Tag: ಪಿಎಂ ಕೇರ್ಸ್ ಫಂಡ್

  • ರತನ್‌ ಟಾಟಾ ಈಗ PM CARES Fund ಟ್ರಸ್ಟಿ- ಸುಧಾಮೂರ್ತಿಗೆ ಸಲಹಾ ಮಂಡಳಿಯಲ್ಲಿ ಸ್ಥಾನ

    ರತನ್‌ ಟಾಟಾ ಈಗ PM CARES Fund ಟ್ರಸ್ಟಿ- ಸುಧಾಮೂರ್ತಿಗೆ ಸಲಹಾ ಮಂಡಳಿಯಲ್ಲಿ ಸ್ಥಾನ

    ನವದೆಹಲಿ: ಕೈಗಾರಿಕೋದ್ಯಮಿ ರತನ್ ಟಾಟಾ(Ratan Tata), ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕೆಟಿ ಥಾಮಸ್(KT Thomas) ಮತ್ತು ಲೋಕಸಭೆಯ ಮಾಜಿ ಉಪ ಸ್ಪೀಕರ್ ಕರಿಯಾ ಮುಂಡಾ(Kariya Munda) ಅವರನ್ನು ಪಿಎಂ-ಕೇರ್ಸ್ ಫಂಡ್(PM CARES Fund ) ಟ್ರಸ್ಟಿಗಳಾಗಿ ನಾಮನಿರ್ದೇಶನ ಮಾಡಲಾಗಿದೆ.

    ಮಂಗಳವಾರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟಿಗಳ ಮಂಡಳಿಯ ಸಭೆಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

    ಭಾರತದ ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ರಾಜೀವ್ ಮೆಹ್ರಿಷಿ, ಇನ್ಫೋಸಿಸ್(Infosys) ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ(Sudha Murthy) ಮತ್ತು ಇಂಡಿಕಾರ್ಪ್ಸ್ ಮತ್ತು ಪಿರಮಲ್ ಫೌಂಡೇಶನ್‌ನ ಮಾಜಿ ಸಿಇಒ ಆನಂದ್ ಶಾ ಅವರನ್ನು ಪಿಎಂ ಕೇರ್ಸ್ ನಿಧಿಯ ಸಲಹಾ ಮಂಡಳಿಗೆ ನಾಮನಿರ್ದೇಶನ ಮಾಡಲಾಗಿದೆ. ಇದನ್ನೂ ಓದಿ: ಸೀರಿಯಲ್‌ನಲ್ಲಿ ಕೆಲಸ ಸಿಗದೇ ಕಾಲ್ ಸೆಂಟರ್ ಉದ್ಯೋಗಕ್ಕೆ ಸೇರಿದ ನಟಿ ಏಕ್ತಾ

    ಮಂಗಳವಾರ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರ್ಮನ್ ಅವರೊಂದಿಗೆ ಹೊಸದಾಗಿ ನೇಮಕಗೊಂಡ ಸದಸ್ಯರು ಭಾಗವಹಿಸಿದ್ದರು. ಪಿಎಂ ಕೇರ್ಸ್ ಫಂಡ್‌ನ ಅವಿಭಾಜ್ಯ ಅಂಗವಾಗಲು ಟ್ರಸ್ಟಿಗಳನ್ನು ಪ್ರಧಾನಿ ಸ್ವಾಗತಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆ ತಿಳಿಸಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು, ಹೊಸ ಟ್ರಸ್ಟಿಗಳು ಮತ್ತು ಸಲಹೆಗಾರರ ​​ಭಾಗವಹಿಸುವಿಕೆಯಿಂದ ಪಿಎಂ ಕೇರ್ಸ್ ಫಂಡ್‌ನ ಕಾರ್ಯಚಟುವಟಿಕೆಗಳಿಗೆ ಸಹಾಯವಾಗಲಿದೆ. ಸಾರ್ವಜನಿಕ ಜೀವನದ ಅವರ ಅಪಾರ ಅನುಭವವು ನಿಧಿಯನ್ನು ವಿವಿಧ ಸಾರ್ವಜನಿಕ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡಲಿದೆ ಎಂದು ತಿಳಿಸಿದ್ದಾರೆ.

    ಕೋವಿಡ್‌ ಸಮಯದಲ್ಲಿ ನಿಧಿಯು ನಿರ್ವಹಿಸಿದ ಪಾತ್ರವನ್ನು ಟ್ರಸ್ಟಿಗಳು ಶ್ಲಾಘಿಸಿದರು. ಪಿಎಂ ಕೇರ್ಸ್ ನಿಧಿಗೆ ಪೂರ್ಣ ಹೃದಯದಿಂದ ಕೊಡುಗೆ ನೀಡಿದ್ದಕ್ಕಾಗಿ ದೇಶದ ಜನರನ್ನು ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ

    1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ

    ಮುಂಬೈ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರ ಜಾವೆಲಿನ್ ಒಂದನ್ನು ಇ-ಹರಾಜಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 1.5 ಕೋಟಿ ರೂ. ನೀಡಿ ಖರೀದಿಸಿದೆ.

