Tag: ಪಿಪಿಇ

  • ಕಳಪೆ ಪಿಪಿಇ ಕಿಟ್ ಸರಬರಾಜು ಆಗಿದ್ದರೆ ಕ್ರಮ: ಸಚಿವ ಡಾ.ಸುಧಾಕರ್

    ಕಳಪೆ ಪಿಪಿಇ ಕಿಟ್ ಸರಬರಾಜು ಆಗಿದ್ದರೆ ಕ್ರಮ: ಸಚಿವ ಡಾ.ಸುಧಾಕರ್

    – ರಾಯಚೂರಿನಲ್ಲಿ 8 ಜನ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸಚಿವ ಗರಂ
    – ಓಪೆಕ್ ಕೋವಿಡ್-19 ಆಸ್ಪತ್ರೆಯಲ್ಲಿನ ಸುರಕ್ಷತೆ ಬಗ್ಗೆ ವರದಿ ನೀಡಲು ಸೂಚನೆ

    ರಾಯಚೂರು: ಕಳಪೆ ಗುಣಮಟ್ಟದ ಪಿಪಿಇ ಕಿಟ್ ಸರಬರಾಜು ಆಗಿಲ್ಲ. ಯಾವುದಾದರೂ ಸಂಸ್ಥೆಯಲ್ಲಿ ಕಳಪೆ ಮಟ್ಟದ ಕಿಟ್ ಇದ್ದರೆ, ಸಂಸ್ಥೆಯ ನಿರ್ದೇಶಕರ ಮೇಲೆ ಕ್ರಮ ವಹಿಸುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಕಿಟ್ ಗಳು ಇರಲು ಸಾಧ್ಯವಿಲ್ಲ. ಪ್ರಾರಂಭದಲ್ಲಿ ಸಬ್ ಸ್ಟ್ಯಾಂಡರ್ಡ್ ಕಿಟ್ ಗಳು ಬಂದಿದ್ದವು. ಕೇಂದ್ರ ಸರ್ಕಾರ ಮೊದಲು ಕಳುಹಿಸಿದ್ದ ಕಿಟ್‍ಗಳು ಸಬ್ ಸ್ಟ್ಯಾಂಡರ್ಡ್ ಆಗಿದ್ದವು. ಅವುಗಳನ್ನು ಕೇಂದ್ರ ವಾಪಸ್ ತರಿಸಿಕೊಂಡಿತು. ರಾಜ್ಯ ಸರ್ಕಾರ ಅಂತರರಾಷ್ಟ್ರೀಯ ಗುಣಮಟ್ಟದ 2 ಲಕ್ಷ ಕಿಟ್ ತರಿಸಿದೆ. ಕೇಂದ್ರ ಸರ್ಕಾರ ನಮ್ಮಲ್ಲಿ 15 ಸಂಸ್ಥೆಗೆ ಕಿಟ್ ತಯಾರಿಸಲು ಅನಮತಿ ಕೊಟ್ಟಿದೆ. ಅವರೂ ಕೂಡ ಗುಣಮಟ್ಟದ ಕಿಟ್ ಗಳನ್ನು ತಯಾರಿಸುತ್ತಿದ್ದಾರೆ. ಕಳಪೆ ಗುಣಮಟ್ಟದ ಪಿಪಿಇ ಕಿಟ್ ಬಂದಿರಲು ಸಾಧ್ಯವಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

    ಕಳಪೆ ಮಟ್ಟದ ಕಿಟ್ ಗಳು ಬಂದಿದ್ದರೆ ತುಂಬಾ ಜನಕ್ಕೆ ಪಾಸಿಟಿವ್ ಬರುತ್ತಿತ್ತು. ಮಂತ್ರಿಯಾಗಿ ಹೇಳುತ್ತಿದ್ದೇನೆ ಯಾವುದೇ ಸಂಸ್ಥೆಗೂ ಕಳಪೆ ಗುಣಮಟ್ಟದ ಕಿಟ್ ಸರಬರಾಜು ಆಗಿಲ್ಲ. ಇದುವರೆಗೂ ಸರಬರಾಜು ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ವಿಕ್ಟೋರಿಯಾದಲ್ಲಿ ಕಿಟ್ ಸಬ್ ಸ್ಟ್ಯಾಂಡರ್ಡ್ ಆಗಿದ್ದರೆ ಬಹಳ ಜನಕ್ಕೆ ಪಾಸಿಟಿವ್ ಆಗಬೇಕಿತ್ತು. ವಿಕ್ಟೋರಿಯಾ ಫಸ್ಟ್ ಕೋವಿಡ್ ಡೆಸಿಗ್ನೆಟೆಡ್ ಆಸ್ಪತ್ರೆ. ನಾನು ಆಸ್ಪತ್ರೆಯ ಬಗ್ಗೆ ಗಮನಹರಿಸಿದ್ದೇನೆ. ಕಿಟ್ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಕ್ರಮಕೈಗೊಳ್ಳುತ್ತೇನೆ ಎಂದರು.

