಿಂದ ಮಿಂಚಿದ್ದ ಗೌತಿ ವಿದಾಯ ಪಂದ್ಯದಲ್ಲೂ ಶತಕ ಸಿಡಿಸಿ ಮಿಂಚಿದ್ದರು.

    ಮಹಿಳಾ ಟೀಂ ಇಂಡಿಯಾ ಕೋಚ್ ವಿವಾದ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡುವ ಫೈನಲ್ ಪ್ರವೇಶಿಸುವ ಕನಸು ಭಗ್ನಗೊಂಡಿತು. ಇದರೊಂದಿಗೆ ಪಂದ್ಯದಲ್ಲಿ ತಂಡದ ಅನುಭವಿ ಆಟಗಾರ್ತಿ ಮಿಥಾಲಿರಾಜ್ ರನ್ನು ಆಡುವ 11ರ ಕೈ ಬಿಡಲಾಗಿತ್ತು. ಇದು ಟೀಂ ಇಂಡಿಯಾದಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಯಿತು. ಕೋಚ್ ರಮೇಶ್ ಪೊವಾರ್ ಹಾಗೂ ಆಟಗಾರ್ತಿಯರ ನಡುವಿನ ಮನಸ್ತಾಪ ಬಹಿರಂಗವಾಯಿತು.

    ಪಾಕ್‍ಗೆ ಮುಖಭಂಗ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಐಸಿಸಿಯಲ್ಲಿ ದಾಖಲಿಸಿದ್ದ ದೂರಿನಲ್ಲಿ ಪಿಸಿಬಿಗೆ ಸೋಲುಂಟಾಯಿತು. ಈ ಮೂಲಕ ಪಿಸಿಬಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗ ಅನುಭವಿಸಿತು. ಬಿಸಿಸಿಐ ತಮ್ಮೊಂದಿಗೆ ದ್ವಿಪಕ್ಷೀಯ ಸರಣಿ ಆಡದ ಕಾರಣ ತಮಗೆ ಭಾರೀ ನಷ್ಟ ಉಂಟಾಗಿದ್ದು, ಪರಿಣಾಮವಾಗಿ 70 ದಶಲಕ್ಷ ಡಾಲರ್ (ಅಂದಾಜು 471 ಕೋಟಿ ರೂ.) ಪರಿಹಾರ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪಿಸಿಬಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು.

    ಐಸಿಸಿ ಹಾಲ್ ಆಫ್ ಫೇಮ್: ಟೀಂ ಇಂಡಿಯಾ ಮಾಜಿ ಆಟಗಾರ, ಅಂಡರ್ 19 ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರಿಗೆ ಐಸಿಸಿಯ ಹಾಲ್ ಆಫ್ ಫೇಮ್ ಗೌರವ ಸಿಕ್ಕಿದೆ. ಈ ಮೂಲಕ ಹಾಲ್ ಆಫ್ ಫೇಮ್ ಗೌರವ ಪಡೆದ ಪಡೆದ 5ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ದ್ರಾವಿಡ್ ಪಾತ್ರರಾಗಿದ್ದಾರೆ.

    ಕೊಹ್ಲಿಗೆ ಖೇಲ್ ರತ್ನ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಈ ವರ್ಷ ಘೋಷಣೆ ನೀಡಲಾಯಿತು. ಉಳಿದಂತೆ ಬಾಕ್ಸಿಂಗ್ ಕೋಚ್ ಕನ್ನಡಿಗ ಸಿಎ ಕುಟ್ಟಪ್ಪ ಸೇರಿದಂತೆ ಎಂಟು ಮಂದಿ ದ್ರೋಣಾಚಾರ್ಯ ಪ್ರಶಸ್ತಿ. ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಶೂಟರ್ ರಾಹಿ ಸರ್ನೋಬತ್, ಅಥ್ಲೆಟ್ ಹಿಮಾದಾಸ್, ಟೆನ್ನಿಸ್ ಆಟಗಾರ ಕನ್ನಡಿಗ ರೋಹನ್ ಬೋಪಣ್ಣ, ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಸೇರಿದಂತೆ 20 ಮಂದಿ ಅರ್ಜುನ ಪ್ರಶಸ್ತಿಯನ್ನು ಸೆಪ್ಟೆಂಬರ್ 25 ರಂದು ನೀಡಲಾಯಿತು.

    ಅಜಿತ್ ವಾಡೇಕರ್ ನಿಧನ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ತಮ್ಮ 77 ವಯಸ್ಸಿನಲ್ಲಿ ನಿಧನರಾದರು. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅಜಿತ್ ಅವರು ವಿದೇಶಿ ನೆಲದಲ್ಲಿ ಚೊಚ್ಚಲ ಸರಣಿ ಗೆದ್ದಿದ್ದ ಭಾರತೀಯ ತಂಡವನ್ನು ಮುನ್ನಡೆಸಿದ್ದ ಕಪ್ತಾನನೆಂಬ ಹೆಗ್ಗಳಿಕೆಯನ್ನು ಪಡೆದಿದ್ದರು.

