Tag: ಪಿಎಂ ಮೋದಿ

  • ಸೆಮಿಕಂಡಕ್ಟರ್‌ ವಲಯದಲ್ಲಿ ಭಾರತ ‘ವಿಕ್ರಮ’; ಏನಿದು ದೇಶೀಯ ವಿಕ್ರಮ್‌-32 ಚಿಪ್‌ – ಅಮೆರಿಕ, ಚೀನಾಗೆ ಟಕ್ಕರ್?

    ಸೆಮಿಕಂಡಕ್ಟರ್‌ ವಲಯದಲ್ಲಿ ಭಾರತ ‘ವಿಕ್ರಮ’; ಏನಿದು ದೇಶೀಯ ವಿಕ್ರಮ್‌-32 ಚಿಪ್‌ – ಅಮೆರಿಕ, ಚೀನಾಗೆ ಟಕ್ಕರ್?

    ನಾವಿಂದು ವ್ಯಾಪಕವಾಗಿ ಬಳಸುತ್ತಿರುವ ಸ್ಮಾರ್ಟ್ ಫೋನ್‌ಗಳು, ಡಿಜಿಟಲ್ ಸಾಧನಗಳು, ವಾಹನಗಳು, ಎಲೆಕ್ಟ್ರಿಕ್ ಉಪಕರಣಗಳು, ಯುದ್ಧದ ಶಸ್ತ್ರಾಸ್ತ್ರ.. ಹೀಗೆ ಮೊದಲಾದವುಗಳಿಗೆ ಅತಿ ಮುಖ್ಯವಾದ ಅಂಗವೆಂದರೆ ಅದು ಸೆಮಿಕಂಡಕ್ಟರ್ ಚಿಪ್‌ಗಳು. ಕಚ್ಚಾ ತೈಲ ಕಪ್ಪು ಚಿನ್ನ ಎನಿಸಿಕೊಂಡರೆ, ಚಿಪ್‌ಗಳು ಡಿಜಿಟಲ್ ವಲಯದ ವಜ್ರ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದಷ್ಟೇ ಪ್ರಾಮುಖ್ಯತೆಯನ್ನು ಇದು ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸಲು ಇದು ಕೂಡ ಪ್ರಮುಖ ಅಸ್ತ್ರವಾಗಿದೆ. ಚಿಪ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕೆಂಬ ಭಾರತದ ಕನಸು ನನಸಾಗಿದೆ. ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಮೇಡ್ ಇನ್ ಇಂಡಿಯಾ ಚಿಪ್ ತಯಾರಾಗಿದೆ. ಡಿಜಿಟಲ್ ವಲಯದಲ್ಲಿ ‘ವಿಕ್ರಮ’ ಸಾಧಿಸಲು ಭಾರತ ಮುಂದಡಿಯಿಟ್ಟಿದೆ.

    ಹೌದು, ಭಾರತ ದೇಶೀಯವಾಗಿ ‘ವಿಕ್ರಮ್ 32 ಮೈಕ್ರೋಪ್ರೊಸೆಸರ್’ (Vikram-32 Chip) ಅನ್ನು ಉತ್ಪಾದಿಸಿದೆ. ಇದನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಧಾನಿ ಮೋದಿ ಅವರಿಗೆ ಈಚೆಗೆ ಹಸ್ತಾಂತರಿಸಿದ್ದಾರೆ. ಏನಿದು ಸ್ಥಳೀಯ ನಿರ್ಮಿತ 32-ಬಿಟ್ ಮೈಕ್ರೋಪ್ರೊಸೆಸರ್ ‘ವಿಕ್ರಮ್-32’? ಸೆಮಿಕಂಡಕ್ಟರ್ ಅಥವಾ ಮೈಕ್ರೋಪ್ರೊಸೆಸರ್ ಎಂದರೇನು? ಜಗತ್ತಿಗೆ ಇದು ಏಕೆ ಮುಖ್ಯ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ. ಇದನ್ನೂ ಓದಿ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಕ್ರಮ್-32 ಬಿಟ್ ಪ್ರೊಸೆಸರ್ ಚಿಪ್ ಅನಾವರಣ

    ಏನಿದು ವಿಕ್ರಮ್-32 ಚಿಪ್?
    ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ವಿಕ್ರಮ್ 3201’ ಚಿಪ್, 32-ಬಿಟ್ ಮೈಕ್ರೋಪ್ರೊಸೆಸರ್ ಆಗಿದೆ. ಇದನ್ನು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಎಲ್) ಅಭಿವೃದ್ಧಿಪಡಿಸಿದೆ. ಚಂಡೀಗಢದಲ್ಲಿರುವ ಇಸ್ರೋದ ಸೆಮಿಕಂಡಕ್ಟರ್ ಲ್ಯಾಬೊರೇಟರಿ (ಎಸ್‌ಸಿಎಲ್) ನಲ್ಲಿ ಇದನ್ನು ತಯಾರಿಸಲಾಯಿತು. ರಾಕೆಟ್, ಉಪಗ್ರಹಗಳು ಮತ್ತು ಇತರ ಹೆಚ್ಚಿನ ವಿಶ್ವಾಸಾರ್ಹತೆ ವ್ಯವಸ್ಥೆಗಳಲ್ಲಿ ಬಳಸಲು ಉದ್ದೇಶಿಸಲಾಗಿದೆ. ಇದು 2009 ರಿಂದ ಭಾರತೀಯ ಉಡಾವಣಾ ವಾಹನಗಳಿಗೆ ಶಕ್ತಿ ತುಂಬುತ್ತಿರುವ ಇಸ್ರೋದ ಹಿಂದಿನ 16-ಬಿಟ್ ಪ್ರೊಸೆಸರ್ ವಿಕ್ರಮ್ 1601ನ ಉತ್ತರಾಧಿಕಾರಿಯಾಗಿದೆ. ಅಂದರೆ, ವಿಕ್ರಮ್ 16 ಚಿಪ್‌ನ ಅಪ್‌ಗ್ರೇಡ್ ಆಗಿದೆ.

    ಇದು ಏಕೆ ಮಹತ್ವದ್ದು?
    ಇಲ್ಲಿಯವರೆಗೆ ಭಾರತವು ನಿರ್ಣಾಯಕ ಬಾಹ್ಯಾಕಾಶ ತಂತ್ರಜ್ಞಾನಗಳಿಗಾಗಿ ವಿದೇಶಿ ಅವಲಂಬನೆಯಲ್ಲಿತ್ತು. ಇದರಿಂದ ರಫ್ತು ನಿರ್ಬಂಧಗಳು, ಪೂರೈಕೆ ಅಡಚಣೆ ಅಥವಾ ಸಂಭಾವ್ಯ ಭದ್ರತಾ ದುರ್ಬಲತೆಗಳಂತಹ ಸಮಸ್ಯೆ ಎದುರಾಗುತ್ತಿತ್ತು. ಈಗ ವಿಕ್ರಮ್-32 ಚಿಪ್‌ನಿಂದಾಗಿ ಭಾರತವು ಉನ್ನತ ಮಟ್ಟದ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಈ ಚಿಪ್ ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ಪೈಪೋಟಿಯಲ್ಲಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ನಿಲ್ಲಿಸಿದೆ.

    16-ಬಿಟ್‌ನಿಂದ 32-ಬಿಟ್‌ಗೆ ಅಪ್‌ಗ್ರೇಡ್
    ಇದುವರೆಗೆ ಇಸ್ರೋ ತನ್ನ ಉಡಾವಣಾ ವಾಹನಗಳಿಗೆ ಹಳೆಯ ವಿಕ್ರಮ್-1601 ಅನ್ನು ಬಳಸುತ್ತಿತ್ತು. ಇದು 10 ವರ್ಷಗಳಿಗೂ ಹೆಚ್ಚು ಕಾಲ ಇಸ್ರೋದ ಉಡಾವಣಾ ವಾಹನಗಳಿಗೆ ಶಕ್ತಿ ತುಂಬಿತ್ತು. ಈ ಹಿಂದೆ 16 ಬಿಟ್‌ನ ಚಿಪ್ ತಯಾರಿಸಿದ್ದ ಇಸ್ರೋ ಈಗ 32 ಬಿಟ್‌ನ ಚಿಪ್ ಅಭಿವೃದ್ಧಿಪಡಿಸಿದೆ. ಹೆಚ್ಚಿನ ಪ್ರಮಾಣದ ಡೇಟಾ ನಿರ್ವಹಿಸಲು, ಆಧುನಿಕ ಸಾಫ್ಟ್‌ವೇರ್ ಬೆಂಬಲಿಸಲು ಮತ್ತು ವೇಗವಾಗಿ ಹೆಚ್ಚು ನಿಖರವಾದ ಲೆಕ್ಕಾಚಾರ ನಿರ್ವಹಿಸಲು ಅಪ್‌ಗ್ರೇಡ್ ಚಿಪ್ ಸಹಕಾರಿಯಾಗಿದೆ.