    ಇ-ಹರಾಜು 2021ರಲ್ಲಿ ಆಗಿತ್ತು. ಈ ವೇಳೆ 1.5 ಕೋಟಿ ರೂ. ನೀಡಿ ಖರೀದಿಸಿರುವ ಬಗ್ಗೆ ಇದೀಗ ಮಾಹಿತಿ ಹೊರಬಿದ್ದಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಳಸಿದ್ದ ಜಾವೆಲಿನ್ ಒಂದನ್ನು ನೀರಜ್ ಚೋಪ್ರಾ ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆಯಾಗಿ ನೀಡಿದ್ದರು. ಈ ಉಡುಗೊರೆಯನ್ನು ನಮಾಮಿ ಗಂಗಾ ಯೋಜನೆಗೆ ಹಣ ಸಂಗ್ರಹಣೆಗಾಗಿ ಹರಾಜಿಗಿಡಲಾಗಿತ್ತು. ಇ-ಹರಾಜಿನಲ್ಲಿ ಬಿಸಿಸಿಐ ಜಾವೆಲಿನ್‍ನ್ನು ಖರೀದಿಸಿದೆ. ಇದನ್ನೂ ಓದಿ: ಕಸ ಹಾಕಿದ್ದಕ್ಕೆ ದಂಡ ವಿಧಿಸಲು ಹೋದ ಮಾರ್ಷಲ್‌ಗಳ ಮೇಲೆ ರಿಕ್ಷಾ ಹತ್ತಿಸಿದ್ರು

    2014ರಲ್ಲಿ ಪ್ರಾರಂಭಗೊಂಡ ನಮಾಮಿ ಗಂಗಾ ಯೋಜನೆಯ ಮೂಲಕ ಗಂಗಾ ನದಿಯ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ಸಾಕಷ್ಟು ಹಣ ನಮಾಮಿ ಯೋಜನೆಗೆ ಹರಿದುಬಂದಿದೆ. ಬಿಸಿಸಿಐ ಇ-ಹರಾಜಿನಲ್ಲಿ ಜಾವೆಲಿನ್ ಸಹಿತ ಇತರ ವಸ್ತುಗಳನ್ನು ಖರೀದಿಸಿದೆ. 1,348 ವಿವಿಧ ಕ್ರೀಡಾ ಪರಿಕರಗಳನ್ನು ಹರಾಜಿಗಿಡಲಾಗಿತ್ತು. ಒಟ್ಟು 8,600 ಬಿಡ್ ಸಲ್ಲಿಕೆಯಾಗಿತ್ತು. ಇದನ್ನೂ ಓದಿ: 5 ಲಕ್ಷ ರೂ. ಚೆಕ್‌ನೊಂದಿಗೆ ಬಸವಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ ಸಾಯಿನಾಥ್‌

    ಈ ಹಿಂದೆ ಕೊರೊನಾ ಸಮಯದಲ್ಲಿ  ಪಿಎಂ ಕೇರ್ಸ್ ಫಂಡ್‌ಗೆ ಬಿಸಿಸಿಐ 51 ಕೋಟಿ ರೂ. ದೇಣಿಗೆ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‍ನಿಂದ ಸುರಕ್ಷಿತವಾಗಿ ಮಗಳು ಭಾರತಕ್ಕೆ – ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್‍ಗೆ ನೀಡಿದ ತಂದೆ

    ಉಕ್ರೇನ್‍ನಿಂದ ಸುರಕ್ಷಿತವಾಗಿ ಮಗಳು ಭಾರತಕ್ಕೆ – ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್‍ಗೆ ನೀಡಿದ ತಂದೆ

    ಶಿಮ್ಲಾ: ರಷ್ಯಾ, ಉಕ್ರೇನ್ ನಡುವಿನ ಯುದ್ಧದಲ್ಲಿ ಸಿಲುಕಿದ್ದ ಮಗಳನ್ನು ಅಪಾಯದಿಂದ ಪಾರು ಮಾಡಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಕಾರಣಕ್ಕೆ ತಂದೆಯೊಬ್ಬರು ಪಿಎಂ ಕೇರ್ಸ್ ಫಂಡ್‍ಗೆ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

    ಯುದ್ಧದ ನಡುವೆ ಬಂಕರ್‌ನಲ್ಲಿ ಉಳಿದುಕೊಂಡಿದ್ದ 32 ಜನ ಹಿಮಾಚಲಪ್ರದೇಶದ ವಿದ್ಯಾರ್ಥಿಗಳ ತಂಡ ಭಾನುವಾರ ಸುರಕ್ಷಿತವಾಗಿ ದೆಹಲಿ ಬಂದು ತಲುಪಿತ್ತು. ಈ ತಂಡದಲ್ಲಿ ಅಂಕಿತಾ ಠಾಕೂರ್ ಕೂಡ ಒಬ್ಬರಾಗಿದ್ದರು. ಅಂಕಿತಾ ಠಾಕೂರ್ ಹಿಮಾಚಲಪ್ರದೇಶದ ಹಮೀರ್‍ಪುರ ಜಿಲ್ಲೆಯ ಚುನ್ಹಾಲ್ ಗ್ರಾಮದವರು. ಉನ್ನತ ವ್ಯಾಸಂಗಕ್ಕಾಗಿ ಉಕ್ರೇನ್‍ಗೆ ತೆರಳಿದ್ದರು. ಈ ಮಧ್ಯೆ ಉಕ್ರೇನ್‍ನಲ್ಲಿ ಯುದ್ಧ ಆರಂಭವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ

    ಅಂಕಿತಾ ಠಾಕೂರ್ ತಂದೆ ಜಿಪಿ ಸಿಂಗ್ ಆರ್ಯುವೇದ ವೈದ್ಯರು. ತಾಯಿ ಅನಿತಾ ದೇವಿ ಗೃಹಿಣಿ. ಮಗಳು ಅಂಕಿತಾ ಠಾಕೂರ್‌ರನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‍ಗೆ ಕಳುಹಿಸಿದ್ದರು. ಈ ನಡುವೆ ಏಕಾಏಕಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಘೋಷಿಸಿತ್ತು. ಈ ವೇಳೆ ಮಗಳ ಸ್ಥಿತಿಯನ್ನು ಕಂಡು ಮರುಗಿದ್ದ ಪೋಷಕರು ಮಗಳನ್ನು ಹೇಗಾದರೂ ಮಾಡಿ ಕರೆ ತನ್ನಿ ಎಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಖಾರ್ಕಿವ್‌ನಲ್ಲಿ ಸಿಲುಕಿದ್ದ ಎಲ್ಲಾ ಭಾರತೀಯರ ರಕ್ಷಣೆ – ಎಂಇಎ

    ಕಡೆಗೂ ಯುದ್ಧದ ನಡುವೆ ಕೆಂದ್ರ ಸರ್ಕಾರದ ಯಶಸ್ವಿ ಕಾರ್ಯಚರಣೆ ಆಪರೇಷನ್ ಗಂಗಾದಡಿ ಅಂಕಿತಾ ಠಾಕೂರ್‌ರನ್ನು ಯಶಸ್ವಿಯಾಗಿ ತಾಯ್ನಾಡಿಗೆ ಮರಳಿದರು. ಇದರಿಂದ ಆಕೆಯ ಪೋಷಕರು ತುಂಬಾ ಸಂತೋಷಗೊಂಡಿದ್ದಾರೆ. ಮಗಳ ಮುಖ ಮತ್ತೆ ನೋಡಳು ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದ ಜಿಪಿ ಸಿಂಗ್ ಮತ್ತು ಅನಿತಾ ದೇವಿಗೆ ಮಗಳು ಮತ್ತೆ ಮನೆಗೆ ಬಂದಾಗ ಸಂತಸವಾಗಿದೆ. ಈ ಸಂತಸದ ನಡುವೆ ಅಂಕಿತಾ ಠಾಕೂರ್‍ರನ್ನು ಸುರಕ್ಷಿತವಾಗಿ ಕರೆತಂದ ಕಾರಣಕ್ಕಾಗಿ ಅದರ ಖರ್ಚು ಎಂಬಂತೆ, ಜಿಪಿ ಸಿಂಗ್ ಕೇಂದ್ರ ಸರ್ಕಾರದ ಪಿಎಂ ಕೇರ್ಸ್ ಫಂಡ್‍ಗೆ 21 ಸಾವಿರ ರೂ. ಮತ್ತು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿಗೆ 11 ಸಾವಿರ ರೂ. ದೇಣಿಗೆಯಾಗಿ ನೀಡಿದ್ದಾರೆ.

    ಉಕ್ರೇನ್‍ನಿಂದ ದೆಹಲಿವರೆಗೆ ಕೇಂದ್ರ ಸರ್ಕಾರ ಅಂಕಿತಾ ಠಾಕೂರ್‌ರನ್ನು ಕರೆತಂದರೆ, ದೆಹಲಿಯಿಂದ ಹಿಮಾಚಲಪ್ರದೇಶಕ್ಕೆ ರಾಜ್ಯ ಸರ್ಕಾರ ಕರೆ ತಂದಿತ್ತು. ಈ ಖರ್ಚನ್ನು ಇದೀಗ ಜಿಪಿ ಸಿಂಗ್ ನೀಡಿ ಔದಾರ್ಯ ಮೆರೆದಿದ್ದಾರೆ. ಇದನ್ನೂ ಓದಿ: ಜೀವದ ಮೇಲೆ ಅಸೆ ಬಿಟ್ಟು, ಒಂದು ವಾರ ನಡೆದುಕೊಂಡು ಬಂದು ಉಕ್ರೇನ್ ದಾಟಿದೆ: ಸೀನ್ಯ

