Tag: ಪಿಯುಷ್ ಗೋಯಲ್

  • ರಾಹುಲ್ ಗಾಂಧಿ ಮುಂದಿನ ಬಾರಿ ನೆರೆಯ ದೇಶಗಳಿಂದ ಸ್ಪರ್ಧಿಸಬೇಕು: ಪಿಯೂಷ್ ಗೋಯಲ್

    ರಾಹುಲ್ ಗಾಂಧಿ ಮುಂದಿನ ಬಾರಿ ನೆರೆಯ ದೇಶಗಳಿಂದ ಸ್ಪರ್ಧಿಸಬೇಕು: ಪಿಯೂಷ್ ಗೋಯಲ್

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಂದಿನ ಚುನಾವಣೆಯ ವೇಳೆ ನೆರೆಯ ರಾಷ್ಟ್ರಗಳಿಂದ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪಿಯುಷ್ ಗೋಯಲ್ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಈ ಬಾರಿ ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ಅಮೇಥಿ ಹಾಗೂ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಸೋಲುತ್ತಾರೆ. ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿಯವರು ರಾಹುಲ್ ಗಾಂಧಿ ಅವರನ್ನು ಸೋಲಿಸುತ್ತಾರೆ. ಹೀಗಾಗಿ ಅವರು ಮುಂದಿನ ಚುನಾವಣೆಗಾಗಿ ಪಕ್ಕದ ದೇಶದಲ್ಲಿ ಯಾವುದಾದರೂ ಕ್ಷೇತ್ರವನ್ನು ಹುಡುಕಿಕೊಳ್ಳಬೇಕು ಎಂದು ಲೇವಡಿ ಮಾಡಿದ್ದಾರೆ. ಇದನ್ನು ಓದಿ: ರಾಹುಲ್ ಗಾಂಧಿ ಪೌರತ್ವದ ವಿವಾದ? ನಾಮಪತ್ರ ಪರಿಶೀಲನೆ ಮುಂದೂಡಿದ ಆಯೋಗ

    ರಾಹುಲ್ ಗಾಂಧಿ ಅವರಿಗೆ ಎಡಪಕ್ಷಗಳ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಹೀಗಾಗಿ ವಯನಾಡು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಡಪಕ್ಷದ (ಸಿಪಿಐ) ಅಭ್ಯರ್ಥಿ ವಿರುದ್ಧ ಸೋಲುತ್ತಾರೆ ಎಂದರು.

    ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಹಾಗೂ ರಾಹುಲ್ ಗಾಂಧಿ ಜೊತೆಯಾಗಿ ನಿಂತಿರುವ ಕೆಲವು ಫೋಟೋಗಳನ್ನು ನೋಡಿದ್ದೇನೆ. ಅಮೇಥಿಯಲ್ಲಿ ಸೋಲಿನ ಭಯ ಕಾಡಿದ್ದರಿಂದ ವಯನಾಡುಗೆ ಹೋದರು. ಅಲ್ಲಿ ಸಿಪಿಐ ವಿರುದ್ಧ ಮಾತನಾಡದೇ, ಟೀಕೆ ಮಾಡದೇ ಹೆದರಿದ್ದಾರೆ ಎಂದು ವ್ಯಂಗ್ಯವಾಡಿದರು.

    ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರಿಗೆ ಭೋಪಾಲ್ ಟಿಕೆಟ್ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚೌಹಾನ್ ಹೇಳಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪಿಯುಷ್ ಗೋಯಲ್ ಅವರು, ಪೃಥ್ವಿರಾಜ್ ಚೌಹಾನ್ ಅವರೇ ಮೊದಲು ಕ್ಷಮೆ ಕೇಳಬೇಕು. ಅವರು ಹಿಂದೂಗಳನ್ನು ಉಗ್ರರು ಎಂದು ಹೇಳಿಕೆ ನೀಡಿ, ಹಿಂದೂಗಳನ್ನು ಅವಮಾನಿಸಿದ್ದಾರೆ ಎಂದು ತಿರುಗೇಟು ನೀಡಿದರು.

  • ರೈಲ್ವೇಯಲ್ಲಿ ಆಹಾರ ತಯಾರಾಗೋದನ್ನು ಪ್ರಯಾಣಿಕರು ಇನ್ಮುಂದೆ ಲೈವ್ ನೋಡ್ಬಹುದು!