    ಆಸೀಸ್ ಆಟಗಾರರ ಕಳ್ಳಾಟ: ಎದುರಾಳಿ ತಂಡಗಳನ್ನು ಆಸ್ಟ್ರೇಲಿಯಾ ತಂಡ ಹಲವು ಆಟಗಾರರು ಎದುರಾಳಿ ತಂಡದ ಆಟಗಾರರನ್ನು ಕೆಣಕಿ ವಿವಾದಕ್ಕೆ ಕಾರಣಗುವ ಆಸೀಸ್ ತಂಡದ ಆಟಗಾರರು ಈ ಬಾರಿ ಚೆಂಡು ವಿರೂಪಗೊಳಿಸುವ ಮೂಲಕ ಕ್ರಿಕೆಟ್ ಇತಿಹಾಸಕ್ಕೆ ಮಸಿ ಬಳಿದಿದ್ದರು. ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮನ್ ಕೆಮರೂನ್ ಬ್ಯಾಂಕ್ರೋಫ್ಟ್ ಕೇಪ್ ಟೌನ್ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ ಸಿಕ್ಕಿ ಬಿದ್ದಿದ್ದರು. ಇದರ ಪರಿಣಾಮವಾಗಿ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಸೇರಿದಂತೆ ಬ್ಯಾಂಕ್ಟೋಫ್ಟ್ ನಿಷೇಧಕ್ಕೆ ಒಳಗಾದರು.

    ಗೇಲ್ ಪ್ರಕರಣ: ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕ್ರಿಸ್ ಗೇಲ್ ಆಸ್ಟ್ರೇಲಿಯಾ ಮಾಧ್ಯಮ ವಿರುದ್ಧ ಹೂಡಿದ್ದ ಮಾನನಷ್ಟ ಪ್ರಕರಣದಲ್ಲಿ ಜಯ ಪಡೆದಿದ್ದು, ಈ ಕುರಿತು ತೀರ್ಪು ನೀಡಿರುವ ಕೋರ್ಟ್ ಗೇಲ್‍ಗೆ 3,00,000 ಆಸ್ಟ್ರೇಲಿಯನ್ ಡಾಲರ್ ಹಣ (ಸುಮಾರು 2.10 ಕೋಟಿ ರೂ.) ದಂಡವಾಗಿ ಪಾವತಿ ಮಾಡಬೇಕು ಎಂದು ಆದೇಶಿಸಿದೆ. 2015ರಲ್ಲಿ ವಿಶ್ವಕಪ್ ವೇಳೆ ಕ್ರಿಸ್‍ಗೇಲ್ ತಂಗಿದ್ದ ಡ್ರೆಸ್ಸಿಂಗ್ ಕೊಠಡಿಗೆ ಆಗಮಿಸಿದ ಮಹಿಳಾ ಮಸಾಜ್ ಥೆರಪಿಸ್ಟ್ ನೊಂದಿಗೆ ಗೇಲ್ ಆಸಭ್ಯವಾಗಿ ವರ್ತಿಸಿದ್ದರು. ಅಲ್ಲದೇ ಮಹಿಳೆಗೆ ಗೇಲ್ ತಮ್ಮ ಜನನಾಂಗವನ್ನು ತೋರಿಸಿದ್ದರು ಎಂದು ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿತ್ತು. ಈ ಕುರಿತು ಗೇಲ್ ಮಾಧ್ಯಮದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

    ಫ್ರಾನ್ಸ್ ಚಾಂಪಿಯನ್: ಜುಲೈ 16 ರಂದು ಮಾಸ್ಕೋದಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ರೋವೇಷಿಯಾ ವಿರುದ್ಧ ಫ್ರಾನ್ಸ್ ಜಯಗಳಿಸಿತ್ತು. ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ 4-2 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದೆ. ಫ್ರಾನ್ಸ್ 4-2 ಗೋಲುಗಳಿಂದ ಗೆದ್ದು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಚಾಂಪಿಯನ್ ಫ್ರಾನ್ಸ್ ತಂಡ ಬರೋಬ್ಬರಿ 260 ಕೋಟಿ ಜೇಬಿಗಿಳಿಸಿತ್ತು. ರನ್ನರ್-ಅಪ್ ತಂಡ ಕ್ರೊವೇಷಿಯಾ 191 ಕೋಟಿ ಬಹುಮಾನ ಪಡೆದಿತ್ತು. ಈ ಮೂಲಕ 1998ರ ಬಳಿಕ ಎರಡನೇ ಬಾರಿ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಮೂಲಕ ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಕ್ರೋವೇಷಿಯಾ ಪ್ರಶಸ್ತಿ ಕನಸು ಭಗ್ನಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಬ್ಲ್ಯುಎಫ್ ವರ್ಲ್ಡ್ ಟೂರ್ 2018 – ಪಿವಿ ಸಿಂಧು ಚಾಂಪಿಯನ್

    ಡಬ್ಲ್ಯುಎಫ್ ವರ್ಲ್ಡ್ ಟೂರ್ 2018 – ಪಿವಿ ಸಿಂಧು ಚಾಂಪಿಯನ್

    ಗುವಾಂಗ್‍ಜೌ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ 2018 ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಈ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ.

    ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಸಿಂಧು ಪಡೆದಿದ್ದು, ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಜಪಾನ್‍ನ ನಜೊಮಿ ಒಕುಹರಾರನ್ನು 21-19, 21-17ರ ಅಂತರದಲ್ಲಿ ಸೋಲಿಸಿದರು. ಇದರೊಂದಿಗೆ ವರ್ಷಾಂತ್ಯದಲ್ಲಿ ಮೊದಲ ಪ್ರಶಸ್ತಿ ಜಯಿಸಿದರು.

    ಇದಕ್ಕೂ ಮುನ್ನ ಶನಿವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‍ನ ರಚನಾಕ್ ಇಂಟನಾನ್ ರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಕಳೆದ ವರ್ಷದ ಇದೇ ಟೂರ್ನಿಯಲ್ಲಿ ಸಿಂಧು ಫೈನಲ್ ಪ್ರವೇಶಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಹೊಂದಿದ್ದರು. ಸಿಂಧು 2016 ಒಲಿಂಪಿಕ್ ಮತ್ತು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿ ಪದಕ ಪಡೆದು ಚಾಂಪಿಯನ್ ಆಗುವ ಹಂತದಲ್ಲಿ ಎಡವಿದ್ದರು.

    ಸದ್ಯ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಗೆಲ್ಲುವ ಮೂಲಕ ತಮ್ಮ ಈ ಹಿಂದಿನ ಸಾಧನೆಯನ್ನು ಉತ್ತಪಡಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅತಿ ಹೆಚ್ಚು ಆದಾಯ- ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಪಿವಿ ಸಿಂಧುಗೆ ಮಾತ್ರ ಸ್ಥಾನ

    ಅತಿ ಹೆಚ್ಚು ಆದಾಯ- ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಪಿವಿ ಸಿಂಧುಗೆ ಮಾತ್ರ ಸ್ಥಾನ

    ನವದೆಹಲಿ: ಭಾರತ ಸ್ಟಾರ್ ಬ್ಯಾಡ್ಮಿಟನ್ ಆಟಗಾರ್ತಿ ಪಿವಿ ಸಿಂಧು ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವ ಮಹಿಳಾ ಕ್ರೀಡಾಪಟುಗಳಲ್ಲಿ ಅತೀ ಹೆಚ್ಚು ಆದಾಯ ಪಡೆಯುವ ಆಟಗಾರ್ತಿಯರ ಪಟ್ಟಿಯಲ್ಲಿ 7ನೇ ಸ್ಥಾನಗಳಿಸಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಫೋರ್ಬ್ಸ್ ಪಟ್ಟಿಯ ಅನ್ವಯ 23 ವರ್ಷದ ಪಿವಿ ಸಿಂಧು ವಾರ್ಷಿಕ 8.5 ದಶಲಕ್ಷ ಡಾಲರ್ (ಸುಮಾರು 60 ಕೋಟಿ ರೂ.) ಆದಾಯ ಪಡೆಯುತ್ತಿದ್ದಾರೆ.

    ಅಂದಹಾಗೇ ಸಿಂಧು ಒಬ್ಬರೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಬ್ಯಾಡ್ಮಿಟನ್ ಆಟಗಾರ್ತಿಯೂ ಆಗಿದ್ದಾರೆ. ಉಳಿದಂತೆ 8 ಟೆನ್ನಿಸ್ ಸ್ಟಾರ್ ಆಟಗಾರ್ತಿಯರು ಪಟ್ಟಿಯ ಟಾಪ್ 10 ನಲ್ಲಿ ಸ್ಥಾನ ಪಡೆದಿದ್ದಾರೆ. 23 ಬಾರಿ ಟೆನ್ನಿಸ್ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಪಡೆದಿರುವ ಸೆರೆನಾ ವಿಲಿಯಮ್ಸ್ 126 ದಶಲಕ್ಷ ಡಾಲರ್(ಅಂದಾಜು 126 ಕೋಟಿ ರೂ.) ವಾರ್ಷಿಕ ಆದಾಯ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

    2016 ರಲ್ಲಿ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ತಂದಿದ್ದ ಸಿಂಧು ಸಿಂಧು ಬ್ರಿಡ್ಜ್ ಸ್ಟೋನ್, ಗೇಟರೇಡ್, ನೋಕಿಯಾ, ಪ್ಯಾನಾಸಾನಿಕ್, ರೆಕಿಟ್ ಬೆಂಕಿಸರ್ ಸೇರಿದಂತೆ ವಿವಿಧ ಕಂಪೆನಿಗಳ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