    ರಾಯಚೂರಿನಲ್ಲಿ 8 ಜನ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಸಚಿವ ಡಾ.ಸುಧಾಕರ್ ಗಂಭೀರವಾಗಿ ಎಚ್ಚರಿಕೆ ನೀಡಿದರು. ಕೋವಿಡ್-19 ಆಸ್ಪತ್ರೆ ಸಿಬ್ಬಂದಿಗೆ ಪಾಸಿಟಿವ್ ಬಂದಿರುವುದು ಆತಂಕ ಹೆಚ್ಚಿಸುತ್ತೆ. ಸಿಬ್ಬಂದಿಗೆ ಯಾಕೆ ಸುರಕ್ಷತೆ ಇಲ್ಲ ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಬೇಕು. ಆಸ್ಪತ್ರೆಯಲ್ಲಿ ಸರಿಯಾದ ಸುರಕ್ಷತಾ ಕ್ರಮ ಕೈಗೊಂಡಿಲ್ಲವೇ, ಈ ಕುರಿತು ಮೂರು ದಿನಗಳಲ್ಲಿ ಮಾಹಿತಿ ಬೇಕು. ರಾಜ್ಯದ ಯಾವ ಜಿಲ್ಲೆಯಲ್ಲೂ ಇಷ್ಟು ವೈದ್ಯಕೀಯ ಸಿಬ್ಬಂದಿಗೆ ಪಾಸಿಟಿವ್ ಬಂದಿಲ್ಲ. ಈ ಕುರಿತು ವರದಿ ನೀಡುವಂತೆ ರಿಮ್ಸ್ ನಿರ್ದೇಶಕ ಡಾ.ಬಸವರಾಜ್ ಪೀರಾಪುರೆಗೆ ಸೂಚಿಸಿದರು.

    ಪಂಜಾಬ್ ನಲ್ಲಿ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೊರೊನಾ ಜಾಗೃತಿ ಮೂಡಿಸುವ ಸಲುವಾಗಿ ನಾವು ಹಿಂದೆ ಲಾಕ್‍ಡೌನ್ ಮಾಡಿದ್ದೇವೆ. ಆರೋಗ್ಯ ಕ್ಷೇತ್ರದ ಸಿದ್ಧತೆಗಾಗಿ ಲಾಕ್‍ಡೌನ್ ಮಾಡಲಾಯಿತು. ಈಗ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಲಾಕ್‍ಡೌನ್ ಮತ್ತೆ ಮುಂದುವರಿಸಿದರೆ ಜೀವ ಉಳಿಸುವುದು ಒಂದೇ ಆಗುತ್ತೆ. ಜೀವನದ ಕಡೆ ಲಕ್ಷ್ಯ ಕೊಡದಿದ್ದರೆ ಬಹಳ ಅನ್ಯಾಯವಾಗುತ್ತೆ. ಹೀಗಾಗಿ ಎರಡು ಕಡೆ ಪರಿಗಣಿಸಿ ಜೀವ, ಜೀವನ ಉಳಿಸುತ್ತಿದ್ದೇವೆ ಎಂದು ಸಚಿವ ಸುಧಾಕರ್ ಹೇಳಿದರು.

  • ಗಡಿಯಲ್ಲಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗಿಲ್ಲ ಸುರಕ್ಷತೆ

    ಗಡಿಯಲ್ಲಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗಿಲ್ಲ ಸುರಕ್ಷತೆ

    – ಕನಿಷ್ಟ ಮುನ್ನೆಚರಿಕಾ ಕ್ರಮ ಕೈಗೊಳ್ಳದ ಪೊಲೀಸರು

    ಕೋಲಾರ: ಕೊರೊನಾ ಸೋಂಕು ಹರಡದಂತೆ ಹಗಲಿರುಳು ರಾಜ್ಯದ ಗಡಿಯಲ್ಲಿ ಕಾಯುವ ಕೊರೊನಾ ವಾರಿಯರ್ಸ್‍ಗೆ ಭಯ, ಆತಂಕ ಎದುರಾಗಿದೆ. ಗಡಿ ಜಿಲ್ಲೆ ಕೋಲಾರಕ್ಕೆ ನೆರೆ ಯ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಕಂಟಕವಾಗಿದ್ದು, ಕೊರೊನಾ ವಾರಿಯರ್ಸ್‍ಗೆ ಯಾವುದೇ ಸುರಕ್ಷತೆ ಇಲ್ಲದಂತಾಗಿದೆ.

