ಬೆಂಗಳೂರು: ಇನ್ನು ಮುಂದೆ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಣಗೊಂಡಿರುವ ಟಿಕೆಟ್ ರೈಲು ಪ್ರಯಾಣಿಕರಿಗೆ ಸಿಗಲಿದೆ.
ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಫೇಸ್‍ಬುಕ್, ಟ್ವಿಟ್ಟರ್ ನಲ್ಲಿ ಕನ್ನಡದಲ್ಲಿ ಮುದ್ರಣಗೊಂಡಿರುವ ಟಿಕೆಟ್ ಫೋಟೋ ಪ್ರಕಟಿಸಿ ಈ ವಿಚಾರವನ್ನು ತಿಳಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಇಂಗ್ಲಿಷ್, ಹಿಂದಿ ಅಲ್ಲದೇ ದಕ್ಷಿಣ ಭಾರತದಲ್ಲಿ ಆಯಾ ರಾಜ್ಯಗಳ ಭಾಷೆಯಲ್ಲಿ ಮುದ್ರಣಗೊಂಡಿರುವ ಟಿಕೆಟ್ ಸಿಗಲಿದೆ.
ಈ ವಿಚಾರದ ಬಗ್ಗೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಕರ್ನಾಟಕದ ಎಲ್ಲ ಕೌಂಟರ್ ಗಳಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಣಗೊಂಡಿರುವ ಟಿಕೆಟ್ ಸಿಗಲಿದೆ. ಆದರೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ ಈ ಟಿಕೆಟ್ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಮೂಲಕ ಹಿಂದಿ ಹೇರಿಕೆ ವಿರುದ್ಧ ನಡೆಸಲಾಗಿದ್ದ ಅಭಿಯಾನಕ್ಕೆ ಜಯ ಸಿಕ್ಕಂತಾಗಿದೆ. ರೈಲ್ವೆ ಟಿಕೆಟ್‍ಗಳಲ್ಲಿ ಕನ್ನಡ ಇರಲಿದೆ ಎಂಬುದನ್ನು ಕೇಳಲು ಖುಷಿಯ ವಿಚಾರ ಎಂದು ಹಿಂದಿ ಹೇರಿಕೆಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದ ಕನ್ನಡರಿಗರು ಫೇಸ್‍ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!
ಕನ್ನಡ ಬಂದಿದ್ದು ಹೇಗೆ?
ದಕ್ಷಿಣ ಭಾರತದ ಜನರಿಗೆ ಆಯಾ ರಾಜ್ಯ ಭಾಷೆಯಲ್ಲಿ ರೈಲು ಟಿಕೆಟ್ ನೀಡಬೇಕೆಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನಕ್ಕೆ ರೈಲ್ವೇ ಸಚಿವಾಲಯ 2017ರ ಜೂನ್ ನಲ್ಲಿ ಸಮ್ಮತಿ ಸೂಚಿಸಿತ್ತು. 2018ರಲ್ಲಿ ರೈಲ್ವೆ ಟಿಕೆಟ್‍ಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆಯಲ್ಲೂ ಮುದ್ರಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ ಪ್ರಯಾಣಿಕರ ಸೌಲಭ್ಯ ಸಮಿತಿ ಹೇಳಿತ್ತು.
ಮೊದಲಿಗೆ ಅಧಿಕಾರಿಗಳು ಮೂರನೇ ಭಾಷೆಯನ್ನ ಸೇರಿಸಲು ತಯಾರಿರಲಿಲ್ಲ. ಯಾಕೆಂದರೆ ದೀರ್ಘ ಕಾಲದಿಂದ ದ್ವಿಭಾಷಾ ನೀತಿಯ ಜೊತೆಗೆ ಕೆಲಸ ಮಾಡಿದ್ದರು. ಮತ್ತೊಂದು ಕಾರಣವೆಂದರೆ ಅವರು ಇನ್ನೂ ಆರ್ಕಿಯಾಕ್ ಕೊಬೊಲ್ ಸಾಫ್ಟ್ ವೇರ್ ಬಳಸುತ್ತಿದ್ದು, ಇದನ್ನು ಕೂಡಲೇ ಬದಲಾಯಿಸೋದು ಕಷ್ಟವಾಗಿತ್ತು. ಅದ್ರೆ ಡಿಜಿಟಲ್ ಯುಗದಲ್ಲಿ ಇದನ್ನ ಪರಿಗಣಿಸಲು ಸಾಧ್ಯವಿಲ್ಲ. ದೇಶದಲ್ಲಿ ರೈಲ್ವೇ ಇಲಾಖೆ ಅತ್ಯಂತ ದೊಡ್ಡ ಸೇವಾ ಪೂರೈಕೆದಾರ ಆಗಿದೆ. ಈಗಿನ ದಿನಗಳಲ್ಲಿ ಸೆಲ್‍ಫೋನ್ ಸಂಸ್ಥೆಗಳೂ ಕೂಡ ಶುಲ್ಕ ರಹಿತ ನಂಬರ್ ಗೆ ಕರೆ ಮಾಡಿದಾಗ 3 ಭಾಷೆಗಳಲ್ಲಿ ಸೇವೆ ನೀಡುತ್ತಿವೆ. ಹಿಂದಿ ಮಾತನಾಡದ ರಾಜ್ಯಗಳಲ್ಲಿ ಮೂರನೆಯ, ಸ್ಥಳೀಯ ಭಾಷೆಯನ್ನು ತರುವುದು ನಮ್ಮ ಕರ್ತವ್ಯವಲ್ಲವೇ ಎಂದು ರೈಲ್ವೇ ಪ್ರಯಾಣಿಕರ ಸೌಲಭ್ಯ ಸಮಿತಿಯ ಸದಸ್ಯ ಆಚಾರಿ ಈ ಹಿಂದೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು.