    ಇದುವರೆಗೂ ಸಿಂಧು ರಿಯೋ ಒಲಿಂಪಿಕ್ಸ್ (ಬೆಳ್ಳಿ ಪದಕ), 2018 ಕಾಮನ್ ವೆಲ್ತ್ ಗೇಮ್ಸ್ (ಬೆಳ್ಳಿ ಪದಕ), 2017 ಮತ್ತು 2018 ರ ವರ್ಲ್ಡ್ ಬಿಎಂಎಫ್ ಚಾಂಪಿಯನ್ ಶಿಪ್ ಗೆದ್ದ ಹೆಗ್ಗಳಿಕೆ ಪಡೆದಿದ್ದಾರೆ. ವಿಶೇಷವೆಂದರೆ ಕಳೆದ ಬಾರಿ ಫೋರ್ಬ್ಸ್ ಪಟ್ಟಿ ಬಿಡುಗಡೆ ಮಾಡಿದ್ದ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಯಾವುದೇ ಮಹಿಳಾ ಆಟಗಾರ್ತಿ ಸ್ಥಾನ ಪಡೆದಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಮನ್‍ವೆಲ್ತ್ 2018: ಪಿವಿ ಸಿಂಧು ಮಣಿಸಿ ಚಿನ್ನ ಗೆದ್ದ ಸೈನಾ – ಭಾರತದ ಪರ ವಿಶೇಷ ದಾಖಲೆ

    ಕಾಮನ್‍ವೆಲ್ತ್ 2018: ಪಿವಿ ಸಿಂಧು ಮಣಿಸಿ ಚಿನ್ನ ಗೆದ್ದ ಸೈನಾ – ಭಾರತದ ಪರ ವಿಶೇಷ ದಾಖಲೆ

    ಗೋಲ್ಡ್ ಕೋಸ್ಟ್ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2018 ರ ಕಾಮನ್ ವೆಲ್ತ್ ಗೆಮ್ಸ್ ನ ಬ್ಯಾಡ್ಮಿಂಟನ್ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ವಿಶ್ವ ಮೂರನೇ ಶ್ರೇಯಾಂಕಿತ ಆಟಗಾರ್ತಿ ಸೈನಾ ನೆಹ್ವಾಲ್, ಪಿವಿ ಸಿಂಧು ವಿರುದ್ಧ ಮೇಲುಗೈ ಸಾಧಿಸಿದ್ದಾರೆ.

    ಭಾರತದ ಸ್ಟಾರ್ ಆಟಗಾರರಾದ ಸಿಂಧು ಹಾಗೂ ಸೈನಾ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಸೈನಾ ಚಿನ್ನಕ್ಕೆ ಮುತ್ತಿಟ್ಟರು. ಈ ಮೂಲಕ ಭಾರತಕ್ಕೆ ಚಿನ್ನ ಪದಕ ತಂದುಕೊಟ್ಟರು. ಅಲ್ಲದೇ ವಯಕ್ತಿಕವಾಗಿ ಕಾಮನ್ ವೆಲ್ತ್ ಗೇಮ್ಸ್ ಬ್ಯಾಡ್ಮಿಂಟನ್ ನಲ್ಲಿ ಎರಡನೇ ಚಿನ್ನ ಗೆದ್ದ ದಾಖಲೆ ಮಾಡಿದರು.

    ಸಿಂಧುರನ್ನು 21-18, 23-21 ನೇರ ಸೆಟ್‍ಗಳಲ್ಲಿ ಮಣಿಸಿವ ಮೂಲಕ ಸೈನಾ ಗೆಲುವು ಪಡೆದರು. ಅನುಭವದ ಬಲವನ್ನು ಉಪಯೋಗಿಸಿಕೊಂಡ ಸೈನಾ ಆರಂಭದಿಂದಲೂ ಪಂದ್ಯದಲ್ಲಿ ಸಿಂಧು ಎಲ್ಲಿಯೂ ಮುನ್ನಡೆ ಸಾಧಿಸುದಂತೆ ಆಕ್ರಮಣಕಾರಿಯಾಗಿ ಆಟವಾಡಿದರು. ಸೈನಾ ನೆಹ್ವಾಲ್ ಆಕ್ರಮಣಕಾರಿ ಆಟಕ್ಕೆ ತಿರುಗೇಟು ನೀಡಲು ಸಿಂಧು ಯತ್ನಿಸಿದರು ಗೆಲುವು ಸಾಧಿಸಲು ವಿಫಲವಾದರು.

    ಸೈನಾ ಅವರ ಚಿನ್ನ, ಸಿಂಧು ಬೆಳ್ಳಿ ಪದಕದೊಂದಿಗೆ ಭಾರತ ಕ್ರೀಡಾಪಟುಗಳು ಈ ಗೇಮ್ಸ್ ನಲ್ಲಿ ಒಟ್ಟು 62 ಪದಕಗಳನ್ನು ಗೆದ್ದಿದ್ದು, ಪದಕಗಳ ಭೇಟೆಯನ್ನು ಮುಂದುವರೆಸಿದ್ದಾರೆ.