    ವೈಶಿಷ್ಟ್ಯಗಳೇನು?
    * ಇದು ವೇಗವಾದ ಸಂಸ್ಕರಣೆ ಮತ್ತು ದೊಡ್ಡ ಮೆಮೊರಿಯನ್ನು ನಿರ್ವಹಿಸುತ್ತದೆ. ಹೆಚ್ಚಿನ ಪ್ರಮಾಣದ ಡೇಟಾವನ್ನು ಪರಿಣಾಮಕಾರಿಯಾಗಿ ಪ್ರಕ್ರಿಯೆಗೊಳಿಸಲು ಅನುವು ಮಾಡಿಕೊಡುತ್ತದೆ. ಕಾರ್ಯಾಚರಣೆಯ ಸಮಯದಲ್ಲಿ 500 mW ಗಿಂತ ಕಡಿಮೆ ವಿದ್ಯುತ್ ಬಳಸುತ್ತದೆ.
    * ಏರೋಸ್ಪೇಸ್ ಮತ್ತು ಉಪಗ್ರಹ ಕಾರ್ಯಾಚರಣೆಗಳಲ್ಲಿ ಅಗತ್ಯವಿರುವ ಸಂಕೀರ್ಣ ಲೆಕ್ಕಾಚಾರಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಮಾರ್ಗದರ್ಶನ, ಸಂಚರಣೆ, ನಿಯಂತ್ರಣಕ್ಕೆ ಅಗತ್ಯವಿರುವ ಸಂಕೀರ್ಣ ಗಣಿತದ ಲೆಕ್ಕಾಚಾರಗಳನ್ನು ಸಕ್ರಿಯಗೊಳಿಸುತ್ತದೆ.
    * ಪ್ರೊಸೆಸರ್ ಬಾಹ್ಯಾಕಾಶ ಅನ್ವಯಿಕೆಗಳಿಗೆ ಅನುಗುಣವಾಗಿ ಕಸ್ಟಮ್ ಇನ್ಸ್ಟ್ರಕ್ಷನ್ ಸೆಟ್ ಆರ್ಕಿಟೆಕ್ಚರ್ (ISA) ಅನ್ನು ಬಳಸುತ್ತದೆ.
    * ಇದು ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ವ್ಯಾಪಕವಾಗಿ ಬಳಸಲಾಗುವ ಅಡಾ ಭಾಷೆಯಲ್ಲಿ ಪ್ರೋಗ್ರಾಮಿಂಗ್ ಅನ್ನು ಬೆಂಬಲಿಸುತ್ತದೆ.
    * ಕಂಪೈಲರ್, ಅಸೆಂಬ್ಲರ್, ಲಿಂಕರ್ ಮತ್ತು ಸಿಮ್ಯುಲೇಟರ್‌ನಂತಹ ಎಲ್ಲಾ ಪೋಷಕ ಸಾಫ್ಟ್‌ವೇರ್ ಪರಿಕರಗಳನ್ನು ಇಸ್ರೋ ಆಂತರಿಕವಾಗಿ ಅಭಿವೃದ್ಧಿಪಡಿಸಿದೆ.
    * ಉಪಗ್ರಹ ಉಡಾವಣೆ ಮತ್ತು ಬಾಹ್ಯಾಕಾಶ ಹಾರಾಟದ ಸಮಯದಲ್ಲಿ ಹೆಚ್ಚಿನ ಕಂಪನ, ತಾಪಮಾನವನ್ನು ನಿರ್ವಹಿಸಲು ಪರೀಕ್ಷಿಸಲಾಗಿದೆ. ಪ್ರೊಸೆಸರ್ -55ºC ನಿಂದ 125ºC ವರೆಗಿನ ತಾಪಮಾನದ ವ್ಯಾಪ್ತಿಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ.
    * ಮೈಕ್ರೊಪ್ರೊಸೆಸರ್ ಅನ್ನು SCL ನ 180nm CMOS ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಇದು ದೃಢವಾದ ಕಾರ್ಯಕ್ಷಮತೆ ಮತ್ತು ಏಕೀಕರಣವನ್ನು ಖಚಿತಪಡಿಸುತ್ತದೆ.

    ಬಾಹ್ಯಾಕಾಶ ಮಿಷನ್‌ಗಷ್ಟೇ ಸೀಮಿತವೇ?
    ವಿಕ್ರಮ್-32 ಅನ್ನು ಪ್ರಾಥಮಿಕವಾಗಿ ಉಪಗ್ರಹಗಳು ಮತ್ತು ರಾಕೆಟ್‌ಗಳಿಗಾಗಿ ನಿರ್ಮಿಸಲಾಗಿದ್ದರೂ, ಅದರ ದೃಢವಾದ ವಿನ್ಯಾಸವು ಇತರ ನಿರ್ಣಾಯಕ ಕ್ಷೇತ್ರಗಳಿಗೂ ಸೂಕ್ತವಾಗಿದೆ. ರಕ್ಷಣಾ ವ್ಯವಸ್ಥೆಗಳು, ಏರೋಸ್ಪೇಸ್ ತಂತ್ರಜ್ಞಾನಗಳು, ಸುಧಾರಿತ ಆಟೋಮೋಟಿವ್ ಪರಿಹಾರಗಳು ಮತ್ತು ನಿರ್ಣಾಯಕ ಇಂಧನ ಮೂಲಸೌಕರ್ಯದಂತಹ ಹೆಚ್ಚಿನ ವಿಶ್ವಾಸಾರ್ಹತೆಯ ಕ್ಷೇತ್ರಗಳಿಗೆ ಸೂಕ್ತವಾಗಿದೆ. ಬಾಹ್ಯಾಕಾಶದಲ್ಲಿ ಅದರ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಅಷ್ಟೇ ಅಲ್ಲದೇ, ಕಂಪ್ಯೂಟರ್‌ಗಳು, ರಾಡಾರ್ ವ್ಯವಸ್ಥೆಗಳು, ವಿದ್ಯುತ್ ವಾಹನಗಳು ಮತ್ತು ಇಂಧನ ಗ್ರಿಡ್ ನಿಯಂತ್ರಣಗಳಿಗೆ ಪ್ರಯೋಜನವನ್ನು ನೀಡುತ್ತದೆ. 2021 ರಲ್ಲಿ ಪ್ರಾರಂಭಿಸಲಾದ ಭಾರತ ಸೆಮಿಕಂಡಕ್ಟರ್ ಮಿಷನ್ ಮತ್ತು ವಿನ್ಯಾಸ-ಸಂಯೋಜಿತ ಪ್ರೋತ್ಸಾಹಕ (DLI) ಯೋಜನೆಯ ಅಡಿಯಲ್ಲಿ ವಿಕ್ರಮ್-32 ರ ಅಭಿವೃದ್ಧಿಯು ಒಂದು ಪ್ರಮುಖ ಸಾಧನೆಯಾಗಿದೆ. ಇದು ಆಮದು ಮಾಡಿಕೊಂಡ ಮೈಕ್ರೋಚಿಪ್‌ಗಳ ಮೇಲಿನ ಭಾರತದ ಅವಲಂಬನೆ ಕಡಿಮೆಗೊಳಿಸುತ್ತದೆ. ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಕಡೆಗೆ ಒಂದು ದೊಡ್ಡ ಹೆಜ್ಜೆಯಾಗಿದೆ.