    ಆಂಧ್ರ ಹಾಗೂ ತಮಿಳುನಾಡು ಗಡಿಯಲ್ಲಿ ಹಗಲಿರುಳು ಕೆಲಸ ಮಾಡುವ ಸಿಬ್ಬಂದಿಗೆ ಸುರಕ್ಷತೆ ಇಲ್ಲದಂತಾಗಿದೆ. ಸಿಬ್ಬಂದಿ ಮಾಸ್ಕ್ ಮಾತ್ರ ಧರಿಸಿ ಕೆಲಸ ಮಾಡುತ್ತಿದ್ದು, ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್ ಇಲ್ಲದೆ ಭಯದಲ್ಲೇ ಕೆಲಸ ಮಾಡುತ್ತಿದ್ದಾರೆ. ಗಡಿಯಲ್ಲಿ ಕೇಕೆ ಹಾಕುತ್ತಿರುವ ಕಿಲ್ಲರ್ ಕೊರೊನಾ, ಜಿಲ್ಲೆಯಲ್ಲೂ ತನ್ನ ಅಟ್ಟಹಾಸ ಮುಂದುವರೆಸಿದೆ. ಕೋಲಾರದ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರಿನ ಮುಳಬಾಗಲು ತಾಲೂಕಿನ ನಂಗಲಿ ಚೆಕ್ ಪೋಸ್ಟ್, ವಿಕೋಟ ಕೆಜಿಎಫ್ ತಾಲೂಕಿನ ವೆಂಕಟಾಪುರ ಚೆಕ್ ಪೋಸ್ಟ್, ಕುಪ್ಪಂನ ಕೆಂಪಾಪುರ ಚೆಕ್ ಪೋಸ್ಟ್, ಶ್ರೀನಿವಾಸಪುರ ತಾಲೂಕಿನ ರಾಯಲಪಾಡು ಚೆಕ್ ಪೋಸ್ಟ್ ಗಳಲ್ಲಿ 10ಕ್ಕೂ ಹೆಚ್ಚು ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

    ತಮಿಳುನಾಡಿನ ಕೃಷ್ಣಗಿರಿಗೆ ಸಂಪರ್ಕ ಕಲ್ಪಿಸುವ ಬಂಗಾರಪೇಟೆ ತಾಲೂಕಿನ ಬಲಮಂದೆ ಚೆಕ್ ಪೋಸ್ಟ್, ಹೊಸೂರು ಸಂಪರ್ಕ ಕಲ್ಪಿಸುವ ಮಾಲೂರು ತಾಲೂಕಿನ ಕೆಸರಗೆರೆ ಹಾಗೂ ಸಂಪಂಗೆರೆ ಚೆಕ್ ಪೋಸ್ಟ್ ನಲ್ಲಿ ಪೊಲೀಸ್, ಅರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ಯಾವುದೇ ಮುನ್ನಚ್ಚರಿಕೆ ಆಕ್ರಮಗಳನ್ನ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಡಿಯಲ್ಲಿ ಕೆಲಸ ಮಾಡುವ ಕೊರೊನಾ ವಾರಿಯರ್ಸ್‍ಗೆ ಸೋಂಕು ತಗುಲಿದರೆ ಗತಿಯೇನು ಎಂಬ ಭಯ ಕಾಡುತ್ತಿದೆ.

  • ವಿಶ್ವದಲ್ಲೇ ಹೆಚ್ಚು ಪಿಪಿಇ ಉತ್ಪಾದಿಸುತ್ತಿರುವ ಎರಡನೇ ರಾಷ್ಟ್ರ ಭಾರತ- ಬೆಂಗಳೂರು ಈಗ ಪಿಪಿಇ ಹಬ್

    ವಿಶ್ವದಲ್ಲೇ ಹೆಚ್ಚು ಪಿಪಿಇ ಉತ್ಪಾದಿಸುತ್ತಿರುವ ಎರಡನೇ ರಾಷ್ಟ್ರ ಭಾರತ- ಬೆಂಗಳೂರು ಈಗ ಪಿಪಿಇ ಹಬ್

    – ದೇಶದಲ್ಲೇ ಶೇ.50ರಷ್ಟು ಬೆಂಗಳೂರಿನಲ್ಲಿ ಉತ್ಪಾದನೆ
    – ಕೇವಲ 60 ದಿನಗಳಲ್ಲಿ ಉತ್ಪಾದನೆ 56 ಪಟ್ಟು ಹೆಚ್ಚಳ

    ನವದೆಹಲಿ: ವಿಶ್ವದಲ್ಲೇ ಹೆಚ್ಚು ಪಿಪಿಇ ಉತ್ಪಾದಿಸುತ್ತಿರುವ ಎರಡನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದ್ದು, ಇನ್ನೂ ಸಂತಸದ ಸಂಗತಿ ಎಂದರೆ ಬೆಂಗಳೂರು ಪಿಪಿಇ ಉತ್ಪಾದನಾ ಹಬ್ ಆಗಿ ಮಾರ್ಪಟ್ಟಿದೆ.