ದಕ್ಷಿಣ ಭಾರತದಲ್ಲಿ ಸಾಕಷ್ಟು ಜನ ರೈಲ್ವೆ ಟಿಕೆಟ್‍ನಿಂದ ತೊಂದರೆ ಅನುಭವಿಸುತ್ತಿದ್ದರು. ಕೆಲವರಿಗೆ ಅವರು ಸರಿಯಾದ ಟಿಕೆಟ್ ಹೊಂದಿದ್ದಾರಾ ಇಲ್ಲವಾ ಎಂಬುದೇ ಗೊತ್ತಿರುತ್ತಿರಲಿಲ್ಲ. ಟಿಕೆಟ್ ಮೇಲೆ ಮುದ್ರಣವಾಗಿರೋದನ್ನು ಓದಲು ಬಾರದೇ ಹಲವು ಬಾರಿ ತಮ್ಮದಲ್ಲದ ತಪ್ಪಿಗೆ ಜನ ದಂಡ ಕಟ್ಟಿದ್ದರು. ಈಗ ಸಾಫ್ಟ್ ವೇರ್ ಅಪ್‍ಡೇಟ್ ಆಗಿದ್ದು ಟಿಕೆಟ್ ವಿತರಿಸಲಾಗುವ ಪ್ರದೇಶಕ್ಕೆ ತಕ್ಕಂತೆ ಆಯಾ ರಾಜ್ಯದ ಭಾಷೆಯಲ್ಲಿ ಟಿಕೆಟ್ ಮುದ್ರಣವಿರಲಿದೆ. ಅಂದರೆ ನೀವು ಕನ್ಯಾಕುಮಾರಿಯಿಂದ ಶುರುವಾಗಿ 5 ರಾಜ್ಯಗಳನ್ನ ಸಂಚರಿಸುವ ರೈಲಿಗೆ ಕರ್ನಾಟಕದಲ್ಲಿ ರೈಲ್ವೇ ಟಿಕೆಟ್ ಬುಕ್ ಮಾಡಿದ್ರೆ ನಿಮ್ಮ ಟಿಕೆಟ್ ಕನ್ನಡದಲ್ಲೇ ಇರಲಿದೆ.
ಇದು ಎಲ್ಲಾ ವರ್ಗದ ಪ್ರಯಾಣಕ್ಕೆ ಹಾಗೂ ಕೌಂಟರ್ ಗಳಲ್ಲಿ ವಿತರಿಸಲಾಗುವ ಪ್ಯಾಸೆಂಜರ್ ರೈಲುಗಳ ಟಿಕೆಟ್‍ಗಳಿಗೆ ಮಾತ್ರ ಅನ್ವಯವಾಗಲಿದೆ. ಆದ್ರೆ ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಮಾಡಿದಾಗ ಅನ್ವಯವಾಗುವುದಿಲ್ಲ. ಜಗತ್ತಿನ ಯಾವುದೇ ಭಾಗದಲ್ಲಿದ್ರೂ ಆನ್‍ಲೈನ್ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಈ ವೇಳೆ ಸ್ಥಳೀಯ ಭಾಷೆಯನ್ನು ಅಳವಡಿಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಆನ್‍ಲೈನ್ ಗ್ರಾಹಕರಿಗೆ ಈ ಸೇವೆ ಸಿಗುವುದಿಲ್ಲ. ಇದನ್ನೂ ಓದಿ: 42 ಕೋಟಿ ರೂ. ವೆಚ್ಚದಲ್ಲಿ 3,350 ಟ್ರಕ್ ಸಗಣಿ ಖರೀದಿಸಲಿದೆ ಭಾರತೀಯ ರೈಲ್ವೇ!