    ವಿಕ್ರಮ್-32 vs ಇಂಟೆಲ್/ ARM ಚಿಪ್‌ಗಳು
    ದೈನಂದಿನ ಪರಿಸರದಲ್ಲಿ ವೇಗ, ಬಹು-ಕಾರ್ಯ ಮತ್ತು ವಿದ್ಯುತ್ ದಕ್ಷತೆಗಾಗಿ ಗ್ರಾಹಕ ಸಂಸ್ಕಾರಕಗಳನ್ನು ವಿನ್ಯಾಸಗೊಳಿಸಲಾಗಿದೆ. ಆದರೆ, ವಿಕ್ರಮ್-32 ಅನ್ನು ತೀವ್ರ ವಿಶ್ವಾಸಾರ್ಹತೆ ಮತ್ತು ಮಿಷನ್-ನಿರ್ಣಾಯಕ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ರಾಕೆಟ್ ಉಡಾವಣೆಗಳ ಸಮಯದಲ್ಲಿ ತೀವ್ರವಾದ ಕಂಪನಗಳು, ಬಾಹ್ಯಾಕಾಶದಲ್ಲಿ ತೀವ್ರ ತಾಪಮಾನ ಮತ್ತು ಕಾಸ್ಮಿಕ್ ವಿಕಿರಣವನ್ನು ತಡೆದುಕೊಳ್ಳಬಲ್ಲದು. ಮುಖ್ಯವಾಗಿ, ಚಿಪ್ ಸಂಪೂರ್ಣವಾಗಿ ಭಾರತದ ನಿಯಂತ್ರಣದಲ್ಲಿದೆ. ನಿರ್ಣಾಯಕ ರಾಷ್ಟ್ರೀಯ ಕಾರ್ಯಾಚರಣೆಗಳಲ್ಲಿ ಭದ್ರತೆ ಮತ್ತು ನಂಬಿಕೆಯನ್ನು ಖಾತ್ರಿಪಡಿಸುತ್ತದೆ.

    ಮಿಕ್ರಮ್‌ ಚಿಪ್‌ ಮೈಲುಗಲ್ಲು
    ಇಸ್ರೋ ಈಚೆಗೆ ನಡೆಸಿದ ಪಿಎಸ್‌ಎಲ್‌ವಿ-ಸಿ60 ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ವಿಕ್ರಮ್-32 ಸಾಧನಗಳ ಮೊದಲ ಬ್ಯಾಚ್ ಅನ್ನು ಬಳಕೆ ಮಾಡಲಾಗಿತ್ತು. ಅವು ಬಾಹ್ಯಾಕಾಶ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿವೆ. ಈ ಮೈಲಿಗಲ್ಲು ಚಿಪ್ ಅನ್ನು ಬಾಹ್ಯಾಕಾಶ ಕಾರ್ಯಾಚರಣೆಗೆ ಅರ್ಹ ಎಂದು ಗುರುತಿಸಿತು. ಭವಿಷ್ಯದ ಕಾರ್ಯಾಚರಣೆಗಳಿಗಾಗಿ ಇಸ್ರೋಗೆ ದೇಶೀಯವಾಗಿ ಉತ್ಪಾದಿಸಲಾದ ಮೈಕ್ರೊಪ್ರೊಸೆಸರ್ ಕೊಡುಗೆ ನೀಡಲಾಗಿದೆ.

    ಭವಿಷ್ಯದ ಸವಾಲುಗಳೇನು?
    ವಿಕ್ರಮ್-32 ಅನ್ನು 180-ನ್ಯಾನೋಮೀಟರ್ ಪ್ರೋಸೆಸ್‌ ಬಳಸಿ ನಿರ್ಮಿಸಲಾಗಿದೆ. ಆದರೆ, ಚಿಪ್‌ ತಯಾರಿಕೆಯ ಜಾಗತಿಕ ಪ್ರಮುಖ ಸಂಸ್ಥೆಗಳು, 3 ನ್ಯಾನೋಮೀಟರ್ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪ್ರೊಸೆಸರ್‌ಗಳನ್ನು ತಯಾರಿಸುತ್ತಿವೆ. ಈ ಹಂತಕ್ಕೆ ಬರಲು ಗಣನೀಯ ಪ್ರಮಾಣದ ಹೂಡಿಕೆ ಮತ್ತು ಸಂಶೋಧನೆಯ ಅಗತ್ಯವಿದೆ. ಭಾರತಕ್ಕೆ ನುರಿತ ಎಂಜಿನಿಯರ್‌ಗಳು, EDA (ಪರಿಶೋಧನಾ ದತ್ತಾಂಶ ವಿಶ್ಲೇಷಣೆ) ಪರಿಕರಗಳು ಮತ್ತು ನಿರ್ಣಾಯಕ ವಸ್ತುಗಳಿಗೆ ಪೂರೈಕೆ ವ್ಯವಸ್ಥೆ ಅಗತ್ಯವಿದೆ. ಅದಕ್ಕಾಗಿ ಸೆಮಿಕಂಡಕ್ಟರ್‌ ಪರಿಸರ ವ್ಯವಸ್ಥೆಯ ಅಗತ್ಯವಿದೆ. ಬಾಹ್ಯಾಕಾಶ ದರ್ಜೆಯ ಚಿಪ್‌ಗಳಿಂದ ಮಾಸ್-ಮಾರುಕಟ್ಟೆ ಗ್ರಾಹಕ ಪ್ರೊಸೆಸರ್‌ಗಳ ಹಂತಕ್ಕೆ ಬರುವುದು ಸವಾಲಿನದ್ದಾಗಿದೆ.

    ISRO ROCKET
    ಸಾಂದರ್ಭಿಕ ಚಿತ್ರ

    ಚಿಪ್‌ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವವರ‍್ಯಾರು?
    ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ತೈವಾನ್‌ ಮುಂಚೂಣಿಯಲ್ಲಿದೆ. ವಿಶ್ವದ ಅತಿದೊಡ್ಡ ಕಾಂಟ್ರಾಕ್ಟ್ ಚಿಪ್ ತಯಾರಕರಾದ TSMCಯಿಂದಾಗಿ ಹೈಟೆಕ್ ಚಿಪ್ ತಯಾರಿಕೆ ನಾಯಕನಾಗಿದೆ. ದಕ್ಷಿಣ ಕೊರಿಯಾ ಸ್ಯಾಮ್‌ಸಂಗ್‌ ಮೂಲಕ ಪ್ರಾಬಲ್ಯ ಹೊಂದಿದೆ. ಅಮೆರಿಕದ ಇನ್‌ಟೆಲ್‌, ಎನ್‌ವಿಡಿಯಾ ಕಂಪನಿಗಳ ಮೂಲಕ ಚಿಪ್‌ ತಯಾರಿಕೆಯಲ್ಲಿ ತನ್ನದೇ ಕೊಡುಗೆ ನೀಡುತ್ತಿದೆ. R&D ಸೌಲಭ್ಯಗಳನ್ನು ಹೊಂದಿರುವ ಇಸ್ರೇಲ್ ಹಾಗೂ ದೊಡ್ಡ ಉತ್ಪಾದನಾ ಸಾಮರ್ಥ್ಯ ಮತ್ತು ಅತ್ಯುತ್ತಮ ದೇಶೀಯ ಉದ್ಯಮವನ್ನು ಹೊಂದಿರುವ ಚೀನಾ ಕೂಡ ಚಿಪ್‌ ತಯಾರಿಕೆಯಲ್ಲಿ ಮುಂಚೂಣಿ ದೇಶಗಳ ಸಾಲಿನಲ್ಲಿವೆ. ಈ ಸಾಲಿಗೆ ಸೇರಲು ಭಾರತ ಡಿಜಿಟಲ್‌ ಕ್ರಾಂತಿಯ ಹೆಜ್ಜೆ ಇಟ್ಟಿದೆ.