    ಮಾರ್ಚ್ 1ರಂದು ಕೊರೊನಾ ವೈರಸ್ ದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಭಾರತದಲ್ಲಿ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‍ಮೆಂಟ್(ಪಿಪಿಇ) ಉತ್ಪಾದಿಸುವ ಒಂದೂ ಕಾರ್ಖಾನೆ ಇರಲಿಲ್ಲ. ಆದರೆ ಮೇ 18ರ ಹೊತ್ತಿಗೆ ಭಾರತ ಪ್ರತಿ ದಿನ 4.5 ಲಕ್ಷ ಪಿಪಿಇ ಕಿಟ್‍ಗಳನ್ನು ಉತ್ಪಾದಿಸಿದೆ ಎಂಬ ಅಂಶ ಇನ್ವೆಸ್ಟ್ ಇಂಡಿಯಾ ದಾಖಲೆಗಳ ಮೂಲಕ ತಿಳಿದಿದೆ.

    ಮಾರ್ಚ್ 30ರಿಂದ ಗಣನೆಗೆ ತೆಗೆದುಕೊಂಡರೆ, ಭಾರತ ಪ್ರತಿ ದಿನ 8 ಸಾವಿರಕ್ಕೂ ಅಧಿಕ ಪಿಪಿಇ ಕಿಟ್‍ಗಳನ್ನು ಉತ್ಪಾದಿಸುತ್ತಿದೆ. ಸುಮಾರು 7 ಸಾವಿರ ಕೋಟಿ ರೂ. ಮೌಲ್ಯದ ಪಿಪಿಇಗಳನ್ನು ಭಾರತದ ಕೈಗಾರಿಕೆಗಳು ಉತ್ಪಾದಿಸಿವೆ. ಈ ಮೂಲಕ ಕೇವಲ 60 ದಿನಗಳಲ್ಲಿ 56 ಪಟ್ಟು ಬೆಳವಣಿಗೆ ಸಾಧಿಸಲಾಗಿದೆ.

    ಒಂದು ಪಿಪಿಇ ಕಿಟ್ ಮಾಸ್ಕ್(ಸರ್ಜಿಕಲ್ ಹಾಗೂ ಎನ್-95), ಗ್ಲೌಸ್(ಸರ್ಜಿಕಲ್ ಹಾಗೂ ಎಕ್ಸಾಮಿನೇಶನ್), ಕವರ್, ಗೌನ್‍ಗಳು, ಹೆಡ್ ಕವರ್, ಗಾಗಲ್ಸ್, ಫೇಸ್ ಶೀಲ್ಡ್ಸ್ ಹಾಗೂ ಶೂಗಳನ್ನು ಒಳಗೊಂಡಿದೆ.

    ದೇಶದಲ್ಲಿ ಒಟ್ಟು 600ಕ್ಕೂ ಹೆಚ್ಚು ಸರ್ಟಿಫೈಡ್ ಕಂಪನಿಗಳು ಪಿಪಿಇ ಕಿಟ್ ತಯಾರಿಸುತ್ತಿದ್ದು, 2025ರ ವೇಳೆ ಪಿಪಿಇ ಕಿಟ್‍ಗಳ ಮಾರ್ಕೆಟಿಂಗ್ ಪ್ರಮಾಣ 7 ಲಕ್ಷ ಕೋಟಿ ರೂ.(92.5 ಬಿಲಿಯನ್ ಡಾಲರ್)ಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

    ಪಿಪಿಇ ಕಿಟ್‍ಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಪ್ರಸ್ತುತ ಚೀನಾ ನಂಬರ್ 1 ಸ್ಥಾನದಲ್ಲಿದ್ದು, ಇದೀಗ ಭಾರತದ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಹಾಗೂ ಏಷ್ಯಾ ಫೆಸಿಪಿಕ್ ದೇಶಗಳು ಭಾರತದ ಪಿಪಿಇ ಕಿಟ್‍ಗಳಿಗಾಗಿ ಕಾತರದಿಂದ ಕಾಯುತ್ತಿವೆ. ಮಾರುಕಟ್ಟೆಗೆ ದೊಡ್ಡ ಸ್ಥಾನ ನೀಡಲು ತುದಿಗಾಲಿನಲ್ಲಿ ನಿಂತಿವೆ. ಈ ಎರಡು ಪ್ರದೇಶಗಳು ಶೇ.61ರಷ್ಟು ಪಿಪಿಇಗಳ ಮಾರುಕಟ್ಟೆ ಪಾಲುಗಳನ್ನು ಹೊಂದಿವೆ. ಹೆಚ್ಚವರಿಯಾಗಿ ಯೂರೋಪ್ ಸಹ ಶೇ.22ರಷ್ಟು ಮಾರ್ಕೆಟ್ ಹೊಂದಿದೆ.