  • ಫ್ರೆಂಚ್ ಓಪನ್ ಸೂಪರ್ ಸಿರೀಸ್- ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು

    ಫ್ರೆಂಚ್ ಓಪನ್ ಸೂಪರ್ ಸಿರೀಸ್- ಸೆಮಿಫೈನಲ್ ಪ್ರವೇಶಿಸಿದ ಪಿವಿ ಸಿಂಧು

    ಪ್ಯಾರಿಸ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಫ್ರೆಂಚ್ ಓಪನ್ ಸೂಪರ್ ಸಿರೀಸ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ತಮ್ಮ ಎದುರಾಳಿ ಚೀನಾದ ಚೆನ್ ಯುಫಿ ವಿರುದ್ಧ 21-14, 21-14 ಸೆಟ್‍ಗಳ ಅಂತರದಲ್ಲಿ ಗೆದ್ದ ಸಿಂಧು ಇದೇ ಮೊದಲ ಬಾರಿಗೆ ಈ ಟೂರ್ನಮೆಂಟ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.

    ಈ ಹಿಂದೆ ಡೆನ್ಮಾರ್ಕ್‍ನಲ್ಲಿ ನಡೆದ ಆರಂಭಿಕ ಸುತ್ತಿನಲ್ಲಿ ಯುಫಿ, ಸಿಂಧು ವಿರುದ್ಧ ಗೆದ್ದಿದ್ದರು. ಸಿಂಧು ಅವರು ಈ ಬಾರಿ ಚೆನ್ ಯುಫಿ ವಿರುದ್ಧ ಗೆಲ್ಲುವ ಮೂಲಕ ತಮ್ಮ ಸೋಲಿನ ಸೇಡು ತಿರಿಸಿಕೊಳ್ಳಬೇಕಿದೆ.

    ಪುರುಷರ ಸಿಂಗಲ್ಸ್‍ನಲ್ಲಿ ಶ್ರೀನಾಥ್ ಪ್ರಣಯ್, ಜಿಯಾನ್ ಜಿನ್ ವಿರುದ್ಧ 21-16, 21-16 ಸೆಟ್‍ಗಳ ಅಂತರದಿಂದ ಜಯ ಸಾಧಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ. ಶುಕ್ರವಾರ ಡೆನ್ಮಾರ್ಕ್‍ನ ಹಾನ್ಸ್ ಕ್ರಿಸ್ಟಿಯನ್ ವಿಟ್ಟಿಂಗಸ್ ವಿರುದ್ಧ ನಡೆದ ಹಣಾಹಣಿಯಲ್ಲಿ ಪ್ರಣಯ್ 21-11, 21-12 ನೆರ ಸೆಟ್‍ಗಳ ಮೂಲಕ ಜಯಗಳಿಸಿದ್ದರು. ಕಳೆದ ಎರಡು ಪಂದ್ಯಗಳಲ್ಲಿಯೂ ಪ್ರಣಯ್ ವಿಶ್ವ ಅಗ್ರ ಮಾನ್ಯ ಶ್ರೇಯಾಂಕ ಹೊಂದಿರುವ ಆಟಗಾರರನ್ನು ಸೋಲಿಸುವ ಮೂಲಕ ಆಮೋಘ ಪ್ರದರ್ಶನವನ್ನು ನೀಡಿದ್ದಾರೆ. ಪ್ರಸ್ತುತ ಪ್ರಣಯ್ ವಿಶ್ವ  ರ‍್ಯಾಂಕಿಂಗ್‌ ಪಟ್ಟಿಯಲ್ಲಿ 12ನೇ ಸ್ಥಾನವನ್ನು ಪಡೆದಿದ್ದಾರೆ.

    ಇನ್ನುಳಿದಂತೆ ಭಾರತದ ಬಿ.ಸಾಯಿ ಪ್ರಣೀತ್ ಜಪಾನ್ ಕೆಂಟಾ ನಿಶಿಮೊಟೊ ವಿರುದ್ಧ 13-21, 17-21 ಸೆಟ್‍ಗಳ ಮೂಲಕ ಸೋತರು. ಸೈನಾ ನೆಹ್ವಾಲ್ ಈ ಸರಣಿಯಲ್ಲಿ ಎರಡನೇ ಸುತ್ತಿನಲ್ಲಿಯೇ ಜಪಾನ್‍ನ ಅಕಾನೆ ಯಮಗುಚಿ ವಿರುದ್ಧ 9-21, 21-22 ರ ಸೆಟ್‍ಗಳಲ್ಲಿ ಸೋಲುಂಡು ನಿರಾಸೆ ಮೂಡಿಸಿದರು.

  • ಕೊರಿಯಾ ಓಪನ್ ಗೆದ್ದು ಸೇಡು ತೀರಿಸಿಕೊಂಡ ಸಿಂಧು

    ಕೊರಿಯಾ ಓಪನ್ ಗೆದ್ದು ಸೇಡು ತೀರಿಸಿಕೊಂಡ ಸಿಂಧು

    ಸಿಯೋಲ್: ಗ್ಲಾಸ್ಗೋ ಓಪನ್ ಟೂರ್ನಿಯಲ್ಲಿ ಜಪಾನ್ ನೋಜೊಮಿ ಒಕುಹರಾ ವಿರುದ್ಧ ಸೋತಿದ್ದ ಪಿವಿ ಸಿಂಧು ಕೊರಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ನಲ್ಲಿ ಅವರನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

    22-20, 11-21, 21-18 ಅಂತರದಿಂದ  ಫೈನಲ್ ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಸಿಂಧು ತಮ್ಮದಾಗಿಸಿದ್ದಾರೆ.

    ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‍ನಲ್ಲಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸಿಂಧು 21- 10, 17-21, 21-16 ರಲ್ಲಿ ಚೀನಾದ ಆರನೇ ಶ್ರೇಯಾಂಕಿತ ಆಟಗಾರ್ತಿ ಹಿ ಬಿಂಗ್‍ಜಿಯಾವೊ ಅವರನ್ನು ಸೋಲಿಸಿದ್ದರು.

    ಆಗಸ್ಟ್ 27 ರಂದು ಸ್ಲಾಟ್ಲೆಂಡಿನ ಗ್ಲಾಸ್ಗೋ ಓಪನ್ ಫೈನಲ್ ನಲ್ಲಿ 21- 19, 22-20 ಅಂತರದಿಂದ ಒಕುಹರಾ ಸಿಂಧು ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರು.

  • ಗುರು ಗೋಪಿಚಂದ್‍ರನ್ನು ‘ಹೇಟ್’ ಮಾಡ್ತಾರಂತೆ ಪಿವಿ ಸಿಂಧು!- ಕನ್‍ಫ್ಯೂಸ್ ಆಗ್ಬೇಡಿ, ವಿಡಿಯೋ ನೋಡಿ

    ಗುರು ಗೋಪಿಚಂದ್‍ರನ್ನು ‘ಹೇಟ್’ ಮಾಡ್ತಾರಂತೆ ಪಿವಿ ಸಿಂಧು!- ಕನ್‍ಫ್ಯೂಸ್ ಆಗ್ಬೇಡಿ, ವಿಡಿಯೋ ನೋಡಿ

    ನವದೆಹಲಿ: 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಭಾರತಕ್ಕೆ ಕೀರ್ತಿ ತಂದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಈಗ ಎಲ್ಲರ ಮನೆ ಮಾತಾಗಿದ್ದಾರೆ. ಸಿಂಧು ಯಶಸ್ಸಿನ ಹಿಂದಿದ್ದುದು ಅವರ ಕೋಚ್ ಪುಲ್ಲೆಲಾ ಗೋಪಿಚಂದ್. ಶಿಕ್ಷಕರ ದಿನಾಚರಣೆಯಾದ ಇಂದು ಪಿವಿ ಸಿಂಧು ತನ್ನ ಗುರು ಗೋಪಿಚಂದ್‍ಗೆ ಗುರುಕಾಣಿಕೆಯಾಗಿ ವಿಡಿಯೋವೊಂದನ್ನ ಅರ್ಪಿಸಿದ್ದಾರೆ.

    ಪಿವಿ ಸಿಂಧು ಸ್ಪೋರ್ಟ್ಸ್ ಡ್ರಿಂಕ್ ಬ್ರ್ಯಾಂಡ್‍ವೊಂದರ ಜೊತೆಗೂಡಿ ಐ ಹೇಟ್ ಮೈ ಟೀಚರ್ ಎಂಬ ಡಿಜಿಟಲ್ ಕಿರು ಚಿತ್ರವನ್ನ ಸಹ-ನಿರ್ಮಾಣ ಮಾಡಿದ್ದಾರೆ.

    ಯಶಸ್ಸಿನ ದಾರಿ ತುಂಬಾ ಕಠಿಣವಾದುದು. ಅದಕ್ಕೆ ಸಾಕಷ್ಟು ಪರಿಶ್ರಮ ಹಾಗೂ ಸಮರ್ಪಣೆ ಬೇಕು. ಆದ್ರೆ ಬಹುತೇಕ ಮಂದಿ ಯಾವುದೋ ಒಂದು ಘಟ್ಟದಲ್ಲಿ ಇದು ನನ್ನಿಂದ ಆಗಲ್ಲ ಅಂತ ಕೈಚೆಲ್ಲಿಬಿಡುತ್ತಾರೆ. ಆದ್ರೆ ಯಾವುದೋ ಒಂದು ಶಕ್ತಿ ಅವರನ್ನ ಮುಂದೆ ತಳ್ಳುತ್ತದೆ. ಅವರು ಯಶಸ್ವಿಯಾಗಿ ಹೊರಹೊಮ್ಮುವಂತೆ ಮಾಡುತ್ತದೆ ಅನ್ನೋದನ್ನ ವಿಡಿಯೋದಲ್ಲಿ ತೋರಿಸಲಾಗಿದೆ.