    ಸೆಮಿಕಂಡಕ್ಟರ್‌ ಚಿಪ್‌ ಆಮದು ಏರಿಕೆ
    ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಸೆಮಿಕಂಡಕ್ಟರ್‌ ಚಿಪ್‌ ಆಮದಿನಲ್ಲಿ ಏರಿಕೆ ಕಂಡುಬಂದಿದೆ. 2021-22 ರಲ್ಲಿ ಭಾರತವು 1,789 ಕೋಟಿ ಚಿಪ್‌ಗಳನ್ನು ಆಮದು ಮಾಡಿಕೊಂಡಿದೆ. 2022-23ನೇ ಸಾಲಿನಲ್ಲಿ 1,464 ಕೋಟಿ ಹಾಗೂ 2023-24ನೇ ಸಾಲಿನಲ್ಲಿ 1,843 ಕೋಟಿ ಚಿಪ್‌ಗಳನ್ನು ಆಮದು ಮಾಡಿಕೊಂಡಿದೆ. ಆಮದು ಪ್ರಮಾಣ ಹೆಚ್ಚಾಗುತ್ತಿದೆ. ಜಾಗತಿಕ ಮಟ್ಟದ ನಿರ್ಬಂಧಗಳ ಸಮಯದಲ್ಲಿ ಆಮದಿಗೆ ಪೆಟ್ಟು ಬಿದ್ದರೆ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ಚಿಪ್‌ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಹೆಜ್ಜೆ ಇಟ್ಟಿದೆ.

  • ಭಾರತ & ಚೀನಾ ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ: ಕ್ಸಿ ಜಿನ್‌ಪಿಂಗ್‌

    ಭಾರತ & ಚೀನಾ ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ: ಕ್ಸಿ ಜಿನ್‌ಪಿಂಗ್‌

    ಬೀಜಿಂಗ್: ಭಾರತ ಮತ್ತು ಚೀನಾ (India-China) ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಆಶಯ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (PM Modi) ಅವರೊಂದಿಗಿನ ದ್ವಿಪಕ್ಷೀಯ ಸಭೆಯ ಆರಂಭಿಕ ಭಾಷಣದಲ್ಲಿ ಜಿನ್‌ಪಿಂಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೂರ್ವದಲ್ಲಿ ಎರಡೂ ದೇಶಗಳು ಪ್ರಾಚೀನ ನಾಗರಿಕತೆಗಳು ಎಂದು ಬಣ್ಣಿಸಿದ್ದಾರೆ. ಇಬ್ಬರೂ ನಾಯಕರು ಕೊನೆಯ ಬಾರಿಗೆ 2024 ರ ಅಕ್ಟೋಬರ್‌ನಲ್ಲಿ ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭೇಟಿಯಾಗಿದ್ದರು. ಇದನ್ನೂ ಓದಿ: ಪರಸ್ಪರ ನಂಬಿಕೆ, ಗೌರವ ಆಧಾರದಲ್ಲಿ ಭಾರತ-ಚೀನಾ ಸಂಬಂಧ ಮುಂದಕ್ಕೆ ಕೊಂಡೊಯ್ಯಲು ಬದ್ಧ: ಮೋದಿ

    ಭಾರತದ ಪ್ರಧಾನ ಮಂತ್ರಿಗಳೇ, ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ. SCO ಶೃಂಗಸಭೆಗಾಗಿ ನಾನು ನಿಮ್ಮನ್ನು ಚೀನಾಕ್ಕೆ ಸ್ವಾಗತಿಸುತ್ತೇನೆ. ಕಳೆದ ವರ್ಷ ನಾವು ಕಜಾನ್‌ನಲ್ಲಿ ಯಶಸ್ವಿ ಸಭೆ ನಡೆಸಿದ್ದೇವೆ. ನಾವು ವಿಶ್ವದ ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು. ಜಾಗತಿಕ ದಕ್ಷಿಣದ ಪ್ರಮುಖ ಸದಸ್ಯರೂ ಆಗಿದ್ದೇವೆ. ಉಭಯ ದೇಶಗಳ ಜನರ ಯೋಗಕ್ಷೇಮ ಸುಧಾರಿಸುವ, ಅಭಿವೃದ್ಧಿಶೀಲ ರಾಷ್ಟ್ರಗಳ ಒಗ್ಗಟ್ಟು, ಪುನರುಜ್ಜೀವನ ಉತ್ತೇಜಿಸುವ ಮತ್ತು ಮಾನವ ಸಮಾಜದ ಪ್ರಗತಿಯನ್ನು ಉತ್ತೇಜಿಸುವ ಐತಿಹಾಸಿಕ ಜವಾಬ್ದಾರಿಯನ್ನು ನಾವಿಬ್ಬರೂ ಹೊರುತ್ತೇವೆ. ಉತ್ತಮ ನೆರೆಹೊರೆಯ ಮತ್ತು ಸೌಹಾರ್ದಯುತ ಸಂಬಂಧಗಳನ್ನು ಹೊಂದಿರುವ ಸ್ನೇಹಿತರಾಗುವುದು, ಪರಸ್ಪರರ ಯಶಸ್ಸನ್ನು ಸಕ್ರಿಯಗೊಳಿಸುವ ಪಾಲುದಾರರಾಗುವುದು, ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಬರುವುದು ಎರಡೂ ದೇಶಗಳಿಗೆ ಸರಿಯಾದ ಆಯ್ಕೆಯಾಗಿದೆ ಎಂದು ತಿಳಿಸಿದ್ದಾರೆ.

    ಈ ವರ್ಷ ಚೀನಾ-ಭಾರತ ರಾಜತಾಂತ್ರಿಕ ಸಂಬಂಧಗಳ 75 ನೇ ವರ್ಷಾಚರಣೆಯಾಗಿದೆ ಎಂದು ಜಿನ್‌ಪಿಂಗ್‌ ಒತ್ತಿ ಹೇಳಿದ್ದಾರೆ. ಎರಡೂ ರಾಷ್ಟ್ರಗಳು ನಮ್ಮ ಸಂಬಂಧವನ್ನು ಕಾರ್ಯತಂತ್ರದ ಮತ್ತು ದೀರ್ಘಾವಧಿಯ ದೃಷ್ಟಿಕೋನದಿಂದ ನಿರ್ವಹಿಸಬೇಕಾಗಿದೆ. ಏಷ್ಯಾ ಮತ್ತು ಪ್ರಪಂಚದಾದ್ಯಂತ ಶಾಂತಿ-ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ನಾವು ನಮ್ಮ ಐತಿಹಾಸಿಕ ಜವಾಬ್ದಾರಿಗಳನ್ನು ಪೂರೈಸಬೇಕು ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: 7 ವರ್ಷಗಳ ನಂತರ ಚೀನಾಗೆ ಪ್ರಧಾನಿ ಮೋದಿ ಭೇಟಿ

    ಅಮೆರಿಕ ವಿಧಿಸಿರುವ ಸುಂಕಗಳು ಮತ್ತು ಚೀನಾದ ಅಸ್ಥಿರ ಸಂಬಂಧಗಳ ನಡುವೆಯೂ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ 50 ನಿಮಿಷಗಳಿಗೂ ಹೆಚ್ಚು ಕಾಲ ದ್ವಿಪಕ್ಷೀಯ ಸಭೆ ನಡೆಸಿದರು. ಇಂದಿನಿಂದ ಎರಡು ದಿನಗಳ ಕಾಲ ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಪಕ್ಕದಲ್ಲಿ ಈ ಸಭೆ ನಡೆಯಿತು. ಗಾಲ್ವಾನ್ ಕಣಿವೆ ಘರ್ಷಣೆಯ ನಂತರ ಏಳು ವರ್ಷಗಳ ಬಳಿಕ ಪ್ರಧಾನಿ ಮೋದಿ ಚೀನಾಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.

  • ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ

    ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ

    ಟೋಕಿಯೊ: ಎರಡು ದಿನಗಳ ಜಪಾನ್‌ (Japan) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ಹೈ-ಸ್ಪೀಡ್‌ ಬುಲೆಟ್‌ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಟೋಕಿಯೊದಿಂದ ಸೆಂಡೈಗೆ ಮೋದಿ (PM Modi) ಪ್ರಯಾಣಿಸಿದ್ದಾರೆ.