    ನಮ್ಮ ದೇಶದ ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್‍ಗಳ ಕೊರತೆ ಕಾಡಬಹುದು ಎಂಬ ಉದ್ದೇಶದಿಂದ ಪ್ರಸ್ತುತ ಪಿಪಿಇಗಳ ರಫ್ತನ್ನು ನಿಷೇಧಿಸಲಾಗಿದೆ. ಆದರೆ ಇತ್ತೀಚಿನ ಬೆಳವಣಿಗೆ ಗಮನಿಸಿದಲ್ಲಿ ರಫ್ತು ನಿಷೇಧವನ್ನು ತೆರವುಗೊಳಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ದೇಶದ ಬೇಡಿಕೆಯನ್ನು ಪೂರೈಸಲು ಸಾಧ್ಯವಾದ ಬಳಿಕ ರಫ್ತಿನ ಮೇಲಿನ ನಿಷೇಧವನ್ನು ತೆಗೆಯುವಂತೆ ಅಪ್ಪೇರಲ್ ಎಕ್ಸ್ ಪೋರ್ಟ್ ಪ್ರೊಮೊಶನ್ ಕೌನ್ಸಿಲ್(ಎಇಪಿಸಿ) ತಿಳಿಸಿದೆ.

    ಬೆಂಗಳೂರು ಪಿಪಿಇ ಉತ್ಪಾದನಾ ಹಬ್
    ಭಾರತದ ಸಧ್ಯ 15.96 ಲಕ್ಷ ಪಿಪಿಇ ಕಿಟ್‍ಗಳ ದಾಸ್ತಾನು ಹೊಂದಿದ್ದು, ಇನ್ನೂ 2.22 ಕೋಟಿ ಕಿಟ್‍ಗಳನ್ನು ತಯಾರಿಸಲಾಗುತ್ತಿದೆ. ಇನ್ನೂ ಖುಷಿಯ ವಿಚಾರವೆಂದರೆ ಬೆಂಗಳೂರು ಪಿಪಿಇ ಉತ್ಪಾದನೆಯ ಹಬ್ ಆಗಿದ್ದು, ದೇಶದ ಉತ್ಪಾದನೆಯಲ್ಲಿ ಶೇ.50ರಷ್ಟು ಕಿಟ್‍ಗಳು ಬೆಂಗಳೂರಿನಲ್ಲಿ ತಯಾರಾಗುತ್ತವೆ. ಬೆಂಗಳೂರು ಹೊರತುಪಡಿಸಿದರೆ, ತಿರುಪ್ಪುರ್, ಕೊಯಮತ್ತೂರು, ಚೆನ್ನೈ, ಅಹ್ಮದಾಬಾದ್, ವಡೋದರಾ, ಲುಧಿಯಾನಾ, ಭಿವಾಂಡಿ, ಕೋಲ್ಕತ್ತಾ, ನೋಯ್ಡಾ, ಗುರಗ್ರಾಮದಲ್ಲಿ ಪಿಪಿಇಗಳು ತಯಾರಾಗುತ್ತಿವೆ.

  • ಆರೋಗ್ಯ ಸಿಬ್ಬಂದಿ ರಕ್ಷಣೆಗೆ ನಿಂತ ವಿದ್ಯಾ ಬಾಲನ್

    ಆರೋಗ್ಯ ಸಿಬ್ಬಂದಿ ರಕ್ಷಣೆಗೆ ನಿಂತ ವಿದ್ಯಾ ಬಾಲನ್

    ನವದೆಹಲಿ: ಕೊರೊನಾ ವಿರುದ್ಧ ಹೋರಾಡಲು ಹಲವು ನಟ, ನಟಿಯರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಕೆಲವರು ಧನಸಹಾಯ ಮಾಡಿದರೆ, ಇನ್ನೂ ಕೆಲವರು ಅಸಹಾಯಕರಿಗೆ ಅಗತ್ಯ ವಸ್ತುಗಳನ್ನು ನಿಡುತ್ತಿದ್ದಾರೆ. ಇನ್ನಷ್ಟು ಜನ ತಾವೇ ಕೊರೊನಾ ವಾರಿಯರ್ಸ್ ಆಗಿ ಹೋರಾಡುತ್ತಿದ್ದಾರೆ. ಆದರೆ ಬಾಲಿವುಡ್ ಖ್ಯಾತ ನಟಿ ವಿದ್ಯಾಬಾಲನ್ ಅವರು ಕೊರೊನಾ ವಾರಿಯರ್ಸ್‍ಗೆ ಸಹಾಯ ಮಾಡಲು ನಿಂತಿದ್ದಾರೆ.

    ಈಗಾಗಲೇ ದೇಶಾದ್ಯಂತ ಬಹುತೇಕ ನಟ, ನಟಿಯರು ತಮ್ಮದೇಯಾದ ಕೊಡುಗೆ ನೀಡುತ್ತಿದ್ದು, ಹಲವರು ಪಿಎಂ ಕೇರ್ಸ್‍ಗೆ ಹಣ ಸಂದಾಯ ಮಾಡುವ ಮೂಲಕ ನೆರವಾಗುತ್ತಿದ್ದಾರೆ. ಇನ್ನೂ ಕೆಲವರು ಸಂಕಷ್ಟದಲ್ಲಿರುವ ಸಿನಿಮಾ ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ಕೆಲಸ ನಟಿಯರು ತಾವೇ ವೈದ್ಯರಾಗಿ, ನರ್ಸ್‍ಗಳಾಗಿ ಕಾರ್ಯನಿರ್ವಹಿಸುವ ಮೂಲಕ ಜೀವ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ನಟಿ ವಿದ್ಯಾಬಾಲನ್ ವೈದ್ಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಲು ಮುಂದಾಗಿದ್ದಾರೆ.