    ಹಿಮಾಚಲ ಪ್ರದೇಶದ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಶಿಕ್ಷಣ ಪಡೆಯುತ್ತಿದ್ದರು ಎಂಬ ಮಾಹಿತಿ ಸರ್ಕಾರ ನೀಡಿದೆ. ಅಲ್ಲದೆ ಬಜೆಟ್ ಅಧಿವೇಶನದಲ್ಲಿ ಸಿಎಂ ಜೈ ರಾಮ್ ಠಾಕೂರ್ ಉಕ್ರೇನ್‍ನಲ್ಲಿ ಸಿಲುಕಿರುವ ಹಿಮಾಚಲ ಪ್ರದೇಶದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಚರಣೆ ಬಗ್ಗೆ ವಿದೇಶಾಂಗ ಸಚಿವಾಲಯದ ಜೊತೆ ಮಾತನಾಡಿದ್ದರು. ಈಗಾಗಲೇ ಕೆಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ರಾಜ್ಯಕ್ಕೆ ಆಗಮಿಸಿದ್ದು, ಇನ್ನಷ್ಟು ವಿದ್ಯಾರ್ಥಿಗಳು ಬರಬೇಕಾಗಿದೆ.

    ಉಕ್ರೇನ್‍ಗೆ ವಿದ್ಯಾರ್ಥಿಗಳು ಸ್ವತಂ ಖರ್ಚಿನಲ್ಲಿ ಹೋಗಿದ್ದಾರೆ. ಹೀಗಾಗಿ ಅವರನ್ನು ಭಾರತ ಸರ್ಕಾರ ಮಾನವೀಯತೆ ದೃಷ್ಟಿಯಿಂದ ಉಚಿತವಾಗಿ ಕರೆ ತಂದರೂ ವಿಮಾನ ಪ್ರಯಾಣದ ವೆಚ್ಚವನ್ನು ಅವರು ನೀಡಬೇಕು. ಜನರ ತೆರಿಗೆ ದುಡ್ಡಿನಿಂದ ಅವರು ವಿದೇಶದಿಂದ ಬರುವುದು ಸರಿಯಲ್ಲ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡಯುತ್ತಿದೆ. ಈ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಗಳ ವಿಮಾನ ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್‌ಗೆ ಜಿಪಿ ಸಿಂಗ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

  • ಪಿಎಂ ಕೇರ್ಸ್ ಫಂಡ್‍ಗೆ ವಾರಸುದಾರರು ಯಾರು?: ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನೆ

    ಪಿಎಂ ಕೇರ್ಸ್ ಫಂಡ್‍ಗೆ ವಾರಸುದಾರರು ಯಾರು?: ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನೆ

    ಹುಬ್ಬಳ್ಳಿ: ಪಿಎಂ ಕೇರ್ಸ್ ಫಂಡ್ ಸರ್ಕಾರದ ನಿಧಿಯಲ್ಲಿ ಇಲ್ಲವೆಂದು ಕೇಂದ್ರ ಸರ್ಕಾರ ದೆಹಲಿ ಕೋರ್ಟ್‍ಗೆ ಅಫಿಡೆವಿಟ್ ನೀಡಿದೆ. ಹಾಗಾದರೆ ಈ ನಿಧಿಗೆ ನಿಜವಾದ ವಾರಸುದಾರರು ಯಾರು? ಯಾರ ಉದ್ಧಾರಕ್ಕಾಗಿ ದೇಣಿಗೆ ರೂಪದಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಪ್ರಶ್ನಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊರೊನಾ ಪ್ರಥಮ ಅಲೆಯಲ್ಲಿ ಕೇಂದ್ರ ರಾಷ್ಟ್ರೀಯ ವಿಪತ್ತು ನಿಧಿಗೆ ಪರ್ಯಾಯವಾಗಿ ಪಿಎಂ ಕೇರ್ಸ್ ಫಂಡ್ ಸ್ಥಾಪಿಸಿ ಕೊಟ್ಯಂತರ ರೂಪಾಯಿ ಸಂಗ್ರಹಿಸಲಾಗಿದೆ. ಈ ಹಣಕ್ಕೆ ಉತ್ತರದಾಯಿತ್ವ ಇರಬೇಕಲ್ಲವೆ? ಕೊರೊನಾದಂಥ ಸಂಕಷ್ಟ ಸಂದರ್ಭದಲ್ಲೂ ಭಾವನಾತ್ಮಕ ಭಾಷಣದಿಂದ ಜನರಿಂದ ಪಿಎಂ ಕೇರ್ಸ್ ಮೂಲಕ ಹಣ ಲೂಟಿ ಮಾಡಲಾಗಿದೆ. ಇದೀಗ ಕೇಂದ್ರದ ಅಫಿಡೆವಿಟ್‍ನಿಂದ ಪಿಎಂ ಕೇರ್ಸ್ ಫಂಡ್‍ಗೆ ಅಪ್ಪ-ಅಮ್ಮನೇ ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಿಎಂ ಕೇರ್ಸ್‍ಗೆ 2.25 ಲಕ್ಷ, ಒಟ್ಟು 103 ಕೋಟಿ ದಾನ ನೀಡಿದ್ದಾರೆ ಪ್ರಧಾನಿ ಮೋದಿ