    ಸೆಂಡೈಗೆ ತೆರಳುವ ಮೊದಲು, ಪ್ರಧಾನಿ ನರೇಂದ್ರ ಮೋದಿ ಟೋಕಿಯೊದಲ್ಲಿ 16 ಜಪಾನಿನ ಪ್ರಾಂತ್ಯಗಳ ರಾಜ್ಯಪಾಲರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಅಡಿಯಲ್ಲಿ ರಾಜ್ಯ-ಪ್ರಾಂತ್ಯ ಸಹಕಾರವನ್ನು ಬಲಪಡಿಸಲು ಅವರು ಕರೆ ನೀಡಿದರು. ಇದನ್ನೂ ಓದಿ: ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಪ್ರಮುಖ ಪಾಲುದಾರ: ಮೋದಿ ಬಣ್ಣನೆ

    ಬುಲೆಟ್ ಟ್ರೈನ್ ಟ್ರೇನಿಂಗ್‌ನಲ್ಲಿರುವ ಭಾರತೀಯ ಮೂಲದ ಲೊಕೊ ಪೈಲಟ್‌ಗಳನ್ನು ಭೇಟಿಯಾಗಿ ಮೋದಿ ಮಾತುಕತೆ ನಡೆಸಿದರು. ಬುಲೆಟ್ ಟ್ರೈನ್ ಕೋಚ್‌ ತಯಾರಿಕಾ ಘಟಕ ಇರುವ ಟೋಕಿಯೊದ ಎಲೆಕ್ಟ್ರಾನ್ ಕಾರ್ಖಾನೆ ಮತ್ತು ಸೆಂಡೈನಲ್ಲಿರುವ ಟೊಹೊಕು ಶಿಂಕನ್ಸೆನ್ ಸ್ಥಾವರಕ್ಕೂ ಮೋದಿ ಭೇಟಿ ನೀಡಲಿದ್ದಾರೆ. ಬಳಿಕ ಚೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

    ಇದಕ್ಕೂ ಮೊದಲು ಟೋಕಿಯೊದಲ್ಲಿ, ಪ್ರಧಾನಿ ಮೋದಿ 16 ಜಪಾನಿನ ಪ್ರಾಂತ್ಯಗಳ ಗವರ್ನರ್‌ಗಳೊಂದಿಗೆ ಚರ್ಚೆ ನಡೆಸಿದರು. 15 ನೇ ವಾರ್ಷಿಕ ಭಾರತ-ಜಪಾನ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ದೀರ್ಘಕಾಲೀನ ನಾಗರಿಕ ಬಾಂಧವ್ಯದ ಮೇಲೆ ನಿರ್ಮಿಸಲಾದ ಭಾರತ-ಜಪಾನ್ ಸಂಬಂಧಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

  • ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಪ್ರಮುಖ ಪಾಲುದಾರ: ಮೋದಿ ಬಣ್ಣನೆ

    ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಪ್ರಮುಖ ಪಾಲುದಾರ: ಮೋದಿ ಬಣ್ಣನೆ

    – ವ್ಯಾಪಾರದಿಂದ ತಂತ್ರಜ್ಞಾನದ ವರೆಗೆ, ಭಾರತ-ಜಪಾನ್ ಏಷ್ಯನ್ ಶತಮಾನವನ್ನು ಮುನ್ನಡೆಸಲಿವೆ ಎಂದ ಪ್ರಧಾನಿ

    ಟೋಕಿಯೊ: ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ ಪ್ರಮುಖ ಪಾಲುದಾರ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಬಣ್ಣಿಸಿದ್ದಾರೆ.

    ಜಪಾನ್ (Japan) ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ-ಜಪಾನ್ ಸಂಬಂಧಗಳನ್ನು ಬಲಪಡಿಸಲು ಸಮಗ್ರ 5 ಅಂಶಗಳ ಮಾರ್ಗಸೂಚಿಯನ್ನು ವಿವರಿಸಿದ್ದಾರೆ.

    ಭಾರತದ ಬೆಳವಣಿಗೆಯ ಪ್ರಯಾಣದಲ್ಲಿ ಜಪಾನ್ ಪ್ರಮುಖ ಪಾಲುದಾರ. ಉತ್ಪಾದನೆ, ತಂತ್ರಜ್ಞಾನ, ಹಸಿರು ಇಂಧನ, ಮೂಲಸೌಕರ್ಯ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಉಭಯ ದೇಶಗಳ ಪಾಲುದಾರಿಕೆ ಬಗ್ಗೆ ಮೋದಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

    ಜಪಾನ್ ತಂತ್ರಜ್ಞಾನದಲ್ಲಿ ಶಕ್ತಿ ಕೇಂದ್ರವಾಗಿದ್ದರೆ, ಭಾರತ ಪ್ರತಿಭೆಯ ಶಕ್ತಿ ಕೇಂದ್ರವಾಗಿದೆ. ತಂತ್ರಜ್ಞಾನ ಮತ್ತು ಪ್ರತಿಭೆ ಮಾತ್ರ ಅಭಿವೃದ್ಧಿಗೆ ಕಾರಣವಾಗಬಹುದು. ಭಾರತ ಮತ್ತು ಜಪಾನ್ ನಡುವೆ ಸಹಕಾರದ ಅಪಾರ ಸಾಧ್ಯತೆಗಳಿವೆ. ವ್ಯಾಪಾರ ಜಗತ್ತಿನ ದೈತ್ಯರೊಂದಿಗೆ ಪ್ರಾರಂಭವಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

    ಮೆಟ್ರೋದಿಂದ ಉತ್ಪಾದನೆಯ ವರೆಗೆ, ಸೆಮಿಕಂಡಕ್ಟರ್‌ನಿಂದ ಸ್ಟಾರ್ಟ್‌ಅಪ್‌ಗಳ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ನಮ್ಮ ಪಾಲುದಾರಿಕೆ ಪರಸ್ಪರ ನಂಬಿಕೆಯ ಸಂಕೇತವಾಗಿದೆ. ಜಪಾನಿನ ಕಂಪನಿಗಳು ಭಾರತದಲ್ಲಿ 40 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಹೂಡಿಕೆ ಮಾಡಿವೆ. ಕಳೆದ 2 ವರ್ಷಗಳಲ್ಲಿ ಮಾತ್ರ 30 ಶತಕೋಟಿ ಡಾಲರ್‌ಗಳ ಖಾಸಗಿ ಹೂಡಿಕೆ ನಡೆದಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಬಂದ ರಹಸ್ಯ ಪತ್ರದಿಂದ ಭಾರತ, ಚೀನಾ ಸಂಬಂಧ ಸುಧಾರಣೆ!

    ಭಾರತವು ರಾಜಕೀಯ ಸ್ಥಿರತೆ, ಆರ್ಥಿಕ ಸ್ಥಿರತೆ, ನೀತಿಗಳಲ್ಲಿ ಪಾರದರ್ಶಕತೆ ಮತ್ತು ಭವಿಷ್ಯವಾಣಿಯನ್ನು ಹೊಂದಿದೆ. ಇಂದು ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಭಾರತವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ರಕ್ಷಣಾ ಮತ್ತು ಬಾಹ್ಯಾಕಾಶದಂತಹ ಸೂಕ್ಷ್ಮ ಕ್ಷೇತ್ರಗಳನ್ನು ಈಗಾಗಲೇ ಖಾಸಗಿ ವಲಯಕ್ಕೆ ಮುಕ್ತಗೊಳಿಸಲಾಗಿದೆ. ಈಗ ನಾವು ಪರಮಾಣು ಇಂಧನ ವಲಯವನ್ನೂ ತೆರೆಯುತ್ತಿದ್ದೇವೆ. ಈ ಸುಧಾರಣೆಗಳ ಹಿಂದೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಸಂಕಲ್ಪವಿದೆ. ಆಟೋ ವಲಯದಲ್ಲಿ ನಮ್ಮ ಪಾಲುದಾರಿಕೆ ಅತ್ಯಂತ ಯಶಸ್ವಿಯಾಗಿದೆ. ಬ್ಯಾಟರಿಗಳು, ರೊಬೊಟಿಕ್ಸ್, ಸೆಮಿ-ಕಂಡಕ್ಟರ್‌ಗಳು, ಹಡಗು ನಿರ್ಮಾಣ ಮತ್ತು ಪರಮಾಣು ಶಕ್ತಿಯಲ್ಲಿ ನಾವು ಒಟ್ಟಾಗಿ ಅದೇ ಮ್ಯಾಜಿಕ್ ಅನ್ನು ಪುನರಾವರ್ತಿಸಬಹುದು. ಭಾರತದಲ್ಲಿ ಹೂಡಿಕೆ ಮಾಡುವಂತೆ ಕರೆ ನೀಡಿದ್ದಾರೆ.

  • ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

    ಜಪಾನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

    ಟೋಕಿಯೊ: ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಪಾನ್‌ಗೆ 2 ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಶುಕ್ರವಾರ ಟೋಕಿಯೊಗೆ ಬಂದಿಳಿದಿದ್ದಾರೆ.

    ಇಂದು ಮತ್ತು ನಾಳೆ ಜಪಾನ್‌ಗೆ ಎರಡು ದಿನಗಳ ಅಧಿಕೃತ ಭೇಟಿಗಾಗಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ವಾಸ್ತವ್ಯದ ಸಮಯದಲ್ಲಿ 15 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಪಾನಿನ ಪ್ರಧಾನಿ ಶಿಗೇರು ಇಶಿಬಾ ಅವರನ್ನು ಸಹ ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ

    ಇಂದು ಬೆಳಗ್ಗೆ 10:30 ರಿಂದ 11:10 ರ ವರೆಗೆ ಮೋದಿ ಅವರು ಜಪಾನ್ ಮತ್ತು ಭಾರತೀಯ ಕೈಗಾರಿಕೆಗಳ ನಾಯಕರೊಂದಿಗೆ ವ್ಯಾಪಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11:30 ರಿಂದ ಮಧ್ಯಾಹ್ನ 1:10 ರ ವರೆಗೆ ಜಪಾನಿನ ಗಣ್ಯರನ್ನು ಭೇಟಿ ಮಾಡಲಿದ್ದಾರೆ. ನಂತರ ಮಧ್ಯಾಹ್ನ 2:30 ರಿಂದ ಸಂಜೆ 5:15 ರ ವರೆಗೆ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

    ಇದು ಎರಡೂ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ. ಎರಡು ದಿನಗಳ ಭೇಟಿಯ ಸಮಯದಲ್ಲಿ ಅವರು ಮುಂದಿನ ಪೀಳಿಗೆಯ E10 ಶಿಂಕನ್ಸೆನ್ ಬುಲೆಟ್ ರೈಲುಗಳನ್ನು ಭಾರತದಲ್ಲಿ ತಯಾರಿಸಲು ಪಾಲುದಾರಿಕೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಜಪಾನ್ ಬಳಿಕ ಚೀನಾಗೆ ಮೋದಿ ತೆರಳಲಿದ್ದಾರೆ. ಇದನ್ನೂ ಓದಿ: ಇಂದೇ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎ‌ 324 ಸ್ಥಾನ ಗೆಲ್ಲುವ ಸಾಧ್ಯತೆ

    ಪ್ರಧಾನಿಯವರ ಪ್ರವಾಸದ ಮೊದಲ ದಿನದಂದು ನಡೆಯಲಿರುವ ಮಾತುಕತೆಯಲ್ಲಿ, ಭಾರತದಲ್ಲಿ ಜಪಾನ್ ತನ್ನ ಹೂಡಿಕೆ ಗುರಿಯನ್ನು ದ್ವಿಗುಣಗೊಳಿಸುವ ಪ್ರತಿಜ್ಞೆ ಮಾಡುವ ನಿರೀಕ್ಷೆಯಿದೆ. ವ್ಯಾಪಾರ, ಹೂಡಿಕೆ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಎರಡೂ ಕಡೆಯವರು ಹಲವಾರು ಒಪ್ಪಂದಗಳನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಟೋಕಿಯೊದಲ್ಲಿ ಜಪಾನಿನ ಕೈಗಾರಿಕೋದ್ಯಮಿಗಳು ಮತ್ತು ರಾಜಕೀಯ ನಾಯಕರನ್ನು ಭೇಟಿ ಮಾಡಲಿದ್ದಾರೆ.

    ಪ್ರವಾಸದ ಎರಡನೇ ದಿನದಂದು, ಪ್ರಧಾನ ಮಂತ್ರಿ ಮೋದಿ ಮತ್ತು ಇಶಿಬಾ ಅವರು ಸೆಂಡೈ ನಗರಕ್ಕೆ ಹೈಸ್ಪೀಡ್ ರೈಲಿನಲ್ಲಿ ಪ್ರಯಾಣಿಸಿ ಸೆಮಿಕಂಡಕ್ಟರ್ ಸೌಲಭ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಭೇಟಿಯ ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಆ.31 ಮತ್ತು ಸೆ.1 ರಂದು ಶಾಂಘೈ ಸಹಕಾರ ಸಂಘಟನೆಯ (SCO) ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾದ ಟಿಯಾಂಜಿನ್ ನಗರಕ್ಕೆ ಪ್ರಯಾಣಿಸಲಿದ್ದಾರೆ.

    ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಮತ್ತು ಸುಂಕಗಳ ನೀತಿಗಳಿಂದಾಗಿ ಭಾರತ-ಯುಎಸ್ ಸಂಬಂಧಗಳಲ್ಲಿ ಬಿಕ್ಕಟ್ಟಿನ ನಡುವೆಯೇ ಪ್ರಧಾನಿ ಮೋದಿ ಅವರು ಜಪಾನ್‌ಗೆ ಭೇಟಿ ನೀಡಿದ್ದಾರೆ.

  • ಟ್ರಂಪ್‌ ಸೂಚಿಸಿದ 5 ಗಂಟೆಗಳೊಳಗೆ ಪಾಕ್‌ ವಿರುದ್ಧ ಮೋದಿ ಯುದ್ಧ ನಿಲ್ಲಿಸಿದ್ರು: ರಾಹುಲ್‌ ಗಾಂಧಿ ಕಿಡಿ

    ಟ್ರಂಪ್‌ ಸೂಚಿಸಿದ 5 ಗಂಟೆಗಳೊಳಗೆ ಪಾಕ್‌ ವಿರುದ್ಧ ಮೋದಿ ಯುದ್ಧ ನಿಲ್ಲಿಸಿದ್ರು: ರಾಹುಲ್‌ ಗಾಂಧಿ ಕಿಡಿ

    ನವದೆಹಲಿ: ಡೊನಾಲ್ಡ್‌ ಟ್ರಂಪ್‌ ಸೂಚಿಸಿದ 5 ಗಂಟೆಗಳ ಒಳಗಾಗಿ ಪಾಕ್‌ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಧಾನಿ ಮೋದಿ ನಿಲ್ಲಿಸಿದರು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಟೀಕಿಸಿದ್ದಾರೆ.

    ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ರಂಪ್ ಅವರ 24 ಗಂಟೆಗಳ ಅಂತಿಮ ಗಡುವು ನೀಡಿದಾಗ, ಐದು ಗಂಟೆಗಳಲ್ಲಿ ಪ್ರಧಾನಿ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಿದ್ದಾರೆಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರವಾಹದಲ್ಲಿ ಸಿಲುಕಿದ್ದ 22 ಸಿಆರ್‌ಪಿಎಫ್‌ ಸಿಬ್ಬಂದಿ ರಕ್ಷಿಸಿದ ಸೇನಾ ಹೆಲಿಕಾಪ್ಟರ್‌

    ರಾಹುಲ್ ಗಾಂಧಿಯವರ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ನಾಯಕಿ ಮತ್ತು ಮುಂಬೈ ಬಿಜೆಪಿಯ ಸಹ-ಸಂಚಾಲಕಿ ಪಲ್ಲವಿ ಸಿಟಿ, ಮೋದಿಜಿ ಟ್ರಂಪ್ ಅವರ ಮಾತು ಕೇಳಿ ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಿದ್ದರೆ, ಟ್ರಂಪ್ ಭಾರತದ ಮೇಲೆ ಸುಂಕ ವಿಧಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ರಾಹುಲ್ ಗಾಂಧಿ ಸ್ಥಳೀಯ ಗೂಂಡಾಗಳಂತೆ ಮಾತನಾಡುತ್ತಾರೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಕುಟುಕಿದ್ದಾರೆ.

    ಶ್ವೇತಭವನದಲ್ಲಿ ನಡೆದ ಕ್ಯಾಬಿನೆಟ್ ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿಕೊಂಡರು. ಮೋದಿ ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದ್ದರು. ಇದನ್ನೂ ಓದಿ: ಒಂದಲ್ಲ, 4 ಬಾರಿ ಟ್ರಂಪ್‌ ಕರೆ ಮಾಡಿದ್ರೂ ಉತ್ತರಿಸದ ಮೋದಿ!

    ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಳೆಗಾಲದ ಅಧಿವೇಶನದಲ್ಲಿ, ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದೆ. ಯುದ್ಧ ನಿಲ್ಲಿಸಿದ್ದು ನಾನೇ ಎಂಬ ಟ್ರಂಪ್ ಅವರ ನಿರಂತರ ಹೇಳಿಕೆಗಳನ್ನು ಈಗಾಗಲೇ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

  • ಮೋದಿ, ಪುಟಿನ್‌ರನ್ನು ಖುದ್ದಾಗಿ ಸ್ವಾಗತಿಸಲಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

    ಮೋದಿ, ಪುಟಿನ್‌ರನ್ನು ಖುದ್ದಾಗಿ ಸ್ವಾಗತಿಸಲಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

    – ಎಸ್‌ಸಿಒ ಸಮ್ಮೇಳನಕ್ಕೆ ಆಗಮಿಸಲಿದ್ದಾರೆ ಮೋದಿ, ಪುಟಿನ್

    ಬೀಜಿಂಗ್: ಮುಂದಿನ ವಾರ ಚೀನಾದಲ್ಲಿ (China) ನಡೆಯಲಿರುವ ಪ್ರಾದೇಶಿಕ ಭದ್ರತಾ ವೇದಿಕೆಯಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) 20 ಕ್ಕೂ ಹೆಚ್ಚು ವಿಶ್ವ ನಾಯಕರನ್ನು ಒಟ್ಟುಗೂಡಿಸಲಿದ್ದಾರೆ. ಪ್ರಧಾನಿ ಮೋದಿ (PM Modi), ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಖುದ್ದಾಗಿ ಸ್ವಾಗತಿಸಲಿದ್ದಾರೆ.

    ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಜಾಗತಿಕ ದಕ್ಷಿಣ ರಾಷ್ಟ್ರಗಳ ಒಗ್ಗಟ್ಟಿನ ಪ್ರದರ್ಶನವನ್ನು ನೀಡಲಿದ್ದಾರೆ. ನಿರ್ಬಂಧಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರಷ್ಯಾ ಮತ್ತೊಂದು ರಾಜತಾಂತ್ರಿಕ ದಂಗೆ ನಡೆಸಲು ಜಿನ್‌ಪಿಂಗ್ ಸಹಾಯ ಮಾಡುತ್ತಾರೆ.‌ ಇದನ್ನೂ ಓದಿ: ಆ.29ರಿಂದ ಸೆ.1ರವರೆಗೆ ಮೋದಿ ಜಪಾನ್, ಚೀನಾ ಪ್ರವಾಸ

    ಆ.31 ರಿಂದ ಸೆ.1 ರವರೆಗೆ ಉತ್ತರ ಬಂದರು ನಗರ ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಜೊತೆಗೆ, ಮಧ್ಯ ಏಷ್ಯಾ, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ನಾಯಕರನ್ನು ಆಹ್ವಾನಿಸಲಾಗಿದೆ.

    2020 ರಲ್ಲಿ ಮಾರಕ ಗಡಿ ಘರ್ಷಣೆಯಿಂದ ಉಂಟಾದ ಉದ್ವಿಗ್ನತೆಯನ್ನು ಶಮನಗೊಳಿಸಲು ಎರಡೂ ನೆರೆಹೊರೆಯವರು ಕೆಲಸ ಮಾಡುತ್ತಿರುವಾಗ, ಏಳು ವರ್ಷಗಳ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ 50%ರಷ್ಟು ಸುಂಕ – ಅಮೆರಿಕದಿಂದ ಅಧಿಸೂಚನೆ

    ಕಳೆದ ವರ್ಷ ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಕೊನೆಯ ಬಾರಿಗೆ ಕ್ಸಿ ಮತ್ತು ಪುಟಿನ್ ಅವರೊಂದಿಗೆ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದರು. ಕಳೆದ ವಾರ ನವದೆಹಲಿಯಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಅಧಿಕಾರಿಗಳು, ಚೀನಾ ಮತ್ತು ಭಾರತದೊಂದಿಗೆ ತ್ರಿಪಕ್ಷೀಯ ಮಾತುಕತೆಗಳು ಶೀಘ್ರದಲ್ಲೇ ನಡೆಯಲಿವೆ ಎಂದು ಮಾಸ್ಕೋ ಆಶಿಸುತ್ತಿದೆ ಎಂದು ಹೇಳಿದ್ದರು.

  • ಜೈಲಿನಲ್ಲಿ ಕೂತು ಯಾರೂ ಆದೇಶ ನೀಡುವುದು ಬೇಡ: ಮೋದಿ

    ಜೈಲಿನಲ್ಲಿ ಕೂತು ಯಾರೂ ಆದೇಶ ನೀಡುವುದು ಬೇಡ: ಮೋದಿ

    – ಕ್ರಿಮಿನಲ್ ನೇತಾ ಬಿಲ್ ಕುರಿತು ಬಿಹಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಪ್ರಧಾನಿ

    ಪಾಟ್ನಾ: ಜೈಲಿನಲ್ಲಿ ಕೂತು ಯಾರು ಕೂಡ ಆದೇಶ ನೀಡುವುದು ಬೇಡ ಎಂದು ಪ್ರಧಾನಿ ಮೋದಿ (PM Modi) ಹೇಳಿದ್ದಾರೆ. ಪ್ರಧಾನಿ, ಸಿಎಂ, ಸಚಿವರನ್ನು ಪದಚ್ಯುತಿಗೊಳಿಸುವ ಮಸೂದೆ ಬಗ್ಗೆ ಬಹಿರಂಗವಾಗಿ ಮೋದಿ ಮಾತನಾಡಿದ್ದಾರೆ.

    ಬಿಹಾರದಲ್ಲಿ ಪಿಎಂಎವೈ-ಗ್ರಾಮೀಣ ಅಡಿಯಲ್ಲಿ 12,000 ಗ್ರಾಮೀಣ ಫಲಾನುಭವಿಗಳು ಮತ್ತು ಪಿಎಂಎವೈ-ನಗರ ಅಡಿಯಲ್ಲಿ 4,260 ಫಲಾನುಭವಿಗಳ ಗೃಹ ಪ್ರವೇಶ ಸಮಾರಂಭದ ಭಾಗವಾಗಿ ಪ್ರಧಾನಿ ಮೋದಿ ಕೆಲವು ಫಲಾನುಭವಿಗಳಿಗೆ ಕೀಲಿಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಕ್ರಿಮಿನಲ್ ಕೇಸಲ್ಲಿ ಜನಪ್ರತಿನಿಧಿಗಳ ಬಂಧನವಾದ್ರೆ ಹುದ್ದೆಯಿಂದ ವಜಾ – ಮಸೂದೆ ಮಂಡನೆ, ಲೋಕಸಭೆಯಲ್ಲಿ ಕೋಲಾಹಲ

    ಈ ವೇಳೆ ಮಾತನಾಡಿದ ಪ್ರಧಾನಿ, ಕ್ರಿಮಿನಲ್ ಹಿನ್ನೆಲೆಯ ಜನಪ್ರತಿನಿಧಿಗಳನ್ನು ವಜಾಗೊಳಿಸುವ ಗುರಿಯನ್ನು ಮಸೂದೆಯು ಹೊಂದಿದೆ. ಪ್ರಮುಖ ಹುದ್ದೆಗಳನ್ನು ಹೊಂದಿರುವ ಜನರು ಜೈಲಿನಿಂದ ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ.

    ಬಂಧನಕ್ಕೆ ಒಳಗಾಗಿ 30 ದಿನ ಜೈಲಿನಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ಪದಚ್ಯುತಿಗೊಳಿಸಲು ಅನುವು ಮಾಡಿಕೊಡುವ ಸಂವಿಧಾನ ತಿದ್ದುಪಡಿಯ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇದನ್ನೂ ಓದಿ: ಕ್ರಿಮಿನಲ್ ಕೇಸ್‌ನಲ್ಲಿ ಪ್ರಧಾನಿ, ಸಿಎಂ ವಜಾಕ್ಕೆ ಮಸೂದೆ ಮಂಡನೆಗೆ ಕೇಂದ್ರ ಸಿದ್ಧತೆ

    ಲೋಕಸಭೆಯಲ್ಲಿ ಮಸೂದೆ ಮಂಡನೆ ವೇಳೆ ಕೋಲಾಹಲ ಸೃಷ್ಟಿಯಾಗಿತ್ತು. ಸರ್ಕಾರದ ಪ್ರಸ್ತಾವಕ್ಕೆ ‘ಇಂಡಿಯಾ’ ಕೂಟದ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಗದ್ದಲ ಎಬ್ಬಿಸಿದ್ದರು.