    ಹಗಲು-ರಾತ್ರಿ ಎನ್ನದೆ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಮತ್ತು ಆರೋಗ್ಯ ಸಿಬ್ಬಂದಿಗೆ ಬೇಕಾಗುವ ಅಗತ್ಯ ಪಿಪಿಇ ಕಿಟ್‍ಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಪಿಪಿಇ ಕಿಟ್‍ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

    ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ನಮಸ್ತೆ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ರಕ್ಷಣೆಗಾಗಿ ಪಿಪಿಇ ಕಿಟ್‍ಗಳ ಅಗತ್ಯವಿದೆ. ಹೀಗಾಗಿ ನಾವು ಸಹಾಯ ಮಾಡಬೇಕು. ನಾನು 1000 ಪಿಪಿಇ ಕಿಟ್‍ಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ. ಅಲ್ಲದೆ ಟ್ರಿಂಗ್ ಜೊತೆಗಿನ ಸಹಭಾಗಿತ್ವದಲ್ಲಿ ಒಂದು ಸಾವಿರ ಪಿಪಿಇ ಕಿಟ್ ತಯಾರಿಗೆ ಸಿದ್ಧತೆ ನಡೆಸಿದ್ದೇವೆ. ಇಂತಹ ಕಠಿಣ ಸಂದರ್ಭದಲ್ಲಿ ಇದು ನಮ್ಮ ವೈದ್ಯರಿಗೆ ಅಗತ್ಯವಿದೆ. ಅಲ್ಲದೆ ನಿಮ್ಮಲ್ಲೂ ಮನವಿ ಮಾಡುತ್ತೇನೆ. ನೀವು ಸಹ ಸಹಾಯ ಮಾಡಿದಲ್ಲಿ ವಿಡಿಯೋ ಸಂದೇಶದ ಮೂಲಕ ವೈಯಕ್ತಿಕವಾಗಿ ನಿಮಗೆ ಧನ್ಯವಾದ ತಿಳಿಸುತ್ತೇನೆ. ಈ ವಿಡಿಯೋ ನಿಮ್ಮೊಂದಿಗೆ ಶಾಶ್ವತವಾಗಿ ನೆನಪಿನಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

    ವಿದ್ಯಾ ಬಾಲನ್ ಇದಕ್ಕಾಗಿ ಒಂದು ತಂಡವನ್ನೇ ಕಟ್ಟಿಕೊಂಡಿದ್ದು, ಮನಿಶ್ ಚಂದ್ರ ಮತ್ತು ನಿರ್ಮಾಪಕ ಅತುಲ್ ಕಸ್ಬೇಕರ್ ಸಹಭಾಗಿತ್ವದಲ್ಲಿ ಈ ಕಾರ್ಯವನ್ನು ಮಾಡಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ವಿದ್ಯಾಬಾಲನ್, ಇಂತಹ ಸಮಯದಲ್ಲಿ ಆರೋಗ್ಯ ಸಿಬ್ಬಂದಿ ನಮಗೆ ಬಾರ್ಡರ್‍ನಲ್ಲಿ ಹೋರಾಡುವ ಸೈನಿಕರಿದ್ದಂತೆ. ಆದರೆ ಆರೋಗ್ಯ ಸೈನಿಕರಿಗೆ ಸದ್ಯ ಪಿಪಿಇ ಕಿಟ್‍ಗಳ ಕೊರತೆ ಕಾಡುತ್ತಿದ್ದು, ಇವುಗಳು ಹೆಚ್ಚು ಸಿಗುವಂತೆ ಮಾಡಬೇಕಿದೆ ಎಂದಿದ್ದಾರೆ.

    ಒಂದು ವೇಳೆ ಒಂದು ಯುನಿಟ್‍ನ ಒಬ್ಬರಿಗೆ ಕೊರೊನಾ ಸೋಂಕು ತಗುಲಿದರೂ 10-12 ಜನ ಆರೋಗ್ಯ ಸಿಬ್ಬಂದಿಯನ್ನು 2ರಿಂದ 3 ವಾರಗಳ ಕಾಲ ಕ್ವಾರಂಟೈನ್ ಮಾಡುತ್ತಾರೆ. ಆಗ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಕಾಡುತ್ತದೆ. ಹೀಗಾಗಿ ನನ್ನೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ. ನೀವು ಯಾವ ರೀತಿಯಾಗಿ ಸಹಾಯ ಮಾಡಬಹುದು ಎಂಬುದನ್ನು ಸಹ ವಿದ್ಯಾಬಾಲನ್ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.