    ಇಂತಹ ಸಂದರ್ಭಗಳಲ್ಲಿ ಕ್ರೀಡಾಪಟು ತನ್ನ ಗುರುವಿನ ಕಠಿಣತೆ ಹಿಂದಿನ ಉದ್ದೇಶವನ್ನ ಅರಿಯದೆ ಅವರನ್ನ ದ್ವೇಷಿಸುತ್ತಾರೆ. ಆದ್ರೆ ಕೊನೆಗೆ ತನ್ನ ಬೆನ್ನ ಹಿಂದೆ ನಿಂತು ಯಶಸ್ಸಿಗೆ ಕಾರಣವಾದ ಗುರುವಿಗೆ ಕೃತಜ್ಞತೆ ಸಲ್ಲಿಸದೆ ಇರಲಾಗದು ಅನ್ನೋದನ್ನ ವಿಡಿಯೋದಲ್ಲಿ ತೋರಿಸಿಕೊಡಲಾಗಿದೆ.

    ಐ ಹೇಟ್ ಮೈ ಟೀಚರ್. ನನ್ನ ಗಾಯಗಳಿಗೆ ಅವರೇ ಕಾರಣ. ನನ್ನ ಮೇಲೆ ರೇಗಾಡ್ತಾರೆ. ನಾನು ಬೆವರು ಸುರಿಸಿದ್ರೆ ಅವರಿಗಿಷ್ಟ. ನಾನು ಬಿದ್ದಾಗ, ನನಗೆ ಉಸಿರಾಡಲೂ ಕಷ್ಟವಾದಾಗ ಅದು ಅವರಿಗೆ ಇಷ್ಟ. ನನ್ನ ನೋವಿಗೆ ಅವರೇ ಕಾರಣ. ನಾನು ನಿದ್ದೆ ಮಾಡ್ತೀನೋ ಇಲ್ವೋ ಅವರಿಗೆ ಬೇಕಾಗಿಲ್ಲ. ಅವರು ಎಂದಿಗೂ ಕೈಚೆಲ್ಲಿ ಕೂರಲ್ಲವಲ್ಲ ಅದಕ್ಕೆ ನಾನು ಅವರನ್ನ ದ್ವೇಷಿಸುತ್ತೇನೆ. ಅವರು ಯಾವಾಗ್ಲೂ ಸರಿಯಾಗೇ ಯೋಚಿಸ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಅವರನ್ನ ದ್ವೇಷಿಸೋದು ಯಾಕಂದ್ರೆ ನಾನು ನನ್ನನ್ನು ನಂಬೋದಕ್ಕಿಂತ ಹೆಚ್ಚಿಗೆ ಅವರು ನನ್ನನ್ನು ನಂಬ್ತಾರೆ. ಥ್ಯಾಂಕ್ಯೂ ಕೋಚ್ ಎಂದು ವಿಡಿಯೋ ಅಂತ್ಯವಾಗುತ್ತದೆ.

    ಕೋಚ್ ಪಟ್ಟುಬಿಡದೆ ಕೆಲಸ ಮಾಡಿ ನನಗಾಗಿ ದೊಡ್ಡ ದೊಡ್ಡ ಕನಸು ಹೊಂದಿದ್ದಾರೆ. ಅವರ ಈ ಶ್ರೇಷ್ಠತೆಗೆ ನಾನು ಋಣಿ. ಈ ಶಿಕ್ಷಕರ ದಿನಾಚರಣೆಯಂದು ನನ್ನ ಎಲ್ಲಾ ಯಶಸ್ಸನ್ನು ಅವರಿಗೆ ಸಮರ್ಪಿಸುತ್ತೇನೆ. ಅಲ್ಲದೆ ಎಲ್ಲರೂ ತಮ್ಮ ಜೀವನದಲ್ಲಿ ಪ್ರೇರಕ ಶಕ್ತಿಯಾಗಿರುವವರನ್ನ ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಅಂತ ಪಿವಿ ಸಿಂಧು ಹೇಳಿದ್ದಾರೆ.

    https://twitter.com/GatoradeIndia/status/904646010114162688

  • ಡಿಸಿ ಯಾಗಿ ಅಧಿಕಾರ ಸ್ವೀಕರಿಸಿದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

    ಡಿಸಿ ಯಾಗಿ ಅಧಿಕಾರ ಸ್ವೀಕರಿಸಿದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

    ಹೈದರಾಬಾದ್: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬುಧವಾರದಂದು ಆಂಧ್ರ ಪ್ರದೇಶ ಸರ್ಕಾರದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ವಿಜಯವಾಡ ಹೊರವಲಯದ ಗೊಲ್ಲಾಪುಡಿಯಲ್ಲಿರುವ ಭೂ ಆಡಳಿತದ ಮುಖ್ಯ ಆಯುಕ್ತರ ಕಚೇರಿಯಲ್ಲಿ ಪಿವಿ ಸಿಂಧು ಕರ್ತವ್ಯಕ್ಕೆ ರ್ಸೇರ್ಪಡೆಗೊಂಡ್ರು. ವಿಶೇಷ ಮುಖ್ಯ ಕಾರ್ಯದರ್ಶಿ ಅನಿಲ್ ಚಂದ್ರ ಪುನೇತಾ ಅವರಿಗೆ ಸಿಂಧು ರಿಪೋರ್ಟ್ ಮಾಡಿಕೊಂಡ್ರು. ನಂತರ ಹಿರಿಯ ಐಎಎಸ್ ಅಧಿಕಾರಿ ಎಂ ಜಗನ್ನಾಥಂ ಅವರ ಸಮ್ಮುಖದಲ್ಲಿ ರೋಸ್ಟರ್‍ನಲ್ಲಿ ಸಹಿ ಹಾಕುವ ಮೂಲಕ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ರು. ಕಚೇರಿಯ ಸಿಬ್ಬಂದಿ ಹೂಗುಚ್ಛ ಹಾಗೂ ಹಾರಗಳನ್ನ ಹಾಕಿ ಬ್ಯಾಡ್ಮಿಂಟನ್ ತಾರೆಗೆ ಅದ್ಧೂರಿ ಸ್ವಾಗತ ಕೋರಿದ್ರು.