  • ಪ್ರಧಾನಿ ಮೋದಿ ಭೇಟಿಯಾದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ

    ಪ್ರಧಾನಿ ಮೋದಿ ಭೇಟಿಯಾದ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ

    ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಕಡಿಮೆಯಾಗುತ್ತಿದ್ದಂತೆಯೇ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ.

    ಲೋಕ ಕಲ್ಯಾಣ ಮಾರ್ಗ್‌ನಲ್ಲಿರುವ ಪಿಎಂ ನಿವಾಸದಲ್ಲಿ ಭೇಟಿ ಬುಧವಾರ ವಾಂಗ್‌ ಯಿ ಭೇಟಿಯಾದರು. ವಿದೇಶಾಂಗ ಸಚಿವ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ಅವರ ಬಳಿಕ ಮೋದಿ ಭೇಟಿ ಮಾಡಿದ್ದಾರೆ.

    ಗಾಲ್ವಾನ್ ಸಂಘರ್ಷದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ಎರಡು ದೇಶಗಳ ನಡುವೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ. ಅಮೆರಿಕಾದ ಟ್ಯಾರಿಫ್ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

    ಇದೇ ವೇಳೆ, ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನವನ್ನು ವಾಂಗ್ ಯಿ, ಮೋದಿಗೆ ಹಸ್ತಾಂತರಿಸಿದ್ದಾರೆ.

    2020 ರ ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ನಂತರ ಮಿಲಿಟರಿ ಮತ್ತು ರಾಜತಾಂತ್ರಿಕ ಚರ್ಚೆಗಳನ್ನು ಮುಂದುವರಿಸುವ ಬಗ್ಗೆ ಚರ್ಚೆಗಳ ಮೇಲೆ ಈ ಸಭೆ ಕೇಂದ್ರೀಕರಿಸಿತು. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಮೋದಿ ಒತ್ತಿ ಹೇಳಿದ್ದಾರೆ. ಗಡಿ ಪ್ರಶ್ನೆಯ ನ್ಯಾಯಯುತ, ಸಮಂಜಸ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರಕ್ಕೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ರಷ್ಯಾದ ತೈಲ ಖರೀದಿಗಾಗಿ ಭಾರತದ ಮೇಲೆ ಟ್ರಂಪ್ ಭಾರಿ ಸುಂಕ ವಿಧಿಸಿದ ಮಧ್ಯೆ ಈ ಸಭೆ ನಡೆದಿದೆ. ಮುಂಬರುವ SCO ಶೃಂಗಸಭೆಗೆ ಪೂರ್ವಭಾವಿಯಾಗಿ ಮೂರು ದಿನಗಳ ಭೇಟಿಯ ಭಾಗವಾಗಿ ವಾಂಗ್ ಯಿ ಭಾರತಕ್ಕೆ ಬಂದಿದ್ದಾರೆ.

  • ಟ್ರಂಪ್ ಜೊತೆ ಅಲಾಸ್ಕ ಸಭೆ ಬಳಿಕ ಮೋದಿಗೆ ಫೋನ್ ಮಾಡಿದ ಪುಟಿನ್

    ಟ್ರಂಪ್ ಜೊತೆ ಅಲಾಸ್ಕ ಸಭೆ ಬಳಿಕ ಮೋದಿಗೆ ಫೋನ್ ಮಾಡಿದ ಪುಟಿನ್

    – ಯುದ್ಧದ ವಿಚಾರದಲ್ಲಿ ಶಾಂತಿಯುತ ನಿರ್ಣಯಕ್ಕೆ ಭಾರತದ ಸಲಹೆ

    ನವದೆಹಲಿ: ಉಕ್ರೇನ್‌ ಮೇಲಿನ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ಬಗ್ಗೆ ಚರ್ಚಿಸಲು ಅಲಾಸ್ಕದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿಯಾದ ಬಳಿಕ, ಪ್ರಧಾನಿ ಮೋದಿಗೆ (PM Modi) ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಫೋನ್‌ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.

    2022 ರ ಫೆಬ್ರವರಿಯಿಂದ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತದ ನಿಲುವನ್ನು ಪ್ರಧಾನಿ ಒತ್ತಿ ಹೇಳಿದರು. ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಅವರು ಕರೆ ನೀಡಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. ಈ ನಿಟ್ಟಿನಲ್ಲಿ ಭಾರತ ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಪುಟಿನ್‌ಗೆ ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

    ಮೋದಿ ಮತ್ತು ಪುಟಿನ್ (Vladimir Putin) ಅವರು ದ್ವಿಪಕ್ಷೀಯ ಸಹಕಾರದ ವಿಷಯಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ನಾಯಕರು ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದಾರೆ.

    ಮಾತುಕತೆ ಬಳಿಕ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ನನಗೆ ದೂರವಾಣಿ ಕರೆ ಮಾಡಿದ್ದಕ್ಕಾಗಿ ಮತ್ತು ಅಲಾಸ್ಕದಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಇತ್ತೀಚಿನ ಭೇಟಿಯ ಕುರಿತು ಒಳನೋಟಗಳನ್ನು ಹಂಚಿಕೊಂಡಿದ್ದಕ್ಕಾಗಿ ನನ್ನ ಸ್ನೇಹಿತ, ರಷ್ಯಾ ಅಧ್ಯಕ್ಷ ಪುಟಿನ್‌ಗೆ ಧನ್ಯವಾದಗಳು. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತ ನಿರಂತರವಾಗಿ ಕರೆ ನೀಡಿದೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.

    ಟ್ರಂಪ್ (Donald Trump) ಅವರನ್ನು ಭೇಟಿಯಾದ ನಂತರ, ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲಿನ ಯುದ್ಧವನ್ನು ನ್ಯಾಯಯುತ ಆಧಾರದ ಮೇಲೆ ಕೊನೆಗೊಳಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ. ಚರ್ಚೆಯು ಸಮಯೋಚಿತ ಮತ್ತು ಉಪಯುಕ್ತವಾಗಿತ್ತು ಎಂದು ಪುಟಿನ್‌ ತಿಳಿಸಿದ್ದಾರೆ.

    ನಾವು ಬಹಳ ಸಮಯದಿಂದ ಈ ರೀತಿಯ ನೇರ ಮಾತುಕತೆಗಳನ್ನು ನಡೆಸಿರಲಿಲ್ಲ. ನಮ್ಮ ನಿಲುವನ್ನು ಶಾಂತವಾಗಿ ಮತ್ತು ವಿವರವಾಗಿ ಪುನರುಚ್ಚರಿಸಲು ನಮಗೆ ಅವಕಾಶ ಸಿಕ್ಕಿತು. ಸಂಭಾಷಣೆ ಸ್ಪಷ್ಟವಾಗಿ, ಅರ್ಥಪೂರ್ಣವಾಗಿತ್ತು ಎಂದು ಪುಟಿನ್‌ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

    ಈ ಬಗ್ಗೆ ಪ್ರತಿಕ್ರಿಯಿಸಿದ್ದ ಟ್ರಂಪ್‌, ಚರ್ಚೆಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ನಿರ್ದಿಷ್ಟ ವಿವರಗಳನ್ನು ನೀಡಲು ನಿರಾಕರಿಸಿದ್ದರು. ನಾವು ಇನ್ನೂ ಆ ಹಂತಕ್ಕೆ ತಲುಪಿಲ್ಲ. ಆದರೆ, ನಾವು ಪ್ರಗತಿ ಸಾಧಿಸಿದ್ದೇವೆ. ಒಪ್ಪಂದವಾಗುವ ವರೆಗೆ ಯಾವುದೇ ಒಪ್ಪಂದವಿಲ್ಲ ಎಂದು ತಿಳಿಸಿದ್ದಾರೆ.