    ಪ್ರಧಾನಿಯವರ ಕರೆಗೆ ಓಗೊಟ್ಟು ಭಾರತೀಯರು ಪಿಎಂ ಕೇರ್ಸ್‍ಗೆ ತಮ್ಮ ದುಡಿಮೆಯಲ್ಲಿ ಒಂದಿಷ್ಟು ಹಣ ನೀಡಿದ್ದಾರೆ. ದೇಶದ ಜನ ಸಂಕಷ್ಟಕ್ಕಾಗಿ ಸಂಗ್ರಹಿಸಿರುವ ನಿಧಿಯನ್ನು ಕೇಂದ್ರ ಸರ್ಕಾರದ ನಿಧಿ ಅಲ್ಲ ಎಂದು ಅಫಿಡೆವಿಟ್ ನೀಡಿದೆ. ಇದು ಸರ್ಕಾರದ ಸ್ವತ್ತು ಆಗಲ್ಲ ಎನ್ನುವುದಾದರೆ ಪ್ರಧಾನ ಮಂತ್ರಿ ಹೆಸರಲ್ಲಿ ಸ್ಥಾಪಿಸುವ ಉದ್ದೇಶವೇನಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರಲ್ಲಿ ಸ್ಥಾಪಿತವಾದ ಪಿಎಂ ಕೇರ್ಸ್ ಸರ್ಕಾರದ ನಿಧಿಯಲ್ಲಿ ಸಂಗ್ರಹವಾದ ಹಣ ಭಾರತದ ಏಕೀಕೃತ ನಿಧಿಗೆ ಹೋಗಲ್ಲ ಎಂಬ ಕೇಂದ್ರದ ವಾದ ಸರಿಯಲ್ಲ, ಪ್ರಧಾನ ಮಂತ್ರಿಯ ಸ್ಥಾನಕ್ಕೆ ಅದರದ್ದೇ ಆದ ಘನತೆ-ಗೌರವವಿದೆ. ಆದರೆ ಪ್ರಧಾನಿ ಸ್ಥಾನದಲ್ಲಿ ಕುಳಿತವರಿಂದಲೇ ಆ ಸ್ಥಾನದ ಘನತೆಗೆ ಧಕ್ಕೆಯಾದರೆ, ಅದು ಬೇಲಿಯೇ ಎದ್ದು ಹೊಲ ಮೇಯ್ದಂತಲ್ಲವೆ ಎಂದು ಪ್ರಸಾದ್ ಅಬ್ಬಯ್ಯ ಕೇಂದ್ರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತಾಂತರವೇ ಮಾಡಲ್ಲ ಅನ್ನೋ ಬಿಷಪ್‍ಗಳು ಯಾಕೆ ಸಿಎಂ ಬಳಿ ಓಡಿ ಬಂದಿದ್ದಾರೆ: ಪ್ರತಾಪ್ ಸಿಂಹ ಪ್ರಶ್ನೆ

  • ತನ್ನ ಪ್ರತಿ ಸೆಂಚುರಿಗೆ ಲಕ್ಷ ರೂ. ಸೇರಿಸಿ ದೇಣಿಗೆ ಕೊಟ್ಟ ಗವಾಸ್ಕರ್

    ತನ್ನ ಪ್ರತಿ ಸೆಂಚುರಿಗೆ ಲಕ್ಷ ರೂ. ಸೇರಿಸಿ ದೇಣಿಗೆ ಕೊಟ್ಟ ಗವಾಸ್ಕರ್

    ಮುಂಬೈ: ಟೀಂ ಇಂಡಿಯಾ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ 59 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

    ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಎಂ.ಎಸ್.ಧೋನಿ ಸೇರಿದಂತೆ ಅನೇಕ ಕ್ರಿಕೆಟಿಗರು, ಸ್ಟಾರ್ ಸಿನಿಮಾ ನಟರು ರೌಂಡ್ ಫಿಗರ್ ಮೊತ್ತವನ್ನು ಪಿಎಂ-ಕೇರ್ಸ್ ಫಂಡ್‍ಗೆ ದೇಣಿಗೆ ನೀಡಿದ್ದಾರೆ. ಆದರೆ ಸುನಿಲ್ ಗವಾಸ್ಕರ್ ಅವರು ಮಾತ್ರ ಏಕೆ 59 ಲಕ್ಷ ರೂ.ಗಳನ್ನ ನೀಡಿದ್ದರು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಗವಾಸ್ಕರ್ ಏಕೆ 59 ಲಕ್ಷ ರೂ.ಗಳನ್ನು ನೀಡಿದ್ದಾರೆ ಎಂದು ಅವರ ಪುತ್ರ ರೋಹನ್ ಗವಾಸ್ಕರ್ ರಿವೀಲ್ ಮಾಡಿದ್ದಾರೆ.