  • ಚೀನಾದಿಂದ ಬಂದಿದ್ದ 50 ಸಾವಿರ ಪಿಪಿಇ ಬಳಸಲ್ಲ: ಅಸ್ಸಾಂ ಸರ್ಕಾರ

    ಚೀನಾದಿಂದ ಬಂದಿದ್ದ 50 ಸಾವಿರ ಪಿಪಿಇ ಬಳಸಲ್ಲ: ಅಸ್ಸಾಂ ಸರ್ಕಾರ

    ಗುವಾಹಟಿ: ವೈದ್ಯರ ಬಳಕೆಗೆ ಚೀನಾದಿಂದ ಆಮದು ಮಾಡಿಕೊಂಡಿದ್ದ ಸುಮಾರು 50 ಸಾವಿರ ವೈಯಕ್ತಿಕ ಸುರಕ್ಷಾ ಸಾಧನಗಳನ್ನು(ಪಿಪಿಇ) ಅಸ್ಸಾಂ ಸರ್ಕಾರ ಬಳಕೆ ಮಾಡದಿರಲು ನಿರ್ಧರಿಸಿದೆ.

    ಏ.15 ರಂದು ರಾತ್ರಿ ಖಾಸಗಿ ಸರಕು ಸಾಗಣೆ ವಿಮಾನದ ಮೂಲಕ ಚೀನಾದಿಂದ ನೇರವಾಗಿ ಅಸ್ಸಾಂಗೆ ಪಿಪಿಇ ಬಂದಿಳಿತ್ತು. ಈ ಮೂಲಕ ಚೀನಾದಿಂದ ನೇರವಾಗಿ ಪಿಪಿಇಗಳನ್ನು ತರಿಸಿಕೊಂಡಿದ್ದ ಮೊದಲ ರಾಜ್ಯ ಅಸ್ಸಾಂ ಆಗಿತ್ತು.

    ಚೀನಾದಿಂದ ತರಿಸಿಕೊಳ್ಳುವುದಕ್ಕೂ ಮುನ್ನ ಅಸ್ಸಾಂ ನಲ್ಲಿ ಕೇವಲ 2 ಸಾವಿರ ಕಿಟ್ ಗಳಿದ್ದವು. ಭಾರತದ ಬೇರೆ ಬೇರೆ ರಾಜ್ಯಗಳಿಂದ ಅಸ್ಸಾಂ ಆರೋಗ್ಯ ಇಲಾಖೆ 1.50 ಲಕ್ಷ ಪಿಪಿಇ ಕಿಟ್‍ಗಳನ್ನು ತರಿಸಿಕೊಂಡಿತ್ತು.

    ಚೀನಾದ ಪಿಪಿಇ ಕಿಟ್ ಗಳ ಗುಣಮಟ್ಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬಂದಿದೆ. ಕೆಲ ವೈದ್ಯರು ಪಿಪಿಯಿ ಕಿಟ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅವರಿಗೆ ತೊಂದರೆ ನೀಡಲು ನಾವು ಬಯುಸುವುದಿಲ್ಲ. ಹೀಗಾಗಿ ನಾವು ಚೀನಾ ಪಿಪಿಇ ಬಳಕೆ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮ ತಿಳಿಸಿದ್ದಾರೆ.

    2 ಲಕ್ಷ ಪಿಪಿಇ ಕಿಟ್ ಸ್ಟಾಕ್ ಹೊಂದಿದ್ದೇವೆ. ಈಗ ನಾವು 1.50 ಲಕ್ಷ ಪಿಪಿಇ ಕಿಟ್ ಮೊದಲು ಬಳಕೆ ಮಾಡುತ್ತೇವೆ. ಚೀನಾದ 50 ಸಾವಿರ ಪಿಪಿಇ ಕಿಟ್ ಗಳನ್ನು ಗೋಡೌನ್ ನಲ್ಲಿ ಇಡುತ್ತೇವೆ. ಈ ಕಿಟ್ ಗಳ ಮಾದರಿಯನ್ನು ಗುಣಮಟ್ಟದ ಪರೀಕ್ಷೆಗೆ ಕಳುಹಿಸುತ್ತೇವೆ. ಮುಂದೆ ಅಗತ್ಯ ಬಿದ್ದರೆ ಈ ಕಿಟ್ ಬಳಕೆ ಮಾಡುತ್ತೇವೆ ಎಂದು ತಿಳಿಸಿದರು.