    ಇದೇ ವೇಳೆ ಮಾತನಾಡಿದ ಸಿಂಧು, ಜಿಲ್ಲಾಧಿಕಾರಿ ಆಗಿ ಆಂಧ್ರಪ್ರದೇಶ ಸರ್ಕಾರದ ಭಾಗವಾಗಿರೋದಕ್ಕೆ ನನಗೆ ತುಂಬಾ ಖುಷಿಯಾಗಿದೆ. ನನ್ನ ಕೆಲಸಕ್ಕೆ ಸೂಕ್ತ ನ್ಯಾಯ ಒದಗಿಸುತ್ತೇನೆ ಅಂತ ಭರವಸೆ ನೀಡಿದ್ರು. ಇದರ ಜೊತೆಗೆ ಬ್ಯಾಡ್ಮಿಂಟನ್ ಆಟವನ್ನು ಮುಂದುವರೆಸುವುದಾಗಿ ಹೇಳಿದ್ರು.

    ಮುಂಬರುವ ಪಂದ್ಯಗಳಿಗಾಗಿ ನಾನು ಸದ್ಯ ಪುಲೆಲಾ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ನಾನು ಎಲ್ಲಾ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಟೂರ್ನಿಮೆಂಟ್‍ಗಳಲ್ಲಿ ಭಾಗವಹಿಸುತ್ತೇನೆ. ದೇಶಕ್ಕೆ ಮತ್ತಷ್ಟು ಪ್ರಶಸ್ತಿಗಳನ್ನ ತಂದುಕೊಡುತ್ತೇನೆ ಎಂಬ ಭರವಸೆ ನನಗಿದೆ ಎಂದು ಪಿವಿ ಸಿಂಧು ಹೇಳಿದ್ದಾರೆ.

    ಜುಲೈ 27 ರಂದು ಆಂಧ್ರಪ್ರದೇಶ ಸರ್ಕಾರ ಪಿವಿ ಸಿಂಧು ಅವರನ್ನು ಜಿಲ್ಲಾಧಿಕಾರಿಯಾಗಿ  ನೇಮಿಸಿ ಆದೇಶ ಹೊರಡಿಸಿತ್ತು. ಸ್ವತಃ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ನೇಮಕಾತಿ ಪತ್ರವನ್ನ ಸಿಂಧು ಅವರಿಗೆ ನೀಡಿದ್ದರು. ಸಿಂಧು ಅವರು ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸಿ ಕರ್ತವ್ಯಕ್ಕೆ ಹಾಜರಾಗಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು.

    ಪಿವಿ ಸಿಂಧು ಅವರನ್ನ ಸರ್ಕಾರದಲ್ಲಿ ಗ್ರೂಪ್-1 ಅಧಿಕಾರಿಯಾಗಿ ನೇಮಕ ಮಾಡಲು ಮೇ ತಿಂಗಳಲ್ಲಿ ರಾಜ್ಯ ಸಾರ್ವಜನಿಕ ಸೇವೆಗಳ ಕಾಯ್ದೆಗೆ ತಿದ್ದುಪಡಿ ತಂದು ಮಸೂದೆಯನ್ನು ಪಾಸ್ ಮಾಡಲಾಗಿತ್ತು. ತೆಲಂಗಾಣ ಕೂಡ ಸಿಂಧುಗೆ ಉದ್ಯೋಗ ಅವಕಾಶ ನೀಡಿತ್ತು. ಆದ್ರೆ ಆಂಧ್ರಪ್ರದೇಶ ತನ್ನ ಪೋಷಕರ ಮೂಲ ಸ್ಥಳವಾಗಿರೋದ್ರಿಂದ ಸಿಂಧು ಆಂಧ್ರಪ್ರದೇಶ ಸರ್ಕಾರದ ಉದ್ಯೋಗವನ್ನ ಸ್ವೀಕರಿಸಿದ್ದಾರೆ.

    ಪಿವಿ ಸಿಂಧು ಸದ್ಯ ಆಗಸ್ಟ್ 21ರಿಂದ ಗ್ಲಾಸ್ಗೋನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‍ಶಿಪ್‍ಗಾಗಿ ತಯಾರಾಗುತ್ತಿದ್ದಾರೆ.