    ಸುನಿಲ್ ಗವಾಸ್ಕರ್ ನೀಡಿರುವ 59 ಲಕ್ಷ ರೂ. ದೇಣಿಗೆಯಲ್ಲಿ 35 ಲಕ್ಷ ರೂ.ಗಳನ್ನು ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ಹಾಗೂ ಉಳಿದ 24 ಲಕ್ಷ ರೂ.ಗಳನ್ನು ಪ್ರಧಾನಿಗಳ ನಿಧಿಗೆ ನೀಡಿದ್ದಾರೆ. ಈ ದೇಣಿಗೆ ಹಿಂದಿರುವ ಕಥೆಯನ್ನು ರಿವೀಲ್ ಮಾಡಿರುವ ರೋಹನ್ ಅವರು, ಭಾರತದ ಪರ 1971ರಿಂದ 1987ರವರೆಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದ ಗವಾಸ್ಕರ್ 35 ಶತಕ ಸಿಡಿಸಿದ್ದರು. ಅಲ್ಲದೇ ಮುಂಬೈ ಪರ ಆಡಿದ್ದ ಪಂದ್ಯಗಳಲ್ಲಿ 24 ಶತಕಗಳನ್ನು ಗವಾಸ್ಕರ್ ಸಿಡಿಸಿದ್ದರು. ಪರಿಣಾಮ ಈ ಶತಕಗಳ ಅನ್ವಯ ಗವಾಸ್ಕರ್ ದೇಣಿಗೆ ನೀಡಿದ್ದಾರೆ ಎಂದು ವಿವರಿಸಿದ್ದಾರೆ.

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ 3 ಕೋಟಿ ರೂ., ರೋಹಿತ್ ಶರ್ಮಾ 80 ಲಕ್ಷ ರೂ., ರೈನಾ 52 ಲಕ್ಷ ರೂ. ಸಚಿನ್ 50 ಲಕ್ಷ ರೂ., ರಹಾನೆ 10 ಲಕ್ಷ ರೂ.ಗಳನ್ನು ದೇಣಿಗೆ ನೀಡಿದ್ದಾರೆ. ಇತ್ತ ಚೇತೇಶ್ವರ ಪೂಜಾರ ಕೂಡ ದೇಣಿಗೆ ನೀಡಿದ್ದು, ಆದರೆ ಎಷ್ಟು ಮೊತ್ತವನ್ನು ನೀಡಿದ್ದಾರೆ ಎಂದು ಮಾತ್ರ ತಿಳಿಸಿಲ್ಲ.

    ಭಾರತದ ಪರ 124 ಟೆಸ್ಟ್ ಪಂದ್ಯಗಳನ್ನು ಆಡಿರುವ ಗವಾಸ್ಕರ್ 34 ಶತಕ ಸಿಡಿಸಿದ್ದಾರೆ. ಈ ವೇಳೆಗೆ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಗವಾಸ್ಕರ್ ನಿರ್ಮಿಸಿದ್ದರು. ಬರೋಬ್ಬರಿ 29 ವರ್ಷಗಳ ಬಳಿಕ ಸಚಿನ್ 2005 ರಲ್ಲಿ ಈ ದಾಖಲೆಯನ್ನು ಬ್ರೇಕ್ ಮಾಡಿದ್ದರು. ಉಳಿದಂತೆ ಗವಾಸ್ಕರ್ ಆಡಿರುವ 108 ಏಕದಿನ ಪಂದ್ಯಗಳಲ್ಲಿ 1 ಶತಕ ಗಳಿಸಿದ್ದಾರೆ.

  • ಮೂರು ದಿನದಲ್ಲಿ ಪಿಎಂ ಕೇರ್ಸ್ ನಿಧಿಗೆ 7,314 ಕೋಟಿ ರೂ. ಜಮೆ

    ಮೂರು ದಿನದಲ್ಲಿ ಪಿಎಂ ಕೇರ್ಸ್ ನಿಧಿಗೆ 7,314 ಕೋಟಿ ರೂ. ಜಮೆ

    ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಮಾರ್ಚ್ ಕೊನೆಯಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ (ಪಿಎಂ ಕೇರ್ಸ್ ಫಂಡ್)ಗೆ ಕೇವಲ ಮೂರು ದಿನಗಳಲ್ಲಿ 7,314 ಕೋಟಿ ರೂ. ದೇಣಿಗೆ ಜಮೆಯಾಗಿದೆ.

    ಕೋವಿಡ್-19 ಭೀತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಮಾರ್ಚ್ 28ರಂದು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಯನ್ನು ರಚಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಪಿಎಂ ಕೇರ್ಸ್ ಗೆ ಉದಾರವಾಗಿ ದೇಣಿಗೆ ನೀಡಬೇಕೆಂದು ಜನತೆಗೆ ಮನವಿ ಮಾಡಿಕೊಂಡಿದ್ದರು.