  • 24 ಗಂಟೆಗಳಲ್ಲಿ 549 ಮಂದಿಗೆ ಸೋಂಕು, 17 ಜನ ಸಾವು

    24 ಗಂಟೆಗಳಲ್ಲಿ 549 ಮಂದಿಗೆ ಸೋಂಕು, 17 ಜನ ಸಾವು

    – ಪಿಪಿಇ ಲಭ್ಯತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ

    ನವದೆಹಲಿ: ಕೋವಿಡ್-19 ಚಿಕಿತ್ಸೆ ನೀಡಲು ಅಗತ್ಯವಿರುವ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಲಭ್ಯತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಆದರೆ ಇವುಗಳನ್ನು ಸರಿಯಾಗಿ ಬಳಸಬೇಕು ಎಂದು ಒತ್ತಿ ಹೇಳಿದೆ.

    ದೆಹಲಿಯಲ್ಲಿ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗ್ರವಾಲ್, ಕಳೆದ 24 ಗಂಟೆಗಳಲ್ಲಿ 549 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ 17 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 166ಕ್ಕೆ ಏರಿಕೆ ಕಂಡಿದೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 5734 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 473 ಜನರು ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದರು.

    ಹರ್ಯಾಣದ ಕರ್ನಾಲ್‍ನಲ್ಲಿ ‘ಅಡಾಪ್ಟ್ ಎ ಫ್ಯಾಮಿಲಿ’ ಅಭಿಯಾನದಡಿ 13,000 ನಿರ್ಗತಿಕ ಕುಟುಂಬಗಳಿಗೆ 64 ಲಕ್ಷ ರೂ.ಗಳ ಸಹಾಯ ನೀಡಲಾಗುತ್ತಿದೆ. ಪಿಪಿಇ (ವೈಯಕ್ತಿಕ ರಕ್ಷಣಾ ಸಲಕರಣೆ), ಮಾಸ್ಕ್ ಮತ್ತು ವೆಂಟಿಲೇಟರ್ ಗಳ ಸರಬರಾಜು ಈಗ ಪ್ರಾರಂಭವಾಗಿದೆ. ಭಾರತದಲ್ಲಿ 20 ದೇಶೀಯ ತಯಾರಕರನ್ನು ಪಿಪಿಇಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ. 1.7 ಕೋಟಿ ಪಿಪಿಇಗಳಿಗೆ ಆದೇಶಗಳನ್ನು ನೀಡಲಾಗಿದೆ ಮತ್ತು ಸರಬರಾಜು ಪ್ರಾರಂಭವಾಗಿದೆ. 49,000 ವೆಂಟಿಲೇಟರ್ ಗಳಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.

    ರೈಲ್ವೆ ಇಲಾಖೆ 2,500ಕ್ಕೂ ಹೆಚ್ಚು ವೈದ್ಯರನ್ನು ಮತ್ತು 35,000 ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿದೆ. ಅವರ 586 ಆರೋಗ್ಯ ಘಟಕಗಳು, 45 ಉಪ ವಿಭಾಗೀಯ ಆಸ್ಪತ್ರೆಗಳು, 56 ವಿಭಾಗೀಯ ಆಸ್ಪತ್ರೆಗಳು, 8 ಉತ್ಪಾದನಾ ಘಟಕ ಆಸ್ಪತ್ರೆಗಳು ಮತ್ತು 16 ವಲಯ ಆಸ್ಪತ್ರೆಗಳು ತಮ್ಮ ಮಹತ್ವದ ಸೌಲಭ್ಯಗಳೊಂದಿಗೆ ಕೋವಿಡ್-19 ವಿರುದ್ಧ ಹೋರಾಡಲು ಸಿದ್ಧವಾಗಿದೆ ಎಂದು ಲಾವ್ ಅಗರ್‍ವಾಲ್ ಮಾಹಿತಿ ನೀಡಿದ್ದಾರೆ.

    80,000 ಪ್ರತ್ಯೇಕ ಹಾಸಿಗೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ 5,000 ಬೋಗಿಗಳನ್ನು ಪ್ರತ್ಯೇಕ ಘಟಕಗಳಾಗಿ ಪರಿವರ್ತಿಸುತ್ತಿದೆ. ಅದರಲ್ಲಿ 3,250 ಅನ್ನು ಬೆಡ್‍ಗಳಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.

    ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಧಿಕಾರಿ ಮಾತನಾಡಿ, ಈವರೆಗೆ 1,30,000 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 5,734 ಮಾದರಿಗಳಲ್ಲಿ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತರ ಸಂಖ್ಯೆ ಕಳೆದ 1ರಿಂದ 1.5 ತಿಂಗಳುಗಳಲ್ಲಿ ಶೇ.3ರಿಂದ 5ರ ನಡುವೆ ಇದೆ. ಇದು ಗಣನೀಯವಾಗಿ ಹೆಚ್ಚಿಲ್ಲ ಎಂದು ತಿಳಿಸುತ್ತದೆ. ಬುಧವಾರ ನಾವು 13,143 ಮಾದರಿಗಳನ್ನು ಪರೀಕ್ಷಿಸಿದ್ದೇವೆ ಎಂದು ತಿಳಿಸಿದರು.