    ರೈಲ್ವೇಯಲ್ಲಿ ಆಹಾರ ತಯಾರಾಗೋದನ್ನು ಪ್ರಯಾಣಿಕರು ಇನ್ಮುಂದೆ ಲೈವ್ ನೋಡ್ಬಹುದು!

    ನವದೆಹಲಿ: ಇನ್ನು ಮುಂದೆ ಪ್ರಯಾಣಿಕರು ನೇರವಾಗಿ ರೈಲ್ವೇ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್(IRCTC) ಆಡುಗೆ ಕೋಣೆಯಲ್ಲಿ ಆಹಾರಗಳನ್ನು ಹೇಗೆ ತಯಾರಿಸಲಾಗುತ್ತದೆ ಎನ್ನುವುದನ್ನು ನೋಡಬಹುದು.

    ಹೌದು. ಭಾರತೀಯ ರೈಲ್ವೇ ಪ್ರಯಾಣಿಕರಿಗೆ ವಿತರಿಸಲಾಗುವ ಆಹಾರದ ಗುಣಮಟ್ಟದ ಮೇಲೆ ನಿಗಾವಹಿಸಲು ತನ್ನ ಎಲ್ಲ ಅಡುಗೆ ಕೋಣೆಗಳಲ್ಲಿ ಸಿಸಿ ಟಿವಿ ಅಳವಡಿಸಲು ನಿರ್ಧರಿಸಿದೆ.

    ರೈಲುಗಳಲ್ಲಿ ವಿತರಿಸಲಾಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಕಾಪಾಡುವ ಹಾಗೂ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಈ ನಿರ್ಧಾರವನ್ನು ಇಲಾಖೆ ಕೈಗೊಂಡಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

    ಪ್ರಯಾಣಿಕರು IRCTC ವೆಬ್‍ಸೈಟ್ ಮೂಲಕ ಅಡುಗೆ ಕೋಣೆಗಳ ನೇರ ದೃಶ್ಯಗಳನ್ನು ನೋಡಬಹುದಾಗಿದೆ. ಪ್ರಯಾಣಿಕರಿಗೆ ಭದ್ರತೆ ಜೊತೆಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

    ಈ ನಿಟ್ಟಿನಲ್ಲಿ ಈಗಾಗಲೇ ದೆಹಲಿ, ಮುಂಬೈ ಹಾಗೂ ಭುವನೇಶ್ವರ್ ಸೇರಿದಂತೆ 16 ಮುಖ್ಯ ಆಡುಗೆ ಕೋಣೆಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಈ ಅಡುಗೆ ಕೋಣೆಗಳು ವಿಜನ್ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ಹೊಂದಿದ್ದು ಅಲ್ಲಿ ಉಂಟಾಗುವ ಅವ್ಯವಸ್ಥೆಯನ್ನು ಗುರುತಿಸಲು ಸಹಾಯಕವಾಗಿದೆ. 

    ಇಲ್ಲಿ ಅಡುಗೆ ತಯಾರಕರ ಮೇಲೂ ನಿಗಾವಹಿಸಲಾಗುತ್ತದೆ. ಅವರು ಸಮವಸ್ತ್ರ ಧರಿಸದಿದ್ದರೂ ಅಲ್ಲಿನ ಕಂಟ್ರೋಲರ್ ಗೆ ವರದಿ ನೀಡುತ್ತದೆ. ಕಂಟ್ರೋಲರ್ ಕ್ರಮ ಕೈಗೊಳ್ಳದೇ ಹೋದರೆ ನೇರವಾಗಿ ರೈಲ್ವೇ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಲಾಗುತ್ತದೆ.

    ರೈಲ್ವೆ ಇಲಾಖೆ IRCTC ಕೆಲ ದಿನ ಗಳ ತನ್ನ ವೆಬ್‍ಸೈಟ್ ಅನ್ನು ಅಪ್‍ಡೇಟ್ ಮಾಡಿತ್ತು. ಸದ್ಯಕ್ಕೆ ಬಿಡುಗಡೆಯಾಗಿರುವ ಬೀಟಾ ಆವೃತ್ತಿ ವೆಬ್‍ಸೈಟ್ ನಲ್ಲಿ ಮುಂದಿನ ದಿನಗಳಲ್ಲಿ ಈ ವಿಶೇಷತೆ ಸೇರ್ಪಡೆಯಾಗಲಿದೆ.