    ಪ್ರಧಾನಿ ಮೋದಿ ಅವರ ಮನವಿಯ ನಂತರ, ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ಕ್ರಿಕೆಟ್ ಆಟಗಾರರು, ಉದ್ಯಮಿಗಳು ಸೇರಿದಂತೆ ಹಲವಾರು ಗಣ್ಯರು ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ. ಟಾಟಾ ಸನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಗ್ರೂಪ್‍ನಂತಹ ಕಾರ್ಪೋರೇಟ್ ಸಂಸ್ಥೆಗಳು ಸಹ ತುರ್ತು ನಿಧಿಗೆ ತಮ್ಮ ಪಾಲನ್ನು ನೀಡಿವೆ.

    ಸಿಎಂ ಕೇರ್ಸ್ ನಿಧಿಗೆ ಸಾಮಾನ್ಯ ನಾಗರಿಕರು, ಸೆಲೆಬ್ರಿಟಿಗಳು ಮತ್ತು ಉದ್ಯಮಗಳಿಂದ ಮೂರು ದಿನಗಳಲ್ಲಿ 7,300 ಕೋಟಿ ರೂ. ಹರಿದು ಬಂದಿದೆ. ಈ ನಿಧಿಯಲ್ಲಿ ಕಾರ್ಪೊರೇಟ್ ಸಂಸ್ಥೆಗಳಾದ ಟಾಟಾ ಗ್ರೂಪ್ 1,500 ಕೋಟಿ ರೂ., ರಿಲಯನ್ಸ್ ಇಂಡಸ್ಟ್ರೀಸ್ 500 ಕೋಟಿ ರೂ., ಒಎನ್‍ಜಿಸಿ 300 ಕೋಟಿ ರೂ., ಸರ್ಕಾರಿ ಸಂಸ್ಥೆಗಳಾದ ಭಾರತೀಯ ರೈಲ್ವೆ 151 ಕೋಟಿ ರೂ. ಮತ್ತು ಲಾರ್ಸೆನ್ ಮತ್ತು ಟೂಬ್ರೊ 150 ಕೋಟಿ ರೂ. ದೇಣಿಗೆ ಸೇರಿದೆ.

    ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಗೌತಮ್ ಗಂಭೀರ್, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ಪ್ರಿಯಾಂಕಾ ಚೋಪ್ರಾ, ನಿಕ್ ಜೊನಾಸ್, ಪವನ್ ಕಲ್ಯಾಣ್ ಮತ್ತು ಸೋನಮ್ ಕಪೂರ್ ಸೇರಿದಂತೆ ಖ್ಯಾತನಾಮರು ದೇಣಿಗೆ ನೀಡಿದ್ದಾರೆ. ಇವರಲ್ಲದೆ ಕೇಂದ್ರ ಸಚಿವರು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಎಲ್ಲರೂ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ.

    ದೇಶದಲ್ಲಿ ಈವರೆಗೆ 1,900ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂತಗುಲಿದ್ದು, 53 ಜನರು ಸಾವನ್ನಪ್ಪಿದ್ದಾರೆ. ವಿಶ್ವಾದ್ಯಂತ 8.50 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಸುಮಾರು 42 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

  • ಅಕ್ಷಯ್ ಬಳಿಕ ಅನುಷ್ಕಾ-ವಿರಾಟ್ ದಂಪತಿಯಿಂದ ಆರ್ಥಿಕ ನೆರವು

    ಅಕ್ಷಯ್ ಬಳಿಕ ಅನುಷ್ಕಾ-ವಿರಾಟ್ ದಂಪತಿಯಿಂದ ಆರ್ಥಿಕ ನೆರವು

    ನವದೆಹಲಿ: ಮಹಾಮಾರಿ ಕೊರೊನಾ ತಡೆಯಲು ಹಲವರು ಸಹಾಯ ಹಸ್ತ ಚಾಚುತ್ತಿದ್ದು, ಬಾಲಿವುಡ್ ನಟ, ನಟಿಯರು ದೊಡ್ಡ ಮಟ್ಟದಲ್ಲಿ ನೆರವು ನೀಡುತ್ತಿದ್ದಾರೆ. ನಟ ಅಕ್ಷಯ್ ಕುಮಾರ್ ಬಳಿಕ ಇದೀಗ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ- ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಣ ಸಹಾಯ ಮಾಡಿದ್ದಾರೆ. ಇತ್ತ ಸಲ್ಮಾನ್ ಖಾನ್ ಸಹ ಸಿನಿಮಾ ಕೂಲಿ ಕಾರ್ಮಿಕರಿಗೆ ನೆರವಾಗಿದ್ದಾರೆ.

    ಈ ಕುರಿತು ಇಬ್ಬರೂ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ವಿರಾಟ್ ಹಾಗೂ ನಾನು ಪಿಎಂ-ಕೇರ್ಸ್ ಫಂಡ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯ ಮಾಡಿದ್ದೇವೆ. ಹಲವು ಜನರು ಬಳಲುತ್ತಿರುವುದನ್ನು ನೋಡಿ ಹೃದಯ ಬಡಿತವೇ ನಿಂತಂತಾಗುತ್ತಿದೆ. ಹೀಗಾಗಿ ನಮ್ಮ ಈ ಕೊಡುಗೆ ಪರಿಹಾರ ಕೆಲಸಕ್ಕೆ ನೆರವಾಗಲಿದೆ ಎಂದು ನಾವು ಭಾವಿಸಿದ್ದೇವೆ. ನಮ್ಮ ಪ್ರೀತಿಯ ಜನರ ನೋವು ನಿವಾರಿಸಲು ಸಹಾಯವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹ್ಯಾಷ್‍ಟ್ಯಾಗ್‍ನೊಂದಿಗೆ ಇಂಡಿಯಾಫೈಟ್ಸ್ ಕೊರೊನಾ ಎಂದು ಪೋಸ್ಟ್ ನಲ್ಲಿ ಹಾಕಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma) on

    ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ಕಾ- ವಿರಾಟ್ ದಂಪತಿ ಆ್ಯಕ್ಟಿವ್ ಆಗಿದ್ದು, ಈ ವರೆಗೆ ತಮ್ಮ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದರು. ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಮನವಿ ಮಾಡುತ್ತಿದ್ದರು. ಇದೀಗ ಧನ ಸಹಾಯವನ್ನೂ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೇವಲ ಹಣ ನೀಡಿದ್ದೇವೆ ಎಂದು ಮಾತ್ರ ತಿಳಿಸಿದ್ದು, ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿಲ್ಲ.

    ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ತಮ್ಮ ಉಳಿತಾಯದ 25 ಕೋಟಿ ರೂ.ಗಳನ್ನು ಪಿಎಂ ಕೇರ್ಸ್ ಫಂಡ್‍ಗೆ ನೀಡಿದ್ದರು. ಅಲ್ಲದೆ ಸಲ್ಮಾನ್ ಖಾನ್ ಸಹ 25 ಸಾವಿರ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಇದೀಗ ವಿರುಷ್ಕಾ ದಂಪತಿ ಹಣ ನೀಡಿದ್ದಾರೆ. ಹಲವು ಕ್ರಿಕೆಟ್ ಆಟಗಾರರು ಸಹಾಯ ಹಸ್ತ ಚಾಚಿದ್ದು, ಸಚಿನ್ ತೆಂಡೂಲ್ಕರ್ 50 ಲಕ್ಷ ರೂ. ಸುರೇಶ್ ರೈನಾ 52 ಲಕ್ಷ ರೂ. ನೀಡಿದ್ದಾರೆ. ಅಲ್ಲದೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧೂ, ಒಲಿಂಪಿಕ್ ಕ್ರೀಡಾಪಟು ಹಿಮಾ ದಾಸ್, ಕುಸ್ತಿ ಪಟು ಭಜರಂಗ್ ಪುನಿಯಾ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆರ್ಥಿಕ ನೆರವು ನೀಡಿದ್ದಾರೆ. ಮಾತ್ರವಲ್ಲದೆ ಬಿಸಿಸಿಐ ಸಹ 51 ಕೋಟಿ ರೂ. ನೀಡಿದೆ.

    ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್‍ನ 25 ಸಾವಿರ ಕಾರ್ಮಿಕರಿಗೆ ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಫೌಂಡೇಶನ್ ನೇರವಾಗಿ ಹಣ ಒದಗಿಸಲಿದೆ. ಈಗಾಗಲೇ ದಿನಗೂಲಿ ಕಾರ್ಮಿಕರ ಹೆಸರು ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಸಲ್ಮಾನ್ ಖಾನ್ ಸಂಸ್ಥೆ ಕೇಳಿದ್ದು, ಶೀಘ್ರದಲ್ಲೇ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಆಗಲಿದೆ ಎಂದು ಎಫ್‍ಡಬ್ಲ್ಯುಐಸಿಇ ಅಧ್ಯಕ್ಷ ಬಿ.ಎನ್.ತಿವಾರಿ ಸ್ಪಷ್ಟಪಡಿಸಿದ್ದಾರೆ.

    ಎಫ್‍ಡಬ್ಲ್ಯುಐಸಿಇ ನಲ್ಲಿ ಒಟ್ಟು 5 ಲಕ್ಷ ಕಾರ್ಮಿಕರಿದ್ದು, ಇದರಲ್ಲಿ 25 ಸಾವಿರ ಕಾರ್ಮಿಕರಿಗೆ ಆರ್ಥಿಕ ನೆರವು ಅಗತ್ಯವಾಗಿದೆ. ಇವರನ್ನು ತಮ್ಮ ಸ್ವಂತ ವೆಚ್ಚದಲ್ಲಿ ನೋಡಿಕೊಳ್ಳುವುದಾಗಿ ಸಲ್ಮಾನ್ ಖಾನ್ ಅವರ ಪೌಂಢೇಷನ್ ಹೇಳಿದೆ ಎಂದು ತಿವಾರಿ ಮಾಹಿತಿ ನೀಡಿದ್ದಾರೆ.